Tuesday, March 26, 2013

" ಮೋಹಿನಿ - ಭಸ್ಮಾಸುರ "

" ನಾನಿರುವೆ ನಿನಗಾಗಿ "

ಎಲ್ಲ ಮುಗಿಯಿತೆಂಬ ಚಿಂತೆ
ಯಾರು ಇಲ್ಲರೆಂಬ ಚಿಂತೆ
ಬೇಡ ನಲ್ಲೆ ನಿನಗೆ

ಸಾವೇ ಇರದ ಮನೆಯು
ನೋವೇ ಬರದ ಮನವು
ಈ ಜಗದೊಳೆಲ್ಲಿದೆ

ವಿಧಿಯ ಆಟವನು ಯಾರು ಬಲ್ಲರು
ನದಿಯ ಸುಳಿಯ ಯಾರು ಅರಿಯರು
ಕಾಲ ಚಕ್ರದೊಳಗೆ ಸಿಲುಕಿ ಕಾಲನ
ಕರೆಯು ಬರಲು ಹೋಗಲೇ ಬೇಕು 

Monday, March 25, 2013

ಆಸೆಗಳೇ ಹಕ್ಕಿಗಳಾಗಿ

ಅಂಬರ ಅಂಬರ
ಚುಂಬಿಸೊ ಆಸೆ
ಹಾರಲಿ ಹೇಗೆ
ನಾ ಹೇಳಿ ಹಕ್ಕಿಗಳೇ
ಎದೆಯಾಳದಿ
ತಿಳಿ ಮನಸ್ಸೊಂದಿದೆ
ಹೇಳದೆ ಕೇಳದೆ
ಬಂದಿದೆ ಇಂದೆನಗೆ,
ಆ ಚಂದ್ರನ ತಂಪಿನ
ಶರ ಶೀತಲಕೆ
ಆ ತಾರೆಗಳ ಗುಂಪಿನ
ಆಕರ್ಷಣೆಗೆ
ಆ ಮೋಡಗಳ ಬಾವುಕ
ಸಂಘರ್ಷಣೆಗೆ
ತುಂತುರು ಮಳೆಯೆ
ಸಿಂಚನವಾಗಿರಲು
ನನ್ನನೆ ನಾ
ನಿನ್ನಲಿ ಇಂದು ಮೈಮರೆತೆ ॥

" ಗೆಳತಿ ನೀನಿಲ್ಲದೆ ನಾ ಹೇಗೆ ಬಾಳಲಿ ಹೇಳು "

ಒಲವಿನೊಲೆ ಬರೆದೆ ನಲ್ಲೆ ನಿನಗೆ
ಕೊಡಲು ಏಕೊ ಮುಜುಗರ ಎನಗೆ
ಒಲವ ಮಳೆಯ ನೀ ಸುರಿಸಿ ಹರಿಸದೇ
ಒಳಗು ಹೊರಗು ಕಾದ ಮನಕೆ
ತಂಪನೆರೆದು ನೀ ತಣಿಸದೇಕೆ
ಹಸನು ಎದೆಯ ನೀ ಮಾಡದೇ
ಮನದ ಮಾಮರದಿ ಬೆಸೆದ ಬಳ್ಳಿ
ಹೂವ ನಗೆಯ ಚೆಲ್ಲಿ ಅರಳಿ ನಿಂತಿದೆ
ಕಂಪ ಸೂಸೊ ಪರಿಗೆ ಹೃದಯ ಹಾಡಿದೆ
ಬರುಡಾದ ಬದುಕು, ಇನ್ನೇಕೆ ಬೇಕು
ನೀನಿತ್ತ ಪ್ರೀತಿ, ಜೊತೆಗಿರುವಾಗ ಇನ್ನು
ಕುಣಿವ ನವಿಲಾಗುವೆ, ಉಸಿರ ಉಸಿರಾಗುವೆ
ಏಕೊ ಏನೋ ಹೇಳಲಾರೆ ಗೆಳತಿ
ಮನದಿ ಮೂಡಿದ ಈ ಪ್ರೀತಿಗೆ
ನಿನ್ನೊಲವಿನ ಉತ್ತರ ಬೇಕಿದೆ
ಹೇಗೆ ನಿನಗೆ ಹೇಳಲೆಂಬ ಭಯಕೆ
ನುಡಿವ ಮಾತು ನನ್ನಲ್ಲೇ ಅಡಗಿದೆ
ಹೇಳಲಾಗದೆ ದಾರಿ ಕಾಣದಾಗಿದೆ
ನೀ ಕಣ್ಣಿನಲ್ಲೇ ಸೆಳೆವ ನೋಟಕೆ
ಹೃದಯ ಕರಗಿ ನಿನಗೆ ಸೋತಿದೆ
ನೀ ಏನು ತಿಳಿವೆಯೆಂದು ಹೇಳಲಾರೆ
ನೀ ಬರದೆ ನಾ ಬಾಳಲಾರೆ ನನ್ನೊಲವೆ
ನೀನಿರದೆ ನಿದಿರೆ ದೂರ ದೂರವೆ
ಚದುರಿ ಹೋಗದಿರಲಿ ಕಂಡ ಕನಸೆಲ್ಲವ
ಮಳೆ ಬಿಸಿಲಿರಲಿ ಜೊತೆ ಜೊತೆಗೆ ನಡೆದೆ
ನೋವು ನಲಿವಿನಲಿ ಕೈಹಿಡಿದು ನೀ ಬಂದೆ
ನಾ ಹೇಗೆ ನಿನಗೇಳಲಿ "ಪ್ರೀತಿ"ಯ ಗಳತಿ

Sunday, March 24, 2013

ಅನುಕಂಪ ಬೇಡವೆ



ನಾನು ಹೆಣ್ಣು
ನೀವು ಹೆಣ್ಣು
ನಮ್ಮಲ್ಲೇಕೆ
ಕೋಪ ತಾಪದ
ಈ ಹಗೆಯ ಮತ್ಸರ 

ನೀವು ತಾಯಿ
ನಾನು ಮಗಳು
ತಿಳಿದರೆ ಇರದು
ನಮ್ಮ ನಡುವೆ
ದೂರ ತೀರದ ಅಂತರ

ನಿಮ್ಮ ಮಗನ
ಮಡದಿ ನಾನು
ಬಾಳ ಬೆಳಗೊ
ಜ್ಯೋತಿ ನಾನು
ಇರಲಿ ಎಂದೂ ಸಡಗರ

ನೀವು ತೋರೊ
ದಾರಿ ದೀಪ
ಎನಗೆ ನಿಮ್ಮ
ಶಾಂತ ರೂಪ
ಮೋಡವಿರದ ಅಂಬರ

ಕ್ಷಣ ಕಾಲ ಕ್ಷಣ ಪಿತ್ತ
ಇರದಿರಲಿ ನನ್ನತ್ತ
ನೀವಿತ್ತ ಈ ಮುತ್ತ
ಕಾಪಾಡಿ ಸಲಹುದೆ ಚಿತ್ತ
ಎಂದೆಂದು ಇರುವಾಗ ಬಾಳೆ ಸುಂದರ

Friday, March 22, 2013

ಕಲ್ಪನೆಗಳ ಕಾವ್ಯ ಕನ್ನಿಕೆ

ಕರೆದಾಗಲೆಲ್ಲಾ ಮಿಂಚಂತೆ
ಓಡೋಡಿ ಬಳಿ ಬರುತ್ತಿದ್ದವಳು
ಉಸಿರಿಗೆ ಉಸಿರಾಗಿ
ಬೆರೆತು ಜೊತೆಯಾಗಿದ್ದವಳು
ನೀ ಎಲ್ಲಿ ಹೋದೆ
ಮರೆಯಾಗಿ ಕಣ್ಮರೆಯಾದೆಯಾ
ಮದುವೆಯಾಗಿ ಮನೆತುಂಬಿ
ಮನ ತುಂಬಿ, ಮರಿ ದುಂಬಿ
ನಲ್ಲೇ ನೀ ಬಂದ ಮೇಲೆಯೇ
ಅವಳು ಈ ಹೃದಯದಲಿಲ್ಲ
ಎತ್ತ ಹೋದಳೋ ಗೊತ್ತಿಲ್ಲ
ಇಲ್ಲೇ ನಾ ಹೋಗಿ ಬರುವೆ
ಎಂದವಳ ಸುಳಿವಂತೂ ಇಲ್ಲ
ನಿನ್ನೊಲವ ಸುಳಿಗೆ ಸಿಲುಕಿ
ನಾ ಮರೆತೆನೇ ನಾನವಳ
ಸುಳಿವ ತಂಗಾಳಿಯ
ತಂಬೆಲರಂತೆ
ಮಿಡಿವ ಮನಕೆ
ಇಂಪಾದ ಹಾಡಂತೆ
ಸಂತೈಸಿ ನನ್ನ ಅಪ್ಪಿ
ಮನಸಾರೆ ಮುದ್ದಾಡುತ್ತಿದ್ದಳು
ಹಗಲು ಇರುಳೆನ್ನದೇ
ಮಳೆಗಾಳಿಯು ಎನ್ನದೇ
ಬೆಚ್ಚನೆಯ ಮೈ ಮನಕೆ
ಹೊದಿಕೆಯ ಹೊದಿಸಿ
ಮದಿರೆಯಾಗಿದ್ದವಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ವಯಸ್ಸಿನ ಕೀಳಿರುಮೆಯಿರಲಿಲ್ಲ
ಹಸಿವಿನ ಹಾಹಾಕಾರವಿರಲಿಲ್ಲ
ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತೀಕ್ಷಣ ರಸ ನಿಮಿಷದ ಮನ
ಮುನಿಸ ತೊರೆದ
ಬೆಳ್ಮುಗಿಲಾಗಿದ್ದಳು
ಕನಸ ಕಡಿದಗೆದು
ಛಲಗಾತಿಯಾಗಿದ್ದಳು
ನನ್ನ ನೀ ಕೈ ಹಿಡಿದ ಮೇಲೆ
ನಿನ್ನ ಯೌವನದ ಹುಚ್ಚು
ಹೊಳೆಯೊಳಗೆ ನಾ ಮುಚ್ಚಿ
ಕೊಚ್ಚಿ ಹೋದ ಮೇಲೆ ಕಾಣೆಯಾದಳು
ನಾ ನಿಟ್ಟುಸಿರಿಟ್ಟರೂ
ಎದ್ದೋಡಿ ಬರುತ್ತಿದಳು
ನಾ ಕಂಗಾಲಾದರೂ
ಮಿಡುಕಾಡುತ್ತಿದ್ದಳು
ನಿದ್ದೆಯಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ಪ್ರಶ್ನಿಸಿದ್ದೆ
ನೀ ಬರುವ ಮುಂಚೆಯೇ
ಅವಳೆದೆಯಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ ! ಅರಿವಿಲ್ಲದಾ ಮಂಕೇ
ನಿನಗೇಕೆ ಅವಳ ಮೇಲೆ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿರಾತ್ರಿಗೂ ಪ್ರತಿ ಸ್ಪರ್ಧಿಯಲ್ಲ
ನನಗೆ ನಿನಗೆ ನನ್ನೊಳಗಿನ
ಲ್ಪನೆಯ " ಕಾವ್ಯ ಕನ್ನಿಕೆ "

Thursday, March 21, 2013

" ಓಂ ನಮಃ ಶಿವಾಯ "

ನಿನ್ನ ಹಾಡಿ ಕೊಂಡಾಡದ
ಈ ದೇಹವೇಕಯ್ಯ
ನಿನ್ನ ನೋಡಿ ಪೂಜಿಸದ
ಈ ಕೈಗಳೇಕಯ್ಯ
ಹೊಲಸು ಸಂಸಾರಕ್ಕೆ ಬಿದ್ದು
ಮನಸ್ಸು ಮತ್ಸರವಾ ಮೆದ್ದು
ಮಾಡ ಬಾರದ್ದನ್ನೆಲ್ಲವ ಮಾಡಿದೆ
ಕಾಡ ಬಾರದವರೆನ್ನೆಲ್ಲರ ಕಾಡಿದೆ
ಉಪವಾಸವು ಇಂದೆಂದೇಳಿ
ಉಪ್ಪಿಟ್ಟು ಒಂದಂಡೆ ಉಂಡೆ
ಜಾಗರಣೆಯು  ಇಂದೆಂದೇಳಿ
ಜೂಜು ಅಡ್ಡೆಗೆ ಹೋಗಿ ನಿಂತೆ
ಕೈಲಾಸದಿಂದ ಎದ್ದು ನೀ ಬಾರಯ್ಯ
ಮೈಮನಸ್ಸಿಗೆ ಮದ್ದು ನೀ ನೀಡಯ್ಯ
ಶಿವ ನಿನ್ನ ನಾಮವೇ ನನ್ನುಸಿರಾಗಲಿ
ಹರ ನಿನ್ನ ಸೇವೆಯೇ ನನ್ನ ಬದುಕಾಗಲಿ
ಓಂ ನಮಃ ಶಿವಾಯ
ಶಿವರಾತ್ರಿಯ ಹಬ್ಬಕ್ಕೆ ಬರೆದದ್ದು

" ಹಿತ ನುಡಿಗಳು "

1.
ಆತ್ಮ ಪರಮಾತ್ಮನೆಡೆಗೆ ಭಕ್ತಿಯೇ ಸೇತುವೆ
ಪಾಪ ಕರ್ಮಗಳಿಗೆ ದುರ್ಗುಣಗಳೇ ಬೆಸುಗೆ
ದಾನ ಧರ್ಮಗಳೇ ಮುಕ್ತಿಗೆ ದಾರಿ ದೀವಿಗೆ
2.
ಅನ್ಯರ ಅನ್ನಕ್ಕೆಂದೂ ನೀ ಆಸೆ ಪಡಬೇಡ
ತಾನುಣ್ಣುವ ಅನ್ನವನು ನೀ ಹಂಚಿ ನೋಡ
ಹಸಿದವನಿಗಿತ್ತುದು ಆ ಹರನಿಗೆ ನೀ ಇತ್ತಂತೆ
ಹತ್ತಾರು ದೇವರ ಪೂಜಿಸಿ  ಫಲ ಪಡೆದಂತೆ
3.
ಕಣ್ಮುಂದೆ ಹೊಗಳಿ ಬೆನ್ನಿಂದೆ ತೆಗಳುವನ
ನೀನೆಂದು ನಂಬಲೇಬೇಡ
ಬೆನ್ನಿಂದೆ ಹೊಗಳಿ ಕಣ್ಮುಂದೆ ತೆಗಳುವನ
ನೀನೆಂದು ಮರೆಯ ಬೇಡ
4.
ಅವರಿವರ  ನಿಂದಿಸುತ
ತನ್ನವರ ಬೆಂಬಲಿಸುತ
ಜಗದೊಳಗೆ ತಾ ಉತ್ತಮನೆನ್ನುವನ
ಜಗದೀಶ ತಾನೆಂದಿಂತವರ ಮೆಚ್ಚನು
5.
ತಿರುದುಣ್ಣುವನ ಸುಖಕ್ಕಿಂತ
ಬಡಿದುಣ್ಣುವನ ಮನ ಕೀಳು
ದುಡಿದುಣ್ಣುವನ ಗುಣ ಮೇಲೆಂದ ಶಿವಚೆನ್ನ
6.
ವಿವೇಕಿಯೂ, ವಿಚಾರವಂತನೂ
ತಾಳ್ಮೆಯಿಂದಲೇ ತಾಳೆಯ
ಮರದೆತ್ತರಕ್ಕೆರ ಬಲ್ಲ
ಅವಿವೇಕಿಯೂ, ಅನೀತಿಪರನೂ
ತಾಳ್ಮೆಯಿಲ್ಲದೇ ತರಗೆಲೆಯ
ರೀತಿ ಧರೆಗುರುಳ ಬಲ್ಲ
7.
ಎಲ್ಲರೆದಿರು ಹಿಯಾಳಿಸದಿರು, ಹಿಂಸಿಸದಿರು
ಎಲ್ಲರೆದಿರು ತಿಳಿ ಹೇಳಿದರು, ಬುದ್ಧಿ ತಲೆಗೋಗದು
ತಾ ಮಾಡಿದ ತಪ್ಪು ತನಗೆ ಅರಿವಾಗದ ಹೊರತು
ಅಜ್ಞಾನಿಗೆ ಎಂದಿಗೂ ಸುಜ್ಞಾನದ ಬೆಳಕಾಗದು
8.
ಅಡಿ ಗಡಿಗೂ ಅಡೆತಡೆ ಬಂದೊಡೆ
ಜಗ್ಗದೆ ಬಗ್ಗದೇ ಅಪ್ಪಿ ನೀ ನಡೆದೊಡೆ
ಹಿಂದಿಂದೆ ಬರುವುದೈ ಜಯ ನಿನ್ನೆಡೆ
9.
ಹೊತ್ತೊತ್ತಿಗೂ ತುತ್ತಿತ್ತು ಮುತ್ತಿತ್ತೆತ್ತವಳ
ಮುಪ್ಪಿನಾ ಕಾಲದಿ ಉಪ್ಪಿಡದೆ ದೂಡುವನ
ಜಗದೊಳಗೆ ಮೈ ಮರೆತು ಮೆರೆಯುವನ
ತಾನೆಂದು ನೆಚ್ಚನು ತಾನೆಂದು ಮೆಚ್ಚನು
10.
ಅಂಗನೆಯರ ಸರಸ ಪಲ್ಲಂಗದೊಳು
ನಿತ್ಯ ಆನಂದಿಸುವವ ಎಂದೆಂದಿಗೂ 
ಸ್ವಾಮೀಜಿಯಾಗನು ಖಾವಿ ತಾ ತೊಟ್ಟೊಡೆ
ಜನ ಮೆಚ್ಚಿದರೂ, ಶಿವ ತಾನೆಂದು ಮೆಚ್ಚನು
11.
ಕಾಮ-ಕ್ರೋಧ, ಮದ-ಮತ್ಸರಗಳನು ಗೆದ್ದು
ಹೆಣ್ಣು-ಹೊನ್ನು, ಮಣ್ಣು-ಮಮಕಾರಗಳ ಒದ್ದು
ಭುವಿಯಲ್ಲಿ ನಿಂತವನೆ ತಾ ನಿಜವಾದ ಯೋಗಿ
ಭವಿಯಾದರೂ ಪರರ ಕಷ್ಟಕ್ಕಾಗುವನೆ ತ್ಯಾಗಿ
12.
ಣವಿರಲು ನಮ್ಮಲ್ಲೀ ಎಲ್ಲರೂ ನೆಂಟರಿಷ್ಟರೆ
ಹೆಣದಂತೆ ಕಾಣ್ವರು ಬರೀಗೈಲಿ ತಾ ನಿಂತರೆ
ಹಣವಿದ್ದವನ ಹೊತ್ತೆತ್ತಿ ಜಗದಿ ಮೆರೆಸುವರು
ವ್ರಣವಿಡಿದರೂ ಋಣವೆಂದು ಪೂಜಿಸುವರು
13.
ಅವನ ಕಂಡರೆ ಇವನಿಗಾಗದು
ಇವನ ಕಂಡರೆ ಅವನಿಗಾಗದು
ಮೇಲ್ನೋಟಕ್ಕೆ ನಗೆ ಮುಖವಾಡ
ಒಳಗೊಳಗೆ ಬಯಸುವರು ಕೇಡ
14.
ಹಳ್ಳಕ್ಕೆ ಬಿದ್ದರೆ , ಆಳಿಗೊಂದೊಂದು ಕಲ್ಪು
ಸಿಡಿದೆದ್ದರೆ , ಹಿಡಿವರಲ್ಲ ಕೈ- ಕಾಲುಗಳು
ತೆಗಳುವನ ನೀ ನಂಬು ಈ ಧರೆಯೊಳಗೆ
ಹೊಗಳುವವನ ನಂಬದಿರು ಮನದೊಳಗೆ

" ನನ್ನೊಲವ ಸಿರಿಯೇ "

ನಲ್ಲೇ ನಿನ್ನ ಮನದ ನೆನಪುಗಳ
ಪುಟ ಪುಟವ ನೀ ತೆರೆದೋದು
ಅಲ್ಲಿಹುದು ನಾ ಇತ್ತ ಮುತ್ತುಗಳ
ತುಂತುರು ಮಳೆಯ ವರ್ಷಧಾರೆ !
ನಿನ್ನಂತರಾಳದಿ ಎದ್ದೆದ್ದು ಕುಣಿವ
ನೂರಾರು ಬಯಕೆಯ ಬಿಸಿಯುಸಿರಿಗೆ
ಅಗಲಿಕೆಯ ಆಲಿಂಗನದ ಸ್ಪರ್ಶ ಸುಖಕೆ
ನಾ ಸುರಿಸುವೆ ನನ್ನೊಲವ ಪ್ರೀತಿಧಾರೆ !

" ತಾಯೇ ಕನ್ನಡಾಂಬೆ "

ನೀ ಹೆತ್ತ ಮಕ್ಕಳೇ
ನಿನ್ನತ್ತ ನೋಡದೆ
ಉನ್ಮತ್ತರಂತೆ
ಪರದೇಶಿ ಭಾಷೆಗೆ
ಪುಡಿಗಾಸಿನಾಸೆಗೆ
ನಿನ್ನನ್ನೇ ಮರೆತರೆ
ನೀ ಯಾರಿಗೇಳುವೆ
ನೀ ಯಾರ ಕೇಳುವೆ
ನೀ ಕುಣಿದೆದ್ದು ಬಾರದೆ
ಈ ಸಂಸ್ಕೃತಿಯ ಉಳಿವಿಗೆ
ಚಂಡಿ-ಚಾಮುಂಡಿಯಾಗದೆ
ಬುದ್ಧಿಗೇಡಿ ಈ ಜನರಿಗೆ
ಬುದ್ಧಿ ಬಾರದು ತಾಯೇ
ರನ್ನ-ಪೊನ್ನ-ಪಂಪ
ರಾಘವಾಂಕರಾಡಿ ಹೊಗಳಿದ ನಾಡಿದು
ವಿಷ್ಣು-ಕೃಿಷ್ಣ-ಮಯೂರ
ಟಿಪ್ಪು-ಚೆನ್ನಮ್ಮರಾಳಿದ ಭವ್ಯ ಬೀಡಿದು
ಕಲೆಗಳ,ಶಿಲ್ಪಗಳ ತವರೂರು ನಮ್ಮೂರು
ಸಹಸ್ರ ಸಹಸ್ರ ವರ್ಷಗಳ ಇತಿಹಾಸವಿಹುದು
ಕನ್ನಡವೇ ಮರೆತಂತೆ
ವರ್ಷದ ಕೊನೆಗೊಮ್ಮೆ
ನಿತ್ಯ ಉತ್ಸವ, ರಾಜ್ಯೋತ್ಸವ !
ಧರೆಗಿಳಿದು ಬಾ ಬಾ ತಾಯೇ
ಎಲ್ಲರ ಹೃದಯದಲ್ಲಿ ನೀ ಹಚ್ಚಿ
ಕನ್ನಡದ ನಾಡ ನುಡಿ ದೀಪ
ತೊಳೆಯ ಬೇಕಿದೆ ಮಲಿನಗೊಂಡ
ನಮ್ಮೆಲ್ಲರ ಮನದೊಳಗಿನ ಪಾಪ !

" ದಡ್ಡ ಶಿಖಾಮಣಿ "

ನಾನು ಓದಲಿಲ್ಲ, ಕಲಿಯಲಿಕ್ಕೆ ಹೋಗಲಿಲ್ಲ
ಬರೆಯುವುದಕ್ಕೆ ಮೊದಲೇ ಬರುವುದಿಲ್ಲ
ತಲೆಯು ಎಲ್ಲ ಖಾಲಿ ಖಾಲಿ ಖಾಲಿ !

ಹುಟ್ಟುವಾಗಲೇ ಕಿತ್ತು ತಿನ್ನೋ ಬಡತನ
ಹತ್ತು ಹೆತ್ತು ಪಡದಳೆ ಅಮ್ಮ ನನ್ನನಾ
ಅಟ್ಟಿ ಹೈಕಳಾ ನಡುವೆ ನಾ ನರ ಪೇತಲ !

ಹಡದದ್ದೆಲ್ಲ ಹೆಣ್ಣು, ಕೊನೆಗೆ ನಾನೆ ಗಂಡು
ಬೆಳೆದು ನಿಂತ ಅಕ್ಕ, ಸಾಲು ಸಾಲು ಪಕ್ಕ
ಮದುವೆಗೆಂದು ಜೀತಕ್ಕಿಟ್ಟ ಅಪ್ಪ, ಪಡೆದೆ ಬಿಟ್ಟ
ಕಪ್ಪ ನಾ.ಜೀತದಾಳು , ಪರರ ಬಾಳ ಚೇಳು !

ಏಳೊ ಗಡವ ನಿದ್ದೆ ಸಾಕು, ಒದ್ದು ನಿಂತ ಗೌಡ
ನಸುಕಿನಲ್ಲೇ ಎದ್ದು, ಸಗಣಿ ಎತ್ತಿ ಕಸವ ಗುಡಿಸಿ
ದನವ ಕಟ್ಟಿ, ಸೌದೆ ಕಡಿದು ಒಲೆಯ ಹಚ್ಚಿ
ಹೊತ್ತು ಹೋಗದೂ.....ನಾ ಕೂಲಿ ಕೂಲಿ !

ದುಡಿದು ದುಡಿದು ದಣಿದ ಮೈಗೆ
ಭತ್ತ ಬಡಿದು ಬಡಿದು ಬೆಂದ ಕೈಗೆ
ಬಳಪ ಹಿಡಿಯಲಾಗದೇ, ಓದಲಾಗದೇ
ನಿತ್ಯ ನಾ....ಮಾಲಿ ಮಾಲಿ ಮಾಲಿ !

" ಜ್ಞಾನ -ದಾಹ "

ನನ್ನೊಳಗೆ
ಏನಿದೆ ಬರೀ
ಸಾರವಿರದ
ಉಡಿ ಮಣ್ಣು
ಆದರೂ, ಎಲ್ಲೆಲ್ಲೂ
ಹುಡುಕುತಿಹೆ
ನಾನು ಇನ್ನೂ

ಕಲಿತದ್ದು ಹಿಡಿ
ಸಾಸುವೆಯಷ್ಟು
ಕಲಿಯ ಬೇಕಾದ್ದು
ಮಹಾ ಸಾಗರದಷ್ಟು

ತಾಯ್ತಂದೆಗಳು ಇತ್ತ
ಸಂಸ್ಕಾರ ಜ್ಞಾನ ಧೀಕ್ಷೆ
ಗುರು-ಹಿರಿಯರು ಇತ್ತ
ಜ್ಞಾನ-ಜ್ಯೋತಿಯ ಭಿಕ್ಷೆ

ಅರಿವನ ದಾಹದ ಗುರಿಯ ಕಕ್ಷೆಗೆ
ವರ್ತುಲ ವರ್ತುಲ ಮೀರಿದ ಪರೀಕ್ಷೆಗೆ
ಸಾಧಿಸೊ ಛಲದಂಕ ಮಲ್ಲನ ನಿರೀಕ್ಷೆಗೆ
ಸರಿಸಾಟಿಯಾಗಿ ನಿಲ್ಲುವೆ " ಓ ಮನಸೇ"
ನೀ ನನ್ನ ಹರಸಿ, ಉತ್ತುಂಗದೆತ್ತರಕ್ಕೆ ಉದ್ದರಿಸೆ.

" ತಾಯೇ ಭಾರತಾಂಬೆ "

ನೀ ಹೊತ್ತ ಮಕ್ಕಳೇ
ಎಚ್ಚೆತ್ತು ಕೊಳ್ಳದೆ
ಹುಚ್ಚೆದ್ದು ಕುಣಿವಾಗ
ನೀ ಅತ್ತು ಕರೆದರೂ
ಸಿಟ್ಟೆದ್ದು ಒದ್ದರೂ
ಕೇಳದಾ ಕಿವುಡರಿವರು

ಕಿಡಿಗೇಡಿಗಳು ಹಚ್ಚಿಟ್ಟ
ಜಾತಿ ಧರ್ಮದ ವಿಷ
ಬೆಂಕಿಯ ಕೆನ್ನಾಲಿಗೆಗೆ
ಹೊತ್ತಿ ಉರಿದವರೆಷ್ಟೋ

ಬಸವ ಬುದ್ಧರಿಗಿರಲಿಲ್ಲ
ಜಾತಿ ಧರ್ಮಗಳ ಭೇದ
ಎಲ್ಲರಲ್ಲೂ ಸಮಾನತೆಯ
ಸಾಮರಸ್ಯದ ಹಣತೆಯ
ದೀಪ ಹಚ್ಚಿಟ್ಟರು, ನಾವೆಲ್ಲರೂ
ಎಂದೆಂದು ಒಂದೇ ಎಂದರೂ

ದೃಪದ ನಂದಿನಿ ದ್ರೌಪದಿಯ
ಧರ ಧರನೆ ಎಳೆ ತಂದು
ಸರ ಸರನೆ ಸೀರೆ ಸೆಳೆದ
ಧುರುಳ ಕೌರವರು ಅಂದು

ನಿನ್ನನ್ನೇ ಬೆತ್ತಲೆ ಮಾಡಿ 
ಕತ್ತಲೆಯ ಕಳ್ಳಾಟದಿ
ಮೃಷ್ಟಾನ್ನವ ಉಂಡು
ತೇಗುವ ನರ ರೂಪ
ರಕ್ಷಸರಿವರು ಇಂದು

ನಿನ್ನೊಡಲ ಉಡಿ ಮಣ್ಣ
ಅಗೆದಗೆದು, ಬಗೆದು
ಗಣಿ ಧೂಳಿನಿಂದಲೆಷ್ಟೋ
ಶ್ರೀಮಂತರಾದರು ಜನ !

Tuesday, March 19, 2013

ನನ್ನ ನಲ್ಲಾ ನೀ ಎಲ್ಲಿರುವೆ

ಇಲ್ಲೆ ಎಲ್ಲೋ
ನನ್ನ ನಲ್ಲ
ನಿನ್ನ ಸ್ನೇಹವಾಯಿತು
ಹೃದಯ ಕದ್ದ 
ಚೋರನಲ್ಲಿ
ಪ್ರೀತಿ ಉಗಮವಾಯಿತು

ನಿನ್ನ ಕಂಡ ಮೇಲೆ
ಮಾತೆ ಮಧುರವಾಯಿತು
ಹೇಳದೇನೆ ಕೇಳದೇನೆ
ಹೃದಯ ಹಾಡನಾಡಿತು

ಇಲ್ಲೆ ಎಲ್ಲೋ
ನನ್ನ ನಲ್ಲ
ಹಿಡಿದ ಗಲ್ಲ
ಪಡೆದ ಎಲ್ಲ
ಹೇಳದೇನೆ
ಕೇಳದೇನೆ
ಮುತ್ತನಿಟ್ಟನು
ಮತ್ತಿನಲ್ಲೇ ನನ್ನ
ಮೈಯ ಮರೆಸಿ ಬಿಟ್ಟನು

ಮಾಯವಾದಳೆಲ್ಲೋ

ಇಲ್ಲೆ ಎಲ್ಲೋ
ನನ್ನ ನಲ್ಲೆ
ಹೃದಯ ಬಿಚ್ಚಿ
ಪ್ರೀತಿಯ ಹಚ್ಚಿ
ಮಾಯವಾದಳು 

ಹೇಳದೇನೆ
ಕೇಳದೇನೆ
ಈ ಮನಸ್ಸು
ಕದ್ದು ಹೋದಳು

ಇಲ್ಲೆ ಎಲ್ಲೋ
ನನ್ನ ನಲ್ಲೇ
ಕಂಡು ಕಾಣದಾಗೆ
ಬಂದು ಹೋದಳು

ಹೃದಯದೊಳಗೆ
ನೂರು ಆಸೆಯ
ತೇರನೆಳೆದು
ಪ್ರೀತಿ ಭಿತ್ತಿ ಹೋದಳು

ನೀ ಎಲ್ಲಿರುವೆ ನಲ್ಲೆ

ಏನೆಂದು ಬರೆಯಲಿ ನಾನು
ಏಕಾಂಗಿಯಾಗಿರಲು ಇನ್ನೂ
ನೀ ಬಾರದೇ ನನ್ನ ನೋಡದೆ
ಈ ಬಾಳಲಿ ನೀನಿಲ್ಲದೆ ಬೆಳಕೆಲ್ಲಿದೆ
ಈ ಕನಸಿಗೆ ನೆಲೆ ಬೆಲೆ ಎಲ್ಲಿದೆ

ಹೂವಂತ ಮನಸ್ಸಿನಲಿ
ಜೇನಂತ ಕನವರಿಕೆ
ನೀ ನೋಡುವಾ ಆ ನೋಟಕೆ
ನೀ ನನಗಿತ್ತೆಯೇ ಅರವಳಿಕೆ

ನಾ ಇಂದು ಬರೆಯುವೆನು
ನೀ ಕೊಟ್ಟ ಹೃದಯದಲಿ
ನೀ ಹೇಳುವಾ ವರ್ಣನೆಗೆ
ನಾ ಕಾಣುವಾ ಕಲ್ಪನೆಗೆ
ನೀ ತಾನೆ ನನ್ನ ಅಭಿಸಾರಿಕೆ

ನನ್ನ ಆಕಸ್ಮಿಕಾ

ಏನೆಂದು ಹೊಗಳಲಿ ಚಿನ್ನಾ
ನೀ ಕೊಟ್ಟ ಉಡುಗೊರೆಗೆ
ಈ ವರ್ಷದಾ ಆರಂಭಕೇ
ನೀ ನೀಡಿದಾ ಸಿಹಿ ಮುತ್ತಿಗೆ
ನಾ ಈ ದಿನ ಮೈ ಮರೆತೆನೆ

ಛಳಿಯಲ್ಲೂ ಬೆವರಿತು ಮೈ
ಮನಸ್ಸೆಲ್ಲ ಹೇಳಿತು ಹಾಯ್
ಈ ಜೀವನಾ ರೋಮಾಂಚನ
ನಿನ್ನಿಂದಲೇ ನಾನಿಂದು ಪಾವನ

ಏನೆಂದು ಹೇಳಲಿ ಚಿನ್ನಾ
ತೆರೆದಿಟ್ಟೆ ನನ್ನ ಮನಸ್ಸನ್ನ
ನೀನೀಡಿದಾ ಈ ಸ್ಪೂರ್ತಿಗೆ
ನಾ ಬರೆದೆನೇ ಈ ಕವಿತೆಯ
ಆಕಸ್ಮಿಕಾ,ನನ್ನ ಆಲೋಲಿಕಾ

ಎದೆಯಾಳದಲಿ ನೂರಾರು
ಪ್ರೀತಿ ಮೆರವಣಿಗೆಯ ತೇರು
ನೀನಿದ್ದರೇ ನಾ ಜಗ ಗೆಲ್ಲುವೆ

Monday, March 18, 2013

ಶ್ರೀ ವಿನಾಯಕ ಸ್ತುತಿ

ಸಿದ್ಧಿ ವಿನಾಯಕ
ಬುದ್ಧಿ ಪ್ರಧಾಯಕ
ವಿಜ್ಞೇಶ್ವರ ನಮೋಸ್ತುತೆ !

ಧುರಿತ ನಿವಾರಕ
ಅಗ್ರ ಪೂಜಕ
ಸರ್ವೇಶ್ವರ ನಮೋಸ್ತುತೆ !

" ಓ ಮನಸೆ "

ನಾ ಬರೆವ ಮೊದ ಮೊದಲೇ
ಈ ಹೃದಯದೊಳು ನೀ ಕುಳಿತೆ
ನಾ ನುಡಿವ ಮೊದ ಮೊದಲೇ
ಗುನು ಗುನುಗಿ ನೀ ಜೊತೆಯಾದೆ
ನಾ ಹೇಗೆ ನಿನ್ನ ಮರೆಯಲಿ ದಿನ
ಹೇಳು ನನ್ನ " ಓ ಮನಸೆ "

ನಾ ಮರೆತ ಮಧುರ ನೆನಪುಗಳ
ತೆರೆದಿರಿಸಿ, ಮೈ ಮನ ಪುಳಕಿಸಿದೆ
ನಾ ತೊರೆದ ನಿದಿರೆಗೆ ಕನಸಿರಿಸಿ
ಈ ಬಾಳಿನೊಳು ಹೊಸ ಭರವಸೆಯ
ನೀ ಈ ಮನದಿ ಬೆಳಕನು ಮೂಡಿಸಿದೆ
ನಾ ಹೇಗೆ ನಿನ್ನ ಕರೆಯಲಿ ಪ್ರತಿ ದಿನ
ಹೇಳು ನನ್ನ " ಓ ಕನಸೆ "

ನಾ ನಗುವ ಮೊದಲೆ ನೀ ತುಟಿಯ
ಅರಳಿಸಿ, ಯೋಚನೆಯಲ್ಲೇ ನಿನ್ನಾ
ಯೋಜನೆಯ ರೂಪಿಸುತಾ
ಸಾಧಿಸೊ ಛಲದೆದೆಯಾ
ನನ್ನಲ್ಲಿರಿಸಿ, ನಗುವಾ ನಿನ್ನಾ
ನೋಡುತ, ನಾ ಹೇಗೆ ನಿನ್ನ
ಮರೆಯಲಿ ಅನುಕ್ಷಣ
ಹೇಳು ನನ್ನ " ಓ ವಿಧಿಯೆ "