Saturday, June 29, 2013

ಈ ಪ್ರೀತಿ ಒಂಥರಾ ಕಚಗುಳಿ

ನೀ ಮೊದಲಿನಂತೆ
ಈಗಿಲ್ಲ ಬಿಡು ನಲ್ಲೇ
ನಾನೆಂದರೆ ನಿನಗೆ
ಎಣೆಯಿಲ್ಲದಾ ಪ್ರೀತಿ,
ನನ್ನ ಬಿಟ್ಟಿರಲಾರದಷ್ಟು
ಅಧಮ್ಯ ಸ್ನೇಹ ಸೆಳೆತ !
ಒಂದು ಕ್ಷಣ, ಸಿಗಲಿಲ್ಲವೆಂದರೆ
ನಿನಗೆಂತಾ ಕೋಪ, ಆವೇಶ
ಅಬ್ಬಬ್ಬಾ, ನಿನ್ನ ಸಂತೈಸಿ
ಸಮಾಧಾನಿಸಿ; ಹೂಮುತ್ತಿಟ್ಟರಷ್ಟೇ
ನಿನಗೂ ನೆಮ್ಮದಿ, ನನಗೂ ನಿರಾಳ
ಕದ್ದೂ ಮುಚ್ಚಿ ಗಂಟೆಗಟ್ಟಲೆ
ಕಾದರೂ ವ್ಯರ್ಥವಾಗುತ್ತಿರಲಿಲ್ಲ
ನಿನ್ನ ಸವಿ ಅದರಗಳಿಗಷ್ಟೆ
ಮೀಸಲು ನಮ್ಮಿಬ್ಬರ ಸಮ್ಮಿಲನ !
ನನ್ನ ಮದುವೆಯಾದ ಮೇಲಂತೂ,
ಬಲು ಅಪರೂಪ ನೀ
ಸಿಗುವುದು ರಾತ್ರಿಗಷ್ಟೆ;
ನಿನ್ನ ನಾ ಬಳಿ ಕರೆದರೂ
ಹೊತ್ತು ಗೊತ್ತಿಲ್ಲವೇ ನಿಮಗೆ
ಅಮ್ಮ ಬಂದರೆಂಬ ನಾಚಿಕೆಯ
ಜಾರಿಕೆಯ, ಸಹನೆಯ ಉತ್ತರ !

ಸಾವಿತ್ರಿ

ಮುಚ್ಚಿಡುವಂತಹದ್ದೇನಿಲ್ಲ
ಮಗ್ಗುಲ ಮುಳ್ಳಾಗಿ ಮನವ
ಸದಾ ಚುಚ್ಚುತ್ತಿರುವ
ನನ್ನೆಲ್ಲಾ ನೋವುಗಳ
ಬಿಚ್ಚಿಡುತ್ತಿರುವೆ;
ಒಂದಷ್ಟು ನಿಮ್ಮ ಮನಸ್ಸಿಗೆ
ನೋವಾದರೆ ಅದು ಕೇವಲ
ನನ್ನ ಕರ್ಮದ ಕಾಕತಾಳೀಯ !

ನಿಮ್ಮಂತೆಯೇ ನಾನೂ ಹೆಣ್ಣೆ
ನನಗೂ ನೂರಾರು ಕನಸಿದೆ,
ವಯಸ್ಸಿಗೆ ಮೀರಿದ ಅಂದವಿದೆ
ಮದುವೆಯ ಹೊಸ್ತಿಲಲ್ಲಿ ಬಂದು
ನಿಂತರೂ, ವಿಧಿಗೆ ಸಮ್ಮತಿಯಿಲ್ಲ
ನಿಶ್ಚಿತಾರದ ದಿನವೇ ಕೈಹಿಡಿವವನ
ಕಾಳ ಸರ್ಪದ ವಿಷ ಜ್ವಾಲೆಗೆ
ಸಿಕ್ಕಿ ಸತ್ತಾಗ, ನನ್ನ ಕಾಲ್ಗುಣವ
ಹಳಿದ ವರೆಷ್ಟೋ; ಮೂದಲಿಸಿದವರೆಷ್ಟೋ!
ಒಂದೇ ಎರಡೇ, ಹತ್ತಾರು ಲಗ್ನಗಳು
ಕೂಡಿ ಬಂದಿದ್ದರೂ, ವಿಘ್ನಗಳೇ ಹೆಚ್ಚು

Tuesday, June 25, 2013

ಸಹಬಾಳ್ವೆ ( ಲಿವಿಂಗ್ ಟುಗೇದರ್ ) ಭಾಗ - ೧

ಅವಸರ ಏನಿಲ್ಲಾ 
ಬಿಡು ನೀ ಗೆಳತಿ
ಒಂದಷ್ಟು ದಿನ
ಹೀಗೆಯೇ, ಆನಂದದಿ
ಸಂತೋಷವ ಅನುಭವಿಸಿ
ಕಾಲವ ಕಳೆಯೋಣ
ಸತಿ ಪತಿಗಳಂತೆಯೇ;
ಈ ಮದುವೆ ಸಂಪ್ರದಾಯ
ಆಚರಣೆಗಳೆಲ್ಲಾ ಕೇವಲ
ನಮಗಾಗಿ ಮಾಡಿಕೊಂಡಿದ್ದು
ಹೇಗೂ ಜೊತೆ ಜೊತೆಗೆ
ಒಂದೇ ಗೂಡಿನಲ್ಲಿರುವಾಗ
ಚಪ್ಪರ, ಮಾಂಗಲ್ಯಧಾರಣೆ
ವರದಕ್ಷಿಣೆ; ವರೋಪಚಾರ
ಇವೆಲ್ಲವೂ ಈ ಕಾಲಕೆ ಬೇಕೆ!
ಮುಂದೊಂದು ದಿನ
ನಮಗೆ ಬೇಕೆನಿಸಿದಾಗ,
ಶಾತ್ರೋಕ್ತವಾಗಿ
ಗುರು ಹಿರಿಯರ ಸಮ್ಮುಖದಲ್ಲಿ
ಭರ್ಜರಿಯಾಗಿ ಮದುವೆಯ
ಮಾಡಿಕೊಂಡರಾಯಿತು;
ನನ್ನ ಮೇಲೆ ನಿನಗೆ ನಂಬಿಕೆ
ನಿನ್ನ ಮೇಲೆ ನನಗೆ ನಂಬಿಕೆ
ಇರುವವರೆಗೂ ನಾವಿಬ್ಬರೂ
ಸುರಕ್ಷಿತ, ದಾಂಪತ್ಯ ಅನವರತ !

Tuesday, June 18, 2013

ಗಂಗಮ್ಮ

ಅವಳೆಂದರೆ ಹಲವರಿಗೆ
ಎಲ್ಲಿಲ್ಲದ ಬಾಯಾರಿಕೆ,
ಇನ್ನೂ ಕೆಲವರಿಗಂತೂ
ಮಮತಾಮಯಿ ತಾಯಿ;
ಮೂವತ್ತರ ಹಾಸುಪಾಸು
ಅಪ್ರತಿಮ ರೂಪರಾಶಿ
ಇಪ್ಪತ್ತರ ಯುವತಿಯರನೂ
ನಾಚಿಸುವ ಶರೀರ, ಶಾರೀರ
ಊರ ಗೌಡನ ತೋಟದ
ಮನೆಯ ಖಾಯಂ ಗಿರಾಕಿ !

ಗೌಡ ಸತ್ತ ನಂತರವೇ
ಬದುಕು ಗಿರಗಿಟ್ಲೇ ಹೊಡೆದಿದ್ದು
ಪುಂಡು ಪೋಕರಿಗಳಿಗೆ
ದಿನ ನಿತ್ಯ ಆಹಾರವಾಗಿದ್ದು!
ಅವಳೇನೂ ಬಯಸಿ ಬಯಸಿ
ಪಡೆದದ್ದಲ್ಲ ಈ ಹೀನ ಬದುಕು
ಪ್ರೀತಿಸಿ ಮೆಚ್ಚಿದವನೇ ಎಲ್ಲವ
ದೋಚಿ, ತಲೆ ಹಿಡುಕನಾಗಿದ್ದು;
ಊರ ಗೌಡನಿಗೆ ಮಾರಿದ್ದು
ಎಂಥಾ ವಿಚಿತ್ರ ವಿಪರ್ಯಾಸ !

Monday, June 17, 2013

ನಿತ್ಯ ಚೈತ್ರೋತ್ಸವ

ನಿನ್ನ ನೆನಪಿನ
ಸುಮವು ಸುರಿಯಲು
ಎನ್ನ ಮೈಮನದಿ
ರಂಬೆ ಕೊಂಬೆಗಳಲ್ಲಿ
ಚಿಗುರಿನ ನವ ಪಲ್ಲವಿಯ
ನಿತ್ಯ ಹರಿದ್ವರ್ಣವ ವಸಂತವು !
ಧಮನಿ ಧಮನಿಗಳಲ್ಲಿ
ಹರಿವ, ನಿನ್ನ ಹೂನಗೆಯ
ಪ್ರೇಮಧಾರೆಯ ಹೊನಲು!

ನೀ ಹೊತ್ತು ತರುವ
ಮಂದ ಮಾರುತದ
ಆ ಸ್ಪೂರ್ತಿ ಸೆಳೆತದ
ಅಲೆಯೊಳಗಿನ
ಘಮ ಘಮವು;
ಚಿತ್ತ ಚೆಂಚಲವಾದ
ಮನಕೆ ನವೋಲ್ಲಾಸದ
ಮರು ಹುಟ್ಟಿನ 
ಕಾವ್ಯರಸಧಾರೆಗೆ
ಸಂಜೀವಿನಿಯು !

Sunday, June 16, 2013

ಮಹಾ ದಾನಿ

ಎಲ್ಲರಂತಲ್ಲವೇ ಗೆಳತಿ
ನನ್ನವನು, ನಾ ಮೆಚ್ಚಿದವನು
ನನ್ನ ಕೈಹಿಡಿದ ಪತಿ ದೇವನು;
ಕೊಡುಗೈ ದಾನಿಗಳಲ್ಲೇ
ಮಹಾ ದಾನಿ, ಕರ್ಣ ಶಿಬಿ,
ಹರಿಶ್ಚಂದ್ರ ಸಿರಿಯಾಳರೆಲ್ಲರ
ಮೀರಿಸಿದವನು !
ಹೆತ್ತೊತ್ತವಳಿಗಲ್ಲ, ತುತ್ತಿತ್ತವಳಿಗಲ್ಲ
ನಿರ್ಭಾಗ್ಯ ನಿಸ್ಸಾಹಾಯಕ
ಸಂಸಾರದ ನೊಗ ಹೊತ್ತು,
ಒದ್ದಾಡುವವಳ ನೋವಿಗೆ ಸ್ಪಂದಿಸಿ
ತನ್ನ ಒಂದು ಮೂತ್ರ ಪಿಂಡವ
ದಾನ ಮಾಡಿದ ಪುಣ್ಯಾತ್ಮ;
ನಾನವರ ಚರಣ ದಾಸಿ!
ಸದಾ ರೋಗಿಷ್ಟೆ ಅಮ್ಮ
ದುಡಿಯಲಾಗದ ಅಪ್ಪ
ಮೂವರು ತಂಗಿ, ತಮ್ಮ
ನಾ ದುಡಿದರಷ್ಟೇ ಅನ್ನ;
ಒಂದು ಹೊತ್ತಿಗೆ ಕೂಳಿದ್ದರೆ
ಮತ್ತೊಂದು ಹೊತ್ತಿಗೆ ಇಲ್ಲ
ಉಪವಾಸ, ಈಗಿರುವಾಗ
ನನ್ನೆರಡು ಮೂತ್ರ ಪಿಂಡಗಳ ವೈಪಲ್ಯ;
ಈ ಬಡತಿಗೆ ಬಡವನೇ ದಿಕ್ಕು
ನನ್ನ ಬಂದುವೂ ಅಲ್ಲ, ಗೆಳಯನೂ ಅಲ್ಲ
ನನ್ನ ಉದ್ದರಿಸೆ ಬಂದ ಮಹಾ ದೇವನಿವ !

Friday, June 14, 2013

ವೈಮನಸ್ಸು

ನೀ ಎಂಥಾ ಹಿತ್ತಾಳೆಯ
ಕಿವಿಯವಳೇ, ನಿನ್ನ ಅಮ್ಮ
ಹೇಳಿದಕ್ಕೆಲ್ಲಾ ಕೂಡಲೇ;
ಕೋಲೇ ಬಸವನ ರೀತಿ
ತಲೆಯಲ್ಲಾಡಿಸಿ,
ನಿನ್ನ ಸಂಸಾರವ
ಹಾಳು ಗೆಡವೀಯ, ಜೋಕೆ !
ಈ ಎರಡು ವರ್ಷಗಳಲ್ಲಿ
ನನ್ನ ಜೊತೆ ಸಂಸಾರ
ಮಾಡಿದ್ದು, ಒಂದೆರಡು
ತಿಂಗಳುಗಳಷ್ಟೇ !
ಆಷಾಡ ಮಾಸ ಎಂದೇಳಿ
ಮೂರ್ನಾಲ್ಕು ತಿಂಗಳು
ತವರು ಮನೆಯಲ್ಲಿಯೇ ವಾಸ,
ನನಗೆ ವನವಾಸ ಉಪವಾಸ !
ಅಮ್ಮನಿಗೆ ಮೈಸರಿಯಿಲ್ಲ,
ಅಕ್ಕನ ಬಾಣಂತಾನ,
ನಮ್ಮ ಗ್ರಹಗತಿ ಸರಿಯಿಲ್ಲ
ಎಂದೆಲ್ಲಾ ಕುಂಟು ನೆಪವೇಳಿ
ಪೂಜೆ ಪುನಸ್ಕಾರ, ದೇವರ
ಹೆಸರಲ್ಲಿ ಮನೆ ಮನ ತೊರೆದು
ಬಾಳುವ ಪುಣ್ಯಕ್ಕೆ ನಿನಗೆ
ನನ್ನ ಮದುವೆಯಾಗ ಬೇಕಿತ್ತೆ !

ಋಣಾನುಬಂಧ


ಭಾಮಾ ಅಪ್ಪಿತಪ್ಪಿ
ಬಾಯ್ತಪ್ಪಿ, ನನ್ನ
ಹೊರಗೆಲ್ಲಾದರೂ
ಎಂದಾದರೂ;
ನೀ ಕರೆದೀಯ
ಲೋ ಬಾರೋ ಎಂದು,
ನಿನಗಿಂತ ವಯಸ್ಸಿನಲ್ಲಿ
ನಾಲ್ಕೈದು ವರ್ಷ ನಾ ಚಿಕ್ಕವನೆ!
ನಮ್ಮ ನೋಡಿದವರು
ಈ ಮಾತ ಕೇಳಿದವರು;
ಏನೆಂದು ಕೊಂಡಾರು
ನಾಲ್ಕು ಗೋಡೆಗಳ
ಮಧ್ಯೆ, ನನ್ನಾ ನಿನ್ನಾ
ಸಂಬಂಧಗಳ ಸೇತುವಿರಲಿ!
ಪ್ರೀತಿ ಪ್ರೇಮಕೆ ವಯಸ್ಸಿನ
ಅಂತರವಿರದು ನಿಜ;
ಕುರುಡು ಕಾಮಕೆ
ಮನಸು ಮನಸುಗಳ
ಆಕರ್ಷಣೆಯು ಸಹಜ!
ಪಾಠ ಹೇಳಿಸಿ ಕೊಳ್ಳಲು
ಬಂದವನಿಗೆ,
ಪ್ರೇಮಪಾಠವ
ಹೇಳಿ ಕೊಟ್ಟಂತ
ನೀ ಪ್ರೇಮಮಯಿ;
ನನ್ನ ಕೈಹಿಡಿದ ಮಡದಿ!

Thursday, June 13, 2013

ಫಲಾಪಲ

ಗಾಡ ನಿದ್ದೆಯಲ್ಲಿದ್ದವನ
ತಿವಿದೆಬ್ಬಿಸಿದ್ದಳು ನಲ್ಲೆ
ಎಂಥಹದೇ ನಿನ್ನ ಚೆಲ್ಲಾಟ;
ಈ ಸರಿ ರಾತ್ರಿಯ ಹೊತ್ತಲ್ಲಿ
ಹೊತ್ತು ಗೊತ್ತಿಲ್ಲವೇ ನಿನಗೆ,
ತೆಪ್ಪಗೆ ಮುಸುಗಿಕ್ಕಿ ಮಲಗು
ಬೆಳಿಗ್ಗೆ ಮಾತಾಡುವ,
ನಾ ಸಿಡಿ ಮಿಡಿಗೊಂಡಿದ್ದೆ!

ರ್ರೀ... ಮೇಲೇಳ್ರೀ....
ತುಂಬಾ ಹಸಿವಾಗ್ತಿದೆ,
ಆ ಹಾ... ನೀ ಮಾಡಿದ
ಹೊಸ ರುಚಿಯ ನನಗೆ
ತಿನ್ನಿಸಿ, ನೀ ಹಾಗೆಯೇ
ಏನೂ ತಿನ್ನದೆ ಹಾಲ್ಕುಡಿದು
ಮಲಗಿದೆ, ಈಗ ಅನುಭವಿಸು
ನಾ ಬೇಡ ಬೇಡವೆಂದರೂ;
ನೀ ಬಿಡದೆ ಉಣ ಬಡಿಸಿದೆ
ಆದರೂ ನಾ ನಿನಗಿಂತ ಕಿಲಾಡಿ
ತಿಂದಂತೆ ನಟಿಸಿ, ನಿನಗಾಗಿ
ಪಾತ್ರೆಯಲ್ಲಿಯೇ ಉಳಿಸಿರುವೆ,
ತಿಂದು ತೆಪ್ಪಗೆ ಬಂದು ಮಲಗು!

Tuesday, June 11, 2013

ಬುಲ್ ಬುಲ್ ಮಾತಾಡ್ಕಿಲ್ವಾ

ನನಗೆ ಈಗಾಗಲೇ
ಮದುವೆಯಾಗಿದೆ,
ಮುದ್ದಾದ ಮಡದಿ
ಎರಡು ಮಕ್ಕಳಿವೆ
ಹೀಗಿರುವಾಗ ನನಗೆ
ಆಗಾಗ ಕರೆಮಾಡಿ
ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ,
ಕದ್ದೂ ಮುಚ್ಚಿ ಮಾತು ಕತೆ
ಇವೆಲ್ಲವೂ ಬೇಕೆ, ಒಮ್ಮೆಯೂ
ನಾ ನಿಮ್ಮ ನೋಡಿಲ್ಲ,
ನೀವೂ ನನ್ನ ನೋಡಿಲ್ಲ ಆದರೂ
ಏನೋ ನಮ್ಮಿಬ್ಬರಲ್ಲೂ
ಸ್ನೇಹದ ಸೆಳೆತ
ನಮ್ಮ ಸ್ನೇಹಕ್ಕೆ ಚ್ಯುತಿ ಬಾರದಿರಲಿ.
ಪ್ರೇಮ ಕಾಮದ ಹೊರತಾಗಿರಲಿ,
ನನ್ನ ಮನಸಾಕ್ಷಿಗೆ ವಿರುದ್ಧವಾಗಿರಲೆ
ನನ್ನವಳ ಪ್ರೀತಿಗೆ ಮೋಸ ಮಾಡಲೆ
ಅವರೆಲ್ಲರ ಬಿಟ್ಟು ನಿನ್ನ ಜೊತೆ ಬರಲೆ
ಸಾಧ್ಯವಾಗದ ಮಾತು ಮರೆತು ಬಿಡಿ
ಅಯ್ಯೋ ನಾ ಅಂತವಳಲ್ಲ ನನ್ನ ನಂಬಿ
ನಿಮ್ಮ ಸಂಸಾರದಲ್ಲಿ ಮೂಗು ತೂರಿಸಲ್ಲ
ಆದರೂ ನಿಮ್ಮ ಒಮ್ಮೆ ನಾ ನೋಡುವಾಸೆ
ಖಂಡಿತ ನನಗಾಗಿ ಪಿವಿಆರ್ ಬಳಿ ಬರುವಿರಲ್ಲ
ನಾನು ನನ್ನ ಸ್ನೇಹಿತೆ ಇಬ್ಬರೂ ಬುರ್ಖಾದಲ್ಲಿ
ನಿಮ್ಮ ಕೋಡ್ ವರ್ಡ್ ಬುಲ್ ಬುಲ್ ಮಾತಾಡ್ಕಿಲ್ವ
ನಮ್ಮ ಕೋಡ್ ವರ್ಡ್ ಪ್ಯಾರಗೆ ಹಾಗ್ಬಿಟೈತೇ
ಇದನ್ನೇಳಿ ಎಲ್ಲರೂ ಸಿನಿಮಾ ನೋಡುವ ಬರ್ತೀರ
ಅವಳಲ್ಲೇಕೋ ನನಗೆ ಅಯಸ್ಕಾಂತೀಯ ಸೆಳೆತ
ನಾನು ತಪ್ಪು ಮಾಡುತ್ತಿದ್ದೇನೆ ಎಂಬುದ ಮರೆತು
ನನ್ನ ಬೋಳು ತಲೆಗೊಂದು ಎಂದೂ ಹಾಕದವನು ಹೊಸವಿಗ್ ಖರೀದಿಸಿ ಜಾತಕ ಪಕ್ಷಿಯಂತೆ ಕಾದೆ
ಜೀನ್ಸ್ ಪ್ಯಾಂಟು, ಕೂಲಿಂಗ್ ಗ್ಲಾಸು ತಲೆಗೊಂದು
ಹೊಸ ವಿಗ್, ಮಿರಮಿರ ಮಿಂಚೋ ಕಪ್ಪನೆಯ ಶೂ ಇವೆಲ್ಲವ ತೊಟ್ಟು, ಗೇಟಿನ ಬಳಿ ನಿಂತಿದ್ದ ಇಬ್ಬರಿಗೆ
ಏನ್ ಬುಲ್ ಬುಲ್ ಮಾತಾಡ್ಕಿಲ್ವಾ
ಕೋಡ್ವರ್ಡ ಹೇಳಿದ್ದೇ ತಡಾ,
ಬದ್ಮಾಷ್ ಹುಡುಗ್ರೀ ಬೇಕೇನೋ
ಹಿಗ್ಗಾ ಮುಗ್ಗ ಜುಟ್ಟಿಡಿದು ಕೊಡುವಾಗ
ವಿಗ್ಗು ಕೈಗೆ ಬಂದೊಡನೆಯೇ
ಯಾ ಅಲ್ಲಾ ನಿಮ್ದುಕೆ ಯಜಮಾನ್
ಎಂದು ಕೂಗಿದ್ದೇ ತಡ ಶಬನಮ್