Tuesday, July 30, 2013

ಧನದಾಹ

ಅರ್ರೆರೇ..! ನೀನಾ, ಮೀನ ?
ಅದೇನು ಬಂದ್ದು ಈ ದಿನ ?
ಕ್ಷೇಮವೆ,  ಸೌಖ್ಯವೆ ?
ಮತ್ತೇನೋ ಹೇಳುವಂತಿದೆ !

ಮದುವೆಯಾಗ ಬೇಕೆ, ನಿನ್ನ ಮದುಮಗನು ನಾನಾಗಿ ಬದುಕಿ ಬಾಳ ಬೇಕೆ ಕೈಹಿಡಿದು ಜೊತೆಜೊತೆಯಾಗಿ ಕನಸ್ಸಿನ ಗುಡಿ - ಗೋಪುರಗಳ ನೀನೇಕೆ ಕಟ್ಟುವೆ
ಬಿದ್ದು ಚೂರು ಚೂರಾದೀತು ಗೋಪುರವು ಜೋಕೆ  ॥

ಮಸಣದಾ ಮಲ್ಲಿಗೆಯ ಮುಡಿವರುಂಟೆ
ಬಡತನದ ಬಾಲೆಯ ಕೈಹಿಡಿವರುಂಟೆ
ಗುಣವಿದ್ದರೆ ಸಾಕೆ, ರೂಪವಿದ್ದರೆ ಸಾಕೆ
ಹಣವಿರಬೇಕು, ಕೈತುಂಬ ಈ ಕಾಲಕೆ  ॥

ಹೋಗು ಹೋಗೆಲೇ ಹುಡುಗಿ ನೀ ತಿರುಗಿ
ಬರಬೇಡ ಹಿಂದೆ, ಸಿಡಿಲು - ಗುಡುಗಾಗಿ
ಸುಖ ಕಂಡಾಯ್ತು, ಹಣ ನೀಡಾಯ್ತು
ನನ್ನಾ ನಿನ್ನಾ ಕೊಂಡಿ ಕಳೆಚಾಯ್ತು ॥

ಬೇಕಿದ್ದರೆ ನೀ ಕೇಳು ಸಾಕಷ್ಟು ಕೊಡುವೆ ಹಣವ ಹೆಗಲಿಗೇರಿಸ ಬೇಡ ಮತ್ತೊಮ್ಮೆ ನಿನ್ನ ಋಣವ
ನೂರರ ಎರಡು ನೋಟು ಸಾಕೆ, ಮತ್ತಷ್ಟು ಬೇಕೆ
ಏನೂ...... ನನ್ನ ಸನಿಹ ಒಂದಿದ್ದರೆ ನಿನಗೆ ಸಾಕೆ ॥

ಎನಗೆ ನೀ ಚರಣದಾಸಿಯಾಗಲೂ ಬೇಡ
ಎನ್ನ ಮನೆಯ ಜ್ಯೋತಿಯಾಗಲೂ ಬೇಡ
ನೀ ಯಾರೋ ನಾ ಯಾರೋ ಹೋಗಲೇ ಮರುಳೆ
ಭುವಿ ಎತ್ತ, ಬಾನೆತ್ತ ಹೋಗು ಹೋಗಲೇ ಇರುಳೆ ॥

ಏನೂ.. ಭುವಿಗೆ - ಬಾನಿಗೆ ಬೆಸುಗೆಯೇ ಕತ್ತಲು
ಇರುವ ಹೊತ್ತಾದರೂ ಎಷ್ಟು, ಆ ಕರಾಳ ಕತ್ತಲು ಕತ್ತಲದೂಡಿ ಬಾರದಿರುವುದೇ ಆ ಹೊಂಬಿಸಿಲು ಸಿರಿತನವೇ ಹೊಂಬಿಸಿಲು, ಬಡತನವೇ ಕತ್ತಲು ॥

ತರುವೆಯೇನು ಬಯಸಿದಷ್ಟು ಹಣವ
ಕೈಹಿಡಿದು ಜೊತೆಯಾಗಿ ಅಪ್ಪಿ ನಡೆವ
ನೀನೋ ಬಡತನದಿ ಬೆಂದು ಬೆಳೆದ ಬಾಲೆ
ನನಗೂ ನನ್ನವರಿಗೆ ಮೋಹ ಹಣದ ಮೇಲೆ ॥

ಹಣದ ಮಹಿಮೆಯ ನೀನೇನು ಬಲ್ಲೆ
ದಿನದ ಒಡನಾಡಿ ಈ ಹಣವು ಗೊತ್ತೆ
ಹಣವಿಲ್ಲದವನ ಬಾಳು ಹೆಣಕ್ಕಿಂತ ಕೀಳು
ಇರುವಾಗ ಹಣವು ಬಾಳೆಲ್ಲಾ ಹಾಲ್ಜೇನು

ಮಳೆಕಾಣದ ಭುವಿಗೆ ಮಳೆ ತಣಿಸಿದ್ದು ತಪ್ಪೆ
ಚಳಿಗಾಲದ ಮೈಗೆ ಬಿಸಿಯ ನೀಡಿದ್ದು ತಪ್ಪೆ
ಬೀಜ ಬಿತ್ತಾಯ್ತು, ಎನಗೆ ನಿನಗೆ ಮೋಜಾಯ್ತು
ಬಿಟ್ಟ ಫಲವೆಲ್ಲ ನಿನ್ನ ಬಾಳ ಪಥದ ಸೊತ್ತಾಯ್ತು ॥

ಅಯ್ಯೋ..! ಶತಮೂರ್ಖ ಓ ನನ್ನ ಗಂಡಸೇ
ಕಾಲ ಬದಲಾಗಿದೆ, ಭಂಡ ಧೈರ್ಯವ ಬಿಡು
ಬಾಳುವ ಭಾಗ್ಯವ, ತಾಳಿಯ ಭಾಗ್ಯವ ನೀಡು
ಬೀದಿ ಪಾಲಾದೀತು ಮಾನ ಎಚ್ಚರ, ಟೀವಿ ಎದರು ॥

ಕೊಡೆ ( ಛತ್ರಿ )

ಮಳೆ ಬರುವ
ಹಾಗಿದೆ
ಬೇಗ ಹೋಗಿ,
ಇವೆಲ್ಲವ
ತನ್ನಿ
ನಿಲ್ಲಿ,
ಚೀಲವ
ತಂದು
ಕೊಡುವೆ !

ಒಳ
ಹೋದವಳ
ಕರೆದೆ;
ಹಾಗೆಯೇ
ಕೊಡೆಯ
ತಂದು ಕೊಡೆ,
ಬರಿಗೈಲಿ
ಬಂದವಳ
ಎಲ್ಲಿಯೇ
ಕೊಡೆ
ಬೇಗನೆ
ನೀ ಕೊಡೆ !

ಅಯ್ಯೋ..

ಹೊರಗೆಲ್ಲಾ

ನಾ

ಹಾಗೆಲ್ಲ

ಕೊಡಲಾರೆ

ಬೇಕಿದ್ದರೆ;

ಒಳ ಬನ್ನಿರಿ

ಸಾಕಷ್ಟು ಕೊಡುವೆ !

ಅಯ್ಯೋ
ಪೆದ್ದೀ
ನಾ
ನಿನ್ನ
ಕೇಳಿದ್ದು,
ಹೇಳಿದ್ದು
ಮುತ್ತಲ್ಲ
ಕೊಡೆಯ (ಛತ್ರಿ)!

ನಶೆಯ ಕಿಕ್ಕು

ಬಡವರಿಗೆ
ಕಡಿಮೆ
ಬೆಲೆಗೆ
ಸರ್ಕಾರದವರು
ಕೊಡಿಸ್ತಾರಂತೆ
ಮದ್ಯ,
ಅದರಲ್ಲಿ
ಅಷ್ಟಕಷ್ಟೇ ಕಿಕ್ಕು!

ಸಿಗುತ್ತಲ್ಲಾ ಸ್ವಾಮೀ
ಐದು ರೂಪಾಯಿಗೆಲ್ಲಾ
ಸೂಪರ್ ಗ್ಲೂ,
ಫೆವಿಕ್ವಿಕ್ಕು;
ಮೂಸಿ ನೋಡಿದರೆ
ಸಾಕಂತೆ,
ಕಿಕ್ಕೋ ಕಿಕ್ಕು!

ಗೊತ್ತಿರಲಿಕ್ಕಿಲ್ಲ
ಪಾಪ ಜನಕ್ಕೆ
ನಶೆ ಉಚಿತ;
ಶ್ವಾಸಕೋಶದ
ರೋಗ ಖಚಿತ !

Sunday, July 28, 2013

ಕ್ವಾಟರ್ ಬಾಟ್ಲು

ನೈಟಿ ಹಾಕೊ ನನ್ನ ಹೆಂಡ್ರೂ
ಕ್ವಾಟರ್ ಬಾಟ್ಲಿ ಇಡಕ್ಕೊಂಡು
ಬ್ಯಾಡ ಬ್ಯಾಡ ಅಂತಂದ್ರೂ
ಗಟಗಟಾಂತ ಕುಡ್ದೇ ಬಿಟ್ಲಪ್ಪೋ
ಏನೇ ಅಮ್ಮಿ, ನಿನಗೇನ್ ಕಮ್ಮಿ
ನೀನೂ ಕುಡಿಯಾಕ್ ಕಲ್ತುಬಿಟ್ರೆ
ಸಂಸಾರ ಮಕ್ಕಳೆಲ್ಲೋಗ್ಬೇಕು
ಅಂತ ಕೇಳಾಕ್ ನಾ ಹೋದರೆ
ದುರ್ಗಿಯಂಗೆ ದುರ್ಗುಟ್ತಾಳಪ್ಪೋ ॥

ಏಯ್ ಬುಡ್ ಬುಡ್ ಮೂದೇವೀ...
ಗಂಡ ಅನ್ಸ್ಕೋಂಡೋನ್ ನಿಂಗೇಯ
ಮನೆ ಮಡದಿ ಮಕ್ಕಳು ಬೇಕಾಗಿಲ್ಲ
ನಾ ಕುಡ್ದರೆ ಎಷ್ಟು, ಸತ್ತರೆ ಎಷ್ಟು
ನಿಂಗೇನ್ ಕಷ್ಟ, ನಿಂಗೇನ್ ನಷ್ಟ
ದುಡ್ದು ತಂದಾಕಂದ್ರೆ, ಕುಡ್ದು ಬತ್ತೀಯ
ಮೈಮುರಿಯಂಗ್ ಹೊಡ್ದು ಜೀವತಿಂತೀಯ ॥

ಓ ನನ್ನ ಮುದ್ದು ಕಂದ

ನಾ ಹೇಗೆ ಹೊಗಳಲಿ
ಓ ನನ್ನ ಮುದ್ದು ಕಂದಾ
ಈ ತಾಯ ಬಾಳಿನಲಿ
ನೀ ತಂದ ಆನಂದದಿಂದ
ನಾನಿಂದು ಜಗಮಾನ್ಯಳಾದೆ
ನಿನ್ನಿಂದ ತಾನೆ ನಾ ಧನ್ಯಳಾದೆ ॥

ಹತ್ತೂರ ಗುಡಿ - ಗೋಪುರ
ನಾ ಸುತ್ತಿ ಹತ್ತಿ ಬಂದರೂ
ಹೆತ್ತೊಡಲ ಕುಡಿ ನುಡಿಗಾಗಿ
ನಾ ಅತ್ತತ್ತು ಮನ ನೊಂದರೂ ॥

ಮುನ್ನೂರ ದೇವರನು
ಶರಣು ಶರಣೆಂದರು
ಮುತ್ತೆತ್ತಿರಾಯ ಮುತ್ತೆತ್ತಿ
ಕೊಟ್ಟಂತೆ ನಿನ್ನಿತ್ತನೋ ॥

ಬರುಡಾದ ನನ್ನ ಬಾಳ ಸಂಜೆಗೆ
ಬೆಳಕಾಗಿ ನೀ ಬಂದೆ ಈ ಬಂಜೆಗೆ
ನಾ ಹೇಗೆ ಮರೆಯಲಿ ನಿನ್ನನ್ನ
ಓ ನನ್ನ ಮುದ್ದು ಕಂದ ಚೇತನ ॥

ನೀ ನಡೆವಾಗ ನೋಡೋಕೆ
ಕಣ್ಣೆರಡೆರಡು ಸಾಲದೋ
ನೀ ತೊದಲು ನುಡಿವಾಗ
ಕೇಳೋಕೆ ಕರ್ಣಾನಂದವೋ ॥

ನೀ ತಬ್ಬಿ ನನ್ನ ಹಿಡಿವಾಗ
ಎದೆಯುಬ್ಬಿ ಬಂತು ಕುಡಿವಾಗ
ಅಮೃತದ ಸಿಹಿ ಸಿಂಚನ
ನೀ ನಕ್ಕಾಗ ಮನ ಮನೆಯು
ಹಾಲ್ಬೆಳದಿಂಗಳ ಬೃಂದಾವನ ॥

ಬುದ್ಧಿಮಾತು

ನೀ ಕೇಳಬೇಕು ನನ್ನ ಮಗಳೆ
ಈ ತಾಯ ಕಿವಿಮಾತು
ನೀ ತರಬೇಡ ಎಂದೂ ರಗಳೆ
ಪ್ರೀತಿ ಪ್ರೇಮಕೆ ಸೋತು ॥

ಬಣ್ಣಬಣ್ಣದಾ ಸವಿ ಮಾತಿಗೆ
ಎಂದೂ ಮರುಳಾಗದಿರು 
ಸುಣ್ಣದಾ ತಿಳಿ ನೀರೆಂದಿಗೂ
ಕುಡಿವ ಹಾಲಾಗದು ॥

ಬೆಂಕಿಯಾ ಬಳಿ ಮೇಣವೇ ಸುಳಿದರು
ಮೇಣದಾ ಬಳಿ ಬೆಂಕಿಯೇ ಸುಳಿದರು
ಕರಗದಿರದು ಬಿಸಿಗೆ ತಾ ಮೇಣ
ನಮಗೆ ಹೆಚ್ಚು ನಮ್ಮ ಮಾನ ಪ್ರಾಣ  ॥

ಅರಿವಿರಲಿ ಮಗಳೇ ಹರೆಯದಲಿ
ಚೆಲ್ಲುಚೆಲ್ಲುತನ, ನಡೆನುಡಿಯು ಬೇಡ
ನಿಲ್ಲುವಾ ಮುಂಚೆ ನಿನಗೆ ತಿಳಿದಿರಲಿ
ಅಕ್ಕ- ಪಕ್ಕಕೆ ಸರಿದು ಬರುವ ಜಾಡ ॥

ನನಗಿಹುದು ನನ್ನಲ್ಲಿ ಅಭಿಮಾನ
ನನಗಿರದು ನಿನ್ನಲ್ಲಿ ಅನುಮಾನ
ತಿಳಿ ಹೇಳುವುದಷ್ಟಲ್ಲ ನನ್ನ ಕೆಲಸ
ನಿನಗಾಗದಿರಲಿ ಎಂದೂ ಮೋಸ ॥

ಮದುವೆಗೆ ಮೊದಲೇ ತಾಯಾಗಿ ನಿಂತರೆ
ಮುಖಕ್ಕೆ ಎತ್ತು ತಾರೆ ಜನ ಮಂಗಳಾರತಿ
ಮದುಮಗಳು ನೀನಾಗಿ ಹೊತ್ತು ಹೆತ್ತರೆ
ಮಂಗಳೆಯರು ತರುತಾರೆ ದೀಪದಾರತಿ ॥

Saturday, July 27, 2013

ಜಾತಿಯೆಂಬ ಭೂತ

ಎಲ್ಲಾ ಕೇಳುವವರೆ ನನ್ನ
ನಿನ್ನ ಜಾತಿ ಯಾವುದು
ಧರ್ಮ ಯಾವುದೆಂದು
ಅಪ್ಪ ವ್ಯಾಪರದಲ್ಲಿ ವೈಶ್ಯ
ಅಮ್ಮ ಅವರಿವ
ಬಂದವರ ಕೇಶವ ಕತ್ತರಿಸಿ
ಶೃಂಗರಿಸುವ ಕಲಾನಿಪುಣೆ;
ಇನ್ನು ಅಜ್ಜ ಮುತ್ತಜ್ಜರು
ಪರಂಪರಾಗತವಾಗಿ
ಬಳುವಳಿಯಾಗಿ ಬಂದ
ಪೂಜಾ ಕೈಂಕರ್ಯ,
ವೇದ ಉಪನಿಷತ್ತು ಬಲ್ಲ
ಪಂಡಿತೋತ್ತಮರು
ಇಂತಹವರ ಕುಲದಲ್ಲಿ ಹುಟ್ಟಿ
ಇದೆಂತಹ ವೃತ್ತಿ - ಪ್ರವೃತ್ತಿ
ಹಾಸ್ಯಕ್ಕೋ ಅಪಹಾಸ್ಯಕ್ಕೋ
ನಮ್ಮವರೇ ನಮ್ಮ
ಆಡಿಕೊಂಡು ನಗುವಾಗ,
ಛೇಡಿಸುವಾಗ ಕೇಳುವಾಗಲೆಲ್ಲಾ
ನಾನೇ ನಕ್ಕು ಸುಮ್ಮನಾಗುತ್ತಿದ್ದೆ ॥

ವ್ಯಾಪರಂ ದ್ರೋಹ ಚಿಂತನಂ
ಇದು ಬೇಕಿತ್ತೇ, ಹಾಯಾಗಿ
ದೇವರ ಸಾನಿಧ್ಯದಲ್ಲಿ
ಪೂಜೆ ಪುನಸ್ಕಾರ ಎಂದು;
ಪೂಜೆಯ ಮಾಡಿಕೊಂಡಿರದೆ
ವ್ಯಾಪಾರಸ್ತನಂತೆ ಇವನಪ್ಪ
ಇನ್ನು ಇವನ ಅಮ್ಮ
ಮಡಿ ಮೈಲಿಗೆ  ಎನ್ನದೆ
ಜಾತಿ ಕುಲವೆನ್ನದೆ
ಬಂದ ಕಂಡ ಕಂಡ ಹೆಣ್ಣುಗಳ
ಮುಖ ಮರ್ಧನ, ಕೇಶ ಶೃಂಗಾರ ಮಾಡಿ
ಹಣ ಸಂಪಾದನೆಯಿಂದ ಜೀವಿಸುವುದೆ
ಛೇ ಛೇ ಎಲ್ಲಾದರೂ  ಅಗ್ರಹಾರದೊಳಗೆ
ಸೇರಿಸಿ ಕೊಂಡೀರಿ ಜಾತಿ ಭ್ರಷ್ಟ ಮುಂಡೇವನ್ನ

ಚಿರಋಣಿ

ನಾ ತಿನ್ನುವ ಆ ಅನ್ನದ
ಒಂದೊಂದು ಅಗುಳಿನಲಿ
ನನ್ನವಳ ಹೆಸರಿದೆ,
ದುಡಿಮೆಯ ಶ್ರಮವಿದೆ
ಬದುಕಿನ ಕಹಿ ಕತೆಯಿದೆ ॥

ನಾ ತೊಡುವ ಉಡುಪಿನಲಿ
ನನ್ನವಳ ಪ್ರೀತಿಯಿದೆ
ಮಧುರಾತಿ ಸ್ಪರ್ಶವಿದೆ
ನಾ ಹೇಡಿಯೇನಲ್ಲ
ನಾ ಕುಡುಕನೂ ಅಲ್ಲ
ದುಡಿಯಲಾಗದ ಅಪ್ರಯೋಜಕ
ನಡೆಯಲಾಗದ ನಿಸ್ಸಾಹಾಯಕ ॥

ಹೆತ್ತವರನ್ನೇ ದಿಕ್ಕರಿಸಿ
ಶ್ರೀಮಂತಿಕೆಯ ಕಿತ್ತೆಸೆದು,
ಪ್ರೀತಿಸಿದವಳ ಕೈಹಿಡಿಯ
ಹೊರಟವನಿಗೆ, ಆ ವಿಧಿಯ
ಅಟ್ಟಹಾಸದ ಘೋರ ಕ್ರೂರ ನಗೆಗೆ
ಅಘಾತವಾಗಿ, ಅಪಘಾತವಾಗಿತ್ತು ॥

ಯಾರದೋ ಸಹಾಯದಿಂದ
ಆಸ್ಪತ್ರೆಯ ಹಾಸಿಗೆಯಲ್ಲಿದ್ದೆ
ಹೊದ್ದ ಆಸ್ಪತ್ರೆಯ ಹೊದಿಕೆ
ಮೈ ಮುಚ್ಚಿ ನಕ್ಕು ಹೇಳಿತ್ತು
ನಿನಗಿನ್ನಿಲ್ಲ ಎರಡು ಕಾಲು
ಬದುಕಲ್ಲಿ ಸದಾ ಅನುಭವಿಸು
ನೀ ಜೀವನವೆಲ್ಲ ಬರೀ ಗೋಳು ॥

ಓ ದೇವರೆ; ನಿನಗಿದು ಸರಿಯೇ ?
ನಾ ಮಾಡಿದ ಅಪರಾದವೇನು ?
ಅಸಹಾಯಕಳ ಪ್ರೀತಿಸಿದ್ದೆ ?
ನನ್ನವರ ದಿಕ್ಕರಿಸಿದ್ದೇ
ನನ್ನವಳ ಸುಕೃತವೋ
ನಾ ಮಾಡಿದ ಪುಣ್ಯವೋ
ಅಂತೂ ಬದುಕಿರುವೆ ॥

ಕೃತಘ್ನ ಹೀನ

ನೀ ಕೃತಘ್ನ ಹೀನ
ಪಾಪಿ ನನ್ನ ಗಂಡ,
ನೀ ನನ್ನವನೆಂದು
ಬದುಕಿರಲಿ ಎಂದೆಂದು
ದಾನ ಕೊಟ್ಟೆ ನನ್ನ ಮೂತ್ರಪಿಂಡ
ನೀನು ಬೆರೆಯವಳ ತೆಕ್ಕೆಗೆ ಜಾರಿ
ತಿಳಿ ಹೇಳಿದರೂ ನಾ ಬಾರಿ ಬಾರಿ
ನೀ ಮಾಡಿದ್ದೇನು , ನೀ ಹೇಳಿದ್ದೇನು ?
" ಟಾಟ ನಾನಿನ್ನು ಬರ್ಲಾ "

Thursday, July 25, 2013

ತಿರುದುಣ್ಣೋ ತಿರುಕ

ಊರೂರ ಅಲೆದಲೆದು
ಮನೆ ಮನೆಗೂ ತೆರಳಿ
ನಾ ತಿರುದುಣ್ಣೋ ತಿರುಕ
ಏನಿತ್ತರೂ, ಹೇಗಿತ್ತರು
ತಿರುದುಣ್ಣುವುದೇ ಕಾಯಕ !

ನನಗಿಲ್ಲ ಜಾತಿ, ನನಗಿರದು ಧರ್ಮ
ಹಿಂದಿಲ್ಲ ಮುಂದಿಲ್ಲ ನಾ ಪಡೆದ ಕರ್ಮ;
ಆ ಬ್ರಹ್ಮ ಬರೆದ ಹಣೆ ಬರಹದ ಬರಹ
ಈ ಬಿಕನಾಸಿ ಬದುಕು ಧೈನೇಸಿ ತರಹ
ಉಳಿದೆಂಜಲ ತುತ್ತಿತ್ತರೂ, ಮೃಷ್ಟಾನ್ನ ಭೋಜನ ಹಳಸಿದುದ ಎಸೆಯದೆ ಉಳಿದಿತ್ತುದೇ ಪರಮಾನ್ನ!

ಏನಿತ್ತರೂ, ಹೇಗಿತ್ತರು ಬೇಸರ ಎನಗಿಲ್ಲ
ಅನ್ನ ಬ್ರಹ್ಮನ ಮುಂದೆ ಅನ್ಯ ಬ್ರಹ್ಮರಿಲ್ಲ
ಮಳೆಯಿರಲಿ, ಚಳಿಯಿರಲಿ
ಭಿಕ್ಷೆಯ ನಾ ಬೇಡಲೆ ಬೇಕು
ಧಗೆಯಿರಲಿ, ಬಾಯಾರಿರಲಿ
ಶಿಕ್ಷೆಯ ನಾ ಪಡೆಯಲೆ ಬೇಕು !

" ಅಮ್ಮಾ..... ತಾಯಿ " ಭಿಕ್ಷೆ ಎನಲು
ಕರುಣೆ ತೋರೋ ಅನ್ನಪೂರ್ಣೆಯರು
" ಅಮ್ಮ " ಎನ್ನುವೆಯೇನೋ ಎನ್ನುತ
ಜಗಳಕೆ ನಿಲ್ಲುವ ಆ ತಾಯಂದಿರು
ಕೊಟ್ಟದ್ದನು ಪಡೆದು, ಇಟ್ಟದ್ದನು ತಿಂದು
ಉಂಡಾಗಲೇ ಉಗಾಧಿ
ಅಸಿದಾಗಲೇ ಏಕಾದಶಿ !

Wednesday, July 24, 2013

ಅಲೆಮಾರಿ

ಹಸಿವಿಗೆ ಅತ್ತತ್ತು
ಸೊರಗಿ ಹಾಗೆಯೇ 
ಕಣ್ಮುಚ್ಚಿ ಮಲಗಿತ್ತು,
ನಾ ಹೊತ್ತೆತ್ತ ಕಂದಮ್ಮ
ಕುಡಿಸಲು ಎದೆಯೊಳಗೆ
ಒಂದಿನಿತು ಹಾಲಿದ್ದರೆ ತಾನೆ;
ಬರಿದಾದ ಬತ್ತಿದ ಮೊಲೆಯ
ಅಗಿದಗಿದು, ಅಳುವ ಉಗಿದು
ಎದೆಯೊಳಗೂ ನೋವು
ನನ್ನೊಡಲೊಳಗೂ ಕಾವು,
ಅರಿಯದ ಊರು
ತಿಳಿಯದ ಭಾಷೆ;
ಎರಡು ದಿನಗಳಿಂದ
ಊಟವಿಲ್ಲದೆ, ನನ್ನವನ
ಕಣ್ಮರೆಯಿಂದ;
ಕಂಗಾಲಾಗಿದ್ದ ನಾನು
ಅವನ ಹುಡುಕುತ್ತಾ
ಊರೂರ ಅಲೆದಿದ್ದೆ !


ನೀ ಹಿಂಗ ನೋಡ ಬ್ಯಾಡ ನನ್ನಾ .....

ನೀ ಹಿಂಗ ಮತ್ತಮತ್ತ ತಿರುತಿರುಗಿ
ನನ್ನ ನೋಡ ಬ್ಯಾಡವೇ ಹುಡುಗಿ
ಈ ಮನಸು ಹುಚ್ಚೆದ್ದು ಕುಣಿವ ಕುದುರಿ !

ನೀ ಹಿಂಗ ನಕ್ಕರೆ ಎದೆಯೊಗಳ ಸಕ್ಕರೆ
ಹಾಲುಕ್ಕಿ ಗಮ್ಮೆನ್ನೊ ಪರಿಮಳ ಚದುರಿ
ಮತ್ತೇರಿ ಮನ, ಸೆರೆ ಕುಡಿದ ಮಂಗನ ರೀತಿ !

ನೀ ಮುನಿಸು ಬೀರಿ, ಬಿರಬಿರನೆ ನಡೆವಾಗ
ತನು ಅವಲಕ್ಕಿ ಕುಟ್ಟಿದಾಂಗ ಹಾಗತೈತಿ
ನೀ ಗಕ್ಕನೆ ನಿಂತಾಗ ಮೈಚಳಿ ಬರುತೈತಿ !

ನೀ ಹಿಂಗ ಕಾಡಲು ಕನಸಾಗ ಬೆಚ್ಚಿ ಬೀಳುವೆ
ನಿದಿರೆ ತೊರೆದು, ನಾ ನಿನ್ನ ನೆನಪಲ್ಲಿ ಬಳಲುವೆ
ಉಸಿರೆ ನಿಂತರು, ನಿನ್ನ ಧ್ಯಾನದಲ್ಲೇ ನಾ ಮಡಿವೆ !

Tuesday, July 23, 2013

ನಾ ಮುದುಕನ ಮದುವೆಯಾಗಲೆ ?

ಅಪ್ಪಾ.... ಅಮ್ಮಾ........
ನನ್ನ ಅನ್ಯತಾ ಭಾವಿಸದಿರಿ
ನಿಮಗೆ ಎದುರಾಡುವೆನೆಂದು;
ಎರಡನೆಯ ಹೆಂಡತಿಯಾಗಿ
ಆ ಮುದುಕನ ವರಿಸಲಾರೆ !

ನನ್ನ ವಯಸ್ಸಿನ ಮಗಳೋ
ಮಗನೋ ಅವನಿಗಿರ ಬೇಕಲ್ಲ
ಇಂದೋ ನಾಳೆಯೋ ಸಾಯುವವ
ಗಾಳಿಗೆ ಬಿದ್ದೋಗುವ ಒಣ ಮರವದು
ಮಸಣದ ಬಾಗಿಲ ತಟ್ಟುತ್ತಿರುವವ !

ಅವನ ಆಸ್ತಿ - ಅಂತಸ್ತಿಗೆ ಮರುಳಾಗಿ
ನನ್ನೆಲ್ಲಾ ಆಸೆ - ಆಕಾಂಕ್ಷೆಗಳಿಗೆ
ಮನದ ಭಾವನೆಗಳಿಗೆ ತುಪ್ಪ ಸುರಿದು
ನೀವೆಂದೂ ಬೆಂಕಿಯ ಹಚ್ಚದಿರಿ  !

ಸಾಲ ತೀರಿಸಲಾಗದೆ ಮುದುಕನಿಗೆ
ಮಾರಿಕೊಂಡರೆಂದು ಜನ ತಿಳಿಯರೆ
ಕೋಟಿ ಕೋಟಿ ಹಣ, ಆಳುಕಾಳುಗಳಿದ್ದು
ರಾಶಿರಾಶಿ ಕಾಳುಕಡ್ಡಿ, ಮಣ ಬಂಗಾರವಿದ್ದು
ಆರೋಗ್ಯ ಹರೆಯವಿಲ್ಲದ ವಯಸ್ಸು ಮನಸ್ಸು
ಇಲ್ಲದಿರೆ, ನಾ ಸುಖಿಸುವುದಾದರೂ ಹೇಗೆ !

Sunday, July 21, 2013

ಪುನರ್ ವಿವಾಹ

ಇರಲಿ ಬಿಡು ಗೆಳತಿ
ಈ ನಗು ಹೀಗೆಯೇ
ನೀ ನಕ್ಕು ಎಷ್ಟೋ
ವರ್ಷಗಳಾಗಿತ್ತು;
ನೋವುಗಳೊಂದಿಗೆ
ಸದಾ ಸೆಣಸಾಡಿ, ಗುದ್ದಾಡಿ
ಬದುಕಿನ ಬಾಳ ಬಂಡಿಯಲಿ;
ಬೆಂದೆದ್ದು ನೀ ಬಂದಿರುವೆ
ಸಾಗುತ್ತಿರಲಿ ಹೀಗೆಯೇ
ಈ ಸಮರಸ ಜೀವನ !

ಈ ಸಾವೂ ನೋವುಗಳು
ಯಾರಿಗಿರುವುದಿಲ್ಲ ಹೇಳು
ಅವು ಯಾರನ್ನೂ ಬಿಡವು
ಇಂದು ಅವ, ನಾಳೆ ಮತ್ತೊಬ್ಬ
ಹುಟ್ಟಿದವ ಸಾಯಲೇ ಬೇಕಲ್ಲ
ವಿಧಿಯ ಚದುರಂಗದಾಟದಿ
ಅವ ನಡೆಸುವ ಕಾಯಿಗಳು !

ನಾ ಎಷ್ಟೋ ಬಾರಿ ನಿನಗೆ
ಹೇಳ ಬೇಕೆಂದು ಕೊಂಡ
ಕೇಳ ಬೇಕೆಂದು ಕೊಂಡ
ಮಾತುಗಳು ನನ್ನಲ್ಲಿಯೇ
ಹೇಳಲಾಗದೆ, ಕೇಳಲಾಗದೆ
ಹಾಗೆಯೇ ಉಳಿದಿದ್ದು ನಿಜ;
ನೀ ನನ್ನ ಏನೆಂದು ತಿಳಿಯುವೆಯೋ
ನಮ್ಮಿಬ್ಬರ ಸ್ನೇಹಕೆ ಚ್ಯುತಿ ಬರುವುದೋ
ಎಂಬ ಭಯಕೆ ನಾನೇ ಸುಮ್ಮನಾಗಿದ್ದೆ !

ನಿನ್ನ ಸ್ನೇಹಿತೆಯ ಬಳಿ ನಾ
ನಮ್ಮಿಬ್ಬರ ಮದುವೆಯ ಬಗ್ಗೆ
ಪ್ರಸ್ತಾಪಿಸಿದಾಗ
ಅವಳು ಹೇಳಿದ್ದೇನು ಗೊತ್ತೇ,
ಆರ್ ಯು ಮ್ಯಾಡ್ ಸರ್
ಅದು ಹೋಗಿ ಹೋಗಿ
ವಿಧವೆಯ ಬಯಸಿ
ಮದುವೆಯಾಗುವುದೆ,
ನಿಮಗೆಲ್ಲೂ ಹೆಣ್ಣು ಸಿಗಲಿಲ್ಲವೇ;
ನನಗಿಂತ ಬೇರೆ ಹೆಣ್ಣು ಬೇಕೆ !

ಅವಳೆಂದ ಮಾತಿಗೆ ನಾ
ತುಸು ಕೋಪಗೊಂಡರೂ
ನನ್ನಾ ನಿನ್ನ ಬಾಲ್ಯದ ಒಡನಾಟ
ಜೊತೆ ಜೊತೆಯಲ್ಲಿ ವಿಧ್ಯಾಭ್ಯಾಸ
ನನ್ನ ಕಡು ಬಡತನದಲ್ಲೂ
ಸ್ಪೂರ್ತಿ, ಹಣದ ಬೆಂಬಲವಾಗಿ ನಿಂತು
ಇಂದಿನ ಈ ಸ್ಥಿತಿಗೆ ನೀ ಕಾರಣವಾಗಿದ್ದು
ಎಲ್ಲವ ಹೇಳಿದ ಮೇಲೆ, ಕೇಳಿದಾಗ
ಅವಳ ಕಣ್ಣಲ್ಲಿಯೂ ಸಹ ಕಂಬನಿ ಮೂಡಿತ್ತು !

ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು
ಹಿಂದಿನದ್ದೆಲ್ಲಾ ನೀ ಮರೆತು ಬಿಡು
ಅಂತೂ ಇಂತು ನಮ್ಮ ಮದುವೆಗೆ
ಒಪ್ಪಿಗೆಯಿತ್ತೆಯಲ್ಲ, ನನಗಷ್ಟೇ ಸಾಕು !

Wednesday, July 10, 2013

ಜಾತಿ ಭಯ

ನೀ ನನ್ನ ಮರೆತು ಬಿಡು
ಹಾಳಾದ್ದು, ಈ ಜಾತಿಯ
ವ್ಯವಸ್ಥೆ, ನಮ್ಮಿಬ್ಬರನ್ನು
ಎಂದೂ, ಒಂದು ಮಾಡದು;
ಈ ವಿಷವರ್ತುಲದಲ್ಲಿ ಸಿಲುಕಿ
ಹೀಗೆ, ನರಳಿ ಕೊರಗಿ ದಿನಾ
ಸಾಯುವುದಕ್ಕಿಂತ ನಾವು
ಎಲ್ಲಾದರೂ, ಹೇಗಾದರೂ
ದೂರದೂರವಾಗಿ, ನೋಡದೆ
ಬೇರೆಬೇರೆಯಾಗಿ ಬಾಳುವುದೇ
ಈಗ ಉಳಿದಿರುವುದೋಂದೇ ದಾರಿ !

ನೀ ನನ್ನ ಕೇಳಬಹುದು
ನೋಡುವಾಗ ಇಲ್ಲದ ಜಾತಿ
ಪ್ರೇಮಿಸುವಾಗ ಇಲ್ಲದ ಜಾತಿ,
ಒಂದೇ ತಟ್ಟೆಯಲ್ಲುಂಡು ಮಲಗಿ;
ಮುದ್ದಾಡುವಾಗ ಇಲ್ಲದ ಈ ಜಾತಿ
ಈಗೆಲ್ಲಿಂದ, ಧುತ್ತನೆ ಬಳಿ ಬಂತೆಂದು,
ಈ ನಿನ್ನ ಎಲ್ಲಾ ಪ್ರಶ್ನೆಗಳ ಕೇಳಿ
ಅರಗಿಸಿ ಕೊಳ್ಳಲು ನನಗೂ ಕಷ್ಟವೆ;
ನಿನ್ನ ಒಂದೊಂದು ಮಾತಿನ ಬಾಣ
ನನ್ನೆದೆಯ ಘಾಸೀಗೊಳಿಸಿದರೂ ನಾ
ಅಸಹಾಯಕ, ಏನನ್ನೂ ಹೇಳಲಾರೆ !

ಎಲ್ಲಾದರೂ, ಹೇಗಾದರೂ
ಓಡಿ ಹೋಗಿ, ಈಗಲೇ
ಮದುವೆಯಾಗೋಣ
ಎಂದರೆ, ದಶದಿಕ್ಕುಗಳಿಗೂ
ನಿಮ್ಮವರ ಕಣ್ಗಾವಲಿನ ಸೈನ್ಯ;
ಎಲ್ಲಿ ನಮ್ಮ ಮನೆಯವರ ಕೊಲ್ಲುವರೋ
ನನ್ನ ತಂಗಿಯರಿಗೇನು ಮಾಡುವರೋ,
ಎಂಬ, ಎಲ್ಲಿಲ್ಲದ ಹಪತಪಿಸುವ ಭಯ
ಮರ್ಯಾದೆಯ ಹೆಸರಲ್ಲಿ ನಿನ್ನ ಹತ್ಯೆಯ
ಗೈದರೆ, ನಾ ನಿನ್ನ ಬಿಟ್ಟು ಬದುಕುವನೇ !

ನನ್ನೊಲವ ಗೆಳತಿ

ನೀನೊಲಿದ ದಿನವೇ
ನನಗದುವೇ ಸ್ವರ್ಗ
ಮುನಿದ ಮರುಕ್ಷಣವೇ
ಈ ಎದೆಯೊಳಗೆ ನರಕ,
ನನ್ನೆದೆಯ ಗುಡಿಯಲಿ;
ಅರಳಿದ ಹೂ ನೀನೇನೆ
ಆ ಪರಿಮಳಕೆ ನಾ ಸೋತೆ!

ನೀ ನಲಿದ ಪ್ರತಿ ಘಳಿಗೆ
ನನ್ನೊಳಗೆ ರಸ ದೀವಳಿಗೆ
ಭಾವಗಳ ಅಲೆಗಳ ಮೇಲೆ
ಅನುರಾಗದ ಕನಸಿನ ಲೀಲೆ;
ನೀ ಬಯಸಿರಲು, ಬಳಸಿರಲು
ಮಿಂಚಾಯಿತೆ ಈ ಕಣ್ಗಡಲು
ನನ್ನನ್ನೆ ನಾನಿಂದು ಮೈಮರೆತೆ !