Thursday, August 29, 2013

ಮರೆಗುಳಿ

ಇತ್ತೀಚಿನ ನನ್ನ ಮರವಿಗೆ
ದಾರಿ  ತಪ್ಪಿ ಇನ್ಯಾರದ್ದೋ
ಮನೆಯ ಬಾಗಿಲು ತಟ್ಟಿ
ಅಪಹಾಸ್ಯಕ್ಕೆ ಗುರಿಯಾಗಿ
ನಾನೇ ಕಕ್ಕಾಬಿಕ್ಕಿಯಾಗಿದ್ದೆ 
ಪ್ರೊಫೇಸರ್ ಸಾಹೇಬರೇ
ಇದೇನು ಸ್ವಾಮೀ ನೀವಿಲ್ಲಿ
ಪರಿಚಯದವರು ನಕ್ಕರೆ
ಅಪರಿಚಿತರು ಬೈದದ್ದುಂಟು;
ಸಂಜೆಯಾದರೆ ಸಾಕು
ಕುಡಿದು ಗೊತ್ತಾಗದೆ
ತೂರಾಡುವ ಇಂಥಹ 
ಕುಡುಕ ನನ್ನ ಮಕ್ಕಳಿಗೆ  
ಎರಡಿಟ್ಟರೆ ಸರಿ ಹೋಗುವುದು
ಇಲ್ಲಾ ಈ ವಯಸ್ಸಿಗೆ ಅರಳೋ ಮರುಳೊ
ಅಥವಾ ಅಮಾವಾಸ್ಯೆ ಹುಣ್ಣಿಮೆಗೆ ಕೆರಳೊ   
ಇವರಿಗೆ ವಾಸಿಯಾಗದ ಹುಚ್ಚಿರ ಬೇಕು!  
ಅವರ ಮಗನೋ ಮಗಳೋ  
ಅಯ್ಯೋ ಅಪ್ಪಾ ಅವರ ಬಿಡಿ  
ಆ ಎರಡನೇ ಬೀದಿಯಲ್ಲಿರುವ  
ಮ್ಯಾತಮೆಟಿಕ್ಸ್ ಪ್ರೊಫೇಸರ್ 
ತುಂಬಾ ಒಳ್ಳೆಯವರು  
ಪಾಠ ಮಾಡುವುದರಲ್ಲಿ ಎತ್ತಿದ ಕೈ;  
ಹುಚ್ಚೂ ಇಲ್ಲ ಕುಡಿತವೂ ಇಲ್ಲ 
ಸ್ವಲ್ಪ ಮರೆಗುಳಿಗಳಷ್ಟೇ,
ಅಯ್ಯೋ ಸ್ವಾಮೀ,
ನೀವು ಯಾರೆಂದು ಗೊತ್ತಾಗದೆ 
ಯಡವಟ್ಟಾಯಿತು ದಯವಿಟ್ಟು
ನನ್ನನ್ನ  ಕ್ಷಮಿಸಿ ಕ್ಷಮಿಸಿ,
ವಿದ್ಯಾದೇವತೆಯಂತೆ ಬಂದಿರುವಿರಿ 
ದಯಮಾಡಿ ಮನೆಯೊಳಗೆ ಬಂದು 
ಹಾರೈಸಿ, ಕಾಫೀ ತಿಂಡಿಯ ಸ್ವೀಕರಿಸಿ ;
ಈ ನನ್ನ  ಮರೆವಿಗೆ ನಿಮಗೇನಾದರೂ  ।
ಕಾರಣ ತಿಳಿದಿದ್ದರೆ ಬೇಗನೆ ತಿಳಿಸಿ ! 
ಸ್ಪೂರ್ತಿ: ದಾರಿ ತಪ್ಪಿದ ಮಗ

Monday, August 26, 2013

ಪ್ರೀತಿಸಿದವಳ ಅಭಯ

ಇದು ಹೇಳೀ ಕೇಳಿ
ಆರಕ್ಷಕ ಠಾಣೆ ರ್ರೀ,
ಏನೂ ಮಾತಾಡದೆ ತೆಪ್ಪಗಿರಿ
ಅಲ್ಲಿಯವರಿಗೆಲ್ಲಾ ಕೋಪವಿದೆ
ಮಾತಾಡಿ ಸಿಟ್ಟು ಭರಿಸದಿರಿ
ಈಗಾಗಲೇ ನನ್ನ ಅಪ್ಪ,
ಮಗಳ ಹೊತ್ತೊಯ್ದಿಹನೆಂದು
ನಿಮ್ಮಾ ಹಾಗು,
ನಿಮ್ಮ ಮನೆಯವರ ಮೇಲೆ
ದೂರು ದಾಖಲಿಸಿರುವರು
ಅವರೇನಾದರೂ ನಮ್ಮ ಕಂಡು
ಒಡೆದು ಬಡಿದರೆಂದು ಕೋಪಕೆ
ಅಲ್ಲಿಯೇ ಜಗಳಕೆ ನಿಲ್ಲದಿರಿ,
ನಿಮಗೇನಾದರೂ
ಹೆಚ್ಚೂ ಕಡಿಮೆಯಾದರೆ
ನನಗೂ ಕಷ್ಟ ಕೋಟಲೆಯೆ
ಆಮೇಲೆ ಆ ದೇವರೇ ದಿಕ್ಕು;
ಒಂದೆರಡು ವರ್ಷಗಳ ಕಾಲ
ಜೈಲಿನಲ್ಲಿ ಕಳೆಯಬೇಕಾದೀತು
ಎಲ್ಲವನು ನಾ ನಿಭಾಯಿಸುವೆ
ಎಲ್ಲದಕ್ಕೂ ಕೋಲೆ ಬಸವನಂತೆ
ನೀವು ತಲೆಯಾಡಿಸಿದರೆ ಸಾಕು !!
ಅರ್ರರೇ.....ಇಷ್ಟಕ್ಕೆಲ್ಲಾ ಹೆದರಿಕೆಯೆ
ಆ ಹಾ ಮೂಗು ಕೆಂಪಾಯಿತು ನೋಡಿ
ನನ್ನ ಪ್ರೀತಿಸುವಾಗ ಇದ್ದ ಧೈರ್ಯವೆಲ್ಲ
ಪೊಲೀಸ್ ಠಾಣೆಯ ಮೆಟ್ಟಿಲೇರುವಾಗ
ಭಯವೇ, ಎಲ್ಲವೂ ಕರಗಿ ಹೋಯಿತೇ
ನನಗೆಂಥಹದೆ ಭಯ ನೀನಿರುವಾಗ
ಇಂಥಹ ಸಮಯದಲ್ಲೂ ಕೀಟಲೆಯೇ
ಸದಾ ಪ್ರೀತಿಸುವಳ ಅಭಯವಿರುವಾಗ !!

Sunday, August 25, 2013

" ಕಪ್ಪೇ ಚಿಪ್ಪೊಳಗಿನ ಮುತ್ತು "

ನನ್ನಾ ಅವಳ ನಿಶ್ಚಿತಾರ್ಥ,
ಇನ್ನೆರೆಡು ವಾರಗಳಿರುವಾಗ
ನಾನವಳ ಮತ್ತೇ ಕೇಳಿದ್ದೆ;
ನಿನ್ನ ಅಪ್ಪ ಅಮ್ಮರ ಒತ್ತಾಸೆಗೆ
ನೀ ಮನಸ್ಸಿಲ್ಲದೆ ಒಪ್ಪಿದ್ದರೆ,
ಈಗಲೂ ನನ್ನ ಬಲುವಂತವಿಲ್ಲ
ನನ್ನ ಸೋದರತ್ತೆಯ ಮಾತಿಗೆ
ನಾ ಕಟ್ಟು ಬಿದ್ದು ಒಪ್ಪಿದೆನೇ ವಿನಃ
ನಿನ್ನ ಮೇಲಿನ ಮೋಹದಿಂದಲ್ಲ;
ನೀ ಅಂದೇ ಎಲ್ಲರೆದಿರೂ ಹೇಳಿದ್ದೆ
ಓದು ಬರಹ ಅಷ್ಟೇನೂ ಚೆನ್ನಿರದ,
ಈ ಹಳ್ಳಿಗಮಾರನ, ಹೆಣ್ಣೆಗಪ್ಪಿನ
ಕೆಂಗಣ್ಣಿನ ಕಚ್ಚೆ ಪಂಚೆಯವನ
ನಾ ಹೇಗೆ ಮೆಚ್ಚಿ ಕೊಳ್ಳಲಿ ಎಂದು !

ಇದೇ ಯೋಚನೆಯಲ್ಲಿ ಮುಳುಗಿದವನ
ಹಿಂಬದಿಯಿಂದ ಗೊತ್ತಾಗದಾಗೆ ಬಂದು
ಬಿಗಿದಪ್ಪಿದವಳ ಕಂಡು ಒಂದು ಕ್ಷಣ
ನಾನೇ ಬೆಕ್ಕಸ ಬೆರಗಾಗಿ ಹೋಗಿದ್ದೆ
ಹಾಯ್ ಜುಟ್ಟು ಮಾಮ್ ಕಂಗ್ರಾಟ್ಸ್
ಐ ಯಾಮ್ ಸೋ ಹ್ಯಾಪಿ ಯು ನೋ
ಅಂದಿನ ಹತ್ತಾರು ಪತ್ರಿಕೆಗಳ ಹಿಡಿದು
ಮುಖ ಪುಟದಲ್ಲಿನ ನನ್ನ ಭಾವ ಚಿತ್ರವ
ಅದರಲ್ಲಿನ ವಿಷಯವ ಓದಿ ಖುಷಿಗೊಂಡಿದ್ದೆ
ಭಾರತ ಸರ್ಕಾರದಿಂದ ಕೊಡ ಮಾಡುವ
ಸಾವಯವ ಕೃಷಿಯ ಹರಿಕಾರ
ಶ್ರೀ ಮಹೇಶ್ ರವರಿಗೆ ಕೃಷಿ ರತ್ನ ಪುರಸ್ಕಾರ
ಇದೇ ತಿಂಗಳು ಇಪ್ಪತ್ತಕ್ಕೆ
ರಾಷ್ಟಪತಿಗಳ ಭವನದಲ್ಲಿ ಪ್ರಧಾನ  !!!

Saturday, August 24, 2013

ಅನುಮಾನದ ನೆರಳು

ನಿನಗೇನಾಯಿತೆಂದು
ಈ ರೀತಿಯ ಸಿಟ್ಟು,
ಎಂದೂ ಕಾಣದ ಸಿಡುಕು
ನೀ ಏನೇನೋ
ನಿನ್ನ ಮನಸ್ಸಲ್ಲಿಟ್ಟುಕೊಂಡು
ನೀ ಹೀಗೆಲ್ಲಾ
ನನ್ನ ತಾಳ್ಮೆಯ ಕೆಣಕದಿರು
ಬಾಯಿ ಇದೆ ಎಂದು ಬಾಯಿಗೆ
ಬಂದಂತೆ ನೀ ಮಾತಾಡದಿರು
ನಾ ಎಂದಾದರು,
ನಿನ್ನನ್ನ ಹೀಗೆಲ್ಲಾ
ಅನುಮಾನದ ದೃಷ್ಟಿಯಲ್ಲಿ
ನಾ ನೋಡಿರುವೆನೆ
ಮದುವೆಯಾಗಿ
ಇಷ್ಟು ವರ್ಷಗಳಾದರೂ
ನಮಗೆ ಎರಡು
ಮುದ್ದಾದ ಮಕ್ಕಳಿದ್ದರೂ
ನನ್ನ ಸಹೋದ್ಯೋಗಿ
ಮಹಿಳೆಯ ಜೊತೆಗೆ
ಆತ್ಮೀಯವಾಗಿ
ಮಾತಾಡಿದರೆ ನಿನಗೆ
ಎಲ್ಲಿಲ್ಲದ ಅನುಮಾನದ
ವಕ್ರ ವಕ್ರ ಆಲೋಚನೆಗಳೆ !
ಹೆಂಡತಿಯಾದವಳಿಗೆ
ಇವೆಲ್ಲಾ ಇರಬೇಕ್ಕಾದ್ದೇ
ಕಾಳಜಿ, ಜಾಗ್ರತೆ
ಹಾಗೆಯೇ ಗಂಡನ ಬಗ್ಗೆ
ಗೌರವದ ನಂಬಿಕೆ
ಅದೆಲ್ಲವ ಬಿಟ್ಟು ಹೀಗೆ,
ಅನುಮಾನದ ಹುತ್ತವ
ಮೈಮನಸ್ಸುಗಳಲ್ಲಿ
ನೀ ಬೆಳೆಸಿಕೊಂಡರೆ
ಸಂಸಾರ ದಾರಿ ತಪ್ಪಿ
ನಿಸ್ಸಾರವಾಗದಿರದು ಎಚ್ಚರ !     
ಬೈದು ಹೊಡೆದು
ಬುದ್ಧಿ ಹೇಳೋಣವೆಂದರೆ
ನೀನೂ ಸಹ ವಿದ್ಯಾವಂತೆ,
ಮೇಲಾಗಿ ಉದ್ಯೋಗಿ
ಇಂದು ತಿಳಿದು ಕೊಳ್ಳುವೆ,
ನಾಳೆ ತಿಳಿಯುವೆ
ಎಂಬೆಲ್ಲಾ ಕನಸುಗಳಷ್ಟೆ,
ನಾ ಈಗ ಕಾಣ ಬೇಕಿದೆ !

Friday, August 23, 2013

" ಶ್ರಾವಣೀ ಪೂರ್ಣಮಿ "

ಏನೂ ಮುಚ್ಚಿಡದೆ ನನ್ನ ಬಳಿ
ನನಗೆಲ್ಲಾ ನಿಜ ಹೇಳಿ,
ಮನೆ ಕೆಲಸದವಳಂತೆ ಕಾಣವ
ನಿಮ್ಮ ಕಂಡರೇಕೋ ದೇವರನ್ನು
ಕಂಡಂತಹ ಶ್ರದ್ಧಾಭಕ್ತಿ;
ಆ ಕಣ್ಣಗಳಲಿ ಸಂತಸದ ಹೊಳಪು
ಒಂದೇ ಸಮ ನನ್ನವಳು ಪ್ರಶ್ನಿಸಿ
ನನ್ನ ತಬ್ಬಿಬ್ಬಾಗಿಸಿದ್ದಳು;
ಇದು ಎಂಥಹದೇ ನಿನ್ನನುಮಾನ
ಯಜಮಾನನಲ್ಲಿ ಇರಬೇಕಾದ್ದೇ ಗೌರವ,
ಪತಿಭಕ್ತಿ ಐ ಮೀನ್
ಮನೆ ಯಜಮಾನನಲ್ಲಿ ಭಯಭಕ್ತಿ;
ನೀ ರಸ್ತೆ ದಾಟುವಾಗ
ಅಪಘಾತವಾಗಿ ರಕ್ಷಿಸಿ,
ಆಸ್ಪತ್ರೆಗೆ ಸೇರಿಸಿ
ನಿನ್ನ ಕಾಪಾಡಿದರೆಂದು,
ಮನೆಗೆ ಕರೆತಂದು
ಕೆಲಸಕ್ಕೆ ಇಟ್ಟುಕೊಂಡವಳು ನೀನು
ಈ ಆರು ತಿಂಗಳುಗಳಲಿ
ನಿನಗೆ ಅಚ್ಚು ಮೆಚ್ಚು; ಹೀಗಿರುವಾಗ
ನೀ ಏನೇನೋ ಹೀಗೆಲ್ಲಾ ಯೋಚಿಸಿ
ಚಿಂತಿಸಿ ಆಯಾಸ ಮಾಡಿ ಕೊಳ್ಳದಿರು
ಆಫೀಸಿಗೆ ಟೈಮ್ ಆಯಿತು ನಾ ಬರುವೆ  !!!!

ಶ್ರಾವಣೀ

ನೀವು ಸುಮ್ಮನಿದ್ದು ಬಿಡಿ
ನನ್ನ ಮಾತಾಡಿಸದೆ,
ಮುಖ ಊದಿಸಿ ಕೊಂಡು
ಬಿಮ್ಮನೆ ಕೂತವಳ ಕಂಡು,
ನಗು ತಡೆಯಲಾಗದೇ
ನನ್ನೊಳಗೆ ನಾ ನಕ್ಕಿದ್ದೆ;
ಜೋರಾಗಿ ನಗುವಂತಿಲ್ಲ
ಮತ್ತೆ ಮುನಿಸಿ ಕೊಂಡಾಳು
ಹಾಳಾದ್ದು ಬಸ್ಸು ಮಿಸ್ಸಾಗಿ,
ಐದಾರು ಮೈಲಿ ನಡೆದು ನಡೆದೂ
ಸುಸ್ತಾಗಿ ಬಂದವನ ಗಮನಿಸದೇ,
ನನ್ನವಳು ಉಪಚರಿಸುವುದ ಬಿಟ್ಟು
ಹೀಗೆ ಕೋಪಗೊಂಡರೆ ಹೇಗೆ ಸ್ವಾಮೀ;
ಇದೇನು ಸಿಟಿಯೇ, ಬೇಕೆಂದಾಗ
ಬಸ್ಸು, ಆಟೋ ಟ್ಯಾಕ್ಸಿಗಳು ಸಿಗಲು
ಮಲೆನಾಡಿನ ಮೂಲೆಯೊಂದರ ಚಿಕ್ಕ
ಹಳ್ಳಿಯವಳು ನನ್ನ ಮನಮೆಚ್ಚಿದವಳು
ನನಗೂ ಮಾತಾಡಿಸಿ ಸಾಕಾಗಿ,
ಎಷ್ಟು ರಮಿಸಿದರೂ ಕೇಳದವಳ
ಮೆಲ್ಲ ಕಿವಿ ಕಚ್ಚಿ ನಾನಿನ್ನು ಬರುವೆ
ಇಷ್ಟು ಹೇಳಿದರೂ ಇಷ್ಟಪಡದವಳು
ನನಗೂ ನಿನಗೂ ಇನ್ನು ಆಗಿ ಬರದು
ನಾ ಬೇಕಿದ್ದರೆ ನನ್ನ ಬಳಿ ನೀ ಬಾ....
ನಾ ಈಗಲೇ ಊರಿಗೆ ಹೊರಟೆ, ನಿನ್ನಿಷ್ಠ
ಅಳುಅಳುತ ಬಂದು ಬಿಗಿದಪ್ಪಿದವಳ
ನಗು ನಗುತ ನಾ ಸಂತೈಸಿ ಅಪ್ಪಿದ್ದೆ !!!

Wednesday, August 21, 2013

ನಿದ್ರಾಭಂಗ

ನಿನ್ನ ಮಗನಿಂದಾಗಿ
ನಾ ನೆಮ್ಮದಿಯಿಂದ
ನಿದ್ರಿಸುವಂತಿಲ್ಲ ಕಿಶೋರಿ,
ಅವನಿಗೂ ವಯಸ್ಸು
ಇನ್ನೇನು ನಾಲ್ಕಾಯ್ತು,
ನನ್ನಮ್ಮನ ಬಳಿ ಮಲಗಿಸು
ನೀ ಬಂದು ಹಾಗೆಯೇ,
ಆ ತೆರೆಯ ಪಕ್ಕಕೆ ಸರಿಸು
ನನ್ನವಳು ನಕ್ಕಿದ್ದಳು;
ಆ ಹಾ ಚಪಲ ಚೆನ್ನಿಗರಾಯರು
ಅಯ್ಯೋ ಪೆದ್ದೀ ಅದಕ್ಕಲ್ಲವೇ
ತಾಯೀ ಮಗ ಇಬ್ಬರೂ ಸೇರಿ,
ಹಗಲೆಲ್ಲಾ ಚೆನ್ನಾಗಿ ನಿದ್ರಿಸಿ
ರಾತ್ರಿಯೆಲ್ಲಾ ಅವನಿಗೆ,
ನೀತಿ ಕತೆಗಳ ಹೇಳಿ ಹೇಳಿ
ನೀ ಮುದ್ದು ಮಾಡಿ ಕೆಡಿಸಿರುವೆ;
ನಾ ನಿದ್ರಿಸುವುದಾದರೂ ಹೇಗೆ
ಸಾಲದಕ್ಕೆ ಆಗಾಗ,
ಅವನ ಒದ್ದಾಟ ಬೇರೆ
ಮಧ್ಯ ಮಧ್ಯದಲಿ;
ಅವನ ಸಂತೈಸುವಿಕೆಯಲಿ
ನಿನ್ನ ಲಾಲಿಯ ಹಾಡು ಬೇರೆ,
ಕೇಳಿ ಕೇಳಿ ನನಗೂ ಸಾಕಾಗಿದೆ
ನಿಮ್ಮಿಬ್ಬರ ಸಹವಾಸ ದೋಷದಿಂದ
ದಿನ ರಾತ್ರಿ ನನಗೆ ನಿದ್ರಾಭಂಗ ॥

ಗುಟ್ಟು ರಟ್ಟು

ಗೆಳೆಯಾ ನನ್ನಾ ನಿನ್ನ
ಪ್ರೀತಿಯ ಸಂಬಂಧವ,
ನಮ್ಮ ಮನೆಯವರಿಗೂ
ಯಾರಿಗೂ ಗೊತ್ತಾಗದಂತೆ
ಗುಟ್ಟಾಗಿ ನಾ ಮುಚ್ಚಿಡ ಬಲ್ಲೆ;
ಆದರೆ ನಾ ಇಂದು
ನಮ್ಮಿಬ್ಬರ ಕ್ಷಣಿಕ ಸುಖಕೆ
ಅಂದು ಸುಮ್ಮನಿರದೆ,
ಒಂದು ಕ್ಷಣ ಮೈಮರೆತ
ಅತಿ ಘೋರ ತಪ್ಪಿಗೆ;
ನನ್ನ ಒಡಲೊಳಗೆ
ದಿನೇ ದಿನೆ ಬೆಳೆಯುತ್ತಿರುವ
ನಿನ್ನ ಸ್ನೇಹದ ಪ್ರತಿಪಲವ
ಹೊತ್ತು ತಿರುಗಾಡುತಿರುವೆ
ನಾ ಹೇಗೆ ತಾನೆ ಗುಟ್ಟಾಗಿಡಲಿ ॥

ಇದ ತೆಗಿಸಿ ಬಿಡುವ ಎಂದರೆ
ಕಾಲ ಮೀರಿ ನಾಲ್ಕಾಗಿದೆ,
ನೀ ನನ್ನ ಕೇಳ ಬಹುದು
ತಿಂಗಳು ತಿಂಗಳು ನೀ ಸರಿಯಾಗಿ ಮುಟ್ಟಾಗುತ್ತಿರಲಿಲ್ಲವೇ ಎಂದು
ಒಮ್ಮೊಮ್ಮೆ ಮುಟ್ಟಿನಲೂ;
ದೇಹ ಸ್ಥಿತಿಯಿಂದ ಏರುಪೇರಾಗಿ
ಮುಟ್ಟು ಮುಂದೂಡುತ್ತಿತ್ತು
ಮೊದ ಮೊದಲು ವಾಂತಿಯಾದರೂ
ಪಿತ್ತವಿರಬೇಕೆಂದು ಜೀರಿಗೆಯ ತಿಂದು
ನಾ ಸುಮ್ಮನಾಗಿ ಈಗ ಅಳುವಂತಾಗಿದೆ ॥ 

Monday, August 19, 2013

ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ

ನಿದಿರೇsssss,
ನೀ ಬರದೆ ಏಕೆ
ಎಲ್ಲಿ ಅಡಗಿ ಕುಳಿತೆ;
ಒಳಗು ಹೊರಗೂ
ಈ ನನ್ನ ನೋವಿಗೆ
ಬಂದು ಲಾಲಿ,
ಹಾಡ ಹಾಡದೆ
ಮನಸಿನೊಳಗೆ
ಅವಳ ನೆನಪು;
ಕಣ್ಣ ತುಂಬಿ ಹರಿವ ನೀರು
ಹೆಣ್ಣ ನಂಬಿ ಬರಿದೆ ನೋವು
ಮರೆಯಲೇಗೆ ನೀ ಹೇಳದೆ ॥
ಒಲವೇsssss,
ನೀ ಬರದೆ ಏಕೆ
ನನ್ನ ಮರೆತು
ನೀ ಎಲ್ಲಿ ಎಲ್ಲಿ;
ಅಲೆಯುತಿರುವೆ
ಈ ಹೃದಯದೊಳಗೆ
ನೀ ಬೆಸದ ಪ್ರೀತಿ,
ಪ್ರೇಮ ಬಂಧನ
ನಿನಗೆ ಕಾಲ ಕಸವೆ ಆಯಿತೆ
ನೂರು ಭಾವ ನೂರು ನೋಟ
ನೂರು ಒಲುಮೆ ಬಾಳ ಪಥಕೆ
ಬಿರಿದ ಭೂಮಿಯಾಯಿತೇಕೆ ॥

" ಬಾಡಿಗೆ ತಾಯಿ "

ನಾ ನಿನ್ನಾ ಹಡೆದವ್ವ,
ಎತ್ತಿ ಮುದ್ದಾಡಲಿಲ್ಲ
ನಿನ್ನಾ ನಾ ಹೊತ್ತು;
ಎದೆಗಪ್ಪಿ ತಿರುಗಾಡಲಿಲ್ಲ
ಎದೆಯ ಹಾಲನು ಕುಡಿಸಿ,
ನಿನ್ನಾ ನಗುವ ನಾ ನೋಡಲಿಲ್ಲ
ಅಳುವಾಗ ನಿನ್ನ ನಾ ರಮಿಸಲಿಲ್ಲ;
ಜೋ ಜೋ ಜೋ ಮುದ್ದು ಕಂದಾ
ನೀ ಮಲಗೆಂದು ನಾ ಹಾಡಲಿಲ್ಲ ॥

ಈ ನತದೃಷ್ಟೆ ತಾಯಿ ಪಾಪಿಷ್ಟಳಲ್ಲ
ನಿನ್ನ ಹಡದೇ, ನಾ ಹಣವ ಪಡೆದೆ
ಏಳೇಳು ಜೊತೆ ಹೆಜ್ಜೆಗಳ ಇಡದಲೇ
ಏಳೂ ಬೀಳುಗಳಲಿ ನಾ ಬಿದ್ದೇಳುತಲಿ, ದಾಂಪತ್ಯದಾನಂದವ ಕಾಣದಲೇ
ಪರರಿಗೆ ಮೈ ಮಾರಿಕೊಳ್ಳದೆಲೆ,
ಇನ್ಯಾರದೋ ತೆಕ್ಕೆಗೆ ನಾ ಜಾರದೆ
ನನ್ನಾ ಕಷ್ಟ ಕಾರ್ಪಣ್ಯಕೆ
ನಾ ನಿನ್ನ ಹಡೆದಂತ ತಾಯಿ;
ಬಾಡಿಗೆ ತಾಯಿ ನಾ ಬಾಡಿಗೆ ತಾಯಿ ॥

Sunday, August 18, 2013

ಅಣ್ಣಾ - ತಂಗಿ

ಅಳಬೇಡ ನನ್ನಾ ಮುದ್ದೀನ ತಂಗ್ಯವ್ವ
ನಿನ್ನ ಅಣ್ಣಯ್ಯ ತವರಿಂದ ಬಂದೀವ್ನೀ
ಗಿಣ್ಣಾಲು ಒಬ್ಬಟ್ಟು ನಿನಗಾಗಿ ತಂದೀವ್ನಿ
ತಿಂದುಂಡು ಈ ಮಲ್ಲಿಗೆಯ ಮುಡಿದೇಳು ॥

ಮನೆಯಲ್ಲಿ ಅತ್ತೆಮ್ಮ ಮಾವಯ್ಯ ಭಾವ
ನಿನ್ನಾ ನಾದಿನಿ ಎಲ್ಲಾರೂ ಸೌಖ್ಯಾನೆ
ನಿಂಗೆ ತವರೂರ ಸುಖ ದುಃಖ ಮುಖ್ಯಾನೆ
ಹೇಳವ್ವ ನನ್ನಾ ಬಂಗಾರದ ಮುದ್ದೀನ ತಂಗಿ ॥

ಬಾವ ಬರುವಾ ಮುಂಚೆ ನೀ ಕುಚ್ಚೀನ
ಕಾಸಗಲದ  ಅಂಚಿನ ಸೀರೆಯ ಹುಟ್ಟು
ಹಚ್ಚಸಿರಿನ ಬಳೆ, ಬಂಗಾರವ ತೊಟ್ಟು
ಮಾಲಕುಮಿ ಬಂದಾಂಗೆ ಮೇಲೇಳು ॥

ನಾನೇ ನಿನಗೆಲ್ಲಾ ತಾಯ್ತಂದೆ ಬಂಧು ಬಳಗ
ನನ್ಮುಂದೆ ಹೇಳವ್ವ ನಿನ್ನಾ ಸುಖ - ದುಃಖಾವ
ನಿನ್ನತ್ತೆಮ್ಮ ಮಾವ ನಾದಿನಿ ಕಷ್ಟಾವ ಕೊಟ್ಟಾರೆ
ಸರಿಮಾಡಿ ನಾದಿನಿಯ ಕೈಯಾ ನಾ ಹಿಡಿಯುವೆ ॥

ಇನ್ಮುಂದೆ ನಿನಗಿರದು ಕತ್ತಾಲ ಬಾಳು
ಬಾಳೆಲ್ಲ ನೆಮ್ಮದಿಯ ಹಾಲ್ಬೆಳದಿಂಗಳು
ನನ್ನವ್ವ ಸುಖವಾಗಿ ನೀ ನಗುತಿರ ಬೇಕು
ನೂರ್ಕಾಲ ಹಾಯಾಗಿ ನೀ ಬಾಳಬೇಕು ॥

Saturday, August 17, 2013

ಒಣ ಪ್ರತಿಷ್ಟೆ

ಹಠದಲ್ಲಿ ಇಬ್ಬರೂ
ಸರಿ ಸಮಾನರೇ
ಹಾಗೆಯೇ ಆಗಾಗ
ಮುನಿಸಿ ಕೊಳ್ಳುವುದರಲ್ಲಿ
ನನ್ನವಳದು ಎತ್ತಿದ ಕೈ;
ನಮ್ಮಿಬ್ಬರ ಜಗಳದಲಿ
ಪಾಪ, ಬಡಪಾಯಿ
ಮಕ್ಕಳ ಗತಿಯಂತೂ
ಆ ದೇವರಿಗೆ ಪ್ರೀತಿ ॥

ಬೇಡ ಬೇಡವೇ ರುಕ್ಕೂ
ಆ ಉದ್ಯೋಗದಾಸೆ,
ಜಂಜಾಟ, ನಿನಗೇಕೆ ಬೇಕು
ಈ ಮನೆ ಮಕ್ಕಳ ನನ್ನನ್ನ
ನೋಡಿಕೊಂಡರೆ ಸಾಲದೆ,
ಅಲ್ಲಿಯೂ ದುಡಿದು, ಸಾಕಾಗಿ
ನೀ ಇಲ್ಲಿಯೂ ದುಡಿಯಲಾರೆ;
ನಾ ಸಾಕಷ್ಟು ದುಡಿದು
ತಂದಾಕುವಾಗ, ತಿಂದುಂಡು
ನಮಗೂ ಒಂದಷ್ಟು ಬೇಯಿಸಿ
ಹಾಯಾಗಿ ಇರುವುದು ಬಿಟ್ಟು,
ನಿನ್ನದೆಂತಹದೇ
ಹೊಸ ಬಗೆಯ ವ್ಯಾಮೋಹ,
ಈ ಒಣ ಪ್ರತಿಷ್ಟೆ;
ನೆಮ್ಮದಿಯ ಜೀವನವ ಬಿಟ್ಟು
ನೀ ದುಡಿದು ಯಾರ ಉದ್ಧರಿಸ ಬೇಕು ॥

Friday, August 16, 2013

" ಕೊಲೆಗಾತಿ "

ನೀ ನನಗಾದರೂ
ಹೇಳ ಬಹುದಿತ್ತು,
ನನಗೀಗಾಗಲೇ
ನಲ್ಲನಿಹನೆಂದು
ನೀ ಮುಚ್ಚಿಟ್ಟು ನನಗೆ
ದ್ರೋಹ ಬಗೆದೆ;
ನಿನ್ನ ಸರಳ ಸಜ್ಜನಿಕೆಗೆ
ತಲೆದೂಗಿ
ನಿನ್ನ ಅಪ್ರತಿಮ ರೂಪಕೆ
ನಾ ಮಾರು ಹೋಗಿ,
ಒಪ್ಪಿಗೆಯಿತ್ತು
ತಪ್ಪು ಮಾಡಿದೆನೇನೋ ॥

ನನ್ನಾ ನಿನ್ನ
ನಿಶ್ಚಿತಾರ್ಥದ ದಿನದಂದು,
ನೀನೆಷ್ಟು ಸಂಭ್ರಮಿಸಿದ್ದೆ
ಏನೂ ತಿಳಿಯದ ಮುಗ್ಧೆಯಂತೆ
ನಿನ್ನವನ ಬಳಿ ಕರೆತಂದು
ನನಗೆ ಪರಿಚಯಿಸಿದ್ದೆ;
ಹಾಗಲಾದರೂ
ನೀ ಹೇಳಬಹುದಿತ್ತು,
ಈ ಮದುವೆಯ
ಮುರಿಯ ಬಹುದಿತ್ತು,
ಒಣ ಪ್ರತಿಷ್ಟೆಯೋ
ಹರಕೆಯ ಕುರಿಯೋ
ನಾನಾಗ ಅರಿಯದಾದೆ ॥

ಒಂದು ಸುಂದರ ಸಂಜೆ
ಫೋನಾಯಿಸಿ ಬನ್ನಿ,
ಹಾಗೆಯೇ ಒಂದಷ್ಟು
ಸುತ್ತಾಡಿ ಬರುವ
ಇನ್ನೆರಡು ವಾರದಲಿ ನಮ್ಮ
ಮದುವೆಯಿದೆ, ಈಗ ಬೇಡ
ಮದುವೆಯಾದ ಮೇಲೆ
ಇವೆಲ್ಲಾ ಇದ್ದದ್ದೇ ಎಂದರೂ
ಬಿಡದೆ ನನ್ನ ಕರೆದ್ಯೊದಿದ್ದೆ
ನೀಲಾಕಾಶದಿ ಹಾರುವ
ಲೋಹದ ಹಕ್ಕಿಗಳ ತೋರಿಸಿ
ನನ್ನ ಮರಣಕೆ ಮುಹೂರ್ತವಿಟ್ಟು
ಎಷ್ಟು ಸಮಯೋಚಿತವಾಗಿ
ನೀ ಕೊಲ್ಲಿಸಿದ್ದೆ " ಕೊಲೆಗಾತಿ " ॥


Thursday, August 15, 2013

ಆಲೋಲಿಕ

ಒಲವಿನ ಗೆಳತಿ, ನಾ ನಿನಗೆ
ಹೇಳಬೇಕೆಂದು ಕೊಂಡ
ಈ ಮನದ ಮಾತುಗಳು,
ನಿನ್ನ ಕಂಡ
ಮರು ಘಳಿಗೆಯೇ;
ಹೇಳಲಾಗದೆ
ನನ್ನಲ್ಲಿಯೇ ಹಾಗೆಯೇ
ಉಳಿದಾಗ
ನೀ ಹೇಳಿದ್ದೆ ನನಗೆ,
ನಾಡಿದ್ದು ನನ್ನ ನೋಡಲು
ದೂರದ ಊರಿಂದ
ಹುಡಗನ ಮನೆಯವರು ಬರುವರೆಂದು
ಆ ಕ್ಷಣವೇ ಈ ಭೂಮಿ ಬಿರಿದು
ಬಾಯ್ತೆರೆಯ ಬಾರದೆನಿಸಿ
ಕಣ್ಣ ತುಂಬಿ, ಮನ ತುಂಬಿ
ಕಂಬನಿ ಬಂದಿತ್ತು; 
ನಿನಗೆ ತೋರ್ಗೊಡದೆ
ನಾ ಜೋರು ನಗೆಯಲ್ಲಿ ನಕ್ಕಿದ್ದೆ ॥

ಅಯ್ಯೋ...
ಹುಚ್ಚು ಹುಡುಗಾ,
ನಾ ನಿನ್ನ ಬಿಟ್ಟು
ಬಾಳುವೆನೇನೋ
ನೀನಿಲ್ಲದೆಯೇ;
ನಾ ಹೇಗೆ ಬದುಕುವೆನೋ
ನೀ ನನಗೆ ಹೇಳಲಾಗದೆ
ಒದ್ದಾಡುವುದ ಕಂಡು
ತಮಾಷೆಯ ಮಾಡೋಣವೆನಿಸಿ
ಒಂದಷ್ಟು ಗೋಳಾಡಿಸುವ ಎಂದು
ಹಾಗೆ ಹೇಳಿದೆನೋ ನಲ್ಲಾ
ನನ್ನೊಳಗೆ ತಡೆಯಲಾಗದ
ಧುಮ್ಮಿಕ್ಕುವ ನಗುವ ಕಂಡು
ಇಡೀ ಉಧ್ಯಾನ ವನವೆಲ್ಲಾ
ಓಡಿಸಿಕೊಂಡು ಸುತ್ತಾಡಿಸಿ
ನಿನ್ನ ಬಾಹುಗಳಲಿ ಬಂದಿಸಿದ್ದೆ ॥

Tuesday, August 13, 2013

ಅತಿಥಿ

ಅಪರೂಪಕ್ಕೊಮ್ಮೆ
ಅತಿಥಿಯಾಗಿ,
ಮನೆಗೆ ಬಂದರೆ
ಎಲ್ಲರಿಗೂ ಸಂತಸ;
ಬಂದವರಿಗೂ ಗೌರವಾದರ
ಮನೆ ಮಡದಿ ಮಕ್ಕಳ ಬಿಟ್ಟು
ಹೀಗೆ ವಾರಗಟ್ಟಲೆ
ನಿಮ್ಮಣ್ಣ ಬಂದು,
ಕುಳಿತರೆ ಹೇಗೆ
ಇದೇನು ಹಳ್ಳಿಯೆ
ಪೇಟೆ ಸ್ವಾಮಿ ಪೇಟೆ
ಪ್ರತಿ ವಸ್ತುವಿಗೂ
ದುಪ್ಪಟು ಬೆಲೆತೆತ್ತು ತರಬೇಕು
ನನಗೂ ಬೇಯಿಸಿ ಸಾಕಾಯ್ತು ॥

ನೀ ಸಾಕು ಮಾಡೇ ಮಾರಾಯ್ತಿ,
ನಿನ್ನ ಅರ್ಥವಿಲ್ಲದ ಗೊಣಗಾಟ
ನಿನ್ನ ಅಪ್ಪಾ ಅಮ್ಮ ಬಂದರೆ;
ತಿಂಗಳು ಗಟ್ಟಲೆ ಇದ್ದರೂ
ವಟಗುಟ್ಟದವಳು,
ನಮ್ಮವರು ಬಂದರೆ
ನಿನಗೆಲ್ಲಿಲ್ಲದ ಅಸಡ್ಡೆಯೆ ;
ಅವರಿಗೆ ರಾಜೋಪಚಾರ
ನಮ್ಮವರಿಗೆ ಬಾಯ್ಮಾತಿನ
ಉಪಚಾರ, ತಿರಸ್ಕಾರ
ಇದೇ ಮೊದಲು
ಇಂದೇ ಕೊನೆಯಾಗ ಬೇಕು;
ನಿನ್ನೆಲ್ಲಾ ತಾರತಮ್ಯದ
ತರಲೆ ಹುಚ್ಚಾಟಗಳು,
ಕೊನೆಗೊಳ್ಳದಿದ್ದರೆ
ನಾ ನಿನ್ನನ್ನೇ ಕಡೆಗಾಣಿಸುವೆ
ನಿನಗಿರಲಿ  ಮೈಮೇಲೆ ಎಚ್ಚರ

Monday, August 12, 2013

ಹಿಂಗೇಯ್ಯಾ ಈ ನನ್ ಗಂಡ ಸಾಮಿ ?

ಇವನ್ ಮಕ
ನಾಯಿ ನೆಕ್ಕಾ,
ನನ್ ಕಷ್ಟ ನಂಗೆ
ಅಂತಂದ್ರೆ
ಇವನ್ಗೆ ಸರಸ;
ಮೈ ಪರಪರ
ಕೆರಕೊಳ್ಳಕ್ಕೂ
ನನ್ ಕೈಗೆ
ಪುರುಸೊತ್ತಿಲ್ಲ
ಅಂತಾದ್ರಾಗೆ
ಈ ಬಿಕನಾಸಿ
ಕುಡುಕ ನನ್ ಗಂಡಂಗೆ
ಹಾಸಿಗೇಗ್ ಬಾರೆ ಅಮ್ಮೀ
ಸರಸ ಆಡುಮಾ.....
ಅಂತಾನಲ್ಲಪ್ಪೋ... ಶಿವನೇ...!!!!
ಕೈ ಬುಟ್ ಬುಡು
ಏಯ್ ಮೂದೇವಿ,
ಸಂದಾಕಿರಲ್ಲ;
ಮಕ್ಕಳು ನೋಡ್ತಾವೆ;
ವತ್ತಾರೆಯಿಂದ ದುಡ್ದು
ಸ್ಯಾನೆ ಸುಸ್ತಾಗಿವ್ನಿ
ಸುಮ್ಕೆ ಬಿದ್ಕ,
ನೀ ಹಿಂಗೆಲ್ಲಾ ಮಾಡಿದ್ರೆ
ಪೊರಕೆ ಕಿತ್ತೋತದೆ
ಬಿಡ್ಲಿಲ್ಲಾಂದ್ರೆ;
ಗುಂಡಕಲ್ಲೆತ್ತಿ ಸಾಯಿಸ್ತೀನಿ
ಉಸಾರು ಅಂತೇಳಿ
ಹೆದರಿಸಿದೆ ಅನ್ನೀ.......!!!!

ಅನುರಾಗದ ಅಂತಃಪುರ

ಇಂದೇಕೋ ನೀ
ನನ್ನೊಳಗೊಳಗೆ
ಮತ್ತೇ ಮತ್ತೇ
ನಿನ್ನಾ ನೆನಪೂ,
ಬಂದೆನ್ನ ಕಾಡುವುದು
ಈ ಹೃದಯದ ಬಿಸಿಗೆ ;
ನಿನ್ನಾ ಪ್ರೀತಿ, ಕರಗದೇ ಇನ್ನೂ
ನನ್ನಾ ಸೇರದೆ ಹೋದರೆ ನೀನು
ನಾ ಹೇಗೆ, ಈ ನೋವನು
ಮರೆಯಲಿ ನೀ ಹೇಳೂ
ನಿನ್ನೆಲ್ಲಾ ಪ್ರೀತಿಯ
ಸ್ಪೂರ್ತಿಗೆ ನಾನೂ ,
ಗರಿಕೆದರೀ ಕುಣಿವಾ
ಗಿರಿಯಾ ನವಿಲೂ
ನನ್ನೆಲ್ಲಾ ಕನಸಿನ
ಅಂತಃಪುರದರಮನೆಗೆ
ನೀ ..... ರಾಣಿ ಜೇನು....!!!!!

Sunday, August 11, 2013

ಭಯವೇಕೆ ನಾ ಅಳಲೇಕೆ ?

ಅಳದಿರು ಕಂದಾ
ನೀನೆಂದೂ ಅಳದಿರು,
ಗುಮ್ಮಾ ಬರುವಾ
ನಿನ್ನೇ ಹಿಡಿದೇ ಬಿಡುವ
ನಗುತಿರು ಎಂದೆಂದು ;
ಚುಕ್ಕಿ ಚಂದ್ರನ
ಚಕ್ಕುಲಿ ಉಂಡೆ
ತಂದು ಕೊಡುವೆ,
ಅಪ್ಪನಿಗೆ ಹೇಳಿ
ಆನೆಯ ಮರಿಯ
ಗಿಳಿಯ ಮರಿಯ,
ನವಿಲಿನ ಗರಿಯ
ಬಣ್ಣದ ತಗಡಿನ
ತುತ್ತೂರಿಯ;
ನಿನಗೆ ತರಿಸಿ
ನಾ ಕೊಡುವೆ
ಅಳದಿರು ಕಂದ
ನೀ ಅಳದಿರು ॥

ಇವೆಲ್ಲಾ
ಈ ಕಾಲಕೆ ,
ಹಳೇದಾಯ್ತಮ್ಮಾ....
ಇವೆಲ್ಲ ಈಗಲೆ
ನನಗೇ ಬೇಡಮ್ಮಾ.....
ಮೊಬೈಲು ನೀ ಕೊಡಿಸು
ಕಂಪ್ಯೂಟರ್ ಕೊಡಿಸು,
ಕೋಕ ಕೋಲ ಕುಡಿಸು
ಫಿಜ್ಜಾ ಬರ್ಗರ್ ತಿನಿಸು
ಆ ಗುಮ್ಮನ ನೀ ಕರೆಸು
ಭಯವೇ ಇಲ್ಲವೆ ಇಲ್ಲಾ
ಓ ನನ್ನಾ ಮುದ್ದಿನ ಅಮ್ಮಾ ॥

ರಾಶಿಫಲ

ನನ್ನವಳದು ನನ್ನದು
ಒಂದೇ ರಾಶಿ ,
ಫಲ ಸಮಸಮವೆಂದು
ನನಗೆ ಖುಷಿಯೋ ಖುಷಿ
ನಾಮವೊಂದೆ,
ನಕ್ಷತ್ರ ಬೇರೆಬೇರೆ
ಗಾಂಪ ಗಾಂಪಿ;
ಇದೂ ಒಂದು ಹೆಸರೇ
ಎಂದು ನಗದಿರ ಬೇಡಿ,
ಮುಂದಿದೆ ನೀವೇ ನೋಡಿ ॥

ವಾರಭವಿಷ್ಯಕೆ ನಾ
ಪರದಾಡ ಬೇಕಿಲ್ಲ,
ನನ್ನವಳ ಮುಖದಾಳ
ತಿಳಿದರೆ ಸಾಕಲ್ಲ;
ಅವಳೇ ನನ್ನ ಪ್ರಶ್ನಿಸಿ
ಅವಳೇ ಉತ್ತರಿಸಿ,
ರ್ರೀ.... ನಿಮ್ಮದು
ಹೀಗೆ, ಹಾಗೆಯೇ
ವಾರಾಂತ್ಯದೊಳಗೆ
ಬಂಪರ್ ಲಾಟರಿ;
ಸಾಹಿತಿಯ ಪ್ರಿಯೆಗೆ
ಸನ್ಮಾನ ಭರ್ಜರಿ ॥

ಅಯ್ಯೋ.....
ಉಬ್ಬಸ ನಿಮಗೆ,
ಅಲ್ಲಾ ನಮಗೆ
ವಿದೇಶ ಪ್ರವಾಸ,
ಲಕ್ಷ್ಮೀಕೃಪಾ ಕಟಾಕ್ಷ;
ಮತ್ತಷ್ಟು ಇನ್ನಷ್ಟು
ಸುದ್ದಿಯ ಗುದ್ಧಿ
ತಲೆ ತುಂಬುವಳು
ಸ್ಪೂರ್ತಿಯ ಸಿದ್ಧಿ ॥

ಆದರೂ...
ಒಮ್ಮೊಮ್ಮೆ ,
ಅಳುಕದೆ ಮನದನ್ನೆ
ಮೂದಲಿಸುವಳು
ಎನಗೆ,
ಹೆದರದು ಕಾಗೆ !
ನಿಮಗೆ ?
ಕಾರಣವಿಷ್ಟೆ;
ನನ್ನ ಬಣ್ಣ ಕಡು ಕಪ್ಪು
ಗ್ರಹಚಾರ
ಅವಳ
ಕೈಹಿಡಿದಿದ್ದು ನನ್ನ ತಪ್ಪು ॥

Saturday, August 10, 2013

ಅನ್ಯೋನ್ಯ ದಾಂಪತ್ಯ

ಹೆಂಡತಿ
ಹೇಳಿದ್ದಕ್ಕೆಲ್ಲಾ
ಓಲೈಸಿ,
ಕೇಳಿದ್ದೆಲ್ಲವ
ಪೂರೈಸಿ,
ನಗುನಗುತ
ಹೌದು
ಹೌದು
ಎಂದರೆ
ಅನ್ಯೋನ್ಯ ದಾಂಪತ್ಯ

ಸಿಡುಕಿ
ಸಿಟ್ಟಾದರೆ,
ಮಿಡುಕಿ
ವಟಗುಟ್ಟುವಳು
ದಿನವಿಡಿ,
ಕೆಡವಿ
ಉಪವಾಸ;
ತಪ್ಪಿಗೆ
ಅನುಭವಿಸ ಬೇಕು
ರಾತ್ರಿಯಿಡಿ
ಒದ್ದಾಡಿ ವನವಾಸ ॥

ನಾ ಎಂಥಾ ಸುಖಿ !

ನಾ ನಿತ್ಯ ಪರಮ ಸುಖಿ,
ನೀನಿದ್ದರೆ ಪ್ರಾಣ ಸಖೀ
ನೀ ಉಣ ಬಡಿಸಿದರೆ;
ನಿನ್ನ ಅದರಗಳ ಸವಿ
ಸಿಹಿ ನಗೆಯ ಬೆರಸಿ
ಮೈಮನ ಎಂದೂ ಬೆಚ್ಚಗೆ
ಬದುಕು ಕುಂದದು ಹುಚ್ಚಿಗೆ ॥

ಎನಗೆ ಬೇಕೆನಿಸುವುದಿಲ್ಲ ನಿದ್ದೆ
ಬಿಸಿಬಿಸಿಯ ಬಸ್ಸಾರಿನ ಮುದ್ದೆ,
ಸಾಕೆನಿಸದು ಮುತ್ತಿನ ಮುದ್ರೆ
ಮುತ್ತಿಗೂ ಆ ಮದಿರೆಗೂ
ಅಷ್ಟೇನೂ ವ್ಯತ್ಯಾಸ ಇರದು;
ಒಂದು ಒಳ ಸೇರಿದೊಡನೆ ಮತ್ತು
ಇನ್ನೊಂದು, ನೀನಿದ್ದರೆ ಸದಾ ಮತ್ತು ॥

ಜಯದ ಮಂತ್ರ

ಈ ಜೀವನದಿ
ನೀ ಏನನ್ನೂ,
ಸಾಧಿಸಲಾಗದೆ
ನಿನ್ನಷ್ಟಕ್ಕೆ
ನೀ ಸತ್ತರೆ;
ಅದು ಹೇಡಿತನ
ಆತ್ಮಹತ್ಯೆ,
ಕಷ್ಟಗಳನು
ಎದುರಿಸಿ
ಎದೆಗುಂದದೆ
ಧೈರ್ಯದಿಂ
ನೀ ಮುನ್ನುಗ್ಗಿ ;
ನಡೆದರೆ
ನಿಂತರೆ
ಜಯದ ಮಾಲೆ
ನಿನ್ನ ಕೊರಳಿಗೆ ॥

ಸಾಲದ ಶೂಲ

ಮನೆಯ
ಬಾಗಿಲಿಗೆ
ಬಂದು,
ಸಾಲವನು
ಕೊಡುವಾಗ
ನೀ ಹಿರಿಹಿರಿ
ಹಿಗ್ಗ ಬೇಡ;
ಕಾಲ ಕಾಲಕೆ
ಸಾಲದ ಕಂತು,
ಮರುಪಾವತಿಸದೆ
ಮರೆತು ತಡವಾದರೆ
ಕಷ್ಟದಲಿ ಕಟ್ಟಲಾಗದೆ
ನಿಂತು,
ಕೊಂಡ ವಸ್ತುಗಳೆಲ್ಲವನು
ಕ್ಷಣ ಮಾತ್ರದಿಂ ;
ಮರು ಮಾತಾಡದೆ
ಕೊಂಡಯ್ಯುವರು ॥

ಕಟ್ಟಿದ ಹಣಕೆ
ಎಳ್ಳು ನೀರು ಬಿಟ್ಟು
ಚಟ್ಟವ ಕಟ್ಟಿ,
ತಿರುಪತಿಯ
ಮೂರು ನಾಮವ ;
ಹಣೆಯ ತುಂಬಾ
ಹಾಕುವರವರು
ಎದೆ ತಟ್ಟಿ ನಿಂತರೆ
ರಣ ಹದ್ದುಗಳಂತೆ
ಗೂಂಡಾಗಳು
ಮೇಲೆರಗುವರು ॥

ಕಾದಿರುವೇ ನಿನಗಾಗಿ

ಒಂದಿರುಳು ನಲ್ಲಾ,
ನಿನಗಾಗಿ ಕಾದೆನಲ್ಲ
ಈಗ ಬರುವೆ, ಆಗ ಬರುವೆ
ಬಿಸಿ ಬೆಲ್ಲ, ರಸಗುಲ್ಲ
ಮಲ್ಲಿಗೆಯ ಮೊಗ್ಗ;
ನೀ ತರುವೆ ಎಂದೆಲ್ಲಾ
ಕಂಗಳಲೇ ನಾ ಕಾತರುಳಾಗಿ
ಕದವಿಕ್ಕದೇ ಎದೆಯುಕ್ಕಿ ಬಂದ
ಅಳು ಅಲೆಗೆ ಅಳುಕದೆ,
ಎದೆ ಚಳಿಗೆ ಮಿಡುಕದೆ
ಕ್ರಿಷ್ಣನಿಗೆ ರಾಧೆಯಂತೆ
ರಾಮನಿಗೆ ಸೀತೆಯಂತೆ
ಈ ಗಿರಿಜೆಗಾಗಿ..... ಓಡೋಡಿ
ನೀ ಬರುವೆಯಲ್ಲಾ....!

Thursday, August 8, 2013

ಗೀತಾ ಆಂಟಿ

ಈ ಕಾಲಗರ್ಭದೊಳಗೆ
ಗತಿಸಿ ಹೋಗುವ ಮುನ್ನ
ಬಾಳು ನಾವಂದು ಕೊಂಡಂತೆ
ಎಡವದೇ ನಡೆದರೆಷ್ಟು ಚೆನ್ನ
ನಾನೇನು ಬಯಸಿ ಪಡೆದದ್ದಲ್ಲ
ಈ ಬದುಕ, ಈ ಕುಲಗೆಟ್ಟ ಕಸುಬ ॥

ಈಗೆಲ್ಲಾ ಹೇಳುವವರೆ
ತಲೆಹಿಡುಕಿ, ಕುಲಟೆ
ಮೋಸಗಾತಿ ಎಂದೆಲ್ಲಾ
ಹಣ್ಣ ಚಪ್ಪರಿಸುವಾಗ
ಕಣ್ಣು ಕಂಡಿರಲ್ಲವೇನೋ;
ಹದಿ ಹರೆಯದರಿಂಡಿದು
ಕಾಡು ಬಾ ಬಾ ಎನ್ನುವವರಿಗೂ
ಮುಪ್ಪಿಟ್ಟರೂ ಕದಪು ಕಪ್ಪಿಟ್ಟರೂ
ತೀಟೆ ತೀರಿಸಿ ಕೊಳ್ಳಲು ನಾ ಬೇಕಿತ್ತು ॥

ನನ್ನವರು, ತನ್ನವರ ತೊರೆದು
ಪ್ರೀತಿಸಿದನ ಜೊತೆ ಬಂದವಳು
ನಾ ಆಗ ತುಂಬು ಗರ್ಭಿಣಿ,
ಗಂಡನ ಅಕಾಲಿಕ ಮರಣ
ಮೊದಮೊದಲು ಅಧೀರಳನ್ನಾಗಿಸಿತು
ಬಾಳಿನ ಬಂಡಿಯ ದೂಡಲು
ಮೈಮಾರಿ ಕೊಳ್ಳುವವಳಿಗೆ ನೆರವಾಗಿದ್ದೇ
ಒಂದಷ್ಟು ದುಡ್ಡು ನಾ ನೋಡುವಂತಾಗಿದ್ದು
ನಾನೇನೂ ಮೈಮಾರಿ ಕೊಳ್ಳಬೇಕಿರಲಿಲ್ಲ
ಬಂದ ಗಿರಾಕಿಗಳಿಗೆ ಹೆಣ್ಣುಗಳ ಹೊಂದಿಸಿ
ನನ್ನ ಮನೆಯ ಶಯನಾ ಗೃಹವಾಗಿಸಿದ್ದೆ ॥


Wednesday, August 7, 2013

ದೇವದಾಸ್ ನಾನಲ್ಲ

ನೀನೊಮ್ಮೆ ಹೇಳಿಬಿಡು
ಹುಡುಗಿ ನೀನನಗೆ,
ನಿನಗಿಷ್ಟವಿಲ್ಲವೆಂದು
ಕಷ್ಟವಾದರೂ ಸರಿ;
ಆಸೆಗಳ ಅಳಿಸಿ
ಕನಸುಗಳ ಕೊಂದು,
ಮತ್ತೆ ನಿನ್ನತ್ತ ತಿರುಗಿಯೂ ನೋಡದೆ
ನಾ ಈ ಕತ್ತಲೊಳಗೆ ಕರಗಿ ಹೋಗುವೆ ॥

ಗೋಸುಂಬೆಯಂತೆ
ಘಳಿಗೆಗೊಮ್ಮೊಮ್ಮೆ
ನಾ ಬಣ್ಣ ಬದಲಿಸಲಾರೆ,
ಮತ್ತೊಬ್ಬಳ ತೆಕ್ಕೆಗೆ
ಈ ಜನ್ಮದಲಿ ಜಾರಲಾರೆ;
ಈ ಹುಚ್ಚು ಪ್ರೀತಿಯ
ಕಿಚ್ಚಿನಲಿ ನಾ ಎಂದೂ ಬೀಳಲಾರೆ ॥

ಒಂದಷ್ಟು ದಿನ ಹುಚ್ಚನಂತೆ
ಊರೂರ ಅಲೆದರೂ,
ನಿನ್ನ ನೆನಪುಗಳ
ಬುತ್ತಿಯ ಬಿಚ್ಚಿ,
ಒಂದೊಂದೇ ಕಿತ್ತೊಗೆದು;
ಮುಂದೊಂದು ದಿನ
ನಾ ಮರೆತ ಕೆಲಸಗಳ
ಜನ ಮೆಚ್ಚುವಂತೆ ಮಾಡಿ,
ನಾ ಪರರಿಗಾಗಿ ಬಾಳಬೇಕಿದೆ ॥

Friday, August 2, 2013

ನೀ ಯಾರಿಗದೆಯೋ ?

ಗಿಡವಾಗಿ, ಮರವಾಗಿ
ನೆರಳಾಗೊ ಹೆಮ್ಮರವಾಗದೆ
ನೀ ಯಾರಿಗಾದೆಯೋ ॥
ಗಿರಿ ತೊರೆಯ ಹರಿವ ನೀರಾಗಿ
ಹರಿಯ ಚರಣವ ತೊಳೆಯದೆ
ನೀ ಯಾರಿಗಾದೆಯೋ ॥
ಕಸ ತಿಂದರೂ ಹಾಲ್ರಸ ನೀಡೊ
ಹಸಿವ ನೀಗೊ ಹಸುವಾಗದೆ
ನೀ ಯಾರಿಗಾದೆಯೋ ॥
ನವ ಮಾಸಗಳು ಹೊತ್ತೆತ್ತು
ಹೆಣ್ಣಾಗಿ ಮಮತೆಯ ತಾಯಾಗದೆ
ನೀ ಯಾರಿಗಾದೆಯೋ ॥
ಮಂದ ಮಾರುತದಿ ಹೊತ್ತು ತಂದ
ಕುಸುಮಗಳ ಸುಗಂಧವಾಗದೆ
ನೀ ಯಾರಿಗಾದೆಯೋ ॥
ಜೀವ ಸಂಕುಲಕೆ ನವ ಚೈತನ್ಯವ
ಬಿಸಿ ಬಸಿರ ನೀಡೊ ರವಿಯಾಗದೆ
ನೀ ಯಾರಿಗಾದೆಯೋ ॥

Thursday, August 1, 2013

ಹೊಸ ರುಚಿ

ತಿಂಡಿ ರೆಡೀ.....
ಬನ್ನಿ ಬನ್ನೀ......
ಎಲ್ರೂ ಬೇಗ್ ಬನ್ನಿ
ನನ್ನವಳ ಮಾತಿಗೆ,
ಎಚ್ಚೆತ್ತು ಡೈನಿಂಗ್ ಟೇಬಲ್ಗೆ
ಮಕ್ಕಳ ಸಮೇತ ಹಾಜರಾದೆ ॥

ಹೊಟ್ಟೆ ಆಗಲೇ ಚುರುಗುಟ್ಟುತ್ತಿತ್ತು
ಘಮಘಮ ವಾಸನೆ ಬರುವ ಬದುಲು
ಗ್ಯಾಸ್ ವಾಸನೆ ಬಂದಾಗ ಭಯವಾಗಿತ್ತು;
ಅನಿಲ ಸೋರಿಕೆಯೋ, ಅಥವಾ ?!! 


ನನ್ನವಳೇ ಬಿಸಿಬಿಸಿ ದೋಸೆ
ತುಪ್ಪದ ಜೊತೆ ಹಾಜರು,
ಏನೇ ಇದು ಕೆಟ್ಟವಾಸನೆ
ಈ ದೋಸೆಗೆ ಏನು ಹಾಕಿರುವೆ ?
ನಿನ್ನ ಹೊಸ ರುಚಿ, ಅಭಿರುಚಿಗೆ
ಭಾನುವಾರವೇ ಆಗ ಬೇಕಿತ್ತೆ;
ಈರುಳ್ಳಿ ದೋಸೆ, ನೀರ್ ದೋಸೆ
ಮಸಾಲೆ, ಖಾಲಿ ದೋಸೆ ತಿಂದಿರುವೆ
ಇದ್ಯಾವುದೇ ಮೂಲಂಗಿ ದೋಸೆ !!!! 


ನಿನ್ನ ಅಡುಗೆಯ ಕರಾಮತ್ತಿಗೆ
ನಾವೇ ಬಲಿ ಪಶುಗಳಾಗಬೇಕ್ಕಿತ್ತೆ ?
ಹೊಸ ರುಚಿಯೋ, ಪರಿಕ್ಷೆಯೋ
ಮೂಲವ್ಯಾಧಿಗೆ ರಾಮಬಾಣವೆ ?
ತಿನ್ನಲಾಗದೆ ತಿಂದಿದ್ದೆವೆನ್ನಿ ॥

ರಮಾ ರಾಮನಾದ

ಸೈಕಲ್ನಿಂದಿಳಿದ
ನಮ್ಮಿಬ್ಬರ ನೋಡಿ
ಕಣ್ ಕಣ್ ಬಿಟ್ಟು ಎಲ್ಲರೂ
ಮುಸಿ ಮುಸಿ ನಗುವವರೇ,
ನನಗೋ ಒಮ್ಮಿಂದೊಮ್ಮೆ
ಎಲ್ಲರ ಬೈಯ್ಯುವಷ್ಟು ಸಿಟ್ಟು;
ಏಯ್ ನಮ್ ಮುಖದಲ್ಲೇನ್
ಕೋತಿ ಗೀತಿ ಕುಣೀತಿದೆ ಏನ್ರೇ
ಬೇವರ್ಸಿ ಮುಂಡೇವೆ
ಆಗ್ಬಾರ್ದು, ಬರಬಾರ್ದು
ಏನಾಗಿದೇಂತ ನಗತ್ತಿದ್ದೀರ;
ಕಚಡಾ ಕಂತ್ರಿ ನಾಯಿಗಳ
ಏನೂಂತ ಈಗಲೇ ಹೇಳಿಲ್ಲಾಂದ್ರೆ
ಒಬ್ಬಬ್ಬರ್ನೂ ಒದೀತೀನಿ ನೋಡಿ ॥

ಲೇಯ್ ಬಾಯ್ಬಡ್ಕೀ ರಮಾ,
ನಿಮಗಷ್ಟೂ ಗೊತ್ತಾಗಿಲ್ವೇನ್ರೆ
ಮೈ ನೆರೆದಿದ್ದೀರಿ ಅಂತ;
ಬಿಳೀ ಲಂಗಕ್ಕಂಟಿದ್ದ
ರಕ್ತದ ಕಲೆಗಳ ತೋರಿಸಿ
ಬಿದ್ದು ಬಿದ್ದು ನಕ್ಕವಳ ಕಂಡು
ಏಯ್ ಕರೀ ಮುಸುಡೀ
ಆ ತರಹ ನನ್ಗೇನ್ ಆಗಿಲ್ವೇ ;
ಎಲ್ಲಾ ಆಗಿರೋದು ಇವ್ಳಿಗೆ
ಭಾಮಳ ಕಡೆ ತೋರಿಸಿದ್ದೆ ॥

ಅಯ್ಯೋ.. ಆ ಹುಡುಗರಿಗೆ 
ಗೊತ್ತಾದರೆ, ಬೇಡಪ್ಪಾ ಬೇಡ;
ಇಡೀ ಊರಿಗೆ ಟಾಂ ಟಾಂ
ಡಂಗೂರ ಹೊಡೆದಾರೆಂದು, ನಾಚಿ
ಭಾಮಾಳೊಟ್ಟಿಗೆ ಮನೆಗೆ ಬಂದು
ನನ್ನತ್ತೆಯ ಪ್ರಶ್ನಿಸಿದ್ದೆ, ಭಾಮಾಳೇ
ಮೈನೆರೆದರೆ ನಾ ಏಕಾಗಲಿಲ್ಲ ?  ॥

ಅತ್ತೆ ಹೇಳಿದ ನನ್ನ ಹುಟ್ಟಿನ
ರಹಸ್ಯವ ಕೇಳಿ ಹೀಗೂ ಉಂಟೇ
ನಾ ಹುಟ್ಟಿದಾಗ, ಹೆಣ್ಣೋ ಗಂಡೋ ಎಂದು
ಲಿಂಗ ಪತ್ತೆಯಾಗದಿದ್ದದ್ದು
ನನ್ನ ಹೆತ್ತವರಿಗೂ ಚಿಂತೆ
ಒಂದತ್ತು ವರ್ಷಗಳ ನಂತರ ಬನ್ನಿ
ಪರೀಕ್ಷಿಸುವ, ನಿರ್ಧರಿಸುವ
ಹುಡುಗಿಯೋ, ಹುಡುಗನೆಂದು
ಅಲ್ಲಿಯವರೆಗೂ ಹುಡುಗಿಯಾಗಿಯೇ ಇರಲಿ
ಡಾಕ್ಟರ್ ಸಲಹೆಯಂತೆ
ನಾ ಎಲ್ಲರ ಮುದ್ದಿನ ರಮಾಳಾಗಿದ್ದೆ 
ಶಸ್ತ್ರಚಿಕಿತ್ಸೆಯನಂತರ ರಾಮನಾದೆ ॥