Friday, December 26, 2014

ಬೇಡ ರ್ರೀ... ನನ್ನ, ನನ್ನವಳ ಫಜೀತಿ


ರ್ರೀ... ಎಲ್ಲಿದ್ದೀರಿ ?!  ಸರಿಯಾಗಿ ಕಿವಿ ಕೇಳ್ತಿದೆ ತಾನೆ ನಿಮ್ಗೆ ?!
ಛೆಛೆಛೇ ..!! ನೀವೋ...., ಆ ನಿಮ್ಮ ಡಬ್ಬಾ ಫೋನೋ...
ಯಾವಾಗ್ಲೂ ಬ್ಯುಸಿ ಅಥವಾ  ಔಟಾಫ್ ಆರ್ಡರ್
ಇತ್ತೀಚೆಗೆ ಅದು ಇದು ಹೇಳಿ, ಹೊಸಹೊಸ ಕತೆಗಳ ಕಟ್ಟಿ;
ಬರೀ ಬುರುಡೆ ಬಿಡುವುದೇ... ಆಯ್ತು ನಿಮ್ಮ ಜಾಯಮಾನ
ಯಾಕ್ರಿ ಬೇಕು ನಿಮಗೆ ? ಮನೆ, ಮಡದಿ, ಮಕ್ಕಳು ಸಂಸಾರ  ಎಲ್ರೂ ರೆಡಿಯಾಗಿರಿ ಮಧ್ಯಾಹ್ನ PVRಲ್ಲಿ PK ನೋಡ್ಕೊಂಡು ಶಾಪಿಂಗ್ ಮಾಡ್ಕೊಂಡು ಬರೋಣ ಅಂತ ಹೇಳಿ ಹೋದವರು
ಗಂಟೆ ಎರಡಾದ್ರೂ ಇನ್ನೂ ಪತ್ತೆಯೇ... ಇಲ್ಲ
ಈಗ ಬರ್ತಾರೆ ಸುಮ್ನಿರ್ರೊ ಅಂತ ಮಕ್ಕಳಿಗೆ ಸಮಾಧಾನಿಸಿ
ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾದಿದ್ದೇ ಬಂತು ನಮ್ಮ ಭಾಗ್ಯ
ಶ್ಶ್...!! ನೀವೇನೂ ಮಾತಾಡ್ಬೇಡಿ, ನನಗೆ ಬಂದಿರೊ ಕೋಪಕ್ಕೆ
ನಿಮ್ಮನ್ನ ಅಂದು ಹಾಡಿದರೇನು ಬಂತು ಪ್ರಯೋಜನ
ನನ್ನ ಕೈಗೆ ಸಿಗಬೇಕು ಆಗ ಇದೆ ನೋಡ್ರಿ ನಿಮಗೆ ಹಬ್ಬ
ಈಗಿಂದೀಗಲೇ ಮನೆಗೆ ಬೇಗ ಬಂದ್ರೆ ಸರಿ ಹೋಯ್ತು
ಇಲ್ಲಾಂದ್ರೆ ಇಂದು ನಿಮಗಿದೆ ತಕ್ಕ ಪೂ....ಜೆ !!
ಪೂಜೆ ಮಾಡ್ಲಿಲ್ಲಾಂದ್ರೆ  ನನ್ನ ಹೆಸರು ರುಕ್ಕೂನೇ... ಅಲ್ಲ

ಸಾರಿ ಸಾರಿ.... ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಕಣೆ ರುಕ್ಕೂ..
ಗೆಳೆಯನ ಕ್ರಿಸ್‌ಮಸ್ ಪಾರ್ಟಿಯ ಗಲಾಟೆಯಲ್ಲಿ
ನಾ ಹೇಳಿದ್ದು ಎಲ್ಲಾ ಮರೆತೇ ಹೋಗಿತ್ತು ನೋಡು
ಇನ್ನು ಅರ್ಧ ಗಂಟೇಲಿ ನಾ ಅಲ್ಲಿದ್ದರೆ ಸರಿ ತಾನೆ ನಿನಗೆ  
ಪ್ಲೀಸ್ ಪ್ಲೀಸ್ ಲೇಟಾದ ತಪ್ಪಿಗೆ ತಪ್ಪುಕಾಣಿಕೆಯಿದೆಯೇ
ಸರಿ ಸರಿ ಇದಕ್ಕೇನು ಕಮ್ಮಿಯಿಲ್ಲ ಬಿಡಿ ನಕ್ಕಿದ್ದಳು
ಇನ್ನೂ... ಲೇಟಾದರೆ ಇವಳಿಂದ ಉಳಿಗಾಲ ಉಂಟೇ ...??
ಉರಿದು ಮುಕ್ಕುವಳೆಂದು ಹೆದರಿ ಮನೆಗೆ ಬಂದರೆ
ತೆರೆದ ಬಾಗಿಲು ತೆರೆದಂತಿದೆ ಎಲ್ಲೆಲ್ಲೂ ನೀರವ ಮೌನ !!
ಛೆ ಛೆಛೆಛೇ!!!! ಏನೇ ಇದು ರುಕ್ಕೂ  ನಿನ್ನ ಅವತಾರ
ನಾ ಅವಳ ಮುಟ್ಟಿ ಮಾತಾಡಿಸಿದ್ದೇ.... ತಪ್ಪಾಯ್ತು ನೋಡಿ
ಕೆಂಡದಂತ ಕೆಂಪಾದ ಕಣ್ಣು, ಅಸ್ತವ್ಯಸ್ತವಾದ ತಲೆಗೂದಲು
ಅವಳು ನನ್ನ ನೋಡಿ ಹ್ಞೂಂಕರಿಸಿದ ರೀತಿಗೆ ಭಯಭೀತನಾಗಿ
ಕುಡಿದಿದ್ದ ನಶೆಯಿಳಿದು ಮಾತುಗಳು ಹೊರಬರದೆ ತಡವರಿಸಿದ್ದೆ;
ಏನೋ ....  ನನ್ನನ್ನೇ ಮುಟ್ಟುವಷ್ಟು ಧೈರ್ಯ ಬಂತೆ ?
ಬಾ... ರೋ.... ಬಾ ಬಾ.... ಗಹಗಹಿಸಿ ನಕ್ಕಿದ್ದು ಕಂಡು
ಪಿಶಾಚಿಯೋ, ಯಾವುದೋ ದೆವ್ವ ಇವಳ ಮೆಟ್ಟಿರಬೇಕು
ಮನೆಯಲ್ಲಾ ನನ್ನನ್ನೇ ಅಟ್ಟಾಡಿಸಿಕೊಂಡು ಓಡಾಡಿಸುವುದೇ?
ಆಂಜನೇಯ, ವೀರಭದ್ರರ ಅಷ್ಟೋತ್ತರಗಳ ಹೇಳಿದರೂ
ಭಯಪಡದ ಇದೆಲ್ಲೋ... ಗಟ್ಟಿಪಿಂಡದ ಭೂತವಿರಬೇಕು
ಲೆ ಲೇ...ರುಕ್ಕೂ ... ಬೇರೆ ಯಾರೂ ಅಲ್ಲವೆ ಅಲ್ಲ ನಾನೇ
ನಿನ್ನ ಕೈಹಿಡಿದ, ತಾಳಿ ಕಟ್ಟಿದ ಗಂಡ ಕಣೇ...
ನನ್ನನ್ನ ಬಿಟ್ಟು ಬಿಡೆ ಮಾರಾಯ್ತೀ  ನಿನ್ನ ದಮ್ಮಯ್ಯಾ ....
ನನ್ನ ಅರಚಾಟಕ್ಕೆ, ಕೂಗಾಟಕ್ಕೆ ಅಕ್ಕಪಕ್ಕದವರೆಲ್ಲಾ ಬಂದು
ನನ್ನವಳ ಬಿಗಿಯಾಗಿ ಹಿಡಿದರೂ
ಹೆ ಹೇ... ಗಂಡ ಅಂತೆ ಗಂಡ, ಇವನ್ಪಿಂಡ ನಿದ್ದೆಗೆ ಜಾರಿದವಳ  ಹಾಸಿಗೆಯಲ್ಲಿ ಮಲಗಿಸಲು ಹೊತ್ತೊಯ್ಯುವಾಗ ಕಾಲಿಗೆ ಸಿಕ್ಕ
ವೈನ್ ಬಾಟಲಿಯಿಂದ ಗೊತ್ತಾಗಿದ್ದು ಇವಳ ಹುಚ್ಚಾಟವೆಲ್ಲ  ...
ಶಿವಚೆನ್ನ ೨೬.೧೨.೧೪

Sunday, December 21, 2014

ನಮ್ಮ ಗೋಳು ಯಾರು ಕೇಳುವರು ...?

ತೆಂಗಿನ ನಾರು, ಬೇರು ಕೊಕ್ಕಲಿ ಹೆಕ್ಕಿ ತಂದು
ನಾ ಚಂದದ ಗೂಡು ಕಟ್ಟಿದರಲ್ಲವೆ
ನನ್ನದೂ... ಒಂದು ಸಂಸಾರ,
ಮರಿ ಗುಬ್ಬಿಗಳ ಪರಿವಾರ
ನಿಮ್ಮಂತೆ ನಾವಿಲ್ಲ ಬಿಡಿ
ನಾಗರೀಕತೆಯ ಅಮಲಿನಲಿ
ಹುಚ್ಚೆದ್ದು ಕುಣಿವ ನಿಮ್ಮೀ ಕನಸುಗಳಿಗೆ
ನಾವು ತಾನೆ ಬಲಿ !
ಹುಳ, ಹುಪ್ಪಟೆ ಕಾಳು, ಕಡ್ಡಿಗಳ
ಒಂದೊಂದೇ ಹೆಕ್ಕಿ ತಿಂದು ಬದುಕುವ
ರೈತ ಸ್ನೇಹಿಗಳು ನಾವು....
ಮರ ಗಿಡ, ಹಳ್ಳ ಕೊಳ್ಳ,
ಕೆರೆ ಕಟ್ಟೆಗಳ ಹೊಡೆದುರುಳಿಸಿ
ಮಣ್ಣನಂಬಿ ಬದುಕುವವರ ಒಕ್ಕಲೆಬ್ಬಿಸಿ,
ಭೂಗಳ್ಳರಾದಿರಿ
ಗಗನಚುಂಬಿ ಕಟ್ಟಡಗಳ ಕಟ್ಟಿ
ಕಾಂಕ್ರೇಟ್ ಕಾಡಾಗಿಸಿದಿರಿ
ಕಾರ್ಖಾನೆಗಳು ಉಗುಳುವ ಎಂಜಲಿಗೆ
ಭೂತಾಯಿಯೂ ಮೈಲಿಗೆಯಾಗಿ
ಅಂತರ್ಜಲ ಬಸಿದು ವಿಷವಾಗಿ
ನೀರಿಗೂ... ಆಹಾಹಾಕಾರ, ಗಾಳಿಗೂ ತಾತ್ಸಾರ
ನೀವೇ ಮುಂದೊಂದು ದಿನ ಬೇಸತ್ತು
ಮುಂದಿನ ಪೀಳಿಗೆಯ ಮಕ್ಕಳಿಗೆ
ಇದೇ ಗುಬ್ಬಚ್ಚಿ ಎಂದು ನನ್ನೀ... ಭಾವಚಿತ್ರವ ತೋರಿಸುವಿರಿ ಚಿತ್ರಕೃಪೆ : Balasubrahmanya Nimmolagobba Balu

Friday, December 19, 2014

" ನನ್ನವಳ ಎದೆಗಾರಿಕೆ "

ಮೊದಮೊದಲು ಕಣ್ಣಿಗೆ ಕಂಡರೆ ಸಾಕು
ಭಯಕೆ, ಬಾಯಿ ಬಾಯ್ಬಿಡುತ್ತಿದ್ದ ನನ್ನವಳು
ಇತ್ತೀಚೆಗಂತೂ ಮೀಸೆ ತಿರುಗಿಸಿ ನಿಂತರೂ
ಎದಿರು ಬಂದು ಅಡ್ಡಾಡಿದರೂ ಹೆದರಳು
ಕೈಗೆ ಸಿಗದೆ ನುಸುಳಿ ತಪ್ಪಿಸಿಕೊಳ್ಳದಿರಲೆಂದು,
ಕೂಗಾಡುವುದ ಅಕ್ಕಪಕ್ಕದವರು ಕೇಳಿಸಿ ಕೊಂಡರೆ
ಹೊರಗೆಲ್ಲಿ ನಿಲ್ಲಿಸಿ ಕೇಳುವರೆಂದು ಮುಂದಾಲೋಚಿಸಿ
ಮಗಳಿಗೆ ಹೇಳಿ, ಎಲ್ಲಾ ಕಿಟಕಿ ಬಾಗಿಲುಗಳ ಮುಚ್ಚಿಸಿ
ನಿನಗೆ ಇಂದು ಕಾದಿದೆ ಬಾರೋ ಮಾರಿಯ ಹಬ್ಬ
ಒಂದು ಕೈ ನೋಡಿಯೇ ಬಿಡುವ, ನಾನೋ ನೀನೋ
ಒಟ್ಟಿನಲ್ಲಿ ನಾನಿರಬೇಕು ಅಥವಾ ನೀನಿರಬೇಕು ಈ ಮನೆಯಲ್ಲಿ ; ನಿನ್ನದೋ ಇಲ್ಲಾ ನನ್ನದೋ ಪಾರುಪತ್ಯ ಎಲ್ಲರಿಗೂ ತಿಳಿಯಲಿ ಕೈಯಲ್ಲಿ ಪೊರಕೆ ಹಿಡಿದು ಹೂಂಕರಿಸಿ, ಝೇಂಕರಿಸಿ ರಣಚಂಡಿಯಂತೆ ಒಮ್ಮೆ ನಿಂತರೆ,
ಇದ ಕಂಡು ಅಳ್ಳೆದೆಯವನೂ ಕೂಡ ಗಡಗಡ ನಡುಗ ಬೇಕು !

ತಾಯಿ ಮಗಳಿಬ್ಬರೂ ಹತ್ತಾರು ಜಿರಳೆಗಳ ಬಡಿದು ವೀರಾವೇಶದಿಂದ ನನ್ನತ್ತ ನೋಡಿ ನಗೆ ಬೀರಿದ್ದ ಕಂಡು ನನ್ನೊಳಗೊಳಗೇ......... ಅಸಹಾಯಕ ನಿಟ್ಟುಸಿರು ;
ಹಾಳಾದ್ದು ಈ ಜಿರಳೆಗಳಿಂದಾಗಿಯೇ ನನ್ನವಳಿಗೆ ಇಷ್ಟೆಲ್ಲಾ ಎಲ್ಲಿಲ್ಲದ ಭಂಡ ಧೈರ್ಯ ಬಂದದ್ದು ಎಲ್ಲಾ ನನ್ನ ಗ್ರಹಚಾರ, ದುರದೃಷ್ಟ ನೋಡಿ ಇಂದು ಎಲ್ಲಾ ತಲೆಕೆಳಕಾಗಿ ಬುಡಮೇಲಾಗಿದೆ ಮೊದಲಾಗಿದ್ದರೆ ಹೆದರಿ ಓಡೋಡಿ ಬಂದು ನನ್ನೆದೆಗೆ ಒರಗಿ ಕಣ್ಮುಚ್ಚುತ್ತಿದ್ದ ನನ್ನವಳು ಇಂದು
ಜಿರಳೆಗಳ ಪಾಲಿಗೆ " ರಣಚಂಡಿ " !!!

Monday, December 15, 2014

" ಬೇಡ ಸ್ವಾಮಿ ನನ್ನ ಫಜೀತಿ " ೧೦೬


ರ್ರೀ....  ಸ್ವಲ್ಪ ಬೆಡ್ ರೂಮಿಗೆ ಬರ್ತೀರ ನೀವು
ನಿಮಗೆ ಏನೋ ಸರ್ಪೈಜ್ ಗಿಫ್ಟ್ ಕೊಡುವುದಿದೆ
ಮೋಹಕವಾಗಿ ನಕ್ಕವಳ ಕಂಡು ಒಂದು ಕ್ಷಣ ಖುಷಿಯಾಗಿ ಮರುಕ್ಷಣ ನನ್ನೊಳಗೆ ಎಂದಿಲ್ಲದ ಭಯದ ನಡುಕ ಶುರುವಾಗಿ
ಇಂದೆನಗೆ ಏನು ಕಾದಿದೆಯೋ ... ತಂದೆ ವೆಂಕಟರಮಣ
ಕಟುಕ ಕುರಿ ಕಡಿಯುವ ಮೊದಲು ಹೀಗೆಯೆ ಕುರಿಗೆ ಹುಲ್ಲು ಹಾಕುವುದು
ನಾ ಬಲಿಕ ಬಕರ ಆಗದಿದ್ದರಷ್ಟೇ.... ಸಾಕು !!
ಅಪ್ಪಿತಪ್ಪಿ ನಾ ಇವಳ ಏಕೆ, ಏನೆಂದು ಕೇಳಲಾದೀತೆ ?
ದಮ್ಮಯ್ಯಾ....ಅಂದರೂ ನನಗೆ ಹೇಳುವಳೆ ?
ತರ್ಕ ವಿತರ್ಕಗಳ ಹೋಯ್ದಾಟದಲಿ ಮುಳುಗಿದವನಿಗೆ
ನಿಮ್ಗೆ ಒಳ್ಳೆಯ ಮಾತಲ್ಲಿ ಹೇಳಿದ್ರೆ ನೀವೆಲ್ಲಿ ಕೇಳ್ತೀರಿ
ಕೊಡುವುದ ಕೊಟ್ಟರೆ ಆಗ ಹೇಳಿದಂತೆ ಕೇಳುವಿರಿ
ರ್ರೀ... ಎಷ್ಟು ಹೊತ್ತು ಬನ್ರೀ ಸುಮ್ಮನೆ ಬಿಲ್ಡಪ್ ಬೇರೆ
ಬ ಬ ಬಂದೆ ಕಣೇ....  ಮಕ್ಕಳ ಮುಂದೆಯೇ ನೀ ಹೀಗೆಲ್ಲಾ
ನನ್ನ ಮೇಲೆ ರೇಗಿ, ಕೂಗಾಡ ಬೇಡವೇ... ಮಾರಾಯ್ತಿ
ಪಪ್ಪಾ .... ಇಂದಿದೆ ನಿಮಗೆ ಹೋಗಿ ಹೋಗಿ... ಹಬ್ಬ;
ಅಮ್ಮನ ಕೈಯಲ್ಲಿ ಭರ್ಜರಿ ಬಹುಮಾನ ಹ್ಹಹ್ಹಹ್ಹಹಾ 
ಮೋದಲೇ... ನಾ ಹೆದರಿರುವಾಗ ಇವನು ಬೇರೆ
ನೋಡೇ... ನಿನ್ನ ಮಗ ಹೇಗೆ ಹಂಗಿಸಿ ನಗುತ್ತಿರುವ
ಮನೆಯವರೇ... ಹೀಗೆ ಇನ್ನು ಅಕ್ಕಪಕ್ಕದವರು ನನ್ನನ್ನ
ಆಡಿಕೊಂಡು ಊರ ತುಂಬ ಹೇಳಿಕೊಂಡು ನಗದಿರುವರೆ...??
ನೀ ಬ ಬ ಬಾಗಿಲು ಹಾಕಿದ್ದಾದರು ಏತಕ್ಕೆ....?!!
ನನ್ನಿಂದೇನೂ... ತಪ್ಪಾಗಿಲ್ಲವೆ, ನನ್ನ ನಂಬೇ ನೀನು
ಏನೋ....  ಪಕ್ಕದ ಮನೆಯ ಆ ಪಂಕಜಾಕ್ಷಿ
ಪೂಜೆಗೆ ಹೂ ಬೇಕೆಂದಳು ಒಂದಷ್ಟು ಕಿತ್ತು ಕೊಟ್ಟೆ
ಇಷ್ಟಕ್ಕೆ ನೀ ಹೀಗೆಲ್ಲ ನನ್ನ ಅನುಮಾನಿಸುವುದೆ..?
ಹಾಳಾದ್ದು ಬಾಯೆಲ್ಲ ಒಣಗಿ, ಮೈಯೆಲ್ಲಾ ಬೆವರು ಹರಿದು
ಇವಳ ಬತ್ತಳಿಕೆಯಲ್ಲಿ ಸೌಟು, ಲಟ್ಟಣಿಗೆ, ಚೆಂಬು, ಪೊರಕೆ
ಬರದಿದ್ದರೆ ನಿನಗೆ ಮುಡಿ ಕೊಡುವೆ ತಂದೆ ತಿಮ್ಮಪ್ಪಾ...
ಹೊಸ ಪ್ಯಾಂಟು ಶರ್ಟ್ ಕೈಗಿತ್ತು
ಹ್ಯಾಪಿ ಬರ್ತಡೆ ಟು ಯು ರ್ರೀ..... 
ಹ್ಯಾಪಿ ಬರ್ತಡೆ ಟು ಯೂ  ಎನ್ನಬೇಕೆ ?!
ಶಿವಚೆನ್ನ ೧೬.೧೨.೧೪

Sunday, December 14, 2014

ಬಾ ಬಾ ಮಗಳೇ....


ನನ್ನ ಮಗಳೆಂದರೆ
ಮನದಿ ಏನೋ ಹರುಷ
ನವ ಉಲ್ಲಾಸ ಉಕ್ಕಿ ಹರಿವುದು
ಈ ಎದೆಯೊಳಗೆ, ಮನೆಯೊಳಗೆ
ಮಮಕಾರದ ಮಿಡಿತ, ತುಡಿತ
ಕಣ್ಗಳಲಿ ಭರವಸೆಯ ಕೋಲ್ಮಿಂಚು
ನನ್ನದೇ ರಕ್ತ ಮಾಂಸಗಳ
ಹೊತ್ತ ಜೀವಂತ ಗೊಂಬೆ
ಅರೆರ್ರೇ.... ಬಿಟ್ಟ ಕಣ್ಗಳ ಬಿಟ್ಟಂತೆ
ನೀವು ಯಾರೂ ನೋಡದಿರಿ
ಕಾಕ ದೃಷ್ಟಿಯಾದೀತು
ನಳನಳಿಸುವ ಚಂದ್ರವದನ
ಶೀತಲ ಕಿರಣ ನಗೆಯಾಭರಣ
ಹೊಳೆವ ಬಣ್ಣದ ಲಂಗವ ತೊಟ್ಟು
ಗೆಜ್ಜೆ ಕಾಲ್ಗಳಲಿ ನೆರಿಗೆ ಚಿಮ್ಮಿಸುತ
ನಡೆದು ಬರುವ ಅವಳ ದಾರಿಗೆ
ಎಂದೂ ಯಾರೂ ಅಡ್ಡಡ್ಡ ಬರದಿರಿ 

Thursday, December 4, 2014

" ಕಾಮಹರಣ " ಮಾತ್ರೆಗಳು

ಇನ್ಮುಂದೆ ಮಹಿಳೆಯರು ಕಾಮುಕರಿಂದ ಆತಂಕ ಪಡಬೇಕಿಲ್ಲ, ದೌರ್ಜನ್ಯಗಳಿಗೆ ಎದೆಗುಂದಬೇಕಿಲ್ಲ, ಕಣ್ಣೀರು ಸುರಿಸಬೇಕಿಲ್ಲ. ಇಲ್ಲಿದೆ ಅಡ್ಡ ಪರಿಣಾಮಗಳಿಲ್ಲದೆ ಜೀವನೋತ್ಸಾಹ ತುಂಬುವ ಧೈರ್ಯದ ದಿವ್ಯೌಷಧಿ. ಮಹಿಳೆಯರಿಂದಲೇ ಮಹಿಳೆಯರಿಗೋಸ್ಕರ ಗಿಡಮೂಲಿಕೆಗಳಿಂದ ತಯಾರಿಸಿದ ಸಿದ್ದೌಷಧ " ಕಾಮಹರಣ ಗುಳಿಗೆ " ( capsules ) ಮಕ್ಕಳಿಂದಿಡಿದು, ಬಾಲಕೀಯರು, ಮದುವೆಯಾಗದ ಯುವತಿಯರು ಉಪಯೋಗಿಸುವ ಸರಳ ಮಾತ್ರಗಳು. ತಿಂಗಳಿಗೆ ಒಂದರಂತೆ ಬೆಳ್ಳಂಬೆಳಿಗ್ಗೆ ಒಂದು ಲೋಟ ಹಾಲಿನಲ್ಲಿ ಸೇವಿಸದರೆ, ಯಾವ ಕಾಮಾಂಧನೂ ಬಳಿ ಬರಲಾರ ಇದು ಅತಿಷಯೋಕ್ತಿಯೂ ಅಲ್ಲ, ಉತ್ಪ್ರೇಕ್ಷೆಯೂ ಅಲ್ಲ ಈಗಾಗಲೇ ನಮ್ಮ ಪ್ರಯೋಗಗಳಿಂದ ದೃಡಪಟ್ಟಿದೆ. ನಿಮ್ಮಲ್ಲಿನ ಅಂತಃಸತ್ವ ( Stamina ) ಹೆಚ್ಚುಮಾಡುವುದಲ್ಲದೆ ನಿಮ್ಮ ಉಗುರುಗಳೇ ಕಾಮುಕರಿಗೆ ಶಾಶ್ವತ ಷಂಡತನ ಉಂಟು ಮಾಡುವ ಬ್ರಹ್ಮಾಸ್ತ್ರವಾಗಿ ಪರಿಣಮಿಸುವುದು. ಕಾಮಹರಣ ಮಾತ್ರೆಗಳಿಗಾಗಿ ಕೂಡಲೇ ನಮ್ಮ ದೂರವಾಣಿಗೆ ಸಂಪರ್ಕಿಸಿ ಅಥವಾ ಈ ಕೆಳ ಕಂಡ ಕಂಪನಿಯ ಅಕೌಂಟಿಗೆ ಹಣ ಸಂದಾಯ ಮಾಡಿ ಮಾತ್ರೆಗಳ ಬಾಟಲಿಯ ಪಡೆಯಿರಿ. ಹನ್ನೆರಡು ಮಾತ್ರಗಳ ಬೆಲೆ ಕೇವಲ ನೂರು ರೂ ( ಅಂಚೆ ವೆಚ್ಚ ಸೇರಿ ).

Tuesday, December 2, 2014

ನೀ ಯಾರಿಗಾದೆಯೋ.... ಎಲೆಮಾನವ !!

ಗಿಡವಾಗಿ, ಮರವಾಗಿ
ನೆರಳಾಗೊ ಹೆಮ್ಮರವಾಗದೆ
ನೀ ಯಾರಿಗಾದೆಯೋ ॥
ಗಿರಿ ತೊರೆಯ ಹರಿವ ನೀರಾಗಿ
ಹರಿಯ ಚರಣವ ತೊಳೆಯದೆ
ನೀ ಯಾರಿಗಾದೆಯೋ ॥
ಕಸ ತಿಂದರೂ ಹಾಲ ನೀಡೊ
ಹಸಿವ ನೀಗೊ ಹಸುವಾಗದೆ
ನೀ ಯಾರಿಗಾದೆಯೋ ॥
ನವ ಮಾಸಗಳು ಹೊತ್ತೆತ್ತು
ಹೆಣ್ಣಾಗಿ ಮಮತೆಯ ತಾಯಾಗದೆ
ನೀ ಯಾರಿಗಾದೆಯೋ ॥
ಮಂದ ಮಾರುತದಿ ಹೊತ್ತು ತಂದ
ಕುಸುಮಗಳ ಸುಗಂಧವಾಗದೆ
ನೀ ಯಾರಿಗಾದೆಯೋ ॥
ಜೀವ ಸಂಕುಲಕೆ ನವ ಚೈತನ್ಯವ
ಬಿಸಿ ಬಸಿರ ನೀಡೊ ರವಿಯಾಗದೆ
ನೀ ಯಾರಿಗಾದೆಯೋ ॥

Sunday, November 30, 2014

ಎಂಥಹ ವಿಚಿತ್ರ ನೀವೇ... ನೋಡಿ !!

ಮೊದಲೆಲ್ಲ ನನ್ನವಳು ಇಲಿ, ಜಿರಳೆ
ಹಾವು, ಹಲ್ಲಿ, ಕಪ್ಪೆಯ ಕಂಡರೆ
ಭಯದಿಂದ ಹೆದರಿ, ಬೆದರಿ
ಬಾಯಿ ಬಾಯಿ ಬಿಡುತ್ತಿದ್ದವಳು
ಇತ್ತೀಚೆಗಂತು ಹೆದರುವುದಿಲ್ಲ
ನಾನೇ... ಇವಳಿಗೆ ಹೆದರಬೇಕಷ್ಟೆ
ರ್ರೀ .... ಸ್ವಲ್ಪ ಇಲ್ಲಿ ನೋಡಿ ?!!
ಇದು ಹೇಗಿದೆ ಅಂತ ಹೇಳಿ....??
ಈ ನನ್ನ ಕಿವಿಯ ಆಭರಣ !!
ಹಾವಿನ ಹೆಡೆಯ ಜಡೆ ಹೇಗಿದೆ ಎನ್ನುವುದೆ ? ನೀವುಗಳೆಲ್ಲಾ........ ಏನಂತೀರಿ .....?!!

Sunday, November 23, 2014

ಬೇಡ ಸ್ವಾಮಿ ನನ್ನ ಫಜೀತಿ 108

ರ್ರೀ... ಬೇಗ ಬಾಗಿಲು ತೆಗಿರಿ, ನಿಮಗಿದೆ ಮಾರಿಯ ಹಬ್ಬ!!
ನನ್ನ ಕೈಗೆ ರೆಡ್ ಹ್ಯಾಂಡ್ ಆಗಿ ಇಂದು ಇಬ್ಬರೂ ಸಿಕ್ಕಿ ಬಿದ್ರಿ
ಎಷ್ಟು ದಿನದಿಂದ ನಡೀತಿದೆ ಈ ನಿಮ್ಮ ಕಳ್ಳ ವ್ಯವಹಾರ
ಆ ಹಾ.. ನಾ ತವರಿಗೆ ಹೋಗಿದ್ದೇ... ತಡ ಶುರವಾಯ್ತೆ
ನಿಮ್ಗೆ ಲಂಗು ಲಗಾಮಿಲ್ಲ, ನಾಚಿಕೆ ಮೊದಲೇ ಇಲ್ಲ;
ಎಲ್ಲಿ ಒಳ ಬಂದ ಆ ಮಾಯಾಂಗನೆ, ನನ್ನ ಸವತಿ ?!
ಥೂ...!! ನಿಮ್ಮ ಜನ್ಮಕ್ಕೆ ಅಸಹ್ಯ ಅನ್ನಿಸಲಿಲ್ಲವೇ...??
ಹೋಗಿ ಹೋಗಿ ನಿಮ್ಗೆ ಬುದ್ಧಿ ಹೇಳಿದ್ರೆ ಏನ್ ಪ್ರಯೋಜನ
ನಾಯಿ ಬಾಲ ಎಂದಿದ್ರೂ ಡೊಂಕು ಡೊಂಕೆನೆ
ಎಲ್ಲಾ ಮೀಡಿಯಾದವರನ್ನ, ಸ್ತ್ರೀ ಸಂಘದವರನ್ನ ಮೇಲಾಗಿ ಅಕ್ಕಪಕ್ಕದವರನ್ನ ಕರೆದು, ಛೀ... ಥೂ.. ಅಂತ ಉಗಿದು
ಕತ್ತೆ ಮೇಲೆ ಕೂರಿಸಿ ಮೆರವಣಿಗೆ ನಾ ಮಾಡಿಸಲಿಲ್ಲಾಂದ್ರೆ
ನನ್ನ ಹೆಸರು ' ಸತ್ಯಭಾಮನೇ '.... ಅಲ್ಲ, ಕರೀರ್ರೀ ಅವಳನ್ನ ಪೊರಕೆ ಪೊರಕೆ ಕಿತ್ತು ಹೋಗೊ ವರೆಗೂ ಬಾರಿಸ್ತೀನಿ....
ಲೆ ಲೇ... ಭಾಮ, ನಿನ್ನ ದಮ್ಮಯ್ಯಾ ಅಂತೀನಿ ಕಣೇ
ಯಾವ ಹೆಣ್ಣೂ ಇಲ್ವೆ, ಬೇಕಾದ್ರೆ ನೀನೆ ಎಲ್ಲಾ ಕಡೆ ನೋಡೆ
ನಾ ಆ ತರಹದ ಮನುಷ್ಯನೇ... ನಿನ್ನಾಣೆಗೂ ಇಲ್ಲವೇ ಇಲ್ಲ ಪ್ಲೀಸ್ ಪ್ಲೀಸ್ ನನ್ನ ನಂಬೇ... ನಾ ಅಂತವ 'ನಲ್ಲ'
ಛೆ...!! ನಾಯಿ, ನರಿ ಪಶು ಪಕ್ಷಿಗಳಿಗಿಂತ ಕಡೆಯಾದ್ರಿ
ನನ್ನ ಗಂಡ ಸಾಕ್ಷಾತ್ ಶ್ರೀರಾಮಚಂದ್ರನ ಅಪರಾವತಾರ ನಾನೇ... ಸೀತೆ ಅಂತೆಲ್ಲಾ ಅಂದ್ಕೊಂಡಿದ್ದೆ
ನನ್ನಲ್ಲಿ ಏನು ಕಮ್ಮಿಯಾಗಿದೆ ಅಂತ ?
ಅವಳಲ್ಲಿ ಏನಿದೆಯಂತ ತಂದಿಟ್ಕೊಂಡಿದ್ದೀರಿ
ಈ ಯೌವನ, ಸೌಂದರ್ಯ, ಈ ನೀಳ ಕೇಶರಾಶಿ
ಎಲ್ಲಾ ... ಹಳೇದಾಯ್ತೆ ನಿಮ್ಗೆ ?!
ಮುದ್ದಾದ ಎರಡು ಮಕ್ಕಳ ಹೊತ್ತು ಹೆತ್ತು ಕೊಟ್ಟಿರುವೆ
ಅವುಗಳ ನೆನಪಾದ್ರು ಬರಲಿಲ್ವೆ ನಿಮ್ಗೆ ?
ಏನೋ ... ನಂಗೆ ಮೂಗಿನ ತುದಿಯಲ್ಲೇ ಮುಂಗೋಪ
ನಂದೇ.. ಮಾತು ನಡೆಯಬೇಕೆನ್ನೊ ಅಹಮ್ಮಿನ ಹಠ
ಇಷ್ಟಕ್ಕೆ ಕಟ್ಟಿಕೊಂಡವಳನ್ನ ಬಿಟ್ಟು,
ಯಾವೋಳ್ನೋ ಕರೆ ತಂದು ಹೀಗೆ ಇಟ್ಕೊಳ್ಳೋದೆ
ನೋಡಿ ನಿಜ ಹೇಳಿ ನಾನೆ ನನ್ನ ಕಣ್ಣಾರೆ ನೋಡಿರುವೆ ಯಾವುದಿದು ಈ ಬಿಚ್ಚಿರುವ ಸೀರೆ ? ಅವಳೆಲ್ಲಿ ?
ಅದು ಅದು ಹೇಳಲೋ.... ಬೇಡವೋ ಜಿಜ್ಞಾಸೆಯಲ್ಲಿರುವೆ ಹೇಳದಿದ್ದರೆ ನೀ ನಿಜವೆಂದುಕೊಳ್ಳುವೆ
ನೀ ಏನೋ .. ನನ್ನ ಜೊತೆ ಜಗಳವಾಡಿ ತವರಿಗೆ ಹೋದೆ
ನಮ್ಮ ಸಂಸಾರದ ಗುಟ್ಟು, ವ್ಯಾಧಿಯ ರಟ್ಟು
ಅಕ್ಕಪಕ್ಕದವರಿಗೆ ಗೊತ್ತಾಗದಿರಲಿ ಎಂದು
ನಿನ್ನ ಸೀರೆಯ ಹೊದ್ದು ಬೆಳ್ಳಂಬೆಳಿಗ್ಗೆ
ಅಂಗಳದ ಕಸ ಗುಡಿಸಿ ನೀರು ಎರಚಿ
ನಾನೇ... ರಂಗೋಲಿಯ ಬಿಡುತ್ತಿದ್ದೆ
ಇದೇ ನೋಡು ನನಗೆ ನಿನಗೆ ಆದ " ಫಜೀತಿ "

Thursday, November 20, 2014

ಬೇಡ ಸ್ವಾಮಿ ನನ್ನ ಫಜೀತಿ

ಅಬ್ಬಬ್ಬಾ....!! ಏನ್ ಸೂಪರ್ ಐಡಿಯ ರ್ರೀ ನಿಮ್ದು
ಅಲ್ಲಾ... ನೈತಿಕ ಪೊಲೀಸ್ ಗಿರಿ ಮಾಡೋರಿಗೆ ಗುದ್ದು ನಿಮ್ಮಂತೋರ ಸಂಖ್ಯೆ ಮನೆಮನೆಗೂ ಹೆಚ್ಚಾಗ್ಬೇಕು ನೋಡಿ ಆಗ್ಲೇ... ನಮ್ಮ ಸಮಾಜ, ಸಂಸ್ಕೃತಿ ಪ್ರಜ್ವಲಿಸೋದು
ಕದ್ದು ಮುಚ್ಚಿ ಪ್ರೀತ್ಸೋರಿಗೆ ನಿಜವಾದ ನೈತಿಕ ಬೆಂಬಲ
ಅಹ್ ಹಾ..!! ನನ್ಕೈಲಿ ಈಗ್ಲೇ ತಡಕೊಳ್ಳಕ್ಕಾಗ್ತಿಲ್ಲ
ಈ ಚುಮು ಚುಮು ಚಳಿಗೆ, ಅದಿರೋ ತುಟಿಗಳಿಗೆ
ಅದು ಈ ವೀಕೆಂಡಲ್ಲಿ ಒಬ್ಬರಿಗೊಬ್ಬರು ಕೊಡ್ತಿದ್ದರೆ ಮುತ್ತು....!! ಸ್ವಲ್ಪ ಬಂದೆ ತಾಳಿ, ಕಣ್ಮುಚ್ಕೊಂಡು ಹಾಗೇ ಕೂತಿರಿ
ನನ್ನ ಅದರಗಳಿಗೆ ಸಿಹಿ ಜೇನ ಸವರಿ ಬರುವೆ...
ಲೆ ಪೆದ್ದೀ!! ಚೀಫ್ ಗೆಸ್ಟು ಯಾರು ಅಂತ ಗೊತ್ತೇನೆ ನಿನಗೆ?! ನಾನು ಮತ್ತೇ... ಚಿತ್ರನಟಿ ಆ ವ್ಯಂಜನ ಗಾಂಧಿ ಕಾಣೆ ತಗೊಳ್ರೀ.... Kiss of Love
ನಿಮ್ಮ ಜೀವನದಲ್ಲಿ ಎಂದೂ ಇದ ಮರೀಬಾರ್ದು ಅಹ್ ಅಹ್ ಹಾ.... ಅಯ್ಯಯ್ಯೋ....!! ಮುತ್ತು ಕೊಡ್ತೀನಿ ಅಂತ ಹೇಳಿ ಮೊಗಚೊ ಕೈ ಬಿಸಿ ಮಾಡಿ ನನ್ನ ಮೂತಿಯಲ್ಲ ಸುಟ್ಟಯಲ್ಲೇ...!! ನಾ ಹೇಗೆ ಚೀಫ್ ಗೆಸ್ಟಾಗಿ ಹೋಗಲಿ ಪಾಪೀ... ..?!

Tuesday, November 18, 2014

' ಬೇಡ ಸ್ವಾಮಿ ನಮ್ಮ ಫಜೀತಿ '

ಹೋದವರು ಮತ್ತೇಕೆ ವಾಪಸ್ಸು ಬಂದರು
ಎಲ್ಲೋ... ನಮಗೆಲ್ಲ ಥ್ಯಾಂಕ್ಸ್ ಹೇಳಲಿರಬೇಕು
ಖುಷಿಗೆ ಎಲ್ಲರ ಮುಖದಲ್ಲೂ ನಗೆಯ ಮಿಂಚು
ಗಾಡಿಯ ಸ್ಟ್ಯಾಂಡ್ ಹಾಕಿ
ಹೌ ಡೇರ್ ಯು ಬ್ಲಡಿ ಈಡಿಯಟ್ಸ್, ರೋಗ್ಸ್
ಮಾನ, ಮರ್ಯಾದೆ ಇದೆಯೇನ್ರೋ... ನಿಮಗೆಲ್ಲಾ
ಅಕ್ಕ ತಂಗಿಯರು ಯಾರು ಇಲ್ಲಾಂತ ಕಾಣುತ್ತೆ ಸೂ... ಮಕ್ಕಳ್ರ ಹೆಣ್ಮಕ್ಕಳೆಂದರೆ ಜೊಲ್ಲು ಸುರಿಸ್ತೀರ ಬೇವರ್ಸಿಗಳ
ಒದ್ದು ಎತ್ತಾಕ್ಕೊಂಡ್ ಹೋಗಿ ಸ್ಟೇಷನ್ಲ್ಲಿ ಚೆನ್ನಾಗಿ ರುಬ್ಬಿ
ಲಾಠಿ ತೂರ್ಸಿ, ಏರೊಪ್ಲೇನ್ ಹತ್ತಿಸಿ, ಒಂದೈದು ವರ್ಷ
ರೇಪ್ ಅಟೆಮೆಂಟು ಕೇಸಲ್ಲಿ ಪಿಟ್ ಮಾಡಿದ್ರೆ ಆಗ ಗೊತ್ತಾಗುತ್ತೆ ನೀನೇ ಏನೋ ... ಪೋಂ ಪೋಂ ಕೈ ಸನ್ನೆ ಮಾಡಿದ್ದು;
ಎಲ್ಲಿ ಮತ್ತೊಮ್ಮೆ ಕೈ ಸನ್ನೆ ಮಾಡಿ ತೋರಿಸೋ... ಬೇವರ್ಸಿ ನಿಮ್ಮಂತೋರ ಕೈ ಕತ್ತರಿಸಿ ನಾಯಿ, ನರಿಗಳಿಗೆ ಹಾಕ್ಬೇಕು ನನ್ನನ್ನ ಯಾರೂಂತ ತಿಳಿದಿದ್ದೀರ ' ಪೊಲೀಸ್ '
ಇದೊಳ್ಳೆ ಕತೆಯಾಯಿತಲ್ಲ ಇವರ ಕೂಗಾಟಕ್ಕೆ, ರಂಪಾಟಕ್ಕೆ ರಸ್ತೆಯಲ್ಲಿ ಹೋಗುವವರು, ಬರುವವರು ನಮ್ಮ ಸುತ್ತ ಸೇರಿ ಥೂ...!! ಬೇವರ್ಸಿಗಳ ನೋಡೋಕೆ ಸಭ್ಯಸ್ಥರಂತೆ ಕಾಣ್ತೀರ ಮನೆಯಲ್ಲಿ ಮಾಡೋಕೆ ಕೆಲಸ ಇಲ್ಲದೆ ಇದ್ದರೆ
ಇನ್ನೇನು ಮಾಡ್ತೀರ ಬೀದಿ ಬೀದಿ ಸುತ್ತೊ ಖಯಾಲಿ
ಈ ನನ್ನ ಮಕ್ಕಳಿಗೆ ಹೀಗೆಲ್ಲ ಬರೀ ಮಾತಲ್ಲಿ ಹೇಳಿದ್ರೆ ಸಾಕಾಗಲ್ಲ ಕಾಲಲ್ಲಿರೋದು ಕೈಗೆ ತಗೊಂಡು ರಪರಪಾಂತ ಬಾರ್ಸಿ ಮೇಡಮ್
ಹೆಂಗಸರ ಕೈಯಲ್ಲಿ ಒದೆ ತಿಂದ್ರೆ ಬುದ್ಧಿ ಬರೋದು ಮುಂಡೇವಕ್ಕೆ ಅಯ್ಯೋ...!! ದೇವರ್ರೇ..., ದುರ್ವಿಧಿಯೇ...!!
ಅಕ್ಕಪಕ್ಕದವರಿಗೆ, ಸಂಬಂಧಿಕರು, ಮನೆಯವರಿಗೆ ಗೊತ್ತಾದರೆ ಇನ್ನು ನಮ್ಮ ಕತೆ ಗೋವಿಂದಾ .... ಗೋ.... ವಿಂದ !!
ಈ ಟೀವಿ ಚಾನೆಲ್ನವರಿಗೆ ಗೊತ್ತಾದರಂತೂ....
ತೋರಿಸಿದನ್ನೆ ಇಡೀ ದಿನವೆಲ್ಲಾ ತೋರಿಸಿ
ಮಾನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕುವುದಂತು ಗ್ಯಾರಂಟಿ
ಇಲ್ಲೇ.... ಈ ಭೂಮಿ ಬಾಯ್ಬಿಟ್ಟು ನುಂಗಬಾರದೇ....
ನಿಜ ಹೇಳಿದರೂ... ಕೇಳದ ಜನರು ಇವರು
ಅಲ್ಲಾ... ನಮ್ಮಿಂದಾದ ತಪ್ಪಾದರು ಏನು ಸ್ವಾಮಿ ?
ಮಟಮಟ ಮಧ್ಯಾಹ್ನ ಹೆಡ್ ಲೈಟ್ ಆನ್ ಮಾಡ್ಕೊಂಡು ಸ್ಕೂಟಿಯಲ್ಲಿ ಬಂದವರ ನೋಡಿ ಲೈಟ್ ಆಫ್ ಮಾಡೀಂತ
ಕೈ ಸನ್ನೆ ಮಾಡಿ ತೋರಿಸಿದ್ದು ತಪ್ಪೇ...!!

Friday, November 14, 2014

ಹೇಗೆ ಹೇಳಲಿ ಹೇಳು ನಾ ನಿನಗೆ....?

ನಿನ್ನ ಕಂಡೊಡನೆ ನನ್ನಾ ಈ ಮನವಿಂದು
ಗರಿಯ ಬಿಚ್ಚಿ ಕುಣಿಯುವ ಗಿರಿಯ ನವಿಲು
ನಿನ್ನ ಕಣ್ಣ ನೋಟಕೆ ಏಕೊ ಏನೊ ನನ್ನೊಳು
ಮಾತು ಬರದು, ಬರೀ ತೊದಲು ತೊದಲು
ನಾ ಹೇಗೆ ಹೇಳಲಿ ಹೇಳು, ಕೂಗಿ ನಾ ನಿನಗೇ....
ನಿನ್ನಾ ತುಟಿಯಂಚಲಿ ಮೂಡೋ ಮುಗುಳು ನಗೆಗೆ
ಮುಂಗುರುಳ ಸರಿಸಿ ಆಡೋ ಆ ನಿನ್ನಾ ಕಳ್ಳಾಟಕೇ..
ನನ್ನೀ... ಮೈ ಮನದಲ್ಲೇಕೋ ನವಿರೇಳುವುದು
ನಾ ಏನು ಮಾಡಲಿ ಹೇಳು ನೀ ಬೇಗ, ನನಗೆ ಈಗ  

Monday, October 27, 2014

ಬೇಡ ರೀ... ನನ್ನ ಫಜೀತಿ ಭಾಗ - ೭

ನೀವೇನೂ... ನನ್ನ ಹತ್ತಿರ ಬರೋದು ಬೆಬೆಬೆ ಬೇಡಾ ರೀ !!
ನೀವು ಅಲ್ಲೇ... ಅಲ್ಲಿಯೇ... ದಯವಿಟ್ಟು ನಿಲ್ಲಿ
ನಿಮಗೇನೋ... ಇದೆಲ್ಲ ಮಾಮೂಲಾಗಿರಬಹುದು
ನನ್ನಂತವನಿಗೆ ಇದು ಹೊಚ್ಚ ಹೊಸ ಅನುಭವ;
ನಾ ಎಂದೂ... ಇಂತಹ ಜಾಗಕ್ಕೆ ಬಂದವನಲ್ಲ
ಅದು ಒಂದು ಹೆಣ್ಣಿನ ಮುಂದೆ ಹೀಗೆ ಬಟ್ಟೆ ಬಿಚ್ಚೋದು ಅಂದ್ರೆ
ನನಗೆಕೋ... ತುಂಬಾನೆ ಕಕ ಕಷ್ಟವಾಗುತ್ತೆ ಕಾಣ್ರೀ...
ಏನೋ... ನೀವು, ನಾನು ಕನ್ನಡದವರಾಗಿದ್ದಕ್ಕೆ ಸರಿ ಹೋಯ್ತು
ಬೇರೆಯವರ ಮುಂದೆ ನಗೆಪಾಟಲಿಗೆ ಈಡಾಗ್ತಿದ್ದರಿ
ಛೆ...!! ನೀವೆಂತಾ... ಮೀಸೆ ಹೊತ್ತ ಗಂಡಸರ್ರಿ
ಒಂದು ಹೆಣ್ಣ ಕಂಡು, ಹೀಗೆ ಹೆದರುವುದೇ...??
ನಿಮ್ಮನ್ನ ನೋಡಿದ್ರೆ ನನಗೇಕೊ ಅಯ್ಯೋ ಪಾಪ! ಅನ್ನಿಸುತ್ತೆ
ಹಾಗೆಯೇ ಅನುಮಾನ ಕೂಡ ಬರುತ್ತೆ? ನೀವೇನು ಗಂಡಸ !!
ಅಲ್ಲಾ..!! ಅಷ್ಟೊಂದು ದುಡ್ಡು ಕೊಟ್ಟು,
ಸುಮ್ಮನೆ ನೋಡ್ಕೊಂಡು ಹೋಗೋದಕ್ಕೆ ಬಂದ್ರ
ಎಲ್ಲರಿಗೂ... ಮೊದಮೊದಲು ಹೀಗೆಯೆ ಭಯ, ನಾಚಿಕೆ ಆಗುತ್ತೆ
ಆಮೇಲೆ ನಾ ಬೇಡಾಂದ್ರು ಕುದುರೆ ಸವಾರಿ ಮಾಡ್ತೀರ
ಬೇಗ್ಬೇಗ ಬಟ್ಟೆ ಕಳಚಿ, ಮಂಚ ಹತ್ತಿ, ಕಣ್ಮುಚ್ಚಿ
ಈ ನನ್ನ ಕೈ ಒಮ್ಮೆ ನಿಮ್ಮ ಮೈ ಸೋಕಿದರೆ ಸಾಕು
ಅಹ್ ಆಹಾ..!! ಮತ್ತಷ್ಟು, ಮಗದಷ್ಟು ಬೇಕೆನ್ನುವಿರಿ
ಈಗೇನು ನೀವೇ ಬಟ್ಟೆ ಬಿಚ್ಚಿ, ಬೇಗ ಬರುವಿರೋ...
ಅಥವಾ ನಾನೇ... ನಿಮ್ಮ ಬಳಿ ಬರಲೋ..!!
ಅವಳ ಬೆದರಿಕೆಯ ಮಾತಿಗೆ ಮತ್ತಷ್ಟು ಹೆದರಿ
ನಾ ಸುಮ್ಮನಿದ್ದರೆ ಇವಳು ಹೇಳಿದಂತೆ ಮಾಡುವ ಹೆಣ್ಣು
ಆದದ್ದಾಗಲಿ ಒಂದು ಕೈ ನೋಡಿಯೇ... ಬಿಡುವ
ಅವಳು ಹೇಳಿದಂತೆ ಅವಳ ಕೈಯಲ್ಲಿ ನಿಜಕ್ಕೂ ಜಾದೂ ಇತ್ತು
ನನ್ನ ಅರೆ ಬೆತ್ತಲಾದ ಇಡೀ ದೇಹದ ತುಂಬೆಲ್ಲ
ಅವಳ ಬೆರಳುಗಳ ರುದ್ರನರ್ತಕೆ
ಮೈಮನದ ತುಂಬೆಲ್ಲ ನವ ಚೈತ್ರದ ತಂಗಾಳಿ ಬೀಸಿ
ನರ ನರನಾಡಿಗಳಲ್ಲಿ ರೋಮಾಂಚನ, ಹೊಸ ಚೈತನ್ಯ
ನನ್ನಲ್ಲಿ ಹೆಪ್ಪುಗಟ್ಟಿದ ಹಳೆಯ ನೋವುಗಳು,
ಅಸಹನೆ ಎಲ್ಲಾ.... ಕರಗಿ ನೀರಾಗಿತ್ತು;
ಸ್ವಲ್ಪ ಬಂದೆ ತಾಳಿ, ನಿಮಗೆ ಆಯಾಸವಾಗಿರಬಹುದು
ಹಣ್ಣಿನ ರಸ ತರುವೆ ಹಾಗೆಯೇ ಮಲಗಿರಿ
ಹೋದವಳು ಬೇಗ ಬರದಿದ್ದಾಗ ಮೇಲೆದ್ದಿದ್ದೆ
ಎದುರಿಗೆ ಪೊಪೊಪೊ ಪೊ...ಲೀಸಿನವ,
ಕಂಡೊಡನೆ ಗಂಟಲೆಲ್ಲಾ ಒಣಗಿ ಮಾತೇ ಬರದೆ
ಮನಸ್ಸಿನಲ್ಲಿಯೇ.... ಎಲಾ... ಹೆಣ್ಣೇ...!!
ಕೊನೆಗೂ ನನ್ನ ಸಿಕ್ಕಿಸಲು ನಿನ್ನ ಯೋಜನೆಯೆ ?
ಇಂದು ನನ್ನ ಎಲ್ಲಾ.... ಕಥೆ ಮುಗಿಯಿತು
ಯುವ ಬರಹಗಾರ ' ಮಸಾಜ್ ಸ್ಪಾಗೆ ' ಹೋಗಿ,
ವ್ಯೆಶೈಯ ಮಡಿಲಲ್ಲಿ ಸಿಕ್ಕಿ ಬಿದ್ದ
" ಬ್ರೇಕಿಂಗ್ ನ್ಯೂಸ್ " ಟೀವಿ ಚಾನೆಲ್ಗಳಲ್ಲಿ
ಪೇಪರ್, ಫೇಸ್ ಬುಕ್, ಟ್ವಿಟ್ಟರ್ ಲ್ಲಿ ನನ್ನ ತೇಜೋವಧೆ
ಲೇ... ರಮಣಾ... ನೀನೇನು ನನ್ನ ಸ್ನೇಹಿತನೆ ?
ಬೆನ್ನು, ಸೊಂಟದ ನೋವಿಗೆ ಎಂಥಾ ಜಾಗ ತೋರಿಸಿದೆಯೋ...
ಪಾಪಿ ಪಾಪಿ ನನ್ನ ಕೈಯಲ್ಲಿಯೇ ನಿನ್ನ ಮರಣ !
ಅಯ್ಯೋ.... ದೇವರೇ...!! ಸಾವಾದರು ಬರಬಾರದಿತ್ತೆ
ಇದೆಲ್ಲಾ .... ನನಗೆ ಬೇಕಿತ್ತೆ ? ಅಳುತ್ತ ಇದ್ದರೆ
ಬಾಗಿಲ ಬಳಿ ಇವಳು ಹಣ್ಣಿನ ರಸದ ಗ್ಲಾಸ್ ಹಿಡಿದು ನಗಬೇಕೆ !!

Saturday, October 25, 2014

' ಬೇಡ ಸ್ವಾಮಿ ನನ್ನ ಫಜೀತಿ ' ಭಾಗ - ೬

ನನ್ನವಳ ಮಾತು ಮೊದಲೇ ನಾ ಕೇಳಿದ್ದರೆ
ಇಷ್ಟೆಲ್ಲ ನೋವು, ಉರಿ, ಸುಟ್ಟಗಾಯಗಳಿಂದ
ಕೂರಲಾಗದೆ, ನೆಟ್ಟಗೆ ನಿಲ್ಲಲಾಗದೆ
ಹಬ್ಬದ ದಿನವೆ ಆಸ್ಪತ್ರೆಗೆ ಅಡ್ಮೀಟ್ಟಾಗಿ ಒದ್ದಾಡ ಬೇಕಿತ್ತೆ ?
ಲೇ... ಪುಷ್ಪಾ...!! ಅಯ್ಯೋ ನಿನ್ ಮನೆ ಕಾಯ್ಹೋಗ ಎಲ್ಲಿದ್ದಿಯೇ...
ಆ ಡಾಕ್ಟರ್, ಹಾಗೆ ನರ್ಸನ ಬೇಗ ಕರೆಯೇ...??
ಅಯ್ಯಯ್ಯೋ.... ಉರಿ, ಉರಿ  ಫ್ಯಾನ್ ಹಾಕೇ.... ಮಾರಾಯ್ತೀ
ಛೆ ಛೆಛೆಛೇ... ಏನ್ ಮೇಷ್ಟ್ರೇ.... ಈ ನಿಮ್ಮ ಸ್ಥಿತಿ
ನಮ್ಕೈಲಿ ನೋಡ್ಕಾಗ್ದು ಎಂಥಾ ಫಜೀತಿ ಆಗೋಯ್ತು ನಿಮ್ಗೆ !!
ಆ ಹಲ್ಕಟ್ ನನ್ ಮಕ್ಕಳು ಬೀದಿಲೆ ಪಟಾಕಿ ಹೊಡಿ ಬೇಕಿತ್ತೆ 
ನನ್ನ ಕೈಗೆ ಸಿಗಲಿ ಹುಟ್ಲಿಲ್ಲ ಅನ್ನಿಸ್ಸಿತೀನಿ ಬೇವರ್ಸಿಗಳ್ನ ತಂದು
ಸದ್ಯ ಅದಕ್ಕೇನು...? ತೊಂದರೆ ಆಗ್ಲಿಲ್ಲ ತಾನೆ?
ಹೆಚ್ಚೂ ಕಡಿಮೆಯಾಗಿದ್ರೆ ನಿಮ್ಮ ಇಡೀ ಜೀವಮಾನ
ನೀವಿಬ್ಬರೂ ಮಕ್ಕಳಿಲ್ಲಾಂತ ಕೊರಗಬೇಕಿತ್ತು ನೋಡಿ
ಅಂತು ಇಂತು ಆ ದೇವರು ದೊಡ್ಡವನು ಬಿಡಿ
ಹೇ.... ಗೌಡ್ರೇ.... ಆ ಹುಡುಗರನ್ನ ಯಾಕ್ರಿ ಬೈತೀರಿ
ಏನೋ... ಹುಡುಗಾಟ, ಆದದ್ದೆಲ್ಲಾ ನನ್ನನಿಂದಲೆ
ಸುಮ್ಮನೆ ಮನೆಯೊಳಗಿರದೆ ಹೊರಗಡೆ ಬಂದೆ ನೋಡಿ
ಹಾಳು ಆ ರಾಕೇಟ್ ನೇರ ಮೇಲಕ್ಕೆ ಹೋಗದೆ
ನನ್ನ ಲುಂಗಿಯೊಳಗೆ ನುಗ್ಗಿ ಹೊರಗೆಲ್ಲೂ ಹೋಗಲಾಗದೆ
ಸ್ಫೋಟಿಸಿದ್ದರ ಪರಿಣಾಮ ಈ ನನ್ನ ಸ್ಥಿತಿ, ' ಫಜೀತಿ ' 

Wednesday, October 22, 2014

ಇಂತಹ ಹೆಣ್ಣು ಮನೆಗೊಬ್ಬಳು ಇರಬೇಕು

ಇದೇನ್ರೀ..... ಇದು ! ಹಬ್ಬಕ್ಕೆ ಇಷ್ಟೊಂದು ಬಟ್ಟೆಬರೆ,
ಒಡವೆ, ಸಿಹಿ ತಿಂಡಿ ?!
ಇಡೀ ಅಂಗಡಿಯೇ ಮನೆಯ ಬಾಗಿಲಿಗೆ ಬಂದಂತಿದೆ !
ನಿಮಗೇನಾದರು ಲಾಟರಿಯಲ್ಲಿ ಹಣಗಿಣ ಬಂತೆ ?
ಅಥವಾ ಪ್ರಮೋಷನ್, TA/DA ಹೆಚ್ಚಾಯ್ತೆ ?
ಎಲ್ಲಾದರು ಹಣದ ಚೀಲ ಸಿಕ್ಕಿರಬೇಕು....
ಇದೇನು ಕನಸೋ... ನನಸೋ.... 
ಅಬ್ಬಬ್ಬಾ....!! ನನಗಂತೂ ನಂಬಲಾಗುತ್ತಿಲ್ಲ

ನೀ ನನ್ನ ಏನೆಂದು ಕೊಂಡೆಯೇ....
ಒಂದೇ ಒಂದು ಸಹಿಗೆ, ಇಷ್ಟೆಲ್ಲ ಉಡುಗೊರೆ, ಸಿಹಿ
ಇನ್ಮುಂದೆ ದಿನಾ ಹಣ, ಝಣ ಝಣ ಕಾಂಚಾಣ
ನೀನು, ಮಕ್ಕಳು ಬೇಕಾದ್ದು ನನ್ನ ಕೇಳಬಹುದು
ನಾ ಎಲ್ಲಾ ಕೊಡಿಸುವೆ ನೀ ರಾಣಿ ರಾಣಿಯಂತೆ
ಮೆರೆದಾಡಬಹುದು
ಓ ಹೋ.... ಹೀಗೋ... ನಿಮ್ಮ ವಿಷಯ ಗೊತ್ತಾಯ್ತು ಬಿಡಿ
ಆ ದರಿದ್ರದ ಲಂಚದ ಹಣದಿಂದ ಇದೆಲ್ಲ ಬಂದದ್ದೆಂದು;
ಥೂ..!! ನಿಮ್ಮ ಜನ್ಮಕ್ಕೊಂದಷ್ಟು ಬೆಂಕಿ ಬಿತ್ತು
ಹೋಗಿ ಹೋಗಿ ಹೇಸಿಗೆಗೆ ಬಾಯಿ ಹಾಕುವುದೆ ?
ಎಲ್ಲೆಲ್ಲೂ ಭ್ರಷ್ಟಾಚಾರ, ಲಂಚತನ, ಮೈಗಳ್ಳತನ
ನಿಮ್ಮಂತವರಿಂದ ದೇಶವೆಲ್ಲಿ ಉದ್ಧಾರವಾದೀತು
ಮೊದಲು ಇದೆಲ್ಲವ ಹೊತ್ತು ತಂದವನ ಜೊತೆ ಕಳುಹಿಸಿ
ಇಲ್ಲವಾದರೆ ಗೊತ್ತಲ್ಲ ದೀಪಾವಳಿ ಹಬ್ಬದ ದಿವಸ
ಅಭ್ಯಂಜನದ ' ಹಬ್ಬ ' ಎನ್ನಬೇಕೆ ನನ್ನವಳು !! 

Friday, October 10, 2014

ಡರ್ರ ಬರ್ರ

ಛೆ...!! ಎಲ್ಲೇ ಹೋದರು ಈ ನಿಮ್ಮ ಕಾಟ ತಪ್ಪಿದ್ದಲ್ಲ ಬಿಡಿ, ಒಂಚೂರು ಘನತೆ, ಗಾಂಭೀರ್ಯ ನಿಮಗಿದ್ದರೆ ತಾನೆ
ಎಲ್ಲರೆದಿರು ಹೀಗೆ, ರಾಜಾರೋಷವಾಗಿ ಊಸು ಬಿಡುವುದೆ ನಾಚಿಕೆ ಪಾಚಿಕೆ ಮನೆಯಿಂದ ಆಚೆಗೆ ಎನ್ನುವ ಜನ ನೀವು
ಒಮ್ಮೆ ಸುತ್ತಲೂ ಕಣ್ಣಾಡಿಸಿ ಬಸ್ಸಲ್ಲಿರುವ ಜನರೆಲ್ಲಾ ಹೇಗೆ
ಮುಖ ಕಿವುಚಿ, ಮೂಗು ಮುಚ್ಚಿಕೊಂಡಿರುವರೋ....
ಹಾದಿಬದಿ, ಬೀದಿಬದಿಯಲೆಲ್ಲಾ... ಬಾಯಿ ಚಪಲಕ್ಕೆ
ಸಿಕ್ಕಿದ್ದೆಲ್ಲಾ... ತಿಂದರೆ ಅಜೀರ್ಣವಾಗದೆ ಇನ್ನೇನಾದೀತು
ಹೊಟ್ಟೆ ಕೆಟ್ಟು ಬರುವ ದುರ್ಗಂಧದ ವಾಸನೆಗೆ ಗಬ್ಬು ಗಬ್ಬು; ಬೆಳ್ಳಂಬೆಳಿಗ್ಗೆ ಎದ್ದು ಟಾಯ್ಲೆಟ್ಗೆ ಹೋಗಿದಿದ್ದರೆ ಹೀಗಾಗುತ್ತಿತ್ತೆ ... ಎಲ್ಲಾ .... ನನ್ನ ಕರ್ಮ ಕರ್ಮ !!
ನೀ ಮೆಲ್ಲಗೆ ಮಾತಾಡೇ... ಮಾರಾಯ್ತೀ ... ಜನ,
ನಾನೇ ... ಊಸು ಬಿಟ್ಟಿರುವವನೆಂದು ನೋಡಿ ನಕ್ಕಾರು ನಾನೇನು ಬಿಟ್ಟಿದ್ದಲ್ಲವೆ ಯಾರೋ .. ಬಿಟ್ಟರೆ ನನ್ನೇ ದೂಷಿಸುವೆ ನೋಡು ನೀನೇ.. ಎಲ್ಲರೆದಿರು ಮಾನ ಹರಾಜು ಹಾಕುವಂತಿದೆ ಅದೇನು ಹೇಳಿ ಕೇಳಿ, ಸಮಯ, ಸಂದರ್ಭ ನೋಡಿ ಬರುವುದೆ ? ಬಂದಾಗ ಬಿಟ್ಟರೆ ಬಿಟ್ಟವರಿಗೂ ಕೊಂಚ ನಿರಾಳ
ವಾಸನೆಯ ಸೇವಿಸಿದವರಿಗೆ ತಾನೆ ಪ್ರಾಣ ಸಂಕಟ !
ಅದಕ್ಕೇನು ನಾಚಿಕೆಯೇ...? ಅಥವಾ ಮೈಲಿಗೆಯೆ ?
ನೀ ಓದಿಲ್ಲವೇನೆ ... ಅಥವಾ ಕೇಳಿಲ್ಲವೇ...?
ಡರ್ರು ಬರ್ರು ಭಯಂ ನಾಸ್ತಿ,
ಟೊಂಯ್ಯ ಟೊಸ್ಸು ಯಥಯಥಾ।
ಕೊಂಯ್ಯ ಕೊಟ್ರು ಭಯಂ ಕಿಂಚ್ಚತ್ತು,
ನಿಶ್ಯಬ್ಧಂ ಪ್ರಾಣ ಸಂಕಟಾ.... ॥

Wednesday, October 8, 2014

ಯಾರದು ಸರಿ ?

ನಿಮಗೇನೂ... ಗೊತ್ತಾಗದು, ಸುಮ್ಮನಿದ್ದು ಬಿಡಿ
ಏನೇನೋ ಹೇಳಿ ನನ್ನ ತಲೆಯ ಕೆಡಿಸದಿರಿ
ನನ್ನ ತಮ್ಮನಿಗಿಂತ ಒಳ್ಳೆ ಗಂಡು ಬೇಕೇನ್ರಿ ನಿಮಗೆ ? ರೂಪದಲ್ಲೇನೋ... ಕಪ್ಪು ನಾ ಒಪ್ಪಿಕೊಳ್ಳುವೆ,
ವಯಸ್ಸು ಹೆಚ್ಚಿರಬಹುದು ಗಟ್ಟಿಮುಟ್ಟಾಗಿಲ್ಲವೆ ?
ಐಶ್ವರ್ಯ, ಅಂತಸ್ತಿನಲ್ಲಿ ಅವನಿಗೇನು ಕಡಿಮೆ ಇದೆ ಹೇಳಿ ? ಕಲಿಯುಗದ ಕುಬೇರ ಕುಬೇರ ಕಾಣ್ರಿ ಅವನು
ಹತ್ತು ತಲೆಮಾರು ಕೂತು ತಿಂದರೂ ಕರಗದ ಆಸ್ತಿ 
ರಾಣಿ ರಾಣಿಯಂತೆ ಮೆರೆಯುವಳು ಆ ಮನೆಯಲ್ಲಿ
ನಿಮ್ಮಿಂದ ಗಂಡು ಹುಡುಕಿ, ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಡಲು ಸಾಧ್ಯವೇ ?
ಯಾರಾದರು ದಿಕ್ಕುದೆಸೆಯಿಲ್ಲದವನಿಗೆ ಕೊಡಬೇಕಷ್ಟೆ; ನಿಮಗೇ... ಸಾಕಷ್ಟು ಹಣ ಕೊಟ್ಟು, ಹತ್ತೂರು ಮೆಚ್ಚುವಂತೆ ಧಾಮ್ ಧೂಮ್ ಆಗಿ ಮದುವೆ ಮಾಡಿಕೊಳ್ಳುವ
ಸುಮ್ಮನೆ ಏನೇನೋ ಹೇಳದೆ ಒಪ್ಪಿಕೊಳ್ಳಿ
ನಿಮಗೂ... ಆಗ ರಾಜ ಮರ್ಯಾದೆ
ಅಬ್ಬಬ್ಬಾ ...!! ನೀ ಎಂಥಹ ಸ್ವಾರ್ಥ ತಾಯಿಯೆ ?
ನಿನ್ನ ತಮ್ಮನ ಕಲ್ಯಾಣ ಗುಣಗಳೆಲ್ಲ ಗೊತ್ತಿದ್ದೂ
ಮಗಳ ಬಾಳಿನ ಜೊತೆ ಆಟ ಆಡುವೆಯಲ್ಲಾ...
ನೀ ಒಪ್ಪಿದರೂ... ನಾನು ನನ್ನ ಮಗಳು ಒಪ್ಪಲಾರೆವು ಮದುವೆಯಾದರೆ ಎಲ್ಲಾ ಸರಿ ಹೋಗುವುದು ಎನ್ನುವೆ
ನಾಯಿಯ ಬಾಲ ಎಂದಿದ್ದರೂ ಡೊಂಕು
ನಿನಗೋ... ಗಂಟೂ ಉಳಿಯಬೇಕು,
ಆಕಡೆ ನಂಟೂ ಉಳಿಯಬೇಕೆನ್ನುವ ಜಾಯಮಾನದವಳು ... ಒಂದೇ... ಕಲ್ಲಿನಲಿ ಹೊಡೆವ ಏಟಿಗೆ ಎರಡೆರಡು ಪ್ರತಿಫಲ ! ತವರಿನಲ್ಲಿ ನೀ ಆಡಿಸಿದಂತೆ ಆಡುವ ಅಪ್ಪ, ಅಮ್ಮ
ಅಳಿಯ ( ತಮ್ಮ ) ಮಗಳಿದ್ದರೆ
ಆಗ ನಿನ್ನದೇ... ದರ್ಬಾರು, ಕಾರುಬಾರು ಅಲ್ಲವೆ ?
ನಮಗಿರುವ ಎರಡು ಮಕ್ಕಳಿಗೆ
ನಾನೇನೂ ಹಣ, ಆಸ್ತಿ, ಒಡವೆ ಸಂಪಾದಿಸಿ ಇಡಲಿಲ್ಲ ನಿಜ ಒಳ್ಳೆಯ ವಿದ್ಯಾಭ್ಯಾಸ, ಮಾನವೀಯತೆಯ ಶಿಕ್ಷಣ;
ಎಲ್ಲೇ... ಹೋದರು ಕೈಚಾಚದೆ ದುಡಿದು ತಿನ್ನುವ
ಬದುಕಿನ ಪಾಠವ ಕಲಿಸಿರುವೆ ನನಗದಷ್ಟೇ...ಸಾಕು