Monday, March 31, 2014

" ಚೈತ್ರದ ಸಂಭ್ರಮ "

ಚಿಗುರಿದೆ ಮನ ಮಾಮರದಿ
ಚೈತ್ರದ ಭಾವ ಚಿಗುರೆಲೆಯು 
ನಿನ್ನಾ ನೆನಪುಗಳ ಕೋಗಿಲೆಯ  ಕುಹೂ ಕುಹೂ... ತಾಳ ಮೇಳಕೆ
ಧಮನಿ ಧಮನಿಗಳಲ್ಲಿ ಹರಿಯುವ
ನಿನ್ನ ಪ್ರೀತಿ ಹೂನಗೆಯ ರಾಗಕೆ
ಹೊತ್ತು ತಂದ ಸುಮ ಸೌರಭದ
ಘಮ ಘಮದ ಗಂಧ ಗಾಳಿಗೆ
ಹೊಂಗೆ ಹೂವ ಗೊಂಚಲುಗಳಲ್ಲಿ
ಭೃಂಗದ ಸಂಗೀತ ಕಾಮಕೇಳಿ
ಹರಿವ ನೀರ ತೊರೆಗಳಲ್ಲಿ
ಜುಳು ಜುಳು ನಾದ ತೇಲಿ
ಮತ್ತೆ ಮತ್ತೆ ಯುಗಾದಿ ಬಂದಿದೆ
ಹರೆಯ ಮತ್ತೆ ಎನಗೆ ತಂದಿದೆ

Sunday, March 30, 2014

" ಕಲ್ಪನೆಗಳ ಕಾವ್ಯ ಕನ್ನಿಕೆ "

ಕರೆದಾಗಲೆಲ್ಲಾ ಕರುಣೆ ತೋರಿ
ಓಡೋಡಿ ಬರುತ್ತಿದ್ದವಳು,
ಉಸಿರಿಗೆ ಉಸಿರಾಗಿ ಬೆರೆತು
ಜೊತೆಯಾಗಿ ನಿಂತವಳು
ನನ್ನ ತೊರೆದು ಎಲ್ಲಿ ಹೋದಳೋ....

ನಲ್ಲೇ...ನೀ ನನ್ನ ಮದುವೆಯಾಗಿ
ಮನೆ ತುಂಬಿ, ಮೈದುಂಬಿ ಬಂದ ಮೇಲೆ
ಅವಳು ಈ ಹೃದಯದೊಳು ಏಕೋ ಇಲ್ಲ
ಎತ್ತ ಹೋದಳೋ..... ಒಂದೂ ಗೊತ್ತಿಲ್ಲ
ಇಲ್ಲೇ ಎಲ್ಲೋ... ಹೋಗಿ ಬರುವೆ ಎಂದವಳ
ಸುಳಿವಂತೂ ಎನಗೆ ತಿಳಿದೇ... ಇಲ್ಲ

ನಿನ್ನೊಲವ ಸುಖದ ಸುಳಿಗೆ ಸಿಲುಕಿ
ನಾನವಳ ಮರೆತು ಹೋದೆನೇನೋ.... ?
ಸುಳಿವ ತಂಗಾಳಿಯ ತಂಬೆಲರಂತೆ
ಮಿಡಿವ ಮನಕೆ ಇಂಪಾದ ಹಾಡಂತೆ
ನನ್ನ ಸಂತೈಸಿ, ಅಪ್ಪಿ ಮುದ್ದಾಡುತ್ತಿದ್ದವಳು

ಹಗಲಿರುಳೆನ್ನದೆ, ಮಳೆಗಾಳಿಯೆನ್ನದೆ
ಬೆಚ್ಚನೆಯ ಈ ಮೈ ಮನಕೆ
ತಂಪು ಹೊದಿಕೆಯ ಹೊದಿಸಿ
ನಿದಿರೆಗೆ ಮದಿರೆಯಾಗಿದ್ದಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ಕನಸ್ಸುಗಳಲ್ಲೇ... ನನ್ನ ತೇಲಿಸಿ
ಬಾಳ ಬಾನಂಗಳದಿ ಚಂದ್ರಿಕೆಯಾಗಿದ್ದಳು

ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತಿಕ್ಷಣವೂ ರಸಮಯ ತನನ
ಮುನಿಸು ತೊರೆದ ಬೆಳ್ಮುಗಿಲಾಗಿದ್ದಳು
ಕನಸುಗಳ ಬಿತ್ತಿ ಕಣ್ಮಣಿಯಾಗಿದ್ದವಳು

ನಾ ನಿಟ್ಟುಸಿರಿಟ್ಟರೂ ಎದ್ದೋಡಿ ಬರುತ್ತಿದ್ದಳು
ಕಂಗಾಲಾದರೂ ಮಿಡುಕಾಡಿ ಒದ್ದಾಡುತ್ತಿದ್ದಳು
ನೀ ನನ್ನ ಕೈಹಿಡಿದ ಮೇಲೆ
ನಿನ್ನ ಯೌವನದ ಕಿಚ್ಚು ಹೊಳೆಯೊಳಗೆ 
ಕೊಚ್ಚಿ ಹೋದ ಮೇಲೆ ಕಾಣೆಯಾದಳು 

ನಿದ್ದೆಯಲ್ಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ನನ್ನೇ ಪ್ರಶ್ನಿಸಿದ್ದೆ
ನಲ್ಲೇ... ನೀ ಬರುವ ಮುಂಚೆಯೇ....
ಅವಳೆದೆಯಲ್ಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ...! ಅರಿವಿಲ್ಲದಾ ಮಂಕೇ...
ನಿನಗೇಕೆ ಅವಳ ಮೇಲಯೇ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿ ರಾತ್ರಿಗೆ ಪ್ರತಿಸ್ಪರ್ಧಿಯಲ್ಲ
ನನ್ನೊಳಗಿನ ಕಲ್ಪನೆಗಳ " ಕಾವ್ಯ ಕನ್ನಿಕೆ "

Monday, March 24, 2014

ಚೆಲುವೇ... ನೀ ಎಲ್ಲಿರುವೇ....?

ನೀನು ಬಂದ ಮೇಲೆ
ಈ ಹೃದಯದೊಳಗೆ
ಬೇರೆ ಜಾಗ ನಿನಗಿನ್ನೆಲ್ಲಿದೇ...
ನಿಲ್ಲದು ಈ ಚಡಪಡಿಕೆ
ಸಲ್ಲದು ಈ ನಡವಳಿಕೆ
ನಿದಿರೆಯು ಏಕೋ ದೂರಾ...
ಮನಸ್ಸಿಗೂ ಬಲು ಭಾರ
ನಿನ್ನನು ಕಾಣದೆ ನಾನು
ಹೇಗಿರಲಿ ಹೇಳು ನೀನು...
ಕಣ್ಣಲೇ ನನ್ನಾ... ಕೆಣಕುತ
ನಗುತಲೇ ಮನವ ಸೆಳೆದೆ
ಪ್ರೀತಿಯ ನೀ ಸುರಿಸುತ
ನನ್ನನೇ ನೀ ಮೈಮರೆಸಿ
ಏತಕೆ ನೀ ಹೀಗೆ ಕಾಡಿರುವೆ
ಹೇಳಲು ನೀ ಬಾ... ಬಾರೆ
ಕಾಣದೆ ಇಂದು ನಿನ್ನನು
ಅಲೆಯುವ ನೊಂದು ನನ್ನನು
ನೀ ಹುಚ್ಚನ ಮಾಡಿರುವೆ
ಹೇಳದೆ ಕೇಳದೆ ನೀ ಎಲ್ಲಿರುವೆ ?

" ಬಿಸಿಲ್ಗುದರೆ "

ಸಂಜೆ ಬರುವಾಗ ಹಾಗೆಯೇ ಹೂವು, ಹಣ್ಣು
ಮಲ್ಲಿಗೆಯ ಜೊತೆಗೆ ಒಂದಷ್ಟು ಖಾರ, ಸ್ವೀಟು
ಸ್ವಲ್ಪ ಧಾರಾಳವಾಗಿ ತನ್ನಿ
ಇದರಲ್ಲೂ ನಿಮ್ಮ ಜಿಪುಣತನ ಬೇಡ ;
ನನ್ನವಳ ಕಟ್ಟಪ್ಪಣೆ !
ಇಂದೇನು ಜನ್ಮದಿನವೆ ನಿನ್ನದು, ನನ್ನದು
ಮಕ್ಕಳದ್ದು, ಇಲ್ಲವೇ.... ಇಲ್ಲ
ನಮ್ಮ ಮದುವೆಯ ವಾರ್ಷಿಕೋತ್ಸವವೇ...?
ಅದು ಸದ್ಯಕ್ಕಂತೂ.... ಇಲ್ಲ ಬಿಡಿ ,
ಹಾಗಿದ್ದ ಮೇಲೆ ಮತ್ತೇಕೆ ಇಷ್ಟೆಲ್ಲಾ ಖರ್ಚು...?
ಕಣ್ಣೊಡೆದು ನಕ್ಕು
ನನ್ನವಳ ಕೇಳಿಯೇ ಬಿಟ್ಟೆ ;
ಏನಾದರು ರಾತ್ರಿಗೆ ವಿಶೇಷವೇ...?
ಆ ಹಾ.... ಚಪಲ ಚೆನ್ನಿಗರಾಯರು
ನಿಮ್ಮದು ಯಾವಾಗಲೂ ಇದ್ದದ್ದೇ
ಮೊದಲು ಇಲ್ಲಿಂದ ಹೊರಡಿ,
ಹಾಗೆಯೇ ನಿಮ್ಮನಿಲ್ಲಿ ಬಿಟ್ಟರೆ
ನನ್ನ ಕೈಕಾಲು ತಲೆಯೂ ಓಡದು...
ಇಂದು ಆಫೀಸಿಗೆ ನೀವು ಹೋದಂತೆ ...
ಇದೆಲ್ಲಾ .... ಇಂದೇ ತರಬೇಕೆ ?
ತಿಂಗಳ ಕೊನೆ ಬೇರೆ, ಹಣದ ಮುಗ್ಗಟ್ಟು
ದಿಢೀರೆಂದು ಕೇಳಿದರೆ ಹೇಗೆ ?
ನಾಳೆ, ನಾಡಿದ್ದು ತಂದರಾಗದೇ.....?
ರ್ರೀ .... ಸುಮ್ಮನೆ ನನ್ನ ರೇಗಿಸಬೇಡಿ,
ಹೋಗಿಹೋಗಿ ನಿಮಗೇಳಿದ್ದು ನನ್ನ ತಪ್ಪು;
ನೀವು ತರುವುದೇನೂ ಬೇಡ
ನಾನೇ ಎಲ್ಲಾ ...ತಂದು ಕೊಳ್ಳುವೆ
ಒಂದೆರಡು ಸಾವಿರ ಕೊಟ್ಟು ಹೊರಡಿ...
ಗುಟ್ಟು ಬಿಡದ ನನ್ನವಳ ಕಂಡು
ಮನ ತುಸು, ಸಿಟ್ಟೇರಿದರೂ...
ಅವಳು ಕೇಳಿದ ದುಡ್ಡು ಕೊಟ್ಟು
ಮಧುರ ರಾತ್ರಿಯ ಕನಸ್ಸು ಕಾಣತ
ಆಫೀಸಿಗೆ ಬಿರಬಿರ ಹೊರಟಿದ್ದೆ...
ನೀರವ ರಾತ್ರಿಯ ನೀಳ ತೋಳ್ಗಳಲಿ
ಕಾಲ್ಗೆಜ್ಜೆಯ, ಬಳೆಯ ಸದ್ದಿಗೆ
ಮನ ಹುಚ್ಚೆದ್ದು ಕುಣಿದು ,
ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ
ಸಂಜೆ ಮನೆಗೆ ಬಂದಾಗಲೇ ಗೊತ್ತಾಗಿದ್ದು
ಅತ್ತೆ, ಮಾವ ನಾದಿನಿ
ಇವಳ ನೋಡಲು ಬಂದ ಹುಡುಗನ
ಮನೆಯವರ ದಂಡು ಕಂಡು....!!

Saturday, March 22, 2014

" ಉಯ್ಯಾಲೆ "

ಮೊದಲು ಸುರಿದ ಮಳೆಗೇ... 
ಮಿಂದೆದ್ದ ಆ ಭುವಿಯಂತೆ,  
ಆ ನಿನ್ನಾ ಕಣ್ಣೋಟದ ಸೆಳತಕೆ 
ಕರಗಿ ಸೋತ ಈ ಮನಸ್ಸು;
ನಾ ಕಂಡೆ ನೂರಾರು ಕನಸು 
ನೀ ಏನೇ ಹೇಳೂ.... ನನಗೇ
ನನ್ನೊಳಗೊಗೆ ಪ್ರತಿ ಮಿಡಿವ
ಎದೆ ಬಡಿತದ, ಲಯ ತಪ್ಪಿದ
ಮಧುರ ಮೈತ್ರಿಯ ಆಕರ್ಷಣೆ 
ಏಕೋ ಮೌನದ ಸಂಭಾಷಣೆ
ಆ ನಿನ್ನಾ ಸವಿನೆನಪುಗಳು
ಉಲ್ಲಾಸದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೀರ ನೊರೆ ಹಾಲಿನ ಕಚಗುಳಿಗೆ
ನಾ ಹೇಗೆ ಸಹಿಸಲಿ ನೀ ಹೇಳು
ನಿಂತಲ್ಲಿಯೇ ನಾ ಕರಗಿ ಹೋದೆ
ನಿಂತಲ್ಲಿಯೇ ನಾ ಕರಗಿ ಹೋದೆ.... 

Friday, March 21, 2014

" ಕಾವ್ಯೋದ್ಭವ "

ನಾ ಯೋಚಿಸಿ ಯೋಚಿಸಿ ಸಾಕಾಗಿ 
ಆಲೋಚನೆಗಳಲ್ಲಿ ಮುಳುಗಿದರೂ....
ದಿನವಿಡೀ ತೂಕಡಿಸಿ ಕೂತರೂ...
ಹತ್ತಿರ ಸುಳಿಯದು, ನೆನಪಿಗೆ ನಿಲುಕದು
ಒಮ್ಮೊಮ್ಮೆ ಏನೂ... ಹೊಳೆಯುವುದೇ ಇಲ್ಲ;
ಪುಟಗಟ್ಟಲೆ ಬರೆಯಬೇಕೆಂಬ ಹಂಬಲಕೆ
ನಾ ಬಿಡಬೇಕಷ್ಟೇ... ನಿಟ್ಟುಸಿರಿನ ಎಳ್ಳು- ನೀರು
ರಾತ್ರಿಯಿಡೀ ನಿದ್ದೆಯಿಲ್ಲದೆ ಅಡ್ಡಾದಿಡ್ಡಿ ಒದ್ದಾಡಿದರೂ...
ಆ ಅಗಾಧವಾದ ಆಳಕ್ಕೆ ಹೊಕ್ಕಂತೆಲ್ಲಾ....
ಅಂಧಕಾರದ ಆರ್ಭಟವೇ .... ಹೆಚ್ಚು
ಮುಗ್ಗರಸಿ ಬಿದ್ದೀನೆಂಬ ಭಯವಿಲ್ಲ,
ಪುಂಖಾನುಪುಂಖವಾಗಿ ಒಮ್ಮಿಂದೊಮ್ಮೆಲೇ
ಮನ ಮಂಥನದಿ ಮಂಥಿಸಿದಷ್ಟೂ....
ಕಾರ್ಕೋಟಕ ಹಾಲಾಹಲ, ಕೋಲಾಹಲದ ಜೊತೆ ಕಾವ್ಯಾಮೃತದ ಉದ್ಭವ ...

ವಿಶ್ವ ಕವನ ದಿನಕ್ಕಾಗಿ ಬರೆದದ್ದು ( World Poetry Day )

Thursday, March 20, 2014

" ಪ್ರೀತಿಯ ಉಯ್ಯಾಲೆ "

ಮೊದಲ ಮಳೆಗೇ....
ಮಿಂದ ಆ ಭುವಿಯಂತೆ,
ಆ ನಿನ್ನ ಕಣ್ಣ ನೋಟಕೆ
ಕರಗಿ ಸೋತ ಈ ಮನಸ್ಸು;
ಕಂಡೆ ನೂರಾರು ಕನಸು
ನೀ ಏನೆ ಹೇಳೂ... ನನಗೆ
ನನ್ನೊಳಗೊಗೆ ಮಿಡಿವ
ಆ ನಿನ್ನಾ ಸವಿನೆನಪುಗಳ
ಉತ್ಸಾಹದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೊರೆ ಹಾಲಿನ ಕಚಗುಳಿಯ ಬೇಗೆ
ನಿಂತಲ್ಲೇ ನಾ ಕರಗಿ ಹೋದೆ.... !

ಶ್ರೀದೇವಿ, ವಾಗ್ಧೇವಿ, ಜಯಗೌರಿ

ನಿನಗೆ ಕರ ಮುಗಿವೆ ತಾಯೇ..... ಕರವೀರಪುರವಾಸಿನಿಯೇ.......
ಮನೆ ಮುಂಬಾಗಿಲಿಗೆ ಬಂದು
ಕದ ತಟ್ಟಿ, ಅತ್ತಿತ್ತ ನೋಡುತ
ನೀ ಒಳ ಬರದೆ ಯೋಚಿಸುತ
ಅಲ್ಲಿಯೇ ನಿಂತೆಯೇಕೆ ತಾಯೇ....
ಮನಮಂದಿರದಿ ಮಲ್ಲಿಗೆಯ ಮಂಟಪವಿರಿಸಿ
ಅದರೊಳು ನಿನ್ನನ್ನು ಕುಳ್ಳರಿಸಿ, ನಾ ಪೂಜಿಸಿ
ಅರ್ಚಿಸುವೆ ಬಾ ಬೇಗನೇ ನೀ ಬಾರೆ ತಾಯೇ...
ಮದ ಮತ್ಸರವ ತೊಲಗಿಸಿ
ಅಂಧಕಾರವನು ನೀ ಅಳಿಸಿ
ಜ್ಞಾನ ಜ್ಯೋತಿಯ ಬೆಳಗಿಸಿ
ಸಿರಿ ಸಂಪದವ ನೀ ನೀಡು ಬಾ ತಾಯೇ...
ಶ್ರೀದೇವಿ, ವಾಗ್ಧೇವಿ, ಜಯಗೌರಿಯರೆಲ್ಲರೂ
ನಮ್ಮನು ಹರಸಲು ಬಾಳು ಬಂಗಾರ ತಾನೇ ...

Friday, March 14, 2014

" ನಿಮ್ಮಂತೆಯೇ ನಾನೂ ಹೆಣ್ಣು "

ನೀವು ಕೇಳಿದಿರೆಂದು
ನನ್ನ ಬಾಳ ವೃತ್ತಾಂತವ,
ನಿಮಗೀಗ ಹೇಳದಿರೆನು
ಎಂದಾದರೂ ಒಂದು ದಿನ
ನಾ ನಿಮಗೆ ಹೇಳಲೇ ಬೇಕು ;
ಈ ಹುಚ್ಚು ಹದಿಹರಯದಲಿ
ನನ್ನ ಮೆಚ್ಚಿ ಕೊಂಡಾಡಿದನೆಂದು
ಹಿಂದೆ ಮುಂದೆ ಯೋಚಿಸದೆ
ಇಚ್ಛೆಯಿಂದಲಿ ಕೈಹಿಡಿದ ತಪ್ಪಿಗೆ
ಕಂಡ ಕಂಡವರಿಗೆ ತಲೆಹಿಡಿದನು
ನನ್ನ ಬಳಿ ಬಂದು ಹೋದವರೆಷ್ಟೋ
ಕೊಂಡು ತಿಂದು ತೇಗಿದವರೆಷ್ಟೋ.....
ಹಿಂಡಿ ಇಪ್ಪೆಯ ಮಾಡಿದರೆಲ್ಲಾ....
ಅಂದೇ ಕಲ್ಲಾಯಿತು ಈ ಹೃದಯ  !

ಎಲ್ಲಾ ಮುಗಿಯಿತೆಂದು
ನಾ ಅತ್ತು ಕೊರಗಲಿಲ್ಲ
ಸತ್ತು ಸಾಧಿಸಲಾಗದೆಂದರಿತು
ದಿಟ್ಟ ಹೆಜ್ಜೆಯನಿಟ್ಟು
ನನ್ನಂತೆ ನೊಂದು ಬಂದವರ
ಕಣ್ಣೀರ ತೊಡೆದು

Wednesday, March 5, 2014

" ಅತ್ತೆ v/s ಅಳಿಯ "

ಮದುವೆಯಾಗಿ ಏಳೆಂಟು ದಿನಗಳಾದರೂ,
ಮೊದಲ ರಾತ್ರಿಯ ಪ್ರಸ್ಥದ ಪ್ರಸ್ತಾಪವೇ ಇಲ್ಲ....
ಇಂದೋ .... ನಾಳೆಯೋ ...ಇರಬೇಕೆಂದು ಕೊಂಡರೆ
ನನಗೆ ಕಾದದ್ದಷ್ಟೇ .... ಬಂತು ಭಾಗ್ಯ ;
ಕೈಗೆ ಸಿಕ್ಕರೂ ಸಿಗದಂತೆ ಓಡಾಡುವ ನನ್ನವಳ ಕಂಡು
ಕೋಪ ಬಂದರೂ ಏನೂ ಮಾಡಲಾಗದ ಪರಿಸ್ಥಿತಿ
ಯಾರಿಗೆ ಹೇಳಿಕೊಳ್ಳಲಿ, ಬೇಡ ನನ್ನ ಫಜೀತಿ
ಇಷ್ಟು ವರ್ಷಗಳು ಬ್ರಹ್ಮಚಾರಿಯಂತಿದ್ದು
ಕಾಯ, ವಾಚ ಮನಸ ಕಾದಿದ್ದಲ್ಲದೆ ಈಗಲೂ ಕಾಯಲೇ...?

ಅಂತೂ ಇಂತು ಕೊನೆಗೂ .... ಸಿಕ್ಕಳಲ್ಲ ಎಂದು
ನನ್ನವಳ ಖುಷಿಯಿಂದ ಅಪ್ಪಿ ಮುದ್ದಿಟ್ಟರೆ,
ಅದೆಲ್ಲಿದ್ದಳೋ... ಅವಳಮ್ಮ ಅಳಿಯಂದಿರೇ.....
ಸ್ವಲ್ಪ ತಾಳಿ, ತಾಳಿಯಪ್ಪಾ .... ಘಳಿಗೆ, ವಾರ
ತಿಥಿ, ನಕ್ಷತ್ರ ಶುಭದಿನ ನೋಡುವುದು ಬೇಡವೇ...?
ಆಗಲೇ... ಅಷ್ಟೊಂದು ಅವಸರವೇ.....
ಏನು ಹುಡುಗರೋ... ಏನು ಕಥೆಯೋ.....!!
ಒಂದು ಹದಿನೈದು ದಿನ ನಿಮ್ಮಿಬ್ಬರಿಂದ ಕಾಯಲಾಗದೇ...?
ಆಮೇಲೆ ಇವೆಲ್ಲಾ ಇದ್ದದ್ದೇ! ಪ್ರಸ್ಥ, ಬಸಿರು ಬಾಣಂತಾನ !!!

ಅಯ್ಯೋ .... ಅಮ್ಮಾ....
ನಿನ್ನದೇನು ಗಂಡ ಹೆಂಡಿರ ಮಧ್ಯೆ
ನೋಡು ಹೇಗೆ ಕೋಪಿಸಿಕೊಂಡು ಹೋದರು,
ಇನ್ನೇನು ನಿನ್ನಿಷ್ಠದಂತೆ ಮದುವೆ ಮುಗಿಯಿತಲ್ಲ ;
ಈ ಶಾಸ್ತ್ರ, ಸಂಪ್ರದಾಯ ಅಂತ ಏನೇನೋ ಹೇಳಿ ಪ್ರಸ್ಥವ ಮುಂದೂಡಬೇಡ, ಅವರು ಕೈಕೊಟ್ಟಾರು....!

ಲೆ ಲೇ.... ಪೆದ್ದೀ ..... ಕಬ್ಬಿಣ ಕಾದಾಗಲೇ
ಬೇಕಾದಂತೆ ಆಕಾರ ಕೊಡಲು ಸಾಧ್ಯ
ಸುಮ್ಮನೆ ನಾ ಹೇಳಿದಂತೆ ಕೇಳು
ನೀ ಹಿಂದಿಂದೆ ಸುತ್ತಿದರೇನು ಬಂತು ಪ್ರಯೋಜನ ....
ನೀ ಹೇಳಿದಕ್ಕೆಲ್ಲಾ ... ನಿನ್ನ ಗಂಡ ಊಂ ಗುಟ್ಟಬೇಕು
ನೋಡು ನಿನ್ನ ಅಪ್ಪ , ನಾ ಹೇಳಿದಕ್ಕೆಲ್ಲಾ .....
ಹೇಗೆ ಹೌದೌದೆಂದು ತಲೆಯಲ್ಲಾಡಿಸುವರು
ಇದು ಇದು ಇರಬೇಕೇ.... ಹೆಣ್ಣಲ್ಲಿ ಜಾಣತನ ....

ಎಲಾ.... ಘಟವಾಣಿ ಅತ್ತೇ....
ಹೀಗೋ.... ನಿಮ್ಮ ವಿಷಯ , ನಾ ಮಾವನಂತಲ್ಲ
ಇರಲಿ ಇರಲಿ ನಿಮಗೆ ಹೇಗೆ ಬುದ್ಧಿಯ
ಕಲಿಸಬೇಕೆಂದು ನನಗೆ ಗೊತ್ತು ;
ನೀವು ಸೇರೆಂದರೆ ನಾ ಸವ್ವಾಸೇರು
ನಾಳೆ ನೋಡಿ ಬೆಳ್ಳಂಬೆಳಿಗ್ಗೆ ಕಾದಿದೆ ಹಬ್ಬ !!!

ಹಾಲಕ್ಕಿ ನುಡಿದೈತೆ ಹಾಲಕ್ಕಿ ನುಡಿದೈತೆ
ಮನೆ ಬಾಗಿಲಿಗೆ ಬಂದವಳೆ ಅಟ್ಟಿ ಲಕ್ಕಮ್ಮ ತಾಯಿ
ಈ ಮನೆ ಮುತ್ತೈದೆಗೆ ವೈಧವ್ಯ ಕಾದೈತೆ ತಾಯಿ
ತಿಮ್ಮಪ್ಪನ ಬೆಟ್ಟ ಅತ್ತಿ, ದಂಪತಿಗಳಿಬ್ಬರೂ ಮುಡಿಕೊಟ್ಟು;
ಸೇವೆ ಮಾಡಲು, ಬಂದ ದೋಷ ಕಳೆದು
ಮುತೈದೆ ಭಾಗ್ಯದಾ ಜೊತೆ ಕನಕ ವೃಷ್ಟಿ ಆಗುತೈತೆ ತಾಯಿ ಬರುವ ಅಮಾವಾಸ್ಯೆಗೂ ಮುನ್ನ ಮಂಗಳ ಕಾರ್ಯ ಆಗಬೇಕು ತಾಯಿ ಹಾಲಕ್ಕಿ ನುಡಿದೈತೆ ಹಾಲಕ್ಕಿ ನುಡಿದೈತೆ

Saturday, March 1, 2014

" ಅರ್ಥವಾಗದವನು ".....??

ನನ್ನ ಕ್ಷಮಿಸಿ ಬಿಡಿ ಪಪ್ಪಾ ....,
ನಾ ಹೀಗೆ ನಿಮಗೆ ಎದಿರಾಡುತ್ತಿರುವುದಕ್ಕೆ
ನನಗೆ ಈಗಲೇ ಈ ಮದುವೆ, ಮಕ್ಕಳು
ಸಂಸಾರದ ತಾಪತ್ರಯ ಒಂದೂ ನನಗೆ ಬೇಡ;
ಮೊದಲು ನನ್ನ ಎಲ್ಲಾ ಓದು ಮುಗಿಯಲಿ
ಆನಂತರ ನಿಮಗಿಷ್ಟ ಬಂದಂತೆ ಮಾಡಿ
ಅಲ್ಲಿಯವರೆಗೆ ನನ್ನ ಓದಲು ಬಿಡಿ....

ಅಂದು ಯಾರೂ ನನ್ನ ಮಾತ ಕೇಳಿರಲಿಲ್ಲ
ಊಟ ಬಿಟ್ಟು, ಗೋಗರೆದು ಅತ್ತರೂ
ಅಪ್ಪ ಅಮ್ಮ ನನ್ನನ್ನೇ ಹೆದರಿಸಿ, ಬೆದರಿಸಿ
ನಿನ್ನ ಹಠ, ಒಣ ಪ್ರತಿಷ್ಟೆಗಳ ಪಕ್ಕಕ್ಕೆ ಕಟ್ಟಿಡು
ಏನಾದ್ರೂ ಲವ್ವುಗಿವ್ವಲಿ ಬಿದ್ದಿದ್ದೀಯೇನೇ...
ಹಾಗೇನಾದ್ರು ಇದ್ದರೆ ಈಗಲೇ ನಮಗೆಲ್ಲಾ
ಒಂದು ತೊಟ್ಟು ವಿಷ ಕೊಟ್ಟು ಸಾಯಿಸಿ,
ನಿನ್ನಿಷ್ಠದಂತೆ ಬಾಳೇ... ಮಹಾ ತಾಯಿ;
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ
ನಿನ್ನ ನೋಡಿ ತಂಗಿಯರೆಲ್ಲಾ ಕಲಿತಾರು
ಅಮ್ಮ ಅತ್ತು ಕರೆದು ಬಾಯ್ಮುಚ್ಚಿಸಿದ್ದರು
ನನ್ನೆಲ್ಲಾ ಕಂಡ ಕನಸುಗಳಿಗೆ, ಇಷ್ಟಗಳಿಗೆ
ನನ್ನಾ ಅವನ ಎರಡು ವರ್ಷದ ಪ್ರೀತಿಗೆ
ಜೀವಂತ ಸಮಾಧಿಯೇ ಕಟ್ಟಿದ್ದರು...

ಫೇಸ್ ಬುಕ್ಕಿನಲಿ ನನ್ನವನು ಬರೆವ ಕಥೆ, ಕವನಗಳಿಗೆ
ದಿನಾ ಓದಿ ಲೈಕು, ಕಾಮೆಂಟ್ಸ್ ಮಾಡುತ್ತಾ
ನನಗರಿವಿಲ್ಲದೆ ಅವನ ಮನಸಾರೆ ಪ್ರೀತಿಸಿದ್ದೆ;
ರೋಚಕವಾಗಿ , ವಾಸ್ತವೀಯತೆಗೆ ತೀರಾ ಹತ್ತಿರವಾದ
ಹೆಣ್ಣಿನ ಬಗ್ಗೆ ಅವನಿಗಿದ್ದ ಗೌರವ, ಆದರಾಭಿಮಾನ
ಮತ್ತಷ್ಟು ದಿನೇದಿನೇ ಚಾಟಿಂಗ್ ನಿಂದ ಹತ್ತಿರವಾಗಿದ್ದ...

ಸಂಜೆ ಹೊರಗೆಲ್ಲೂ ಹೋಗದಿರು ಮಗಳೇ...
ನಿನ್ನ ನೋಡಲು ಹುಡುಗ ಮನೆಗೆ ಬರುವ,
ಅಮ್ಮನ ಮಾತಿಗೆ ಪ್ರತಿಯಾಡದೆ ತಲೆಯಾಡಿಸಿದ್ದೆ
ಬಂದವನು ಸುಂದರವಾಗಿಯೇ ಇದ್ದ;
ಇವನಲ್ಲಾದ್ರು ನನ್ನಾ ಅವನ ಪ್ರೀತಿಯ ಹೇಳಿ ಕೊಳ್ಳಬೇಕು ಇವನಾದ್ರೂ ಮದುವೆಯ ತಪ್ಪಿಸಿ ಸಹಾಯ ಮಾಡುವನೋ ಬಂದವನ ಬಳಿ ಎಲ್ಲವ ನಾ ಹೇಳಿದ್ದೆ
ಅವನಿಲ್ಲದೆ ನಾ ಎಂದೂ ಬದುಕಿರಲಾರೆ
ನನಗೆ ಈ ಹುಡುಗಿ ಇಷ್ಟವಿಲ್ಲವೆಂದು
ನನ್ನ ಅಪ್ಪ ಅಮ್ಮನ ಬಳಿ ಹೇಳಿ ಪ್ಲೀಸ್
ನೀ ಎಂಥಹ ಹುಡುಗಿಯೇ ನಕ್ಕು
ಮದುವೆಯ ದಿನವ ನಿಶ್ಚಯಿಸಿ ಹೋಗಿದ್ದ
ನನ್ನ ಮಾತಿಗೆ ಕಣ್ಣೀರಿಗೆ ಬೆಲೆಯಲ್ಲಿದೆ ..?

ಮದುವೆ ಮುಗಿಸಿ ಕೈತೊಳೆದು ಕೊಂಡರೆ ಸಾಕೆನ್ನುವ
ಅಪ್ಪ ಅಮ್ಮನಿಗೆ ಹೇಗೆ ತಿಳಿದೀತು
ಮನಸ್ಸು ಮನಸ್ಸುಗಳ ಪ್ರೀತಿಯ ಭಾಷೆ ?
ಅಳುತಲೇ ಕುತ್ತಿಗೆಯೊಡ್ಡಿದ್ದೆ ತಾಳಿ ಕಟ್ಟುವ ಕಟುಕನಿಗೆ
ನಾನೆಷ್ಟು ಬೇಡಿದ್ದೆ ಇವನನ್ನ ತಾಳಿ ಕಟ್ಟುವ ಮುಂಚೆ;
ನಗು ನಗುತ ಸುಮ್ಮನಾಗಿದ್ದ ಗುಮ್ಮನ ಗುಸುಗ
ಪ್ರೀತಿಸಿದವನ ಜೊತೆ ಓಡಿ ಹೋಗಿ ಬಾಳುವ ಎಂದರೆ
ಇಷ್ಟು ವರ್ಷ ಸಾಕಿ ಸಲಹಿದ ಅಪ್ಪ ಅಮ್ಮನ ಸಾವು !
ನಾನೇ ಸಾಯುವ ಎಂದರೆ ಮನೆಯವರ ದೈನ್ಯತೆ ಮುಖಭಾವ ಬೇಡವೇ ಬೇಡ ಸಾಯುವ ಮಾತು , ಹೇಡಿಗಳ ಲಕ್ಷಣ

ಇರಲಿ ಇರಲಿ ಅದ್ಹೇಗೆ ನನ್ನ ಜೊತೆ ಸಂಸಾರ ಸುಖವ ಅನುಭವಿಸುವನೋ ಒಂದು ಕೈ ನೋಡೇ ಬಿಡುವ
ನರಕ ನರಕ ಅನುಭವಿಸಬೇಕು ಜೀವನ ಪರ್ಯಂತರ...
ನಾ ಮೊದಲೇ ನಿಮಗೆ ಹೇಳಿದ್ದೆ ಕೇಳಲಿಲ್ಲ ನೀವು
ನಾ ಬೇರೊಬ್ಬರ ಸೊತ್ತು, ಪ್ರೀತಿ ಪ್ರೇಮ ನಿಮಗೇನು ಗೊತ್ತು ಮನಸ್ಸು ಒಬ್ಬರಿಗೆ, ಈ ದೇಹ ನಿಮಗೆ ಎಂಜಲ ಎಲೆ ನಾನು ಸುಮ್ಮನೆ ನನ್ನ ಮುಟ್ಟದೆ ಮಲಗಿ,
ಹೆಸರಿಗೆ ಗಂಡ ಹೆಂಡತಿಯಷ್ಟೆ...
ಏಯ್ ..... ಚಿನಕುರಳೀ....... ನಾ ಬೇಡವಾದನೇ...
ನಿನ್ನ ಮುದ್ದಿನ ಸಮರ್ಥ್.... ಕಾಣೇ...
ಹ್ಞಾಂ ..... ನೀವೇ.....? ಫೇಸ್ ಬುಕ್ಕಿನ ಪ್ರೇಮಿ
ನನ್ನನ್ನೇ ಯಾಮಾರಿಸಿದಿರಲ್ಲಾ........!!!