Friday, May 30, 2014

" ಅರ್ಥವಾಗದವಳು " ೨

ಎಂದೂ.... ಲಟ್ಟಣಿಗೆ ಹಿಡಿದು
ಬಾಗಿಲ ಬಳಿ ಕಾಯದ ನನ್ನವಳು,
ಇಂದೇಕೋ .... ಮುಖವೆಲ್ಲ ಕೆಂಪಾಗಿಸಿ
ಕಣ್ಣ ಅತ್ತಿತ್ತ ಹೊರಳಿಸಿ, ಬುಸುಗುಟ್ಟುವುದ ಕಂಡು;
ನನಗೂ... ಒಳಗೊಳಗೆ ನಡುಕ ಶುರುವಾಗಿ
ನನ್ನಿಂದ ಇಂದೇನಾದರು ಯಡವಟ್ಟಾಯ್ತೆ....?
ಯೋಚಿಸಿದಷ್ಟೂ ... ಎಲ್ಲವೂ ಗೊಜಲುಗೊಜಲು
ಒಂದಕ್ಕೊಂದು ಮುಷ್ಕರ ಹೂಡಿ ನೆನಪಿಗೆ ಬರದು

ಓಹ್ !! ಪಕ್ಕದ ಮನೆಯ ಸುಂದರಿಯ ಜೊತೆ
ಬೆಳಿಗ್ಗೆ ಬೈಕಿನಲಿ ಹೋದದ್ದು ಇವಳೇನಾದರು ಕಂಡಳೆ?
ಆಟೋ ಸ್ಟ್ರೈಕಿಂದ ಆಫೀಸಿಗೆ ಹೋಗಲು
ನನ್ನ ಬೈಕಲ್ಲಿ ಡ್ರಾಪ್ ಕೊಟ್ಟಿದ್ದು ದುರುದೃಷ್ಟವಾಯ್ತೆ?

ಸಂಜೆ ಸಿಗ್ನಲ್ ಬಳಿ ಹೂ ಮಾರುವ ಆ ಹುಡುಗಿ
ಸಾರೂ... ಮೊಳ ಐದೇ... ರೂಪಾಯಿ ಕೊಂಡ್ಹೋಗಿ
ಅಮ್ಮಾವರು ಖುಷಿಯಾಗುವರು ಕಣ್ಣ ಮಿಟುಕಿಸಿ
ಎಷ್ಟೆಲ್ಲಾ... ಕಾಡಿಬೇಡಿ, ಪೀಡಿಸಿದರೂ...
ಕೇಳದೆ ಗದರಿಸಿ ಕಳಿಸಿದ್ದು ನನ್ನದೇ.... ತಪ್ಪು !!

ಒಂದೆರಡು ಮೊಳ ಮಲ್ಲಿಗೆ ಹೂ, ಮೈಸೂರ್ ಪಾಕ್
ತಂದಿದ್ದರೆ ಕರಗಿಬಿಡುತಿದ್ದಳೋ... ಏನೋ ....!!!
ಇಂದು ಇನ್ನೇನು ಕಾದಿದೆಯೋ... ಗ್ರಹಚಾರ
ಬಡಪಾಯಿಯ ಗಂಟಲ ಪಸೆ ಒಣಗಿ
ಇದ್ದಬದ್ದ ದೇವರಿಗೆಲ್ಲಾ... ಹರಕೆ ಹೊತ್ತು
ಹೆಲ್ಮೇಟ್ ತೆಗೆಯದೆ ದೇಶಾವರಿ ನಗೆ ಬೀರಿ
ಹೆ ಹೆ ಹೇ.... ಇದೇನೆ ಪಾರೂ.... ಲಟ್ಟಣಿಗೆ
ನನ್ನ ತಲೆಗೆ ಮೊಟುಕುವೆಯೋ.... ಹೇಗೆ?
ನಿನ್ನ ನೋಡಿದರೆ ತಿಳಿಯದೆ, ನೀ ಅಂತವಳಲ್ಲ ಬಿಡು
ಎಷ್ಟಾದ್ರೂ ನನ್ನ ಮುದ್ದಿನ ಅರ್ಧಾಂಗಯಲ್ಲವೆನೆ

ನನ್ನವಳು ಕಿಲಕಿಲ ನಕ್ಕು, ಹುಸಿ ಕೋಪ ಬೀರಿ
ಸಾಕು ಸುಮ್ಮನಿರಿ ಹೀಗೆಲ್ಲಾ ... ನನ್ನ ಹೊಗಳಿದರೆ
ಥೂ.... ಹೋಗಿ , ಇತ್ತೀಚೆಗಂತು ನೀವು...
ನಿಮಗಿಷ್ಟಾಂತ ಎಣ್ಣೆಗಾಯಿ ಮಾಡಿ ಕಾಯುತ್ತಿರುವೆ
ಆ ಕೆಲಸದ ತಿಮ್ಮಿ ಚಪಾತಿ ಲಟ್ಟಿಸಲು
ಇನ್ನೂ.... ಬರಲೇ.... ಇಲ್ಲ ನೋಡಿ ಎನ್ನಬೇಕೆ!!!

Sunday, May 25, 2014

" ಕದ್ದವರು ಯಾರು "....?

ಹೂವಿನ ಕರಗ ಬಂತೆಂದು ಜನ,
ಗೋವಿಂದ ಗೋವಿಂದ ಗೋ... ವಿಂದ
ನೂಕುನುಗ್ಗಲಿನ ತಳ್ಳಾಟದಿ
ಜೋರಾಗಿ ಢೀ ಕೊಟ್ಟಿದ್ದಲ್ಲದೆ
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸರ್
ಅದು ಅದು... ಯಾರೋ... ಹಿಂಬದಿಯಿಂದ ತಳ್ಳಿದರು
ಹಾಗಾಗಿ ನಿಮ್ಮ ಮೇಲೆ ಬಿದ್ದೆ ವೆರಿ ಸಾರಿ
ನಗುತ ಆ ಜನ ಜಂಗುಳಿಯಲ್ಲಿ ಮಾಯವಾದವಳ
ಆ ಮುದ್ದು ಮುಖ ಮತ್ತೇ.. ಕಣ್ಮುಂದೆ ಬಂದು
ಹಾಗೇ... ಮೈಮರೆತವನ, ಒಳ ಮನಸ್ಸು ಎಚ್ಚರಿಸಿ
ಪ್ಯಾಂಟ್ ಜೇಬಿಗೆ ಕೈ ಹಾಕಿದಾಗಲೇ... ಗೊತ್ತಾಗಿದ್ದು
ಜೇಬು ಖಾಲಿ ಖಾಲಿ, ಪರ್ಸ್ ಮಂಗಮಾಯ
ಆ ಮುದ್ದು ಮುಖದ ಹುಡುಗಿ ಕದ್ದೋದಳೇ....?
ಅಥವಾ ಆ ಮಂಗಳ ಮುಖಿಯರ ಗುಂಪೆ...!?
ಎಷ್ಟು ನಾಜೂಕಾಗಿ ಹಿಂಬದಿಗೆ ಬಡಿದು
ಅರೇ.... ಮಾಮೂ.... ತೆಗಿ ತೆಗಿ ದುಡ್ಡು
ಅವರಿಗೇನ್ಗೊತ್ತು ನಾ ಮಫ್ತಿಯಲ್ಲಿರುವ ಪೊಲೀಸ್ಸೆಂದು
ಏಯ್ ... ಸಾಹೇಬ್ರ ಹತ್ರಾನೆ ನಿಮ್ ರೋಲ್ ಕಾಲ
ಹೂಂ... ಹೊರಡಿ ಇಲ್ಲಿಂದ ಲಾಠಿ ಬೀಸಿದ್ದ ಪೀಸಿ....

Wednesday, May 14, 2014

" ಮಳೆ ನಿಂತು ಹೋದ ಮೇಲೆ "

ದಿನಾ ಸಂಜೆ, ಬಿಸಿಬಿಸಿ ಹಬೆಯಾಡುವ
ಕಾಫಿಯ ಕೊಡುತ್ತಿದ್ದ ನನ್ನವಳು
ಬಂದು ಅರ್ಧ ಗಂಟೆಯಾದರೂ...
ನನ್ನವಳ ಸುಳಿವಿಲ್ಲ, ಕಾಫಿಯೂ ಇಲ್ಲ
ಇಣುಕಿ ಹೋದವಳ ಕಂಡು
ಕುರುಕುಲು ತಿಂಡಿಯ ಜೊತೆಜೊತೆಗೆ
ಕಾಫಿಯ ತರಬಹುದೆಂದು ಕೊಂಡರೆ
ಉಹೂಂ.... ಬರಲೇ.... ಇಲ್ಲ
ನಾ ಕಾದದ್ದಷ್ಟೇ.... ಬಂತು ಭಾಗ್ಯ
ಅವಳ ಕೈಯಿಂದ ರುಚಿಯಾದ
ಕಾಫಿಯ ಕುಡಿದರೇನೆ ನನಗೂ ನೆಮ್ಮದಿ
ಇವಳಿಗೆ ಏನಾಗಿದೆ? ಎಂದೂ... ಇಲ್ಲದ
ನನ್ನ ಮೇಲೆ ತಾತ್ಸಾರ ಇವಳಿಗೆ ಏಕೆ?
ತಲೆ ಕೆಡಿಸಿಕೊಂಡರೆ ನಾ ಕಾಫಿ ಕುಡಿದಂತೆ
ಎಲ್ಲೋ ಏನೋ ... ಯಡವಟ್ಟಾಗಿರಬೇಕು...
ನನ್ನವಳ ಪ್ರೀತಿಯಿಂದಲೇ... ಹತ್ತಿರ ಕರೆದೆ.
ಶೈಲೂ.... ಬೇಗ ಮಾಡಿ ತರಬಾರದೇನೆ
ಅವಳಿಗೆಲ್ಲಿತ್ತೋ... ತಡೆಹಿಡಿದಿದ್ದ ಅಷ್ಟೂ ಸಿಟ್ಟ
ಒಮ್ಮೆಲೆ ಬಿರುಗಾಳಿಯಂತೆ ಬಂದು,
ಕಾಫಿಯ ಲೋಟವ ಟೀಪಾಯ್ ಮೇಲೆ ಕುಕ್ಕಿ;
ಹಾಂ ಬಂದಿರಾ... ಗಂಟೆ ಎಷ್ಟಾಯ್ತು ನೋಡಿ !
ಈಗಾಗಲೇ.... ಗಂಟೆ ಆರಾಯ್ತು
ಮಧ್ಯಾಹ್ನ ಬೇಗ ಬರುವೆ ಎಲ್ಲರೂ ರೆಡಿಯಾಗಿರಿ
ಶೋ ರೂಮಿಂದ ಹೊಸ ಬೈಕ್ ತರುವ ಎಂದೇಳಿ
ಹೀಗೆ ಲೇಟಾಗಿ ಬರುವುದೇ....?!
ಅವಳೆಲ್ಲಿ ಹೋದಳು ಆ ನಿಮ್ಮ ಕೋತಿ...
ಹೆಣ್ಣೆಂಬ ಭಯವೂ... ಇಲ್ಲ, ಭಕ್ತಿಯೂ ಇಲ್ಲ
ಮಗಳ ಮುದ್ದಿಸಿ ತಲೆಯ ಮೇಲೆ ಕೂರಿಸಿ ಕೊಳ್ಳಿ
ನಮ್ಮ ಕೈಗೆ ನಾಳೆ ಚಿಪ್ಪು ಕೊಡುವಳು
ಏನೋ ... ಗಂಡು ಹುಡುಗ ನನ್ನ ಕಂದ
ರಾತ್ರಿಯಾದರು ನನಗೆ ಭಯವಿಲ್ಲ...!!
ಅಣ್ಣ ತಂಗಿ ಹೊಸ Royal Enfield Bikeನ ಮೇಲೆ ಬಂದಾಗ... ಇವಳ ಮುಖ ನೋಡಬೇಕಿತ್ತು....!!
ಚಿತ್ರಕೃಪೆ : ಅಂತರ್ಜಾಲ
ಶಿವಚೆನ್ನ

Tuesday, May 13, 2014

" ಅರ್ಥವಾಗದವಳು " - ೧

ಅವಳು ಯಾವಾಗಲೂ ಹಾಗೆಯೇ
ಎಲ್ಲರಂತಲ್ಲದಿದ್ದರೂ.....
ಒಮ್ಮೊಮ್ಮೆ ಅರ್ಥವಾಗುವುದೇ... ಇಲ್ಲ,
ಗಂಟೆಗಟ್ಟಲೆ ಫೋನಿನಲ್ಲಿ
ಅದೆಷ್ಟು ಮಾತಾಡುವ ವಾಚಾಳಿಯಂದರೆ
ಇವಳೇನ ಎಂದು ಮೂಗ ಮೇಲೆ ಬೆರಳಿಟ್ಟು ಕೊಳ್ಳಬೇಕು ಕೆಲವೊಮ್ಮೆ ಎದಿರು ಬದಿರು ಸಿಕ್ಕರೂ ಮಾತಾಡದೆ
ಹಾಗೆಯೇ ಸಾಗುವ ನಕ್ಕರೂ ಕಣ್ಣರಳಿಸದ,
ಅಪರಿಚಿತಳಂತೆ ಉಳಿವ ಇವಳು
ಬಾನು ಕೆಂಪೇರಿ, ಹಕ್ಕಿಗಳ ಕಲವರಕ್ಕೆ
ಸೂರ್ಯ ಉದಯಿಸಿದರೂ ಮಾತಾಡದೆ ಬಿಡುವುದೇ... ಇಲ್ಲ
ಛೆ ಹಾಳಾದ್ದು ಆಗಲೇ ಬೆಳಕಾಯ್ತೇ.... 
ಇನ್ನು ನೀ ಮಲಗೋ ಹಾಯಾಗಿ ....
ಕೆಲವೊಮ್ಮೆ  ತುಸು ಇರಿಸು ಮುರಿಸಾದರೂ...
ದಿನ, ವಾರಗಟ್ಟಲೇ ಮಾತಾಡದೆ
ಮೌನಕೆ ಶರಣಾಗಿ ಒಗಟಾಗಿ ಬಿಡುವಳು
ಯಕ್ಷ ಪ್ರಶ್ನೆಯಾಗಿ ಉಳಿದವಳ ಪ್ರೀತಿಗೆ
ಅವಳ ಮನ ಮೋಹಕ ನಗೆಗೆ ಸೋತರೂ
ಇನ್ನೂ ... ನನ್ನಿಂದ ಕಾರಣ ಹುಡುಕಲಾಗಲಿಲ್ಲ...

ನನ್ನ ಮರೆತು ಬಿಡೋ... ಬುದ್ದು.....,
ನಾಳೆ ನನ್ನ ನೋಡಲು ಹುಡುಗನ ಕಡೆಯವರು ಬರುವರು
ನೀನೇ ನಿಂತು ಅವರ ಆದರಿಸಿ, ಉಪಚರಿಸಬೇಕು
ನನಗಾಗಿ ನನ್ನ ಸ್ನೇಹದ ಉಡುಗೊರೆಯಾಗಿ ಬರುವೆಯಲ್ಲಾ....!!
ನಾನವಳ ಮಾತ ಕೇಳಿ ಇಡೀ ರಾತ್ರಿಯೆಲ್ಲಾ ... ಒದ್ದಾಡಿದ್ದೆ
ಅವಳ ಆಲೋಚನೆಯಲ್ಲೇ... ಅವಳ ಮನೆಗೆ ಹೋಗಿ 
ಬೈಯ ಬೇಕೆಂದು ಬೈಕ್ ಅತ್ತಿ ಹೋದವನು
ಸೀದ ಸೇರಿದ್ದು ಆಸ್ಪತ್ರೆ.....,
ಗುಡುಗು ಮಿಂಚಂತೆ ಬಂದವಳು
ಅಯ್ಯೋ .... ಬುದ್ದೂ.... ನೀನೆಂತವನೋ...
ನಾ ತಮಾಷೆಗೆ ಹೇಳಿದ್ದು , ನಿಜವೆಂದು ಕೊಂಡೆಯೋ...ಹೇಗೆ? ಈ ಹೃದಯ ಕಷ್ಟಗಳಿಗೆ ಮರುಗದೆ ಕಲ್ಲಾಗಿರಬೇಕು
ಆಗಲೇ ಪ್ರೀತಿ ಗಟ್ಟಿಯಾಗುವುದು
ಛೆ ಛೇ... ನೀ ಹೀಗೆಲ್ಲಾ ... ಅಳುವುದೆ
ಮುತ್ತಿತ್ತು ಹೋದವಳು ಬಂದದ್ದು
ಬೆಳದಿಂಗಳ ನಡುರಾತ್ರಿಗೆ, "ಫೋನಾಯಿಸಿ "
ನನ್ನೆಲ್ಲಾ .... ನೋವ ಮರೆಸಿದ್ದಳು