Monday, August 18, 2014

" ನಿತ್ಯ ಚೈತ್ರ "

ನಿನ್ನ ಬೆಚ್ಚನೆಯ
ಅಪ್ಪುಗೆಯಲ್ಲಿ,
ನನ್ನ ಮನದ
ಆಸೆಗಳೆಲ್ಲಾ...
ಒಂದೊಂದಾಗಿ
ಮಂಜಂತೆ ಕರಗಿ
ಮಿಂದೆದ್ದಾಗಲೇ
ನಿತ್ಯ ಚೈತ್ರೋದಯ !

" ನಾ ಬಂಜೆಯೇ ".....?

ಮನತಣಿಸುವಂಥ ಮಳೆ ಬೀಳಲಿಲ್ಲ
ಚಿಗುರೊಡೆದು ಬೆಳೆಯ ಕಾಣಲಿಲ್ಲ
ಕರೆದರು ನನ್ನ ಬಂಜೆ ಎಂದು
ಒಡಲ ಕುಡಿಯ ಕಾಣಲು,
ತೊದಲ ನುಡಿಯ ಕೇಳಲು
ಹೆಣ್ಣ ಸಹಜ ಬಯಕೆ ಗರಿಯ ಬಿಚ್ಚಿ;
ಹಾರದಾಯ್ತು ದೂರಕೆ
ಒಂಟಿಯಾಗಿ ಸುಡುವ ಬೆಂಕಿಗೆ
ಮೈಯ ಒಡ್ಡಿ ನಡುಗೊ ಚಳಿಗೆ
ಹೊರಳಿ, ಉರುಳಿ, ನರಳಿ ನರಳಿ
ಕೆರಳಿ ಕೆಂಡವಾಗಿ ಹೋದೆನು
ಬಾಡಲಿಲ್ಲ ಮುಡಿದ ಹೂವಮಾಲೆ
ನಡೆಯಲಿಲ್ಲ ಕಾಣದ ರಾಸಲೀಲೆ
ಷಂಡನೆಂಬ ಕಾಮನು
ಗಂಡನಾಗಿ ನನ್ನನು
ತಣಿಸಲಿಕ್ಕೆ ಏಳಲಿಲ್ಲ,
ಹಿಂಡಿ ಹಿಪ್ಪೆ ಮಾಡಲಿಲ್ಲ
ಬಂಜೆಯಾಗಿ ಉಳಿದೆನು ಬಂಜೆಯಾಗಿ ....  


Friday, August 15, 2014

" ಜಯ ಭಾರತಿ "

ನಾವೆಲ್ಲರೂ ಒಂದೇ ಭಾರತಾಂಬೆಯ ಮುಂದೆ ಮಂಡಿಯೂರಬೇಕು, ದಂಡಿಗೂ ಜೈ ಎನ್ನಬೇಕು
ಭಾಷೆ ಸಂಸ್ಕೃತಿ ನೂರಾರು, ಜಾತಿ ಧರ್ಮ ಹಲವು
ಉಸಿರಾಗಿಹ ಗಾಳಿ, ನಡೆದಾಡುವ ಈ ಭೂಮಿ
ಜೀವ ಬಲವಾಗಿಹ ಜಲ, ಎಲ್ಲರೊಳು ಮೈತಾಳಿ
ನರನಾಡಿಗಳಲ್ಲಿ ಹರಿವ, ಸುರಿವ ನೆತ್ತರೊಂದೇ....
ಮನುಜ ಮನುಜರ ನಡುವೆ
ದ್ವೇಷದ ಕಿಡಿ ಹಚ್ಚುವವರ ಕೊಂದು
ಧರ್ಮ ಧರ್ಮಗಳಲ್ಲಿ ವಿಷ ಬೀಜ ಬಿತ್ತುವವರ
ಸದೆಬಡಿಯೆ ನೀನು ಮತ್ತೊಮ್ಮೆ ಬರಬೇಕು ತಾಯಿ
ದುರುಳ ರಕ್ಕಸರ ರುಂಡ ಮುಂಡಗಳ ಚಂಡಾಡುತ ಅವರಟ್ಟಹಾಸಗಳ ಹುಟ್ಟಡಗಿಸೆ ದಂಡೆತ್ತಿ ಬಾ ತಾಯಿ
ಜಪಿಸೆ ಶಾಂತಿ ಸೌಹಾರ್ಧತೆಯ ಬಾಳ ಮಂತ್ರ
ನಾವೆಲ್ಲರೂ ಎಂದೆಂದಿಗೂ ಒಂದೆನ್ನುವ ತಂತ್ರ
ದಶ ದಿಕ್ಕಿಗೂ ಮೊಳಗಲಿ ನಿನ್ನಯ ಕೀರುತಿ
ಜಯ ಭಾರತಿ ಜಯ ಭಾರತಿ ಜಯ ಭಾರತಿ  

Thursday, August 14, 2014

" ಏನಿದೇನು ಗ್ರಹಚಾರವೋ "....!!

ಆ ಹಾ... ಧರೆಗಿಳಿದು ಬಂದ ಮನ್ಮಥ ನೀವು,
ಕನ್ನಡಿಯ ಮುಂದೆ ನಿಂತರೆ ಸಾಕು
ತಾನಾಗಿಯೇ ಕೈ ತಲೆಯ ಮೇಲೆ ಹೋಗುತ್ತೆ
ಹೊತ್ತುಗೊತ್ತಿನ ಪರಿವೆ ಇಲ್ಲದ ನನ್ನ ಗಂಡ
ಆ ಹಾ ನನಗೆ ಹೇಳುವಾಗ ನೋಡಬೇಕು
ಒಂದು ಸೀರೆಯುಡಲು ಗಂಟೆಗಟ್ಟಲೆ ಬೇಕೆನೇ...
ಈಗ ನೋಡಿ... ನಿಮ್ಮ ಪರದಾಟ
ಇರುವ ಒಂದೆರಡು ಕೂದಲುಗಳ
ಅದನ್ನೇನು ಎಳೆದೆಳೆದು ಬಾಚುವಿರೋ...
ಹೊತ್ತಾಯ್ತು ಎದ್ದು ಬನ್ರಿ ಬೇಗ ನಿಮ್ಮ ಬುದ್ಧಿಗೊಂದಿಷ್ಟು ನಿಮ್ಮನ್ನೇನು ಕರೆದು ಯಾರು ತಾಳಿ ಕಟ್ಟಿ ಎನ್ನರು
ನೋಡಿ ಇದೇ... ಮೊದಲು, ಇಂದೇ... ಕೊನೆ
ಕರೆದರೂ ಯಾವುದೇ ಮದುವೆ, ಮುಂಜಿಗೆ
ಜನ್ಮ ದಿನದ ಸಮಾರಂಭಕ್ಕೆ ನಾನಂತೂ ಬರಲಾರೆ
ನನಗೂ... ಸಾಕಾಗಿದೆ ನಿಮ್ಮ ಜೊತೆ ಬಂದು ಬಂದು
ನಮ್ಮಿಬ್ಬರ ನೋಡಿ, ಎಲ್ಲರೂ ನಗುವವರೇ...
ಇವಳೋ... ಉದ್ದ ಜಡೆಯ ಸುಂದರಿ
ಅವನೋ... ತಾಮ್ರದ ತಪ್ಪಲೆಯವ
ಸರಿಯಾಗಿದೆ ಈಡು ಜೋಡು, ಬ್ರಹ್ಮಗಂಟು
ನೋಡಿ ನನ್ನ ಜೊತೆ ಬರದೆ ಮುಂದೆ ಸಾಗಿ
ಇಲ್ಲವಾದರೆ ದೂರದಿಂದಲೇ ಹಿಂಬಾಲಿಸಿ ಬನ್ನಿ
ಗೊತ್ತಾಯ್ತೇ..... ಎನ್ನುವುದೆ ನನ್ನ ಇವಳು!

Wednesday, August 13, 2014

" ಸ್ಮೈಲ್ ಪ್ಲೀಸ್ ".... !!

ಫೋಟೊ ತೆಗೆಯುವವ
ಸ್ಮೈಲ್ ಪ್ಲೀಸ್ ಸರ್ ಅಂದ
ನನ್ನವಳ ಮುಖ ನೋಡಿ,
ನಾ ಗಂಭೀರವದನನಾದೆ !
ಅಪ್ಪಿತಪ್ಪಿ ನಾ ಅವಳ ಮುಂದೆ
ಬಾಯ್ತೆರೆಯುವಂತಿದೆಯೇ....
ತಮಾಷೆಗಾದರೂ.... ಸರಿಯೆ
ಎಲ್ಲರೆದೆರು ನಾ ನಗುವಂತಿಲ್ಲ;
ಮನೆಗೆ ಹೋದರೆ
ನನ್ನ ಸುಮ್ಮನೆ ಬಿಡುವಳೇ...
ಜನ್ಮ ಜಾಲಾಡಿಸಿ,
ಇದ್ದ ಬದ್ದ ಅವಳ ಸಿಟ್ಟೆನ್ನೆಲ್ಲಾ ಬೀರಿ 
ನನ್ನ ಮುವತ್ತೆರಡು ಹಲ್ಲುಗಳಿಗೂ
ಸಹಸ್ರನಾಮ ಮಾಡದಿರಳು...

Monday, August 11, 2014

" ಆಶೀರ್ವಾದ "

ನನ್ನವಳು ಅಕ್ಷತೆಯ ಕೈಯಲ್ಲಿಟ್ಟು
ಮುತ್ತೈದೆ ಭಾಗ್ಯ ಗಟ್ಟಿಯಾಗಿರಲೆಂದು
ಮನಸಾರೆ ನನ್ನ ಹರಸಿ, ಆಶೀರ್ವದಿಸಿ
ಏಳೇಳು ಜನ್ಮದಿ ನೀವೇ ನನ್ನ ಪತಿ;
ಈ ಜನ್ಮಕ್ಕೆ ನನಗಿಷ್ಟು ಸಾಕೇ
ನೀ ಹೇಳಿದ್ದಕ್ಕೆಲ್ಲ ಹ್ಞೂಂ ಗುಟ್ಟಿ,
ನೀ ಕೇಳಿದ್ದೆಲ್ಲ ಮಾಡುವ ಕೆಲಸದವ
ನಾ ಧಮ್ ಇಲ್ಲದಿರೊ ನಿನ್ನ ಪತಿಯಷ್ಟೆ
ಹೌದೌದೆನ್ನುವ ನನ್ನಂಥಹ ಗಂಡಸರಿಗೆ
ಸೀರೆ, ಬಳೆಗಳು, ಕಾಲುಂಗುರ ಇಲ್ಲವಷ್ಟೆ
ಸುಮ್ಮನೆ ಈ ಅಕ್ಷತೆ, ತಾಳಿಯಲ್ಲ ನಿನಗೇಕೆ ?
ನೀ ಬಗ್ಗಿ ನಮಸ್ಕರಿಸುವುದು ಬೇಡ
ನಿನ್ನ ನಟನೆ, ದಬ್ಬಾಳಿಕೆ ನನಗೂ ಸಾಕಾಗಿದೆ
ಏನೇ.... ಏಳುಬೀಳುಗಳು ಬಂದಿದ್ದರೂ
ಎದೆಗುಂದದೆ ಹೆದರಿಸಿ ನಿನ್ನ ಜೊತೆ ಜೊತೆಯಲ್ಲಿ
ಇಷ್ಟು ವರ್ಷಗಳು ಹೆಜ್ಜೆ ಹಾಕಿ ಬಾಳಿದ್ದು ಸಾಕು
ನಿನ್ನ ದಾರಿ ನಿನಗೆ, ನನ್ನ ಬದುಕು ಇನ್ನೆಲ್ಲಿಗೋ
ನೀ ಹೀಗೆ ಗೊಂಬೆಯಂತೆ ನಿಂತಲ್ಲಿಯೇ ನಿಂತಿರು
ಯಾರಿಗೆ ಬೇಕಾಗಿದೆ ಈ ಸಂಸಾರ ತಾಪತ್ರಯ 
ನಗೆ ಮುಖವಾಡದ ದೊಂಬರಾಟದ ಬದುಕು
ರೀ.....ಹರಸಿ ಬಿಡ್ರೀ ನನಗೂ ಶ್ರೇಯಸ್ಸು
ನಿಮಗೂ ಯಶಸ್ಸು ನಿಮ್ಮ ದಮ್ಮಯ್ಯಾ...
ಬೆಳಗೆದ್ದು ಜಾಗಿಂಗ್ಗೆ ಬರುವೆ
ಇನ್ನಿರದು ಈ ದಡೂತಿ ದೇಹ ...    

" ಪೂಜೆ "

ಸಿಟ್ಟಾಗಿದ್ದಕ್ಕೆ ನನ್ನವಳು ಮುಟ್ಟಾಗಿ
ಸಿಡಿಮಿಡಿಗುಟ್ಟುತ ಚಾಪೆ, ಚೊಂಬು
ದಿಂಬಿಡಿದು ಹೊರ ಕೋಣೆಗೆ ನುಗ್ಗಿ
ಬಾಗಿಲ ಒದ್ದು, ಕದ ಮುಚ್ಚಿ;
ವಟಗುಟ್ಟುವವಳ ಕಂಡು
ಪಿತ್ತ ನೆತ್ತಿಗೇರದೆ ಮತ್ತಿನ್ನೇನು ನೀವೆ ಹೇಳಿ ?
ಗಿಡದಲ್ಲೇನು ಗರಿಗರಿ ನೋಟುಗಳು ಬಿಡುವುದೆ?
ಕೇಳಿದಾಗಲೆಲ್ಲಾ ಕಿತ್ತು ಕೊಡುವುದಕ್ಕೆ
ಮಂತ್ರ ತಂತ್ರಕ್ಕೇನು ಉದುರುವುದೆ
ತಿಂಗಳ ಪೂರ ಮಕ್ಕಳ ಮುಂದೆ ಗಂಟಲರಚಿ ಕೂಗಿ,
ಪಾಠ ಮಾಡಿ ದುಡಿದು ಮನೆಗೆ ಬಂದರೆ
ಇವಳ ಬೇಡಿಕೆಗಳ ಪಟ್ಟಿ ನೋಡಿ ತಲೆ ಸುತ್ತದೆ
ಕಂಡಿದ್ದೆಲ್ಲ ಬೇಕೆಂದರೆ ಕೊಡಿಸಲಾದೀತೆ
ಹಾಸಿಗೆ ಇದ್ದಷ್ಟು ಕಾಲು ಚಾಚೇ... ಮಂಕೇ ಎಂದರೆ
ನನ್ನ ನೋಡಲು ಇಂಜಿನಿಯರ್, ಲಾಯರ್, ಡಾಕ್ಟರ್
ಕೋಟೆ ಬೀದಿಯ ಸಾಹುಕಾರರ ಮಗ
ಎಂತೆಂಥವರೋ... ಬಂದಿದ್ದರು
ಏನು ಮಂಕು ಬಡಿದಿತ್ತೋ ಏನೋ... ನನಗೆ
ನಿಮ್ಮ ಕೈಹಿಡಿದ ತಪ್ಪಿಗೆ ಜೀವಮಾನವೆಲ್ಲ
ನಾ ಕಷ್ಟದಲ್ಲಿಯೇ... ಬಾಳ ಬೇಕೇ....??
ವರದಕ್ಷಿಣೆ, ವರೋಪಚಾರಕ್ಕೆಂದು ಇವಳಪ್ಪನಿಂದ
ನಾ ಪಡೆದಿದ್ದರೆ ಸಾಕಷ್ಟು ಹಣ, ಸಾಲ
ಇವಳು ಕೈಚಾಚಿದಾಗಲೆಲ್ಲಾ... ಕೊಡಬಹುದಿತ್ತು
ನಾನೋ.... ಸರ್ಕಾರಿ ಫ್ರೈಮರಿ ಸ್ಕೂಲ್ ಮಾಸ್ತರು
ಬರುವ ಸಂಬಳದಲ್ಲಿ ದಿನಸಿ, ಮನೆ ಬಾಡಿಗೆ,
ಕರೆಂಟು ನೀರಿನ ಬಿಲ್ಲು, ಮಕ್ಕಳ ಫೀಜು
ಉಳಿದಿದ್ದರಲ್ಲಿ ಆಗಾಗ ಆಸ್ಪತ್ರೆಯ ಖರ್ಚು
ಈ ಎಲ್ಲಾ ಖರ್ಚುಗಳ ಸರಿದೂಗಿಸಿ
ಸುಸ್ತಾಗಿರುವಾಗ
ಹಬ್ಬಕ್ಕೆ ರೇಶಿಮೆಯ ಸೀರೆಯಂತೆ,
ಕಿವಿಗಳಿಗೆ ಬೆಂಡೊಲೆ, ಪೂಜೆ ಪುನಸ್ಕಾರಕ್ಕೆಂದು
ಹಣ್ಣು, ತರಕಾರಿ ಖರ್ಚಿಗೊಂದಷ್ಟು ಕೊಟ್ಟಿದ್ದರೆ
ಎತ್ತಿ, ಹೊತ್ತು ಕುಣಿದಾಡುತ್ತಿದ್ದಳೋ ಏನೋ....!! 

Saturday, August 9, 2014

" ರೇಪ್ "

ಸಾ..... ಈ ನನ್ಮಗ ರೇಪು ರೇಪು ಅಂತಿದ್ದ, ಒದ್ದು ಎಳ್ಕೊಂಡ್ ಬಂದಿದ್ದೀನಿ ಏರೋಫ್ಲೇನ್ ಹತ್ತಿಸಿದ್ರೆ ಎಷ್ಟ್ ರೇಪ್ ಮಾಡ್ದ ಅಂತ ಎಲ್ಲಾ .... ಬಾಯ್ಬಿಡ್ತಾನೆ. ಆಮೇಲೆ ನಿಮ್ಗೆ ನಂಗೆ ಮೋಸನ್ ಗ್ಯಾರಂಟಿ ಏನಂತೀರಿ ಸಾ.... ಅಯ್ಯೋ.... ನಿನ್ ಮಕ್ಕೆ ಲೇ.... ಮೋಸನ್ ಅಲ್ಲಲೇ.... ಪ್ರಮೋಶನ್ ದೊಡ್ ಸಾಹೇಬ್ರು ಬರೋ ಮುಂಚೆ ಚೆನ್ನಾಗಿ ರುಬ್ಬು. ಏನಲೇ.... ಗಡವಾ....!! ನಿಜ ಹೇಳ್ಬಿಡು ನಮ್ ಸಾಯೇಬ್ರು ಸ್ಯಾನೆ ಸ್ಟ್ರಿಕ್ಟು ಇಲ್ಲಾಂದ್ರೆ ನಿನ್ ಕಥೆ ಅಷ್ಟೆಯ.... ನಿನ್ ಹೆಸರೇನು : ಚಕ್ರವರ್ತಿ, ಹ್ಞಾಂ ....!!!
ಊರು : ಸೀಮಾಂಧ್ರ, ಕೆಲಸ : ನುವ್ವೆ ಚೂಡ್ಲೇದ ಸಾಮೇ.... ತಳ್ಳೋಗಾಡಿ ಪೆಟ್ಕೋನಿ ಕಳ್ಳೇಕಾಯ್ ಅಮ್ತುನ್ನಾನು ಲೆ ಲೇ.... ಗೂದೆ ಸೀನ ನಿಂಗ್ ಯಾರಪ್ಪಾ ಈ ಪೊಲೀಸ್ ಕೆಲಸ ಕೊಟ್ಟ ಪುಣ್ಯಾತ್ಮ, ಆವಯ್ಯನ್ ನೋಡದ್ರೆ ಇವತ್ತೋ.... ನಾಳೆನೋ ಸಾಯಂಗ್ ಅವ್ನೆ ಎತ್ತಾಕ್ಕೊಂಡ್ ಬಂದಿದ್ದೀಯಲ್ಲಾ ಏನ್ ಹೇಳ್ಲಿ ನಿನ್ ಬುದ್ಧಿಗೆ ಸಾ... ಅದು ಅದು ವರಕೌಟ್ ಮಾಡಿದ್ರೆ ಏನಾರ ಸಿಗ್ತೈತೇನೋ... ಅಂತ ಸಾ.... ಏಯ್ ಕಳ್ಳೆಕಾಯ್ ಏನಯ್ಯ ಮಾಡ್ದೆ..., ಸಾ ಅದಿ ಅದಿ ನೇನು ಫೋನ್ಲೋ ಊರಿಕಿ ರೇಪು ವಸ್ತಾನನಿ ಚೆಪ್ಪುತುಂಟ್ನಿ ಅಂತೆ ಸಾ...

Friday, August 8, 2014

" ಮಹಾಲಕ್ಷ್ಮಿ ಬಾರಮ್ಮ "

ಕರವೀರಪುರವಾಸಿನೀ.....
ಒಲಿದರೆ ನೀನು ಕುಂದುಗಳೆನಗಿಲ್ಲ
ಮನಿದರೆ ನೀನು ಬಾಳೇ ಎನಗಿಲ್ಲ
ವರಗಳ ನೀಡೋ ಕರುಣಾಮಯಿಯೇ
ಕರಗಳ ಮುಗಿದು ಬೆಡುವೆ ತಾಯಿಯೇ
ತೆರೆದಿದೆ ಮನೆ, ಮನ ಬಾಗಿಲು ನಿನಗೆ
ಕರೆದರೆ ಬರುವೆ ಭಕ್ತರ ಮನೆ ಬಾಗಿಲಿಗೆ
ಶರಣು ಶರಣು ಎನ್ನುತ ನಮಿಸುವೇ....

Thursday, August 7, 2014

" ಕುಡಿತದಿಂದ ಸಂಸಾರ ಹಾಳು "

ನೋಡೂ.... ನೀ ವತಾರೆ ವತಾರೆ ಹಿಂಗೆ ಕುಡ್ಕೊಂಡ್ ಬಂದ್ ಮನೆ ಮುಂದೆ ಗಲಾಟೆ ಗಿಲಾಟೆ ಮಾಡ್ತಿದ್ದರೆ, ತಾಳಿ ಕಟ್ಟಿದ್ ಗಂಡಾಂತ ಮುಖ ಮೂತಿ ನಾ ನೋಡಕ್ಕಿಲ್ಲ; ಪೊರಕೆ ಪೊರಕೆ ಕಿತ್ತೋಯ್ತದೆ ಮನಸ್ನಾಗ ವಸಿ ಗೆಪ್ತಿ ಮಡ್ಕಾ.... ನಾನುವೆ... ನಿಂಗೆ ಕುಡಿ ಬ್ಯಾಡಯ್ಯಾ... ಸರೀಕ್ರು ಮುಂದೆ ಮಾನ ಮರ್ವಾದೆ ಸಿಕ್ಕಕ್ಕಿಲ್ಲ, ನೋಡಿ ನಗ್ತಾರೆ ಗಿಣೀಗೆ ಏಳ್ದಂಗೆ ಎಲ್ಲಾ ಏಳಿ, ನೀ ಹಿಂಗ್ ಕುಡ್ಕೊಂಡು ಬಾ ಮಕ್ಳು ಮರೀನ ಕರ್ಕೊಂಡು ಕೆರೆ, ಬಾವಿಗೆ ಬಿದ್ದು ಸತ್ತೋಗಿತ್ತೀನಿ ಅಂತ ಏಳಿದ್ಕೆ ಏ... ಬಿಡ್ತು ಅನ್ನು, ನಮ್ ಅವ್ವನಾಣೆ, ನಿನ್ನಾಣೆ ಈ ಮಕ್ಕಳಾಣೆ ಕುಡಿಯಕ್ಕಿಲ್ಲ ಕಾಣಮ್ಮೀ... ಯಿಕಿತ ಸಮಿಸ್ ಬಿಡು ಅಂತೇಳಿದ್ ಬಿಕ್ನಾಸಿ ನೀನು. ಅದ್ಯಾವ್ ನನ್ ಸವತಿ ಸತ್ಲು ಅಂತ ಕುಡ್ಕೊಂಡ್ ಬಂದಿದ್ದೀಯ.... ಏನಮ್ಮೀ.... ನಾನೋ.... ನೀನೋ ಈ ಮನೆ ಯಜಮಾನ, ನೀ ಯಿಂಗ್ ಯಗರಾಡ್ತಿದ್ದೀಯ ಗಂಡ ಅನ್ನೋ... ಮರ್ವಾದೆ ಬ್ಯಾಡ, ನಾನೇನ್ ಕುಸಿಗ್ ಕುಡ್ಕೊಂಡ್ ಬಂದ್ನೇ... ಯಂಗಪ್ಪಾ.... ಸಿವನೇ... ಇವಳ್ಗೇಳ್ಲೀ.... ಹೊಟ್ಯಾಗ ಇಟ್ಕಳಂಗಿಲ್ಲ, ನಾ ಹೇಳಂಗಿಲ್ಲ.... ನೋಡಮ್ಮೀ.... ವಸಿ ಮನಸ್ನ ಗಟ್ಟಿ ಮಾಡ್ಕ ನಮ್ ಮಾವ ಅದೆ ನಿಮ್ ಅಪ್ಪ ಟಿಕೀಟು ತಗಂಡ್ರಂತೆ...
ಕುಡಿತ, ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಸಂಸಾರ ಸಂಬಂಧಗಳಿಗೂ... ಮಾರಕ ನೀವು ಏನಂತೀರ....

Tuesday, August 5, 2014

" ಕಾಟ "

ಛೇ..... ಹಾಳಾದ್ದು ಈ ಸೊಳ್ಳೆಗಳ ಕಾಟ
ಸಾಲದಕ್ಕೆ ನಿಮ್ಮ ಸರಸದಾಟ ಬೇರೆ,
ನೆಮ್ಮದಿಯಾಗಿ ನಾ ನಿದ್ರಿಸುವಂತಿಲ್ಲ
ಮೊದಲು ಎದ್ದು ಹೋಗಿ All-out ಹಚ್ಚಿ;
ನಿನ್ನದೇನೆ ಈ ಹೊತ್ತಲ್ಲದ ಹೊತ್ತಲ್ಲಿ
ನನ್ನ ಮೇಲೆಯೇ ಜೋರು...?
ನನ್ನನ್ನೇನು ನೀ ಹೇಳಿದಕ್ಕೆಲ್ಲಾ
ಕುಣಿಯುವ ನವಿಲೆಂದು ಕೊಂಡೆಯೋ... ಹೇಗೆ ?
ಮೊದಲೇ... ನನಗೆ ಅದು ಅಲರ್ಜಿ
ಆ ಹೊಗೆ ಕುಡಿದರೆ Mood out ಅಷ್ಟೆ !
ಓಹ್ ಆಗೋ... ಸಮಾಚಾರ
ಆಗಾದರೆ ತೆಪ್ಪಗೆ ಮಲಗಿ ಎನ್ನುವುದೇ....!!