Friday, December 26, 2014

ಬೇಡ ರ್ರೀ... ನನ್ನ, ನನ್ನವಳ ಫಜೀತಿ


ರ್ರೀ... ಎಲ್ಲಿದ್ದೀರಿ ?!  ಸರಿಯಾಗಿ ಕಿವಿ ಕೇಳ್ತಿದೆ ತಾನೆ ನಿಮ್ಗೆ ?!
ಛೆಛೆಛೇ ..!! ನೀವೋ...., ಆ ನಿಮ್ಮ ಡಬ್ಬಾ ಫೋನೋ...
ಯಾವಾಗ್ಲೂ ಬ್ಯುಸಿ ಅಥವಾ  ಔಟಾಫ್ ಆರ್ಡರ್
ಇತ್ತೀಚೆಗೆ ಅದು ಇದು ಹೇಳಿ, ಹೊಸಹೊಸ ಕತೆಗಳ ಕಟ್ಟಿ;
ಬರೀ ಬುರುಡೆ ಬಿಡುವುದೇ... ಆಯ್ತು ನಿಮ್ಮ ಜಾಯಮಾನ
ಯಾಕ್ರಿ ಬೇಕು ನಿಮಗೆ ? ಮನೆ, ಮಡದಿ, ಮಕ್ಕಳು ಸಂಸಾರ  ಎಲ್ರೂ ರೆಡಿಯಾಗಿರಿ ಮಧ್ಯಾಹ್ನ PVRಲ್ಲಿ PK ನೋಡ್ಕೊಂಡು ಶಾಪಿಂಗ್ ಮಾಡ್ಕೊಂಡು ಬರೋಣ ಅಂತ ಹೇಳಿ ಹೋದವರು
ಗಂಟೆ ಎರಡಾದ್ರೂ ಇನ್ನೂ ಪತ್ತೆಯೇ... ಇಲ್ಲ
ಈಗ ಬರ್ತಾರೆ ಸುಮ್ನಿರ್ರೊ ಅಂತ ಮಕ್ಕಳಿಗೆ ಸಮಾಧಾನಿಸಿ
ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾದಿದ್ದೇ ಬಂತು ನಮ್ಮ ಭಾಗ್ಯ
ಶ್ಶ್...!! ನೀವೇನೂ ಮಾತಾಡ್ಬೇಡಿ, ನನಗೆ ಬಂದಿರೊ ಕೋಪಕ್ಕೆ
ನಿಮ್ಮನ್ನ ಅಂದು ಹಾಡಿದರೇನು ಬಂತು ಪ್ರಯೋಜನ
ನನ್ನ ಕೈಗೆ ಸಿಗಬೇಕು ಆಗ ಇದೆ ನೋಡ್ರಿ ನಿಮಗೆ ಹಬ್ಬ
ಈಗಿಂದೀಗಲೇ ಮನೆಗೆ ಬೇಗ ಬಂದ್ರೆ ಸರಿ ಹೋಯ್ತು
ಇಲ್ಲಾಂದ್ರೆ ಇಂದು ನಿಮಗಿದೆ ತಕ್ಕ ಪೂ....ಜೆ !!
ಪೂಜೆ ಮಾಡ್ಲಿಲ್ಲಾಂದ್ರೆ  ನನ್ನ ಹೆಸರು ರುಕ್ಕೂನೇ... ಅಲ್ಲ

ಸಾರಿ ಸಾರಿ.... ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಕಣೆ ರುಕ್ಕೂ..
ಗೆಳೆಯನ ಕ್ರಿಸ್‌ಮಸ್ ಪಾರ್ಟಿಯ ಗಲಾಟೆಯಲ್ಲಿ
ನಾ ಹೇಳಿದ್ದು ಎಲ್ಲಾ ಮರೆತೇ ಹೋಗಿತ್ತು ನೋಡು
ಇನ್ನು ಅರ್ಧ ಗಂಟೇಲಿ ನಾ ಅಲ್ಲಿದ್ದರೆ ಸರಿ ತಾನೆ ನಿನಗೆ  
ಪ್ಲೀಸ್ ಪ್ಲೀಸ್ ಲೇಟಾದ ತಪ್ಪಿಗೆ ತಪ್ಪುಕಾಣಿಕೆಯಿದೆಯೇ
ಸರಿ ಸರಿ ಇದಕ್ಕೇನು ಕಮ್ಮಿಯಿಲ್ಲ ಬಿಡಿ ನಕ್ಕಿದ್ದಳು
ಇನ್ನೂ... ಲೇಟಾದರೆ ಇವಳಿಂದ ಉಳಿಗಾಲ ಉಂಟೇ ...??
ಉರಿದು ಮುಕ್ಕುವಳೆಂದು ಹೆದರಿ ಮನೆಗೆ ಬಂದರೆ
ತೆರೆದ ಬಾಗಿಲು ತೆರೆದಂತಿದೆ ಎಲ್ಲೆಲ್ಲೂ ನೀರವ ಮೌನ !!
ಛೆ ಛೆಛೆಛೇ!!!! ಏನೇ ಇದು ರುಕ್ಕೂ  ನಿನ್ನ ಅವತಾರ
ನಾ ಅವಳ ಮುಟ್ಟಿ ಮಾತಾಡಿಸಿದ್ದೇ.... ತಪ್ಪಾಯ್ತು ನೋಡಿ
ಕೆಂಡದಂತ ಕೆಂಪಾದ ಕಣ್ಣು, ಅಸ್ತವ್ಯಸ್ತವಾದ ತಲೆಗೂದಲು
ಅವಳು ನನ್ನ ನೋಡಿ ಹ್ಞೂಂಕರಿಸಿದ ರೀತಿಗೆ ಭಯಭೀತನಾಗಿ
ಕುಡಿದಿದ್ದ ನಶೆಯಿಳಿದು ಮಾತುಗಳು ಹೊರಬರದೆ ತಡವರಿಸಿದ್ದೆ;
ಏನೋ ....  ನನ್ನನ್ನೇ ಮುಟ್ಟುವಷ್ಟು ಧೈರ್ಯ ಬಂತೆ ?
ಬಾ... ರೋ.... ಬಾ ಬಾ.... ಗಹಗಹಿಸಿ ನಕ್ಕಿದ್ದು ಕಂಡು
ಪಿಶಾಚಿಯೋ, ಯಾವುದೋ ದೆವ್ವ ಇವಳ ಮೆಟ್ಟಿರಬೇಕು
ಮನೆಯಲ್ಲಾ ನನ್ನನ್ನೇ ಅಟ್ಟಾಡಿಸಿಕೊಂಡು ಓಡಾಡಿಸುವುದೇ?
ಆಂಜನೇಯ, ವೀರಭದ್ರರ ಅಷ್ಟೋತ್ತರಗಳ ಹೇಳಿದರೂ
ಭಯಪಡದ ಇದೆಲ್ಲೋ... ಗಟ್ಟಿಪಿಂಡದ ಭೂತವಿರಬೇಕು
ಲೆ ಲೇ...ರುಕ್ಕೂ ... ಬೇರೆ ಯಾರೂ ಅಲ್ಲವೆ ಅಲ್ಲ ನಾನೇ
ನಿನ್ನ ಕೈಹಿಡಿದ, ತಾಳಿ ಕಟ್ಟಿದ ಗಂಡ ಕಣೇ...
ನನ್ನನ್ನ ಬಿಟ್ಟು ಬಿಡೆ ಮಾರಾಯ್ತೀ  ನಿನ್ನ ದಮ್ಮಯ್ಯಾ ....
ನನ್ನ ಅರಚಾಟಕ್ಕೆ, ಕೂಗಾಟಕ್ಕೆ ಅಕ್ಕಪಕ್ಕದವರೆಲ್ಲಾ ಬಂದು
ನನ್ನವಳ ಬಿಗಿಯಾಗಿ ಹಿಡಿದರೂ
ಹೆ ಹೇ... ಗಂಡ ಅಂತೆ ಗಂಡ, ಇವನ್ಪಿಂಡ ನಿದ್ದೆಗೆ ಜಾರಿದವಳ  ಹಾಸಿಗೆಯಲ್ಲಿ ಮಲಗಿಸಲು ಹೊತ್ತೊಯ್ಯುವಾಗ ಕಾಲಿಗೆ ಸಿಕ್ಕ
ವೈನ್ ಬಾಟಲಿಯಿಂದ ಗೊತ್ತಾಗಿದ್ದು ಇವಳ ಹುಚ್ಚಾಟವೆಲ್ಲ  ...
ಶಿವಚೆನ್ನ ೨೬.೧೨.೧೪

Sunday, December 21, 2014

ನಮ್ಮ ಗೋಳು ಯಾರು ಕೇಳುವರು ...?

ತೆಂಗಿನ ನಾರು, ಬೇರು ಕೊಕ್ಕಲಿ ಹೆಕ್ಕಿ ತಂದು
ನಾ ಚಂದದ ಗೂಡು ಕಟ್ಟಿದರಲ್ಲವೆ
ನನ್ನದೂ... ಒಂದು ಸಂಸಾರ,
ಮರಿ ಗುಬ್ಬಿಗಳ ಪರಿವಾರ
ನಿಮ್ಮಂತೆ ನಾವಿಲ್ಲ ಬಿಡಿ
ನಾಗರೀಕತೆಯ ಅಮಲಿನಲಿ
ಹುಚ್ಚೆದ್ದು ಕುಣಿವ ನಿಮ್ಮೀ ಕನಸುಗಳಿಗೆ
ನಾವು ತಾನೆ ಬಲಿ !
ಹುಳ, ಹುಪ್ಪಟೆ ಕಾಳು, ಕಡ್ಡಿಗಳ
ಒಂದೊಂದೇ ಹೆಕ್ಕಿ ತಿಂದು ಬದುಕುವ
ರೈತ ಸ್ನೇಹಿಗಳು ನಾವು....
ಮರ ಗಿಡ, ಹಳ್ಳ ಕೊಳ್ಳ,
ಕೆರೆ ಕಟ್ಟೆಗಳ ಹೊಡೆದುರುಳಿಸಿ
ಮಣ್ಣನಂಬಿ ಬದುಕುವವರ ಒಕ್ಕಲೆಬ್ಬಿಸಿ,
ಭೂಗಳ್ಳರಾದಿರಿ
ಗಗನಚುಂಬಿ ಕಟ್ಟಡಗಳ ಕಟ್ಟಿ
ಕಾಂಕ್ರೇಟ್ ಕಾಡಾಗಿಸಿದಿರಿ
ಕಾರ್ಖಾನೆಗಳು ಉಗುಳುವ ಎಂಜಲಿಗೆ
ಭೂತಾಯಿಯೂ ಮೈಲಿಗೆಯಾಗಿ
ಅಂತರ್ಜಲ ಬಸಿದು ವಿಷವಾಗಿ
ನೀರಿಗೂ... ಆಹಾಹಾಕಾರ, ಗಾಳಿಗೂ ತಾತ್ಸಾರ
ನೀವೇ ಮುಂದೊಂದು ದಿನ ಬೇಸತ್ತು
ಮುಂದಿನ ಪೀಳಿಗೆಯ ಮಕ್ಕಳಿಗೆ
ಇದೇ ಗುಬ್ಬಚ್ಚಿ ಎಂದು ನನ್ನೀ... ಭಾವಚಿತ್ರವ ತೋರಿಸುವಿರಿ ಚಿತ್ರಕೃಪೆ : Balasubrahmanya Nimmolagobba Balu

Friday, December 19, 2014

" ನನ್ನವಳ ಎದೆಗಾರಿಕೆ "

ಮೊದಮೊದಲು ಕಣ್ಣಿಗೆ ಕಂಡರೆ ಸಾಕು
ಭಯಕೆ, ಬಾಯಿ ಬಾಯ್ಬಿಡುತ್ತಿದ್ದ ನನ್ನವಳು
ಇತ್ತೀಚೆಗಂತೂ ಮೀಸೆ ತಿರುಗಿಸಿ ನಿಂತರೂ
ಎದಿರು ಬಂದು ಅಡ್ಡಾಡಿದರೂ ಹೆದರಳು
ಕೈಗೆ ಸಿಗದೆ ನುಸುಳಿ ತಪ್ಪಿಸಿಕೊಳ್ಳದಿರಲೆಂದು,
ಕೂಗಾಡುವುದ ಅಕ್ಕಪಕ್ಕದವರು ಕೇಳಿಸಿ ಕೊಂಡರೆ
ಹೊರಗೆಲ್ಲಿ ನಿಲ್ಲಿಸಿ ಕೇಳುವರೆಂದು ಮುಂದಾಲೋಚಿಸಿ
ಮಗಳಿಗೆ ಹೇಳಿ, ಎಲ್ಲಾ ಕಿಟಕಿ ಬಾಗಿಲುಗಳ ಮುಚ್ಚಿಸಿ
ನಿನಗೆ ಇಂದು ಕಾದಿದೆ ಬಾರೋ ಮಾರಿಯ ಹಬ್ಬ
ಒಂದು ಕೈ ನೋಡಿಯೇ ಬಿಡುವ, ನಾನೋ ನೀನೋ
ಒಟ್ಟಿನಲ್ಲಿ ನಾನಿರಬೇಕು ಅಥವಾ ನೀನಿರಬೇಕು ಈ ಮನೆಯಲ್ಲಿ ; ನಿನ್ನದೋ ಇಲ್ಲಾ ನನ್ನದೋ ಪಾರುಪತ್ಯ ಎಲ್ಲರಿಗೂ ತಿಳಿಯಲಿ ಕೈಯಲ್ಲಿ ಪೊರಕೆ ಹಿಡಿದು ಹೂಂಕರಿಸಿ, ಝೇಂಕರಿಸಿ ರಣಚಂಡಿಯಂತೆ ಒಮ್ಮೆ ನಿಂತರೆ,
ಇದ ಕಂಡು ಅಳ್ಳೆದೆಯವನೂ ಕೂಡ ಗಡಗಡ ನಡುಗ ಬೇಕು !

ತಾಯಿ ಮಗಳಿಬ್ಬರೂ ಹತ್ತಾರು ಜಿರಳೆಗಳ ಬಡಿದು ವೀರಾವೇಶದಿಂದ ನನ್ನತ್ತ ನೋಡಿ ನಗೆ ಬೀರಿದ್ದ ಕಂಡು ನನ್ನೊಳಗೊಳಗೇ......... ಅಸಹಾಯಕ ನಿಟ್ಟುಸಿರು ;
ಹಾಳಾದ್ದು ಈ ಜಿರಳೆಗಳಿಂದಾಗಿಯೇ ನನ್ನವಳಿಗೆ ಇಷ್ಟೆಲ್ಲಾ ಎಲ್ಲಿಲ್ಲದ ಭಂಡ ಧೈರ್ಯ ಬಂದದ್ದು ಎಲ್ಲಾ ನನ್ನ ಗ್ರಹಚಾರ, ದುರದೃಷ್ಟ ನೋಡಿ ಇಂದು ಎಲ್ಲಾ ತಲೆಕೆಳಕಾಗಿ ಬುಡಮೇಲಾಗಿದೆ ಮೊದಲಾಗಿದ್ದರೆ ಹೆದರಿ ಓಡೋಡಿ ಬಂದು ನನ್ನೆದೆಗೆ ಒರಗಿ ಕಣ್ಮುಚ್ಚುತ್ತಿದ್ದ ನನ್ನವಳು ಇಂದು
ಜಿರಳೆಗಳ ಪಾಲಿಗೆ " ರಣಚಂಡಿ " !!!

Monday, December 15, 2014

" ಬೇಡ ಸ್ವಾಮಿ ನನ್ನ ಫಜೀತಿ " ೧೦೬


ರ್ರೀ....  ಸ್ವಲ್ಪ ಬೆಡ್ ರೂಮಿಗೆ ಬರ್ತೀರ ನೀವು
ನಿಮಗೆ ಏನೋ ಸರ್ಪೈಜ್ ಗಿಫ್ಟ್ ಕೊಡುವುದಿದೆ
ಮೋಹಕವಾಗಿ ನಕ್ಕವಳ ಕಂಡು ಒಂದು ಕ್ಷಣ ಖುಷಿಯಾಗಿ ಮರುಕ್ಷಣ ನನ್ನೊಳಗೆ ಎಂದಿಲ್ಲದ ಭಯದ ನಡುಕ ಶುರುವಾಗಿ
ಇಂದೆನಗೆ ಏನು ಕಾದಿದೆಯೋ ... ತಂದೆ ವೆಂಕಟರಮಣ
ಕಟುಕ ಕುರಿ ಕಡಿಯುವ ಮೊದಲು ಹೀಗೆಯೆ ಕುರಿಗೆ ಹುಲ್ಲು ಹಾಕುವುದು
ನಾ ಬಲಿಕ ಬಕರ ಆಗದಿದ್ದರಷ್ಟೇ.... ಸಾಕು !!
ಅಪ್ಪಿತಪ್ಪಿ ನಾ ಇವಳ ಏಕೆ, ಏನೆಂದು ಕೇಳಲಾದೀತೆ ?
ದಮ್ಮಯ್ಯಾ....ಅಂದರೂ ನನಗೆ ಹೇಳುವಳೆ ?
ತರ್ಕ ವಿತರ್ಕಗಳ ಹೋಯ್ದಾಟದಲಿ ಮುಳುಗಿದವನಿಗೆ
ನಿಮ್ಗೆ ಒಳ್ಳೆಯ ಮಾತಲ್ಲಿ ಹೇಳಿದ್ರೆ ನೀವೆಲ್ಲಿ ಕೇಳ್ತೀರಿ
ಕೊಡುವುದ ಕೊಟ್ಟರೆ ಆಗ ಹೇಳಿದಂತೆ ಕೇಳುವಿರಿ
ರ್ರೀ... ಎಷ್ಟು ಹೊತ್ತು ಬನ್ರೀ ಸುಮ್ಮನೆ ಬಿಲ್ಡಪ್ ಬೇರೆ
ಬ ಬ ಬಂದೆ ಕಣೇ....  ಮಕ್ಕಳ ಮುಂದೆಯೇ ನೀ ಹೀಗೆಲ್ಲಾ
ನನ್ನ ಮೇಲೆ ರೇಗಿ, ಕೂಗಾಡ ಬೇಡವೇ... ಮಾರಾಯ್ತಿ
ಪಪ್ಪಾ .... ಇಂದಿದೆ ನಿಮಗೆ ಹೋಗಿ ಹೋಗಿ... ಹಬ್ಬ;
ಅಮ್ಮನ ಕೈಯಲ್ಲಿ ಭರ್ಜರಿ ಬಹುಮಾನ ಹ್ಹಹ್ಹಹ್ಹಹಾ 
ಮೋದಲೇ... ನಾ ಹೆದರಿರುವಾಗ ಇವನು ಬೇರೆ
ನೋಡೇ... ನಿನ್ನ ಮಗ ಹೇಗೆ ಹಂಗಿಸಿ ನಗುತ್ತಿರುವ
ಮನೆಯವರೇ... ಹೀಗೆ ಇನ್ನು ಅಕ್ಕಪಕ್ಕದವರು ನನ್ನನ್ನ
ಆಡಿಕೊಂಡು ಊರ ತುಂಬ ಹೇಳಿಕೊಂಡು ನಗದಿರುವರೆ...??
ನೀ ಬ ಬ ಬಾಗಿಲು ಹಾಕಿದ್ದಾದರು ಏತಕ್ಕೆ....?!!
ನನ್ನಿಂದೇನೂ... ತಪ್ಪಾಗಿಲ್ಲವೆ, ನನ್ನ ನಂಬೇ ನೀನು
ಏನೋ....  ಪಕ್ಕದ ಮನೆಯ ಆ ಪಂಕಜಾಕ್ಷಿ
ಪೂಜೆಗೆ ಹೂ ಬೇಕೆಂದಳು ಒಂದಷ್ಟು ಕಿತ್ತು ಕೊಟ್ಟೆ
ಇಷ್ಟಕ್ಕೆ ನೀ ಹೀಗೆಲ್ಲ ನನ್ನ ಅನುಮಾನಿಸುವುದೆ..?
ಹಾಳಾದ್ದು ಬಾಯೆಲ್ಲ ಒಣಗಿ, ಮೈಯೆಲ್ಲಾ ಬೆವರು ಹರಿದು
ಇವಳ ಬತ್ತಳಿಕೆಯಲ್ಲಿ ಸೌಟು, ಲಟ್ಟಣಿಗೆ, ಚೆಂಬು, ಪೊರಕೆ
ಬರದಿದ್ದರೆ ನಿನಗೆ ಮುಡಿ ಕೊಡುವೆ ತಂದೆ ತಿಮ್ಮಪ್ಪಾ...
ಹೊಸ ಪ್ಯಾಂಟು ಶರ್ಟ್ ಕೈಗಿತ್ತು
ಹ್ಯಾಪಿ ಬರ್ತಡೆ ಟು ಯು ರ್ರೀ..... 
ಹ್ಯಾಪಿ ಬರ್ತಡೆ ಟು ಯೂ  ಎನ್ನಬೇಕೆ ?!
ಶಿವಚೆನ್ನ ೧೬.೧೨.೧೪

Sunday, December 14, 2014

ಬಾ ಬಾ ಮಗಳೇ....


ನನ್ನ ಮಗಳೆಂದರೆ
ಮನದಿ ಏನೋ ಹರುಷ
ನವ ಉಲ್ಲಾಸ ಉಕ್ಕಿ ಹರಿವುದು
ಈ ಎದೆಯೊಳಗೆ, ಮನೆಯೊಳಗೆ
ಮಮಕಾರದ ಮಿಡಿತ, ತುಡಿತ
ಕಣ್ಗಳಲಿ ಭರವಸೆಯ ಕೋಲ್ಮಿಂಚು
ನನ್ನದೇ ರಕ್ತ ಮಾಂಸಗಳ
ಹೊತ್ತ ಜೀವಂತ ಗೊಂಬೆ
ಅರೆರ್ರೇ.... ಬಿಟ್ಟ ಕಣ್ಗಳ ಬಿಟ್ಟಂತೆ
ನೀವು ಯಾರೂ ನೋಡದಿರಿ
ಕಾಕ ದೃಷ್ಟಿಯಾದೀತು
ನಳನಳಿಸುವ ಚಂದ್ರವದನ
ಶೀತಲ ಕಿರಣ ನಗೆಯಾಭರಣ
ಹೊಳೆವ ಬಣ್ಣದ ಲಂಗವ ತೊಟ್ಟು
ಗೆಜ್ಜೆ ಕಾಲ್ಗಳಲಿ ನೆರಿಗೆ ಚಿಮ್ಮಿಸುತ
ನಡೆದು ಬರುವ ಅವಳ ದಾರಿಗೆ
ಎಂದೂ ಯಾರೂ ಅಡ್ಡಡ್ಡ ಬರದಿರಿ 

Thursday, December 4, 2014

" ಕಾಮಹರಣ " ಮಾತ್ರೆಗಳು

ಇನ್ಮುಂದೆ ಮಹಿಳೆಯರು ಕಾಮುಕರಿಂದ ಆತಂಕ ಪಡಬೇಕಿಲ್ಲ, ದೌರ್ಜನ್ಯಗಳಿಗೆ ಎದೆಗುಂದಬೇಕಿಲ್ಲ, ಕಣ್ಣೀರು ಸುರಿಸಬೇಕಿಲ್ಲ. ಇಲ್ಲಿದೆ ಅಡ್ಡ ಪರಿಣಾಮಗಳಿಲ್ಲದೆ ಜೀವನೋತ್ಸಾಹ ತುಂಬುವ ಧೈರ್ಯದ ದಿವ್ಯೌಷಧಿ. ಮಹಿಳೆಯರಿಂದಲೇ ಮಹಿಳೆಯರಿಗೋಸ್ಕರ ಗಿಡಮೂಲಿಕೆಗಳಿಂದ ತಯಾರಿಸಿದ ಸಿದ್ದೌಷಧ " ಕಾಮಹರಣ ಗುಳಿಗೆ " ( capsules ) ಮಕ್ಕಳಿಂದಿಡಿದು, ಬಾಲಕೀಯರು, ಮದುವೆಯಾಗದ ಯುವತಿಯರು ಉಪಯೋಗಿಸುವ ಸರಳ ಮಾತ್ರಗಳು. ತಿಂಗಳಿಗೆ ಒಂದರಂತೆ ಬೆಳ್ಳಂಬೆಳಿಗ್ಗೆ ಒಂದು ಲೋಟ ಹಾಲಿನಲ್ಲಿ ಸೇವಿಸದರೆ, ಯಾವ ಕಾಮಾಂಧನೂ ಬಳಿ ಬರಲಾರ ಇದು ಅತಿಷಯೋಕ್ತಿಯೂ ಅಲ್ಲ, ಉತ್ಪ್ರೇಕ್ಷೆಯೂ ಅಲ್ಲ ಈಗಾಗಲೇ ನಮ್ಮ ಪ್ರಯೋಗಗಳಿಂದ ದೃಡಪಟ್ಟಿದೆ. ನಿಮ್ಮಲ್ಲಿನ ಅಂತಃಸತ್ವ ( Stamina ) ಹೆಚ್ಚುಮಾಡುವುದಲ್ಲದೆ ನಿಮ್ಮ ಉಗುರುಗಳೇ ಕಾಮುಕರಿಗೆ ಶಾಶ್ವತ ಷಂಡತನ ಉಂಟು ಮಾಡುವ ಬ್ರಹ್ಮಾಸ್ತ್ರವಾಗಿ ಪರಿಣಮಿಸುವುದು. ಕಾಮಹರಣ ಮಾತ್ರೆಗಳಿಗಾಗಿ ಕೂಡಲೇ ನಮ್ಮ ದೂರವಾಣಿಗೆ ಸಂಪರ್ಕಿಸಿ ಅಥವಾ ಈ ಕೆಳ ಕಂಡ ಕಂಪನಿಯ ಅಕೌಂಟಿಗೆ ಹಣ ಸಂದಾಯ ಮಾಡಿ ಮಾತ್ರೆಗಳ ಬಾಟಲಿಯ ಪಡೆಯಿರಿ. ಹನ್ನೆರಡು ಮಾತ್ರಗಳ ಬೆಲೆ ಕೇವಲ ನೂರು ರೂ ( ಅಂಚೆ ವೆಚ್ಚ ಸೇರಿ ).

Tuesday, December 2, 2014

ನೀ ಯಾರಿಗಾದೆಯೋ.... ಎಲೆಮಾನವ !!

ಗಿಡವಾಗಿ, ಮರವಾಗಿ
ನೆರಳಾಗೊ ಹೆಮ್ಮರವಾಗದೆ
ನೀ ಯಾರಿಗಾದೆಯೋ ॥
ಗಿರಿ ತೊರೆಯ ಹರಿವ ನೀರಾಗಿ
ಹರಿಯ ಚರಣವ ತೊಳೆಯದೆ
ನೀ ಯಾರಿಗಾದೆಯೋ ॥
ಕಸ ತಿಂದರೂ ಹಾಲ ನೀಡೊ
ಹಸಿವ ನೀಗೊ ಹಸುವಾಗದೆ
ನೀ ಯಾರಿಗಾದೆಯೋ ॥
ನವ ಮಾಸಗಳು ಹೊತ್ತೆತ್ತು
ಹೆಣ್ಣಾಗಿ ಮಮತೆಯ ತಾಯಾಗದೆ
ನೀ ಯಾರಿಗಾದೆಯೋ ॥
ಮಂದ ಮಾರುತದಿ ಹೊತ್ತು ತಂದ
ಕುಸುಮಗಳ ಸುಗಂಧವಾಗದೆ
ನೀ ಯಾರಿಗಾದೆಯೋ ॥
ಜೀವ ಸಂಕುಲಕೆ ನವ ಚೈತನ್ಯವ
ಬಿಸಿ ಬಸಿರ ನೀಡೊ ರವಿಯಾಗದೆ
ನೀ ಯಾರಿಗಾದೆಯೋ ॥