Saturday, October 31, 2015

' ಮೊದಲ ಪ್ರೀತಿಯ ಹಾಡು '


ಮೊದಮೊದಲು ನಮ್ಮಿಬ್ಬರ
ಕಣ್ಕಣ್ಗಳು ಕಲೆತ ಸುಸಮಯ
ಮನದಲ್ಲಿ ನೂರು ಭಾವ ಗರಿಗೆದರಿ
ಹೇಳಲೇಕೊ ನಮ್ಮೊಳಗೆ ವಿಸ್ಮಯ
ತುಟಿಯಂಚಲಿ ನಗು ಮಿಂಚಿ ಮರೆಯಾಯ್ತು
ಕಣ್ಣಂಚಲಿ ಕಂಡ ಕನಸು ಮಿನುಗಿ ಬೆರಗಾಯ್ತು 
ಅಲೆಯುಲಿಯುವ ಅನುರಾಗವೋ
ಆಕರ್ಷಣೆಯ ಆರಂಭವೋ...
ಚೈತ್ರದಲಿ ಮಾವು ಚಿಗುರಿ
ಕೋಗಿಲೆಯ ತಾ ಕರೆದಂತೆ
ಹೊಂಗೆಯ ಹೂ ಬಾಣಕೆ
ಆ ದುಂಬಿ ಹೆದರಿ ಮನ ಸೋತಂತೆ
ನೀ ಬಂದೆ ಆ ಬೆಳ್ಮುಗಿಲ ಬೆಳಕ
ನಾಚಿಸೋ... ಚಂದ್ರಿಕೆಯಂತೆ

Saturday, August 15, 2015

ಬೇಡ ಸ್ವಾಮಿ ನನ್ನ ಫಜೀತಿ

ಎಂದೂ... ನಮಸ್ಕರಿಸಿ,
ಪಾದಪೂಜೆ ಮಾಡದ ನನ್ನವಳು
ಬೆಳ್ಳಂ ಬೆಳಿಗ್ಗೆಯೇ ದೀರ್ಘದಂಡ ಬಿದ್ದಾಗಲೆ
ಹಿಂದು ಮುಂದು ಯೋಚಿಸಿ, ಆಲೋಚಿಸದೆ
ನಾ ಎಚ್ಚೆತ್ತು ಕೊಳ್ಳಬೇಕಿತ್ತು ;
ಮೋಹಕ ನಗೆ ಬೀರಿದಳೆಂದು ಉಬ್ಬಿ
ಏನೇನೋ ಲೆಕ್ಕಾಚಾರಗಳೆಲ್ಲ ಹಾಕಿ
ಮನಸಾರೆ ನೂರಾರು ಕನಸುಗಳ ಕಂಡು
ಬಾಯಿ ಚಪ್ಪರಿಸಿದ್ದು ನನ್ನದೇ ತಪ್ಪು
ಇದೆಲ್ಲ ನನಗೆ ಬೇಕಾಗಿತ್ತೆ ?
ಜೋರಾಗಿ ಆಡಿ ಕೊಳ್ಳುವಂತಿಲ್ಲ
ನೋವ ನುಂಗಿಕೊಳ್ಳದೆ ಬೇರೆ ಗತಿಯಿಲ್ಲ
ಎಲ್ಲರಿಗೂ ಎಲ್ಲಿ ಗುಟ್ಟು ತಿಳಿಯುವುದೋ...
ಎಂಬ ಭಯಕೆ ಅಂಜಿ,
ಒಂದೇ ಸಮನೆ ಅಕ್ಕಿಯ ರುಬ್ಬಿರುಬ್ಬಿ
ಕೈಕಾಲು, ಸೊಂಟ ಜೋತು ಬಿದ್ದಿರುವಾಗ
ನನ್ನವಳ ಶಪಿಸಿ ಬದುಕುವುದು ಉಂಟೇ ?!
ರ್ರೀ.... ಎದ್ದೇಳ್ರಿ ಸಾಕು ಮಲಗಿದ್ದು ಎಂದಾಗಲೆ ಎದ್ದದ್ದು
ಸಧ್ಯ ಇದು ನಾ ಕಂಡ ಕನಸೇ....?!!
ಚಿತ್ರಕೃಪೆ: ಶೈಲು
ಶಿವಚೆನ್ನ ೧೫.೦೮.೧೫

Friday, May 15, 2015

ಬೇಡ ಸ್ವಾಮಿ ನನ್ನ ಫಜೀತಿ !!

ಇತ್ತೀಚೆಗಂತು ಈ ನನ್ನ ಮನಸ್ಸಿಗೆ
ತತ್ ಕ್ಷಣಕ್ಕೆ ಏನೂ  ಹೊಳೆಯುವುದೇ ಇಲ್ಲ !!
ಸಂಸಾರ, ಆಫೀಸಿನ ಕೆಲಸ ಕಾರ್ಯಗಳ ಒತ್ತಡದಲ್ಲಿ
ಹೇಗೆ ತಾನೆ ಎಲ್ಲಾ.... ನೆನಪಿಗೆ ಬಂದೀತು
ಮರೆವಿನ ಖಾಯಿಲೆಯಂತೂ ಇಲ್ಲವೇ.... ಇಲ್ಲ ಬಿಡಿ
ನನಗೆ ವಯಸ್ಸಾಯಿತೆಂದು ಕೊಂಡಿರೋ... ಹೇಗೆ ?
ಮೊನ್ನೆಯಷ್ಟೆ ಮೂವತ್ತು ತುಂಬಿ ಮೂವತ್ತೊಂದಕ್ಕೆ ಕಾಲಿಟ್ಟಿದ್ದು
ನೀವೆಲ್ಲ ಬಂದು ಹರಸಿ, ಶುಭಾಶಯಗಳಿಂದ ಹಾರೈಸಿದ್ದು
ಹಳೆಯದ್ದನ್ನೆಲ್ಲ ಒಂದೊಂದೆ ಕೆದಕಿ ಕೆದಕಿ ಯೋಚಿಸಿ
ಆಲೋಚಿಸಿದಷ್ಟು ಎಲ್ಲವೂ ಗೊಜಲು ಗೊಜಲು ;
ಹಾಳಾದ್ದು ಒಂದೂ ನೆನಪಿಗೆ ಬರದು....
ಲೇ... ಭಾಮ, ಇಂದೇನಾದರು ವಿಶೇಷವೇನೇ...?!
ಹಬ್ಬ, ಹರಿದಿನವಂತು ಇಲ್ಲವೇ ಇಲ್ಲ
ನಮ್ಮ ಮದುವೆಯ ವಾರ್ಷಿಕೋತ್ಸವದ ದಿನವು ಅಲ್ಲ !!
ಹೋಗಲಿ ಊರಿನಿಂದ ನಿನ್ನ ಅಪ್ಪ ಅಮ್ಮ
ನಿನ್ನ ಅಷ್ಟೂ ... ಬಂಧು ಬಳಗ ಬರುವರೆ ?
ನನ್ನವಳ ಮುಗುಳ್ನಗೆಯೇ... ಉತ್ತರ, ಪ್ರತ್ಯುತ್ತರ
ಎಲ್ಲದಕ್ಕೂ .... ಸಸ್ಪೆನ್ಸ್ ಸಸ್ಪೆನ್ಸ್ !!
ಇಷ್ಟೆಲ್ಲಾ ... ಘಮಘಮ ಅಡುಗೆಯ ಮಾಡಿಟ್ಟು
ಬಡಿಸದೆ ಅತ್ತಿಂದಿತ್ತ ಓಡಾಡುವೆಯಲ್ಲೇ...
ಹೊಟ್ಟೆಯೊಳಗೆ ಹಸಿವಿನ ರುದ್ರ ನರ್ತನಕೆ
ನನ್ನ ಕೈಕಾಲೇ ಆಡುವುದಿಲ್ಲವೇ... ಮಾರಾಯ್ತಿ
ಇನ್ನೆಲ್ಲಿ ನೀ ಹೇಳಿದ್ದೆಲ್ಲ ನಾ ಹೋಗಿ ತರಲಿ
ರ್ರೀ ... ಸುಮ್ಮನೆ ಹೋದರೆ ಸರಿ
ಇಲ್ಲದಿದ್ದರೆ ಗೊತ್ತಲ್ಲ "ಲಟ್ಟಣಿಗೆಯ ಪೂಜೆ "

ಇದರ ಮುಂದುವರೆದ ಭಾಗ ಇನ್ನೂ ...... ಇದೆ

Saturday, May 9, 2015

" ತಾಯಿಯೇ.... ದೇವರು "

ಕಲ್ಲಾಗಿಹ
ಕಾಣದ ದೇವರ
ಗುಡಿಯೊಳಗಿಟ್ಟು
ಬಗೆ ಬಗೆ ಹೂಗಳ ಅರ್ಪಿಸಿ,
ಧೂಪದಿ, ದೀಪದಿ ಬೆಳಗುತ
ಸ್ತುತಿಸುತ ಜನರು ಪೂಜಿಪರು
ಕಣ್ಣಿಗೆ ಕಾಣುವ
ಹೊತ್ಹೆತ್ತು, ತುತ್ತಿತ್ತ
ತಾಯಿಯೇ ದೇವರೆಂದು
ಅರಿಯದೆ ಅವಳ ನೆನೆಯದೆ
ಮಡದಿ, ಮಕ್ಕಳ ಮೋಹದಲಿ
ಮುಪ್ಪಿನ ಕಾಲಕೆ
ಹಿಡಿ ಅನ್ನವ ನೀಡದೆ
ಮೂಲೆಗೆ ಅವಳನೆ ನೂಕುತ
ಮೂಢರ ಹಾಗೆ ವರ್ತಿಸುವರು

Saturday, April 4, 2015

" ಬಾರೆ ಬಾ ಬಾರೆ ನಿನ್ನೊಲವ ಮುಖ ತೋರೆ "

ಒಲಿದು ಬಾ ನನ್ನೊಲವೆ, ಇಳಿದು ಬಾ ನನ್ನೊಲುಮೆ
ವರಿಸು ಬಾ ಬಾರೆ.... ನನ್ನ ಅತ್ತೆಯ ಮಗಳೇ...
ಈ ಮುನಿಸು ಇನ್ನೇಕೆ ತರಳೆ, ಬಿಡು ಇನ್ನು ನೀ ರಗಳೆ
ಉದ್ಧರಿಸು ಬಾ ಬಾರೆ ಆ ಚಂದ್ರಮನ ಮಗಳೇ...
ನಿನಗಾಗಿ ನಾ ಬಂದಿರುವೆ, ನಿದಿರೆಯ ತೊರೆದೆದ್ದು ಬಾ
ನಿನಗಾಗಿ ಕಾದಿರುವೆ, ಕನಸಗಳ ಹೊದೆದ್ದು ನೀ.... ಬಾ
ನೀ ಹೀಗೆ ನನ್ನ ಕಣ್ಣಲ್ಲೆ ಕೊಲ್ಲದೆ, ನಿಂತಲ್ಲೇ ನೀ ನಿಲ್ಲದೇ
ನೀ ಓಡೋಡಿ ಬಂದೆನ್ನ ಬರಸೆಳೆದು ಅಪ್ಪು ಬಾ ...
ಆ ನಿನ್ನ ಹೊನ್ನ ಕಾಲ್ಗೆಜ್ಜೆಯ ನೂಪುರದಲಿ,
ನುಲಿನುಲಿದು ಮತ್ತೇರಿಸೋ.. ಭಾವಭಂಗಿಯಲಿ
ಕುಹೂ ಕುಹೂ ಗಾನ ಕಂಠದಲಿ ಬಾ ಬಾರೆ ಬಾ...
ಈ ನನ್ನ ಬಾಳಿನಲಿ, ಕೈಹಿಡಿದು ನಡೆಸುತಲಿ
ನೀ ನನ್ನ ಸಿರಿ ದೇವಿಯಾಗು ಬಾ ಬಾ
ಬಾರೆ ಬಾ.... ಮನ ಮಂದಾರ ನೀನಾಗು ಬಾ ...
ಧಣಿದ ಮನಕ್ಕಿಂದು, ಧಗೆಗೆ ಮನ ನೊಂದು ಸೋತು
ಬಳಲಿ ಬೆಂಡಾಗಿ, ನಿನಗಾಗಿ ಹಾತೊರೆಯುತ್ತಿರುವೆ 
ನಿನ್ನೊಲವ ಮಳೆ ಹನಿಗಳ ಸುರಿ ಸುರಿಸು ಬಾ ..
ನೀನಿರದ ಈ ಜಗವು ನನಗೇಕೆ, ನೀನಿರದ ಕನಸುಗಳಿನ್ನೇಕೆ
ನೀ ಬರದೆ ಈ ಬಾಳು ಬೆಳಕಾಗಿ ಹಾಲ್ಬಳದಿಂಗಳಾಗದೇ
ಬಾರೆ ಬಾ ನೀ ಉಸಿರ ಉಸಿರಾಗಿ ಜೊತೆಯಾಗು ಬಾ ..

Saturday, March 21, 2015

" ಅವಮಾನ "

ಅಪ್ಪಿತಪ್ಪಿ ಬಾಯಿತಪ್ಪಿ
ನಾನೆ ನನ್ನವಳಿಗೆ ಮಗಳ ವಿಷಯವ
ಎಲ್ಲಿ ಹೇಳಿಕೊಳ್ಳುವೆನೋ.... ಎಂಬ ಭಯಕೆ,
ಆತಂಕದಿ ಏನೂ ಮಾಡಲಾಗದ ನನ್ನೀ ಸಂದಿಗ್ದತೆಗೆ
ನೆನೆನೆದು ಅಳುತ ಕುಳಿತಲ್ಲಿಯೇ.... ಒದ್ದಾಡಿದ್ದೆ
ನೀ ಹೊತ್ಹೆತ್ತ ಮಗಳು ಯಾರದೋ ಜೊತೆ
ಕದ್ದು ಮದುವೆಯಾಳೆಂದು ಹೇಗೆ ತಾನೆ ಹೇಳಲಿ?
ಇದ ಕೇಳಿ ಸುಮ್ಮನಿರುವಳೆ ? ಅವಮಾನ ಸಹಿಸುವಳೆ
ಪ್ರಾಣ ಬೇಕಾದರು ಬಿಟ್ಟಾಳು ...
ಆಪ್ತ ಮಿತ್ರ ತಮಾಷೆಗೆ ಹೇಳಿದ್ದಾಗಲಿ ಅಲ್ಲ
ಫೋಟೊ ತೋರಿಸಿ, ಸಂತೈಸಿ ಮನೆಗೆ ಕರೆದೊಯ್ದಿದ್ದ ;
ತಾಳಿಗೆ ಕೊರಳೊಡ್ಡುತ್ತಿರುವ ಮಗಳ ಮುಖ ಕಂಡು
ಎದೆಯೊಳಗೆ ಎದ್ದ ಕೋಲಾಹಲದ ಅಗ್ನಿವರ್ಷಧಾರೆಗೆ
ಎದೆಯೊಡೆದು ನಾ ಇಲ್ಲೇ... ಸಾಯಬಾರದೆ ?
ಈ ಭೂಮಿ ಬಾಯ್ಬಿಟ್ಟು ನುಂಗಬಾರದೆ ?
ಹೊತ್ತು ತುತ್ತಿಟ್ಟವರೂ ಇವಳಿಗೆ ನೆನಪಾಗಲಿಲ್ಲವೆ ?
ಒಬ್ಬಳೇ ... ಮುದ್ದಿನ ಮಗಳೆಂದು ಸಲುಗೆ ಇತ್ತದೇ ತಪ್ಪಾಯ್ತೆ ?
ಗೆಳತಿಯ ಮದುವೆ ಇದೆಯಂದು ನಂಬಿಸಿ ಹೋದವಳು
ಇವಳ ಮದುವೆಗಾಗಿಯೆ ? 
ನೆರೆಹೊರೆಯವರು, ಬಂಧು ಬಳಗ, ಸ್ನೇಹಿತರು
ಕೇಳಿದರೆ ನಾ ಹೇಗೆ ಉತ್ತರಿಸಲಿ ?
ಯಾವ ತಂದೆತಾಯಂದಿರಿಗೂ ಇಂತಹ ಪರಿಸ್ಥಿತಿ ಬರದಿರಲಿ
ಇದ್ದೊಬ್ಬ ಮಗಳು ಸತ್ತಳೆಂದು
ಒಂದಷ್ಟು ದಿನ, ವರ್ಷಗಳ ಕಾಲ
ಅತ್ತು ಗೋಳಾಡುತ ಮರೆಯಬಹುದಿತ್ತು;
ಅವರಿವರು ಬಂಜೆ ಎಂದು ನನ್ನವಳ
ಕನಿಕರಿಸಿ ಹೀಗೆಳೆಯುವಾಗ ಮನ ನೊಂದರೂ
ನಾವಿಷ್ಟೇ..  ಪಡೆದ ಪುಣ್ಯದ ಫಲವೆಂದು
ನಿಟ್ಟುಸಿರಿನ ರಾತ್ರಿಗಳ ದೂಡುತ ಕಳೆಯಬಹುದಿತ್ತು
ಕಂಡಕಂಡ ಗುಡಿಗೋಪುರಗಳ ಸುತ್ತಿ,
ಬೆಟ್ಟ ಗುಡ್ಡಗಳ ಹತ್ತಿ, ವ್ರತನೇಮಾಧಿಗಳಿಂದ
ಕಾಣದ ದೇವರುಗಳಿಗೆ ಹರಕೆ ಹೊತ್ತು
ಸಾವು ಬದುಕಿನ ನಡುವೆ ಹೋರಾಡಿ ಹೆತ್ತ
ನನ್ನವಳ ಕೂಗು ಈಗಲೂ ನನ್ನೊಳಗೆ ಪ್ರತಿಧ್ವನಿ !!

Tuesday, February 24, 2015

ಇದೆಲ್ಲಾ ನನಗೆ ಬೇಕಿತ್ತೇ...?

ನನ್ನ ಅಪ್ಪ, ಅಮ್ಮ
ನನಗೆ ಏಕಾದರು
ಇಂತಹ ಹೆಸರಿಟ್ಟರೋ... !!
ಅಣ್ಣಯ್ಯ ಎಂದು,
ಇದು ನನಗೆ ಬೇಕಿತ್ತೇ... ??
ಕಿರಿಯರಿಂದಿಡಿದು
ಹಿರಿಯರಾದಿಯಾಗಿ
ನನ್ನ ಹೆಸರಿಡಿದು ಕರೆಯುವಾಗ
ನನಗೋ ಎಲ್ಲಿಲ್ಲದ ಖುಷಿ
ನಾ ಎಷ್ಟೆಲ್ಲಾ ಬೀಗಿದ್ದೆ ;
ಮದುವೆಯ ಮೊದಲ ರಾತ್ರಿಯಲಿ
ನನ್ನವಳು ಹಾಲಿಡಿದು, ಹಲ್ಕಿರಿದು
ಬಳುಕಿ ವಯ್ಯಾರದಿ ಬರುವಾಗ
ನಾ ಏನೇನೋ ಕನಸ ಕಂಡಿದ್ದೆ;
ಹಾಲು ಕುಡಿದು, ಬಾಯಿ ಒರಸಿ
ಹುಸಿ ನಗೆಯ ಬೀರಿದ್ದೆ...
ನಾ ಇಂದು ಪರಮಸುಖಿ ಎಂದು
ನನ್ನವಳು ಮೆಲ್ಲನೆ ಬಳಿ ಬಂದು
ಅಣ್ಣಯ್ಯಾ... ಎಂದು ಉಸಿರಿದಾಗಲೇ...
ಏರಿದ್ದ ಬಿಸಿ ಜರ್ರನೆ ಇಳಿದಿದ್ದು...
ಮೊದಲಿನವಳಾಗಿದ್ದರೆ ಎಷ್ಟೋ ... ಚೆನ್ನಿತ್ತು
ಅಣ್ಣಯ್ಯ ಎಂದು ಕರೆವಾಗಲೆಲ್ಲಾ
ಮೈ ಮನಸ್ಸೆಲ್ಲ ಮುಳ್ಳೆದ್ದು
ಛೇ... ಇವಳ ಜೊತೆ ಸಂಸಾರವೇ?
ಅರಚಾಡಿ, ಕಿರುಚಾಡಿ ತೊರೆದು
ದೊಡ್ಡಮ್ಮನ ಮಗಳ ಮಗಳ
ಬಾಳ ಬೆಳಗಬಹುದೆಂದು
ವರಿಸಿದ್ದು ನನ್ನದೇ ತಪ್ಪು
ಎಲ್ಲವೂ ನನ್ನ ದುರಾದೃಷ್ಟ
ಮೊದಲಿನವಳಾಗಿದ್ದರೆ
ಅಣ್ಣಯ್ಯ ಎಂದು ಕರೆವಾಗಲೆಲ್ಲ
ಕಿವಿಗೆ ಅರಳೆಯನಿಟ್ಟು
ಜೀವನಪೂರ ಸುಖಿಸಬಹುದಿತ್ತು
ಆ ಹಾ....!! ಎರಡನೆಯವಳೋ....
ರ್ರೀ ... ಎನ್ನುವುದಿರಲಿ, ಹೆಸರಿಡಿದು ಕರೆಯದೆ
ಲೋ... ಮಾವಾ... ಕರೆದದ್ದು ಕೇಳಿಸದೆ
ನಿನ್ನ ಕಿವಿಗೇನು ' ಬಾವ '
ಎನ್ನುವಳಲ್ಲಾ .... ನನ್ನನ್ನೇ ..!!

Friday, February 13, 2015

ಮತ್ತೊಂದು ಮದುವೆ ನನಗೆ ಬೇಕೆ ನೀವೇ....ಹೇಳಿ ?


ಎಷ್ಟೋ ನೀರವ ನಿದ್ದೆಗಳಿಲ್ಲದ ಅಹೋ.. ರಾತ್ರಿಗಳು
ನನ್ನವಳ ನೆನಪುಗಳ ನಿಟ್ಟುಸಿರಿನ ಬೇಗೆಯಲ್ಲಿ
ನನ್ನ ಹಣೆಬರಹವನ್ನೆಲ್ಲಾ...  ಹಳಿಯುತ, ಅಳುತ
ನನ್ನೀ... ಅಸಹಾಯಕ ಸ್ಥಿತಿಯನ್ನೆಲ್ಲ
ಯಾರಿಗೆ ತಾನೆ ಮನಬಿಚ್ಚಿ ಹೇಳಿಕೊಳ್ಳಲಿ ?
ನಾ ಹೇಗೆ ತಬ್ಬಲಿಯಾದ ಈ ಕಂದನ ನಿಭಾಯಿಸಲಿ ?
ದಿಕ್ಕೇ.... ತೋಚದೆ ಯೋಚಿಸಿ ಯೋಚಿಸಿ ಸಾಕಾಗಿ
ನನಗಲ್ಲದಿದ್ದರು ಈ ಮುದ್ದು ಕಂದನಿಗಾಗಿ
ನಾ ಮರು ಮದುವೆಯ ಆಗಲೇ.... ಬೇಕು
ಛೇ....!! ನನ್ನ ಕಂದನಿಗೆ ಮಲತಾಯಿಯ ತರುವುದೆ ?!
ನನ್ನನ್ನ, ನನ್ನ ಕಂದನನ್ನ ಒಪ್ಪಿ ಬಂದವಳು
ಹೊತ್ತೆತ್ತವಳಂತೆ ನೋಡಿಕೊಳ್ಳುವಳೆ, ಆದರಿಸುವಳೆ ?
ಬೇಡವೇ.... ಬೇಡ, ಮತ್ತೆಂದಿಗೂ ಈ ಯೋಚನೆಯೇ ಬೇಡ
ಅಳುವ ಕಂದನ ನಾ ಎಷ್ಟೇ .... ಸಂತೈಸಿದರೂ
ಹೆತ್ತವಳಂತೆ ಮುದ್ದಿಸಿ, ರಮಿಸಲಾದೀತೆ ?
ತನ್ನೆದೆಯ ರಕ್ತವ ಹಾಲಂತೆ ಕುಡಿಸಲಾದೀತೆ ?
ಎದೆಗವಚಿ, ಏನೂ... ಮಾಡಲಾಗದ ಸ್ಥಿತಿಗೆ
ನಾ ಎಷ್ಟೆಲ್ಲಾ ಒದ್ದಾಡಿ ಮಮ್ಮುಲ ಮರುಗಿದ್ದೆ
ನನ್ನವಳು ಇದ್ದಿದ್ದರೆ ನಾ ಇಷ್ಟೆಲ್ಲಾ ಕಷ್ಟಪಡಬೇಕಿತ್ತೆ ?
ಚೊಚ್ಚಲ ಹೆರಿಗೆಯಲ್ಲಿ ಹೆತ್ತು, ಮಗುವ ಕೈಗಿತ್ತು
ಸತ್ತು ಸಂಪಿಗೆಯ ಮರವಾಗಿ ಹೋಗಿದ್ದಳು
ಹಿಂದೆಯಿಲ್ಲ ಮುಂದೆಯಿಲ್ಲ, ಬಂಧು ಬಳಗ ಮೊದಲೇ ಇಲ್ಲ
ಅನಾತಳಿಗೆ ಅನಾತನಾದ ನಾನೇ... ಪತಿ, ದೈವ ಎಲ್ಲಾ...
ಆ ದುರ್ವಿಧಿಗೂ... ನಮ್ಮ ನೋಡಿ ಸಹಿಸಲಾಗಲಿಲ್ಲವೇನೋ
ಕಡು ಕಷ್ಟಗಳ ಕೊಟ್ಟಿದ್ದರೂ ನಾ ಎಂದೂ ಎದೆಗುಂದುತ್ತಿರಲಿಲ್ಲ
ಅಯ್ಯೋ...!! ನನ್ನ ಮುದ್ದು ಕಂದಾ...
ನೀ ತಾಯಿಯಿಲ್ಲದ ತಬ್ಬಲಿಯಾದೆಯಲ್ಲೇ...
ನೀ ಅಮ್ಮಾ... ಎಂದು ಯಾರನ್ನು ಕೂಗಿ ಕರೆಯುವೆ ?
ಯೋಚನೆ, ಆಲೋಚನೆಯ ತರ್ಕಗಳ ಜಂಜಾಟಕ್ಕೆ ಸಿಲುಕಿ
ಆದದ್ದೆಲ್ಲಾ ಒಳ್ಳೆಯದ್ದಾಗಲಿ ಎಂದೇ... ಇವಳ ಮೆಚ್ಚಿದ್ದೆ !!
ಶಿವಚೆನ್ನ ೧೩.೦೨.೧೫

Wednesday, January 7, 2015

" ಬೇಡ ರೀ ನನ್ನ ಫಜೀತಿ "

ನನ್ನ ಮುದ್ದಿನ ಅರ್ಧಾಂಗಿ ದಿಢೀರ್ ಫೋನಾಯಿಸಿ
ರ್ರೀ!! ಏನು?, ತಿಂದದ್ದು ನಿಮಗೆ ಹೆಚ್ಚಾಯಿತೋ.... ಹೇಗೆ ? ಮೊದಲು ನೀವು fb ಯಲ್ಲಿ ಬರೆಯುವುದ ಕೂಡಲೆ ನಿಲ್ಲಿಸಿ; ದಿನಕ್ಕೊಂದೊಂದು " ಬೇಡ ಸ್ವಾಮಿ ನನ್ನ ಫಜೀತಿ "
ನಿಮ್ಮ ಕಲ್ಪನೆಯ ಫಜೀತಿ ಸರಮಾಲೆಗಳ ಪ್ರಕಟಣೆ ಬೇರೆ ! ಇದನ್ನೋದಲು ಕಾಯುವ ಒಂದಷ್ಟು ನಿಮ್ಮಂತಹ ಜನರ ಗುಂಪು ನನ್ನನ್ನೇ ದಿನನಿತ್ಯ ಕಾಟ ಕೊಡುವ ರಾಕ್ಷಸಿ ಎಂಬಂತೆ ಚಿತ್ರಿಸಿ ಅಂತರ್ಜಾಲದಲ್ಲಿ ಬಿಂಬಿಸುವುದು ಬೇರೆ
ಹೆಣ್ಮಕ್ಕಳೆಂದರೆ ಹಾಸ್ಯವೋ ಅಥವಾ ಅಪಹಾಸ್ಯವೊ
ಎಲ್ಲರೂ ನಿಮ್ಮನ್ನ ಮೆಚ್ಚಿ, ಹೊಗಳುವರೆಂದುಕೊಂಡಿರೋ ಹೇಗೆ ? ಇವನೆಂಥಹ ಗಂಡಸ್ಸೆಂದು ಹಿಂಬದಿಯಲ್ಲಿ ಹಾಡಿಕೊಂಡು ನಗದಿರರು
ಇದ ಓದಿದ ಸ್ತ್ರೀಯರೆಲ್ಲ ಹಿಡಿ ಶಾಪ ಹಾಕಿಯಾರು ಎಚ್ಚರ !! ಗೊತ್ತೇನ್ರಿ ನಿಮಗೆ ? ನಮಗೂ ಸ್ತ್ರೀ ಸಂಘಟನೆಗಳಿವೆಯಂತ ಸೌಟು, ಲಟ್ಟಣಿಗೆ, ಪೊರಕೆ, ಭಿತ್ತಿ ಚಿತ್ರಗಳ ಹಿಡಿದು
ಬೀದಿ ಬೀದಿಯಲ್ಲಿ ನಿಂತು ಪ್ರತಿಭಟಿಸಬೇಕಾದೀತು
ತಪ್ಪಿದರೆ, ಗೊತ್ತಲ್ಲ ಸಂಜೆ ಮನೆಗೆ ಬಂದಾಗ ನಿಮಗೆ ಪೂಜೆ ! ನಿಂದೊಳ್ಳೆ ಕತೆಯಾಯಿತಲ್ಲೇ ... ನಾನೇನು ಬೇಕೂಂತ ಹೆಣ್ಮಕ್ಕಳ, ನಿನ್ನ ಬಗ್ಗೆ ಬರೆದೆನೆಂದು ಕೊಂಡೆಯೋ ಹೇಗೆ ?
ಈ ಜಗತ್ತಿನಲ್ಲಿ ಅಲ್ಲಲ್ಲಿ (ನಮ್ಮ ಮನೆಯಲ್ಲಿ) ನಡೆಯುವಂತದ್ದು ತಾನೆ
ನಾ ನಿನಗೆ ಹೀಗೆ ಹೆದರುವುದ ಕಂಡೇ... ನನ್ನ ಮಿತ್ರರೆಲ್ಲ ಛೆಛೆಛೇ....!!! ಏನ್ ಗುರೂ ಅತ್ತಿಗೆಗೆ ನೀನೇ ಹೀಗೆ ಹೆದರುವುದೆ? ಒಂಚೂರು ಗುಂಡು ಹಾಕಿ, ಗುಟುರು ಹಾಕಿ ನೋಡು ಗುರೂ... ಕಮಕ್ ಕಿಮಕ್ ಎನ್ನದೆ ಹೆದರಿ ಮೂಲೆಯಲ್ಲಿ ಸೇರಿಕೊಳ್ಳುವರು ಆಗ ಸ್ಟ್ರಾಂಗು ಅವರೋ... ನೀನೋ... ಅಂತ ಗೊತ್ತಾಗುವುದು ಮಾತಿಗೆ ಮಾತು ಬಂದು ಆಗ ಬರದದ್ದೇ.... ಮಾರಾಯ್ತೀ " ನಾನೇ.... ಸ್ಟ್ರಾಂಗು " ಅಂತ
ಹೀಗೇನು ಹೆಣ್ಮಕ್ಕಳೇ ಸ್ಟ್ರಾಂಗು ಬಿಡು
ಬೆವರೊರಸಿ ಕೊಂಡು ಫೋನ್ ಕುಕ್ಕಿದ್ದೆ
ಅವಳ ಮೇಲೆ ನನ್ನ ಕೋಪ, ಪ್ರತಾಪಗಳ ತೋರಿಸಲಾದೀತೆ !