Saturday, March 21, 2015

" ಅವಮಾನ "

ಅಪ್ಪಿತಪ್ಪಿ ಬಾಯಿತಪ್ಪಿ
ನಾನೆ ನನ್ನವಳಿಗೆ ಮಗಳ ವಿಷಯವ
ಎಲ್ಲಿ ಹೇಳಿಕೊಳ್ಳುವೆನೋ.... ಎಂಬ ಭಯಕೆ,
ಆತಂಕದಿ ಏನೂ ಮಾಡಲಾಗದ ನನ್ನೀ ಸಂದಿಗ್ದತೆಗೆ
ನೆನೆನೆದು ಅಳುತ ಕುಳಿತಲ್ಲಿಯೇ.... ಒದ್ದಾಡಿದ್ದೆ
ನೀ ಹೊತ್ಹೆತ್ತ ಮಗಳು ಯಾರದೋ ಜೊತೆ
ಕದ್ದು ಮದುವೆಯಾಳೆಂದು ಹೇಗೆ ತಾನೆ ಹೇಳಲಿ?
ಇದ ಕೇಳಿ ಸುಮ್ಮನಿರುವಳೆ ? ಅವಮಾನ ಸಹಿಸುವಳೆ
ಪ್ರಾಣ ಬೇಕಾದರು ಬಿಟ್ಟಾಳು ...
ಆಪ್ತ ಮಿತ್ರ ತಮಾಷೆಗೆ ಹೇಳಿದ್ದಾಗಲಿ ಅಲ್ಲ
ಫೋಟೊ ತೋರಿಸಿ, ಸಂತೈಸಿ ಮನೆಗೆ ಕರೆದೊಯ್ದಿದ್ದ ;
ತಾಳಿಗೆ ಕೊರಳೊಡ್ಡುತ್ತಿರುವ ಮಗಳ ಮುಖ ಕಂಡು
ಎದೆಯೊಳಗೆ ಎದ್ದ ಕೋಲಾಹಲದ ಅಗ್ನಿವರ್ಷಧಾರೆಗೆ
ಎದೆಯೊಡೆದು ನಾ ಇಲ್ಲೇ... ಸಾಯಬಾರದೆ ?
ಈ ಭೂಮಿ ಬಾಯ್ಬಿಟ್ಟು ನುಂಗಬಾರದೆ ?
ಹೊತ್ತು ತುತ್ತಿಟ್ಟವರೂ ಇವಳಿಗೆ ನೆನಪಾಗಲಿಲ್ಲವೆ ?
ಒಬ್ಬಳೇ ... ಮುದ್ದಿನ ಮಗಳೆಂದು ಸಲುಗೆ ಇತ್ತದೇ ತಪ್ಪಾಯ್ತೆ ?
ಗೆಳತಿಯ ಮದುವೆ ಇದೆಯಂದು ನಂಬಿಸಿ ಹೋದವಳು
ಇವಳ ಮದುವೆಗಾಗಿಯೆ ? 
ನೆರೆಹೊರೆಯವರು, ಬಂಧು ಬಳಗ, ಸ್ನೇಹಿತರು
ಕೇಳಿದರೆ ನಾ ಹೇಗೆ ಉತ್ತರಿಸಲಿ ?
ಯಾವ ತಂದೆತಾಯಂದಿರಿಗೂ ಇಂತಹ ಪರಿಸ್ಥಿತಿ ಬರದಿರಲಿ
ಇದ್ದೊಬ್ಬ ಮಗಳು ಸತ್ತಳೆಂದು
ಒಂದಷ್ಟು ದಿನ, ವರ್ಷಗಳ ಕಾಲ
ಅತ್ತು ಗೋಳಾಡುತ ಮರೆಯಬಹುದಿತ್ತು;
ಅವರಿವರು ಬಂಜೆ ಎಂದು ನನ್ನವಳ
ಕನಿಕರಿಸಿ ಹೀಗೆಳೆಯುವಾಗ ಮನ ನೊಂದರೂ
ನಾವಿಷ್ಟೇ..  ಪಡೆದ ಪುಣ್ಯದ ಫಲವೆಂದು
ನಿಟ್ಟುಸಿರಿನ ರಾತ್ರಿಗಳ ದೂಡುತ ಕಳೆಯಬಹುದಿತ್ತು
ಕಂಡಕಂಡ ಗುಡಿಗೋಪುರಗಳ ಸುತ್ತಿ,
ಬೆಟ್ಟ ಗುಡ್ಡಗಳ ಹತ್ತಿ, ವ್ರತನೇಮಾಧಿಗಳಿಂದ
ಕಾಣದ ದೇವರುಗಳಿಗೆ ಹರಕೆ ಹೊತ್ತು
ಸಾವು ಬದುಕಿನ ನಡುವೆ ಹೋರಾಡಿ ಹೆತ್ತ
ನನ್ನವಳ ಕೂಗು ಈಗಲೂ ನನ್ನೊಳಗೆ ಪ್ರತಿಧ್ವನಿ !!