Saturday, August 15, 2015

ಬೇಡ ಸ್ವಾಮಿ ನನ್ನ ಫಜೀತಿ

ಎಂದೂ... ನಮಸ್ಕರಿಸಿ,
ಪಾದಪೂಜೆ ಮಾಡದ ನನ್ನವಳು
ಬೆಳ್ಳಂ ಬೆಳಿಗ್ಗೆಯೇ ದೀರ್ಘದಂಡ ಬಿದ್ದಾಗಲೆ
ಹಿಂದು ಮುಂದು ಯೋಚಿಸಿ, ಆಲೋಚಿಸದೆ
ನಾ ಎಚ್ಚೆತ್ತು ಕೊಳ್ಳಬೇಕಿತ್ತು ;
ಮೋಹಕ ನಗೆ ಬೀರಿದಳೆಂದು ಉಬ್ಬಿ
ಏನೇನೋ ಲೆಕ್ಕಾಚಾರಗಳೆಲ್ಲ ಹಾಕಿ
ಮನಸಾರೆ ನೂರಾರು ಕನಸುಗಳ ಕಂಡು
ಬಾಯಿ ಚಪ್ಪರಿಸಿದ್ದು ನನ್ನದೇ ತಪ್ಪು
ಇದೆಲ್ಲ ನನಗೆ ಬೇಕಾಗಿತ್ತೆ ?
ಜೋರಾಗಿ ಆಡಿ ಕೊಳ್ಳುವಂತಿಲ್ಲ
ನೋವ ನುಂಗಿಕೊಳ್ಳದೆ ಬೇರೆ ಗತಿಯಿಲ್ಲ
ಎಲ್ಲರಿಗೂ ಎಲ್ಲಿ ಗುಟ್ಟು ತಿಳಿಯುವುದೋ...
ಎಂಬ ಭಯಕೆ ಅಂಜಿ,
ಒಂದೇ ಸಮನೆ ಅಕ್ಕಿಯ ರುಬ್ಬಿರುಬ್ಬಿ
ಕೈಕಾಲು, ಸೊಂಟ ಜೋತು ಬಿದ್ದಿರುವಾಗ
ನನ್ನವಳ ಶಪಿಸಿ ಬದುಕುವುದು ಉಂಟೇ ?!
ರ್ರೀ.... ಎದ್ದೇಳ್ರಿ ಸಾಕು ಮಲಗಿದ್ದು ಎಂದಾಗಲೆ ಎದ್ದದ್ದು
ಸಧ್ಯ ಇದು ನಾ ಕಂಡ ಕನಸೇ....?!!
ಚಿತ್ರಕೃಪೆ: ಶೈಲು
ಶಿವಚೆನ್ನ ೧೫.೦೮.೧೫