ಪ್ರೇಮ ಪ್ರಣಯದಲ್ಲಿ ಕದನ
ನಲ್ಲನೆಂದ ನಲ್ಲೆಗೆ,
ಒಮ್ಮೆ ನಿನ್ನದರಗಳ
ಕದ ಸ್ವಲ್ಪ ತೆರೆ
ನನ್ನದರಗಳಿಗೆ ಬಾಯಾರಿಕೆ
ಧಣಿವಾರಿಸಿ ಕೊಳ್ಳುವೆ !
ಹೊತ್ತು ಗೊತ್ತಿಲ್ಲವೇ ನಿಮಗೆ
ನಾ ಒಲ್ಲೆ ಒಲ್ಲೆ ಎಂದರೂ
ಬಿಡದೆ ನಡು ಬಳಸುವಿರಿ
ನನ್ನೊಳಗೂ ಕಿಚ್ಚ ಹಚ್ಚುವಿರಿ
ಮರು ಮಾತಾಡದೇ ಮುತ್ತಿಟ್ಟಳು !
ನಿನ್ನೀ ಹುಡುಗಾಟಕ್ಕೆ
ಹುಚ್ಚೆದ್ದು ಕುಣಿವ
ಹುಡುಗಿ ನಾನಲ್ಲ !
ನನ್ನೀ ಮನಕೊಪ್ಪದ
ಯಾವುದೇ ಕೆಲಸವ
ನಾ ಎಂದೂ ಮಾಡಲ್ಲ !
ನೀ ಕರೆದೆ ಎಂದು
ನಾ ಎಲ್ಲೆಲ್ಲಿಗೋ
ನಿನ್ನ ಜೊತೆ ಬರಲು
ಈ ಮನ ಎಂದೂ ಒಪ್ಪಲ್ಲ !
ಪೂರ್ವ ಕಾಲದ ಪುಟ್ಟಕ್ಕ
ಎಂದರೂ ಸರಿಯೇ
ಹದಿನಾರಾಣೆಯ ಅಚ್ಚ
ಸಂಸ್ಕೃತಿಯ ಕನ್ನಡತಿ !
ಮದುವೆಗೆ ಮೊದಲೇ
ರೀತಿ ನೀತಿ, ನಿಯಮಗಳ
ಗಾಳಿಗೆ ತೂರಿ, ಹಲ್ಕಿರಿದು
ಮನಸೋ ಇಚ್ಚೆ ಚಕ್ಕಂದಕ್ಕಾಗಿ
ಹಾಡಿ ನಲಿದಾಡುವ ಹೆಣ್ಣಂತೂ ಅಲ್ಲ !
ನನ್ನ ನೀ ಗಂಡುಬೀರಿ
ಸುಂಟರ ಗಾಳಿ, ಬಜಾರಿ
ಎಂದು ಕರೆದರೂ ಸರಿಯೇ !
ನಂಬಿಕೆ, ಅಪನಂಬಿಕೆಗಳ
ಪ್ರಶ್ನೆಗಳ ವಿಷಯವದಲ್ಲ
ನಿನ್ನ ಬಗ್ಗೆ ಗೌರವವಿದೆ
ನನ್ನ ಸಮ್ಮತಿಯ ಒಲವಿದೆ !
ಕಾಲ ಪಕ್ವವಾಗುವರೆಗೂ
ನೀ ನನಗಾಗಿ ಕಾಯಬೇಕು
ಇದು ನನ್ನ ಹಟವಲ್ಲ, ಛಟವಲ್ಲ
ಮನದಾಳದ ವಿನಮ್ರ ವಿನಂತಿ !
ತೊಲಗಲಿ ನಿನ್ನಲ್ಲಿರುವ ಬ್ರಾಂತಿ !
ಯಾರದೋ ತೀಟೆಗೆ ಹುಟ್ಟಿದವಳು ಎನ್ನುತಿಹರು ಹೊತ್ತೆತ್ತು ಮುದ್ದಿಸದೆ, ದೇವಸ್ಥಾನದ ಬಳಿ ಬಿಟ್ಟು
ಓಡಿ ಹೋಗುವ ಮುನ್ನ, ನನ್ನ ಅಳು ಹಸಿವು ನಿನಗೆ
ಕೇಳದಾಯ್ತೇ, ಕೆಂಜಿರುವೆಗಳು ಮುತ್ತಿ ಕಚ್ಚುವಾಗ
ನೊಣ ಹುಳ ಹುಪ್ಪಟೆ ಮೈ ಮೇಲೆಲ್ಲಾ ಹರಿವಾಗ
ನಿನ್ನ ಕರಳು ಚುರ್ ಎನ್ನದೇ, ಕೊರೆವ ಚಳಿಗೆ ಮೈ ನಡುಗೀತೆಂದು ಕಣ್ಣಲ್ಲಿ ಒಂದಿನಿತು ಕಂಬನಿಯು ಬರಲಿಲ್ಲವೇ, ಅವನ ಮೇಲಿನ ಕೋಪದಾ
ರೋಷಕ್ಕೋ ಅಥವಾ ಮದುವೆಗೆ ಮೊದಲೇ ನೀ ತಾಯಾದೆಯಂದೋ, ಲೋಕದಾ ಅಪವಾದಕ್ಕೆ ಹೆದರಿ, ಆ ಕುಂತಿ ತನ್ನ ಕರುಳ ಕುಡಿಯ ನೀರಲ್ಲಿ ಬಿಟ್ಟಂತೆ ನೀನೂ ಅವಳಂತೆ ಅನುಸರಿಸಿದೆಯೋ
ನನ್ನ ಕೊಲ್ಲಬಹುದಿತ್ತಲ್ಲ, ಅನಾಥಳನ್ನಾಗಿಸಿದೆ ಮತ್ತೊಂದು ನೀ ಮದುವೆಯಾದೆಯೋ ಹೇಗೆ !
ಜಗದ ಕಲ್ಯಾಣಕ್ಕೆ ಋಷಿ ಮುನಿಗಳ,ತಾಪ ತಪವ ಕೆಡಿಸಿಲು ದೇವಾನು ದೇವತೆಗಳು ಅಪ್ಸರೆಯರ
ಕಳುಸಿ ಭಂಗಗೊಳಿಸುತಿದ್ದರು, ಹಾವಾ- ಭಾವದಿ ನರ್ತಿಸಿ; ಶೃಂಗಾರ ಲೀಲೆಗಳಿಂದ ಅಂಗಾಂಗಗಳ ಸ್ಪರ್ಶಿಸಿ, ಮೈಮನಸ್ಸಗಳ ಉದ್ರೇಕಿಸಿ ಮೈಥುನಕೆ ಪ್ರಚೋದಿಸಿ ವೀರ್ಯ ಸ್ಖಲನಗೊಂಡರೂ ಬಿಡದೆ ಕಾರ್ಯ ಸಾಧಿಸುತ್ತಿದ್ದರು; ನಿನಗಾವ ಕಾರ್ಯವಿತ್ತು
ಒಂದೇ ಸಮನೆ ಕಾಲಿಂಗ್ ಬೆಲ್ಲು
ನಿಲ್ಲದೆ ಬಿಟ್ಟು ಬಿಟ್ಟು ಬಡಕೊಳ್ತಿತ್ತು
ನೋಡ ಬಾರದೇ, ಹೋಗಿ ಬಾಗಿಲು
ತೆಗೀ ಬಾರದೇ, ನನ್ನವಳ ಎಚ್ಚರಿಸಿದೆ !
ನನ್ನ ತಮ್ಮ ನೈಟ್ ಶಿಫ್ಟ್ ಮುಗಿಸಿ
ಈ ಸರಿ ಹೊತ್ತಲ್ಲಿ ಬಂದಿರ ಬೇಕು
ನನ್ನವಳು ಎದ್ದೋಗಿ ಬಾಗಿಲು ತೆಗೆದು
ಜೋರು ದನಿಯಲಿ ಹೇಳುತ್ತಿದ್ದಳು !
ಇದು ಡಾಕ್ಟರ್ ಮನೀಯಲ್ಲರ್ರೀಯಪ್ಪ
ಸಂಸಾರಸ್ತರ ಮನೀಯೋ ನೀವ್ ತಪ್
ತಿಳ್ದ ಈ ಕಡಿ ಬಂದ್ ತ್ರಾಸ ಕೊಡಬ್ಯಾಡ್ರೀ
ಲಗೂನ ವಯ್ರೀ ನಿಮ್ ಕೂಸ್ನ ಬೇರೇಕಡಿ
ಏ ಸುಮ್ಕಿರ್ರೀ ಅವ್ವಾರೇ, ನಾ ಆ ಬೋರ್ಡ್
ಓದಿ ಬೆಲ್ ಮಾಡಿದ್ದೂ, ನನ್ಗ ತಿಳಿಯಾಕ್ಲಿವ
ಡಾಕ್ಟರ್ ನರಹರಿರಾವ್ ಅದೆನ್ತೋದೊ ತಜ್ಞರು
ಲಗೂನೆ ಡಾಕ್ಟರ್ ನ ಕರ್ಕೊಂಡು ಬರೋಗ್ರೀ !
ಇವರ ಕೂಗಟದಿಂದ ನನಗೂ ಎಚ್ಚರವಾಗಿ
ಎದ್ದು ಬಂದಿದ್ದೆ, ನಮಸ್ಕಾರ್ರೀಯಪ್ಪ ನನ್ಮಗೂಗೆ
ಶ್ಯಾನೆ ಉಸಾರಿಲ್ಲರ್ರೀ , ಲಗೂನೆ ನೋಡ್ರಲ ಇರೋನೊಬ್ಬನೆ ಗಂಡು ಕೂಸು ಕಾಪಾಡ್ರಲ
ಇಲ್ಲಪ್ಪ ನಾ ಡಾಕ್ಟರ್ ಅಲ್ಲೋ ಮಾರಾಯ
ಎಷ್ಟು ಪರಿಪರಿಯಾಗಿ ಹೇಳಿದರೂ ಕೇಳದವ
ಒಮ್ಮೆಲೇ ಮಚ್ಚು ತೆಗೆದು, ಎಳನೀರ್ ಕೊಚ್ಚೋ ಮನುಷ್ಯಾರ್ರೀ ನೀವ್ ಉಳಿಸ್ಲಿಲ್ಲಾಂದ್ರೆ ಈ ಮಚ್
ನಿಮ್ ಎದಿಮ್ಯಾಲಿ ಇರ್ತದೆ ಉಸಾರ್.......!!!!
ನನಗೋ ಇತ್ತ ದರಿ, ಅತ್ತ ಪುಲಿ ಎಂಬಂತ್ತಾಗಿತ್ತು
ಪಿ.ಹೆಚ್.ಡಿ ಮಾಡಿ, ಡಾಕ್ಟರೇಟ್ ಗರಿ ನನಗಿದ್ದರು ಡಾಕ್ಟರ್ ಅಲ್ಲದ ನಾ ಏನು ಮಾಡಲು ಸಾಧ್ಯವಿತ್ತು
ಇಲ್ಲಿ ನಾ ಸೋತು ಸುಣ್ಣವಾಗಿದ್ದೆ !
ನನ್ನ ಮೊರೆಯು ಆ ದೇವರಿಗೆ ಕೇಳಿಸಿರ ಬೇಕು
ನನ್ನವಳು ನಿಮ್ಮಣ್ಣನಿಗೆ(ನನಗೆ) ಹುಶಾರಿಲ್ಲವೆಂದು ಎರಡು ದಿನಗಳ ಮೊದಲೇ ಅವಳಿಗೆ ತಿಳಿಸಿದ್ದಳೆನ್ನಿ ಡಾಕ್ಟರ್ ಆದ ನನ್ನ ಮಗಳು ಜೀವ ಉಳಿಸಿದಳೆನ್ನಿ
ಹೀಗಿರುವಂತೆ ಮೊದಲೆಲ್ಲಾ
ಬಸ್ಸು ಮೋಟಾರ್ ಸೈಕಲ್ಲು;
ಮೊಬೈಲ್ ಫೋನ್ ಇರಲಿಲ್ಲ
ಊರಿಂದ ಊರಿಗೆ ಹೋಗಲು
ಎತ್ತಿನ ಗಾಡಿಯೋ, ಜಟಕಾ ಬಂಡಿಯೋ
ನಡೆದೋ, ಇಲ್ಲಾ ಸೈಕಲ್ ತುಳಿದೋ
ಹೋಗ ಬೇಕಿತ್ತು, ಗುರಿ ಮುಟ್ಟ ಬೇಕಿತ್ತು !
ಅಮ್ಮ ಬೇಡವೆಂದರೂ, ಒಂದು ಬೆಳ್ಳಂ ಬೆಳಗ್ಗೆ
ಸ್ನೇಹಿತನ ಮುದ್ದು ತಂಗಿಯ ಮದುವೆಗಾಗಿ
ಎರಡು ದಿನ ಇರುವಾಗಲೇ ನಾ ಹೊರಟೆ
ಅಮ್ಮಕಟ್ಟಿ ಕೊಟ್ಟಿದ್ದ ರಾಗಿಯ ರೊಟ್ಟಿ
ಹುಚ್ಚೆಳ್ಳು ಚಟ್ನಿ, ಗಟ್ಟಿ ಮೊಸರಿನ ಬುತ್ತಿಯ
ಚೀಲ ಕ್ಯಾರಿಯರಲ್ಲಿ ಹಾಯಾಗಿ ಕುಳಿತಿತ್ತು !
ಅಷ್ಟೇನು ಬಿಸಿಲಿಲ್ಲದೆ ಹಾಯಾಗಿ ಸೈಕಲ್ಲು
ತುಳಿದು, ಹತ್ತಾರು ಮೈಲುಗಳ ಕ್ರಮಿಸಿ
ನಡು ನತ್ತಿಗೆ ಸೂರ್ಯ ಬಂದು ನಿಂತಾಗಲೇ
ಆಯಾಸ ಗೊತ್ತಾಗಿದ್ದು, ಮುಂದೆ ಎಲ್ಲಾದರೂ
ನೀರು ಕಂಡರೆ, ಬುತ್ತಿ ಬಿಚ್ಚೋಣವೆಂದು ಕೊಂಡು
ಯೋಚಿಸುವಾಗಲೇ ನಡೆಯಲಾರದೆ ಅಜ್ಜನೊಬ್ಬ
ಅಲ್ಲಿಯೇ ಕುಸಿದು ಬಿದ್ದಾಗ ಕನಿಕರಿಸಿ ಮೇಲೆತ್ತಿದ್ದೆ !
ನೀರ ಕುಡಿಸಿ ಉಪಚರಿಸಿ, ತಂದ ಬುತ್ತಿಯಲ್ಲೇ
ಇಬ್ಬರೂ ಹಂಚಿ ತಿಂದು, ಸೈಕಲ್ಲಲ್ಲಿ ಕರೆದ್ಯೋದೆ !
ಏನ್ ಅಜ್ಜಾ...ನೀ ಇಷ್ಟೊಂದು ಭಾರವೇ
ಸೈಕಲ್ ತುಳಿಯೋಕೆ ಕಷ್ಟ ಹಾಗ್ತ ಇದೇ
ಒಳ್ಳೇ ಹೆಣ ಹೊತ್ತೋರ ಭಾರದಂತಿದೆ
ನೀನ್ ನೋಡ್ದರೆ ಗಾಳಿಗೆ ಹಾರೋಗೋ
ಕಡ್ಡಿಯ ತರ ಇದ್ದೀಯ ಏನ್ಮಾಡ್ಲಿ ತಾತ
ತುಂಬಾ ಕಷ್ಟ, ಈಗ ತುಳಿಯೋ ಮೊಮ್ಮಗನೇ
ನನಗೋ ಆಶ್ಚರ್ಯ, ಗಾಳಿಯಲ್ಲಿ ತೇಲಿದನುಭವ !
ದೂರದಲ್ಲೆಲ್ಲೋ ಒಂದು ಹೆಣ್ಣಿನ ಮಧುರವಾದ
ಹಾಡಿನ ತರಂಗ ಮೈಮನ ಸೆಳದಿತ್ತು, ಈ ಹಾಡೇ
ಇಷ್ಟು ಇಂಪಾಗಿರ ಬೇಕಾದರೆ ಇನ್ನು ಹಾಡುವ ಆ
ಹೆಣ್ಣು ಎಷ್ಟು ಅತಿ ಸುಂದರಿಯಾಗಿರ ಬೇಕು !!!
ಎದುರು ಬರುತ್ತಿದ್ದವಳ ಕಂಡು, ಒಂದು ಕ್ಷಣ ನಾನೇ
ಧಂಗಾಗಿ ಹೋಗಿದ್ದೆ, ಅವಳ ಅಪ್ರತಿಮ ರೂಪ
ಸೌಂದರ್ಯ ರಾಶಿಯ ನಾ ಎಲ್ಲೂ ಕಂಡಿರಲಿಲ್ಲ !
ತುಂಬು ಏರು ಜವ್ವನೆ, ಒಮ್ಮೆ ನೋಡಿ ನಕ್ಕಳಷ್ಟೇ
ಎದೆಯೊಳಗೆ ನೂರಾರು ಮಿಂಚು ಬೆಳಗಿ ಒಮ್ಮೆಲೇ ಮರೆಯಾಗಿತ್ತು, ಮುಂದೆ ಹೋದವನು ನಿಲ್ಲಿಸಲು,
ನೀ ಬೇಡ ಕಂದಾ ಬೇಡ ಎಲ್ಲಿಯೂ ನಿಲ್ಲಿಸ ಬೇಡ
ಆ ಮಾಯಾವಿ ಹೆಣ್ಣಲ್ಲ , ದೆವ್ವ !!??
ನಿನಗೇಗೆ ಗೊತ್ತು ಅಜ್ಜಾ, ಅವಳು ಹೆಣ್ಣಲ್ಲ ದೆವ್ವವೆಂದು
ಅಯ್ಯೋ ನನ್ನ ಕಂದ ನಾನು ನಿನ್ನ ಪೂರ್ವಿಕನೋ
ನಾನು ಸಹ ಅದರಂತೆ ನಿನ್ನ ಕಾಪಾಡಲು ಬಂದ ದೆವ್ವ