Thursday, November 7, 2013

ಅಕ್ಕಾ ನಿನ್ ಮಗಳು ನಂಗೆ ಚಿಕ್ಕೊಳಾಗಲ್ವಾ !

ಮುದ್ದಿನ ಮೊಮ್ಮಗಳೆಂದರೆ ಸಾಕು
ಈ ನನ್ನ ಅಪ್ಪಾ ಅಮ್ಮನಿಗೆ ಏಕೋ
ಎಲ್ಲಿಲ್ಲದ ಮಮಕಾರ, ಅಕ್ಕರಾವಸ್ಥೆ
ನನಗಿಂತ ಏಳೆಂಟು ವರ್ಷ ಚಿಕ್ಕವಳು
ಬೇರೆ ಕಡೆ ಒಳ್ಳೆಯ ಹುಡುಗನ ಹುಡುಕಿ
ಮದುವೆಯ ಮಾಡಿ ಕೊಟ್ಟರಾಯಿತು
ನನಗಂತೂ ಈ ಸಂಬಂಧದಲ್ಲಿ ಬೇಡ ! 

ಅಮ್ಮಾ, ಅಕ್ಕ ಬಿಡದೆ ಅತ್ತೂ ಕರೆದು
ಮೂರು ದಿನ ಊಟ ಮಾಡದೆ ಒಪ್ಪಿಸಿ
ನನಗಿವಳ ಗಂಟಾಕಿ ತಪ್ಪು ಮಾಡಿದ್ದರು
ಇಂದು ಹೇಳಿದಕ್ಕೆ ಕೇಳಿದಕ್ಕೆಲ್ಲಾ ಹಲ್ಕಚ್ಚಿ
ಇವಳ ತಾಳಕ್ಕೆ ನಾ ಕುಣಿಯುವಂತಾಗಿದೆ !

ನಾ ಇವಳ ಮದುವೆಯಾದ ಹೊಸತರಲ್ಲಿ
ಮೊದ ಮೊದಲು ಎಲ್ಲವೂ ಚೆನ್ನಾಗಿತ್ತು
ನಗರದಲ್ಲಿ ಕೆಲಸ, ಹೊಸ ಬಾಡಿಗೆ ಮನೆ
ಸಮಯಕ್ಕೆ ಸರಿಯಾಗಿ ಅಮ್ಮನ ಕೈಯಡುಗೆ
ಬೆಚ್ಚಗೆ ತಿಂದುಂಡು ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದೆವು !

ನಮಗೂ ಮತ್ತಷ್ಟು ಏಕಾಂತ ಬೇಕಿತ್ತೆನ್ನಿ
ಎಲ್ಲದಕ್ಕೂ ಅಜ್ಜಿಯ ಸೀರೆಯ ಸೆರೆಗಿಡಿದು
ಸುತ್ತುವವಳ ನಾ ಹಿಂಬಾಲಿಸಲಾದೀತೆ
ನನ್ನ ಮನದ ಸೂಕ್ಷ್ಮ ಅರಿತರೇನೋ ಅಮ್ಮ
ನಿಮ್ಮಿಬ್ಬರ ಮಧ್ಯೆ ನಾವೇಕೋ ಮನೋಹರ
ನಾಳೆಯೇ ನಮ್ಮನ್ನು ಊರಿಗೆ ಬಸ್ ಹತ್ತಿಸು !

ಮನು, ಅವಳು ನಿನಗಿಂತ ಚಿಕ್ಕವಳು
ಏನೂ ತಿಳಿಯದ ಮಗ್ಧ ಹಳ್ಳೀ ಹುಡುಗಿ
ನೀನೇ ಅನುಸರಿಸಿ ಕೊಂಡು ಹೋಗು
ಇದೇನು ಕಲಿಯಲಾಗದ ಬ್ರಹ್ಮ ವಿಧ್ಯೆಯೆ
ಮುಂದೆ ಒಂದೊಂದೇ ಎಲ್ಲಾ ಕಲಿತಾಳು
ಅಪ್ಪಾ ಅಮ್ಮನಿಂದ ಬಿಟ್ಟಿ ಸಲಹೆ ಬೇರೆ

ಅಲ್ಲಾ..... ನಾನಿವಳ ಬೈಯುವಂತಿಲ್ಲ
ಏನೂ ಹೇಳುವಂತಿಲ್ಲ ರೇಗುವಂತಿಲ್ಲ
ಹೇಗಿದೆ ನೋಡಿ ಮೊಮ್ಮಗಳಿಗೆ ಬೆಂಬಲ
ನಿನ್ನ ಮೊಮ್ಮಗಳಿಗೆ ನೆಟ್ಟಗೆ ಒಂದೊಪ್ಪತ್ತು
ಒಂದು ಅನ್ನ ಸಾರು ಪಲ್ಯ ಮಾಡಲು ಬರದು
ಹೀಗೇ ಮುಂದುವರೆದರೆ ಸಂಸಾರ ಮಾಡಿದಂತೆ
ನನಗೂ ಹೋಟೆಲ್ ಊಟ ತಿಂದು ಸಾಕಾಗಿದೆ ಯಾರಾದರೊಬ್ಬರು ಊರಿಂದ ಬನ್ನಿ ಅಡುಗೆಕಲಿಸಿ !

ಎರಡನೆಯ ಮದುವೆ

ನಿನ್ನ ಅಪ್ಪ ಅಮ್ಮನ್ನ,
ಕೇಳಿದೆಯೇನೆ ಅಮ್ಮು
ಹೇಗೂ ಮುಂದೆಂದೂ
ನಿನಗೆ ಮಕ್ಕಳಾಗುವುದಿಲ್ಲ
ನಿನ್ನ ಗರ್ಭಕೋಶ ಹಾಳಾಗದಿದ್ದರೆ
ನನಗೆ ಇನ್ನೊಂದು ಮದುವೆ ಬೇಕಾಗಿತ್ತೆ !

ಉಳಿದಿರುವ ನಿನ್ನ ಒಬ್ಬಳೇ ತಂಗಿಯ
ಬೇರೆಲ್ಲೋ ಕೊಟ್ಟು ಕಳಿಸುವುದಕ್ಕಿಂತ
ನನಗೆ ಮದುವೆಯ ಮಾಡಿಕೊಟ್ಟರೆ
ನೀನೂ ಸುಖಿ, ಅವಳೂ ಪರಮಸುಖಿ !

ನಾ ಬೇರೆ ಯಾರನ್ನೋ ಮದುವೆಯಾಗಿ
ನಿನ್ನ ಜಾಗಕ್ಕೆ ಮನೆ ತುಂಬಿಸಿ ಕೊಂಡು
ದಿನ ನಿತ್ಯ ಸವತಿಯ ಜೊತೆ ಗುದ್ದಾಡುವುದಕ್ಕಿಂತ
ನಿನ್ನ ತಂಗಿಯ ಜೊತೆ ಹಾಯಾಗಿ ಇರಬಹುದಲ್ಲ !

ಇಲ್ಲೇನು ನಮಗೆ ದಟ್ಟ ದಾರಿದ್ರ್ಯ ಬಂದಿದೆಯೇ
ಹತ್ತು ತಲೆಮಾರು ತಿಂದರೂ ಕರಗದಷ್ಟು ಆಸ್ತಿ
ಇಷ್ಟೆಲ್ಲಾ ಆಸ್ತಿ- ಪಾಸ್ತಿ ಇರುವಾಗ ನಮಗೆ; ಮಕ್ಕಳಿಲ್ಲದಿದ್ದರೆ ಮನೆಗೆ ಶೋಭೆಯೇನೆ ?
ನಾ ಹೇಳಿಯಾಗಿದೆ ಇಷ್ಟರ ಮೇಲೆ ನಿನ್ನಿಷ್ಟ !

ರ್ರೀ.......... ನಿಮ್ಮನ್ನ, ಅವಳು ಒಪ್ಪ ಬೇಕಲ್ಲ
ಆ ವಿಷಯ ನಂಗೆ ಬಿಡು, ನೀ ಅಳುವೆಯೋ
ಇಲ್ಲಾ ಕಾಲಿಡಿವೆಯೋ ನಿನ್ನ ಅಪ್ಪಅಮ್ಮನ ಒಪ್ಪಿಸು
ಈ ಆಸ್ತಿಗೆ ಬೇರೆಯವರು ಒಡೆಯರಾಗದಿದ್ದರೆ
ನನಗಷ್ಟೇ ಸಾಕು,ಇದಕ್ಕಿಂತ ನಿನಗಿನ್ನೇನು ಬೇಕು !

Wednesday, November 6, 2013

" ಸಮಯ ಪ್ರಜ್ಞೆ "

ಅಯ್ಯೋ... ನಿಮ್ಮ ಮುಖಾ ಮುಚ್ಚಾ...
ನಾನೇ ಬೇಕಿತ್ತೇನ್ರೋ... ನಿಮಗೆ
ಯಾವೋಳು ಸಿಕ್ಕಲಿಲ್ವೇ ನಿಮ್ಮ ಮುಸುಡಿಗೆ
ಏಯ್ ಬಿಡ್ರೋ... ನನ್ನ ಕೈ ಬಿಡ್ರೋ..
ಬಾಯಿ ಮುಚ್ಚಿದ್ರೆ ಕಚ್ಚಿಬಿಡ್ತೀನಿ ನೋಡ್ರಿ
ಮೊದಲೇ ನೀವು ನನ್ನನ್ನ ಕರೆದಿದ್ದರೆ
ನಾನೇ ನಿಮ್ಮ ಹಿಂದೆ ಕರೆದಲ್ಲಿಗೆ ಬರ್ತಿದ್ದೆ
ಇಷ್ಟೆಲ್ಲಾ ಹೊತ್ಕೊಂಡು ಕಷ್ಟ ಪಡಬೇಕಿತ್ತೆ;

ದುಡ್ಡು ಎಷ್ಟ್ ಇಟ್ಟಿದ್ದೀರ ಸಾವಿರ, ಐನೂರು
ಇಲ್ವಾ.., ನಿಮ್ ಮುಖ ನೋಡಿದ್ರೆ ತಿಳಿಯುತ್ತೆ
ದುಡ್ಡಿಲ್ಲದ ದರಿದ್ರದ ಮುಂಡೇವು ನೀವು ಅಂತ
ಹೋಗ್ಲೀ...., ನಾನೇ ಎಲ್ಲಾ ನಿಮಗೆ ಕೊಡ್ತೀನಿ
ಬಿಟ್ಟಿ ದುಡ್ಡು, ಜೊತೆಗೆ ಏಡ್ಸ್ ರೋಗ ಬನ್ರೋ
ಲೇ ಲಂಬೂ...., ಡುಮ್ಮಾ, ಚೋಟು ಸಣಕಲ
ಯಾರ್ ಮೊದಲು ನನ್ನ ಹತ್ತಿರ ಬರ್ತೀರೋ
ನೀನೋ ಇಲ್ಲಾ, ಅವನೋ ಬೇಗ ಬನ್ರೋ...

ಬಾರೋ ನನ್ನ ಮುದ್ದಿನ ರಾಜಕುಮಾರ
ನನ್ನ ಕೈ ನೀ ಇಡುಕೊಳ್ಳುವಾಗ್ಲೇ ನಿಂಗೆ
ಮೃತ್ಯುವಿನ ಸಿಹಿ ಮುತ್ತು ಕೊಟ್ಟದ್ದೆ
ಕೈಯಿ, ಮೈಯಿ ಹೇಗೆ ಪರ ಪರಾಂತ
ಕೆರಕೊಳ್ಳತ್ತಾವನೆ ನೀವೇ ನೋಡ್ರಿ

ಇನ್ನೊಂದರ್ಧ ಗಂಟೇಲಿ ಸಾಯ್ಬಹುದು
ನೀವು ಸುಖ ಕಾಣಬಹುದು ಬನ್ರೋ.. ಅಣ್ಣಾ
ಏಯ್..... ಏನ್ ಮುಖ ಮುಖ ನೋಡ್ತೀರ
ಯಾಕ್ರೋ ಹೆದರಿ ಬೆದರಿ ಓಡೋಗ್ತೀರ ಬನ್ರೋ.... ಥ್ಯಾಂಕ್ಯೂ ಥ್ಯಾಂಕ್ಯೂ" ಪೆಪ್ಪರ್ ರಿಂಗ್ "

Sunday, November 3, 2013

" ಇರಳುಗಣ್ಣು "

ರ್ರೀ...ತಾರಾ.., ಅಂತೂ..ಸಿಕ್ಕಿದರಲ್ಲ
ಏನೋ..ನೀವು ನನ್ನ ಪರಿಚಯಸ್ತರು
ಮೇಲಾಗಿ ತುಂಬಾ... ಬೇಕಾದವರು
ನಿಮಗೊಂದು ವಿಷಯ ಹೇಳ್ಲೇ ಬೇಕ್ರೀ
ಇಷ್ಟೊತ್ತಿಗೆ ಬೇರೆಯವರು ಆಗಿದ್ದಿದ್ದರೆ
ನಿಮ್ಮ ಮನೆ, ಮಾನ ಮರ್ಯಾದೆ ಎಲ್ಲಾ
ಮೂರು ಕಾಸಿಗೆ ಹರಾಜ್ ಹಾಕತಿದ್ದರು

ನೀವಾದರೂ ಏನ್ ಮಾಡಕ್ಕಾಗುತ್ತೆ ಹೇಳಿ
ಅದೇನು ಹೆಂಗಸರ ಕಂಡೇ ಇಲ್ಲದವರ ತರ
ನಿಮ್ಮ ಮನೆಯವರು ಸಂಜೆಯಾದರೆ ಸಾಕು
ಒಂದೇ ಸಮ ಕಣ್ಣ ಕಣ್ಣ ಬಿಟ್ಕೊಂಡ್ ನೋಡ್ತಾರೆ
ಏನೋ ಉಪ್ಪು ಖಾರ, ಹುಳಿ ತಿನ್ನೋ ದೇಹ
ಇದ್ದದ್ದೇ ಈ ಗಂಡಸರಿಗೆ ನೋಡೋ ಚಪಲ
ನೀವಾದ್ರೂ ರಾತ್ರಿ ಹೊತ್ತು ನಿಮ್ ಮನೆಯರಿಗೆ ಒತ್ತಾಸೆಯಾಗಿ ಅವರಿಚ್ಚೆಯಂತೆ ಇರಬಾರದೇ

ಅಯ್ಯೋ.... ಏನ್ ಹೇಳ್ಲಿರ್ರಿ ನನ್ನ ಪ್ರಾರಬ್ದ ಕರ್ಮ ಬಂಗಾರದಂತ ಹುಡುಗ, ಅತ್ತೆ ಮಾವ, ನಾದಿನಿ
ಯಾರೂ ಇಲ್ಲ, ಬೇಕಾದಷ್ಟು ಕರಗದ ಆಸ್ತಿಯಿದೆ ವರದಕ್ಷಿಣೆ ವರೋಪಚಾರ ಇಲ್ಲಾಂತ ನಮ್ಮಪ್ಪ
ನಾನು ಬೇಡ್ಬೇಡ್ಡಾಂದರೂ ಮದುವೆ ಮಾಡಿಸಿದ್ರು

ಈಗ ನೋಡಿ ನಾ ತಲೆ ಎತ್ಕೊಂಡು ತಿರಗಲಾರೆ ಅಳೀಮಯ್ಯನ ಕುರುಡು ಫಸ್ಟ್ ನೈಟಲ್ಲಿ ನೋಡು ಅಂದರಂತೆ ಯಾರೋ ಹಂಗಾಯ್ತು ನನ್ನ ಬಾಳು

" ಎಣ್ಣೆ "

ರ್ರೀ.............., ಎದ್ದೇಳ್ರಿ ಸಾಕು
ಏನ್ ನಿದ್ದೆ ಮಾಡ್ತೀರೋ ಏನೋ
ವರ್ಷಕ್ಕೊಂದು ದೀಪಾವಳಿ ಹಬ್ಬ;
ಏನ್ ಸಡಗರ ಸಂಭ್ರಮ ಇಂದು
ಗಂಟೆ ಹತ್ತಾದ್ರೂ ಇನ್ನೂ ಬಿದ್ಕೊಂಡಿದ್ದೀರಿ
ಎಣ್ಣೆ ಸ್ನಾನ ಮಾಡುವಿರಂತೆ ಬೇಗ ಏಳ್ರಿ !

ಎಣ್ಣೆ ಹೊಟ್ಟೆಗೋ ಇಲ್ಲಾ ತಲೆಗೋ...
ನಿದ್ದೆಗಣ್ಣಲ್ಲೇ ನನ್ನವಳ ನಾ ಕೇಳಿದ್ದೆ
ಆಹಾ.... ಎಣ್ಣೆಯಂತೆ ಎಣ್ಣೆ, ಯಾವ ಬ್ರಾಂಡೊ? ಸ್ವಾಮಿಗಳು ಕುಡಿಯೋದ್ ಬೇರೆ ಕಲಿತಿದ್ದೀರೋ!
ಏಳ್ರಿ ಮೇಲೆ, ಇವತ್ ಕಾದಿದೆ ನಿಮಗೆ ಹಬ್ಬ;
ಬೇಡ ಬೇಡಾಂದ್ರೂ ಕುಡಿಸ್ತೀನಿ ಹರಳೆಣ್ಣೆ
ಸಂಜೆವರೆಗೂ ಟಾಯ್ಲೇಟಲ್ಲೇ ಇರಬೇಕು
ನಗುತ ತಲೆಗೆ ಮೊಟಕಿದ್ದಳು ನನ್ನವಳು !!

Saturday, November 2, 2013

ಹೃದಯ ಹಾಡಿತು

ರ್ರಿ..., ಹೇಳ್ರಿ ಮೇಲೆ
ಕಿವಿ ಕೇಳಸಲ್ವೆ ನಿಮ್ಗೆ,
ಏನ್ ಗಂಡಸರೋ ಏನೋ
ಲೇಡೀಸ್ ಸೀಟಲ್ಲಿ ಕೂರೋದೆ
ನಾಚ್ಕೆ ಹಾಗ್ಬೇಕ್ ನಿಮ್ ಜನ್ಮಕ್ಕೆ;
ವಯಸ್ಸಾದವರಾದ್ರೆ ಪರವಾಗಿಲ್ಲ
ಅದು ನಿಮ್ಮಂತೋರ್ ಕೂತ್ಕೊಳ್ಳೋದೆ
ಹಿಗ್ಗಾ-ಮುಗ್ಗ ಬೈದವಳ ಜನರೇ
ಅಯ್ಯೋ ... ಹೋಗ್ಲಿ ಬಿಡಮ್ಮ ನೀನು,
ಏನೋ ಕಾಲಾಗಲಂತ ಕೂತ್ಕೊಂಡ್ರು
ಕಾಲು ಸರಿಯಿದ್ದಿದ್ದರೆ ನಾವ್ ಬಿಡತ್ತಿದ್ದವೇ

ನನಗೂ ಕೇಳಿ ಮನಸ್ಸಿಗೆ ನೋವಾಗಿ
ಸೇಪ್ಟಿ ಸ್ಟಿಕ್ ಹಿಡಿದು ಕಷ್ಟಪಟ್ಟು ಎದ್ದಿದ್ದೆ;
ದಯವಿಟ್ಟು ಕ್ಷಮಿಸಿ ಮೇಡಂ,
ನಿಲ್ಲಲಾಗದೆ ಈ ರಶ್ ನಲ್ಲಿ ಕೂತೆನೇ ವಿನಃ
ಬೇರೇನೂ ಅಲ್ಲ ಬನ್ನಿ ನೀವೇ ಕುಳಿತು ಕೊಳ್ಳಿ 

ಅರೇ...... ವಿಶ್ವಾಸ್ ಸರ್ ನೀವೇ....,
ಸಾರಿ ಸರ್; ಎಕ್ಸಟ್ರೀಮ್ಲಿ ವೆರಿ ಸಾರಿ
ಈ ನಿಮ್ಮೆಲ್ಲಾ ಕಷ್ಟಕ್ಕೆ ನಾನೇ ಕಾರಣ,
ಕಾಲೇಜ್ ಕ್ಯಾಂಪಾಸಿನಲಿ ಅಂದು
ನಾ ಸ್ಕೂಟಿಯಿಂದ ಗುದ್ದಿದ್ದರ ಪರಿಣಾಮ
ನನ್ನಿಂದಾಗಿ ನಿಮಗೆ ಈ ಸ್ಥಿತಿ ಬಂತು !

Friday, November 1, 2013

" ಅನ್ನಪೂರ್ಣೇಶ್ವರಿ ದೇವಿ "

ಹೇ...ಮನೂ..., ಬಾರೋ.... ಇಲ್ಲಿ
ಏನು ಆಗಲೇ ಶುರುವಾಯಿತೋ
ಮುಸಿ ಮುಸಿ ನಗು, ಪಿಸು ಮಾತು
ಆ ಭಿನ್ನಾಣಗಿತ್ತಿ ಹೇಳಿದ್ದಕ್ಕೆಲ್ಲ
ಕೇಳಿದ್ದಕ್ಕೆಲಾ ನೀ ಏನಾದರು
ಕೋಲೆ ಬಸವನ ರೀತಿ ತಲೆಯಾಡಿಸಿ,
ನಿನ್ನ ಜುಟ್ಟು ಅವಳ ಕೈಲಿಟ್ಟು
ಅವಳ ಹಿಂದೆ ಮುಂದೆ ಸುತ್ತಿ
ಹೆಂಡತಿಯೆಂದು ತಲೆ ಮೇಲೆ ಹೊತ್ತರೆ,
ಅವಳ ತಾಳಕ್ಕೆ ನೀ ಕುಣೀ ಬೇಕಾದೀತು
ಗಂಡಸೆಂಬ ಗಂಭೀರತೆಯ
ನೀ ಈಗಲಿಂದಲೇ ಬೆಳೆಸಿಕೋ
ಅವಳಿಗೆ ಸಲುಗೆ ಕೊಟ್ಟೆಯೋ ನೀ ಕೆಟ್ಟೆ
ಹೆತ್ತು ಹೊತ್ತು ತುತ್ತಿಟ್ಟವಳ ಮರೆತು,
ಮುತ್ತಿಟ್ಟವಳ ಮೆರೆಸೀಯ
ಇದೇ ನನ್ನ ಕಿವಿ ಮಾತು,
ಆಶೀರ್ವಾದವೆಂದು ತಿಳಿಯೋ
ಅಮ್ಮಾ...., ನನ್ನ ಮುದ್ದು ಅಮ್ಮಾ.....
ತಾಳಿ ಕಟ್ಟಿ ಇನ್ನೂ ಅರ್ಧ ಗಂಟೆ ಕಳೆದಿಲ್ಲ,
ಆಗಲೇ ಶುರುವಾಯಿತೆ ನಿನ್ನ ಬುದ್ಧಿ ಮಾತು ನಿನಗೇಕಮ್ಮ ಇಲ್ಲದ ಯೋಚನೆ ಆಲೋಚನೆ
ನಾ ಅಂತವನೆ, ನಿನ್ನ ಮಾತ ನಾ ಮೀರುವನೆ ಯಾರಿಗಿದೆಯಮ್ಮ ನಮ್ಮ ಮನೆಯಲ್ಲಿ ಧೈರ್ಯ
ಚಿಕ್ಕಪ್ಪ- ಚಿಕ್ಕಮ್ಮ, ಅಣ್ಣ- ಅತ್ತಿಗೆ, ಇನ್ನು ಅಪ್ಪ
ನಿನ್ನ ಎದಿರು ನಿಂತು ಮಾತಾಡುವ ಶಕ್ತಿ ಇದೆಯೇ ಅಜ್ಜಿಯೊಬ್ಬರೇ ತೊಡೆತಟ್ಟಿ ನಿಲ್ಲುವುದು ನಿನ್ನೆದಿರು
ಪಾಪ ಕಣೋ........ ನಿಮ್ಮ ಅಪ್ಪ.....,
ನಾ ಹಾಕಿದ ಗೆರೆಯ ಎಂದೂ ದಾಟಿಲ್ಲ
ಎಲ್ಲದಕ್ಕೂ ಸೈ ಎನ್ನವ ದೇವರವರು
ಇನ್ನು ಆ ನಿನ್ನ ಚಿಕ್ಕಪ್ಪ, ಮೈದುನಲ್ಲ ನನ್ನ ಮಗ;
ನಿನ್ನ ಚಿಕ್ಕಮ್ಮ, ಅಣ್ಣ - ಅತ್ತಿಗೆ ತುಟಿ ಪಿಟಕ್ಕೆನ್ನರು
ಈ " ಅನ್ನಪೂರ್ಣೇಶ್ವರಿ ದೇವಿ " ಎಂದರೆ
ಶ್ರೀಮಂತಿಕೆಗೆ ಮತ್ತೊಂದು ಹೆಸರು
ನನ್ನ ಘನತೆ ಗತ್ತು; ಹತ್ತೂರಿಗೂ ಗೊತ್ತು, !!