ನಿನ್ನದಲ್ಲದ ನನ್ನ ತಪ್ಪಿಗೆ
ಶಿಕ್ಷೆಯಾಗಿದ್ದು ನಿನಗೆ ಮಾತ್ರ
ಇಂದಿಗೂ ನನ್ನಿಂದ ಅರಗಿಸಿಕೊಳ್ಳಲಾಗುತ್ತಿಲ್ಲ
ಅಂದು ಆ ನಿನ್ನ ನಿಟ್ಟುಸಿರಿನ ನೋಟದಲ್ಲಿ
ಅದೆಷ್ಟು ನೋವು ತುಂಬಿತ್ತೋ...
ನೀ ನನ್ನ ಮರೆಯುವಷ್ಟು ದಿನ,
ಹಗಲು,ರಾತ್ರಿ ಅದೆಷ್ಟು ನೀ ಅತ್ತಿರಬೇಕು
ಓಡಿಹೋದ ರಣಹೇಡಿ
ನಾಚಿಕೆಯಾಗಬೇಕು ನನ್ನೀ ಜನ್ಮಕ್ಕೆ
ಮನಸಾರೆ ಹಿಡಿ ಶಾಪ ಹಾಕಿಬಿಡು
ಅಷ್ಟೂ ಶಾಪ ತಟ್ಟನೆ ತಟ್ಟಿಬಿಡಲಿ
ಎಲ್ಲರೆದಿರೂ ನಗೆಯ ಮುಖವಾಡ ಧರಿಸಿ
ಓಡಾಡುತ್ತಿರುವ ನಯವಂಚಕ ನಾನು
Wednesday, February 6, 2019
ನಿನ್ನ ಕ್ಷಮೆ ಕೇಳಲೂ ನಾ ಅರ್ಹನಲ್ಲ
Monday, February 4, 2019
ಅವಳ ನೆನಪುಗಳ ಜೋಕಾಲಿಯಲ್ಲಿ
ಇಲ್ಲೆ ಎಲ್ಲೋ...
ಯಾರ ಕಣ್ಣಿಗೂ ಕಾಣದೆ
ಅಡಗಿ ಕುಳಿತಿರುವಳೋ
ಗುಟುರು ಹಾಕಿದಿರೆಂದು
ನಿಮ್ಮ ಮೇಲಿನ ಮುನಿಸಿಗೆ
ಮುಸಿಮುಸಿ ನಕ್ಕ ನನಗೂ
ಏನು ಕಾದಿದೆಯೋ
ಕಾದ ಬಾಣಲೆಯಂತಾಗಿದೆ
ನನ್ನೀ ಮನಸ್ಸು
ಹಾಳು ವಯಸ್ಸು ಕೇಳಬೇಕಲ್ಲ
ಬೇಡ ಬೇಡವೆಂದರೂ
ಅವಳ ಕಣ್ತುಂಬಿಕೊಳ್ಳಬೇಕೆಂಬ ತವಕ
ಕಂಡರಂತೂ ಹೇಳಿ ಕೊಳ್ಳಲಾಗದು
ಮೈಮನಸ್ಸುಗಳ ಪುಳಕ
ಪೂರ್ಣಿಮಾ
ಹುಣ್ಣಿಮೆಯ ಕಂಡು
ಉಬ್ಬೇರೊ ಆ ಅಲೆಗಳಿಗೂ
ನನಗೂ ಸಾಮ್ಯತೆ ಇದೆ ನಲ್ಲೆ
ಅಲ್ಲಿ ಚಂದಿರನ ಶರಶೀತಲ;
ಮನದಾಗಸದ ತುಂಬೆಲ್ಲ
ನಿನ್ನ ಪೂರ್ಣಚಂದಿರನಂತಿಹ
ಮುಖಕಮಲ
-ಶಿವಚೆನ್ನ
Friday, October 19, 2018
ಹಸಿವು
ತುಂಬಾ
ಹಸಿವಾಗುತ್ತಿದೆ
ಏನಿದೆಯೋ ಅದನ್ನೆ
ತಂದು ಬೇಗ ಬಡಿಸು,
ತಿಂದು ಹಾಗೆಯೇ
ಒಂದು ಸಣ್ಣ ನಿದ್ರೆಗೆ ಜಾರುವೆ
ಎದ್ದ ಮೇಲೆ ಇದ್ದೇ ಇದೆ
ನಿನ್ನ ಹಬ್ಬದ ಊಟ.
ತುಂಬಾ ಬಿಸಿಯೆಂದು
ಕೂಗಾಡಿದಿರೋ... ಗೊತ್ತಲ್ಲ
ನಾ ಸಿಟ್ಟಲ್ಲೇ...
ಮೊದಲು ತಂದು ಬಡಿಯೆ
ಹೆದರಿ ಬರುವಳೆಂದು ಕೊಂಡರೆ
ಲಟ್ಟಣಿಗೆಯ ಹಿಡಿದು ಬರಬೇಕೆ ?
ಕಾವ್ಯಕನ್ನಿಕೆ ಎಂಬ ಯಕ್ಷಿಣಿ
ನನ್ನವಳು
ಒಂದೇ ಒಂದು ಕ್ಷಣ
ಕಣ್ಮರೆಯಾದರು ಸಾಕು,
ಅದೆಲ್ಲಿಂದಲೋ....
ಓಡೋಡಿ ಬಂದು ಮುತ್ತಿಕ್ಕಿ;
ಇದ್ದಕ್ಕಿದ್ದಂತೆ ಮಾಯವಾಗುವ
ಇವಳ ಏನೆಂದು ಕರೆಯಲಿ
ಮೈ ಮನಸ್ಸಿನ ತುಂಬೆಲ್ಲ
ಆವರಿಸಿದಂತ್ತೆಲ್ಲ
ನನ್ನೊಳಗೊಳಗೇ ಖುಷಿ.
ಬಂದಾಗ ಸುಮ್ಮನಿದ್ದು
ಬಿಡಬೇಕೆಂದರೂ
ಅವಳ ಹಠದ ಮುಂದೆ
ನಾ ಮಂಡಿಯೂರಲೇ ಬೇಕು.
ದಾಸಾನುದಾಸ
ನಾಲ್ಕೈದು
ತಿಂಗಳುಗಳಿಂದ ಒಮ್ಮೆಯೂ
ಬಳಿ ಬರದವಳು
ಇಂದು ಇದ್ದಕ್ಕಿದ್ದಂತೆ ಬಂದಿಹಳು
ಹೂಮಾಲೆ ಹಿಡಿದು
ಮನದ ಮುಂಬಾಗಿಲಿಗೆ.
ಇವಳೆಣಿಸಿದಂತೆ ಎಲ್ಲವೂ
ಆಗಲೇ ಬೇಕೆನೋ...
ಊಹೆಗೂ ನಿಲುಕದೆ,
ನನ್ನ ಲಕ್ ಲೆಕ್ಕಾಚಾರದ ತರ್ಕಕೂ ಸಿಗದೆ
ಕಾಡುವ ಇವಳ
ಅದೆಷ್ಟು ಬಾರಿ ಗೋಗರೆದು
ಕಾಯ ವಾಚ, ಮನಸಾರೆ ಆರಾಧಿಸಿದ್ದೆ
ಎಲ್ಲಿಲ್ಲದ ಬಿಗುಮಾನಕೆ, ಅಸಡ್ಡೆಗೆ
ಠೂ.... ಬಿಟ್ಟುರೂ
ಸೋತು ಬಂದವಳ ಮುಂದೆ
ಮನಸ್ಸು ಮಾತ್ರ ಕುರಿಯ ಮಂದೆ..
Monday, January 9, 2017
ವೆರೈಟಿ_ವೆರೈಟಿ_ರಿಂಗ್_ಟೋನ್ಸ್
ರ್ರೀ.... ಅಳಿಯಂದ್ರೇ, ಅಳಿಯ ದೇವ್ರೂ
ಅಯ್ಯೋ..... ನಿಮ್ ಮಕ್ಕೆ ದೋಸೆ ಹುಯ್ಯಾ
ಆಗ್ಲಿಂದ ಒಂದೇ ಸಮ ರಿಂಗ್ ಆಗ್ತಿದೆ
ಅದೇನ್ ನಿದ್ದೆಯೋ... ಅಥವಾ ಮೈ ಮರೆವೋ
ನನ್ ಕೈಯಲ್ಲಂತೂ ಕೇಳಕ್ಕಾಗ್ತಿಲ್ಲ
ಇನ್ನು ಅಕ್ಕಪಕ್ಕದವರು ಕೇಳಿಸಿಕೊಂಡ್ರೆ
ನನ್ ಮುಖ ನೋಡಿ, ನೋಡಿ ನಗ್ತಾರಷ್ಟೆ
ನೀವೋ... ನಿಮ್ ಇನ್ ಕಮ್ಮಿಂಗ್ ಕಾಲ್ಸೋ
ನಿಮ್ಮನ್ನ ಕಟ್ಟಿಕೊಂಡ ನನ್ನ ಮಗಳಿಗೆ
ಬೇಕಾದ್ರೆ ಕೇಳಿಸಿಕೊಳ್ಳೋ ಜಾಣ್ಮೆ ,ತಾಳ್ಮೆ ಎರಡೂ ಇರಲಿ
ಎದ್ದೇಳ್ರಿ ಸಾಕು ಅಳಿಯ ಅಂತೆ ಅಳಿಯ
ಒಂದೆ ಎರಡೆ ಬಂದಿದ್ದೇ... ಬಂದಿದ್ದು, ಬಿಟ್ಟಿದ್ದೇ.... ಬಿಟ್ಟಿದ್ದು
ಅಬ್ಬಬ್ಬಾ.... ಅವೇನು ರಿಂಗ್ ಟೋನ್ಸ, ಕಾಲರ್ ಟೋನ್ಸ
ಅದು ಹೋಗಿ ಹೋಗಿ ಈ ಅಪರಾತ್ರಿಯಲ್ಲಿ
ಛೆಛೆಛೆಛೆಛೇ.... ಸಂಜೆ ರೀ ಛಾರ್ಜು ಮಾಡಿಸಿದ್ದರ
ಅಜೀರ್ಣದ ಸೌಂಡ್ ಎಫೆಕ್ಟು;
ನನ್ನವಳ ಅಪ್ಪಿ ಸಿಹಿಗನಸು ಕಾಣುತ್ತಿದ್ದವನ ಎಬ್ಬಿಸಿದ
ಆ ಕಿರಾತಕಿ ಅತ್ತೆಗೆ ಎರಡು ಇಡಬೇಕೆನಿಸಿದರೂ
ಛೇ.... ಎಷ್ಟಾದರು ಹೆಣ್ಣು ಕೊಟ್ಟ ದೇವರಲ್ಲವೆ
ನನ್ನದೇ ತಪ್ಪು;
ಫೋನ್ ಸ್ವಿಚ್ ಆಫ್ ಮಾಡಿದ್ದರೆ ಇಷ್ಟೆಲ್ಲಾ ನಾ ಕೇಳಬೇಕಿರಲಿಲ್ಲ
ನಿದ್ದೆಗಣ್ಣಲ್ಲೇ.... ನನ್ನವಳ ಎಬ್ಬಿಸಿ ಯಾರದ್ದೆ ಕಾಲು ?
ನೀನೇ.... ಎದ್ದು ಅದೇನೆಂದು ಸ್ವಲ್ಪ ನೋಡಬಾರದೆ ?
ಸುಮ್ನೆ ಬಿದ್ಕೊಳ್ರಿ ನಂದೆ ಕಾಲು , ಏನಾಯ್ತ್ ಈಗ
ನಿಮ್ ಕಾಲ್ಮೇಲೆ ನನ್ ಕಾಲು ಹಾಕ್ ಬಾರದಿತ್ತೆ !
ಆ ಹಾ.. ನನ್ನನ್ನ ಚಿನ್ನ,ರನ್ನಾ ಅಂತ ಸೊಂಟ ಮುಟ್ಟಿ
ಆಗ ಇದೆ ನೋಡಿ, ನಿಮಗೆ ಮಾರಿ ಹಬ್ಬ !! ಕಾಲಂತೆ ಕಾಲು
ಅಲ್ಲಾ... ನನ್ನವಳ ಕೇಳಿದ್ದಕ್ಕೆ ಇಷ್ಟು ಕೆರಳಿದರೆ
ಇವಳ ಜೊತೆ ನಾ ಸಂಸಾರ ಮಾಡಿದಂತೆ
ಯಾವ ಕಾಲರ್ ರಿಂಗೂ ಇಲ್ಲ,
ನೋಟಿಪಿಕೇಷನ್ ಮೊದಲೇ ಇಲ್ಲ
ಫೋನ್ ಸ್ವಿಚ್ ಆಫ್
ಆದರೂ ರಿಂಗ್ ಟೋನ್ಸ್ ಎಲ್ಲಿಂದ ಬಂತು !?
ಈ ವಯಸ್ಸಿಗೆ ಅತ್ತೆಗೆಲ್ಲೋ ಅರಳು ಮರುಳಿರಬೇಕು
ಅರ್ಥವಾಗದೆ ಬೆಳಿಗ್ಗೆ ಎದ್ದಾಗಲೇ ಗೊತ್ತಾಗಿದ್ದು
ಸಂಜೆ ತಿಂದ ವೆರೈಟಿ ವೆರೈಟಿ ಹಿದಕವರೆ ಬೇಳೆಯ
ಬಿಸಿಬಿಸಿ ತಿಂಡಿಗಳ " ರಿಂಗ್ ಟೋನ್ಸ್ " ಪ್ರಭಾವವೆಂದು