Monday, March 31, 2014

" ಚೈತ್ರದ ಸಂಭ್ರಮ "

ಚಿಗುರಿದೆ ಮನ ಮಾಮರದಿ
ಚೈತ್ರದ ಭಾವ ಚಿಗುರೆಲೆಯು 
ನಿನ್ನಾ ನೆನಪುಗಳ ಕೋಗಿಲೆಯ  ಕುಹೂ ಕುಹೂ... ತಾಳ ಮೇಳಕೆ
ಧಮನಿ ಧಮನಿಗಳಲ್ಲಿ ಹರಿಯುವ
ನಿನ್ನ ಪ್ರೀತಿ ಹೂನಗೆಯ ರಾಗಕೆ
ಹೊತ್ತು ತಂದ ಸುಮ ಸೌರಭದ
ಘಮ ಘಮದ ಗಂಧ ಗಾಳಿಗೆ
ಹೊಂಗೆ ಹೂವ ಗೊಂಚಲುಗಳಲ್ಲಿ
ಭೃಂಗದ ಸಂಗೀತ ಕಾಮಕೇಳಿ
ಹರಿವ ನೀರ ತೊರೆಗಳಲ್ಲಿ
ಜುಳು ಜುಳು ನಾದ ತೇಲಿ
ಮತ್ತೆ ಮತ್ತೆ ಯುಗಾದಿ ಬಂದಿದೆ
ಹರೆಯ ಮತ್ತೆ ಎನಗೆ ತಂದಿದೆ

Sunday, March 30, 2014

" ಕಲ್ಪನೆಗಳ ಕಾವ್ಯ ಕನ್ನಿಕೆ "

ಕರೆದಾಗಲೆಲ್ಲಾ ಕರುಣೆ ತೋರಿ
ಓಡೋಡಿ ಬರುತ್ತಿದ್ದವಳು,
ಉಸಿರಿಗೆ ಉಸಿರಾಗಿ ಬೆರೆತು
ಜೊತೆಯಾಗಿ ನಿಂತವಳು
ನನ್ನ ತೊರೆದು ಎಲ್ಲಿ ಹೋದಳೋ....

ನಲ್ಲೇ...ನೀ ನನ್ನ ಮದುವೆಯಾಗಿ
ಮನೆ ತುಂಬಿ, ಮೈದುಂಬಿ ಬಂದ ಮೇಲೆ
ಅವಳು ಈ ಹೃದಯದೊಳು ಏಕೋ ಇಲ್ಲ
ಎತ್ತ ಹೋದಳೋ..... ಒಂದೂ ಗೊತ್ತಿಲ್ಲ
ಇಲ್ಲೇ ಎಲ್ಲೋ... ಹೋಗಿ ಬರುವೆ ಎಂದವಳ
ಸುಳಿವಂತೂ ಎನಗೆ ತಿಳಿದೇ... ಇಲ್ಲ

ನಿನ್ನೊಲವ ಸುಖದ ಸುಳಿಗೆ ಸಿಲುಕಿ
ನಾನವಳ ಮರೆತು ಹೋದೆನೇನೋ.... ?
ಸುಳಿವ ತಂಗಾಳಿಯ ತಂಬೆಲರಂತೆ
ಮಿಡಿವ ಮನಕೆ ಇಂಪಾದ ಹಾಡಂತೆ
ನನ್ನ ಸಂತೈಸಿ, ಅಪ್ಪಿ ಮುದ್ದಾಡುತ್ತಿದ್ದವಳು

ಹಗಲಿರುಳೆನ್ನದೆ, ಮಳೆಗಾಳಿಯೆನ್ನದೆ
ಬೆಚ್ಚನೆಯ ಈ ಮೈ ಮನಕೆ
ತಂಪು ಹೊದಿಕೆಯ ಹೊದಿಸಿ
ನಿದಿರೆಗೆ ಮದಿರೆಯಾಗಿದ್ದಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ಕನಸ್ಸುಗಳಲ್ಲೇ... ನನ್ನ ತೇಲಿಸಿ
ಬಾಳ ಬಾನಂಗಳದಿ ಚಂದ್ರಿಕೆಯಾಗಿದ್ದಳು

ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತಿಕ್ಷಣವೂ ರಸಮಯ ತನನ
ಮುನಿಸು ತೊರೆದ ಬೆಳ್ಮುಗಿಲಾಗಿದ್ದಳು
ಕನಸುಗಳ ಬಿತ್ತಿ ಕಣ್ಮಣಿಯಾಗಿದ್ದವಳು

ನಾ ನಿಟ್ಟುಸಿರಿಟ್ಟರೂ ಎದ್ದೋಡಿ ಬರುತ್ತಿದ್ದಳು
ಕಂಗಾಲಾದರೂ ಮಿಡುಕಾಡಿ ಒದ್ದಾಡುತ್ತಿದ್ದಳು
ನೀ ನನ್ನ ಕೈಹಿಡಿದ ಮೇಲೆ
ನಿನ್ನ ಯೌವನದ ಕಿಚ್ಚು ಹೊಳೆಯೊಳಗೆ 
ಕೊಚ್ಚಿ ಹೋದ ಮೇಲೆ ಕಾಣೆಯಾದಳು 

ನಿದ್ದೆಯಲ್ಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ನನ್ನೇ ಪ್ರಶ್ನಿಸಿದ್ದೆ
ನಲ್ಲೇ... ನೀ ಬರುವ ಮುಂಚೆಯೇ....
ಅವಳೆದೆಯಲ್ಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ...! ಅರಿವಿಲ್ಲದಾ ಮಂಕೇ...
ನಿನಗೇಕೆ ಅವಳ ಮೇಲಯೇ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿ ರಾತ್ರಿಗೆ ಪ್ರತಿಸ್ಪರ್ಧಿಯಲ್ಲ
ನನ್ನೊಳಗಿನ ಕಲ್ಪನೆಗಳ " ಕಾವ್ಯ ಕನ್ನಿಕೆ "

Monday, March 24, 2014

ಚೆಲುವೇ... ನೀ ಎಲ್ಲಿರುವೇ....?

ನೀನು ಬಂದ ಮೇಲೆ
ಈ ಹೃದಯದೊಳಗೆ
ಬೇರೆ ಜಾಗ ನಿನಗಿನ್ನೆಲ್ಲಿದೇ...
ನಿಲ್ಲದು ಈ ಚಡಪಡಿಕೆ
ಸಲ್ಲದು ಈ ನಡವಳಿಕೆ
ನಿದಿರೆಯು ಏಕೋ ದೂರಾ...
ಮನಸ್ಸಿಗೂ ಬಲು ಭಾರ
ನಿನ್ನನು ಕಾಣದೆ ನಾನು
ಹೇಗಿರಲಿ ಹೇಳು ನೀನು...
ಕಣ್ಣಲೇ ನನ್ನಾ... ಕೆಣಕುತ
ನಗುತಲೇ ಮನವ ಸೆಳೆದೆ
ಪ್ರೀತಿಯ ನೀ ಸುರಿಸುತ
ನನ್ನನೇ ನೀ ಮೈಮರೆಸಿ
ಏತಕೆ ನೀ ಹೀಗೆ ಕಾಡಿರುವೆ
ಹೇಳಲು ನೀ ಬಾ... ಬಾರೆ
ಕಾಣದೆ ಇಂದು ನಿನ್ನನು
ಅಲೆಯುವ ನೊಂದು ನನ್ನನು
ನೀ ಹುಚ್ಚನ ಮಾಡಿರುವೆ
ಹೇಳದೆ ಕೇಳದೆ ನೀ ಎಲ್ಲಿರುವೆ ?

" ಬಿಸಿಲ್ಗುದರೆ "

ಸಂಜೆ ಬರುವಾಗ ಹಾಗೆಯೇ ಹೂವು, ಹಣ್ಣು
ಮಲ್ಲಿಗೆಯ ಜೊತೆಗೆ ಒಂದಷ್ಟು ಖಾರ, ಸ್ವೀಟು
ಸ್ವಲ್ಪ ಧಾರಾಳವಾಗಿ ತನ್ನಿ
ಇದರಲ್ಲೂ ನಿಮ್ಮ ಜಿಪುಣತನ ಬೇಡ ;
ನನ್ನವಳ ಕಟ್ಟಪ್ಪಣೆ !
ಇಂದೇನು ಜನ್ಮದಿನವೆ ನಿನ್ನದು, ನನ್ನದು
ಮಕ್ಕಳದ್ದು, ಇಲ್ಲವೇ.... ಇಲ್ಲ
ನಮ್ಮ ಮದುವೆಯ ವಾರ್ಷಿಕೋತ್ಸವವೇ...?
ಅದು ಸದ್ಯಕ್ಕಂತೂ.... ಇಲ್ಲ ಬಿಡಿ ,
ಹಾಗಿದ್ದ ಮೇಲೆ ಮತ್ತೇಕೆ ಇಷ್ಟೆಲ್ಲಾ ಖರ್ಚು...?
ಕಣ್ಣೊಡೆದು ನಕ್ಕು
ನನ್ನವಳ ಕೇಳಿಯೇ ಬಿಟ್ಟೆ ;
ಏನಾದರು ರಾತ್ರಿಗೆ ವಿಶೇಷವೇ...?
ಆ ಹಾ.... ಚಪಲ ಚೆನ್ನಿಗರಾಯರು
ನಿಮ್ಮದು ಯಾವಾಗಲೂ ಇದ್ದದ್ದೇ
ಮೊದಲು ಇಲ್ಲಿಂದ ಹೊರಡಿ,
ಹಾಗೆಯೇ ನಿಮ್ಮನಿಲ್ಲಿ ಬಿಟ್ಟರೆ
ನನ್ನ ಕೈಕಾಲು ತಲೆಯೂ ಓಡದು...
ಇಂದು ಆಫೀಸಿಗೆ ನೀವು ಹೋದಂತೆ ...
ಇದೆಲ್ಲಾ .... ಇಂದೇ ತರಬೇಕೆ ?
ತಿಂಗಳ ಕೊನೆ ಬೇರೆ, ಹಣದ ಮುಗ್ಗಟ್ಟು
ದಿಢೀರೆಂದು ಕೇಳಿದರೆ ಹೇಗೆ ?
ನಾಳೆ, ನಾಡಿದ್ದು ತಂದರಾಗದೇ.....?
ರ್ರೀ .... ಸುಮ್ಮನೆ ನನ್ನ ರೇಗಿಸಬೇಡಿ,
ಹೋಗಿಹೋಗಿ ನಿಮಗೇಳಿದ್ದು ನನ್ನ ತಪ್ಪು;
ನೀವು ತರುವುದೇನೂ ಬೇಡ
ನಾನೇ ಎಲ್ಲಾ ...ತಂದು ಕೊಳ್ಳುವೆ
ಒಂದೆರಡು ಸಾವಿರ ಕೊಟ್ಟು ಹೊರಡಿ...
ಗುಟ್ಟು ಬಿಡದ ನನ್ನವಳ ಕಂಡು
ಮನ ತುಸು, ಸಿಟ್ಟೇರಿದರೂ...
ಅವಳು ಕೇಳಿದ ದುಡ್ಡು ಕೊಟ್ಟು
ಮಧುರ ರಾತ್ರಿಯ ಕನಸ್ಸು ಕಾಣತ
ಆಫೀಸಿಗೆ ಬಿರಬಿರ ಹೊರಟಿದ್ದೆ...
ನೀರವ ರಾತ್ರಿಯ ನೀಳ ತೋಳ್ಗಳಲಿ
ಕಾಲ್ಗೆಜ್ಜೆಯ, ಬಳೆಯ ಸದ್ದಿಗೆ
ಮನ ಹುಚ್ಚೆದ್ದು ಕುಣಿದು ,
ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ
ಸಂಜೆ ಮನೆಗೆ ಬಂದಾಗಲೇ ಗೊತ್ತಾಗಿದ್ದು
ಅತ್ತೆ, ಮಾವ ನಾದಿನಿ
ಇವಳ ನೋಡಲು ಬಂದ ಹುಡುಗನ
ಮನೆಯವರ ದಂಡು ಕಂಡು....!!

Saturday, March 22, 2014

" ಉಯ್ಯಾಲೆ "

ಮೊದಲು ಸುರಿದ ಮಳೆಗೇ... 
ಮಿಂದೆದ್ದ ಆ ಭುವಿಯಂತೆ,  
ಆ ನಿನ್ನಾ ಕಣ್ಣೋಟದ ಸೆಳತಕೆ 
ಕರಗಿ ಸೋತ ಈ ಮನಸ್ಸು;
ನಾ ಕಂಡೆ ನೂರಾರು ಕನಸು 
ನೀ ಏನೇ ಹೇಳೂ.... ನನಗೇ
ನನ್ನೊಳಗೊಗೆ ಪ್ರತಿ ಮಿಡಿವ
ಎದೆ ಬಡಿತದ, ಲಯ ತಪ್ಪಿದ
ಮಧುರ ಮೈತ್ರಿಯ ಆಕರ್ಷಣೆ 
ಏಕೋ ಮೌನದ ಸಂಭಾಷಣೆ
ಆ ನಿನ್ನಾ ಸವಿನೆನಪುಗಳು
ಉಲ್ಲಾಸದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೀರ ನೊರೆ ಹಾಲಿನ ಕಚಗುಳಿಗೆ
ನಾ ಹೇಗೆ ಸಹಿಸಲಿ ನೀ ಹೇಳು
ನಿಂತಲ್ಲಿಯೇ ನಾ ಕರಗಿ ಹೋದೆ
ನಿಂತಲ್ಲಿಯೇ ನಾ ಕರಗಿ ಹೋದೆ.... 

Friday, March 21, 2014

" ಕಾವ್ಯೋದ್ಭವ "

ನಾ ಯೋಚಿಸಿ ಯೋಚಿಸಿ ಸಾಕಾಗಿ 
ಆಲೋಚನೆಗಳಲ್ಲಿ ಮುಳುಗಿದರೂ....
ದಿನವಿಡೀ ತೂಕಡಿಸಿ ಕೂತರೂ...
ಹತ್ತಿರ ಸುಳಿಯದು, ನೆನಪಿಗೆ ನಿಲುಕದು
ಒಮ್ಮೊಮ್ಮೆ ಏನೂ... ಹೊಳೆಯುವುದೇ ಇಲ್ಲ;
ಪುಟಗಟ್ಟಲೆ ಬರೆಯಬೇಕೆಂಬ ಹಂಬಲಕೆ
ನಾ ಬಿಡಬೇಕಷ್ಟೇ... ನಿಟ್ಟುಸಿರಿನ ಎಳ್ಳು- ನೀರು
ರಾತ್ರಿಯಿಡೀ ನಿದ್ದೆಯಿಲ್ಲದೆ ಅಡ್ಡಾದಿಡ್ಡಿ ಒದ್ದಾಡಿದರೂ...
ಆ ಅಗಾಧವಾದ ಆಳಕ್ಕೆ ಹೊಕ್ಕಂತೆಲ್ಲಾ....
ಅಂಧಕಾರದ ಆರ್ಭಟವೇ .... ಹೆಚ್ಚು
ಮುಗ್ಗರಸಿ ಬಿದ್ದೀನೆಂಬ ಭಯವಿಲ್ಲ,
ಪುಂಖಾನುಪುಂಖವಾಗಿ ಒಮ್ಮಿಂದೊಮ್ಮೆಲೇ
ಮನ ಮಂಥನದಿ ಮಂಥಿಸಿದಷ್ಟೂ....
ಕಾರ್ಕೋಟಕ ಹಾಲಾಹಲ, ಕೋಲಾಹಲದ ಜೊತೆ ಕಾವ್ಯಾಮೃತದ ಉದ್ಭವ ...

ವಿಶ್ವ ಕವನ ದಿನಕ್ಕಾಗಿ ಬರೆದದ್ದು ( World Poetry Day )

Thursday, March 20, 2014

" ಪ್ರೀತಿಯ ಉಯ್ಯಾಲೆ "

ಮೊದಲ ಮಳೆಗೇ....
ಮಿಂದ ಆ ಭುವಿಯಂತೆ,
ಆ ನಿನ್ನ ಕಣ್ಣ ನೋಟಕೆ
ಕರಗಿ ಸೋತ ಈ ಮನಸ್ಸು;
ಕಂಡೆ ನೂರಾರು ಕನಸು
ನೀ ಏನೆ ಹೇಳೂ... ನನಗೆ
ನನ್ನೊಳಗೊಗೆ ಮಿಡಿವ
ಆ ನಿನ್ನಾ ಸವಿನೆನಪುಗಳ
ಉತ್ಸಾಹದ ಉಯ್ಯಾಲೆಯು
ನನ್ನನ್ನೇ ತಬ್ಬಿ ತೂಗಿರಲು
ಕಡಲ ಅಲೆಯು ಮುತ್ತಿಕ್ಕುವ ಹಾಗೆ
ನೊರೆ ಹಾಲಿನ ಕಚಗುಳಿಯ ಬೇಗೆ
ನಿಂತಲ್ಲೇ ನಾ ಕರಗಿ ಹೋದೆ.... !