Friday, May 30, 2014

" ಅರ್ಥವಾಗದವಳು " ೨

ಎಂದೂ.... ಲಟ್ಟಣಿಗೆ ಹಿಡಿದು
ಬಾಗಿಲ ಬಳಿ ಕಾಯದ ನನ್ನವಳು,
ಇಂದೇಕೋ .... ಮುಖವೆಲ್ಲ ಕೆಂಪಾಗಿಸಿ
ಕಣ್ಣ ಅತ್ತಿತ್ತ ಹೊರಳಿಸಿ, ಬುಸುಗುಟ್ಟುವುದ ಕಂಡು;
ನನಗೂ... ಒಳಗೊಳಗೆ ನಡುಕ ಶುರುವಾಗಿ
ನನ್ನಿಂದ ಇಂದೇನಾದರು ಯಡವಟ್ಟಾಯ್ತೆ....?
ಯೋಚಿಸಿದಷ್ಟೂ ... ಎಲ್ಲವೂ ಗೊಜಲುಗೊಜಲು
ಒಂದಕ್ಕೊಂದು ಮುಷ್ಕರ ಹೂಡಿ ನೆನಪಿಗೆ ಬರದು

ಓಹ್ !! ಪಕ್ಕದ ಮನೆಯ ಸುಂದರಿಯ ಜೊತೆ
ಬೆಳಿಗ್ಗೆ ಬೈಕಿನಲಿ ಹೋದದ್ದು ಇವಳೇನಾದರು ಕಂಡಳೆ?
ಆಟೋ ಸ್ಟ್ರೈಕಿಂದ ಆಫೀಸಿಗೆ ಹೋಗಲು
ನನ್ನ ಬೈಕಲ್ಲಿ ಡ್ರಾಪ್ ಕೊಟ್ಟಿದ್ದು ದುರುದೃಷ್ಟವಾಯ್ತೆ?

ಸಂಜೆ ಸಿಗ್ನಲ್ ಬಳಿ ಹೂ ಮಾರುವ ಆ ಹುಡುಗಿ
ಸಾರೂ... ಮೊಳ ಐದೇ... ರೂಪಾಯಿ ಕೊಂಡ್ಹೋಗಿ
ಅಮ್ಮಾವರು ಖುಷಿಯಾಗುವರು ಕಣ್ಣ ಮಿಟುಕಿಸಿ
ಎಷ್ಟೆಲ್ಲಾ... ಕಾಡಿಬೇಡಿ, ಪೀಡಿಸಿದರೂ...
ಕೇಳದೆ ಗದರಿಸಿ ಕಳಿಸಿದ್ದು ನನ್ನದೇ.... ತಪ್ಪು !!

ಒಂದೆರಡು ಮೊಳ ಮಲ್ಲಿಗೆ ಹೂ, ಮೈಸೂರ್ ಪಾಕ್
ತಂದಿದ್ದರೆ ಕರಗಿಬಿಡುತಿದ್ದಳೋ... ಏನೋ ....!!!
ಇಂದು ಇನ್ನೇನು ಕಾದಿದೆಯೋ... ಗ್ರಹಚಾರ
ಬಡಪಾಯಿಯ ಗಂಟಲ ಪಸೆ ಒಣಗಿ
ಇದ್ದಬದ್ದ ದೇವರಿಗೆಲ್ಲಾ... ಹರಕೆ ಹೊತ್ತು
ಹೆಲ್ಮೇಟ್ ತೆಗೆಯದೆ ದೇಶಾವರಿ ನಗೆ ಬೀರಿ
ಹೆ ಹೆ ಹೇ.... ಇದೇನೆ ಪಾರೂ.... ಲಟ್ಟಣಿಗೆ
ನನ್ನ ತಲೆಗೆ ಮೊಟುಕುವೆಯೋ.... ಹೇಗೆ?
ನಿನ್ನ ನೋಡಿದರೆ ತಿಳಿಯದೆ, ನೀ ಅಂತವಳಲ್ಲ ಬಿಡು
ಎಷ್ಟಾದ್ರೂ ನನ್ನ ಮುದ್ದಿನ ಅರ್ಧಾಂಗಯಲ್ಲವೆನೆ

ನನ್ನವಳು ಕಿಲಕಿಲ ನಕ್ಕು, ಹುಸಿ ಕೋಪ ಬೀರಿ
ಸಾಕು ಸುಮ್ಮನಿರಿ ಹೀಗೆಲ್ಲಾ ... ನನ್ನ ಹೊಗಳಿದರೆ
ಥೂ.... ಹೋಗಿ , ಇತ್ತೀಚೆಗಂತು ನೀವು...
ನಿಮಗಿಷ್ಟಾಂತ ಎಣ್ಣೆಗಾಯಿ ಮಾಡಿ ಕಾಯುತ್ತಿರುವೆ
ಆ ಕೆಲಸದ ತಿಮ್ಮಿ ಚಪಾತಿ ಲಟ್ಟಿಸಲು
ಇನ್ನೂ.... ಬರಲೇ.... ಇಲ್ಲ ನೋಡಿ ಎನ್ನಬೇಕೆ!!!

Sunday, May 25, 2014

" ಕದ್ದವರು ಯಾರು "....?

ಹೂವಿನ ಕರಗ ಬಂತೆಂದು ಜನ,
ಗೋವಿಂದ ಗೋವಿಂದ ಗೋ... ವಿಂದ
ನೂಕುನುಗ್ಗಲಿನ ತಳ್ಳಾಟದಿ
ಜೋರಾಗಿ ಢೀ ಕೊಟ್ಟಿದ್ದಲ್ಲದೆ
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸರ್
ಅದು ಅದು... ಯಾರೋ... ಹಿಂಬದಿಯಿಂದ ತಳ್ಳಿದರು
ಹಾಗಾಗಿ ನಿಮ್ಮ ಮೇಲೆ ಬಿದ್ದೆ ವೆರಿ ಸಾರಿ
ನಗುತ ಆ ಜನ ಜಂಗುಳಿಯಲ್ಲಿ ಮಾಯವಾದವಳ
ಆ ಮುದ್ದು ಮುಖ ಮತ್ತೇ.. ಕಣ್ಮುಂದೆ ಬಂದು
ಹಾಗೇ... ಮೈಮರೆತವನ, ಒಳ ಮನಸ್ಸು ಎಚ್ಚರಿಸಿ
ಪ್ಯಾಂಟ್ ಜೇಬಿಗೆ ಕೈ ಹಾಕಿದಾಗಲೇ... ಗೊತ್ತಾಗಿದ್ದು
ಜೇಬು ಖಾಲಿ ಖಾಲಿ, ಪರ್ಸ್ ಮಂಗಮಾಯ
ಆ ಮುದ್ದು ಮುಖದ ಹುಡುಗಿ ಕದ್ದೋದಳೇ....?
ಅಥವಾ ಆ ಮಂಗಳ ಮುಖಿಯರ ಗುಂಪೆ...!?
ಎಷ್ಟು ನಾಜೂಕಾಗಿ ಹಿಂಬದಿಗೆ ಬಡಿದು
ಅರೇ.... ಮಾಮೂ.... ತೆಗಿ ತೆಗಿ ದುಡ್ಡು
ಅವರಿಗೇನ್ಗೊತ್ತು ನಾ ಮಫ್ತಿಯಲ್ಲಿರುವ ಪೊಲೀಸ್ಸೆಂದು
ಏಯ್ ... ಸಾಹೇಬ್ರ ಹತ್ರಾನೆ ನಿಮ್ ರೋಲ್ ಕಾಲ
ಹೂಂ... ಹೊರಡಿ ಇಲ್ಲಿಂದ ಲಾಠಿ ಬೀಸಿದ್ದ ಪೀಸಿ....

Wednesday, May 14, 2014

" ಮಳೆ ನಿಂತು ಹೋದ ಮೇಲೆ "

ದಿನಾ ಸಂಜೆ, ಬಿಸಿಬಿಸಿ ಹಬೆಯಾಡುವ
ಕಾಫಿಯ ಕೊಡುತ್ತಿದ್ದ ನನ್ನವಳು
ಬಂದು ಅರ್ಧ ಗಂಟೆಯಾದರೂ...
ನನ್ನವಳ ಸುಳಿವಿಲ್ಲ, ಕಾಫಿಯೂ ಇಲ್ಲ
ಇಣುಕಿ ಹೋದವಳ ಕಂಡು
ಕುರುಕುಲು ತಿಂಡಿಯ ಜೊತೆಜೊತೆಗೆ
ಕಾಫಿಯ ತರಬಹುದೆಂದು ಕೊಂಡರೆ
ಉಹೂಂ.... ಬರಲೇ.... ಇಲ್ಲ
ನಾ ಕಾದದ್ದಷ್ಟೇ.... ಬಂತು ಭಾಗ್ಯ
ಅವಳ ಕೈಯಿಂದ ರುಚಿಯಾದ
ಕಾಫಿಯ ಕುಡಿದರೇನೆ ನನಗೂ ನೆಮ್ಮದಿ
ಇವಳಿಗೆ ಏನಾಗಿದೆ? ಎಂದೂ... ಇಲ್ಲದ
ನನ್ನ ಮೇಲೆ ತಾತ್ಸಾರ ಇವಳಿಗೆ ಏಕೆ?
ತಲೆ ಕೆಡಿಸಿಕೊಂಡರೆ ನಾ ಕಾಫಿ ಕುಡಿದಂತೆ
ಎಲ್ಲೋ ಏನೋ ... ಯಡವಟ್ಟಾಗಿರಬೇಕು...
ನನ್ನವಳ ಪ್ರೀತಿಯಿಂದಲೇ... ಹತ್ತಿರ ಕರೆದೆ.
ಶೈಲೂ.... ಬೇಗ ಮಾಡಿ ತರಬಾರದೇನೆ
ಅವಳಿಗೆಲ್ಲಿತ್ತೋ... ತಡೆಹಿಡಿದಿದ್ದ ಅಷ್ಟೂ ಸಿಟ್ಟ
ಒಮ್ಮೆಲೆ ಬಿರುಗಾಳಿಯಂತೆ ಬಂದು,
ಕಾಫಿಯ ಲೋಟವ ಟೀಪಾಯ್ ಮೇಲೆ ಕುಕ್ಕಿ;
ಹಾಂ ಬಂದಿರಾ... ಗಂಟೆ ಎಷ್ಟಾಯ್ತು ನೋಡಿ !
ಈಗಾಗಲೇ.... ಗಂಟೆ ಆರಾಯ್ತು
ಮಧ್ಯಾಹ್ನ ಬೇಗ ಬರುವೆ ಎಲ್ಲರೂ ರೆಡಿಯಾಗಿರಿ
ಶೋ ರೂಮಿಂದ ಹೊಸ ಬೈಕ್ ತರುವ ಎಂದೇಳಿ
ಹೀಗೆ ಲೇಟಾಗಿ ಬರುವುದೇ....?!
ಅವಳೆಲ್ಲಿ ಹೋದಳು ಆ ನಿಮ್ಮ ಕೋತಿ...
ಹೆಣ್ಣೆಂಬ ಭಯವೂ... ಇಲ್ಲ, ಭಕ್ತಿಯೂ ಇಲ್ಲ
ಮಗಳ ಮುದ್ದಿಸಿ ತಲೆಯ ಮೇಲೆ ಕೂರಿಸಿ ಕೊಳ್ಳಿ
ನಮ್ಮ ಕೈಗೆ ನಾಳೆ ಚಿಪ್ಪು ಕೊಡುವಳು
ಏನೋ ... ಗಂಡು ಹುಡುಗ ನನ್ನ ಕಂದ
ರಾತ್ರಿಯಾದರು ನನಗೆ ಭಯವಿಲ್ಲ...!!
ಅಣ್ಣ ತಂಗಿ ಹೊಸ Royal Enfield Bikeನ ಮೇಲೆ ಬಂದಾಗ... ಇವಳ ಮುಖ ನೋಡಬೇಕಿತ್ತು....!!
ಚಿತ್ರಕೃಪೆ : ಅಂತರ್ಜಾಲ
ಶಿವಚೆನ್ನ

Tuesday, May 13, 2014

" ಅರ್ಥವಾಗದವಳು " - ೧

ಅವಳು ಯಾವಾಗಲೂ ಹಾಗೆಯೇ
ಎಲ್ಲರಂತಲ್ಲದಿದ್ದರೂ.....
ಒಮ್ಮೊಮ್ಮೆ ಅರ್ಥವಾಗುವುದೇ... ಇಲ್ಲ,
ಗಂಟೆಗಟ್ಟಲೆ ಫೋನಿನಲ್ಲಿ
ಅದೆಷ್ಟು ಮಾತಾಡುವ ವಾಚಾಳಿಯಂದರೆ
ಇವಳೇನ ಎಂದು ಮೂಗ ಮೇಲೆ ಬೆರಳಿಟ್ಟು ಕೊಳ್ಳಬೇಕು ಕೆಲವೊಮ್ಮೆ ಎದಿರು ಬದಿರು ಸಿಕ್ಕರೂ ಮಾತಾಡದೆ
ಹಾಗೆಯೇ ಸಾಗುವ ನಕ್ಕರೂ ಕಣ್ಣರಳಿಸದ,
ಅಪರಿಚಿತಳಂತೆ ಉಳಿವ ಇವಳು
ಬಾನು ಕೆಂಪೇರಿ, ಹಕ್ಕಿಗಳ ಕಲವರಕ್ಕೆ
ಸೂರ್ಯ ಉದಯಿಸಿದರೂ ಮಾತಾಡದೆ ಬಿಡುವುದೇ... ಇಲ್ಲ
ಛೆ ಹಾಳಾದ್ದು ಆಗಲೇ ಬೆಳಕಾಯ್ತೇ.... 
ಇನ್ನು ನೀ ಮಲಗೋ ಹಾಯಾಗಿ ....
ಕೆಲವೊಮ್ಮೆ  ತುಸು ಇರಿಸು ಮುರಿಸಾದರೂ...
ದಿನ, ವಾರಗಟ್ಟಲೇ ಮಾತಾಡದೆ
ಮೌನಕೆ ಶರಣಾಗಿ ಒಗಟಾಗಿ ಬಿಡುವಳು
ಯಕ್ಷ ಪ್ರಶ್ನೆಯಾಗಿ ಉಳಿದವಳ ಪ್ರೀತಿಗೆ
ಅವಳ ಮನ ಮೋಹಕ ನಗೆಗೆ ಸೋತರೂ
ಇನ್ನೂ ... ನನ್ನಿಂದ ಕಾರಣ ಹುಡುಕಲಾಗಲಿಲ್ಲ...

ನನ್ನ ಮರೆತು ಬಿಡೋ... ಬುದ್ದು.....,
ನಾಳೆ ನನ್ನ ನೋಡಲು ಹುಡುಗನ ಕಡೆಯವರು ಬರುವರು
ನೀನೇ ನಿಂತು ಅವರ ಆದರಿಸಿ, ಉಪಚರಿಸಬೇಕು
ನನಗಾಗಿ ನನ್ನ ಸ್ನೇಹದ ಉಡುಗೊರೆಯಾಗಿ ಬರುವೆಯಲ್ಲಾ....!!
ನಾನವಳ ಮಾತ ಕೇಳಿ ಇಡೀ ರಾತ್ರಿಯೆಲ್ಲಾ ... ಒದ್ದಾಡಿದ್ದೆ
ಅವಳ ಆಲೋಚನೆಯಲ್ಲೇ... ಅವಳ ಮನೆಗೆ ಹೋಗಿ 
ಬೈಯ ಬೇಕೆಂದು ಬೈಕ್ ಅತ್ತಿ ಹೋದವನು
ಸೀದ ಸೇರಿದ್ದು ಆಸ್ಪತ್ರೆ.....,
ಗುಡುಗು ಮಿಂಚಂತೆ ಬಂದವಳು
ಅಯ್ಯೋ .... ಬುದ್ದೂ.... ನೀನೆಂತವನೋ...
ನಾ ತಮಾಷೆಗೆ ಹೇಳಿದ್ದು , ನಿಜವೆಂದು ಕೊಂಡೆಯೋ...ಹೇಗೆ? ಈ ಹೃದಯ ಕಷ್ಟಗಳಿಗೆ ಮರುಗದೆ ಕಲ್ಲಾಗಿರಬೇಕು
ಆಗಲೇ ಪ್ರೀತಿ ಗಟ್ಟಿಯಾಗುವುದು
ಛೆ ಛೇ... ನೀ ಹೀಗೆಲ್ಲಾ ... ಅಳುವುದೆ
ಮುತ್ತಿತ್ತು ಹೋದವಳು ಬಂದದ್ದು
ಬೆಳದಿಂಗಳ ನಡುರಾತ್ರಿಗೆ, "ಫೋನಾಯಿಸಿ "
ನನ್ನೆಲ್ಲಾ .... ನೋವ ಮರೆಸಿದ್ದಳು 

Sunday, April 20, 2014

" ಕಾಡು ಮಲ್ಲಿಗೆ "

ಮುದ್ದು ಗೌರಿಯ ಕೊರಳ ಹಗ್ಗವ ಬಿಚ್ಚಿ
ನನ್ನ ಹಳ್ಳವ ನಾನೇ... ತೋಡಿಕೊಂಡೆನೇ...!
ಎಲ್ಲೆಂದರಲ್ಲಿ ಎಗರೆಗರಿ ಜಿಗಿಯುವ ಜಿಂಕೆಯಂತೆ
ಅಡ್ಡಾದಿಡ್ಡಿ ಓಡುವ ಗೌರಿಯ ಹಿಡಿಯಲಾದೀತೆ...
ಅದರ ಸರಿಸಮಕೆ ನಾ ಓಡುವುದುಂಟೆ
ಹಳ್ಳ-ಕೊಳ್ಳ, ಗಿಡಗಂಟೆ ಪೊದೆಗಳ ದಾಟಿ
ದಿಬ್ಬ ಹತ್ತಿ, ಕ್ಷಣಾರ್ಧದಲ್ಲಿ ಕಣ್ಮರೆಯಾದುದ ಕಂಡು
ಮುಳ್ಳು ಚುಚ್ಚಿ, ಮಂಡಿ ಒಡೆದು ರಕ್ತ ಬಂದರೂ...
ಅದಲೆಕ್ಕಿಸದೆ ಹುಚ್ಚಿಯಂತೆ ಹುಡುಕುತ ಅಲೆದು

ಅಯ್ಯೋ... ಗೌರಿ, ಹರಿವ ಹೊಳೆದಂಡೆ ಬೇರೆ
ನೀ ಎಲ್ಲಿ ನೀರಿಗೆ ಜಾರಿ ಬೀಳುವೆಯೋ....
ಹೊಂಚು ಹಾಕುವ ನರಿ, ನಾಯಿಗಳಿಗೆಲ್ಲಿ ಆಹಾರವಾಗುವೆಯೋ....
ನೀ ಎಲ್ಲಿದ್ದರೂ ಬಂದು ಬಿಡು ಗೌರಿ
ನಿನ್ನ ಬಿಟ್ಟು ತಪ್ಪು ಮಾಡಿದೆ ಗೌರಿ ಗೌರೀ....

ಅದೆಲ್ಲಿದ್ದನೋ... ಪಾಪಿ, ಬಿಡದೆ ಅಡ್ಡಗಟ್ಟಿ
ವಿಕೃತ ನಗೆ ನಕ್ಕು ಮುತ್ತಿಕ್ಕಲು ಬಂದವನ ದೂರ ತಳ್ಳಿ ಓಡಲೆತ್ನಿಸಿದರೂ... ನನ್ನ ಬಿಡಲಿಲ್ಲ
ಎಂದೂ... ನೋಡಿರದ ಅಪರಿಚಿತ ಮುಖ
ಪಕ್ಕದ ಹಳ್ಳಿಯವನೋ.... ಏನೋ... ಇರಬೇಕು
ಹಾಳಾದ್ದು ದುರದೃಷ್ಟ ಇಂದೇ ಮೇಲೆರಗಬೇಕೆ...?
ಅಟ್ಟಾಡಿಸಿ, ಗೋಳಾಡಿಸಿ ಹಿಡಿದಿದ್ದರು....

ಬೆ ಬೆ ಬೆ ಬೆಬ್ಬೆ ಬೆಬ್ಬೇ ಬೆಬ್ಬೆ ಬೇ... ಬೇ... ಬೇ
ನನ್ನ ಒಡಹುಟ್ಟಿದ ಅಣ್ಣಗಳಿರ, ಬಂಧುಗಳಿರಾ...
ನಿಮ್ಮ ತಂಗಿಯೆಂದರಿತು ನನ್ನ ಬಿಟ್ಟು ಬಿಡಿ
ನಿಮ್ಮ ದಮ್ಮಯ್ಯ, ಕೈ ಮುಗಿದರೂ....
ಅತ್ತು ಅಂಗಲಾಚಿ ಬೇಡಿದರೂ ಬಿಡಲಿಲ್ಲ
ಅಯ್ಯೋ .... ನನ್ನ ದುರ್ವಿಧಿಯೇ....
ಇವರಿಗೆಲ್ಲಿ ಕೇಳಿಸಿತು ಮಾತು ಬಾರದ
ಈ ಮೂಗಿಯ ರೋಧನ

ಮಾತಿಲ್ಲದವಳ ಮೂಗಿಯಿಂದೇನು ತೊಂದರೆಯೇ.. ಯಾರಿಗೂ... ಹೇಳಲಾರಳು ಇಂದು ನಮಗೆ ಹಬ್ಬ
ಎಂದೊಬ್ಬ ಬಂದು ಮುತ್ತಿಕ್ಕಿ, ತುಟಿ ಕಚ್ಚಿದವನ ಒದ್ದು
ನಾ ಓಡಿದರೂ... ಮತ್ತೆ ಹಿಡಿದು ಹೊತ್ತು
ಒಂದೊಂದೇ ಬಟ್ಟೆ ಕಿತ್ತೆಸೆದರು...
ಹಸಿದ ಮೃಗದಂತೆ ಒಮ್ಮೆಲೇ ಮೇಲೆರಗಿದರು
ಕಂಬನಿಯೊಂದು ಕಡೆ, ಸಹಿಸಲಾಗದ ನೋವು
ಅಂಬಾ.... ಎಂದು ಕೂಗುವ ಗೌರಿ ಒಂದು ಕಡೆ...

ಅಯ್ಯೋ ... ಅಮ್ಮಾ ...., ಅಪ್ಪಾ...
ಈ ನೋವ ತಾಳೆನೇ.... ಬಂದು ಕಾಪಾಡಿ
ಓ... ದೇವರೇ .... ಕಾಪಾಡು ತಂದೇ....
ಅಮ್ಮಾ ... ನನ್ನ ಯಾಕಾದರು ಹೆಣ್ಣಾಗಿ ಹೆತ್ತೆಯೇ...
ನನ್ನ ಅಳುವ ಕೂಗು ಕೇಳಿಸಿತೆ
ಅತ್ತೂ.... ಅತ್ತು ಅಸಾಧ್ಯ ನೋವಿಗೆ ಸತ್ತಿದ್ದೆ

Friday, April 18, 2014

" ಅಮ್ಮನೆಂದರೆ ನನ್ನ ಜೀವ ನನ್ನ ದೈವ "

ಹೊತ್ತೊತ್ತಿಗೂ ತುತ್ತಿತ್ತು ಮುತ್ತಿತ್ತು
ಹೊತ್ತು ಹೆತ್ತವಳು ನೀ ನನ್ನ ಅಮ್ಮ

ಕರಿಗತ್ತಲಲ್ಲಿ ಗುಮ್ಮ ಬಂದನೆಂದ್ಹೆದರಿ
ಅಂಡು ಒದ್ದೆಗೊಂಡು ಒದ್ದಾಡುವಾಗ

ಅದನು ಒರಸಿ, ಅಪ್ಪಿ ಸಂತೈಸುತ
ಮಮ್ಮು ಉಣ್ಣಿಸಿದವಳು ನೀ ತಾನೆ

ಅತ್ತತ್ತು ಬಿಕ್ಕುವಾಗ ಗಲ್ಲವ ಹಿಡಿದೆತ್ತಿ
ಮುದ್ದಿಸಿ ಬೆಲ್ಲವ ಇತ್ತವಳು ನೀನಮ್ಮ

ದಿನಾ ನಾ ಬೆಳದಂತೆ ಬೆಳದಿಂಗಳಲ್ಲಿ
ಕೈಯ ತುತ್ತಿತ್ತು ಹಾಡ ಹಾಡಿದ ಅಮ್ಮ

ನಡೆವಾಗ ಎಲ್ಲಿ ಎಡವಿ ಬೀಳುವೆನೆಂದು
ಜೊತೆ ಜೊತೆಯಲ್ಲಿ ಹೆಜ್ಜೆ ಇಟ್ಟವಳು ನೀ

ಕನಲಿ ಕರೆವಾಗ, ತೊದಲು ನುಡಿವಾಗ
ನೀ ಓಡೋಡಿ ಬಂದೆನ್ನ ಹರಸಿದ ತಾಯಿ

" ಹೃದಯ ಕದ್ದ ತುಂಟಿ "

ಕಣ್ಣಗಳಲ್ಲೇ ಎದೆಯ ಬಗೆದು
ಹೃದಯವ ಕದ್ದು ಹೋದವಳ
ನಾ ಹೇಗೆ ಎಲ್ಲೆಂದು ಹುಡುಕಲಿ.. ?
ಇಲ್ಲೇ.. ಎಲ್ಲೋ... ಅವಿತಿದ್ದು
ಮುಸಿಮುಸಿ ನಗುವ ಅವಳ
ಕೆಂದುಟಿಯ ಕಡಿವ ಪರಿಗೆ
ಏನೆಂದು ಹೆಸರಿಡಿದು ಕರೆಯಲಿ.. ?
ತಿರುತಿರುಗಿ ನೋಡಿ ಹೊರಟವಳ
ಹಿಂಬಾಲಿಸದೆ ನಾ ಬಡ ಬಡಿಸಿ
ಮೈಮರೆತು ಸೋತು ಕೂತವನ
ಕತ್ತು ಅತ್ತಿತ್ತ ಕೊಂಕಿಸಿ ನೊಂದರೂ
ಕದ್ದು ಕಣ್ಣರಳಿಸಿ ನೋಡುವವನ ಚಿತ್ತ
ಸುತ್ತ ಮುತ್ತಲಿದ್ದವರ ಮೇಲೆ ಬಿದ್ದು 
ಮತ್ತೆ ಬಂದವಳ ಕಣ್ತುಂಬ ಕಂಡು
ಮೆಲ್ಲನೆ ಎದ್ದು ಕನಸಿನಾಗಸದಿ ತೇಲಿ
ನಾ ಪ್ರೀತಿಯ ಹಾಡೊಂದ ಗುನುಗಿದ್ದೆ