Wednesday, October 1, 2014

' ಬೇಡ ಸ್ವಾಮಿ ನನ್ನ ಫಜೀತಿ - ೪

ಇದೆಲ್ಲಾ ... ನನಗೆ ಬೇಕಾಗಿತ್ತೇ... ಸ್ವಾಮಿ !!
ಸುಮ್ಮನಿರಲಾಗದೆ ಇರುವೆ ಬಿಟ್ಕೊಂಡ್ರು ಅನ್ನೊ ಹಾಗೆ ಮದುವೆಯಾದ ಹೊಸತರಲ್ಲಿ ದುಡಿದ ಹಣವನ್ನೆಲ್ಲ ತಂದು ನನ್ನವಳ ಕೈಯೊಳಗಿಟ್ಟು ಹಲ್ಲು ಕಿಸಿದದ್ದಕ್ಕೆ
ನಾ ಈಗ ಮಿಕಮಿಕ ನೋಡುತ ಬಾಯಿ ಬಿಡಬೇಕಿದೆ
ಸಣ್ಣಪುಟ್ಟ ಖರ್ಚಿಗೂ ಅವಳ ಬಳಿ ಹಣ ಕೇಳುವಂತಿಲ್ಲ
ನಿಮಗೇಕೆ ಅಷ್ಟೊಂದು ಹಣ, ಏನಿದೆ ಅಂತಹ ಖರ್ಚು;
ಒಂದೇ ಸಮ ನೂರೆಂಟು ಪ್ರಶ್ನೆಗಳ ಸುರಿಮಳೆ
ಜೊತೆಗೆ ನನ್ನವಳ ಆಕ್ಷೇಪಣೆಯ ಪ್ರತ್ಯುತ್ತರ
ಹೊರಗೆ ದುಡಿವ ಗಂಡಸಿಗೆ ಏನೂ ಖರ್ಚುಗಳು ಇರದೆ ? ನಾನೇನು ಸಿನೆಮ, ಪಬ್ಬು, ಬಾರು ಮೋಜು ಮಸ್ತಿಗೆ
ಬೀಡಿ, ಸಿಗರೇಟು, ಎಲೆ ಅಡಿಕೆಗೆ ಹಣ ಕೇಳಿದೆನೆ ? ಏನೋ... ಯಾವಾಗಲಾದರೊಮ್ಮೆ ತಿಂಡಿ, ಕಾಫಿಗೆ
ಅದು ಸ್ನೇಹಿತರ ಜೊತೆಗೆ ಹೋದಾಗ ಮಾತ್ರ !!
ಓ ಹೋ... ಹೀಗೋ...!! ಪ್ರಭುಗಳ ಸಮಾಚಾರ
ಈ ಹಾಳು ನಿಮ್ಮ ದರಿದ್ರದ ಬಾಯಿ ಚಪಲಕ್ಕೆ
ಮನೆಯಲ್ಲಿ ತಿಂದದ್ದು ಸಾಲದೆಂದು ಹೋಟಲಲ್ಲಿ ಬೇರೆ ?
ಆಗೆಲ್ಲಾ ಹೊರಗೆ ಹಾಳು ಮೂಳು ತಿಂದು ಬನ್ನಿ
ಆರೋಗ್ಯವೂ ಹಾಳು, ಜೊತೆಗೆ ಹಣವೂ ವ್ಯರ್ಥ
ಸಾಲದಕ್ಕೆ ಆಸ್ಪತ್ರೆ, ಔಷಧಿ, ಮಾತ್ರೆಗಳಿಗೆ ದುಡ್ಡು ದಂಡ ! ನಿಮ್ಮಿಂದ ಹೀಗೆಯೇ ಆದರೆ ಮುಂದೊಂದು ದಿನ
ಮೂರು ಹೆಣ್ಮಕ್ಕಳಿಗೆ ಚಿಕ್ಕನಾಯಕನಹಳ್ಳಿ ಚಿಪ್ಪೇ ಗತಿ ! ಇನ್ಮುಂದೆ ಬಸ್ಸಲ್ಲಿ ದಿನನಿತ್ಯ ಹೋಗದೆ
ಸೈಕಲ್ಲಲ್ಲಿ ಹೋಗಿ ಬನ್ನಿ ಎನ್ನುವುದೆ ನನ್ನನ್ನ ...!!

Friday, September 19, 2014

' ಕಾರುಬಾರು '

ನೀ ಸುಮ್ಮನೆ ಕೂರುವ ಜಾಯಮಾನದವಳೇ... ಅಲ್ಲ, ಏನಾದರೊಂದು ವಟ ವಟಗುಟ್ಟುತ್ತಲೇ... ಇರಬೇಕು
ಮನೆಗೆ ಹೋದ ಮೇಲೆ ನನ್ನ ಜೊತೆ ಬೇಕಾದಷ್ಟು ಗುದ್ದಾಡುವೆಯಂತೆ, ಇಲ್ಲವಾದರೆ ಮುದ್ದಾಡುವೆಯಂತೆ ಅಲ್ಲಿಯವರೆಗು ನಿನ್ನ ಬಾಯಿಗೆ ಸ್ವಲ್ಪ ಬೆಲ್ಟ್ ಹಾಕಿಕೊ...
ಹ್ಞಾಂ... ಏನಂದ್ರಿ ನೀವು... ? ನನ್ನ ಬಾಯಿಗೆ ?!!
ಹೆ ಹೆ ಹೇ... ನಾ ಆಗಲ್ವೆ ಹೇಳಿದ್ದು ಸುಕನ್ಯಾ...
ಸೇಫ್ಟಿ ಸೀಟ್ ಬೆಲ್ಟ್ ಹಾಕಿಕೊ ಎಂದನಷ್ಟೆ;
ನೀ ಇಷ್ಟಕ್ಕೆ ಹೀಗೆ ನನ್ನ ಮೇಲೆ ಕೋಪಿಸಿ ಕೊಂಡರೆ
ಈ ಟ್ರಾಫಿಕ್ನಲ್ಲಿ ಸುರಕ್ಷಿತವಾಗಿ ನಾ ಕಾರ್ ಓಡಿಸಿದಂತೆ !!
ರ್ರೀ .... ನಿಮ್ಮ ಮಾತು ಎಲ್ಲೆಲ್ಲೋ ವಿಷಯಾಂತರಿಸದಿರಿ ಮೊದಲು ಕಾರು ನಿಲ್ಲಿಸಿ ನಿಮಗಿದೆ ಇಂದು !!
ಎಳೆನೀರು ಏನಾದರು ಕುಡಿಯಬೇಕಿತ್ತೆ
ಪಾಪ ಮಾತಾಡಿ ಮಾತಾಡಿ ಸುಸ್ತಾಗಿರಬೇಕು
ಹೋಗಲಿ ಕೂಲ್ ಡ್ರಿಂಕ್ಸ್, ಅಥವಾ ಐಸ್ ಕ್ರೀಮ್
ರ್ರೀ ...!! ನನಗೆ ಬರುವ ಕೋಪಕ್ಕೆ ನಿಮ್ಮನ್ನ !!
ನಿಂದೊಳ್ಳೆ ತಮಾಷೆಯಾಯ್ತಲ್ಲೆ ನೀ ಹೇಳಿದ ಕಡೆ,
ಈ ಟ್ರಾಫಿಕ್ನಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಲು ಇದೇನು ಸ್ಕೂಟರೇ...!! ಅಕ್ಕಪಕ್ಕ ಯಾವುದಾದರೊಂದು ಗಾಡಿ ಗುದ್ದಿದರೆ
ನನ್ನಾ ನಿನ್ನ ಸ್ಥಿತಿ, ಈ ಕಾರಿನ ಗತಿ ಹರೋ... ಹರವಷ್ಟೆ !!

Sunday, September 14, 2014

' ನಾ ಕಳಕೊಂಡೆ '

ಇದೇನೇ.... ಭಾಮ, ಏನೋ ಹುಡುಕುವಂತಿದೆ
ನೀ ಏನಾದರು ಕಳೆದು ಕೊಂಡೆಯೋ... ಹೇಗೆ ?
ಹ್ಞೂಂ ರ್ರೀ ... ಹಾಳಾದ್ದು ಮಧ್ಯಾಹ್ನದಿಂದ ಕಾಣ್ತಿಲ್ಲ
ಹುಡುಕಿ, ಹುಡುಕಿ ನನಗೂ ಸಾಕಾಗಿ ಹೋಯ್ತು;
ಸರಿ ನೀವಾದರು ಸ್ವಲ್ಪ ಹುಡುಕಿ ಕೊಡಬಾರದೇ... ಚಿನ್ನವೇನಾದರು ಕಳೆದು ಕೊಂಡೆಯೋ ಹೇಗೆ ?!
ಏನು ಹೆಂಗಸರೋ.... ಏನು ... ಕಥೆಯೋ ...
ಎಲ್ಲೋ ಇಟ್ಟು, ಮತ್ತೆಲ್ಲೋ... ಹುಡುಕಾಡುವುದು
ನೀ ಕಳೆದದ್ದು ಕಿವಿಯೋಲೆಯೋ...
ಅಥವಾ ನಾ ಕಟ್ಟಿದ ತಾಳಿಯೋ... ಚಿನ್ನದ ಸರವೋ... ಅಯ್ಯೋ...!! ಅದ್ಯಾವುದು ಅಲ್ಲವೇ... ಅಲ್ಲಾರೀ
ಅದಿಲ್ಲದಿದ್ದರೆ ಏಕೋ ಏನೋ ನನ್ನ ಕೈ ಕಾಲೇ ಆಡದು
ಕೈಗೆ ಸಿಗಬೇಕು ನಿಮಗೆ ಇಂದು ಹಬ್ಬ ಹಬ್ಬವಿತ್ತು
ಹೆ ಹೆ ಹೇ... ನೀ ಏನೆ ಒಗಟು ಒಗಟಾಗಿ ಹೇಳುವೆ ?
ಏನೋ... ಡ್ರಾಪ್ ಕೇಳಿದಳೆಂದು ಕರೆತಂದೆನಷ್ಟೆ
ಇಷ್ಟಕ್ಕೆ ನೋಡಿ, ನೀ ಹೀಗೆ ನನ್ನ ಅನುಮಾನಿಸುವುದೆ
ರ್ರೀ... ಅಂತು ಇಂತು ಸಿಕ್ಕಿತು ನೋಡಿ ' ಲಟ್ಟಣಿಗೆ '
ಬೇಗ ಅಡಿಗೆ ಮನೆಯೊಳಗೆ ಬನ್ನಿ ಶುರು ಹಚ್ಚಿಕೊಳ್ಳುವೆ
ಬಂದೆ ಸ್ವಲ್ಪ ತಾಳೇ.... ಹೊಟ್ಟೆ ಏಕೋ... ಸರಿಯಿಲ್ಲ !!

Thursday, September 11, 2014

' ಕೊಕ್ ಕೊಕ್ ಕೊಕ್ಕೋ'.....!!

ಲೇ..... ಕುಮುದಾ, ಜಾಹ್ನವಿ, ವೈಷ್ಣವೀ... ಎದ್ದೇಳ್ರೇ ...
ಹಾಳು ಕೋಳಿ ಮನೆಯೊಳಗೆಲ್ಲೋ ಸೇರ್ಕೊಂಡು
ಕೊಕ್ ಕೊಕ್ ಕೊಕ್ಕೋ... ಅಂತ ಕೂಗೋದು ಕೇಳಸ್ಲವೇ... ಅದೇನ್ ನಿದ್ದೆ ಮಾಡ್ತೀರೋ... ಕುಂಭಕರ್ಣನ ಹಾಗೆ;
ಎಲ್ಲಾ ನನ್ನ ಪ್ರಾರಬ್ಧ ಕರ್ಮ, ನನಗಿನ್ನೇನು ಕಾದಿದೆಯೋ... ! ಇದನ್ನ ಕೇಳಿಸಿಕೊಂಡು ಅಕ್ಕಪಕ್ಕದವರು ನಗಲ್ವೇನ್ರೇ...!! ಸಾವಿತ್ರಮ್ಮನ ಮನೆಯಲ್ಲಿ ಕದ್ದು ಮುಚ್ಚಿ ಕೋಳಿ ತಿನ್ನುವರೆಂದು ಊರೆಲ್ಲ ಹೇಳ್ಕೊಂಡು ತಿರಗ್ತಾರೆ ಅಷ್ಟೆ
ಇನ್ಮುಂದೆ ಹೊರಗೆಲ್ಲೂ ನಾ ತಲೆಯೆತ್ತಿ ತಿರುಗಾಡುವಂತಿಲ್ಲ
ಎದ್ದು ಅದೆಲ್ಲಿದಿಯೋ... ಹುಡುಕಿ ಒದ್ದು ಓಡಿಸ್ಬಾರದೇನ್ರೇ... ಅಯ್ಯೋ ...!! ಅಜ್ಜೀ... ಸುಮ್ಮನೆ ಮಲಗ ಬಾರದೆ
ಇಷ್ಟೊತ್ತಲ್ಲಿ ನಿಂದೇನು ಇಲ್ಲದ ಕಿರಿಕಿರಿ
ಕೋಳಿಯು ಇಲ್ಲ, ಕೂಗೊ ಹುಂಜವೂ ಇಲ್ಲ
ಕಾಡು ಬಾ ಎನ್ನುತಿದೆ, ಊರು ಹೋಗೆನ್ನುತಿದೆ
ನಿನಗೆಲ್ಲೋ... ಅರಳು ಮರುಳಿನ ಭ್ರಾಂತಿಯಷ್ಟೆ ;
ಅದೆಲ್ಲೋ.... ಕೂಗಿದರೆ ನಿನಗೇನು ಕಷ್ಟವೆ, ನಷ್ಟವೆ ?
ಥೂ.... ಬಾಯಿ ಬಡ್ಕಿ, ನಂಗೇ ಎದಿರು ವಾದಿಸ್ತೀಯೇನೆ ? ಅಜ್ಜಿಯಂದರೆ ಒಂಚೂರು ಭಯ ಭಕ್ತಿ ಒಂದೂ ಇಲ್ಲ
ನಿನ್ನ ಅಕ್ಕಂದಿರ ನೋಡು ಏನು ನಯ, ಏನು ವಿನಯ
ನೀನು ಇದ್ದೀಯ ಕಾಲ್ಕೆರ್ದಕೊಂಡು ನನ್ನ ಜೊತೆ ಜಗಳಕ್ಕೆ ನಿಮ್ಮಮ್ಮ ನಿಮ್ಮನ್ನೆಲ್ಲ ನನ್ ಕೈಯಲ್ಲಿಟ್ಟು ಸತ್ತು ಹೋದ್ಲು
ಇಷ್ಟು ಚಿಕ್ಕ ಗೊಂಬೆಗಳ ದೊಡ್ಡ ಗೊಂಬೆಗಳ ಮಾಡಿ
ಸಾಕಿ, ಬೆಳಸಿ ಜೋಪಾನ ಮಾಡಿದ್ದು ನನ್ನ ತಪ್ಪು ಕಾಣ್ರೇ.. ಅವಳಿಗೆ ಬಂದ ಸಾವು ನನಗಾದ್ರು ಬರಬಾರದಿತ್ತೆ ಶಿವನೇ ಅಯ್ಯೋ ...!! ಅಜ್ಜೀ ಇಷ್ಟಕ್ಕೆಲ್ಲ ನೀ ಅಳೋದೆ
ವೆರಿ ವೆರಿ ಸಾರಿ, ನೀನೆ ನಮ್ಮ ಅಮ್ಮ, ಅಪ್ಪ
ಬಂಧು ಬಳಗ ಎಲ್ಲಾ...
ಮೇಲಾಗಿ ನೀ ನಮ್ಮ ಪಾಲಿನ ಆ ದೇವರು
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸಾರಿ ಅಜ್ಜಿ
ಹೆ ಹೇ.... ಕೋಳಿನು ಇಲ್ಲ, ಕುರಿನು ಇಲ್ಲ
ಅದು ಕೂಗಿದ್ದು ಈ ಮೊಬೈಲ್ ಫೋನು...

Wednesday, September 10, 2014

' ಎಕ್ಕ, ರಾಜ, ರಾಣಿ '

ರ್ರೀ... ಈಗ ನೀವೆಲ್ಲಿದ್ದೀರಿ, ಹೀಗೆ ಹೋಗಿ ಬರುವೆ ಎಂದು ನನ್ನಿಂದ ಹಣ ಪಡೆದು ಹೋದವರು
ಇಷ್ಟು ಹೊತ್ತಾದ್ರು ಮನೆಗೆ ಬರದೆ ಅಲ್ಲೇನ್ ಮಾಡ್ತಿದ್ದೀರ
ಮತ್ತೇ... ಕುಡಿಯೋ ಚಾಳಿ ಮುಂದುವರಿಸಿದಿರೋ... ಹೇಗೆ ? ಛೇ..!! ಎಷ್ಟಾದ್ರು ನಿಮ್ ಬುದ್ಧಿ ಡೊಂಕು ಡೊಂಕೇನೆ ಬಿಡಿ
ಲೆ ಲೇ.... ನಿಮ್ಮೀ... ನಿನ್ನಾಣೆಗೂ ಕುಡಿಯೋಲ್ಲಾಂತ
ಆಣೆ, ಪ್ರಮಾಣ ಮಾಡಿ ಕುಡಿತೀನಿ ಏನೇ ನಾನು ...?
ನೋಡು ನೀ ಹೀಗೆಲ್ಲ ನನ್ನ ಮಧ್ಯೆ ಮಧ್ಯೆ ಡಿಸ್ಟರ್ಬ್ ಮಾಡ್ಬೇಡ ಇಂಪಾರ್ಟೆಂಟ್ ಡಿಸ್ಕಷ್ನ್ ಲ್ಲಿದ್ದೀನಿ
ಮೊದಲು ಫೋನ್ ಇಡು
ಛೇ...!! ಮತ್ತೆ ಏನೆ ನಿನ್ನ ದರಿದ್ರದ ಕಾಟ
ನೆಮ್ಮದಿಯಾಗಿ ಆಟ ಆಡೋಕು ಬಿಡಲ್ಲ
ಮನೆಗೆ ಬರುವಾಗ ಒಂದಷ್ಟು ಹೂವು ಸ್ವೀಟು ತನ್ನಿ
ಇಂದು ಪೂರ್ಣಿಮೆ...!!
ಈಗ್ಲಾದ್ರೂ ಹೇಳ ಬಾರದೇ... ನೀವೂ...
ಎಕ್ಕ, ರಾಜ, ರಾಣಿ ನನ್ನಾ ... ಕೈಯೊಳಗೆ
ಇಡಿ ಮಣ್ಣೂ.... ನಿನ್ನಾ ಬಾಯೊಳಗೇ...
ಬೆಬ್ಬ ಬೆಬ್ಬ ಬೆಬ್ಬೇ..... ಹೆಹೆಹೇ.... ಇದು ಹಾಡೇ... ನಿಮ್ಮೀ..
ನೀ ಏನೇನೋ ನನ್ನ ತಪ್ ತಿಳಿಬೇಡ್ವೇ ನನ್ನ ನಂಬೇ...
ಓಹ್ ಓಹೋ... ಹೀಗೋ... ಯಜಮಾನ್ರ ವಿಷಯ
ಕುಡಿಯೋದ್ ಬಿಟ್ ಹೋಸ ಆಟ ಶುರು ಮಾಡ್ಕೊಂಡ್ರೋ...
ಬನ್ನಿ ಮನೆಗೆ ನಿಮಗಿದೆ ರಾತ್ರಿಗೆ ಹಬ್ಬ !!

Tuesday, September 9, 2014

' ದುಡ್ಡೆ ದೊಡ್ಡಪ್ಪ '

ಛೀ.... ಥೂ...!! ಕಸ ಎಸೆದು ಬರುವುದ ಬಿಟ್ಟು
ಇದೇನ್ರಿ ಅಸಹ್ಯ, ದರಿದ್ರ ನಿಮಗೆ ಒಂದೂ ಗೊತ್ತಾಗದು ಯಾರೋ... ಎಸೆದ ಕಸದ ಚೀಲ ಹಿಡಿದು ಬರುವುದೆ ?!
ನಾಚಿಕೆ, ಏಸಿಗೆ ಒಂಚೂರೂ ನಿಮಗಿಲ್ಲ ಬಿಡಿ;
ಏನು ಗಂಡಸರೋ... ಏನೋ....!!
ಮೊದಲು ಹೋಗಿ ಎಸೆದು ಬಂದು ಸ್ನಾನ ಮಾಡಿ...
ಲೇ... ಅವಿವೇಕಿ ಮೆಲ್ಲಗೆ ಮಾತಾಡೆ ಅರಚಬೇಡ
ನಿನ್ನ ಕೂಗಾಟಕ್ಕೆ ಅಕ್ಕಪಕ್ಕದವರೆಲ್ಲ ಎದ್ದು ಬಂದಾರು
ಬೇಗ ಒಳ ಬಂದು ಬಾಗಿಲು, ಕಿಟಕಿಗಳ ಮುಚ್ಚು
ಸದ್ಯ ಮಕ್ಕಳಿನ್ನು ಎದ್ದಿಲ್ಲ ತಾನೆ
ಆ ನಿನ್ನ ಮಗ ಇದ ನೋಡಿದರೆ ಮುಗಿಯಿತು
ಇಡೀ.. ಊರಿಗೆ ಊರೇ... ಡಂಗೂರ ಸಾರಿ ಬರುವ
ಇವನ ಮುಂದೆ ರೇಡಿಯೋ, ಟಿವಿ ಬೇಕಾಗಿಯೇ ಇಲ್ಲ
ಪುಕ್ಕಟೆ ಮನರಂಜನೆ ಕೊಡುವ...
ನೀವೇನು ಚಿನ್ನ, ಬೆಳ್ಳಿ ವೈಜ್ರ ವೈಡೂರ್ಯ ತಂದ ಹಾಗಿದೆ ಸುಮ್ಮನೆ ಸುರಿಯಿರಿ ಅದೇನೆಂದು ನೋಡಿಯೇ ಬಿಡುವ
ರ್ರೀ..!! ಇಷ್ಟೊಂದು ನೋಟುಗಳ ಕಂತೆ ಕಂತೆ !!
ಕದ್ದು, ತಲೆ ಹೊಡೆದು ತಂದಿದ್ದಲ್ಲ ತಾನೆ
ನನಗೆ ಏಕೋ ನಂಬಲಾಗುತ್ತಿಲ್ಲ, ಭಯ ಬೇರೆ ?
ಶ್!!! ಪಿಸುಗುಟ್ಟ ಬೇಡವೇ... ನಿಮ್ಮೀ...
ಇದ ಕದ್ದದ್ದು ಅಲ್ಲ, ತಲೆಯೊಡೆದು ತಂದದ್ದು ಅಲ್ಲ

Sunday, September 7, 2014

" ನಶೆ "

ನೀ ನನ್ನ ನಂಬೇ.... ಮಾರಾಯ್ತೀ....
ನಿನ್ನಾಣೆಗೂ ಕುಡಿಯುವುದ ಬಿಟ್ಟಿರುವೆ
ಬೇಕಿದ್ದರೆ ನೀನೇ... ಬಾಯ ತೆರೆದು ನೋಡು
ವಾಸನೆ ಬಂದರೆ ನನ್ನ ಒಳ ಸೇರಿಸ ಬೇಡ;
ಕುಡಿತದಿಂದ ಮಾನ, ಮರ್ಯಾದೆಯಲ್ಲ ಹಾಳು
ದಿನನಿತ್ಯ ಮಡದಿ, ಮಕ್ಕಳ ಗೊಣಗಾಟ
ಸುಮ್ಮನೆ ಹಣವು ವ್ಯರ್ಥ, ಆರೋಗ್ಯ ಇತ್ಯರ್ಥ
ಈ ನಶೆಯಿದ್ದರೆ ಎಷ್ಟು ಹೊತ್ತು ಇರಬಹುದೇ...?
ಒಂದರ್ಧ ದಿನ, ಮತ್ತಷ್ಟು ಏರಿಸಿದರೆ ನಾಳೆಗೆ
ಕುಡಿತದಿಂದ ಸಿಗುವ ಸುಖಕ್ಕಿಂತ
ಇಲ್ಲೇ... ಸಿಗುವ ಅಮೃತ ಕುಡಿಯದೆ
ಇನ್ನೆಲ್ಲೋ ... ಸಿಗುವ ಅಮಲಿಗೆ ಶರಣಾಗಿದ್ದೆ
ಮೊದ ಮೊದಲು ಇದರ ಅರಿವಿರಲಿಲ್ಲ
ಹಾಳಾದ್ದು ಈ ನಶೆಯ ಗಮ್ಮತ್ತಿರಬೇಕು
ನಶೆಯ ಪೊರೆ ಕಳಚಿ ನಿನ್ನ ನೆನಪಾಗಿದ್ದು
ನೀ ಹೊತ್ತ ದೇವರ ಹರಕೆ, ಪೂಜೆಯ ಫಲ
ಜೊತೆಗೆ ನೀ ಸೀರೆ ಸೆರಗ ಸಿಕ್ಕಿಸಿ, ಕೊರಳ ಕೊಂಕಿಸಿ
ಹೆರಳ ಹರಡಿ ಬಳುಕಿ ಬರುವಾಗ ಈ ಎದೆಯೊಳಗೆ
ನೂರಾರು ಮಧುರ ಮೈತ್ರಿಯ ಅರುಣರಾಗ...
ಆ ಹಾ ಕುಡಿಯುವುದ ಬಿಟ್ಟದ್ದಕ್ಕೆ ನೀ ನಗಬೇಕಾದ್ದೆ !
ಈ ಖುಷಿಗೆ ನೂರರ ಒಂದೈದು ನೋಟು ತಾ
ಹೀಗೆ ಹೋಗಿ ಹಾಗೇ... ಬೇಗ ಬಂದು ಬಿಡುವೆ !