Tuesday, July 23, 2013

ನಾ ಮುದುಕನ ಮದುವೆಯಾಗಲೆ ?

ಅಪ್ಪಾ.... ಅಮ್ಮಾ........
ನನ್ನ ಅನ್ಯತಾ ಭಾವಿಸದಿರಿ
ನಿಮಗೆ ಎದುರಾಡುವೆನೆಂದು;
ಎರಡನೆಯ ಹೆಂಡತಿಯಾಗಿ
ಆ ಮುದುಕನ ವರಿಸಲಾರೆ !

ನನ್ನ ವಯಸ್ಸಿನ ಮಗಳೋ
ಮಗನೋ ಅವನಿಗಿರ ಬೇಕಲ್ಲ
ಇಂದೋ ನಾಳೆಯೋ ಸಾಯುವವ
ಗಾಳಿಗೆ ಬಿದ್ದೋಗುವ ಒಣ ಮರವದು
ಮಸಣದ ಬಾಗಿಲ ತಟ್ಟುತ್ತಿರುವವ !

ಅವನ ಆಸ್ತಿ - ಅಂತಸ್ತಿಗೆ ಮರುಳಾಗಿ
ನನ್ನೆಲ್ಲಾ ಆಸೆ - ಆಕಾಂಕ್ಷೆಗಳಿಗೆ
ಮನದ ಭಾವನೆಗಳಿಗೆ ತುಪ್ಪ ಸುರಿದು
ನೀವೆಂದೂ ಬೆಂಕಿಯ ಹಚ್ಚದಿರಿ  !

ಸಾಲ ತೀರಿಸಲಾಗದೆ ಮುದುಕನಿಗೆ
ಮಾರಿಕೊಂಡರೆಂದು ಜನ ತಿಳಿಯರೆ
ಕೋಟಿ ಕೋಟಿ ಹಣ, ಆಳುಕಾಳುಗಳಿದ್ದು
ರಾಶಿರಾಶಿ ಕಾಳುಕಡ್ಡಿ, ಮಣ ಬಂಗಾರವಿದ್ದು
ಆರೋಗ್ಯ ಹರೆಯವಿಲ್ಲದ ವಯಸ್ಸು ಮನಸ್ಸು
ಇಲ್ಲದಿರೆ, ನಾ ಸುಖಿಸುವುದಾದರೂ ಹೇಗೆ !

Sunday, July 21, 2013

ಪುನರ್ ವಿವಾಹ

ಇರಲಿ ಬಿಡು ಗೆಳತಿ
ಈ ನಗು ಹೀಗೆಯೇ
ನೀ ನಕ್ಕು ಎಷ್ಟೋ
ವರ್ಷಗಳಾಗಿತ್ತು;
ನೋವುಗಳೊಂದಿಗೆ
ಸದಾ ಸೆಣಸಾಡಿ, ಗುದ್ದಾಡಿ
ಬದುಕಿನ ಬಾಳ ಬಂಡಿಯಲಿ;
ಬೆಂದೆದ್ದು ನೀ ಬಂದಿರುವೆ
ಸಾಗುತ್ತಿರಲಿ ಹೀಗೆಯೇ
ಈ ಸಮರಸ ಜೀವನ !

ಈ ಸಾವೂ ನೋವುಗಳು
ಯಾರಿಗಿರುವುದಿಲ್ಲ ಹೇಳು
ಅವು ಯಾರನ್ನೂ ಬಿಡವು
ಇಂದು ಅವ, ನಾಳೆ ಮತ್ತೊಬ್ಬ
ಹುಟ್ಟಿದವ ಸಾಯಲೇ ಬೇಕಲ್ಲ
ವಿಧಿಯ ಚದುರಂಗದಾಟದಿ
ಅವ ನಡೆಸುವ ಕಾಯಿಗಳು !

ನಾ ಎಷ್ಟೋ ಬಾರಿ ನಿನಗೆ
ಹೇಳ ಬೇಕೆಂದು ಕೊಂಡ
ಕೇಳ ಬೇಕೆಂದು ಕೊಂಡ
ಮಾತುಗಳು ನನ್ನಲ್ಲಿಯೇ
ಹೇಳಲಾಗದೆ, ಕೇಳಲಾಗದೆ
ಹಾಗೆಯೇ ಉಳಿದಿದ್ದು ನಿಜ;
ನೀ ನನ್ನ ಏನೆಂದು ತಿಳಿಯುವೆಯೋ
ನಮ್ಮಿಬ್ಬರ ಸ್ನೇಹಕೆ ಚ್ಯುತಿ ಬರುವುದೋ
ಎಂಬ ಭಯಕೆ ನಾನೇ ಸುಮ್ಮನಾಗಿದ್ದೆ !

ನಿನ್ನ ಸ್ನೇಹಿತೆಯ ಬಳಿ ನಾ
ನಮ್ಮಿಬ್ಬರ ಮದುವೆಯ ಬಗ್ಗೆ
ಪ್ರಸ್ತಾಪಿಸಿದಾಗ
ಅವಳು ಹೇಳಿದ್ದೇನು ಗೊತ್ತೇ,
ಆರ್ ಯು ಮ್ಯಾಡ್ ಸರ್
ಅದು ಹೋಗಿ ಹೋಗಿ
ವಿಧವೆಯ ಬಯಸಿ
ಮದುವೆಯಾಗುವುದೆ,
ನಿಮಗೆಲ್ಲೂ ಹೆಣ್ಣು ಸಿಗಲಿಲ್ಲವೇ;
ನನಗಿಂತ ಬೇರೆ ಹೆಣ್ಣು ಬೇಕೆ !

ಅವಳೆಂದ ಮಾತಿಗೆ ನಾ
ತುಸು ಕೋಪಗೊಂಡರೂ
ನನ್ನಾ ನಿನ್ನ ಬಾಲ್ಯದ ಒಡನಾಟ
ಜೊತೆ ಜೊತೆಯಲ್ಲಿ ವಿಧ್ಯಾಭ್ಯಾಸ
ನನ್ನ ಕಡು ಬಡತನದಲ್ಲೂ
ಸ್ಪೂರ್ತಿ, ಹಣದ ಬೆಂಬಲವಾಗಿ ನಿಂತು
ಇಂದಿನ ಈ ಸ್ಥಿತಿಗೆ ನೀ ಕಾರಣವಾಗಿದ್ದು
ಎಲ್ಲವ ಹೇಳಿದ ಮೇಲೆ, ಕೇಳಿದಾಗ
ಅವಳ ಕಣ್ಣಲ್ಲಿಯೂ ಸಹ ಕಂಬನಿ ಮೂಡಿತ್ತು !

ಆದದ್ದೆಲ್ಲಾ ಒಳ್ಳೆಯದಕ್ಕೇ ಎಂದು
ಹಿಂದಿನದ್ದೆಲ್ಲಾ ನೀ ಮರೆತು ಬಿಡು
ಅಂತೂ ಇಂತು ನಮ್ಮ ಮದುವೆಗೆ
ಒಪ್ಪಿಗೆಯಿತ್ತೆಯಲ್ಲ, ನನಗಷ್ಟೇ ಸಾಕು !

Wednesday, July 10, 2013

ಜಾತಿ ಭಯ

ನೀ ನನ್ನ ಮರೆತು ಬಿಡು
ಹಾಳಾದ್ದು, ಈ ಜಾತಿಯ
ವ್ಯವಸ್ಥೆ, ನಮ್ಮಿಬ್ಬರನ್ನು
ಎಂದೂ, ಒಂದು ಮಾಡದು;
ಈ ವಿಷವರ್ತುಲದಲ್ಲಿ ಸಿಲುಕಿ
ಹೀಗೆ, ನರಳಿ ಕೊರಗಿ ದಿನಾ
ಸಾಯುವುದಕ್ಕಿಂತ ನಾವು
ಎಲ್ಲಾದರೂ, ಹೇಗಾದರೂ
ದೂರದೂರವಾಗಿ, ನೋಡದೆ
ಬೇರೆಬೇರೆಯಾಗಿ ಬಾಳುವುದೇ
ಈಗ ಉಳಿದಿರುವುದೋಂದೇ ದಾರಿ !

ನೀ ನನ್ನ ಕೇಳಬಹುದು
ನೋಡುವಾಗ ಇಲ್ಲದ ಜಾತಿ
ಪ್ರೇಮಿಸುವಾಗ ಇಲ್ಲದ ಜಾತಿ,
ಒಂದೇ ತಟ್ಟೆಯಲ್ಲುಂಡು ಮಲಗಿ;
ಮುದ್ದಾಡುವಾಗ ಇಲ್ಲದ ಈ ಜಾತಿ
ಈಗೆಲ್ಲಿಂದ, ಧುತ್ತನೆ ಬಳಿ ಬಂತೆಂದು,
ಈ ನಿನ್ನ ಎಲ್ಲಾ ಪ್ರಶ್ನೆಗಳ ಕೇಳಿ
ಅರಗಿಸಿ ಕೊಳ್ಳಲು ನನಗೂ ಕಷ್ಟವೆ;
ನಿನ್ನ ಒಂದೊಂದು ಮಾತಿನ ಬಾಣ
ನನ್ನೆದೆಯ ಘಾಸೀಗೊಳಿಸಿದರೂ ನಾ
ಅಸಹಾಯಕ, ಏನನ್ನೂ ಹೇಳಲಾರೆ !

ಎಲ್ಲಾದರೂ, ಹೇಗಾದರೂ
ಓಡಿ ಹೋಗಿ, ಈಗಲೇ
ಮದುವೆಯಾಗೋಣ
ಎಂದರೆ, ದಶದಿಕ್ಕುಗಳಿಗೂ
ನಿಮ್ಮವರ ಕಣ್ಗಾವಲಿನ ಸೈನ್ಯ;
ಎಲ್ಲಿ ನಮ್ಮ ಮನೆಯವರ ಕೊಲ್ಲುವರೋ
ನನ್ನ ತಂಗಿಯರಿಗೇನು ಮಾಡುವರೋ,
ಎಂಬ, ಎಲ್ಲಿಲ್ಲದ ಹಪತಪಿಸುವ ಭಯ
ಮರ್ಯಾದೆಯ ಹೆಸರಲ್ಲಿ ನಿನ್ನ ಹತ್ಯೆಯ
ಗೈದರೆ, ನಾ ನಿನ್ನ ಬಿಟ್ಟು ಬದುಕುವನೇ !

ನನ್ನೊಲವ ಗೆಳತಿ

ನೀನೊಲಿದ ದಿನವೇ
ನನಗದುವೇ ಸ್ವರ್ಗ
ಮುನಿದ ಮರುಕ್ಷಣವೇ
ಈ ಎದೆಯೊಳಗೆ ನರಕ,
ನನ್ನೆದೆಯ ಗುಡಿಯಲಿ;
ಅರಳಿದ ಹೂ ನೀನೇನೆ
ಆ ಪರಿಮಳಕೆ ನಾ ಸೋತೆ!

ನೀ ನಲಿದ ಪ್ರತಿ ಘಳಿಗೆ
ನನ್ನೊಳಗೆ ರಸ ದೀವಳಿಗೆ
ಭಾವಗಳ ಅಲೆಗಳ ಮೇಲೆ
ಅನುರಾಗದ ಕನಸಿನ ಲೀಲೆ;
ನೀ ಬಯಸಿರಲು, ಬಳಸಿರಲು
ಮಿಂಚಾಯಿತೆ ಈ ಕಣ್ಗಡಲು
ನನ್ನನ್ನೆ ನಾನಿಂದು ಮೈಮರೆತೆ !

Saturday, June 29, 2013

ಈ ಪ್ರೀತಿ ಒಂಥರಾ ಕಚಗುಳಿ

ನೀ ಮೊದಲಿನಂತೆ
ಈಗಿಲ್ಲ ಬಿಡು ನಲ್ಲೇ
ನಾನೆಂದರೆ ನಿನಗೆ
ಎಣೆಯಿಲ್ಲದಾ ಪ್ರೀತಿ,
ನನ್ನ ಬಿಟ್ಟಿರಲಾರದಷ್ಟು
ಅಧಮ್ಯ ಸ್ನೇಹ ಸೆಳೆತ !
ಒಂದು ಕ್ಷಣ, ಸಿಗಲಿಲ್ಲವೆಂದರೆ
ನಿನಗೆಂತಾ ಕೋಪ, ಆವೇಶ
ಅಬ್ಬಬ್ಬಾ, ನಿನ್ನ ಸಂತೈಸಿ
ಸಮಾಧಾನಿಸಿ; ಹೂಮುತ್ತಿಟ್ಟರಷ್ಟೇ
ನಿನಗೂ ನೆಮ್ಮದಿ, ನನಗೂ ನಿರಾಳ
ಕದ್ದೂ ಮುಚ್ಚಿ ಗಂಟೆಗಟ್ಟಲೆ
ಕಾದರೂ ವ್ಯರ್ಥವಾಗುತ್ತಿರಲಿಲ್ಲ
ನಿನ್ನ ಸವಿ ಅದರಗಳಿಗಷ್ಟೆ
ಮೀಸಲು ನಮ್ಮಿಬ್ಬರ ಸಮ್ಮಿಲನ !
ನನ್ನ ಮದುವೆಯಾದ ಮೇಲಂತೂ,
ಬಲು ಅಪರೂಪ ನೀ
ಸಿಗುವುದು ರಾತ್ರಿಗಷ್ಟೆ;
ನಿನ್ನ ನಾ ಬಳಿ ಕರೆದರೂ
ಹೊತ್ತು ಗೊತ್ತಿಲ್ಲವೇ ನಿಮಗೆ
ಅಮ್ಮ ಬಂದರೆಂಬ ನಾಚಿಕೆಯ
ಜಾರಿಕೆಯ, ಸಹನೆಯ ಉತ್ತರ !

ಸಾವಿತ್ರಿ

ಮುಚ್ಚಿಡುವಂತಹದ್ದೇನಿಲ್ಲ
ಮಗ್ಗುಲ ಮುಳ್ಳಾಗಿ ಮನವ
ಸದಾ ಚುಚ್ಚುತ್ತಿರುವ
ನನ್ನೆಲ್ಲಾ ನೋವುಗಳ
ಬಿಚ್ಚಿಡುತ್ತಿರುವೆ;
ಒಂದಷ್ಟು ನಿಮ್ಮ ಮನಸ್ಸಿಗೆ
ನೋವಾದರೆ ಅದು ಕೇವಲ
ನನ್ನ ಕರ್ಮದ ಕಾಕತಾಳೀಯ !

ನಿಮ್ಮಂತೆಯೇ ನಾನೂ ಹೆಣ್ಣೆ
ನನಗೂ ನೂರಾರು ಕನಸಿದೆ,
ವಯಸ್ಸಿಗೆ ಮೀರಿದ ಅಂದವಿದೆ
ಮದುವೆಯ ಹೊಸ್ತಿಲಲ್ಲಿ ಬಂದು
ನಿಂತರೂ, ವಿಧಿಗೆ ಸಮ್ಮತಿಯಿಲ್ಲ
ನಿಶ್ಚಿತಾರದ ದಿನವೇ ಕೈಹಿಡಿವವನ
ಕಾಳ ಸರ್ಪದ ವಿಷ ಜ್ವಾಲೆಗೆ
ಸಿಕ್ಕಿ ಸತ್ತಾಗ, ನನ್ನ ಕಾಲ್ಗುಣವ
ಹಳಿದ ವರೆಷ್ಟೋ; ಮೂದಲಿಸಿದವರೆಷ್ಟೋ!
ಒಂದೇ ಎರಡೇ, ಹತ್ತಾರು ಲಗ್ನಗಳು
ಕೂಡಿ ಬಂದಿದ್ದರೂ, ವಿಘ್ನಗಳೇ ಹೆಚ್ಚು

Tuesday, June 25, 2013

ಸಹಬಾಳ್ವೆ ( ಲಿವಿಂಗ್ ಟುಗೇದರ್ ) ಭಾಗ - ೧

ಅವಸರ ಏನಿಲ್ಲಾ 
ಬಿಡು ನೀ ಗೆಳತಿ
ಒಂದಷ್ಟು ದಿನ
ಹೀಗೆಯೇ, ಆನಂದದಿ
ಸಂತೋಷವ ಅನುಭವಿಸಿ
ಕಾಲವ ಕಳೆಯೋಣ
ಸತಿ ಪತಿಗಳಂತೆಯೇ;
ಈ ಮದುವೆ ಸಂಪ್ರದಾಯ
ಆಚರಣೆಗಳೆಲ್ಲಾ ಕೇವಲ
ನಮಗಾಗಿ ಮಾಡಿಕೊಂಡಿದ್ದು
ಹೇಗೂ ಜೊತೆ ಜೊತೆಗೆ
ಒಂದೇ ಗೂಡಿನಲ್ಲಿರುವಾಗ
ಚಪ್ಪರ, ಮಾಂಗಲ್ಯಧಾರಣೆ
ವರದಕ್ಷಿಣೆ; ವರೋಪಚಾರ
ಇವೆಲ್ಲವೂ ಈ ಕಾಲಕೆ ಬೇಕೆ!
ಮುಂದೊಂದು ದಿನ
ನಮಗೆ ಬೇಕೆನಿಸಿದಾಗ,
ಶಾತ್ರೋಕ್ತವಾಗಿ
ಗುರು ಹಿರಿಯರ ಸಮ್ಮುಖದಲ್ಲಿ
ಭರ್ಜರಿಯಾಗಿ ಮದುವೆಯ
ಮಾಡಿಕೊಂಡರಾಯಿತು;
ನನ್ನ ಮೇಲೆ ನಿನಗೆ ನಂಬಿಕೆ
ನಿನ್ನ ಮೇಲೆ ನನಗೆ ನಂಬಿಕೆ
ಇರುವವರೆಗೂ ನಾವಿಬ್ಬರೂ
ಸುರಕ್ಷಿತ, ದಾಂಪತ್ಯ ಅನವರತ !