Saturday, August 10, 2013

ಸಾಲದ ಶೂಲ

ಮನೆಯ
ಬಾಗಿಲಿಗೆ
ಬಂದು,
ಸಾಲವನು
ಕೊಡುವಾಗ
ನೀ ಹಿರಿಹಿರಿ
ಹಿಗ್ಗ ಬೇಡ;
ಕಾಲ ಕಾಲಕೆ
ಸಾಲದ ಕಂತು,
ಮರುಪಾವತಿಸದೆ
ಮರೆತು ತಡವಾದರೆ
ಕಷ್ಟದಲಿ ಕಟ್ಟಲಾಗದೆ
ನಿಂತು,
ಕೊಂಡ ವಸ್ತುಗಳೆಲ್ಲವನು
ಕ್ಷಣ ಮಾತ್ರದಿಂ ;
ಮರು ಮಾತಾಡದೆ
ಕೊಂಡಯ್ಯುವರು ॥

ಕಟ್ಟಿದ ಹಣಕೆ
ಎಳ್ಳು ನೀರು ಬಿಟ್ಟು
ಚಟ್ಟವ ಕಟ್ಟಿ,
ತಿರುಪತಿಯ
ಮೂರು ನಾಮವ ;
ಹಣೆಯ ತುಂಬಾ
ಹಾಕುವರವರು
ಎದೆ ತಟ್ಟಿ ನಿಂತರೆ
ರಣ ಹದ್ದುಗಳಂತೆ
ಗೂಂಡಾಗಳು
ಮೇಲೆರಗುವರು ॥

ಕಾದಿರುವೇ ನಿನಗಾಗಿ

ಒಂದಿರುಳು ನಲ್ಲಾ,
ನಿನಗಾಗಿ ಕಾದೆನಲ್ಲ
ಈಗ ಬರುವೆ, ಆಗ ಬರುವೆ
ಬಿಸಿ ಬೆಲ್ಲ, ರಸಗುಲ್ಲ
ಮಲ್ಲಿಗೆಯ ಮೊಗ್ಗ;
ನೀ ತರುವೆ ಎಂದೆಲ್ಲಾ
ಕಂಗಳಲೇ ನಾ ಕಾತರುಳಾಗಿ
ಕದವಿಕ್ಕದೇ ಎದೆಯುಕ್ಕಿ ಬಂದ
ಅಳು ಅಲೆಗೆ ಅಳುಕದೆ,
ಎದೆ ಚಳಿಗೆ ಮಿಡುಕದೆ
ಕ್ರಿಷ್ಣನಿಗೆ ರಾಧೆಯಂತೆ
ರಾಮನಿಗೆ ಸೀತೆಯಂತೆ
ಈ ಗಿರಿಜೆಗಾಗಿ..... ಓಡೋಡಿ
ನೀ ಬರುವೆಯಲ್ಲಾ....!

Thursday, August 8, 2013

ಗೀತಾ ಆಂಟಿ

ಈ ಕಾಲಗರ್ಭದೊಳಗೆ
ಗತಿಸಿ ಹೋಗುವ ಮುನ್ನ
ಬಾಳು ನಾವಂದು ಕೊಂಡಂತೆ
ಎಡವದೇ ನಡೆದರೆಷ್ಟು ಚೆನ್ನ
ನಾನೇನು ಬಯಸಿ ಪಡೆದದ್ದಲ್ಲ
ಈ ಬದುಕ, ಈ ಕುಲಗೆಟ್ಟ ಕಸುಬ ॥

ಈಗೆಲ್ಲಾ ಹೇಳುವವರೆ
ತಲೆಹಿಡುಕಿ, ಕುಲಟೆ
ಮೋಸಗಾತಿ ಎಂದೆಲ್ಲಾ
ಹಣ್ಣ ಚಪ್ಪರಿಸುವಾಗ
ಕಣ್ಣು ಕಂಡಿರಲ್ಲವೇನೋ;
ಹದಿ ಹರೆಯದರಿಂಡಿದು
ಕಾಡು ಬಾ ಬಾ ಎನ್ನುವವರಿಗೂ
ಮುಪ್ಪಿಟ್ಟರೂ ಕದಪು ಕಪ್ಪಿಟ್ಟರೂ
ತೀಟೆ ತೀರಿಸಿ ಕೊಳ್ಳಲು ನಾ ಬೇಕಿತ್ತು ॥

ನನ್ನವರು, ತನ್ನವರ ತೊರೆದು
ಪ್ರೀತಿಸಿದನ ಜೊತೆ ಬಂದವಳು
ನಾ ಆಗ ತುಂಬು ಗರ್ಭಿಣಿ,
ಗಂಡನ ಅಕಾಲಿಕ ಮರಣ
ಮೊದಮೊದಲು ಅಧೀರಳನ್ನಾಗಿಸಿತು
ಬಾಳಿನ ಬಂಡಿಯ ದೂಡಲು
ಮೈಮಾರಿ ಕೊಳ್ಳುವವಳಿಗೆ ನೆರವಾಗಿದ್ದೇ
ಒಂದಷ್ಟು ದುಡ್ಡು ನಾ ನೋಡುವಂತಾಗಿದ್ದು
ನಾನೇನೂ ಮೈಮಾರಿ ಕೊಳ್ಳಬೇಕಿರಲಿಲ್ಲ
ಬಂದ ಗಿರಾಕಿಗಳಿಗೆ ಹೆಣ್ಣುಗಳ ಹೊಂದಿಸಿ
ನನ್ನ ಮನೆಯ ಶಯನಾ ಗೃಹವಾಗಿಸಿದ್ದೆ ॥


Wednesday, August 7, 2013

ದೇವದಾಸ್ ನಾನಲ್ಲ

ನೀನೊಮ್ಮೆ ಹೇಳಿಬಿಡು
ಹುಡುಗಿ ನೀನನಗೆ,
ನಿನಗಿಷ್ಟವಿಲ್ಲವೆಂದು
ಕಷ್ಟವಾದರೂ ಸರಿ;
ಆಸೆಗಳ ಅಳಿಸಿ
ಕನಸುಗಳ ಕೊಂದು,
ಮತ್ತೆ ನಿನ್ನತ್ತ ತಿರುಗಿಯೂ ನೋಡದೆ
ನಾ ಈ ಕತ್ತಲೊಳಗೆ ಕರಗಿ ಹೋಗುವೆ ॥

ಗೋಸುಂಬೆಯಂತೆ
ಘಳಿಗೆಗೊಮ್ಮೊಮ್ಮೆ
ನಾ ಬಣ್ಣ ಬದಲಿಸಲಾರೆ,
ಮತ್ತೊಬ್ಬಳ ತೆಕ್ಕೆಗೆ
ಈ ಜನ್ಮದಲಿ ಜಾರಲಾರೆ;
ಈ ಹುಚ್ಚು ಪ್ರೀತಿಯ
ಕಿಚ್ಚಿನಲಿ ನಾ ಎಂದೂ ಬೀಳಲಾರೆ ॥

ಒಂದಷ್ಟು ದಿನ ಹುಚ್ಚನಂತೆ
ಊರೂರ ಅಲೆದರೂ,
ನಿನ್ನ ನೆನಪುಗಳ
ಬುತ್ತಿಯ ಬಿಚ್ಚಿ,
ಒಂದೊಂದೇ ಕಿತ್ತೊಗೆದು;
ಮುಂದೊಂದು ದಿನ
ನಾ ಮರೆತ ಕೆಲಸಗಳ
ಜನ ಮೆಚ್ಚುವಂತೆ ಮಾಡಿ,
ನಾ ಪರರಿಗಾಗಿ ಬಾಳಬೇಕಿದೆ ॥

Friday, August 2, 2013

ನೀ ಯಾರಿಗದೆಯೋ ?

ಗಿಡವಾಗಿ, ಮರವಾಗಿ
ನೆರಳಾಗೊ ಹೆಮ್ಮರವಾಗದೆ
ನೀ ಯಾರಿಗಾದೆಯೋ ॥
ಗಿರಿ ತೊರೆಯ ಹರಿವ ನೀರಾಗಿ
ಹರಿಯ ಚರಣವ ತೊಳೆಯದೆ
ನೀ ಯಾರಿಗಾದೆಯೋ ॥
ಕಸ ತಿಂದರೂ ಹಾಲ್ರಸ ನೀಡೊ
ಹಸಿವ ನೀಗೊ ಹಸುವಾಗದೆ
ನೀ ಯಾರಿಗಾದೆಯೋ ॥
ನವ ಮಾಸಗಳು ಹೊತ್ತೆತ್ತು
ಹೆಣ್ಣಾಗಿ ಮಮತೆಯ ತಾಯಾಗದೆ
ನೀ ಯಾರಿಗಾದೆಯೋ ॥
ಮಂದ ಮಾರುತದಿ ಹೊತ್ತು ತಂದ
ಕುಸುಮಗಳ ಸುಗಂಧವಾಗದೆ
ನೀ ಯಾರಿಗಾದೆಯೋ ॥
ಜೀವ ಸಂಕುಲಕೆ ನವ ಚೈತನ್ಯವ
ಬಿಸಿ ಬಸಿರ ನೀಡೊ ರವಿಯಾಗದೆ
ನೀ ಯಾರಿಗಾದೆಯೋ ॥

Thursday, August 1, 2013

ಹೊಸ ರುಚಿ

ತಿಂಡಿ ರೆಡೀ.....
ಬನ್ನಿ ಬನ್ನೀ......
ಎಲ್ರೂ ಬೇಗ್ ಬನ್ನಿ
ನನ್ನವಳ ಮಾತಿಗೆ,
ಎಚ್ಚೆತ್ತು ಡೈನಿಂಗ್ ಟೇಬಲ್ಗೆ
ಮಕ್ಕಳ ಸಮೇತ ಹಾಜರಾದೆ ॥

ಹೊಟ್ಟೆ ಆಗಲೇ ಚುರುಗುಟ್ಟುತ್ತಿತ್ತು
ಘಮಘಮ ವಾಸನೆ ಬರುವ ಬದುಲು
ಗ್ಯಾಸ್ ವಾಸನೆ ಬಂದಾಗ ಭಯವಾಗಿತ್ತು;
ಅನಿಲ ಸೋರಿಕೆಯೋ, ಅಥವಾ ?!! 


ನನ್ನವಳೇ ಬಿಸಿಬಿಸಿ ದೋಸೆ
ತುಪ್ಪದ ಜೊತೆ ಹಾಜರು,
ಏನೇ ಇದು ಕೆಟ್ಟವಾಸನೆ
ಈ ದೋಸೆಗೆ ಏನು ಹಾಕಿರುವೆ ?
ನಿನ್ನ ಹೊಸ ರುಚಿ, ಅಭಿರುಚಿಗೆ
ಭಾನುವಾರವೇ ಆಗ ಬೇಕಿತ್ತೆ;
ಈರುಳ್ಳಿ ದೋಸೆ, ನೀರ್ ದೋಸೆ
ಮಸಾಲೆ, ಖಾಲಿ ದೋಸೆ ತಿಂದಿರುವೆ
ಇದ್ಯಾವುದೇ ಮೂಲಂಗಿ ದೋಸೆ !!!! 


ನಿನ್ನ ಅಡುಗೆಯ ಕರಾಮತ್ತಿಗೆ
ನಾವೇ ಬಲಿ ಪಶುಗಳಾಗಬೇಕ್ಕಿತ್ತೆ ?
ಹೊಸ ರುಚಿಯೋ, ಪರಿಕ್ಷೆಯೋ
ಮೂಲವ್ಯಾಧಿಗೆ ರಾಮಬಾಣವೆ ?
ತಿನ್ನಲಾಗದೆ ತಿಂದಿದ್ದೆವೆನ್ನಿ ॥

ರಮಾ ರಾಮನಾದ

ಸೈಕಲ್ನಿಂದಿಳಿದ
ನಮ್ಮಿಬ್ಬರ ನೋಡಿ
ಕಣ್ ಕಣ್ ಬಿಟ್ಟು ಎಲ್ಲರೂ
ಮುಸಿ ಮುಸಿ ನಗುವವರೇ,
ನನಗೋ ಒಮ್ಮಿಂದೊಮ್ಮೆ
ಎಲ್ಲರ ಬೈಯ್ಯುವಷ್ಟು ಸಿಟ್ಟು;
ಏಯ್ ನಮ್ ಮುಖದಲ್ಲೇನ್
ಕೋತಿ ಗೀತಿ ಕುಣೀತಿದೆ ಏನ್ರೇ
ಬೇವರ್ಸಿ ಮುಂಡೇವೆ
ಆಗ್ಬಾರ್ದು, ಬರಬಾರ್ದು
ಏನಾಗಿದೇಂತ ನಗತ್ತಿದ್ದೀರ;
ಕಚಡಾ ಕಂತ್ರಿ ನಾಯಿಗಳ
ಏನೂಂತ ಈಗಲೇ ಹೇಳಿಲ್ಲಾಂದ್ರೆ
ಒಬ್ಬಬ್ಬರ್ನೂ ಒದೀತೀನಿ ನೋಡಿ ॥

ಲೇಯ್ ಬಾಯ್ಬಡ್ಕೀ ರಮಾ,
ನಿಮಗಷ್ಟೂ ಗೊತ್ತಾಗಿಲ್ವೇನ್ರೆ
ಮೈ ನೆರೆದಿದ್ದೀರಿ ಅಂತ;
ಬಿಳೀ ಲಂಗಕ್ಕಂಟಿದ್ದ
ರಕ್ತದ ಕಲೆಗಳ ತೋರಿಸಿ
ಬಿದ್ದು ಬಿದ್ದು ನಕ್ಕವಳ ಕಂಡು
ಏಯ್ ಕರೀ ಮುಸುಡೀ
ಆ ತರಹ ನನ್ಗೇನ್ ಆಗಿಲ್ವೇ ;
ಎಲ್ಲಾ ಆಗಿರೋದು ಇವ್ಳಿಗೆ
ಭಾಮಳ ಕಡೆ ತೋರಿಸಿದ್ದೆ ॥

ಅಯ್ಯೋ.. ಆ ಹುಡುಗರಿಗೆ 
ಗೊತ್ತಾದರೆ, ಬೇಡಪ್ಪಾ ಬೇಡ;
ಇಡೀ ಊರಿಗೆ ಟಾಂ ಟಾಂ
ಡಂಗೂರ ಹೊಡೆದಾರೆಂದು, ನಾಚಿ
ಭಾಮಾಳೊಟ್ಟಿಗೆ ಮನೆಗೆ ಬಂದು
ನನ್ನತ್ತೆಯ ಪ್ರಶ್ನಿಸಿದ್ದೆ, ಭಾಮಾಳೇ
ಮೈನೆರೆದರೆ ನಾ ಏಕಾಗಲಿಲ್ಲ ?  ॥

ಅತ್ತೆ ಹೇಳಿದ ನನ್ನ ಹುಟ್ಟಿನ
ರಹಸ್ಯವ ಕೇಳಿ ಹೀಗೂ ಉಂಟೇ
ನಾ ಹುಟ್ಟಿದಾಗ, ಹೆಣ್ಣೋ ಗಂಡೋ ಎಂದು
ಲಿಂಗ ಪತ್ತೆಯಾಗದಿದ್ದದ್ದು
ನನ್ನ ಹೆತ್ತವರಿಗೂ ಚಿಂತೆ
ಒಂದತ್ತು ವರ್ಷಗಳ ನಂತರ ಬನ್ನಿ
ಪರೀಕ್ಷಿಸುವ, ನಿರ್ಧರಿಸುವ
ಹುಡುಗಿಯೋ, ಹುಡುಗನೆಂದು
ಅಲ್ಲಿಯವರೆಗೂ ಹುಡುಗಿಯಾಗಿಯೇ ಇರಲಿ
ಡಾಕ್ಟರ್ ಸಲಹೆಯಂತೆ
ನಾ ಎಲ್ಲರ ಮುದ್ದಿನ ರಮಾಳಾಗಿದ್ದೆ 
ಶಸ್ತ್ರಚಿಕಿತ್ಸೆಯನಂತರ ರಾಮನಾದೆ ॥