Monday, August 12, 2013

ಹಿಂಗೇಯ್ಯಾ ಈ ನನ್ ಗಂಡ ಸಾಮಿ ?

ಇವನ್ ಮಕ
ನಾಯಿ ನೆಕ್ಕಾ,
ನನ್ ಕಷ್ಟ ನಂಗೆ
ಅಂತಂದ್ರೆ
ಇವನ್ಗೆ ಸರಸ;
ಮೈ ಪರಪರ
ಕೆರಕೊಳ್ಳಕ್ಕೂ
ನನ್ ಕೈಗೆ
ಪುರುಸೊತ್ತಿಲ್ಲ
ಅಂತಾದ್ರಾಗೆ
ಈ ಬಿಕನಾಸಿ
ಕುಡುಕ ನನ್ ಗಂಡಂಗೆ
ಹಾಸಿಗೇಗ್ ಬಾರೆ ಅಮ್ಮೀ
ಸರಸ ಆಡುಮಾ.....
ಅಂತಾನಲ್ಲಪ್ಪೋ... ಶಿವನೇ...!!!!
ಕೈ ಬುಟ್ ಬುಡು
ಏಯ್ ಮೂದೇವಿ,
ಸಂದಾಕಿರಲ್ಲ;
ಮಕ್ಕಳು ನೋಡ್ತಾವೆ;
ವತ್ತಾರೆಯಿಂದ ದುಡ್ದು
ಸ್ಯಾನೆ ಸುಸ್ತಾಗಿವ್ನಿ
ಸುಮ್ಕೆ ಬಿದ್ಕ,
ನೀ ಹಿಂಗೆಲ್ಲಾ ಮಾಡಿದ್ರೆ
ಪೊರಕೆ ಕಿತ್ತೋತದೆ
ಬಿಡ್ಲಿಲ್ಲಾಂದ್ರೆ;
ಗುಂಡಕಲ್ಲೆತ್ತಿ ಸಾಯಿಸ್ತೀನಿ
ಉಸಾರು ಅಂತೇಳಿ
ಹೆದರಿಸಿದೆ ಅನ್ನೀ.......!!!!

ಅನುರಾಗದ ಅಂತಃಪುರ

ಇಂದೇಕೋ ನೀ
ನನ್ನೊಳಗೊಳಗೆ
ಮತ್ತೇ ಮತ್ತೇ
ನಿನ್ನಾ ನೆನಪೂ,
ಬಂದೆನ್ನ ಕಾಡುವುದು
ಈ ಹೃದಯದ ಬಿಸಿಗೆ ;
ನಿನ್ನಾ ಪ್ರೀತಿ, ಕರಗದೇ ಇನ್ನೂ
ನನ್ನಾ ಸೇರದೆ ಹೋದರೆ ನೀನು
ನಾ ಹೇಗೆ, ಈ ನೋವನು
ಮರೆಯಲಿ ನೀ ಹೇಳೂ
ನಿನ್ನೆಲ್ಲಾ ಪ್ರೀತಿಯ
ಸ್ಪೂರ್ತಿಗೆ ನಾನೂ ,
ಗರಿಕೆದರೀ ಕುಣಿವಾ
ಗಿರಿಯಾ ನವಿಲೂ
ನನ್ನೆಲ್ಲಾ ಕನಸಿನ
ಅಂತಃಪುರದರಮನೆಗೆ
ನೀ ..... ರಾಣಿ ಜೇನು....!!!!!

Sunday, August 11, 2013

ಭಯವೇಕೆ ನಾ ಅಳಲೇಕೆ ?

ಅಳದಿರು ಕಂದಾ
ನೀನೆಂದೂ ಅಳದಿರು,
ಗುಮ್ಮಾ ಬರುವಾ
ನಿನ್ನೇ ಹಿಡಿದೇ ಬಿಡುವ
ನಗುತಿರು ಎಂದೆಂದು ;
ಚುಕ್ಕಿ ಚಂದ್ರನ
ಚಕ್ಕುಲಿ ಉಂಡೆ
ತಂದು ಕೊಡುವೆ,
ಅಪ್ಪನಿಗೆ ಹೇಳಿ
ಆನೆಯ ಮರಿಯ
ಗಿಳಿಯ ಮರಿಯ,
ನವಿಲಿನ ಗರಿಯ
ಬಣ್ಣದ ತಗಡಿನ
ತುತ್ತೂರಿಯ;
ನಿನಗೆ ತರಿಸಿ
ನಾ ಕೊಡುವೆ
ಅಳದಿರು ಕಂದ
ನೀ ಅಳದಿರು ॥

ಇವೆಲ್ಲಾ
ಈ ಕಾಲಕೆ ,
ಹಳೇದಾಯ್ತಮ್ಮಾ....
ಇವೆಲ್ಲ ಈಗಲೆ
ನನಗೇ ಬೇಡಮ್ಮಾ.....
ಮೊಬೈಲು ನೀ ಕೊಡಿಸು
ಕಂಪ್ಯೂಟರ್ ಕೊಡಿಸು,
ಕೋಕ ಕೋಲ ಕುಡಿಸು
ಫಿಜ್ಜಾ ಬರ್ಗರ್ ತಿನಿಸು
ಆ ಗುಮ್ಮನ ನೀ ಕರೆಸು
ಭಯವೇ ಇಲ್ಲವೆ ಇಲ್ಲಾ
ಓ ನನ್ನಾ ಮುದ್ದಿನ ಅಮ್ಮಾ ॥

ರಾಶಿಫಲ

ನನ್ನವಳದು ನನ್ನದು
ಒಂದೇ ರಾಶಿ ,
ಫಲ ಸಮಸಮವೆಂದು
ನನಗೆ ಖುಷಿಯೋ ಖುಷಿ
ನಾಮವೊಂದೆ,
ನಕ್ಷತ್ರ ಬೇರೆಬೇರೆ
ಗಾಂಪ ಗಾಂಪಿ;
ಇದೂ ಒಂದು ಹೆಸರೇ
ಎಂದು ನಗದಿರ ಬೇಡಿ,
ಮುಂದಿದೆ ನೀವೇ ನೋಡಿ ॥

ವಾರಭವಿಷ್ಯಕೆ ನಾ
ಪರದಾಡ ಬೇಕಿಲ್ಲ,
ನನ್ನವಳ ಮುಖದಾಳ
ತಿಳಿದರೆ ಸಾಕಲ್ಲ;
ಅವಳೇ ನನ್ನ ಪ್ರಶ್ನಿಸಿ
ಅವಳೇ ಉತ್ತರಿಸಿ,
ರ್ರೀ.... ನಿಮ್ಮದು
ಹೀಗೆ, ಹಾಗೆಯೇ
ವಾರಾಂತ್ಯದೊಳಗೆ
ಬಂಪರ್ ಲಾಟರಿ;
ಸಾಹಿತಿಯ ಪ್ರಿಯೆಗೆ
ಸನ್ಮಾನ ಭರ್ಜರಿ ॥

ಅಯ್ಯೋ.....
ಉಬ್ಬಸ ನಿಮಗೆ,
ಅಲ್ಲಾ ನಮಗೆ
ವಿದೇಶ ಪ್ರವಾಸ,
ಲಕ್ಷ್ಮೀಕೃಪಾ ಕಟಾಕ್ಷ;
ಮತ್ತಷ್ಟು ಇನ್ನಷ್ಟು
ಸುದ್ದಿಯ ಗುದ್ಧಿ
ತಲೆ ತುಂಬುವಳು
ಸ್ಪೂರ್ತಿಯ ಸಿದ್ಧಿ ॥

ಆದರೂ...
ಒಮ್ಮೊಮ್ಮೆ ,
ಅಳುಕದೆ ಮನದನ್ನೆ
ಮೂದಲಿಸುವಳು
ಎನಗೆ,
ಹೆದರದು ಕಾಗೆ !
ನಿಮಗೆ ?
ಕಾರಣವಿಷ್ಟೆ;
ನನ್ನ ಬಣ್ಣ ಕಡು ಕಪ್ಪು
ಗ್ರಹಚಾರ
ಅವಳ
ಕೈಹಿಡಿದಿದ್ದು ನನ್ನ ತಪ್ಪು ॥

Saturday, August 10, 2013

ಅನ್ಯೋನ್ಯ ದಾಂಪತ್ಯ

ಹೆಂಡತಿ
ಹೇಳಿದ್ದಕ್ಕೆಲ್ಲಾ
ಓಲೈಸಿ,
ಕೇಳಿದ್ದೆಲ್ಲವ
ಪೂರೈಸಿ,
ನಗುನಗುತ
ಹೌದು
ಹೌದು
ಎಂದರೆ
ಅನ್ಯೋನ್ಯ ದಾಂಪತ್ಯ

ಸಿಡುಕಿ
ಸಿಟ್ಟಾದರೆ,
ಮಿಡುಕಿ
ವಟಗುಟ್ಟುವಳು
ದಿನವಿಡಿ,
ಕೆಡವಿ
ಉಪವಾಸ;
ತಪ್ಪಿಗೆ
ಅನುಭವಿಸ ಬೇಕು
ರಾತ್ರಿಯಿಡಿ
ಒದ್ದಾಡಿ ವನವಾಸ ॥

ನಾ ಎಂಥಾ ಸುಖಿ !

ನಾ ನಿತ್ಯ ಪರಮ ಸುಖಿ,
ನೀನಿದ್ದರೆ ಪ್ರಾಣ ಸಖೀ
ನೀ ಉಣ ಬಡಿಸಿದರೆ;
ನಿನ್ನ ಅದರಗಳ ಸವಿ
ಸಿಹಿ ನಗೆಯ ಬೆರಸಿ
ಮೈಮನ ಎಂದೂ ಬೆಚ್ಚಗೆ
ಬದುಕು ಕುಂದದು ಹುಚ್ಚಿಗೆ ॥

ಎನಗೆ ಬೇಕೆನಿಸುವುದಿಲ್ಲ ನಿದ್ದೆ
ಬಿಸಿಬಿಸಿಯ ಬಸ್ಸಾರಿನ ಮುದ್ದೆ,
ಸಾಕೆನಿಸದು ಮುತ್ತಿನ ಮುದ್ರೆ
ಮುತ್ತಿಗೂ ಆ ಮದಿರೆಗೂ
ಅಷ್ಟೇನೂ ವ್ಯತ್ಯಾಸ ಇರದು;
ಒಂದು ಒಳ ಸೇರಿದೊಡನೆ ಮತ್ತು
ಇನ್ನೊಂದು, ನೀನಿದ್ದರೆ ಸದಾ ಮತ್ತು ॥

ಜಯದ ಮಂತ್ರ

ಈ ಜೀವನದಿ
ನೀ ಏನನ್ನೂ,
ಸಾಧಿಸಲಾಗದೆ
ನಿನ್ನಷ್ಟಕ್ಕೆ
ನೀ ಸತ್ತರೆ;
ಅದು ಹೇಡಿತನ
ಆತ್ಮಹತ್ಯೆ,
ಕಷ್ಟಗಳನು
ಎದುರಿಸಿ
ಎದೆಗುಂದದೆ
ಧೈರ್ಯದಿಂ
ನೀ ಮುನ್ನುಗ್ಗಿ ;
ನಡೆದರೆ
ನಿಂತರೆ
ಜಯದ ಮಾಲೆ
ನಿನ್ನ ಕೊರಳಿಗೆ ॥