Tuesday, March 26, 2013

" ಮೋಹಿನಿ - ಭಸ್ಮಾಸುರ "

" ನಾನಿರುವೆ ನಿನಗಾಗಿ "

ಎಲ್ಲ ಮುಗಿಯಿತೆಂಬ ಚಿಂತೆ
ಯಾರು ಇಲ್ಲರೆಂಬ ಚಿಂತೆ
ಬೇಡ ನಲ್ಲೆ ನಿನಗೆ

ಸಾವೇ ಇರದ ಮನೆಯು
ನೋವೇ ಬರದ ಮನವು
ಈ ಜಗದೊಳೆಲ್ಲಿದೆ

ವಿಧಿಯ ಆಟವನು ಯಾರು ಬಲ್ಲರು
ನದಿಯ ಸುಳಿಯ ಯಾರು ಅರಿಯರು
ಕಾಲ ಚಕ್ರದೊಳಗೆ ಸಿಲುಕಿ ಕಾಲನ
ಕರೆಯು ಬರಲು ಹೋಗಲೇ ಬೇಕು 

Monday, March 25, 2013

ಆಸೆಗಳೇ ಹಕ್ಕಿಗಳಾಗಿ

ಅಂಬರ ಅಂಬರ
ಚುಂಬಿಸೊ ಆಸೆ
ಹಾರಲಿ ಹೇಗೆ
ನಾ ಹೇಳಿ ಹಕ್ಕಿಗಳೇ
ಎದೆಯಾಳದಿ
ತಿಳಿ ಮನಸ್ಸೊಂದಿದೆ
ಹೇಳದೆ ಕೇಳದೆ
ಬಂದಿದೆ ಇಂದೆನಗೆ,
ಆ ಚಂದ್ರನ ತಂಪಿನ
ಶರ ಶೀತಲಕೆ
ಆ ತಾರೆಗಳ ಗುಂಪಿನ
ಆಕರ್ಷಣೆಗೆ
ಆ ಮೋಡಗಳ ಬಾವುಕ
ಸಂಘರ್ಷಣೆಗೆ
ತುಂತುರು ಮಳೆಯೆ
ಸಿಂಚನವಾಗಿರಲು
ನನ್ನನೆ ನಾ
ನಿನ್ನಲಿ ಇಂದು ಮೈಮರೆತೆ ॥

" ಗೆಳತಿ ನೀನಿಲ್ಲದೆ ನಾ ಹೇಗೆ ಬಾಳಲಿ ಹೇಳು "

ಒಲವಿನೊಲೆ ಬರೆದೆ ನಲ್ಲೆ ನಿನಗೆ
ಕೊಡಲು ಏಕೊ ಮುಜುಗರ ಎನಗೆ
ಒಲವ ಮಳೆಯ ನೀ ಸುರಿಸಿ ಹರಿಸದೇ
ಒಳಗು ಹೊರಗು ಕಾದ ಮನಕೆ
ತಂಪನೆರೆದು ನೀ ತಣಿಸದೇಕೆ
ಹಸನು ಎದೆಯ ನೀ ಮಾಡದೇ
ಮನದ ಮಾಮರದಿ ಬೆಸೆದ ಬಳ್ಳಿ
ಹೂವ ನಗೆಯ ಚೆಲ್ಲಿ ಅರಳಿ ನಿಂತಿದೆ
ಕಂಪ ಸೂಸೊ ಪರಿಗೆ ಹೃದಯ ಹಾಡಿದೆ
ಬರುಡಾದ ಬದುಕು, ಇನ್ನೇಕೆ ಬೇಕು
ನೀನಿತ್ತ ಪ್ರೀತಿ, ಜೊತೆಗಿರುವಾಗ ಇನ್ನು
ಕುಣಿವ ನವಿಲಾಗುವೆ, ಉಸಿರ ಉಸಿರಾಗುವೆ
ಏಕೊ ಏನೋ ಹೇಳಲಾರೆ ಗೆಳತಿ
ಮನದಿ ಮೂಡಿದ ಈ ಪ್ರೀತಿಗೆ
ನಿನ್ನೊಲವಿನ ಉತ್ತರ ಬೇಕಿದೆ
ಹೇಗೆ ನಿನಗೆ ಹೇಳಲೆಂಬ ಭಯಕೆ
ನುಡಿವ ಮಾತು ನನ್ನಲ್ಲೇ ಅಡಗಿದೆ
ಹೇಳಲಾಗದೆ ದಾರಿ ಕಾಣದಾಗಿದೆ
ನೀ ಕಣ್ಣಿನಲ್ಲೇ ಸೆಳೆವ ನೋಟಕೆ
ಹೃದಯ ಕರಗಿ ನಿನಗೆ ಸೋತಿದೆ
ನೀ ಏನು ತಿಳಿವೆಯೆಂದು ಹೇಳಲಾರೆ
ನೀ ಬರದೆ ನಾ ಬಾಳಲಾರೆ ನನ್ನೊಲವೆ
ನೀನಿರದೆ ನಿದಿರೆ ದೂರ ದೂರವೆ
ಚದುರಿ ಹೋಗದಿರಲಿ ಕಂಡ ಕನಸೆಲ್ಲವ
ಮಳೆ ಬಿಸಿಲಿರಲಿ ಜೊತೆ ಜೊತೆಗೆ ನಡೆದೆ
ನೋವು ನಲಿವಿನಲಿ ಕೈಹಿಡಿದು ನೀ ಬಂದೆ
ನಾ ಹೇಗೆ ನಿನಗೇಳಲಿ "ಪ್ರೀತಿ"ಯ ಗಳತಿ

Sunday, March 24, 2013

ಅನುಕಂಪ ಬೇಡವೆ



ನಾನು ಹೆಣ್ಣು
ನೀವು ಹೆಣ್ಣು
ನಮ್ಮಲ್ಲೇಕೆ
ಕೋಪ ತಾಪದ
ಈ ಹಗೆಯ ಮತ್ಸರ 

ನೀವು ತಾಯಿ
ನಾನು ಮಗಳು
ತಿಳಿದರೆ ಇರದು
ನಮ್ಮ ನಡುವೆ
ದೂರ ತೀರದ ಅಂತರ

ನಿಮ್ಮ ಮಗನ
ಮಡದಿ ನಾನು
ಬಾಳ ಬೆಳಗೊ
ಜ್ಯೋತಿ ನಾನು
ಇರಲಿ ಎಂದೂ ಸಡಗರ

ನೀವು ತೋರೊ
ದಾರಿ ದೀಪ
ಎನಗೆ ನಿಮ್ಮ
ಶಾಂತ ರೂಪ
ಮೋಡವಿರದ ಅಂಬರ

ಕ್ಷಣ ಕಾಲ ಕ್ಷಣ ಪಿತ್ತ
ಇರದಿರಲಿ ನನ್ನತ್ತ
ನೀವಿತ್ತ ಈ ಮುತ್ತ
ಕಾಪಾಡಿ ಸಲಹುದೆ ಚಿತ್ತ
ಎಂದೆಂದು ಇರುವಾಗ ಬಾಳೆ ಸುಂದರ

Friday, March 22, 2013

ಕಲ್ಪನೆಗಳ ಕಾವ್ಯ ಕನ್ನಿಕೆ

ಕರೆದಾಗಲೆಲ್ಲಾ ಮಿಂಚಂತೆ
ಓಡೋಡಿ ಬಳಿ ಬರುತ್ತಿದ್ದವಳು
ಉಸಿರಿಗೆ ಉಸಿರಾಗಿ
ಬೆರೆತು ಜೊತೆಯಾಗಿದ್ದವಳು
ನೀ ಎಲ್ಲಿ ಹೋದೆ
ಮರೆಯಾಗಿ ಕಣ್ಮರೆಯಾದೆಯಾ
ಮದುವೆಯಾಗಿ ಮನೆತುಂಬಿ
ಮನ ತುಂಬಿ, ಮರಿ ದುಂಬಿ
ನಲ್ಲೇ ನೀ ಬಂದ ಮೇಲೆಯೇ
ಅವಳು ಈ ಹೃದಯದಲಿಲ್ಲ
ಎತ್ತ ಹೋದಳೋ ಗೊತ್ತಿಲ್ಲ
ಇಲ್ಲೇ ನಾ ಹೋಗಿ ಬರುವೆ
ಎಂದವಳ ಸುಳಿವಂತೂ ಇಲ್ಲ
ನಿನ್ನೊಲವ ಸುಳಿಗೆ ಸಿಲುಕಿ
ನಾ ಮರೆತೆನೇ ನಾನವಳ
ಸುಳಿವ ತಂಗಾಳಿಯ
ತಂಬೆಲರಂತೆ
ಮಿಡಿವ ಮನಕೆ
ಇಂಪಾದ ಹಾಡಂತೆ
ಸಂತೈಸಿ ನನ್ನ ಅಪ್ಪಿ
ಮನಸಾರೆ ಮುದ್ದಾಡುತ್ತಿದ್ದಳು
ಹಗಲು ಇರುಳೆನ್ನದೇ
ಮಳೆಗಾಳಿಯು ಎನ್ನದೇ
ಬೆಚ್ಚನೆಯ ಮೈ ಮನಕೆ
ಹೊದಿಕೆಯ ಹೊದಿಸಿ
ಮದಿರೆಯಾಗಿದ್ದವಳು
ಸುತ್ತಾಡದ ಜಗವಿರಲಿಲ್ಲ
ಅಡ್ಡಾಡದ ದಿನವಿರಲಿಲ್ಲ
ವಯಸ್ಸಿನ ಕೀಳಿರುಮೆಯಿರಲಿಲ್ಲ
ಹಸಿವಿನ ಹಾಹಾಕಾರವಿರಲಿಲ್ಲ
ನಮ್ಮಲ್ಲಿರಲಿಲ್ಲ ವಿರಸದ ಜನನ
ಪ್ರತೀಕ್ಷಣ ರಸ ನಿಮಿಷದ ಮನ
ಮುನಿಸ ತೊರೆದ
ಬೆಳ್ಮುಗಿಲಾಗಿದ್ದಳು
ಕನಸ ಕಡಿದಗೆದು
ಛಲಗಾತಿಯಾಗಿದ್ದಳು
ನನ್ನ ನೀ ಕೈ ಹಿಡಿದ ಮೇಲೆ
ನಿನ್ನ ಯೌವನದ ಹುಚ್ಚು
ಹೊಳೆಯೊಳಗೆ ನಾ ಮುಚ್ಚಿ
ಕೊಚ್ಚಿ ಹೋದ ಮೇಲೆ ಕಾಣೆಯಾದಳು
ನಾ ನಿಟ್ಟುಸಿರಿಟ್ಟರೂ
ಎದ್ದೋಡಿ ಬರುತ್ತಿದಳು
ನಾ ಕಂಗಾಲಾದರೂ
ಮಿಡುಕಾಡುತ್ತಿದ್ದಳು
ನಿದ್ದೆಯಲಿ ನಾ ಬಡ ಬಡಿಸುವಾಗ
ನೀ ಅನುಮಾನಗೊಂಡು ಪ್ರಶ್ನಿಸಿದ್ದೆ
ನೀ ಬರುವ ಮುಂಚೆಯೇ
ಅವಳೆದೆಯಲಿ ನಾ ನಿಶ್ಚಿಂತೆಯಾಗಿದ್ದೆ
ಅಯ್ಯೋ ! ಅರಿವಿಲ್ಲದಾ ಮಂಕೇ
ನಿನಗೇಕೆ ಅವಳ ಮೇಲೆ ಶಂಕೆ
ನಿನಗೆ ಸವತಿಯೂ ಅವಳಲ್ಲ
ಪ್ರತಿರಾತ್ರಿಗೂ ಪ್ರತಿ ಸ್ಪರ್ಧಿಯಲ್ಲ
ನನಗೆ ನಿನಗೆ ನನ್ನೊಳಗಿನ
ಲ್ಪನೆಯ " ಕಾವ್ಯ ಕನ್ನಿಕೆ "

Thursday, March 21, 2013

" ಓಂ ನಮಃ ಶಿವಾಯ "

ನಿನ್ನ ಹಾಡಿ ಕೊಂಡಾಡದ
ಈ ದೇಹವೇಕಯ್ಯ
ನಿನ್ನ ನೋಡಿ ಪೂಜಿಸದ
ಈ ಕೈಗಳೇಕಯ್ಯ
ಹೊಲಸು ಸಂಸಾರಕ್ಕೆ ಬಿದ್ದು
ಮನಸ್ಸು ಮತ್ಸರವಾ ಮೆದ್ದು
ಮಾಡ ಬಾರದ್ದನ್ನೆಲ್ಲವ ಮಾಡಿದೆ
ಕಾಡ ಬಾರದವರೆನ್ನೆಲ್ಲರ ಕಾಡಿದೆ
ಉಪವಾಸವು ಇಂದೆಂದೇಳಿ
ಉಪ್ಪಿಟ್ಟು ಒಂದಂಡೆ ಉಂಡೆ
ಜಾಗರಣೆಯು  ಇಂದೆಂದೇಳಿ
ಜೂಜು ಅಡ್ಡೆಗೆ ಹೋಗಿ ನಿಂತೆ
ಕೈಲಾಸದಿಂದ ಎದ್ದು ನೀ ಬಾರಯ್ಯ
ಮೈಮನಸ್ಸಿಗೆ ಮದ್ದು ನೀ ನೀಡಯ್ಯ
ಶಿವ ನಿನ್ನ ನಾಮವೇ ನನ್ನುಸಿರಾಗಲಿ
ಹರ ನಿನ್ನ ಸೇವೆಯೇ ನನ್ನ ಬದುಕಾಗಲಿ
ಓಂ ನಮಃ ಶಿವಾಯ
ಶಿವರಾತ್ರಿಯ ಹಬ್ಬಕ್ಕೆ ಬರೆದದ್ದು