Saturday, June 29, 2013

ಈ ಪ್ರೀತಿ ಒಂಥರಾ ಕಚಗುಳಿ

ನೀ ಮೊದಲಿನಂತೆ
ಈಗಿಲ್ಲ ಬಿಡು ನಲ್ಲೇ
ನಾನೆಂದರೆ ನಿನಗೆ
ಎಣೆಯಿಲ್ಲದಾ ಪ್ರೀತಿ,
ನನ್ನ ಬಿಟ್ಟಿರಲಾರದಷ್ಟು
ಅಧಮ್ಯ ಸ್ನೇಹ ಸೆಳೆತ !
ಒಂದು ಕ್ಷಣ, ಸಿಗಲಿಲ್ಲವೆಂದರೆ
ನಿನಗೆಂತಾ ಕೋಪ, ಆವೇಶ
ಅಬ್ಬಬ್ಬಾ, ನಿನ್ನ ಸಂತೈಸಿ
ಸಮಾಧಾನಿಸಿ; ಹೂಮುತ್ತಿಟ್ಟರಷ್ಟೇ
ನಿನಗೂ ನೆಮ್ಮದಿ, ನನಗೂ ನಿರಾಳ
ಕದ್ದೂ ಮುಚ್ಚಿ ಗಂಟೆಗಟ್ಟಲೆ
ಕಾದರೂ ವ್ಯರ್ಥವಾಗುತ್ತಿರಲಿಲ್ಲ
ನಿನ್ನ ಸವಿ ಅದರಗಳಿಗಷ್ಟೆ
ಮೀಸಲು ನಮ್ಮಿಬ್ಬರ ಸಮ್ಮಿಲನ !
ನನ್ನ ಮದುವೆಯಾದ ಮೇಲಂತೂ,
ಬಲು ಅಪರೂಪ ನೀ
ಸಿಗುವುದು ರಾತ್ರಿಗಷ್ಟೆ;
ನಿನ್ನ ನಾ ಬಳಿ ಕರೆದರೂ
ಹೊತ್ತು ಗೊತ್ತಿಲ್ಲವೇ ನಿಮಗೆ
ಅಮ್ಮ ಬಂದರೆಂಬ ನಾಚಿಕೆಯ
ಜಾರಿಕೆಯ, ಸಹನೆಯ ಉತ್ತರ !

ಸಾವಿತ್ರಿ

ಮುಚ್ಚಿಡುವಂತಹದ್ದೇನಿಲ್ಲ
ಮಗ್ಗುಲ ಮುಳ್ಳಾಗಿ ಮನವ
ಸದಾ ಚುಚ್ಚುತ್ತಿರುವ
ನನ್ನೆಲ್ಲಾ ನೋವುಗಳ
ಬಿಚ್ಚಿಡುತ್ತಿರುವೆ;
ಒಂದಷ್ಟು ನಿಮ್ಮ ಮನಸ್ಸಿಗೆ
ನೋವಾದರೆ ಅದು ಕೇವಲ
ನನ್ನ ಕರ್ಮದ ಕಾಕತಾಳೀಯ !

ನಿಮ್ಮಂತೆಯೇ ನಾನೂ ಹೆಣ್ಣೆ
ನನಗೂ ನೂರಾರು ಕನಸಿದೆ,
ವಯಸ್ಸಿಗೆ ಮೀರಿದ ಅಂದವಿದೆ
ಮದುವೆಯ ಹೊಸ್ತಿಲಲ್ಲಿ ಬಂದು
ನಿಂತರೂ, ವಿಧಿಗೆ ಸಮ್ಮತಿಯಿಲ್ಲ
ನಿಶ್ಚಿತಾರದ ದಿನವೇ ಕೈಹಿಡಿವವನ
ಕಾಳ ಸರ್ಪದ ವಿಷ ಜ್ವಾಲೆಗೆ
ಸಿಕ್ಕಿ ಸತ್ತಾಗ, ನನ್ನ ಕಾಲ್ಗುಣವ
ಹಳಿದ ವರೆಷ್ಟೋ; ಮೂದಲಿಸಿದವರೆಷ್ಟೋ!
ಒಂದೇ ಎರಡೇ, ಹತ್ತಾರು ಲಗ್ನಗಳು
ಕೂಡಿ ಬಂದಿದ್ದರೂ, ವಿಘ್ನಗಳೇ ಹೆಚ್ಚು

Tuesday, June 25, 2013

ಸಹಬಾಳ್ವೆ ( ಲಿವಿಂಗ್ ಟುಗೇದರ್ ) ಭಾಗ - ೧

ಅವಸರ ಏನಿಲ್ಲಾ 
ಬಿಡು ನೀ ಗೆಳತಿ
ಒಂದಷ್ಟು ದಿನ
ಹೀಗೆಯೇ, ಆನಂದದಿ
ಸಂತೋಷವ ಅನುಭವಿಸಿ
ಕಾಲವ ಕಳೆಯೋಣ
ಸತಿ ಪತಿಗಳಂತೆಯೇ;
ಈ ಮದುವೆ ಸಂಪ್ರದಾಯ
ಆಚರಣೆಗಳೆಲ್ಲಾ ಕೇವಲ
ನಮಗಾಗಿ ಮಾಡಿಕೊಂಡಿದ್ದು
ಹೇಗೂ ಜೊತೆ ಜೊತೆಗೆ
ಒಂದೇ ಗೂಡಿನಲ್ಲಿರುವಾಗ
ಚಪ್ಪರ, ಮಾಂಗಲ್ಯಧಾರಣೆ
ವರದಕ್ಷಿಣೆ; ವರೋಪಚಾರ
ಇವೆಲ್ಲವೂ ಈ ಕಾಲಕೆ ಬೇಕೆ!
ಮುಂದೊಂದು ದಿನ
ನಮಗೆ ಬೇಕೆನಿಸಿದಾಗ,
ಶಾತ್ರೋಕ್ತವಾಗಿ
ಗುರು ಹಿರಿಯರ ಸಮ್ಮುಖದಲ್ಲಿ
ಭರ್ಜರಿಯಾಗಿ ಮದುವೆಯ
ಮಾಡಿಕೊಂಡರಾಯಿತು;
ನನ್ನ ಮೇಲೆ ನಿನಗೆ ನಂಬಿಕೆ
ನಿನ್ನ ಮೇಲೆ ನನಗೆ ನಂಬಿಕೆ
ಇರುವವರೆಗೂ ನಾವಿಬ್ಬರೂ
ಸುರಕ್ಷಿತ, ದಾಂಪತ್ಯ ಅನವರತ !

Tuesday, June 18, 2013

ಗಂಗಮ್ಮ

ಅವಳೆಂದರೆ ಹಲವರಿಗೆ
ಎಲ್ಲಿಲ್ಲದ ಬಾಯಾರಿಕೆ,
ಇನ್ನೂ ಕೆಲವರಿಗಂತೂ
ಮಮತಾಮಯಿ ತಾಯಿ;
ಮೂವತ್ತರ ಹಾಸುಪಾಸು
ಅಪ್ರತಿಮ ರೂಪರಾಶಿ
ಇಪ್ಪತ್ತರ ಯುವತಿಯರನೂ
ನಾಚಿಸುವ ಶರೀರ, ಶಾರೀರ
ಊರ ಗೌಡನ ತೋಟದ
ಮನೆಯ ಖಾಯಂ ಗಿರಾಕಿ !

ಗೌಡ ಸತ್ತ ನಂತರವೇ
ಬದುಕು ಗಿರಗಿಟ್ಲೇ ಹೊಡೆದಿದ್ದು
ಪುಂಡು ಪೋಕರಿಗಳಿಗೆ
ದಿನ ನಿತ್ಯ ಆಹಾರವಾಗಿದ್ದು!
ಅವಳೇನೂ ಬಯಸಿ ಬಯಸಿ
ಪಡೆದದ್ದಲ್ಲ ಈ ಹೀನ ಬದುಕು
ಪ್ರೀತಿಸಿ ಮೆಚ್ಚಿದವನೇ ಎಲ್ಲವ
ದೋಚಿ, ತಲೆ ಹಿಡುಕನಾಗಿದ್ದು;
ಊರ ಗೌಡನಿಗೆ ಮಾರಿದ್ದು
ಎಂಥಾ ವಿಚಿತ್ರ ವಿಪರ್ಯಾಸ !

Monday, June 17, 2013

ನಿತ್ಯ ಚೈತ್ರೋತ್ಸವ

ನಿನ್ನ ನೆನಪಿನ
ಸುಮವು ಸುರಿಯಲು
ಎನ್ನ ಮೈಮನದಿ
ರಂಬೆ ಕೊಂಬೆಗಳಲ್ಲಿ
ಚಿಗುರಿನ ನವ ಪಲ್ಲವಿಯ
ನಿತ್ಯ ಹರಿದ್ವರ್ಣವ ವಸಂತವು !
ಧಮನಿ ಧಮನಿಗಳಲ್ಲಿ
ಹರಿವ, ನಿನ್ನ ಹೂನಗೆಯ
ಪ್ರೇಮಧಾರೆಯ ಹೊನಲು!

ನೀ ಹೊತ್ತು ತರುವ
ಮಂದ ಮಾರುತದ
ಆ ಸ್ಪೂರ್ತಿ ಸೆಳೆತದ
ಅಲೆಯೊಳಗಿನ
ಘಮ ಘಮವು;
ಚಿತ್ತ ಚೆಂಚಲವಾದ
ಮನಕೆ ನವೋಲ್ಲಾಸದ
ಮರು ಹುಟ್ಟಿನ 
ಕಾವ್ಯರಸಧಾರೆಗೆ
ಸಂಜೀವಿನಿಯು !

Sunday, June 16, 2013

ಮಹಾ ದಾನಿ

ಎಲ್ಲರಂತಲ್ಲವೇ ಗೆಳತಿ
ನನ್ನವನು, ನಾ ಮೆಚ್ಚಿದವನು
ನನ್ನ ಕೈಹಿಡಿದ ಪತಿ ದೇವನು;
ಕೊಡುಗೈ ದಾನಿಗಳಲ್ಲೇ
ಮಹಾ ದಾನಿ, ಕರ್ಣ ಶಿಬಿ,
ಹರಿಶ್ಚಂದ್ರ ಸಿರಿಯಾಳರೆಲ್ಲರ
ಮೀರಿಸಿದವನು !
ಹೆತ್ತೊತ್ತವಳಿಗಲ್ಲ, ತುತ್ತಿತ್ತವಳಿಗಲ್ಲ
ನಿರ್ಭಾಗ್ಯ ನಿಸ್ಸಾಹಾಯಕ
ಸಂಸಾರದ ನೊಗ ಹೊತ್ತು,
ಒದ್ದಾಡುವವಳ ನೋವಿಗೆ ಸ್ಪಂದಿಸಿ
ತನ್ನ ಒಂದು ಮೂತ್ರ ಪಿಂಡವ
ದಾನ ಮಾಡಿದ ಪುಣ್ಯಾತ್ಮ;
ನಾನವರ ಚರಣ ದಾಸಿ!
ಸದಾ ರೋಗಿಷ್ಟೆ ಅಮ್ಮ
ದುಡಿಯಲಾಗದ ಅಪ್ಪ
ಮೂವರು ತಂಗಿ, ತಮ್ಮ
ನಾ ದುಡಿದರಷ್ಟೇ ಅನ್ನ;
ಒಂದು ಹೊತ್ತಿಗೆ ಕೂಳಿದ್ದರೆ
ಮತ್ತೊಂದು ಹೊತ್ತಿಗೆ ಇಲ್ಲ
ಉಪವಾಸ, ಈಗಿರುವಾಗ
ನನ್ನೆರಡು ಮೂತ್ರ ಪಿಂಡಗಳ ವೈಪಲ್ಯ;
ಈ ಬಡತಿಗೆ ಬಡವನೇ ದಿಕ್ಕು
ನನ್ನ ಬಂದುವೂ ಅಲ್ಲ, ಗೆಳಯನೂ ಅಲ್ಲ
ನನ್ನ ಉದ್ದರಿಸೆ ಬಂದ ಮಹಾ ದೇವನಿವ !

Friday, June 14, 2013

ವೈಮನಸ್ಸು

ನೀ ಎಂಥಾ ಹಿತ್ತಾಳೆಯ
ಕಿವಿಯವಳೇ, ನಿನ್ನ ಅಮ್ಮ
ಹೇಳಿದಕ್ಕೆಲ್ಲಾ ಕೂಡಲೇ;
ಕೋಲೇ ಬಸವನ ರೀತಿ
ತಲೆಯಲ್ಲಾಡಿಸಿ,
ನಿನ್ನ ಸಂಸಾರವ
ಹಾಳು ಗೆಡವೀಯ, ಜೋಕೆ !
ಈ ಎರಡು ವರ್ಷಗಳಲ್ಲಿ
ನನ್ನ ಜೊತೆ ಸಂಸಾರ
ಮಾಡಿದ್ದು, ಒಂದೆರಡು
ತಿಂಗಳುಗಳಷ್ಟೇ !
ಆಷಾಡ ಮಾಸ ಎಂದೇಳಿ
ಮೂರ್ನಾಲ್ಕು ತಿಂಗಳು
ತವರು ಮನೆಯಲ್ಲಿಯೇ ವಾಸ,
ನನಗೆ ವನವಾಸ ಉಪವಾಸ !
ಅಮ್ಮನಿಗೆ ಮೈಸರಿಯಿಲ್ಲ,
ಅಕ್ಕನ ಬಾಣಂತಾನ,
ನಮ್ಮ ಗ್ರಹಗತಿ ಸರಿಯಿಲ್ಲ
ಎಂದೆಲ್ಲಾ ಕುಂಟು ನೆಪವೇಳಿ
ಪೂಜೆ ಪುನಸ್ಕಾರ, ದೇವರ
ಹೆಸರಲ್ಲಿ ಮನೆ ಮನ ತೊರೆದು
ಬಾಳುವ ಪುಣ್ಯಕ್ಕೆ ನಿನಗೆ
ನನ್ನ ಮದುವೆಯಾಗ ಬೇಕಿತ್ತೆ !