Thursday, October 31, 2013

" ಫಜೀತಿ "

  ಒಂದೇ ಉಸಿರಿಗೆ " ಸಾ... ಸಾ..." ಎಂದು ಕೂಗಿ ಕೊಳ್ಳುತ್ತ ಬಂದವನ, " ಏನ್ಲಾ ಗೊಣ್ಣೆ ಸೀನ......., ಯೇನ್ಲಾ ಆಯ್ತು, ಹಿಂಗ್ಯಾಕ್ಲಾ ಓಡೋಡಿ ಬಂದೆ, ನಾಯಿ ಯೇನಾರ ಅಟ್ಟಿಸ್ಕೊಂಡ್ ಬಂತೇನ್ಲಾ... ".
" ಸಾ.. ನಿಮ್ಮ ತಾಯಿ ಕರಿತಾವ್ರೆ ಸಾ... " ಎಂದ. "
ಲೆ ಲೇ... ಗೊಣ್ಣೇ..., ನಮ್ಮ ತಾಯಿ ಸತ್ತು ವರ್ಷ ಆಯ್ತು, ನಿಜ ಹೇಳ್ಲಾ ಯಾರೂಂತ ಇಲ್ಲಾಂದ್ರೆ ಈ ಬೆತ್ತ ತೂರಿಸಿ ಬಿಡ್ತಿನಿ ಮಗನೆ" ಕೋಪಗೊಂಡಿದ್ದೆ.

" ಸಾ... ನಮ್ ತಾಯಾಣೆಗೂ ಅವರೇ ಬತ್ತಾವರೆ ನೀವೆ ಬೇಕಾದ್ರೆ ನೋಡ್ಕೊಳ್ಳಿ ಸಾ.... " ಎಂದೇಳಿ ಹೊರಡುವವನ ಲೆ ಲೇ....... ಯಾರೋ ಹೇಳಿದ್ದು ನಮ್ಮ ತಾಯಿ ಅಂತ, ನನ್ನ ಹೆಂಡ್ರು ಕಾಣ್ಲಾ......."
ನನ್ನವಳ ಆಕಾರ ( ಸೈಜ್ ) ನೋಡಿ ನನ್ನ ತಾಯಿ ಅಂತ ಅಂದು ಕೊಂಡಿರ ಬೇಕು.

"ನೋಡ್ಕೊಳ್ಲಾ........... ನಾ ಯಂಗೆ ಡ್ರಿಲ್ ಹೇಳಿ ಕೊಡ್ತಿದ್ದೀನೋ ..... ನೀನು ಅಂಗೆಯ ಇವರಿಗೆಲ್ಲಾ ಹೇಳ್ಕೊಡ್ತಿರು...., ನಾ ಹಿಂಗ್ ಹೋಗಿ ಅಂಗ್ ಬರ್ತೀನಿ"

" ಆಹಾ.... ನೀವೋ..... ನಿಮ್ಮ ಡ್ರಿಲ್ಲೋ.... ನೋಡೋಕೆ ಎರಡೂ........... ಕಣ್ ಸಾಲ್ದು ರ್ರಿ, ಮಕ್ಕಳಿಗೆ ಈಗೇನ, ನೀವ್ ಡ್ರಿಲ್ ಹೇಳ್ಕೊಡೋದು ಅಲ್ಲಾ ನಿಮ್ ಹೆಚ್ಚೆಮ್ಮು...... ನೋಡಿ, ಸುಮ್ಮನಿದ್ರು ಅಂದ್ರೆ, ಡ್ರಿಲ್ ಬಗ್ಗೆ ಅವರಿಗೂ ಗೊತ್ತಿಲ್ಲಾಂತ ಕಾಣುತ್ತೆ.
ಪಾಪ ಆ ಮಕ್ಕಳೋ.... ಗುರುವಿನಂತೆ ಶಿಷ್ಯರು" ನನ್ನವಳು ಬಿದ್ದು ಬಿದ್ದು ನಕ್ಕಿದ್ದಳು.

" ಹೆ ಹೇ... ನಾನು ಅಂದ್ರೆ ಏನೂ, ನನ್ ಡ್ರಿಲ್ ಅಂದ್ರೆ ಏನು ಶಿಸ್ತು ; ನಾ ಶಿಸ್ತಿನ ಮನುಷ್ಯ ಕಾಣೆ, ನಾ ಹೇಳ್ಕೊಟ್ಟಂಗೆ ಮಕ್ಕಳು ಡ್ರಿಲ್ ಮಾಡ್ತಿರ್ಲಿಲ್ವೇ"

" ಹೌದೌದು ಥೂ.... ತೆಗೀರಿ ನಿಮ್ ಕೈಯಿ
ಕೆರೆದೂ ಕೆರೆದೂ ಹುಣ್ಣಾದೀತು, ಆ ಮಕ್ಕಳ ಮುಂದೆ; ನಿಮ್ಮ ಹೆಚ್ಚೆಮ್ ಮುಂದೆ, ಅಸಹ್ಯ ಅನ್ನಿಸಲಿಲ್ವೆ
ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಿರಿ, ತೊಡೆ ಹತ್ತಿರ ಪರ ಪರಾಂತ ಕೆರಕೊಳ್ಳೋದೆ " ಏನಾದ್ರೂ ರೋಗ ಇದ್ದರೆ ಯಾವುದಾದ್ರು ಆಸ್ಪತ್ರೆಗೋಗಿ ತೋರಿಸಿ
ನಿಮ್ಮ ಸಹವಾಸ ದೋಷದಿಂದ ನನಗೂ ನಮ್ಮ ಮಕ್ಕಳಿಗೂ ರೋಗ ಬಂದೀತು ".

" ಲೆ ಲೇ ಇವಳೇ.... ತಾರ, ನನಗ್ಯಾವುದು ರೋಗ ಇಲ್ವೆ ನಿನ್ನಾಣೆಗೂ, ಹಾಳಾದ್ದು ಯಾವ್ದೋ ಇರುವೆ ಬೆಳಿಗ್ಗೆಯಿಂದ ಪ್ಯಾಂಟೊಳಗೆ ಸೇರಿ ಕೊಂಡು ಕಚ್ಚಿ ನನ್ನ ಪ್ರಾಣ ತಿಂತಿದೆ ಕಾಣೆ ". " ನೀ ಇಲ್ಲೇ ನಂಗೆ ಕ್ಲಾಸ್ ತಗೋಬೇಡ ಮಾರಾಯ್ತೀ, ಬೇಗ ಮನೆಗೆ ನಡೆಯೇ, ಸ್ಕೂಲ್ ಹುಡುಗ್ರು ಕೇಳಿಸ್ಕೊಂಡ್ರೆ ಇಡೀ ಊರಿಗೆ ರೇಡಿಯೋ ಹಾಕ್ತಾರೇ......

Tuesday, October 29, 2013

ಇಂದು ನಾ ಎಡ ಮಗ್ಗಲಲ್ಲಿ ಎದ್ದಿದ್ದೆನೆ ?!

ರ್ರೀ..........ಸಾಕು, ಬನ್ರಿ ಒಳಗೆ
ನಿಮಗೆ ಹೇಳ್ತಿರೋದು ಕೇಳ್ಸಿಲಿಲ್ವೇ
ಏನವಳು ಸೀಮೆಗಿಲ್ಲದ ಸುಂದರಿ,
ಹಾಯ್ ಹೇಳ್ದಲೂಂತ ಬಾಯ್ಬಿಡ್ಬೇಡಿ;
ಈ ಗಂಡಸರ ಬುದ್ಧಿನೇ ಹೀಗೆ ಏನೋ
ಜಡೆ ಕಂಡರೆ ಸಾಕು, ಮೈಮರಿತೀರಿ !

ಲೇ..ಲೇ........ಇಷ್ಟೊಂದು ಕೋಪ ಏಕೆ ?
ಏನೋ ಎದಿರು ಮನೆಯವರಂತ ನನ್ನ ನೋಡಿ,
ಅವಳು ಪರಿಚಯದ ನಗೆ ನಕ್ಕಳಷ್ಟೆ
ಇಷ್ಟಕ್ಕೆಲ್ಲಾ ನೀ ನನ್ನ ಅನುಮಾನಿಸೋದೆ;
ಇಲ್ಲಾ ಈಗ ನಿಮ್ಮನ್ನ ಮುದ್ದು ಮಾಡ್ತೀನಿ ಬನ್ನಿ
ಹಾಕ್ರಿ ಬಾಗಿಲು ಎಷ್ಟು ದಿನದಿಂದ ನಡಿತಿದೆ
ನಿಮ್ಮ ಕದ್ದು ಮುಚ್ಚಿ ಮಾಡುವ ವ್ಯವಹಾರ ಹಾಂ !!

ಲೆ ಲೇ...ಇದೇನೆ ಇದು, ನಿನ್ನ ಕೈಲಿ ಪೊ ಪೊರಕೆ
ಪೊರಕೆ ಯಾಕ್ ಹಿಡ್ಕೊಂಡ್ ಬಂದಿಯೇ ನನ್ನ ಹತ್ತಿರ, ಹುಂ ಹೂಂ.. ಬನ್ನಿ ಪೂಜೆಯಿದೆ, ಬೇಗ ಕಸ ಗುಡಿಸಿ; ಎಂದೆನ್ನಬೇಕೆ ನಗು ನಗುತ ನನ್ನ ಮುದ್ದಿನಮಡದಿ!

ಖುಷಿಯೋ ಖುಷಿ ನನ್ನೊಳಗೆ

ಇದೇನ್ರಿ..ಇಷ್ಟೊಂದು
ಖುಷಿಯಲ್ಲಿದ್ದೀರಿ
ನಿಮ್ಮ ಮುಖದಲ್ಲಿ
ನಾನೆಂದೂ ಇಂಥಹ
ಸಂತೋಷವ ಕಂಡಿರಲಿಲ್ಲ
ಪ್ರಮೋಷನ್ ಏನಾದ್ರೂ ಬಂತೆ
ಅಥವಾ ಲಾಟರಿಯಲ್ಲಿ ಬಹುಮಾನ
ಇಲ್ಲವೆ, ಮತ್ತಿನ್ನೇನು ಕತೆ;
ಹೇಳದೆ ಸುಮ್ಮನೆ ನಕ್ಕರೆ ಹೇಗೆ
ಹೋಗಲಿ ಏನೆಂದು ಹೇಳಬಾರದೆ

ಸ್ವಲ್ಪ ತಡಿಯೇ.... ಮಾರಾಯ್ತಿ,
ನಿನಗೆಲ್ಲಾ ನಾ ಹೇಳುವೆ
ಅಷ್ಟೊಂದು ಅವಸರವೆ
ಹೋಗಿ ಸಕ್ಕರೆಯ ಡಬ್ಬ ತರಲೆ
ಬಾಯಿ ಸಿಹಿ ಮಾಡಿಕೊಳ್ಳುವ
ಅದೇನೂ ಬೇಡ ನಾನೇ ತಂದಿರುವೆ
ಬಾಯ್ತೆರೆ ಈ ಮೈಸೂರ್ ಪಾಕ್ ತಿನ್ನು
ಸಿಹಿ ಸುದ್ದಿಯ ಹೇಳದೆ ಸಿಹಿಯೆ
ನಾ ಗಂಡು ಮಗುವಿಗೆ ಅಪ್ಪನಾದೆ

ನಿಮಗೆಲ್ಲೋ ಹುಚ್ಚಿರ ಬೇಕು
ಮಕ್ಕಳಾಗುವುದಿಲ್ಲೆಂದು ಗೊತ್ತಿದ್ದೂ
ನಿಮಗೆ ನನ್ನ ಕಂಡರೆ ಅಪಹಾಸ್ಯವೆ
ಹೌದಲ್ಲವೆ, ಅಯ್ಯೋ.... ದೇವರೇ....
ಖುಷಿಗೆ ಸತ್ಯ ಹೊರ ಬೀಳುವುದಿತ್ತು
ನನಗೆ ಎರಡನೆಯ ಸಂಸಾರ ಇರುವುದು
ಇವಳಿಗೆ ಹೇಗೆ ತಾನೆ ತಿಳಿದೀತು ಪಾಪ !!
ನಾ ಹೇಳಿದರೆ ತಾನೆ ತಕ್ಷಣವೇ ನಗಾಡಿದ್ದೆ
ಅಯ್ಯೋ..... ಪೆದ್ದೀ... .....
ನಿನ್ನ ತಂಗಿಗೆ ಮಗುವಾದರೆ ನಮಗೆ
ಮಕ್ಕಳಾದಂತೆ ಅಲ್ಲವೇನೆ ನೋಡು
ನೀನು ದೊಡ್ಡಮ್ಮ, ನಾ ದೊಡ್ಡಪ್ಪ !

ಊರ್ಮಿಳ


ಇದೇನೆ ಉಮ್ಮಿ....
ಹೀಗೆ ಮುಖ ಊದಿಸಿಕೊಂಡು
ಒಬ್ಬಳೇ ಅಳುತ ಕುಳಿತಿರುವೆ
ಅಮ್ಮ ಏನಾದರು ಅಂದರೆ
ಏನೂ ಅನ್ನಲಿಲ್ಲವೆ
ಮತ್ತೇಕೆ ಈ ಬಿಗುಮಾನ
ಓಹ್ ಶಿಟ್, ಹಾಳಾದ್ದು
ಎಂಥ ಕೆಲಸವಾಯ್ತು ನೋಡು
ಕೆಲಸದ ಗಡಿಬಿಡಿಯಲ್ಲಿ
ನನಗೆ ಮರೆತೇ ಹೋಗಿತ್ತು
ಸಂಜೆ ಶಾಪಿಂಗ್ ಮಾಲ್ ಗೆ
ಕರೆದೊಯ್ಯುವೆ ಎಂದಿದ್ದೆ
ಎಕ್ಸಟ್ರೀಮ್ಲಿ ಸಾರಿ ಕಾಣೆ
ಆದದ್ದಾಯ್ತು ಹೋಗಲಿ ಬಿಡು
ನಾಳೆ ಆಫೀಸಿಗೆ ರಜೆ ಹಾಕಿ
ದಿನವಿಡೀ ನಿನ್ನ ಜೊತೆಗಿರುವೆ
ನೀ ಶಾಪಿಂಗ್ ಮಾಡುವೆಯಂತೆ
ಈಗಲಾದರು ಮೇಲೇಳುವೆಯೋ
ನನಗೆ ತುಂಬಾ ಹಸಿವಾಗುತ್ತಿದೆ

ಅದಕ್ಕೆ ಇರಬೇಕು ಅಮ್ಮಾವರಿಗೆ
ನನ್ನ ಮೇಲೆ ಎಲ್ಲಿಲ್ಲದ ಕೋಪ
ಮೇಕಪ್ ಮಾಡಿ ಕೊಳ್ಳಲು
ಗಂಟೆಗಟ್ಟಲೆ ಕನ್ನಡಿ ಎದಿರು ನಿಂತರೆ
ನನ್ನನ್ನೇ ಮರೆತು ಫೋನಾಯಿಸದೆ
ಈ ಸೀರೆ ಹುಡಲೆ ಆ ಸೀರೆಯೋ ಎಂದು
ಹುಡುಕಾಟದಲ್ಲೇ ಕಾಲ ಕಳೆದಿರಬೇಕು
ಇದ್ದದ್ದು ಒಳ್ಳೆಯದ್ದೇ ಆಯಿತು ಬಿಡು
ಈ ರಾತ್ರಿಗೆ ಈ ಅಲಂಕಾರ ಎಲ್ಲವ
ಮಧು ಮಂಚದಿ ನಾ ಸೂರೆಗೊಳ್ಳುವೆ ॥

Monday, October 28, 2013

ಅಮ್ಮ

ಬಸಿರಾಗದೆ
ನೊಂದ ಬಂಜೆಗೆ,
ಬಾಯ್ತುಂಬ ಕರೆದ
ಭಿಕ್ಷುಕನೊಬ್ಬ;
ಅಮ್ಮಾ ತಾಯೇ ಎಂದು
ಹಸಿವೆಯ ತಾಳಲಾರದೆ
ತಾ ನೊಂದು !

ತಿರುಗು ಬಾಣ

ಈ ನನ್ನೆಲ್ಲಾ ಕಷ್ಟಗಳಿಗೆ
ನೀವೇ ಕಾರಣಕರ್ತರು,
ಮಾಡುವುದೆಲ್ಲಾ ಮಾಡಿ
ಈಗ ನಗುವುದ ನೋಡಿ
ಈ ನನ್ನ ಚೊಚ್ಚಲ ಹೆರಿಗೆಗೆ;
ನಾ ತವರಿಗೆ ಹೊರಟರೆ
ಮತ್ತೇ ಬರುವುದು ವರ್ಷಕ್ಕೆ
ಅಲ್ಲಿಯವರೆಗೂ ಅಡುಗೆಯ
ನೀವೇ ಮಾಡಿ ಕೊಳ್ಳಿ
ಕೈ ಬಾಯಿ ಸುಟ್ಟುಕೊಂಡು
ನನ್ನ ನೆನಪಿಸಿ ಕೊಳ್ಳಿ
ನನ್ನವಳು ಮುಸಿ ಮುಸಿ ನಕ್ಕಿದ್ದಳು ॥

ನಿನ್ನದೇನೂ ತಪ್ಪಿಲ್ಲ ಬಿಡು ಮಾರಾಯ್ತಿ,
ಆದದ್ದೇಲ್ಲಾ ಆಗಿದ್ದು ನನ್ನಿಂದಲೇ ಅಲ್ಲವೆ
ವರ್ಷವೇನು ನೀ ಹೆರುವ ಮಗನಿಗೋ
ಮಗಳಿಗೋ ನಾಮಕರಣವ ಮುಗಿಸಿ
ನಡೆ - ನುಡಿ, ಪಾಠ ಎಲ್ಲವ ಕಲಿಸಿ 
ಅಲ್ಲಿಯೇ ಶಾಲೆಗೆ ಸೇರಿಸಿ, ಇದ್ದು ಬಿಡು
ನನಗೇನೂ ಅವಸರವಿಲ್ಲ, ಅಭ್ಯಂತರವೂ ಇಲ್ಲ
ನೀ ಮತ್ತೇ ಹಿಂತಿರುಗಿ ಬರುವಷ್ಟರಲ್ಲಿ
ನಿನ್ನ ಜಾಗಕ್ಕೆ ಮತ್ತೊಬ್ಬ ಸುಂದರಿಯ
ನಿನ್ನ ಸವತಿಯಾಗಿ ಜೊತೆಗೆ ತಂದಿಟ್ಟು ಕೊಳ್ಳುವೆ ಬೇಕಿದ್ದರೆ ಅವಳ ಜೊತೆ ನೀ ಇರಬಹುದು
ಇಲ್ಲವಾದರೆ ಒಂದಷ್ಟು ಜೀವನಾಂಶವ ಕೊಡುವೆ
ನಗು ನಗುತ ತಿರುಗು ಬಾಣವ ನಾ ಬಿಟ್ಟಿದ್ದೆ ॥

ನೋಡ ಬೇಕಿತ್ತು ನನ್ನವಳ ಪರದಾಟ
ಕೃಷ್ಣೆ - ಕಾವೇರಿ, ತುಂಗ -ಭದ್ರೆಯರು
ಒಮ್ಮೆಲೇ ನನ್ನವಳ ಕಣ್ಣುಗಳಲ್ಲಿ ಪ್ರತ್ಯಕ್ಷ
ನೀವೇಳಿದಂತೆ ಮಾಡುವ ಆಸಾಮಿಯೇ
ಅಯ್ಯೋ ಅಮ್ಮಾ... ತವರಿಗೆ ನಾ ಬರಲಾರೆ
ಬಸಿರು - ಬಾಣಂತಾನವ ಇಲ್ಲಿಯೇ ಆಗಲಿ
ನನಗೆ ಹೆಚ್ಚು ಕಡಿಮೆಯಾದರೆ ಅಲ್ಲೇನು
ಸುಸಜ್ಜಿತ ದೊಡ್ಡ ಆಸ್ಪತ್ರೆ ಇದೆಯೇ
ನೀ ನಿಶ್ಚಿಂತೆಯಿಂದಿರು ನಿನ್ನ ಅಳಿಯಂದಿರೇ
ಖರ್ಚು ವೆಚ್ಚಗಳೆಲ್ಲವ ನೋಡಿಕೊಳ್ಳುವರು ॥  

ಏಪ್ರಿಲ್ ಪೂಲ್

ರ್ರೀ... ಅದು
ಮತ್ತೇ.. ಮತ್ತೆ,
ನೀವು ಏನೂ
ತಿಳಿಯುವುದಿಲ್ಲ ತಾನೆ
ಬೇಜಾರುಗೊಳ್ಳುವಿರೇನೋ
ನಿಮಗೆ ಹೇಗೆ ಹೇಳಬೇಕೆಂದು
ನನಗೆ ತಿಳಿಯುತ್ತಿಲ್ಲ !!

ಕ್ಷಮಾ...,
ಬೆಳ್ಳಂ ಬೆಳಗ್ಗೆ
ಇದೇನೆ ನಿಂದು ಗೋಳು
ನೀ ಏನೂ ಹೇಳದೆ,
ಸುಮ್ಮನಿದ್ದರೆ ಹೇಗೆ
ಹೇಳುವುದಾದರೆ
ಬೇಗ ಹೇಳಿ ಹೋಗು
ಮನೇ ಖರ್ಚಿಗೇನಾದರು
ದುಡ್ಡು ಬೇಕಿತ್ತೆ;
ಬೇಡವೆ, ಮತ್ತಿನ್ನೇನು
ಹೀಗೆ ಮಾತು ಕತೆಯಿಲ್ಲದೆ
ಸೀರೆ ಸೆರಗಿಡಿದು ನುಲಿದರೆ
ನನಗೆ ಗೊತ್ತಾಗುವುದು ಹೇಗೆ !!!

ಏನೂ ಇಲ್ಲಾರ್ರೀ....,
ನಾ ಬೇಡವೆಂದರೂ
ನನ್ನ ಮಾತು ಕೇಳಲಿಲ್ಲ
ಈಗ ಇದೆಲ್ಲಾ ಬೇಕಿತ್ತೆ
ಮತ್ತೇ ನಾ ಬಸಿರಾಗಿರುವೆ;
ಈಗಲೇ ನಾಲ್ಕೂ ಹೆಣ್ಮಕ್ಕಳು
ಸಾಲದಕ್ಕೆ ಇದೂ ಹೆಣ್ಣಾದರೆ ?!

ಹೌದೇನೇ... ಕ್ಷಮಾ......,
ನಿಂತಿದ್ದವ ದೊಪ್ಪನೆ
ಕೆಳಗೆ ಬಿದ್ದುದ ಕಂಡು
ನನ್ನವಳು ತರಗುಟ್ಟಿದ್ದಳು;
ಅಳುತ ಅಯ್ಯೋ....ದೇವರೇ
ನಾ ತಮಾಷೆಗೆಂದು
ಇವರಿಗೆ ಏಪ್ರಿಲ್ ಪೂಲ್ ಮಾಡಿದರೆ
ಹೀಗೆ ಮೂರ್ಚೆ ಬೀಳುವುದೆ  !!

ನಿಮಗೇನಾಯಿತು ರ್ರೀ... ?
ಪಮ್ಮಿ ಪಾರು, ಪವಿ ಪಲ್ಲವಿ ಬನ್ರೇ
ನಿಮ್ಮ ಪಪ್ಪನಿಗೇನಾಯಿತು ನೋಡಿ
ಎದೆಗೆ ಕಿವಿಯಿಟ್ಟವಳ ಕೈಹಿಡಿದು
ಹೇಗಿತ್ತು ನನ್ನ ವರಸೆ ಕ್ಷಮಾ...
ನೀನೇ ಪೂಲಾದೆಯಲ್ಲೇ......!!!!!!!

ಸಾಕು ಸುಮ್ಮನಿರಿ
ನಿಮ್ಮ ಈ ಹುಡುಗಾಟಕ್ಕೆ
ನನ್ನೆದೆ ಒಂದು ಕ್ಷಣ
ನಿಂತೇ ಹೋಗಿತ್ತು
ನೀವಿಲ್ಲದೆ ನಾ ಬದುಕುವೆನೆ
ಇದೇ ಮೊದಲು
ಇಂದೇ ಕೊನೆಗೊಳ್ಳಲಿ
ಈ ನಿಮ್ಮ" ಏಪ್ರಿಲ್ ಪಸ್ಟ್ ಆಟ " !!!

Thursday, October 10, 2013

ಪ್ರಾಮಾಣಿಕ

ಅರ್ರೇ.. ಇದೇನ್ರೀ... ಇಷ್ಟೆಲ್ಲಾ
ಹಾರ ತುರಾಯಿ, ಹಣ್ಣು-ಹಂಪಲು
ರಿಟೈರ್ಡ್ ಆಗೋ ವಯಸ್ಸು ನಿಮ್ಮದಲ್ಲ;
ರೈಟರ್ ಅಂತೂ ನೀವು ಅಲ್ಲವೇ ಅಲ್ಲ
ನನಗೇನೋ ಅನುಮಾನ ಬೇಗ ಹೇಳ್ರೀ !

ಲಂಚ ಗಿಂಚ ಪಡೆದು, ಭ್ರಷ್ಟರ ಕೆಲಸ ಮಾಡಿ
ಖುಷಿಗೆ ನಿಮ್ಮನ್ನ ಸನ್ಮಾನಿಸಿದರೋ ಹೇಗೆ
ನೀವು ಅಂತಹವರಲ್ಲ ನನಗೂ ಗೊತ್ತು ಬಿಡಿ,
ಆದರೂ ಏನೋ ತಡೆಯಲಾರದ ಕುತೂಹಲ !

ಅಯ್ಯೋ ಮಾರಾಯ್ತಿ ಸ್ವಲ್ಪ ತಾಳೇ,
ನಿಂದೊಳ್ಳೆ ಪಂಚಾಯ್ತಿ ಪತ್ತೇದಾರಿಕೆ
ನೀ ಸುಮ್ಮನಿರು ಕೊಂಚ ಸುಧಾರಿಸಿ ಕೊಳ್ಳುವೆ
ನೀ ಹೀಗೆ ಒಂದೇ ಸಮ, ನನ್ನ ಕೇಳಿದರೆ ಹೇಗೆ ?

ಕುಡಿಯಲು ತಣ್ಣನೆಯ ನೀರು ತಂದು ಕೊಡು
ಹಾಗೆಯೇ ಒಂಚೂರು ಕಾಫಿಯ  ಮಾಡು
ನಾ ಸರ್ಕಾರಿ ಸೇವೆಗೆ ಸಲಾಮ್ ಹೊಡೆದು
ಸ್ವಯಂ ನಿವೃತ್ತಿಯ ಪಡೆದು ಬಂದಿರುವೆ

ಇನ್ಮೇಲೆ ಊರೂರು ಅಲೆಯುವಂತಿಲ್ಲ
ವರ್ಷಾವರ್ಷ ವರ್ಗಾವಣೆಯ ಜಂಜಾಟವಿಲ್ಲ
ಹಾಯಾಗಿ ನೆಮ್ಮದಿಯಿಂದ ಜೀವನ ಮಾಡುವ !