Friday, September 19, 2014

' ಕಾರುಬಾರು '

ನೀ ಸುಮ್ಮನೆ ಕೂರುವ ಜಾಯಮಾನದವಳೇ... ಅಲ್ಲ, ಏನಾದರೊಂದು ವಟ ವಟಗುಟ್ಟುತ್ತಲೇ... ಇರಬೇಕು
ಮನೆಗೆ ಹೋದ ಮೇಲೆ ನನ್ನ ಜೊತೆ ಬೇಕಾದಷ್ಟು ಗುದ್ದಾಡುವೆಯಂತೆ, ಇಲ್ಲವಾದರೆ ಮುದ್ದಾಡುವೆಯಂತೆ ಅಲ್ಲಿಯವರೆಗು ನಿನ್ನ ಬಾಯಿಗೆ ಸ್ವಲ್ಪ ಬೆಲ್ಟ್ ಹಾಕಿಕೊ...
ಹ್ಞಾಂ... ಏನಂದ್ರಿ ನೀವು... ? ನನ್ನ ಬಾಯಿಗೆ ?!!
ಹೆ ಹೆ ಹೇ... ನಾ ಆಗಲ್ವೆ ಹೇಳಿದ್ದು ಸುಕನ್ಯಾ...
ಸೇಫ್ಟಿ ಸೀಟ್ ಬೆಲ್ಟ್ ಹಾಕಿಕೊ ಎಂದನಷ್ಟೆ;
ನೀ ಇಷ್ಟಕ್ಕೆ ಹೀಗೆ ನನ್ನ ಮೇಲೆ ಕೋಪಿಸಿ ಕೊಂಡರೆ
ಈ ಟ್ರಾಫಿಕ್ನಲ್ಲಿ ಸುರಕ್ಷಿತವಾಗಿ ನಾ ಕಾರ್ ಓಡಿಸಿದಂತೆ !!
ರ್ರೀ .... ನಿಮ್ಮ ಮಾತು ಎಲ್ಲೆಲ್ಲೋ ವಿಷಯಾಂತರಿಸದಿರಿ ಮೊದಲು ಕಾರು ನಿಲ್ಲಿಸಿ ನಿಮಗಿದೆ ಇಂದು !!
ಎಳೆನೀರು ಏನಾದರು ಕುಡಿಯಬೇಕಿತ್ತೆ
ಪಾಪ ಮಾತಾಡಿ ಮಾತಾಡಿ ಸುಸ್ತಾಗಿರಬೇಕು
ಹೋಗಲಿ ಕೂಲ್ ಡ್ರಿಂಕ್ಸ್, ಅಥವಾ ಐಸ್ ಕ್ರೀಮ್
ರ್ರೀ ...!! ನನಗೆ ಬರುವ ಕೋಪಕ್ಕೆ ನಿಮ್ಮನ್ನ !!
ನಿಂದೊಳ್ಳೆ ತಮಾಷೆಯಾಯ್ತಲ್ಲೆ ನೀ ಹೇಳಿದ ಕಡೆ,
ಈ ಟ್ರಾಫಿಕ್ನಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಲು ಇದೇನು ಸ್ಕೂಟರೇ...!! ಅಕ್ಕಪಕ್ಕ ಯಾವುದಾದರೊಂದು ಗಾಡಿ ಗುದ್ದಿದರೆ
ನನ್ನಾ ನಿನ್ನ ಸ್ಥಿತಿ, ಈ ಕಾರಿನ ಗತಿ ಹರೋ... ಹರವಷ್ಟೆ !!

Sunday, September 14, 2014

' ನಾ ಕಳಕೊಂಡೆ '

ಇದೇನೇ.... ಭಾಮ, ಏನೋ ಹುಡುಕುವಂತಿದೆ
ನೀ ಏನಾದರು ಕಳೆದು ಕೊಂಡೆಯೋ... ಹೇಗೆ ?
ಹ್ಞೂಂ ರ್ರೀ ... ಹಾಳಾದ್ದು ಮಧ್ಯಾಹ್ನದಿಂದ ಕಾಣ್ತಿಲ್ಲ
ಹುಡುಕಿ, ಹುಡುಕಿ ನನಗೂ ಸಾಕಾಗಿ ಹೋಯ್ತು;
ಸರಿ ನೀವಾದರು ಸ್ವಲ್ಪ ಹುಡುಕಿ ಕೊಡಬಾರದೇ... ಚಿನ್ನವೇನಾದರು ಕಳೆದು ಕೊಂಡೆಯೋ ಹೇಗೆ ?!
ಏನು ಹೆಂಗಸರೋ.... ಏನು ... ಕಥೆಯೋ ...
ಎಲ್ಲೋ ಇಟ್ಟು, ಮತ್ತೆಲ್ಲೋ... ಹುಡುಕಾಡುವುದು
ನೀ ಕಳೆದದ್ದು ಕಿವಿಯೋಲೆಯೋ...
ಅಥವಾ ನಾ ಕಟ್ಟಿದ ತಾಳಿಯೋ... ಚಿನ್ನದ ಸರವೋ... ಅಯ್ಯೋ...!! ಅದ್ಯಾವುದು ಅಲ್ಲವೇ... ಅಲ್ಲಾರೀ
ಅದಿಲ್ಲದಿದ್ದರೆ ಏಕೋ ಏನೋ ನನ್ನ ಕೈ ಕಾಲೇ ಆಡದು
ಕೈಗೆ ಸಿಗಬೇಕು ನಿಮಗೆ ಇಂದು ಹಬ್ಬ ಹಬ್ಬವಿತ್ತು
ಹೆ ಹೆ ಹೇ... ನೀ ಏನೆ ಒಗಟು ಒಗಟಾಗಿ ಹೇಳುವೆ ?
ಏನೋ... ಡ್ರಾಪ್ ಕೇಳಿದಳೆಂದು ಕರೆತಂದೆನಷ್ಟೆ
ಇಷ್ಟಕ್ಕೆ ನೋಡಿ, ನೀ ಹೀಗೆ ನನ್ನ ಅನುಮಾನಿಸುವುದೆ
ರ್ರೀ... ಅಂತು ಇಂತು ಸಿಕ್ಕಿತು ನೋಡಿ ' ಲಟ್ಟಣಿಗೆ '
ಬೇಗ ಅಡಿಗೆ ಮನೆಯೊಳಗೆ ಬನ್ನಿ ಶುರು ಹಚ್ಚಿಕೊಳ್ಳುವೆ
ಬಂದೆ ಸ್ವಲ್ಪ ತಾಳೇ.... ಹೊಟ್ಟೆ ಏಕೋ... ಸರಿಯಿಲ್ಲ !!

Thursday, September 11, 2014

' ಕೊಕ್ ಕೊಕ್ ಕೊಕ್ಕೋ'.....!!

ಲೇ..... ಕುಮುದಾ, ಜಾಹ್ನವಿ, ವೈಷ್ಣವೀ... ಎದ್ದೇಳ್ರೇ ...
ಹಾಳು ಕೋಳಿ ಮನೆಯೊಳಗೆಲ್ಲೋ ಸೇರ್ಕೊಂಡು
ಕೊಕ್ ಕೊಕ್ ಕೊಕ್ಕೋ... ಅಂತ ಕೂಗೋದು ಕೇಳಸ್ಲವೇ... ಅದೇನ್ ನಿದ್ದೆ ಮಾಡ್ತೀರೋ... ಕುಂಭಕರ್ಣನ ಹಾಗೆ;
ಎಲ್ಲಾ ನನ್ನ ಪ್ರಾರಬ್ಧ ಕರ್ಮ, ನನಗಿನ್ನೇನು ಕಾದಿದೆಯೋ... ! ಇದನ್ನ ಕೇಳಿಸಿಕೊಂಡು ಅಕ್ಕಪಕ್ಕದವರು ನಗಲ್ವೇನ್ರೇ...!! ಸಾವಿತ್ರಮ್ಮನ ಮನೆಯಲ್ಲಿ ಕದ್ದು ಮುಚ್ಚಿ ಕೋಳಿ ತಿನ್ನುವರೆಂದು ಊರೆಲ್ಲ ಹೇಳ್ಕೊಂಡು ತಿರಗ್ತಾರೆ ಅಷ್ಟೆ
ಇನ್ಮುಂದೆ ಹೊರಗೆಲ್ಲೂ ನಾ ತಲೆಯೆತ್ತಿ ತಿರುಗಾಡುವಂತಿಲ್ಲ
ಎದ್ದು ಅದೆಲ್ಲಿದಿಯೋ... ಹುಡುಕಿ ಒದ್ದು ಓಡಿಸ್ಬಾರದೇನ್ರೇ... ಅಯ್ಯೋ ...!! ಅಜ್ಜೀ... ಸುಮ್ಮನೆ ಮಲಗ ಬಾರದೆ
ಇಷ್ಟೊತ್ತಲ್ಲಿ ನಿಂದೇನು ಇಲ್ಲದ ಕಿರಿಕಿರಿ
ಕೋಳಿಯು ಇಲ್ಲ, ಕೂಗೊ ಹುಂಜವೂ ಇಲ್ಲ
ಕಾಡು ಬಾ ಎನ್ನುತಿದೆ, ಊರು ಹೋಗೆನ್ನುತಿದೆ
ನಿನಗೆಲ್ಲೋ... ಅರಳು ಮರುಳಿನ ಭ್ರಾಂತಿಯಷ್ಟೆ ;
ಅದೆಲ್ಲೋ.... ಕೂಗಿದರೆ ನಿನಗೇನು ಕಷ್ಟವೆ, ನಷ್ಟವೆ ?
ಥೂ.... ಬಾಯಿ ಬಡ್ಕಿ, ನಂಗೇ ಎದಿರು ವಾದಿಸ್ತೀಯೇನೆ ? ಅಜ್ಜಿಯಂದರೆ ಒಂಚೂರು ಭಯ ಭಕ್ತಿ ಒಂದೂ ಇಲ್ಲ
ನಿನ್ನ ಅಕ್ಕಂದಿರ ನೋಡು ಏನು ನಯ, ಏನು ವಿನಯ
ನೀನು ಇದ್ದೀಯ ಕಾಲ್ಕೆರ್ದಕೊಂಡು ನನ್ನ ಜೊತೆ ಜಗಳಕ್ಕೆ ನಿಮ್ಮಮ್ಮ ನಿಮ್ಮನ್ನೆಲ್ಲ ನನ್ ಕೈಯಲ್ಲಿಟ್ಟು ಸತ್ತು ಹೋದ್ಲು
ಇಷ್ಟು ಚಿಕ್ಕ ಗೊಂಬೆಗಳ ದೊಡ್ಡ ಗೊಂಬೆಗಳ ಮಾಡಿ
ಸಾಕಿ, ಬೆಳಸಿ ಜೋಪಾನ ಮಾಡಿದ್ದು ನನ್ನ ತಪ್ಪು ಕಾಣ್ರೇ.. ಅವಳಿಗೆ ಬಂದ ಸಾವು ನನಗಾದ್ರು ಬರಬಾರದಿತ್ತೆ ಶಿವನೇ ಅಯ್ಯೋ ...!! ಅಜ್ಜೀ ಇಷ್ಟಕ್ಕೆಲ್ಲ ನೀ ಅಳೋದೆ
ವೆರಿ ವೆರಿ ಸಾರಿ, ನೀನೆ ನಮ್ಮ ಅಮ್ಮ, ಅಪ್ಪ
ಬಂಧು ಬಳಗ ಎಲ್ಲಾ...
ಮೇಲಾಗಿ ನೀ ನಮ್ಮ ಪಾಲಿನ ಆ ದೇವರು
ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಸಾರಿ ಅಜ್ಜಿ
ಹೆ ಹೇ.... ಕೋಳಿನು ಇಲ್ಲ, ಕುರಿನು ಇಲ್ಲ
ಅದು ಕೂಗಿದ್ದು ಈ ಮೊಬೈಲ್ ಫೋನು...

Wednesday, September 10, 2014

' ಎಕ್ಕ, ರಾಜ, ರಾಣಿ '

ರ್ರೀ... ಈಗ ನೀವೆಲ್ಲಿದ್ದೀರಿ, ಹೀಗೆ ಹೋಗಿ ಬರುವೆ ಎಂದು ನನ್ನಿಂದ ಹಣ ಪಡೆದು ಹೋದವರು
ಇಷ್ಟು ಹೊತ್ತಾದ್ರು ಮನೆಗೆ ಬರದೆ ಅಲ್ಲೇನ್ ಮಾಡ್ತಿದ್ದೀರ
ಮತ್ತೇ... ಕುಡಿಯೋ ಚಾಳಿ ಮುಂದುವರಿಸಿದಿರೋ... ಹೇಗೆ ? ಛೇ..!! ಎಷ್ಟಾದ್ರು ನಿಮ್ ಬುದ್ಧಿ ಡೊಂಕು ಡೊಂಕೇನೆ ಬಿಡಿ
ಲೆ ಲೇ.... ನಿಮ್ಮೀ... ನಿನ್ನಾಣೆಗೂ ಕುಡಿಯೋಲ್ಲಾಂತ
ಆಣೆ, ಪ್ರಮಾಣ ಮಾಡಿ ಕುಡಿತೀನಿ ಏನೇ ನಾನು ...?
ನೋಡು ನೀ ಹೀಗೆಲ್ಲ ನನ್ನ ಮಧ್ಯೆ ಮಧ್ಯೆ ಡಿಸ್ಟರ್ಬ್ ಮಾಡ್ಬೇಡ ಇಂಪಾರ್ಟೆಂಟ್ ಡಿಸ್ಕಷ್ನ್ ಲ್ಲಿದ್ದೀನಿ
ಮೊದಲು ಫೋನ್ ಇಡು
ಛೇ...!! ಮತ್ತೆ ಏನೆ ನಿನ್ನ ದರಿದ್ರದ ಕಾಟ
ನೆಮ್ಮದಿಯಾಗಿ ಆಟ ಆಡೋಕು ಬಿಡಲ್ಲ
ಮನೆಗೆ ಬರುವಾಗ ಒಂದಷ್ಟು ಹೂವು ಸ್ವೀಟು ತನ್ನಿ
ಇಂದು ಪೂರ್ಣಿಮೆ...!!
ಈಗ್ಲಾದ್ರೂ ಹೇಳ ಬಾರದೇ... ನೀವೂ...
ಎಕ್ಕ, ರಾಜ, ರಾಣಿ ನನ್ನಾ ... ಕೈಯೊಳಗೆ
ಇಡಿ ಮಣ್ಣೂ.... ನಿನ್ನಾ ಬಾಯೊಳಗೇ...
ಬೆಬ್ಬ ಬೆಬ್ಬ ಬೆಬ್ಬೇ..... ಹೆಹೆಹೇ.... ಇದು ಹಾಡೇ... ನಿಮ್ಮೀ..
ನೀ ಏನೇನೋ ನನ್ನ ತಪ್ ತಿಳಿಬೇಡ್ವೇ ನನ್ನ ನಂಬೇ...
ಓಹ್ ಓಹೋ... ಹೀಗೋ... ಯಜಮಾನ್ರ ವಿಷಯ
ಕುಡಿಯೋದ್ ಬಿಟ್ ಹೋಸ ಆಟ ಶುರು ಮಾಡ್ಕೊಂಡ್ರೋ...
ಬನ್ನಿ ಮನೆಗೆ ನಿಮಗಿದೆ ರಾತ್ರಿಗೆ ಹಬ್ಬ !!

Tuesday, September 9, 2014

' ದುಡ್ಡೆ ದೊಡ್ಡಪ್ಪ '

ಛೀ.... ಥೂ...!! ಕಸ ಎಸೆದು ಬರುವುದ ಬಿಟ್ಟು
ಇದೇನ್ರಿ ಅಸಹ್ಯ, ದರಿದ್ರ ನಿಮಗೆ ಒಂದೂ ಗೊತ್ತಾಗದು ಯಾರೋ... ಎಸೆದ ಕಸದ ಚೀಲ ಹಿಡಿದು ಬರುವುದೆ ?!
ನಾಚಿಕೆ, ಏಸಿಗೆ ಒಂಚೂರೂ ನಿಮಗಿಲ್ಲ ಬಿಡಿ;
ಏನು ಗಂಡಸರೋ... ಏನೋ....!!
ಮೊದಲು ಹೋಗಿ ಎಸೆದು ಬಂದು ಸ್ನಾನ ಮಾಡಿ...
ಲೇ... ಅವಿವೇಕಿ ಮೆಲ್ಲಗೆ ಮಾತಾಡೆ ಅರಚಬೇಡ
ನಿನ್ನ ಕೂಗಾಟಕ್ಕೆ ಅಕ್ಕಪಕ್ಕದವರೆಲ್ಲ ಎದ್ದು ಬಂದಾರು
ಬೇಗ ಒಳ ಬಂದು ಬಾಗಿಲು, ಕಿಟಕಿಗಳ ಮುಚ್ಚು
ಸದ್ಯ ಮಕ್ಕಳಿನ್ನು ಎದ್ದಿಲ್ಲ ತಾನೆ
ಆ ನಿನ್ನ ಮಗ ಇದ ನೋಡಿದರೆ ಮುಗಿಯಿತು
ಇಡೀ.. ಊರಿಗೆ ಊರೇ... ಡಂಗೂರ ಸಾರಿ ಬರುವ
ಇವನ ಮುಂದೆ ರೇಡಿಯೋ, ಟಿವಿ ಬೇಕಾಗಿಯೇ ಇಲ್ಲ
ಪುಕ್ಕಟೆ ಮನರಂಜನೆ ಕೊಡುವ...
ನೀವೇನು ಚಿನ್ನ, ಬೆಳ್ಳಿ ವೈಜ್ರ ವೈಡೂರ್ಯ ತಂದ ಹಾಗಿದೆ ಸುಮ್ಮನೆ ಸುರಿಯಿರಿ ಅದೇನೆಂದು ನೋಡಿಯೇ ಬಿಡುವ
ರ್ರೀ..!! ಇಷ್ಟೊಂದು ನೋಟುಗಳ ಕಂತೆ ಕಂತೆ !!
ಕದ್ದು, ತಲೆ ಹೊಡೆದು ತಂದಿದ್ದಲ್ಲ ತಾನೆ
ನನಗೆ ಏಕೋ ನಂಬಲಾಗುತ್ತಿಲ್ಲ, ಭಯ ಬೇರೆ ?
ಶ್!!! ಪಿಸುಗುಟ್ಟ ಬೇಡವೇ... ನಿಮ್ಮೀ...
ಇದ ಕದ್ದದ್ದು ಅಲ್ಲ, ತಲೆಯೊಡೆದು ತಂದದ್ದು ಅಲ್ಲ

Sunday, September 7, 2014

" ನಶೆ "

ನೀ ನನ್ನ ನಂಬೇ.... ಮಾರಾಯ್ತೀ....
ನಿನ್ನಾಣೆಗೂ ಕುಡಿಯುವುದ ಬಿಟ್ಟಿರುವೆ
ಬೇಕಿದ್ದರೆ ನೀನೇ... ಬಾಯ ತೆರೆದು ನೋಡು
ವಾಸನೆ ಬಂದರೆ ನನ್ನ ಒಳ ಸೇರಿಸ ಬೇಡ;
ಕುಡಿತದಿಂದ ಮಾನ, ಮರ್ಯಾದೆಯಲ್ಲ ಹಾಳು
ದಿನನಿತ್ಯ ಮಡದಿ, ಮಕ್ಕಳ ಗೊಣಗಾಟ
ಸುಮ್ಮನೆ ಹಣವು ವ್ಯರ್ಥ, ಆರೋಗ್ಯ ಇತ್ಯರ್ಥ
ಈ ನಶೆಯಿದ್ದರೆ ಎಷ್ಟು ಹೊತ್ತು ಇರಬಹುದೇ...?
ಒಂದರ್ಧ ದಿನ, ಮತ್ತಷ್ಟು ಏರಿಸಿದರೆ ನಾಳೆಗೆ
ಕುಡಿತದಿಂದ ಸಿಗುವ ಸುಖಕ್ಕಿಂತ
ಇಲ್ಲೇ... ಸಿಗುವ ಅಮೃತ ಕುಡಿಯದೆ
ಇನ್ನೆಲ್ಲೋ ... ಸಿಗುವ ಅಮಲಿಗೆ ಶರಣಾಗಿದ್ದೆ
ಮೊದ ಮೊದಲು ಇದರ ಅರಿವಿರಲಿಲ್ಲ
ಹಾಳಾದ್ದು ಈ ನಶೆಯ ಗಮ್ಮತ್ತಿರಬೇಕು
ನಶೆಯ ಪೊರೆ ಕಳಚಿ ನಿನ್ನ ನೆನಪಾಗಿದ್ದು
ನೀ ಹೊತ್ತ ದೇವರ ಹರಕೆ, ಪೂಜೆಯ ಫಲ
ಜೊತೆಗೆ ನೀ ಸೀರೆ ಸೆರಗ ಸಿಕ್ಕಿಸಿ, ಕೊರಳ ಕೊಂಕಿಸಿ
ಹೆರಳ ಹರಡಿ ಬಳುಕಿ ಬರುವಾಗ ಈ ಎದೆಯೊಳಗೆ
ನೂರಾರು ಮಧುರ ಮೈತ್ರಿಯ ಅರುಣರಾಗ...
ಆ ಹಾ ಕುಡಿಯುವುದ ಬಿಟ್ಟದ್ದಕ್ಕೆ ನೀ ನಗಬೇಕಾದ್ದೆ !
ಈ ಖುಷಿಗೆ ನೂರರ ಒಂದೈದು ನೋಟು ತಾ
ಹೀಗೆ ಹೋಗಿ ಹಾಗೇ... ಬೇಗ ಬಂದು ಬಿಡುವೆ !

Friday, September 5, 2014

" ಆ ಒಂದು ಮುತ್ತು "

ಇದೇನೇ.... ಇದು ! ಬಾಗಿಲಲ್ಲೇ .... ನಿಂತು
ನೀ ಯಾರಿಗೋ.... ಏನೋ ಕಾಯುವಂತಿದೆ ಬಂಧುಗಳೇನಾದರು ಬರುವರೋ.... ಹೇಗೆ ?
ಹ್ಞಾಂ ಹ್ಞಾಂ ... ಮಕ್ಕಳ ಮುಂದೇನು ಮಾತು
ಮೊದಲು ಬೆಡ್ ರೂಮಿಗೆ ನಡೆಯರಿ ನೀವು
ನಿಮಗೆ ಕಾದಿದೆ ಇಂದು ಯುಗಾದಿಯ ಹಬ್ಬ;
ಆ ಹಾ...!! ಅಂತು ಸಂಜೆಗೂ ರಸಗವಳ ಎನ್ನು
ನೀ ನಡಿಯೇ... ಬೇಗ ಮಾರಾಯ್ತಿ ನನ್ನ ಕಾಯಿಸದೆ
ಟೀವಿ ಸೀರಿಯಲ್ಲು ಶುರುವಾದರೆ ಮುಗಿಯಿತು
ನಿಮ್ಮ ಜನ್ಮಕ್ಕೊಂದಿಷ್ಟು ನಾಚಿಯಾಗ ಬೇಕು
ಬೆನ್ನಿಗೆ ಬಿದ್ದ ಆ ಬಿಕನಾಸಿ ಯಾರವಳು ?
ಎಷ್ಟು ದಿನದಿಂದ ಈ ನಿಮ್ಮಾ ಅವಳ ತಿರುಗಾಟ !
ನನಗಿಂತ ಅವಳೇನು ತ್ರಿಲೋಕ ಸುಂದರಿಯೆ ?
ನಿಂದೊಳ್ಳೆ ಕಥೆಯಾಯ್ತಲೇ.... ಕಮಲಿ
ನನ್ನನೇ.... ನೀ  ಹೀಗೆ ಅನುಮಾನಿಸಿದರೆ ಹೇಗೆಯೆ ?
ನಾನೇನು ಆ ಕೊಳಲನೂದುವ ಮುರಳಿ ಮೋಹನನೆ
ಅವಳೇನು ಕೊಳಲ ಕರೆಗೆ ಕರಗಿ ಬರುವ ರಾಧೆಯೆ
ನಿನ್ನಷ್ಟಕ್ಕೆ ನೀನೆ, ಏನೇನೋ .... ಕಲ್ಪಸಿಕೊಂಡು
ಹೀಗೆ ಒಗಟೊಗಟಾಗಿ ನನ್ನ ಪ್ರಶ್ನಿಸಿದರೆ ಹೇಗೆ ?
ನನಗೂ... ಅದೇನೆಂದು ಬಿಡಿಸಿ ಹೇಳಿದರೆ ತಾನೆ ? ಗೊತ್ತಾಗುವುದು, ನಿನಗೂ ಸಹ ನಾ ಉತ್ತರಿಸುವುದು...
ಕಾಯ, ವಾಚ, ಮನಸ ನಿನ್ನ ಮೆಚ್ಚಿ, ಕೈ ಹಿಡಿದಿದ್ದರೂ
ನನ್ನೇ... ಅನುಮಾನಿಸುವೆ, ಅವಮಾನಿಸುವೆ ನೋಡು ನಿನ್ನನುಮಾನ ಹುಟ್ಟಿನಿಂದಲೇ ... ಬಂತೋ... ಏನೊ ?!
ಆ ಹಾ... ಏಕ ಪತ್ನಿ ವ್ರತಸ್ಥ ಶ್ರೀರಾಮಚಂದ್ರ ನೀವು
ಇದೇನಿದು ಶರ್ಟಿನ ಹಿಂಬದಿಯಲ್ಲಿ ಲಿಪ್ಟಿಕ್ಕಿನ ಕಲೆ !!
ಏನಿದರ ಅರ್ಥ!! ಬೇಗ ಹೇಳಿ, ಸುಮ್ಮನಾದರಿ ಏಕೆ ?
ಸಿಕ್ಕಿ ಬೀಳುವಿರೆಂದು ಭಯವೋ.... ಅಥವಾ ನಟನೆಯೋ
ನನ್ನ ಹೇಗೆ ವಂಚಿಸುವುದೆಂದು ಆಲೋಚನೆಯೋ !!

Thursday, September 4, 2014

ಯಜ "ಮಾನ"

ಮದುವೆಗೆ
ಮುಂಚೆ
ನಾ ಹೇಗೆಲ್ಲಾ
ಇದ್ದೆ;
ಮದುವೆಯ
ನಂತರ
ನನ್ನವಳು
ಹೇಳಿದ್ದಕ್ಕೆಲ್ಲ
ಹ್ಞೂಂಗುಟ್ಟಿದರೆ
ಉಂಟು
ಊಟೋಪಚಾರ
ಇಲ್ಲದಿದ್ದರೆ
ಕೆಡುವುವಳು
ಇಡೀ ರಾತ್ರಿಯೆಲ್ಲಾ
ಉಪವಾಸ !!
ನನ್ನ
ಜುಟ್ಟು-
ಜನಿವಾರವೆಲ್ಲ
ನನ್ನವಳ
ಕೈಯಲ್ಲಿರುವಾಗ
ನಾ ಏನೂ
ಮಾತಾಡುವಂತಿಲ್ಲ
ಮಾಡುವಂತಿಲ್ಲ
ಹೆಸರಿಗೆ ಅಷ್ಟೆ
ಮನೆ ಯಜಮಾನ !

Wednesday, September 3, 2014

" ಬಲೂನ್ "

ಆ ಹಾ.... ಏನು ಗಂಡಸರೋ ಏನೋ ನೀವು
ರಾತ್ರಿಯಾದರೆ ಇದಕ್ಕೇನು ಕಮ್ಮಿಯಿಲ್ಲ ಬಿಡಿ,
ನಿಮ್ಮಿಂದ ನಿಮ್ಮ ಮಗನಿಂದಾಗಿ ಇನ್ಮುಂದೆ
ನಾ ಹೊರಗೆಲ್ಲೂ ತಲೆಯತ್ತಿ ಓಡಾಡುವಂತಿಲ್ಲ;
ಯಾಕಾದರು ಇವನನ್ನ ಹೊತ್ತು ಹೆತ್ತೆನೋ....
ಬಂಜೆಯಾಗಿಯೇ ಉಳಿದಿದ್ದರೆ ಎಷ್ಟು ಚೆನ್ನಿತ್ತು
ರ್ರೀ... ಪಂಕಜಾಕ್ಷೀ.... ಬೇಗ ಬರಬಾರದೇನ್ರೀ
ನೋಡಿ ಅದೆಲ್ಲಿ ಸಿಕ್ಕಿತೊ ಏನೊ ನಿಮ್ಮ ಮಗನಿಗೆ ಕಾಂಡೋಮ್ ಒಂದೊಂದೇ ತೆಗೆತೆಗೆದು ಅಕ್ಕ ಪಕ್ಕದ ಮಕ್ಕಳಿಗೆಲ್ಲ
ಬಲೂನೆಂದು ಕೊಟ್ಟು ಊದಿ ಊದಿ
ಗಾಳಿಯಲ್ಲಿ ತೇಲಿ ಬಿಡುತ್ತಿರುವ
ಅದೇನು ಬೇಜವಾಬ್ದಾರಿ ಜನರೋ.... ಏನೋ... ನೀವು
ಹೋಗಿ ಒಂದೆರಡು ಏಟು ಕೊಟ್ಟು, ಒದ್ದು ಕರೆ ತನ್ನಿ
ನಿಮ್ಮ ಮಗನಿಂದಾಗಿ ನನ್ನ ಮಗನೂ... ಹಾಳಾದ
ನನಗೇ.... ಆಂಟಿ ಈ ಬಲೂನ್ ಊದಿಕೊಡಿ ಎನ್ನುವುದೇ...?!
ಹೌದೇ.... ಎಲ್ಲಿರುವ ಆ ದರೀದ್ರದವ
ಹಾಳಾದವನ ಕಾಡಿ, ಬೇಡಿ ಗದರಿಸಿ, ಬೆದರಿಸಿ
ರಮಿಸಿ ಕರೆದರೂ ಕೇಳದೆ, ಕೈಗೆ ಸಿಗದೆ
ಹೇಗೆಲ್ಲಾ ನನ್ನೇ... ಆಟವಾಡಿಸಿದ್ದ ;
ನನ್ನ ಕೈಗೆ ಸಿಗಬೇಕಿತ್ತು ಬಂದ ಕೋಪಕ್ಕೆ
ಮಗನೆನ್ನುವುದ ಮರೆತು ಮುಖ ಮೂತಿ ನೋಡದೆ ಬಾರಿಸುತ್ತಿದ್ದೆ ಅಕ್ಕಪಕ್ಕದವರೆಲ್ಲ ಹೇಗೆಲ್ಲ ನನ್ನ ನೋಡಿ ಮುಸಿಮುಸಿ ನಕ್ಕಿದ್ದರು ಅಯ್ಯೋ... ದುರ್ವಿಧಿಯೇ... ಈ ಭೂಮಿ ಬಾಯ್ತೆರೆಯಬಾರದೇ
ಆ ಸಾವು ಮೇಲೆರಗಿ ನನ್ನೆದೆಯ ಕದ ತಟ್ಟಬಾರದೆ
ಇವನಿಂದಾಗಿ ಎಲ್ಲರೆದಿರು ಅವಮಾನಿತಳಾಗಿ
ನಾ ಹೇಗೆ ತಾನೆ ಎಲ್ಲರಿಗೂ ಮುಖ ತೋರಿಸಲಿ....!!

" ಸಿಹಿ - ಕಹಿ " ಭಾಗ - ೨

ನಿಂದು ಒಳ್ಳೆ ಕಾಟವಾಯ್ತಲ್ಲೇ ....
ನೆಮ್ಮದಿಯಾಗಿ ಊಟ ಮಾಡುವಂತಿಲ್ಲ
ನಿನ್ನ ಜೊತೆ ಸುಖವಾಗಿ ನಿದ್ರಿಸುವಂತಿಲ್ಲ
ಮದುವೆಯಾಗಿ ಮೂರು ತಿಂಗಳಾಗಿಲ್ಲ
ಆಗಲೇ ... ಒಂದಿಲ್ಲೊಂದು ರಂಪಾಟ
ನಿಮ್ಮ ಅಮ್ಮ , ಅಕ್ಕ ಹಾಗಂದರು,
ತಂಗಿಯರು ಹೀಗಂದರು
ಸಾಲದಕ್ಕೆ ಬೇರೆ ಮನೆ ಮಾಡಿ ಎನ್ನುವೆ
ಇರುವ ಮೂವರಿಗೆ ಒಂದಷ್ಟು
ಅಡಿಗೆ ಮಾಡಿ ಬಡಿಸಲು ನಿನ್ನ ಕೈಯಲ್ಲಿ ಆಗದು
ಘಂಟೆಗಟ್ಟಲೆ ಫೋನಲ್ಲಿ ನಿಮ್ಮವರ ಜೊತೆ
ಮನೆ ಮುರುಕ ಮಾತುಗಳ ಸಂಭಾಷಿಸುವೆ
ಸಣ್ಣಪುಟ್ಟ ಕೆಲಸಗಳ ಮಾಡಿ ಕೊಟ್ಟರೆ
ಅಮ್ಮನಿಗೂ ಖುಷಿ, ಕೊಂಚ ಆರಾಮವಾಗದೆ
ವಯಸ್ಸಾದ ಅಮ್ಮ ಬೆಳ್ಳಂಬೆಳಿಗ್ಗೆ ಎದ್ದು
ಮನೆ ಕೆಲಸಗಳ ದಿನನಿತ್ಯ ಮಾಡಬೇಕೆ
ಅವರಿವರ ದೂರುವುದೇ... ನಿನ್ನ ದಿನಚರಿಯಾಯ್ತು ;
ಅಕ್ಕ - ತಂಗಿಯರು ಮನೆಗೆ ಬರುವಂತಿಲ್ಲ
ಹಿರಿಯರು ಒಂದೆರಡು ಬುದ್ಧಿ ಮಾತ ಹೇಳಿದರೆ
ಕೇಳುವಷ್ಟು ಸಹನೆ, ಸಂಸ್ಕಾರವಿಲ್ಲ
ಅರ್ಥಮಾಡಿಕೊಳ್ಳುವ ಜಾಯಮಾನದವಳಲ್ಲ
ಅವರಿಗೇ... ಎದಿರು ವಾದಿಸುವಷ್ಟು ಸೊಕ್ಕು
ಹೊಸ ವಾತಾವರಣ, ಮನೆಯವರ ಜೊತೆ ಹೊಂದಿಕೊಳ್ಳಲು ಒಂದಷ್ಟು ಸಮಯ ಕೊಟ್ಟು
ನಾ ಇಲ್ಲಿಯವರೆಗೆ ಕಾದಿದ್ದು ನನ್ನದೇ ತಪ್ಪು
ನೋಡು ನನಗೂ... ಹೇಳಿ ಹೇಳಿ ಸಾಕಾಯ್ತು
ಬೇಕಾದರೆ ನಿನ್ನ ಬಿಟ್ಟು ಬಿಡುವೆನೆ ಹೊರತು
ಹೊತ್ತೆತ್ತವಳ ನನ್ನ ಉಸಿರಿರುವರೆಗೂ ಬಿಡಲಾರೆ
ಹೊಂದಿಕೊಂಡು ಬಾಳುವುದಿದ್ದರೆ ಬಾಳು 

Monday, September 1, 2014

" ಸಹಿ - ಕಹಿ - ೧

ಇದೇನೆ ಇದು ವಿಶಾಲು ಬಿಳಿ ಹಾಳೆ, ಪೆನ್ನು
ಯಾರಿಗಾದರು ಪತ್ರ, ದಿನಸಿ ಅಂಗಡಿಗೆ
ಸಾಮಾನುಗಳ ಪಟ್ಟಿ ಬರೆಯಬೇಕಿತ್ತೆ;
ಅಯ್ಯೋ.... ರ್ರೀ ಅದ್ಯಾವುದೂ ಅಲ್ಲವೇ ಅಲ್ಲ
ನಿಮ್ಮ ಹಸ್ತಾಕ್ಷರವ ಸಹಿ ಮಾಡಿ ಕೊಡಿ
ಮೊದಲೇ ಚಿಕ್ಕಮ್ಮ ಕಾಳಿಯ ಉಪಾಸಕರು
ಕೂಲಂಕಷವಾಗಿ ನಿಮ್ಮೆಲ್ಲಾ ಜಾತಕವ ನೋಡಿ
ಚಾಚು ತಪ್ಪದೆ ಮುಂದಿನ ಭವಿಷ್ಯ ಹೇಳುವರು
ಉದ್ಯೋಗ, ಕೀರ್ತಿ, ಮನೆ ಮಕ್ಕಳು, ಜಯ ಅಪಜಯ ಸಂಸಾರದಲ್ಲಿ ದೋಷವಿದ್ದರೆ ಎಲ್ಲಾ ಸರಿ ಮಾಡುವರು ಹೌದೇ...!! ನಿಮ್ಮ ಚಿಕ್ಕಮ್ಮ ಜ್ಯೋತಿಷಿಯೆ ?
ಆದರೂ ನನಗೇಕೋ... ಅನುಮಾನ !
ಮನೆಯ ಮುಂದೆ ಜ್ಯೋತಿಷ್ಯದ ಫಲಕವಿಲ್ಲ
ಯಾರೊಬ್ಬರೂ ಜಾತಕ ಹಿಡಿದು ಬರುವುದಿಲ್ಲ
ಹೀಗಿದ್ದೂ... ನಿನಗೆಂತಹದ್ದೆ ಹುಡುಗಾಟ !
ಸುಮ್ಮನೆ ಬಂದು ಮಲಗು
ಮದುವೆಯಾದ ಹೊಸತರಲ್ಲಿ ಈ ಕಿರಿಕಿರಿ ಬೇರೆ
ರ್ರೀ .... ಸಹಿಯ ಮಾಡುವುದಾದರೆ ಮಾಡಿ
ಇಲ್ಲವಾದರೆ ಬಿಡಿ, ನನಗೇನೂ ಲಾಭವಿಲ್ಲ
ಏನೋ ... ಚಿಕ್ಕಮ್ಮ ಬಂಧುಗಳಿಗೆ, ತಿಳಿದವರಿಗೆ
ಉಚಿತವಾಗಿ ಭವಿಷ್ಯ, ಜಾತಕ, ಶಾಸ್ತ್ರ ಹೇಳುವರು
ನಿಮಗೆ ಅಪಹಾಸ್ಯ, ಕೊಂಕು ನುಡಿ ಬೇರೆ...

ಅಲ್ಲವೆ ಏನೋ... ನಾ ತಮಾಷೆಗೆ ಹೇಳಿದರೆ
ನೀ ಇಷ್ಟಕ್ಕೆಲ್ಲ ಕೋಪಿಸಿಕೊಳ್ಳುವುದೆ
ಸರಿ ಹೋಯ್ತು ಬಿಡು ನನ್ನದೆ ತಪ್ಪು
ಎಲ್ಲಿ ಆ ಖಾಲಿ ಹಾಳೆ, ಹಾಗೆಯೇ ಪೆನ್ನು ಕೊಡು
ಬೇಕಿದ್ದರೆ ನಿನಗಿಷ್ಟ ಬಂದ ಕಡೆ ಬರೆಸಿಕೊ...
ಆ ಹಾ... ಆಸೆ ನೋಡಿ ಆಸೆ ಮೊದಲು
ಇಲ್ಲಿ ಸಹಿ ಮಾಡಿ ಆಮೇಲೆ ಇದ್ದದ್ದೇ
ನನ್ನವಳ ಮಾತುಗಳ ನಿಜವೆಂದು ನಂಬಿ
ಸಹಿಯ ಮಾಡಿದ್ದಕ್ಕೆ ಮುಂದೊಂದು ದಿನ ನನಗೇ.. ತಿರುಗುಬಾಣವಾಗುವುದೆಂದು ನಾ ತಿಳಿದಿರಲಿಲ್ಲ !