Tuesday, July 19, 2016

ನಿರುತ್ತರ

ನಾ ಏನೂ ಬರೆಯಲಾಗದೆ
ಒಳಗೊಳಗೆ ಒದ್ದಾಡುತ್ತಿದ್ದರೆ
ನನ್ನವಳಿಗೆ ಎಲ್ಲಿಲ್ಲದ ನಗು;
ಹಾಳಾದ್ದು ಮನದ ಪದಗಳೂ ಕೂಡ
ಇಂದೇ ಮುಷ್ಕರ ಹೂಡಿ ನಿಂತಿವೆ
ಏಕೆ ? ಹೀಗೇಕೆ ?
ನನ್ನನ್ನೇ ನಾ ಪ್ರಶ್ನಿಸಿಕೊಂಡರೂ
ಉತ್ತರ ಮಾತ್ರ ನಿರುತ್ತರ
®©ಶಿವಚೆನ್ನ ೧೯.೦೭.೧೬

ತಿರುಗುಬಾಣ

ಮನೆಗೆಲಸದ ಶಾಂತಿಗೆ
ವಾಂತಿಯಾದರೆ,
ನನ್ನವಳಿಗೇಕೆ ನನ್ನ ಮೇಲೆ ಸಿಟ್ಟು
ಕಣ್ಣ ಕೆಂಪಾಗಿಸಿ, ಹ್ಞೂಂಕರಿಸಿ
ನಿಜ ಹೇಳಿ ?
ನಿಮ್ಮದೋ... ಈ ಕೆಲಸ !
ನಿಮ್ಮಿಬ್ಬರ ಬಗ್ಗೆ ಮೊದಲೇ ಅನು-
ಮಾನವಿತ್ತು;  
ಛೇ ಛೇ... ನೀವಿಂತ ನೀಚ,
ಭಂಡ ಗಂಡನೆಂದು ಕೊಂಡಿರಲಿಲ್ಲ
ಹೋಗಿ ಹೋಗಿ ಅದು ಆ ಕೆಲಸದವಳ ಜೊತೆ
ಅಷ್ಟೊಂದು ಬರಗೆಟ್ಟು ಹೋಗಿದ್ದಿರೆ ನೀವು
ನಾಳೆ ಅವಳ ಮಗು,
ದೊಡ್ಡಮ್ಮಾ ಎಂದರೆ ನನ್ನ ಸ್ಥಿತಿ ಏನು ?
ನಿಮ್ಮ ವಂಶಸ್ಥರೆಲ್ಲ ಹೀಗೆಯೆ ?
ಎಲ್ಲೋ..... ಇದೆಲ್ಲವೂ 
ನಿಮಗೂ ರಕ್ತಗತವಾಗಿ ಬಂದಿರಬೇಕು
ಮುಚ್ಚೆ ಬಾಯಿ ಸಾಕು
ಹೊಲಸು ನಾಲಿಗೆ ಮಾತಾಡಿತೆಂದು
ನನ್ನನ್ನೂ ಮೈಲಿಗೆ ಮಾಡಬೇಡ
ನಿನ್ನಣ್ಣನ ಕಾಮತೃಷೆಗೆ ತುತ್ತಾದ
ಅಸಹಾಯಕ, ಅಮಾಯಕ ಹೆಣ್ಣುಮಗಳು
ಈಗ ನಿನ್ನ ಬಾಯಿ ಕಟ್ಟಿತೆ ? ಹ್ಞೂಂ  ಹೇಳು?
ನಾನೋ.... ನಿನ್ನ ಅಣ್ಣನೋ ....ನೀಚ !
®©ಶಿವಚೆನ್ನ ೧೯.೦೭.೧೬

Sunday, July 10, 2016

ಕಳೆದು ಕೊಂಡೆ ರೀ ನಾ ಕಳೆದು ಕೊಂಡೆ

ನಿದ್ದೆಯಲ್ಲಿದ್ದ ನನ್ನನ್ನ
ತಿವಿದೆಬ್ಬಿಸಿ,
ಮಿನುಗು ತಾರೆ ಕಲ್ಪನಾ ರೇಂಜಲ್ಲಿ
ನನ್ನವಳು ಒಂದೇ ಸಮ ಕಳಕ್ಕೊಂಡೇ
ರೀ..... ನಾ ಕಳಕೊಂಡೇ
ದಡಬಡಿಸಿ ಮೇಲೆದ್ದು
ಏನಾಯ್ತೇ..... ನಿನ್ನ ಚಿನ್ನದ ಸರ
ತಾಳಿ, ಮೊಬೈಲು ಕಳೆದು ಹೋಯ್ತೆ!?
ಹೋಗಲಿ ಬಿಡು ಮತ್ತೊಂದು ಕೊಂಡರಾಯ್ತು
ಇಲ್ಲವೆಂದ ನನ್ನವಳು,
ಮತ್ತಷ್ಟು ಅಳುವುದ ಕಂಡು
ಅದೇನೆಂದು ಹೇಳಬಾರದೆ ?
ಅಳು ಅಳುತಲೇ... ಲಟ್ಟಣಿಗೆ ಎನ್ನಬೇಕೆ ☺
ಶಿವಚೆನ್ನ ೧೦.೦೭.೧೬

ಹಬ್ಬ ಹಬ್ಬಾ

ಅದೇನು ಬೇಕೊ ಇಂದೇ ಕೇಳಿಕೊ
ಅದೆಷ್ಟೇ ಕಷ್ಟವಾದರು ಸರಿ,
ಶಕ್ತಿ ಮೀರಿ ಕೊಡಿಸುವೆ
ನಿನ್ನ ಜನುಮ ದಿನ
ನನಗೂ ಸಹ ಹಬ್ಬ !
ಮಲ್ಲಿಗೆಯ ಹೂವಲೇ ಮುಳುಗಿಸಿ
ಮೈಸೂರ್ ಪಾಕಲೇ ತೇಲಿಸಿ
ಆ ಚಂದ್ರ ತಾರೆಯರ ಹೆಡೆಮುರಿ ಕಟ್ಟಿ,
ಧರಧರನೆ ಎಳೆದು ತಂದು ಅತ್ತರೂ,
ತುರುಬು ಕಟ್ಟಿ ಮುಡಿಸುವೆ
ನನ್ನವಳು ನಕ್ಕು 
ಸಾಕು ಸಾಕು ನಿಮ್ಮದು ಏಕೋ ಅತಿಯಾಯ್ತು
ನನ್ನ ಬಳಿ ಈ ಆಟವೆಲ್ಲ ಬೇಡವೇ ಬೇಡ 
ಕೊಡಿಸುವುದಾದರೆ ಮಾತ್ರ ಹೇಳಿ
ಇಲ್ಲದಿದ್ದರೆ ಜಾಗ ಈಗಲೇ ಖಾಲಿ ಮಾಡಿ
ಚಿನ್ನದ ಗಣಿ, ವಜ್ರದ ಗಣಿಯನ್ನೇನು ಕೇಳಲಿಲ್ಲ
ನನ್ನದು ಸ್ವಾರ್ಥವಿದೆ ಕೇಳಿಕೊ ಎಂದದ್ದದ್ದೇ ತಪ್ಪಾಯ್ತು
ಯೋಚಿಸಿ ಯೋಚಿಸಿ ನನ್ನವಳು
ಒಂದೇ ಒಂದು ಲಟ್ಟಣಿಗೆ ಕೊಡಿಸಿ ಎನ್ನಬೇಕೆ ☺
ಶಿವಚೆನ್ನ ೧೦.೦೭.೧೬

Saturday, July 2, 2016

ಕೆಂಪಿರುವೆ

ತೆಪ್ಪಗೆ ಕೂತು,
ಸಿನೆಮಾ ನೋಡುವುದ ಬಿಟ್ಟು
ಅದೇನು ಇಲ್ಲೂ " ಕೈ " ಬಿಡುವುದೆ
ನಾಚಿಕೆಯಾಗ್ಬೇಕು ನಿಮ್ಮ ಜನ್ಮಕ್ಕೆ
ಥೂ...... ತೆಗಿಯಿರಿ ಸಾಕು
ಏನು ಗಂಡಸರೋ...  ಏನು ಕಥೆಯೊ
ನೋಡಿದವರು ಏನೆಂದು ತಿಳಿಯುವರೆಂಬ ಪರಿ-
-ಜ್ಞಾನ"ವಿದ್ದರೆ ತಾನೆ ನಿಮಗೆ ?
ಹಿಂದುಮುಂದು ಯೋಚಿಸಿದೆ ನನ್ನವಳು,
ಮುಖಕ್ಕೆ ಹೊಡೆದಂತೆ ಹೇಳಿದ ಮಾತಿಗೆ
ಸಿಟ್ಟು ನೆತ್ತಿಗೇರಿದರು
ಏನೂ ಮಾತಾಡುವಂತಿಲ್ಲ, ಮಾಡುವಂತಿಲ್ಲ
ಹತ್ತಾರು ಕಣ್ಗಳು
ನನ್ನತ್ತ ನೋಡಿ ಮುಸಿಮುಸಿ ನಕ್ಕರೆ ;
ಒಂದಿಬ್ಬರು ತೋಳೇರಿಸಿದುದ ಕಂಡು
ಮೇಲೆದ್ದವನ ಕೈಹಿಡಿದೆಳೆದು ದುರುಗುಟ್ಟಿ
ಏನೂ ಮಾತಾಡದೆ ಸುಮ್ಮನೆ ಕೂರ್ರಿ,
ಈ ಪ್ರತಾಪ, ಕೋಪ ತಾಪ ಇವರ ಮುಂದಲ್ಲ
ಕೈ ಬಿಡುವಾಗ ಇರಬೇಕಿತ್ತು
ಮತ್ತದೇ......ನನ್ನವಳಿಂದ ಅವಹೇಳನ !
ಮಾತನಾಡಲೂ ಅವಕಾಶವಿಲ್ಲದೆ
ಕುಳಿತಲ್ಲಿಯೇ... ಒದ್ದಾಡಿದ್ದೆ
ಛೆ....!! ಹೋಗಿ ಹೋಗಿ ಇವಳ ಜೊತೆ ಬರಬೇಕಿತ್ತೆ ?
ಹೀಗೆ ಹೋಗಿ ಬೇಗ ಬರುವೆ ಕಾಯುವಿರೆಲ್ಲ ☺