Tuesday, February 24, 2015

ಇದೆಲ್ಲಾ ನನಗೆ ಬೇಕಿತ್ತೇ...?

ನನ್ನ ಅಪ್ಪ, ಅಮ್ಮ
ನನಗೆ ಏಕಾದರು
ಇಂತಹ ಹೆಸರಿಟ್ಟರೋ... !!
ಅಣ್ಣಯ್ಯ ಎಂದು,
ಇದು ನನಗೆ ಬೇಕಿತ್ತೇ... ??
ಕಿರಿಯರಿಂದಿಡಿದು
ಹಿರಿಯರಾದಿಯಾಗಿ
ನನ್ನ ಹೆಸರಿಡಿದು ಕರೆಯುವಾಗ
ನನಗೋ ಎಲ್ಲಿಲ್ಲದ ಖುಷಿ
ನಾ ಎಷ್ಟೆಲ್ಲಾ ಬೀಗಿದ್ದೆ ;
ಮದುವೆಯ ಮೊದಲ ರಾತ್ರಿಯಲಿ
ನನ್ನವಳು ಹಾಲಿಡಿದು, ಹಲ್ಕಿರಿದು
ಬಳುಕಿ ವಯ್ಯಾರದಿ ಬರುವಾಗ
ನಾ ಏನೇನೋ ಕನಸ ಕಂಡಿದ್ದೆ;
ಹಾಲು ಕುಡಿದು, ಬಾಯಿ ಒರಸಿ
ಹುಸಿ ನಗೆಯ ಬೀರಿದ್ದೆ...
ನಾ ಇಂದು ಪರಮಸುಖಿ ಎಂದು
ನನ್ನವಳು ಮೆಲ್ಲನೆ ಬಳಿ ಬಂದು
ಅಣ್ಣಯ್ಯಾ... ಎಂದು ಉಸಿರಿದಾಗಲೇ...
ಏರಿದ್ದ ಬಿಸಿ ಜರ್ರನೆ ಇಳಿದಿದ್ದು...
ಮೊದಲಿನವಳಾಗಿದ್ದರೆ ಎಷ್ಟೋ ... ಚೆನ್ನಿತ್ತು
ಅಣ್ಣಯ್ಯ ಎಂದು ಕರೆವಾಗಲೆಲ್ಲಾ
ಮೈ ಮನಸ್ಸೆಲ್ಲ ಮುಳ್ಳೆದ್ದು
ಛೇ... ಇವಳ ಜೊತೆ ಸಂಸಾರವೇ?
ಅರಚಾಡಿ, ಕಿರುಚಾಡಿ ತೊರೆದು
ದೊಡ್ಡಮ್ಮನ ಮಗಳ ಮಗಳ
ಬಾಳ ಬೆಳಗಬಹುದೆಂದು
ವರಿಸಿದ್ದು ನನ್ನದೇ ತಪ್ಪು
ಎಲ್ಲವೂ ನನ್ನ ದುರಾದೃಷ್ಟ
ಮೊದಲಿನವಳಾಗಿದ್ದರೆ
ಅಣ್ಣಯ್ಯ ಎಂದು ಕರೆವಾಗಲೆಲ್ಲ
ಕಿವಿಗೆ ಅರಳೆಯನಿಟ್ಟು
ಜೀವನಪೂರ ಸುಖಿಸಬಹುದಿತ್ತು
ಆ ಹಾ....!! ಎರಡನೆಯವಳೋ....
ರ್ರೀ ... ಎನ್ನುವುದಿರಲಿ, ಹೆಸರಿಡಿದು ಕರೆಯದೆ
ಲೋ... ಮಾವಾ... ಕರೆದದ್ದು ಕೇಳಿಸದೆ
ನಿನ್ನ ಕಿವಿಗೇನು ' ಬಾವ '
ಎನ್ನುವಳಲ್ಲಾ .... ನನ್ನನ್ನೇ ..!!

Friday, February 13, 2015

ಮತ್ತೊಂದು ಮದುವೆ ನನಗೆ ಬೇಕೆ ನೀವೇ....ಹೇಳಿ ?


ಎಷ್ಟೋ ನೀರವ ನಿದ್ದೆಗಳಿಲ್ಲದ ಅಹೋ.. ರಾತ್ರಿಗಳು
ನನ್ನವಳ ನೆನಪುಗಳ ನಿಟ್ಟುಸಿರಿನ ಬೇಗೆಯಲ್ಲಿ
ನನ್ನ ಹಣೆಬರಹವನ್ನೆಲ್ಲಾ...  ಹಳಿಯುತ, ಅಳುತ
ನನ್ನೀ... ಅಸಹಾಯಕ ಸ್ಥಿತಿಯನ್ನೆಲ್ಲ
ಯಾರಿಗೆ ತಾನೆ ಮನಬಿಚ್ಚಿ ಹೇಳಿಕೊಳ್ಳಲಿ ?
ನಾ ಹೇಗೆ ತಬ್ಬಲಿಯಾದ ಈ ಕಂದನ ನಿಭಾಯಿಸಲಿ ?
ದಿಕ್ಕೇ.... ತೋಚದೆ ಯೋಚಿಸಿ ಯೋಚಿಸಿ ಸಾಕಾಗಿ
ನನಗಲ್ಲದಿದ್ದರು ಈ ಮುದ್ದು ಕಂದನಿಗಾಗಿ
ನಾ ಮರು ಮದುವೆಯ ಆಗಲೇ.... ಬೇಕು
ಛೇ....!! ನನ್ನ ಕಂದನಿಗೆ ಮಲತಾಯಿಯ ತರುವುದೆ ?!
ನನ್ನನ್ನ, ನನ್ನ ಕಂದನನ್ನ ಒಪ್ಪಿ ಬಂದವಳು
ಹೊತ್ತೆತ್ತವಳಂತೆ ನೋಡಿಕೊಳ್ಳುವಳೆ, ಆದರಿಸುವಳೆ ?
ಬೇಡವೇ.... ಬೇಡ, ಮತ್ತೆಂದಿಗೂ ಈ ಯೋಚನೆಯೇ ಬೇಡ
ಅಳುವ ಕಂದನ ನಾ ಎಷ್ಟೇ .... ಸಂತೈಸಿದರೂ
ಹೆತ್ತವಳಂತೆ ಮುದ್ದಿಸಿ, ರಮಿಸಲಾದೀತೆ ?
ತನ್ನೆದೆಯ ರಕ್ತವ ಹಾಲಂತೆ ಕುಡಿಸಲಾದೀತೆ ?
ಎದೆಗವಚಿ, ಏನೂ... ಮಾಡಲಾಗದ ಸ್ಥಿತಿಗೆ
ನಾ ಎಷ್ಟೆಲ್ಲಾ ಒದ್ದಾಡಿ ಮಮ್ಮುಲ ಮರುಗಿದ್ದೆ
ನನ್ನವಳು ಇದ್ದಿದ್ದರೆ ನಾ ಇಷ್ಟೆಲ್ಲಾ ಕಷ್ಟಪಡಬೇಕಿತ್ತೆ ?
ಚೊಚ್ಚಲ ಹೆರಿಗೆಯಲ್ಲಿ ಹೆತ್ತು, ಮಗುವ ಕೈಗಿತ್ತು
ಸತ್ತು ಸಂಪಿಗೆಯ ಮರವಾಗಿ ಹೋಗಿದ್ದಳು
ಹಿಂದೆಯಿಲ್ಲ ಮುಂದೆಯಿಲ್ಲ, ಬಂಧು ಬಳಗ ಮೊದಲೇ ಇಲ್ಲ
ಅನಾತಳಿಗೆ ಅನಾತನಾದ ನಾನೇ... ಪತಿ, ದೈವ ಎಲ್ಲಾ...
ಆ ದುರ್ವಿಧಿಗೂ... ನಮ್ಮ ನೋಡಿ ಸಹಿಸಲಾಗಲಿಲ್ಲವೇನೋ
ಕಡು ಕಷ್ಟಗಳ ಕೊಟ್ಟಿದ್ದರೂ ನಾ ಎಂದೂ ಎದೆಗುಂದುತ್ತಿರಲಿಲ್ಲ
ಅಯ್ಯೋ...!! ನನ್ನ ಮುದ್ದು ಕಂದಾ...
ನೀ ತಾಯಿಯಿಲ್ಲದ ತಬ್ಬಲಿಯಾದೆಯಲ್ಲೇ...
ನೀ ಅಮ್ಮಾ... ಎಂದು ಯಾರನ್ನು ಕೂಗಿ ಕರೆಯುವೆ ?
ಯೋಚನೆ, ಆಲೋಚನೆಯ ತರ್ಕಗಳ ಜಂಜಾಟಕ್ಕೆ ಸಿಲುಕಿ
ಆದದ್ದೆಲ್ಲಾ ಒಳ್ಳೆಯದ್ದಾಗಲಿ ಎಂದೇ... ಇವಳ ಮೆಚ್ಚಿದ್ದೆ !!
ಶಿವಚೆನ್ನ ೧೩.೦೨.೧೫