Friday, February 28, 2014

ಹಾಯ್ಕು

ಹೆಣ್ಣ ಹೆತ್ತರೆ
ಮನೆ ಮಂದಿಗೆ
ಕೆಂಡದಂತಹ ಕೋಪ,
ಹಸು ಹೆಣ್ಣು ಕರುವಿಗೆ
ಜನ್ಮ ಕೊಟ್ಟರೆ
ಮನೆ ದೀಪ

Thursday, February 27, 2014

" ಮನೆಗೊಂದು ಹೆಣ್ಣು, ಮಮತೆಯ ಕಣ್ಣು "

ನೀ ಎಡವಿ ಬಿದ್ದಾಗಲೆಲ್ಲಾ
ನಿನ್ನ ತೋಳಿಡಿದು ಮೇಲೆತ್ತಿ
ಮೈದಡವಿ, ಸಂತೈಸುತ
ನಾ ಬೆರಳಿಡಿದು ಅಡಿಗಡಿಗೆ
ನಿನ್ನ ನಡೆಸಿರುವೆ ಮಗಳೇ....

ಆ ನಿನ್ನ ಪುಟ್ಟ ಎಳೆ ಕಾಲ್ಗಳಲಿ
ನನ್ನೆದೆಯನೇರಿ ನೀ ತುಳಿವಾಗ
ಆ ಮೃದು ಸ್ಪರ್ಶಕೆ ನಕ್ಕಿದ್ದೆ ಮಗಳೇ...

ತೊದಲಿ ತೊದಲಿ ನೀ ನುಡಿವಾಗ
ಕನಲಿ ಕನಲಿ ಬೆದರಿ ನೀ ಅಳುವಾಗ
ನನ್ನೆದೆಗೆ ಅಪ್ಪಿ ನಿನ್ನ ಮುದ್ದಾಡಿದ್ದೆ

ನೀ ಬೆಳೆದಂತೆ ನಿನ್ನಲ್ಲಿ ಆ ನನ್ನ ತಾಯ
ಮಮತೆಯ ರೂಪವ ಕಣ್ತುಂಬ ಕಂಡು
ಅವಳಂತೆ ನೀ ನನ್ನ ಗದರಿಸಿ, ಹೆದರಿಸಿ
ಆದರಿಸುವ ಪರಿಗೆ ನಾ ಧನ್ಯ ಮಗಳೆ....

Tuesday, February 25, 2014

" ಸತ್ಯಂ ಶಿವಂ ಸುಂದರಂ "

ಅಯ್ಯೋ ...! ಬಾವ, ಇಲ್ಲಿರುವುದ ಬಿಟ್ಟು
ಅದೆಲ್ಲಿ ಮಾಯವಾಗಿ ಹೋದಿರಿ ಬೇಗ ಬನ್ನಿ,
ಒಂಚೂರು ಜವಾಬ್ದಾರಿ ಎಂಬುದೇ ಇಲ್ಲ ನಿಮಗೆ
ಒಂದು ಕ್ಷಣ ನಾದಿನಿಯ ಮಾತ ಕೇಳಿ ಬೆಚ್ಚಿದ್ದೆ ;

ಸ್ಪಷ್ಟವಾಗಿ ಏನೂ ಕೇಳಿಸದೆ ಅರ್ಧಲ್ಲಿಯೇ ಮಾತು ನಿಂತಿತ್ತು ! ಹಾಳಾದ್ದು ಈ ಮೊಬೈಲ್ ಫೋನ್ ಈಗಲೇ ಕೈಕೊಡಬೇಕೆ ? ಅತ್ತ, ಕರೆ ಮಾಡಿದರೆ ನಾಟ್ ರೀಚೆಬಲ್ ಉತ್ತರ ....
ಮತ್ತೆ ಪ್ರಯತ್ನಿಸಿದರೆ ನೀವು ಸಂಪರ್ಕಿಸುತ್ತಿರುವ ಗ್ರಾಹಕರು ಬೇರೆ ಕರೆಯಲ್ಲಿ ಕಾರ್ಯ ನಿರತರಾಗಿದ್ದಾರೆ
ಸ್ವಲ್ಪ ಸಮಯದ ನಂತರ ಬಿಟ್ಟು ಪ್ರಯತ್ನಿಸಿ....
ಮೊದಲೇ ಧ್ವನಿ ಮುದ್ರಿತ ಉಲಿದ ಕೋಕಿಲ ದನಿ....

ಕೋಪದ ರಬಸಕ್ಕೆಸೆದ ಫೋನ್ ಚೂರುಚೂರಾಗಿತ್ತು
ನನ್ನವಳ ನಾ ಹೀಗೆ , ಲೇಬರ್ ವಾರ್ಡಿನಲ್ಲಿಯೇ ಬಿಟ್ಟು
ಎಳನೀರ ತರಲೆಂದು, ಹಿಂದು ಮುಂದೆ ಯೋಚಿಸದೆ
ನಾ ಇಷ್ಟು ದೂರ ನಡೆದು ಬರ ಬಾರದಾಗಿತ್ತು.....!!!

ನನ್ನವಳಿಗೇನಾಯಿತೋ....!! ಒಂದೇ ಎರಡೇ...
ನೂರಾರು ಆತಂಕಗಳು ಒಮ್ಮೆಲೇ ಮುತ್ತಿಕ್ಕಿ,
ನಿಂತಲ್ಲಿ ನಿಲ್ಲಲಾಗದೆ ತಡಬಡಿಸಿದ್ದೆ;
ಮೊದಲೆರಡು ಸಲ ಅವಳಿಗಾದ ಗರ್ಭಪಾತಕೆ
ಎಷ್ಟು ಒದ್ದಾಡಿದ್ದಳು, ಇಡೀ ರಾತ್ರಿಯೆಲ್ಲಾ ಅದೆಷ್ಟು
ಒಂದೇ ಸಮ ಅತ್ತಿದ್ದಳು, ಹೀಗೇಕೆ ತನಗೆಂದು
ನನಗೆ ಹೀಗೆಯೇ ಆದರೆ, ಮುಂದೆ ಮಕ್ಕಳಾದಂತೆ ರ್ರೀ....
ನಾ ಎಷ್ಟೇ ಸಂತೈಸಿದರೂ ಎದೆಗೊರಗಿ ಬಿಕ್ಕಿದ್ದಳು....

ಕಣ್ಣಂಚಲಿ ಜಿನುಗಿದ ನೀರು ಕೆನ್ನೆಯ ತೋಯಿಸಿದರೆ
ನಾ ಎಂದೂ ದೇವರ ನೆನೆಯದವ, ಕೈಯ ಮುಗಿಯದವ
ಅಂದು ಗೊತ್ತಿರುವ ಅಷ್ಟೂ ದೇವರುಗಳ ನಾ ಬೇಡಿದ್ದೆ ;

ಮತ್ತದೇ ಅಳುವ ನನ್ನವಳ ಮುಖ ನೆನಪಾಗಿ ....
ನಾಯಿ ಅಟ್ಟಿಸಿಕೊಂಡು ಬಂದಂತೆ ಎದ್ದೆನೋ ಬಿದ್ದೆನೋ.... ಓಡೋಡಿ ಆಸ್ಪತ್ರೆಗೆ ಬಂದರೆ ಯಾರೂ ಇಲ್ಲದ ಕಂಡು
ಮತ್ತದೇ ದುತ್ತನೆ ದುಗುಡ ದುಮ್ಮಾನಗಳ ದುಃಖ .... ಹೇಳಿಕೊಳ್ಳಲಾಗದ ಒಳಗೊಳಗೆ ವಿಚಿತ್ರ ಪ್ರಾಣ ಸಂಕಟ...!!

ಅತ್ತೆ ಮಾವ, ನಾದಿನಿ ಎಲ್ಲಾ....
ಎಲ್ಲಿ ಹಾಳಾಗಿ ಹೋದರೋ.......?
ಎಕ್ಸ್ಯೂಮಿ ಸಿಸ್ಟರ್...... ಪ್ರತೀಕ್ಷಾ ಡೆಲಿವರಿಯಾಯ್ತೇ...? ವಾರ್ಡಿಗೆ ಶಿಫ್ಟ್ ಆಯ್ತೇ....?
ಸಾರಿ ಸರ್ ಅವರು ಹೋಗ್ಬಿಟ್ರು, ಮಾರ್ಚರಿಗೆ ಹೋಗಿ.... ಹ್ಞಾಂ...... ನಿಂತಲ್ಲಿಯೇ... ಕೆಳ ಕುಸಿದಿದ್ದೆ;
ಅರೇ ....! ಬಾವ ಇಲ್ಲೇಕಿದ್ದೀರಿ.....?
ಡಬ್ಬಲ್ ಕಂಗ್ರಾಟ್ಸ್ .... ನಿಮಗೆ,
ಎಲ್ಲಿ ಬಾಯಿ ಹಾ ಮಾಡಿ ,
ನಿಮಗೆ ತ್ರಿವಳಿ ಗಂಡು ಮಕ್ಕಳು .....!!

Sunday, February 23, 2014

" ಆ ಹಾ... ನನ್ನ ಮದುವೆಯಂತೆ "

ಅಬ್ಬಾ ......! ಅಂತೂ....ಇಂತೂ...
ನನಗೂ.... ಬಂತು ಮದುವೆಯ ಯೋಗ,
ಸದ್ಯ ಇವಳಾದರೂ ನನ್ನ ಮೆಚ್ಚಿಕೊಂಡಳಲ್ಲ ;
ವಿದ್ಯಾವತಿ ಗುಣವತಿ, ಮೇಲಾಗಿ ರೂಪವತಿ
ನನಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ ?
ನನ್ನ ಹಂಗಿಸಿ ಆಡಿಕೊಂಡು ನಕ್ಕವರಿಗೆಲ್ಲಾ... 
ಇವಳ ತೋರಿಸಿ ಮೈಯ ಬೆವರಿಳಿಸಬೇಕು...

ನನಗೇನು ರೂಪ ವಿದ್ಯೆ ಇಲ್ಲವೆ ?
ಕಟ್ಟು ಮಸ್ತಿನ ದೃಡಕಾಯ ಶರೀರ
ದೂರದ ನಗರದಿ ಸ್ವಂತ ಮನೆ,
ಕೈ ತುಂಬಾ ಸಂಪಾದನೆಯ ಕೆಲಸ
ಕುಡಿತ ಜೂಜು, ಅಲೆಮಾರಿಯಲ್ಲದ ಬದುಕು
ಏನೋ ಒಂಚೂರು ಬಣ್ಣದಲ್ಲಿ ನಾ ಕಡುಕಪ್ಪು !!
ವಯಸ್ಸು ಮೂವತ್ತಾದರೂ ಮದುವೆಯಾಗದೆ ಕಾದಿದ್ದು
ನನ್ನ ಮೂವರು ಮುದ್ದಿನ ಅಕ್ಕ - ತಂಗಿಯರಿಗಾಗಿ,
ಅವರ ಮದುವೆಯಾಗದೆ ನಾ ಆದರೆ ನ್ಯಾಯ ಸಮ್ಮತವೆ ?

ಹೆತ್ತವರ ಜೊತೆ ಹತ್ತಾರು ಊರುಗಳ ಸುತ್ತಿದರು....
ನೂರಾರು ಹುಡುಗಿಯರ ನಾ ನೋಡಿದರೂ...
ಯಾರೊಬ್ಬರೂ ನನ್ನ ಮೆಚ್ಚಿರಲಿಲ್ಲ , ಒಪ್ಪಿರಲಿಲ್ಲ !!

ಕೊನೆಗೆ, ವಯಸ್ಸಲ್ಲಿ ನನಗಿಂತ ಏಳೆಂಟು ವರ್ಷ ಚಿಕ್ಕವಳಾದ ನನ್ನ ಅತ್ತೆಯ ಮಗಳ ನನ್ನಮ್ಮ ಕೇಳಲು....
ಅಯ್ಯೋ ... ಅತ್ತೆ... ನಿಮಗೆ ಬೇರೆ ಯಾರೂ ಸಿಗಲಿಲ್ಲವೇ...?! ನಾ ಹೋಗಿಹೋಗಿ ಕಾಲ್ ಸೆಂಟರ್ ವರನ ವರಿಸಲೆ ?
ನಿಮ್ಮ ಮಗ ರಾತ್ರಿಯೆಲ್ಲಾ ಕಾಲ್ ಸೆಂಟರ್ ಲ್ಲಿರಲಿ
ನಾನಿಲ್ಲಿ ಇಡೀ ರಾತ್ರಿಯೆಲ್ಲಾ ಕಡ್ಡಿ ಮಿಠಾಯಿ ಚಪ್ಪರಿಸಲೆ ? ಹೋಗಿಹೋಗಿ ಯಾರಾದರು ಕುಂಟಿಯೋ ಕುರುಡಿಯೋ ದಿಕ್ಕುದೆಸೆಯಿಲ್ಲದ ದರಿದ್ರದವಳ ನೋಡಿ ತಾಳಿ ಕಟ್ಟಿಸಿ; ಬಿಡುವಿದ್ದರೆ ಬಂದು ಅಕ್ಷತೆಯ ಹಾಕಿ ಬರುವೆ ಎನ್ನುವುದೆ ?!

Tuesday, February 18, 2014

" ಅನುಮಾನ "

ಛೇ... ನೀವಿಂತವರೆಂದು ಕೊಂಡಿರಲಿಲ್ಲ ನಾ ನಿಮ್ಮನ್ನ,
ಏನೋ ವಿದ್ಯಾವಂತರು, ಮೇಲಾಗಿ ಸಭ್ಯಸ್ಥರು
ನನ್ನ ಪರಿಚಯದವರೆಂದು ಹೆಮ್ಮೆಯಿಂದ
ನನ್ನ ಬಾಲ್ಯದ ಗೆಳತಿಗೆ ಪರಿಚಯಿಸಿ ತಪ್ಪು ಮಾಡಿದೆ;
ಪ್ರೀತಿ ಎನ್ನುವುದು ನಿಮ್ಮ ಹುಡುಗಾಟದ ವಸ್ತು ಏನ್ರೀ... ಮೊದಮೊದಲು ನನಗೂ ಗೊತ್ತಿರಲಿಲ್ಲ
ನಿಮ್ಮಿಬ್ಬರ ಕದ್ದು ಮುಚ್ಚಿ ಪ್ರೀತಿಸಿ, ಪಾರ್ಕು ಸಿನೆಮಾ, ಮಾಲ್ ಎಲ್ಲೆಂದರಲ್ಲಿ ಸಂಧಿಸುವ ವಿಷಯ ನನಗೂ ಗೊತ್ತಾಗಿ
ಶೈಲಳ ಜೊತೆ ರೇಗಾಡಿದ್ದೆ, ಹಾಗೆಯೇ ಅವಳ ಎಚ್ಚರಿಸಿದ್ದೆ ; ಮುಂದೊಂದು ದಿನ ಮದುವೆಯಾಗುವರಲ್ಲ ಎಂದು ಕೊಂಡರೆ ಮಾಡುವುದೆಲ್ಲಾ ಮಾಡಿ, ಈ ಸ್ಥಿತಿಗೆ ಅವಳ ತಂದಿಡುವುದೇ....?

ನೋಡ ಬನ್ನಿ, ಅವಳ ಪರಿಸ್ಥಿತಿ ಏನಾಗಿದೆ ಎಂದು
ಒಂದೇ ಸಮ ವಾಂತಿಯ ಮಾಡಿಮಾಡಿ ನಿಂತ್ರಾಣಳಾಗಿ
ಹೇಗೆ ಮಂಚದ ಮೇಲೆ ಸುಸ್ತಾಗಿ ಮಲಗಿರುವಳೆಂದು ಅವಳಿಗಾದರೂ ಬುದ್ಧಿಯಿಲ್ಲ, ನಿಮಗಾದರೂ ಬೇಡವೆ ? ಮದುವೆಗೆ ಮುಂಚೆ ಇದೆಲ್ಲಾ ನಿಮಗಿಬ್ಬರಿಗೂ ಬೇಕಿತ್ತೆ ?
ಒಂದೇ ಸಮನೆ ಬಡಬಡಿಸಿದ ಕಂಡು ಪೆಚ್ಚಾಗಿದ್ದೆ...!!!

ಏಯ್ ಕ್ಷಮಾ... ಪುಲ್ಸ್ಟಾಪಿಲ್ಲದೆ ಮಾತಾಡಿ, ನನ್ನ ರೇಗಿಸಬೇಡ ಹೀಗೆಲ್ಲಾ ... ನೀ ನನ್ನಾ, ಅವಳ ಅನುಮಾನಿಸ ಬೇಡವೇ... ನಮ್ಮಿಂದ ಅಂತಹ ಯಾವುದೇ ತಪ್ಪಾಗಿಲ್ಲ ಮೊದಲು ತಿಳಿ ಸುಮ್ಮನೆ ಇಲ್ಲದ ರಗಳೆಯ ತರಬೇಡ, ಇದ ಕೇಳಿದವರು
ನಮ್ಮ ಏನೆಂದು ತಿಳಿದಾರು, ನೋಡುವ ನಡೆ...

ಏಯ್ ಗೂಬೇ.... ಏನಾಯಿತೆಂದು ಹೇಳೆ...?
ಈಗ ನಿನಗೆಷ್ಟು ತಿಂಗಳುಗಳು ಬೊಗಳೇ....
ಮಳ್ಳಿಯಂತಿದ್ದವಳು ಮಗುವ ಹೊರುವಂತಾದೆ ನೋಡು...
ನಿನ್ನ ಅಪ್ಪ ಅಮ್ಮನಿಗೆ ಗೊತ್ತಾದರೆ ನನ್ನ ಜನ್ಮ ಜಾಲಾಡಿಸದೆ ಬಿಡರು,
ನಿನ್ನಿಂದಾಗಿ ನನಗೆ ತಲೆಹಿಡುಕಿ ಎಂದು ಹೆಸರು ಕೊಟ್ಟಾರು ...

ಲೇ ಲೇ... ಕ್ಷಮಾ.... ನೀ ಎಂತಹ ಅವಿವೇಕಿಯೇ....?
ನೀನೂ ನನ್ನ ಬಾಲ್ಯದ ಗೆಳತಿ, ಪರಮಾಪ್ತೆ....
ಹೋಗಿ ಆ ಕಲ್ಪನಳ ಕರೆಯೇ... ಅವಳಿಗಿದೆ ಇಂದು ಹಬ್ಬ ಗೊತ್ತಿಲ್ಲವೆ ಅವಳಿಗೆ.... ನಾ ಸಸ್ಯಾಹಾರಿಯೆಂದು
ಬಿಸಿಲಲಿ ಬಂದ ನಮಗೆ, ಮಜ್ಜಿಗೆಯ ಕುಡಿಸಿ
ಅವರಮ್ಮ ಒಳ ಕರೆದು ಚಿಕನ್ ಪ್ರೈ ರುಚಿ ನೋಡೆನ್ನುವುದೆ
ನನಗೆ ವಾಂತಿ ಬರದೆ ಮತ್ತೇನೆ ಬಂದೀತು.....
ನೀ ಹೀಗೆಲ್ಲಾ ಅನುಮಾನಿಸಿ ಎಲ್ಲರ ಗಾಬರಿ ಪಡಿಸಿದೆ....!!!!

Friday, February 14, 2014

" ಹೂವ ರೋಜಾ ಹೂವ "....?

ಹೂವ, ಕಿವಿಗಿಟ್ಟು ಹೋದವಳ ಮರೆತರೂ
ಹಾಳಾದ್ದು ಈ ಪ್ರೇಮಿಗಳ ದಿನದಂದೇ...
ಮತ್ತೆ ಮತ್ತೆ ಬಂದು ನೆನಪಾಗುವಳಲ್ಲ;
ಮಡಿವಂತಿಕೆಯ ಮಾತಿನಲಿ ಮೈಮರೆಸಿ
ಮೋಹದಲಿ ಮೈಚಳಿಯ ಬಿಡಿಸಿ
ಸಂಜೆ ಕಳೆಯುವುದರ ಒಳಗೆ
ಮನದ ಮಲ್ಲಿಗೆಯಾಗಿ ಅರಳಿದ್ದಳು...
ಮೊದಮೊದಲು ಅರಿವಿರದೆ ನಾ ನಂಬಿ
ಹೂವಿಂದ ಹೂವಿಗೆ ಹಾರಿ, ಮಧು ಹೀರಿ
ಹಾರುವ ಬಣ್ಣದ ಚಿಟ್ಟೆಯೆಂದು ಕೊಂಡಿರಲಿಲ್ಲ !
ಬಿಟ್ಟು ಹೋದಳೆಂದು ಬಿಕ್ಕಳಿಸದೆ
ಬಿಡಲಿಲ್ಲ ದಾಡಿ, ಮೀಸೆ
ಕೈಹಿಡಿಯಲಿಲ್ಲ ರಮ್ಮು, ಬೀರಿನ ಸೀಸೆ
ಇವಳಿಲ್ಲದಿದ್ದರೆ ಮತ್ತೊಬ್ಬಳು ಬರುವಳಲ್ಲ ....!!

Thursday, February 13, 2014

" ಪಯಣ "

ಮನಸ್ಸು ಮರ್ಕಟವಿದ್ದಂತೆ
ಎತ್ತ ಬಿಟ್ಟರತ್ತ ಹೊರಳಿ, ಉರುಳಿ
ಎತ್ತೆತ್ತಲೋ .... ಆಂಡಲೆವ
ದೊಂಬರಾಟದ ಬದುಕು ;
ಅದು ಸರಿಯೋ.... ತಪ್ಪೋ....
ತರ್ಕಗಳ ತಾಕಲಾಟಗಳಲ್ಲಿ
ಗಳಿಸಿದ್ದೆಷ್ಟೋ.... ಕಳೆದದ್ದೆಷ್ಟೋ....
ಲೆಕ್ಕಕ್ಕೆ ಸಿಲುಕದ, ನಿಲುಕದ ಅದೆಷ್ಟೋ
ಬಿದ್ದೆದ್ದು ನಿಲ್ಲುವ ಹಠಮಾರಿತನದ ಸೊಲ್ಲು;
ಜನರ ಗುದ್ದಾಟಗಳ ನಡುನಡುವೆ
ಪ್ರೀತಿ ನಂಬಿಕೆ, ವಿಶ್ವಾಸ ದ್ರೋಹಗಳ
ಜ್ಞಾನದ ಮೂಸೆಯೊಳಗೆ ಕರಗಿ, ಬೆಂದೆದ್ದು
ಮನದ ನೋವು ನಲಿವುಗಳ ಜೋಕಾಲಿಯಲಿ
ದುಃಖ ದುಮ್ಮಾನ , ಸನ್ಮಾನಗಳ ತೆರೆಯ ಸರಿಸಿ
ಸಾಗಿದೆ ನಿತ್ಯ ನಿರಂತರ ನಿಲ್ಲದ ಬಾಳ ಪಯಣ....

Tuesday, February 11, 2014

" ಎದ್ದು ಹೋಗಲಿಲ್ಲ "....!!

ಮಧ್ಯ ರಾತ್ರಿಯಲಿ  
ಮಡದಿ ಮಕ್ಕಳ ಬಿಟ್ಟು,
ನಾ ಎದ್ದು ಹೋಗಲಿಲ್ಲ;
ಆಸೆಯೇ ದುಃಖಕ್ಕೆ ಮೂಲವೆಂದು
ಈ ಲೋಕಕ್ಕೆ ಸಾರಿ ಸಾರಿ ಹೇಳಲು
ಇಡೀ ಜಗತ್ತಿನ ಜನರ ಮನಗೆದ್ದ
ಆ ಭಗವಾನ್ ಬುದ್ಧನಂತೆ ! 

ಆ ಬುದ್ಧನಿಗೆ ಬದ್ಧತೆಯೂ ಇತ್ತು
ಲೋಕ ಕಲ್ಯಾಣಾರ್ಥಂ
ಇದಂ ಶರೀರಂ ಎಂದು;  
ನನಗೋ ಬದ್ಧತೆಯೂ ಇಲ್ಲ,
ಮೇಲಾಗಿ ಪ್ರಭುದ್ಧತೆಯೂ ಇಲ್ಲವೇ ಇಲ್ಲ
ಕೇವಲ ಕಾಮಾರ್ಥಂ ಇದಂ ಶರೀರಂ !

" ಕನಸುಗಳ ಭೃಂಗದ ಬೆನ್ನೇರಿ "

ಕಡಿವಾಣವಿಲ್ಲದ
ಕನಸುಗಳು,
ಗರಿಗೆದರಿ ನರ್ತಿಸುತ್ತಿರಲು
ನನ್ನನ್ನೇ ಬಳಸಿ ಬಂದಿಸಿರಲು
ಕಾಮನ ಬಿಲ್ಲಿಗೆ
ಎದೆಕೊಟ್ಟು ಮೈಮರೆತಿರೆ
ಮಾನಿನಿಯ ಸಂಗ ಸುಖ
ಬಿಟ್ಟೀತೆ ಬೆವರಿಳಿಸದೇ....

Monday, February 3, 2014

ಅಂತಃಕರಣ - ೨

ಮೈನೆರೆದ ಮಗಳ ಸ್ನಾನಕ್ಕೆಂದು 
ಸ್ಟವ್ ಮೇಲಿಟ್ಟ ನೀರು ಕುದಿಯುತ್ತಿದ್ದರೆ
ನನ್ನ ಒಳ ಮನಸ್ಸು ಅಷ್ಟೇ ತರ್ಕಿಸುತ್ತಿತ್ತು
ಇಷ್ಟು ದಿನ ನಾನೇ ಸ್ನಾನಾದಿಗಳ ಮಾಡಿಸಿದ್ದರೂ
ಇಂದೇಕೋ ಮನ ಹಿಂಜರಿಕೆಯಿಂದ ತೋಯ್ದಾಡಿ
ದ್ವಂದ್ವಗಳ ಘರ್ಷಣೆಗೆ ಮಮ್ಮುಲ ಮರುಗಿತ್ತು;
ಇಂತಹ ಪರಿಸ್ಥಿತಿ ಯಾವ ಅಪ್ಪಂದಿರಿಗೂ
ಯಾವ ಕಾಲಕ್ಕೂ ಬರುವುದು ಬೇಡವೇ ಬೇಡ ?
ಯಾರಾದರು ಮುತ್ತೈದೆಯರ ಕರೆದು,
ಋುತುಮತಿಯ ಶಾಸ್ತ್ರವ ಮುಗಿಸುವ ಎಂದರೆ
ಅಕ್ಕಪಕ್ಕ ಯಾವುದೇ ಮನೆಗಳೂ ಇಲ್ಲ
ಪರಿಚಯದ ಯಾವ ತಾಯಂದಿರೂ ಇಲ್ಲ
ಬೇರೆ ಗತಿಯಿಲ್ಲದೆ, ನನ್ನ ಕರ್ತವ್ಯವ ಮಾಡಲೇ ಬೇಕು
ನನ್ನವಳು ಇದ್ದಿದ್ದರೆ ಇಷ್ಟೆಲ್ಲಾ ಯೋಚಿಸುವಂತಿತ್ತೇ....
ಒಂದೆರಡು ಚೆಂಬು ಮಗಳ ತಲೆಯ ಮೇಲೆ
ನೀರ ಹಾಕಿದ ಶಾಸ್ತ್ರ ಮಾಡಬೇಕೆಂದು ಕೊಂಡಾಗಲೇ....!

ಗರ್ ಪೆ ಕೋಹಿ ಅಂದರ್ ಹೈ....
ಅರೇ ಆಂಟೀ.... ಆಪ್ ಇದರ್, ಕೈಸೆ ಪತಾ ಚಲಾ... ಆಯಿಯೇ... ಅಂದರ್ ಆಯಿಯೇ....
ಮಗಳ ಗೆಲುವಿನ ಕರೆಯ ಕಂಡು ಹೊರ ಬಂದಿದ್ದೆ; ಜೊತೆಜೊತೆಯಲ್ಲಿ ಸಪ್ತಪದಿ ತುಳಿದ ನನ್ನವಳು...!!!
ಅವಳನ್ನ ನನ್ನ ಕಣ್ಣಾರೆ ಕಂಡರೂ ನಂಬದವನಾಗಿದ್ದೆ
ಇದೇನು ಭ್ರಮೆಯೋ ಅಥವಾ ಕನಸೋ, ವಾಸ್ತವವೋ
ಒಂದೂ ತಿಳಿಯದೆ ಗರಬಡಿದವನಾಗಿದ್ದೆ !

ಮಹೀ... ನೀವೇ... ಬಂದು ಎದೆಗೊರಗಿದ್ದಳು
ನನ್ನ ಮುದ್ದಿನ ಮಡದಿ,
ಕಣ್ಣ ಮುಂದೆಯೇ ಅತ್ತೆ ಮಾವ, ನನ್ನ ಕೈಹಿಡಿದವಳು ಕೇದಾರೇಶ್ವರನ ತಪ್ಪಲಿನಲ್ಲಿ ಮೇಘ ಸ್ಪೋಟದಿಂದ
ಸುರಿದ ಮಳೆಯಿಂದಾಗಿ, ನೀರ ಸೆಳತಕೆ
ಸಿಲುಕಿ ಕೊಚ್ಚಿ ಹೋದಾಗ ನಾನೂ ಸಾಯಬೇಕಿತ್ತು;
ಈ ನನ್ನ ಎರಡು ವರ್ಷದ ಪೋರಿಗಾಗಿ ಬದುಕಿದ್ದೆ ..