Tuesday, February 25, 2014

" ಸತ್ಯಂ ಶಿವಂ ಸುಂದರಂ "

ಅಯ್ಯೋ ...! ಬಾವ, ಇಲ್ಲಿರುವುದ ಬಿಟ್ಟು
ಅದೆಲ್ಲಿ ಮಾಯವಾಗಿ ಹೋದಿರಿ ಬೇಗ ಬನ್ನಿ,
ಒಂಚೂರು ಜವಾಬ್ದಾರಿ ಎಂಬುದೇ ಇಲ್ಲ ನಿಮಗೆ
ಒಂದು ಕ್ಷಣ ನಾದಿನಿಯ ಮಾತ ಕೇಳಿ ಬೆಚ್ಚಿದ್ದೆ ;

ಸ್ಪಷ್ಟವಾಗಿ ಏನೂ ಕೇಳಿಸದೆ ಅರ್ಧಲ್ಲಿಯೇ ಮಾತು ನಿಂತಿತ್ತು ! ಹಾಳಾದ್ದು ಈ ಮೊಬೈಲ್ ಫೋನ್ ಈಗಲೇ ಕೈಕೊಡಬೇಕೆ ? ಅತ್ತ, ಕರೆ ಮಾಡಿದರೆ ನಾಟ್ ರೀಚೆಬಲ್ ಉತ್ತರ ....
ಮತ್ತೆ ಪ್ರಯತ್ನಿಸಿದರೆ ನೀವು ಸಂಪರ್ಕಿಸುತ್ತಿರುವ ಗ್ರಾಹಕರು ಬೇರೆ ಕರೆಯಲ್ಲಿ ಕಾರ್ಯ ನಿರತರಾಗಿದ್ದಾರೆ
ಸ್ವಲ್ಪ ಸಮಯದ ನಂತರ ಬಿಟ್ಟು ಪ್ರಯತ್ನಿಸಿ....
ಮೊದಲೇ ಧ್ವನಿ ಮುದ್ರಿತ ಉಲಿದ ಕೋಕಿಲ ದನಿ....

ಕೋಪದ ರಬಸಕ್ಕೆಸೆದ ಫೋನ್ ಚೂರುಚೂರಾಗಿತ್ತು
ನನ್ನವಳ ನಾ ಹೀಗೆ , ಲೇಬರ್ ವಾರ್ಡಿನಲ್ಲಿಯೇ ಬಿಟ್ಟು
ಎಳನೀರ ತರಲೆಂದು, ಹಿಂದು ಮುಂದೆ ಯೋಚಿಸದೆ
ನಾ ಇಷ್ಟು ದೂರ ನಡೆದು ಬರ ಬಾರದಾಗಿತ್ತು.....!!!

ನನ್ನವಳಿಗೇನಾಯಿತೋ....!! ಒಂದೇ ಎರಡೇ...
ನೂರಾರು ಆತಂಕಗಳು ಒಮ್ಮೆಲೇ ಮುತ್ತಿಕ್ಕಿ,
ನಿಂತಲ್ಲಿ ನಿಲ್ಲಲಾಗದೆ ತಡಬಡಿಸಿದ್ದೆ;
ಮೊದಲೆರಡು ಸಲ ಅವಳಿಗಾದ ಗರ್ಭಪಾತಕೆ
ಎಷ್ಟು ಒದ್ದಾಡಿದ್ದಳು, ಇಡೀ ರಾತ್ರಿಯೆಲ್ಲಾ ಅದೆಷ್ಟು
ಒಂದೇ ಸಮ ಅತ್ತಿದ್ದಳು, ಹೀಗೇಕೆ ತನಗೆಂದು
ನನಗೆ ಹೀಗೆಯೇ ಆದರೆ, ಮುಂದೆ ಮಕ್ಕಳಾದಂತೆ ರ್ರೀ....
ನಾ ಎಷ್ಟೇ ಸಂತೈಸಿದರೂ ಎದೆಗೊರಗಿ ಬಿಕ್ಕಿದ್ದಳು....

ಕಣ್ಣಂಚಲಿ ಜಿನುಗಿದ ನೀರು ಕೆನ್ನೆಯ ತೋಯಿಸಿದರೆ
ನಾ ಎಂದೂ ದೇವರ ನೆನೆಯದವ, ಕೈಯ ಮುಗಿಯದವ
ಅಂದು ಗೊತ್ತಿರುವ ಅಷ್ಟೂ ದೇವರುಗಳ ನಾ ಬೇಡಿದ್ದೆ ;

ಮತ್ತದೇ ಅಳುವ ನನ್ನವಳ ಮುಖ ನೆನಪಾಗಿ ....
ನಾಯಿ ಅಟ್ಟಿಸಿಕೊಂಡು ಬಂದಂತೆ ಎದ್ದೆನೋ ಬಿದ್ದೆನೋ.... ಓಡೋಡಿ ಆಸ್ಪತ್ರೆಗೆ ಬಂದರೆ ಯಾರೂ ಇಲ್ಲದ ಕಂಡು
ಮತ್ತದೇ ದುತ್ತನೆ ದುಗುಡ ದುಮ್ಮಾನಗಳ ದುಃಖ .... ಹೇಳಿಕೊಳ್ಳಲಾಗದ ಒಳಗೊಳಗೆ ವಿಚಿತ್ರ ಪ್ರಾಣ ಸಂಕಟ...!!

ಅತ್ತೆ ಮಾವ, ನಾದಿನಿ ಎಲ್ಲಾ....
ಎಲ್ಲಿ ಹಾಳಾಗಿ ಹೋದರೋ.......?
ಎಕ್ಸ್ಯೂಮಿ ಸಿಸ್ಟರ್...... ಪ್ರತೀಕ್ಷಾ ಡೆಲಿವರಿಯಾಯ್ತೇ...? ವಾರ್ಡಿಗೆ ಶಿಫ್ಟ್ ಆಯ್ತೇ....?
ಸಾರಿ ಸರ್ ಅವರು ಹೋಗ್ಬಿಟ್ರು, ಮಾರ್ಚರಿಗೆ ಹೋಗಿ.... ಹ್ಞಾಂ...... ನಿಂತಲ್ಲಿಯೇ... ಕೆಳ ಕುಸಿದಿದ್ದೆ;
ಅರೇ ....! ಬಾವ ಇಲ್ಲೇಕಿದ್ದೀರಿ.....?
ಡಬ್ಬಲ್ ಕಂಗ್ರಾಟ್ಸ್ .... ನಿಮಗೆ,
ಎಲ್ಲಿ ಬಾಯಿ ಹಾ ಮಾಡಿ ,
ನಿಮಗೆ ತ್ರಿವಳಿ ಗಂಡು ಮಕ್ಕಳು .....!!

No comments:

Post a Comment