Monday, February 3, 2014

ಅಂತಃಕರಣ - ೨

ಮೈನೆರೆದ ಮಗಳ ಸ್ನಾನಕ್ಕೆಂದು 
ಸ್ಟವ್ ಮೇಲಿಟ್ಟ ನೀರು ಕುದಿಯುತ್ತಿದ್ದರೆ
ನನ್ನ ಒಳ ಮನಸ್ಸು ಅಷ್ಟೇ ತರ್ಕಿಸುತ್ತಿತ್ತು
ಇಷ್ಟು ದಿನ ನಾನೇ ಸ್ನಾನಾದಿಗಳ ಮಾಡಿಸಿದ್ದರೂ
ಇಂದೇಕೋ ಮನ ಹಿಂಜರಿಕೆಯಿಂದ ತೋಯ್ದಾಡಿ
ದ್ವಂದ್ವಗಳ ಘರ್ಷಣೆಗೆ ಮಮ್ಮುಲ ಮರುಗಿತ್ತು;
ಇಂತಹ ಪರಿಸ್ಥಿತಿ ಯಾವ ಅಪ್ಪಂದಿರಿಗೂ
ಯಾವ ಕಾಲಕ್ಕೂ ಬರುವುದು ಬೇಡವೇ ಬೇಡ ?
ಯಾರಾದರು ಮುತ್ತೈದೆಯರ ಕರೆದು,
ಋುತುಮತಿಯ ಶಾಸ್ತ್ರವ ಮುಗಿಸುವ ಎಂದರೆ
ಅಕ್ಕಪಕ್ಕ ಯಾವುದೇ ಮನೆಗಳೂ ಇಲ್ಲ
ಪರಿಚಯದ ಯಾವ ತಾಯಂದಿರೂ ಇಲ್ಲ
ಬೇರೆ ಗತಿಯಿಲ್ಲದೆ, ನನ್ನ ಕರ್ತವ್ಯವ ಮಾಡಲೇ ಬೇಕು
ನನ್ನವಳು ಇದ್ದಿದ್ದರೆ ಇಷ್ಟೆಲ್ಲಾ ಯೋಚಿಸುವಂತಿತ್ತೇ....
ಒಂದೆರಡು ಚೆಂಬು ಮಗಳ ತಲೆಯ ಮೇಲೆ
ನೀರ ಹಾಕಿದ ಶಾಸ್ತ್ರ ಮಾಡಬೇಕೆಂದು ಕೊಂಡಾಗಲೇ....!

ಗರ್ ಪೆ ಕೋಹಿ ಅಂದರ್ ಹೈ....
ಅರೇ ಆಂಟೀ.... ಆಪ್ ಇದರ್, ಕೈಸೆ ಪತಾ ಚಲಾ... ಆಯಿಯೇ... ಅಂದರ್ ಆಯಿಯೇ....
ಮಗಳ ಗೆಲುವಿನ ಕರೆಯ ಕಂಡು ಹೊರ ಬಂದಿದ್ದೆ; ಜೊತೆಜೊತೆಯಲ್ಲಿ ಸಪ್ತಪದಿ ತುಳಿದ ನನ್ನವಳು...!!!
ಅವಳನ್ನ ನನ್ನ ಕಣ್ಣಾರೆ ಕಂಡರೂ ನಂಬದವನಾಗಿದ್ದೆ
ಇದೇನು ಭ್ರಮೆಯೋ ಅಥವಾ ಕನಸೋ, ವಾಸ್ತವವೋ
ಒಂದೂ ತಿಳಿಯದೆ ಗರಬಡಿದವನಾಗಿದ್ದೆ !

ಮಹೀ... ನೀವೇ... ಬಂದು ಎದೆಗೊರಗಿದ್ದಳು
ನನ್ನ ಮುದ್ದಿನ ಮಡದಿ,
ಕಣ್ಣ ಮುಂದೆಯೇ ಅತ್ತೆ ಮಾವ, ನನ್ನ ಕೈಹಿಡಿದವಳು ಕೇದಾರೇಶ್ವರನ ತಪ್ಪಲಿನಲ್ಲಿ ಮೇಘ ಸ್ಪೋಟದಿಂದ
ಸುರಿದ ಮಳೆಯಿಂದಾಗಿ, ನೀರ ಸೆಳತಕೆ
ಸಿಲುಕಿ ಕೊಚ್ಚಿ ಹೋದಾಗ ನಾನೂ ಸಾಯಬೇಕಿತ್ತು;
ಈ ನನ್ನ ಎರಡು ವರ್ಷದ ಪೋರಿಗಾಗಿ ಬದುಕಿದ್ದೆ ..


2 comments:

  1. ಒಳ್ಳೆಯ twist ಇದು. ಸಮಸ್ಯೆಗೂ ಪರಿಹಾರ ಸಿಕ್ಕಂತಾಯಿತು.

    ReplyDelete
  2. ನಾ ಇಲ್ಲಿ ಆತ್ಮೀಯ ಮಿತ್ರರಾದ ಶ್ರೀ ರಾಜೇಂದ್ರ ಬಿ ಶೆಟ್ಟಿಯವರ ನೆನೆಯಲೇ ಬೇಕು, ಭಾಗ - ೧ ಬರೆದಾಗ ಅದರಲ್ಲಿನ ಕೆಲ ವಿಷಯಗಳ ಕುರಿತು ಎತ್ತಿದ ಪ್ರಶ್ನೆ; ನನ್ನಿಂದ ಉತ್ತರ ಬಯಿಸಿದ್ದು ಹಾಗೆಯೇ ಭಾಗ - ೨ ಬರೆಯಲು ಕಾರಣ ಕರ್ತರಾಗಿದ್ದು ಸದಾ ನನ್ನ ಬರವಣಿಗೆಗೆ ಪ್ರೋತ್ಸಾಯಿಸಿ ಬೆಂಬಲವಾಗಿ ನಿಂತ ನಿಮಗೂ ನನ್ನ ಅನಂತ ಅನಂತ ವಂದನೆಗಳು ಬದರಿಜಿ.

    ReplyDelete