Friday, October 19, 2018

ಹಸಿವು

ತುಂಬಾ
ಹಸಿವಾಗುತ್ತಿದೆ
ಏನಿದೆಯೋ ಅದನ್ನೆ
ತಂದು ಬೇಗ ಬಡಿಸು,
ತಿಂದು ಹಾಗೆಯೇ
ಒಂದು ಸಣ್ಣ ನಿದ್ರೆಗೆ ಜಾರುವೆ
ಎದ್ದ ಮೇಲೆ ಇದ್ದೇ ಇದೆ
ನಿನ್ನ ಹಬ್ಬದ ಊಟ.
ತುಂಬಾ ಬಿಸಿಯೆಂದು
ಕೂಗಾಡಿದಿರೋ‌... ಗೊತ್ತಲ್ಲ
ನಾ ಸಿಟ್ಟಲ್ಲೇ...
ಮೊದಲು ತಂದು ಬಡಿಯೆ
ಹೆದರಿ ಬರುವಳೆಂದು ಕೊಂಡರೆ
ಲಟ್ಟಣಿಗೆಯ ಹಿಡಿದು ಬರಬೇಕೆ ?

ಕಾವ್ಯಕನ್ನಿಕೆ ಎಂಬ ಯಕ್ಷಿಣಿ

ನನ್ನವಳು
ಒಂದೇ ಒಂದು ಕ್ಷಣ
ಕಣ್ಮರೆಯಾದರು ಸಾಕು,
ಅದೆಲ್ಲಿಂದಲೋ....
ಓಡೋಡಿ ಬಂದು ಮುತ್ತಿಕ್ಕಿ;
ಇದ್ದಕ್ಕಿದ್ದಂತೆ ಮಾಯವಾಗುವ
ಇವಳ ಏನೆಂದು ಕರೆಯಲಿ
ಮೈ ಮನಸ್ಸಿನ ತುಂಬೆಲ್ಲ
ಆವರಿಸಿದಂತ್ತೆಲ್ಲ
ನನ್ನೊಳಗೊಳಗೇ ಖುಷಿ.
ಬಂದಾಗ ಸುಮ್ಮನಿದ್ದು
ಬಿಡಬೇಕೆಂದರೂ
ಅವಳ ಹಠದ ಮುಂದೆ
ನಾ ಮಂಡಿಯೂರಲೇ ಬೇಕು.

ದಾಸಾನುದಾಸ

ನಾಲ್ಕೈದು
ತಿಂಗಳುಗಳಿಂದ ಒಮ್ಮೆಯೂ
ಬಳಿ ಬರದವಳು
ಇಂದು ಇದ್ದಕ್ಕಿದ್ದಂತೆ ಬಂದಿಹಳು
ಹೂಮಾಲೆ ಹಿಡಿದು
ಮನದ ಮುಂಬಾಗಿಲಿಗೆ.
ಇವಳೆಣಿಸಿದಂತೆ ಎಲ್ಲವೂ
ಆಗಲೇ ಬೇಕೆನೋ.‌..
ಊಹೆಗೂ ನಿಲುಕದೆ,
ನನ್ನ ಲಕ್ ಲೆಕ್ಕಾಚಾರದ ತರ್ಕಕೂ ಸಿಗದೆ
ಕಾಡುವ ಇವಳ
ಅದೆಷ್ಟು ಬಾರಿ ಗೋಗರೆದು
ಕಾಯ ವಾಚ, ಮನಸಾರೆ ಆರಾಧಿಸಿದ್ದೆ
ಎಲ್ಲಿಲ್ಲದ ಬಿಗುಮಾನಕೆ, ಅಸಡ್ಡೆಗೆ
ಠೂ.... ಬಿಟ್ಟುರೂ
ಸೋತು ಬಂದವಳ ಮುಂದೆ
ಮನಸ್ಸು ಮಾತ್ರ ಕುರಿಯ ಮಂದೆ..