Sunday, April 28, 2013

" ಹೀಗೂ ಉಂಟೇ "

ನನ್ನವಳ ಮೊದಲ ಬಸಿರಿನ
ಬಯಕೆಗಳ ಪಟ್ಟಿ ದಿನದಿನಕ್ಕೆ
ಹನುಮಂತನ ಬಾಲದಂತೆ
ಬೆಳೆಯುತಲಿತ್ತು, ಸಾಕಾಗಿತ್ತು

ಆ ಡಾಕ್ಟರ್ ಬೇರೆ ಹೆದರಿಸಿದ್ದು
ನಿಮ್ಮವಳ ಚೆನ್ನಾಗಿ ನೋಡಿಕೊಳ್ಳಿ
ಶಕ್ತಿಯಲಿ, ರಕ್ತದಲಿ ಸ್ವಲ್ಪ ವೀಕು
ಹಸಿ ತರಕಾರಿ, ಸೊಪ್ಪು ಈ ಟಾನೀಕು
ಸಮಯಕ್ಕೆ ಸರಿಯಾಗಿ ಈ ಮಾತ್ರೆ
ಕೊಟ್ಟು ಆಗಾಗ ಬಂದು ಪರೀಕ್ಷಿಸಿಕೊಳ್ಳಿ

ಮೊದ ಮೊದಲು ಏನೂ ತಿನ್ನದಿದ್ದವಳು
ಐದಾರು ತಿಂಗಳುಗಳು ಉರುಳಲು
ಉಳಿತಾಯದ ಹಣ ಕರಗತೊಡಗಿತು
ದಿನಕ್ಕೊಂದು ಆಸೆ, ನನಗೋ ಹಿಂಸೆ
ಮಕ್ಕಳ ಹಾಗೆ ಚಂಡಿಹಿಡಿಯುತ್ತಿದ್ದಳು

ಹಣ ಖರ್ಚಾದರೂ ಒಳಗೊಳಗೆ ಖುಷಿ
ಅವಳು ದುಂಡು ದುಂಡಾದುದ ಕಂಡು
ಮುವತ್ತೈದಿದ್ದವಳು ಎಂಬತ್ತಕ್ಕೇರಿದ್ದಳು
ಆಗಾಗ ರೇಗೆಸುತ್ತಿದ್ದೆ, ಗಜಗಮನೆಯೆಂದು
ಹುಸಿ ಮುನಿಸ ಬೀರಿ, ಸುಮ್ಮನಾಗುತ್ತಿದ್ದಳು

ಇನ್ನೇನು ತವರು ಮನೆಗೆ ಕಳಿಸಬೇಕು
ಅವಳ ಹೊಸ ಬಯಕೆಯ ಕೇಳಿ ನನಗೆ
ನಗುವೋ ನಗು! ಈ ಪ್ರಪಂಚದೊಳಗೆ
ಹೀಗೂ ಉಂಟೇ?! ಗಂಡನಾದವನು
ಹೆಣ್ಣಿನ ವೇಷಧರಿಸಿ ಸುತ್ತಾಡುವುದೇ ?

ದಮ್ಮಯ್ಯ, ಈ ಒಂದು ಆಸೆಯ ಬಿಟ್ಟು
ಬೇರೆ ಏನನ್ನಾದರು ನೀ ಕೇಳಬಾರದೆ
ಖಂಡಿತ ಸಾಲ ಮಾಡಿ ಕೊಡಿಸುವೆ
ಪರಿಪರಿಯಾಗಿ ಬೇಡಿದರೂ ಒಪ್ಪಲಿಲ್ಲ

ಕಾಲೇಜಿನ ನಾಟಕದಲ್ಲಿ ಸತ್ಯಭಾಮೆಯಾಗಿ
ಸಾವಿರಾರು ಜನರೆದಿರು ಅಭಿನಯಿಸಿದ್ದು
ನಾ ಬಲ್ಲೆ, ಈ ಚಿಕ್ಕ ಆಸೆಯ ನೆರವೇರಿಸಿ
ಇಲ್ಲವಾದರೆ ನಮ್ಮಿಬ್ಬರನ್ನೂ ಮರೆಯಿರಿ

ಕಾಲೇಜಿನ ನಾಟಕದ ಸತ್ಯಭಾಮೆಯ
ವಿಡಿಯೋ ತೋರಿಸಿದ್ದು ನನ್ನ ತಪ್ಪು
ಎಲ್ಲಿ ಅಭಿನಯಿಸಿ ತೋರಿಸಿ, ಆಕೆಯ
ಒನಪು ವಯ್ಯಾರ, ಹಾವಾ ಭಾವವ
ನಾ ಸೀರೆಯುಟ್ಟು ತೋರಿಸಿದ್ದಾಯ್ತು

ಅವಳದೊಂದೇ ಹಟ ಸಾರ್ವಜನಿಕವಾಗಿ
ಜೊತೆ ಜೊತೆಗೆ ಹೆಜ್ಜೆಯಾಕ ಬೇಕಂತೆ
ಬಿಡಳಿವಳು, ಬೆನ್ನೆತ್ತಿದ ಬೇತಾಳದಂತೆ
ಕೊನೆಗೆ ನಾನೇ ಸೋತೆ, ಶರತ್ತು ತಿಳಿಸಿ

ನಿನ್ನ ಜೊತೆ ಬರುವುದಷ್ಟೇ ನನ್ನ ಕೆಲಸ
ಸೀರೆಯುಟ್ಟು ಹೇಗೆ ಬರುವೆ ಎಂಬುದ
ನೀ ಕೇಳ ಬಾರದು, ತರಿಸು ಬುರ್ಕಾವ
ಕರೆ ನಿನ್ನ ಸ್ನೇಹಿತೆ ಸಭೀನಭಾನುವನ್ನ

ಇರಲಿ ಅವಳು ಸಹ ನಮ್ಮ ಜೊತೆಗೆ
ಸೀರೆಯುಟ್ಟು ಅದರ ಮೇಲೆ ಬುರ್ಖಾ
ತೊಟ್ಟು, ನಡೆಯೆಂದೆ ಮಾತಾಡದೇ
ನನ್ನ ಹಿಂಬಾಲಿಸಿದಳೆನ್ನಿ ಮನದನ್ನೆ !

Thursday, April 11, 2013

ಯುಗಾದಿ ಸಂಬಂಧಗಳ ಬುನಾದಿ

ಯುಗಕೆ ಯುಗಾದಿ ಬಂದಿತೆಂದರೆ 
ಚೈತ್ರದ ಸಿರಿ ಸೊಬಗು ಈ ಧರೆಗೆ 

ಸುತ್ತ ಮುತ್ತ ಕಂಡ ಹಸಿರ ರಾಶಿಗೆ 
ಸೋಲದಿರದು ಮನ ಸಸ್ಯಕಾಶಿಗೆ

ಹೊಂಗೆ ಹೂವ ನೆರಳ ತಂಪಿನೊಳು 
ಮಾವು-ಬೇವು ಸೊಂಪ ಕಂಪಿನೊಳು 

ಕುಹೂ ಕುಹೂ ಗಾನದ ಇಂಪಿನೊಳು 
ಮನವು ಮತ್ತೆಮತ್ತೆ ಹಾಡಿ ಕುಣಿಯದೆ

ವರ್ಷಕ್ಕೊಮ್ಮೆ ಹೊಸತು , ಎನಿತಿನಿತು
ಸೃಷ್ಟಿ-ಸ್ಥಿತಿಯ-ಲಯದ ಬದುಕೊಳು

ಪೊರೆಯ ಕಳಚಿ, ಚಿಗುರನುಣಿಸಿ, ಹರಸಿ 
ಅರಳಿ ಕೊರಳ ದಬ್ಬಿ,ಸೋಕೊ ಗಾಳಿಗೆ

ನಿನ್ನ ಕಂಡ ಕ್ಷಣದಿ, ಆ ನಿನ್ನ ಪ್ರೀತಿ ಮಳೆಗೆ 
ನನ್ನ ಎದೆಯ ನವಿಲು, ಕುಣಿದು ನಲಿಯದೆ 

ಮನಕೆ ಮನೆಗೆ ನೂರು ಹರುಷ ತಂದಿದೆ 
ಯುಗದ ಜಗಕೆ ,ನವ ಸಂವತ್ಸರ ಬಂದಿದೆ

ನಿನ್ನ ನಗೆಯ ಪ್ರೀತಿ ಸ್ಪರ್ಷ ಚೈತ್ರದಸಿರು
ಮನದ ಮರಗಳಲ್ಲಿ, ರೆಂಬೆ ಕೊಂಬೆ ಗಳಲ್ಲಿ

ಚಿಗುರ ಸಿರಿಯು ಹೊಮ್ಮಿ ತುಂಬಿ ಚಿಮ್ಮಿದೆ
ನವ ತಾರುಣ್ಯದ ಲಾಲಿತ್ಯವಎನಗೆ ತಂದಿದೆ

ಬೇವು-ಬೆಲ್ಲವ ಮೆಲ್ಲಲು ಮನ, ಈ ದಿನ
ಜೇನ ನುಡಿಯ ಕೇಳಲು ಪ್ರತೀಕ್ಷಣ ನನ್ನ

ಆಸೆ, ಹಾರೊ ಹಕ್ಕಿಯಾಗೆ ಹಾರುವಾಸೆಗೆ
ಗಗನ ಚುಕ್ಕಿ, ಮುತ್ತನಿಕ್ಕಿ ತನುವ ಮರಸಿದೆ

Wednesday, April 3, 2013

" ಮನವ ಕದ್ದ ನನ್ನತ್ತೆಯ ಮಗಳೆ "

ಕಂಡಿರೇನು ನೀವು ನನ್ನವಳ
ಕೇದಿಗೆ ಹೂ ಮೈ ಬಣ್ಣದವಳ
ನಿಮ್ಮಲೆಲ್ಲೋ ಅಡಗಿ ಕೂತು
ನನ್ನ ಮನವ ಕದ್ದು ಹೋದವಳ
ಕರೆಯಲ್ಹೇಗೆ ನಾ ಹೆಸರ ತಿಳಿಯೆ
ಕಣ್ಣಿನಲ್ಲೇ ಮನದ ಕದವ ತೆರೆದು
ನಗೆಯ ಬಣ್ಣದೋಕುಳಿಯ ಚೆಲ್ಲುತ
ದುಂಬಿಯಾಗಿ ಬಂದು ಹೋದಳೇಕೆ
ಒಲವಿನ ಹಣತೆಯ ಮನದಲ್ಲಿಟ್ಟು
ಕನಸಿನೆಣ್ಣೆಯ ಸುರಿದು ಮುತ್ತನಿಟ್ಟು
ನರ ನರದಿ ನಾಟ್ಯವಾಡಿ ಹೋದಳು
ಮಧುರ ನೆನಪು ಭಿತ್ತಿ ಹೋದಳೇಕೆ
ನಾ ಹೇಗೆ ಮರೆಯಲೇಳಿ ಅವಳ
ನಾ ಹೇಗೆ ತೊರೆಯಲೇಳಿ ನೆನಪ
ನಾ ಹೇಗೆ ಕಾಲ ಕಳೆಯಲೇಳಿ ಒಂಟಿ
ಮುದ್ದು ಮುಖವೆ ನನ್ನ ಮುತ್ತುತ್ತಿರಲು
ನನ್ನ ಮನದ ಒಲವ ತಿಳಿಸಿ ಹೇಳಿ
ಎರಡು ಜಡೆಯ, ಹಂಸ ನಡೆಯ
ಗುಳಿ ಕೆನ್ನೆಯ, ಕಪ್ಪು ಮುಂಗುರುಳ
ನೀಳ ದೇಹದರಸಿ ಮೀನಾಕ್ಷಿಗೇಳಿ
ಲಜ್ಜೆ ಕಂಗಳ, ಗೆಜ್ಜೆ ಕಾಲ್ಗಳ ಸದ್ದಿಗೆ
ಎದೆ ಝಲ್ ಝಲ್ ಎಂದೆನುತವಳ
ಮುಖ ಕಮಲ ಕಂಡೊಡೆ ನನ್ನಲೇಕೆ
ಬಿರಿದ ತುಟಿ ಮಾತಾಡದಾಯ್ತೇಕೆ
ಕನಸ ಕಾಣುತ್ತಿದ್ದವನಿಗೆ ಪಾನಕವಿತ್ತು
ನನ್ನ ಕರೆಯ ಬಂದವಳ ಕರೆಗೆ ಸೋತು
ನಾ ಹಿಂದೆ ಹಿಂದೆ ಹೋದೆ ಮೈ ಮರೆತು
ನನ್ನ ಚಿತ್ತ ಕದ್ದ ಚಂದ್ರ ಚಕೋರಿ ಬಳಿಗೆ
ನಾಚಿಕೆಗೆ ನೀರಾಗಿ ಕರಗಿ , ನನ್ನೆದೆಗೆ
ಒರಗಿ, ನಾ ಯಾರೆಂದು ತಿಳಿಯೆ ನೀ
ಯಾರೆಂಬುದ ಬಲ್ಲೆ ನನ್ನತ್ತೆಯ ಮಗನೆ
ಕೈಹಿಡಿದು ಹುಸಿ ಮುನಿಸ ಬೀರಿದಳು