Saturday, September 28, 2013

ಅವರೇನೂ ಮಾಡ್ಲಿಲ್ಲ !!!

ಹೌದೇನೇ ಸುಗುಣಾ...,
ನಾ ಕೇಳಿದ್ದು ನಿಜವೆ
ಅಳಿಯಂದಿರು ಇತ್ತೀಚೆಗೆ
ಏನೋ ಯಡವಟ್ಟು
ಮಾಡಿ ಕೊಂಡರಂತೆ
ಆ ಕೆಲಸದವಳ ಜೊತೆಗೆ;
ನಾ ಮೊದಲೇ ಬಡ್ಕೊಂಡೆ
ಆ ನಿನ್ನ ಗಂಡನ ಮೇಲೆ
ಸದಾ ಒಂದು ಕಣ್ಣಿಟ್ಟಿರು,
ಜಡೆಯ ಕಂಡರೆ ಸಾಕು
ಈ ಗಂಡಸರ ಕೈಕಾಲು
ನೆಲದ ಮೇಲೆ ನಿಲ್ಲಲ್ಲ
ಆಕಾಶದಲ್ಲಿ ಹಾರಾಡುತ್ತೆ;
ಈಗ ಅನುಭವಿಸು ತಾಯಿ
ನನಗೇ ಈ ವಿಷಯವ ಕೇಳಿ 
ಸಂಕಟ ತಡೀಲಾರದೆ ಬಂದೆ !

ಅಯ್ಯೋ!!!... ಅಮ್ಮಾ.....,
ಇದೆಲ್ಲವ ನಿಂಗ್ಯಾರೇಳಿದ್ರು
ಅವರೇನೂ ಮಾಡ್ಲಿಲ್ಲ
ಅವರಂತವರಲ್ಲ ತಿಳೀತೇ
ಆದದ್ದು ಎಲ್ಲಾ ನನ್ನಿಂದಲೇ
ಹಾಳಾದ್ದು ಸಂಜೆಯ ಮಳೆಗೆ
ಆ ಕೆಲಸದವಳು ನೆನೆದಿದ್ದಳು;
ಬಟ್ಟೆ ಬದಲಾಯಿಸಲು ಹೇಳಿ
ನನ್ನ ಸೀರೆಯ ಹುಡಲು ಕೊಟ್ಟು
ಈ ಅವಾಂತರಕ್ಕೆ ಕಾರಣಳಾದೆ
ನನ್ನವರು ನಾನೆಂದು ತಿಳಿದು
ಅವಳ ಹಿಂಬದಿಯಿಂದ ಹಿಡಿದದ್ದೇ
ಇಷ್ಟೆಲ್ಲಾ ಕತೆಗೆ ಆಹಾರವಾಗಿದ್ದು
ಇನ್ನಾದರೂ ಮೆಲ್ಲಗೆ ಮಾತಾಡು
ಅವರು ಬರುವ ಹೊತ್ತಾಯಿತು ॥

Monday, September 23, 2013

ನನ್ನವಳಿಗೆ ವಿಚ್ಛೇದನ ಕೊಡಬೇಕಿದೆ ?

ನೀವೇನೇ ಅಂದುಕೊಳ್ಳಿ
ನನಗಂತೂ ಸಾಕಾಗಿದೆ
ನನ್ನವಳ ಜೊತೆ ಏಗಿ ಏಗಿ,
ನನಗೆ ಉಳಿದಿರುವ ದಾರಿ
ವಿಚ್ಛೇದನ ಕೊಡುವುದೊಂದೆ;

ನೀವು ಅಂದು ಕೊಳ್ಳಬಹದು
ಇವನಿಗೇನು ಹಣದ ಹುಚ್ಚೇ
ಅಥವಾ ಹೆಂಡತಿಯ ಕಾಟವೆ,
ಹೌದು ಸ್ವಾಮೀ ಒಂದೇ ಎರಡೆ
ಹೇಳುತ್ತಾ ಹೋದರೆ ನೂರಾರು

ಮೊದಲೆಲ್ಲಾ ನನ್ನವಳು ಸಣ್ಣಗೆ
ಬಳುಕುವ ಬಳ್ಳಿಯಂತಿದ್ದವಳು
ಒಂದು ಮಗುವಾದ ಮೇಲೆ ನೋಡಿ
ದುಂಡು ದುಂಡಗೆ ಗುಜ್ಜಾನೆಯಂತೆ,
ಹಾಸಿಗೆಯ ತುಂಬೆಲ್ಲಾ ಇವಳ ಶರೀರ

ನಾ ಎಲ್ಲಿ ಹೋಗಿ ಮಲಗಲಿ ನೀವೇ ಹೇಳಿ
ವಿಚ್ಛೇದನ ಕೊಡಲು ಇದೊಂದೇ ಕಾರಣ
ನಾ ನೀಡುವೆನೆಂದು ಕೋಪಿಸಿ ಕೊಳ್ಬೇಡಿ
ಮುದ್ದಾದ ಹೆಣ್ಣು ಮಗುವನ್ನು ಇವಳೆತ್ತರೂ ತವರಿನಲ್ಲಿಯೇ ಬೆಳೆಯಲು ಬಿಟ್ಟಿಹಳು

ನನಗೂ ಒಂದರ್ಥದಲ್ಲಿ ಒಳ್ಳೆಯದೇ ಅಲ್ಲವೆ ಇಲ್ಲಿಂದಾಚೆಗೆ ಶುಕ್ರದೆಶೆ ಎಂದು ಕೊಂಡರೆ
ನಿದ್ರೆಗಳಿಲ್ಲದೆ ಕಳೆದ ರಾತ್ರಿಗಳೇ ಅತಿಹೆಚ್ಚು
ನನ್ನಾಕೆ ಕುಂಭಕರ್ಣನ ವಂಶದವಳಿರ ಬೇಕು
ಆ ಗೊರಕೆಯ ಸದ್ದಿಗೆ ನಿದ್ದೆ ಹೇಗೆ ಬರಬೇಕು

ನನ್ನವಳ ಎಬ್ಬಿಸಿ ಬೈದದ್ದೂ ಆಯ್ತೆನ್ನಿ
ಬೇಕಿದ್ದರೆ ಬೇರೆಲ್ಲಾದರು ಎದ್ದು ಹೋಗಿ
ಇಲ್ಲವಾದರೆ ಕಿವಿಗಳಿಗೆ ಹತ್ತಿಯಿಟ್ಟು ಮಲಗಿ
ಅದೂ ಮಾಡಾಯ್ತು, ಎಚ್ಚರವಿಲ್ಲದೆ ಮಲಗಿ
ಪ್ರತಿ ದಿನ ನಾ ಮೇಲೇಳುವುದೂ ಲೇಟು !!


Friday, September 13, 2013

ಪಂಚ ಕನ್ಯೆಯರು

ಮದುವೆಯಾದ ಹೊಸತರಲ್ಲಿ
ಹೆದರಿ ನಾಚುತ್ತಿದ್ದ ನನ್ನವಳು
ಇತ್ತೀಚೆಗೆ ಏಕೋ ಏನೋ
ನನ್ನ ಕಂಡರೆ ಸಾಕು;
ಭೂಮಿ ಆಕಾಶವ ಒಂದು ಮಾಡುವಳು
ಸುಖಾ ಸುಮ್ಮನೆ ಕೋಪಗೊಳ್ಳುವಳು
ನನಗೋ ಹೆದರಿಕೆ, ನನ್ನವಳಿಗೆ ಹೀಗೇಕೆ;
ಈ ವಯಸ್ಸಿಗೆ ಹುಚ್ಚೇ
ಅಥವಾ ಭೂತ ಮೆಟ್ಟಿದೆಯೋ ಹೇಗೆ
ಯೋಚಿಸಿ ಯೋಚಿಸಿ ಸಾಕಾಗಿ,
ಧೈರ್ಯ ಮಾಡಿ ನನ್ನವಳ ಕೇಳಿಯೇ ಬಿಟ್ಟೆ
ನಿನಗೇನಾದರೂ ತಲೆಗಿಲೆ ಕೆಟ್ಟಿದೆಯೇ
ನಡೆ ವೈದ್ಯರಲ್ಲಿ ತೋರಿಸುವ
ಬೇಡವಾದರೆ ತಾಯಿತ ಕಟ್ಟಿಸುವ !

ರ್ರೀ.. ಮತ್ತೇ ನನ್ನ ಕೆರಳಿಸ ಬೇಡಿ
ಸುಮ್ಮನೆ ಇಲ್ಲಿಂದ ಎದ್ದೋಗಿ,
ಗಂಡು ಗಂಡೆಂದು
ವಂಶೋದ್ಧಾರಕ ಮಗ ಬೇಕೆಂದು 
ಐದು ಹೆಣ್ಮಕ್ಕಳ ಹುಟ್ಟಿಸಿದಿರಿ;
ಈ ಹೆಣ್ಮಕ್ಕಳ ಮದುವೆಯ ಮಾಡಿಸಿ
ಸಾಗ ಹಾಕುವುದು ಹೇಗಪ್ಪಾ
ಎಂದೆಲ್ಲಾ ನಾ ಯೋಚಿಸುತ್ತಿದ್ದರೆ
ನಿಮ್ಮದೇ ನಿಮಗೆ !

ನಿಜಾ ಸ್ವಾಮೀ, ನನ್ನವಳಿಗೆ
ದೆವ್ವವೂ ಇಲ್ಲ ಹುಚ್ಚೂ ಇಲ್ಲ
ಎಲ್ಲಾ ನನ್ನ ಭ್ರಮೆಯಷ್ಟೆ;
ಅವಳದೇನೂ ತಪ್ಪಿಲ್ಲ ಬಿಡಿ
ತಪ್ಪೆಲ್ಲಾ ಆದದ್ದು ನನ್ನಿಂದಲೆ
ಮೊದಲೆರಡು ಹೆಣ್ಮಕ್ಕಳ ಹೆತ್ತಾಗ,
ನಾ ಯೋಚಿಸ ಬೇಕಿತ್ತು
ಯೋಜನೆಯ ರೂಪಿಸ ಬೇಕಿತ್ತು;
ನಾ ಗಂಡಾಗಲೆಂದು ಬಯಸಿ
ಆದದ್ದು ನಮ್ಮಗಳ ಪುಣ್ಯಕ್ಕೆ
ಮತ್ತೇ ತ್ರಿವಳಿ ಹೆಣ್ಮಕ್ಕಳು
ಎರಡು ಹೆರಿಗೆಗೆ ನನ್ನವಳು ಹೆತ್ತದ್ದು
ಮುದ್ದಾದ ಪಂಚ ಕನ್ಯೆಯರ !!

Thursday, September 12, 2013

ಮಾನವೀಯತೆ/ ಜಾತ್ಯಾತೀತೆ

ಹೋಯ್ತು, ಹೋಯ್ತೂ
ಎಲ್ಲಾ ಹಾಳಾಗ್ಯೋತು
ಮನೆ ಮಾನ, ಮರ್ಯಾದೆ
ಎಲ್ಲಾ ಬೀದಿ ಪಾಲಾಯ್ತು
ಇವಳಿಂದ ತಲೆ ಎತ್ತಿಕೊಂಡು
ಹೊರಗೆಲ್ಲೂ ಹೋಗೋ ಹಾಗಿಲ್ಲ
ಅವಳು ಮನೇಗ್ ಬರಲಿ ಇವತ್ತು
ಹುಟ್ಲಿಲ್ಲಾಂತ ಅನ್ನಿಸ್ತೀನಿ ಮುಂಡೇನ
ಹಾಳಾದೋಳು ಆ ಬೇವರ್ಸಿ ಅವಳಮ್ಮ
ಸತ್ತಾಗಲೇ ಇವಳೂ ಸಾಯ್ಬಾರದಿತ್ತೇ
ಪೀಡೆ ತೊಲಗ್ತು ಅಂತ ನೀರಾಕ್ಕೊಳ್ತಿದ್ದೆ ॥
ಆ ಮುಲ್ಲಾ ಸಾಬಿ ಮಗನ ಜೊತೆ
ಇವಳ ಸುತ್ತಾಟ ಏನೂ ಅನ್ತೀನಿ
ನನಗ್ ಬಂದಿರೋ ಈ ಖಾಯಿಲೆ
ಆ ಧರಿದ್ರ ಮುಂಡೆಗೆ ಬರಬಾರದಿತ್ತೇ
ರ್ರೀ... ಎಲ್ಲಿದ್ದೀರ, ಹೋಗಿ ಅವಳನ್ನ
ಒದ್ದು ಎಳ್ಕೊಂಡು ಬನ್ರೀ, ಕತ್ತೆ ಲೌಡಿನ
ಹೀಗೇ ಬಿಟ್ರೆ, ಕದ್ದು ಬಸಿರಾಗಿ ಬಂದಾಳೂ 
ಲೇ ಲೇ ಲೇ... ಅಪಶಕುನದ ಗೂಬೆ
ನೀನೂ ಒಂದು ಹೆಣ್ಣಾಗಿ ಆ ಮಗೂಗೆ
ಹೀಗೆಲ್ಲ ಅಂದು ಆಡೋದು ಸರಿಯೇನೆ
ನಿನ್ ಹೊಟ್ಟೇಲಿ ಹುಟ್ಟಿದ್ದರೆ ಹೀಗಾಡ್ತಿದ್ದ
ಥೂ ನಿನ್ನ ಜನ್ಮಕ್ಕೊಂದಷ್ಟು ಉಗಿಯಾ ॥
ಮದುವೆ ಮಾಡದೆ ಬಂದ ಗಂಡುಗಳಿಗೆಲ್ಲಾ
ನೀ ಇಲ್ಲ ಸಲ್ಲದ್ದು ಹೇಳಿ ಹೇಳಿ ನನ್ಮಗಳಿಗೆ
ಮದುವೆ ಮುರಿದು ಮನೆ ಕೆಲಸಕ್ಕಿಟ್ಕೊಂಡೆ
ಗಾಣದೆತ್ತಂಗೆ ಹಗಲೂ ರಾತ್ರಿ ದುಡಿದು ದುಡಿದು
ನಿನ್ನ ಹತ್ರ, ನಿನ್ನ ಮಕ್ಕಳ ಹತ್ರಾನು ಸುಖ ಕಾಣ್ಲಿಲ್ಲ
ನಾ ಇದ್ದೂ ತಬ್ಬಲಿಯಾಗ್ಬಿಟ್ಲು ನನ್ನ ಮುದ್ದಿನ್ಮಗಳು
ಅಪ್ಪಾ.... ಇನ್ನೆರಡು ವಾರದಲ್ಲಿ ಅಮ್ಮನಿಗೆ ಮೂತ್ರಪಿಂಡದ ಆಪರೇಶನ್ ಮಾಡಿಸುವ
ನನ್ ಮೂತ್ರಪಿಂಡಾನ ಸಾಧೀಕ್ ಅಮ್ಮಂಗೆ 
ಸಾಧೀಕ್ ಮೂತ್ರ ಪಿಂಡಾನ ನಮ್ಮಮ್ಮಂಗೆ 
ಬದಲಿ ಜೋಡಣೆಗೆ ಡಾಕ್ಟರ್ ನ  ಒಪ್ಪಿಸಿರುವೆ

Sunday, September 8, 2013

ಸ್ವರ್ಣ ಗೌರಿ

ನಾ ಬೇಡ ಬೇಡವೆಂದರೂ
ಪ್ರೀತಿಯಿಂದ ಹೇಳಿದರೂ, 
ನೀ ನನ್ನ ಮಾತುಗಳ 
ಕೇಳುವುದೇ ಇಲ್ಲಾ ನೋಡು ,
ಈ ಸ್ಮಶಾನವಾಸಿಯ,
ವೈರಾಗ್ಯ ಮೂರ್ತಿಯ
ವಿಭೂತಿಯ ಮೈಗೆ ಬಳಿದವನ
ಮಾತೆಂದರೆ ನಿನಗೂ ಅಸಡ್ಡೆಯೆ;

ಆಮಂತ್ರಣವಿಲ್ಲದೆ
ನೀ ತವರಿಗೆ ಹೋದರೆ
ನಿನಗೆ ಯಾರೂ ಅಲ್ಲಿ,
ಅಘ್ರ ತಾಂಬೂಲವಿತ್ತು
ಮುದ್ದಿನ ಕೊನೆಯ ಮಗಳು
ಮನೆಗೆ ಬಂದಿಹಳೆಂದು,
ಸ್ವಾಗತಿಸಿ ಕರೆದುಪಚರಿಸಿ,
ನಿನ್ನ ಮುದ್ದಿಸರು ತಿಳಿ ಗೌರಿ;
ನೀ ಅಲ್ಲಿಗೆ ಹೋಗದೆ ಇಲ್ಲಿಯೇ
ನೀ ಸುಮ್ಮನಿರುವುದೇ ಲೇಸು !

ಪ್ರಿಯೆ ಸ್ವರ್ಣ ಗೌರಿ,
ಹಿಂದೊಮ್ಮೆ ನೆನಪಿಸಿಕೊ
ನಿನ್ನಪ್ಪ ದಕ್ಷ ಪ್ರಜಾಪತಿಯ
ಮಹಾ ಯಜ್ಞಕ್ಕೆ
ನಾ ಬೇಡವೆಂದರೂ
ಕೇಳದೆ ನೀ ಹೋಗಿ,
ಅವಮಾನಿತಳಾಗಿ
ಯಜ್ಞ ಕುಂಡದಲ್ಲೇ ಅಸುನೀಗಿ
ಪ್ರಾಣ ತೆತ್ತದ್ದು ಮರೆತೆಯೆ,
ಹೋಗುವುದಾದರೆ
ಭೂಲೋಕಕ್ಕೆ,;
ನೀ ಈಗಲೇ ಹೋಗು
ತವರಿನ ಆನಂದವ ಅನುಭವಿಸು
ನಿನ್ನ ಭಕ್ತಿ ಭಾವದಿ ಪೂಜಿಸಿ,
ಮನೆ ಮಗಳೆಂದು ಉಪಚರಿಸುವರು
ತವರಿನ ಭಾಗೀನ ಕೊಟ್ಟು ಮಡಿಲಕ್ಕಿ
ಮಡಿಲ ತುಂಬಿ ಕಳುಹಿಸುವರು !

Friday, September 6, 2013

" ಕನಸು "

ಫೆಬ್ರವರಿ ತಾರೀಖು 10 ರ ಸೋಮವಾರ ಪ್ರಾತಃ ಕಾಲ ಸುಮಾರು ನಾಲ್ಕರ ಸಮಯದಲ್ಲಿ ನನ್ನ ಆರಾಧ್ಯದೈವ ಶಿವ ಕನಸಿನಲ್ಲಿ ಕಂಡಾಗ ನನಗಾದ ಆನಂದ ನನ್ನ ಪುಣ್ಯ, ವರ್ಣಿಸಲು ಮಾತೇ ಬರದು ಮೈನವಿರೇಳಿಸಿತ್ತು.
ದಕ್ಷಿಣ ದೃವದ ಕಡೆಯಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ತನ್ಮಯನಾಗಿ ಮೈಮರೆತು ನಡೆಯುತ್ತಿದೆ. ಅಲ್ಲೊಂದು ಅತಿ ವಿಶಾಲವಾದ ಬೆಟ್ಟ. ಹೆಂಗಳೆಯರು ಬೆಟ್ಟದ ಮೇಲಿದ್ದ ಮಣ್ಣಿನ ರಾಶಿಯಿಂದ ಮಣ್ಣ ತುಂಬಿಕೊಂಡು ಪಕ್ಕದ ರಾಶಿಗೆ ಹಾಕುತ್ತಿರುತ್ತಾರೆ. ನನ್ನ ಕಣ್ಣೋಟ ಮೇಲಿಂದ ಕೆಳ ಭಾಗಕ್ಕೆ ಬರುತ್ತೆ. ಬೆಟ್ಟಕ್ಕೆ ಅಂಟಿಕೊಂಡಂತೆ ವಿಶಾಲವಾದ ನೀರಿಲ್ಲದ ಕೆರೆ; ಬೆಟ್ಟ ಹತ್ತಲು ಮೆಟ್ಟಿಲುಗಳು ಅಲ್ಲಲ್ಲಿ ಬಿದ್ದ ಮಳೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ.  
ಇದ್ದಕ್ಕಿದ್ದಂತೆ ನನ್ನ ನಡೆ ಬೆಟ್ಟದ ಹಿಂಬದಿಗೆ ಬರುತ್ತೆ. ಅಲ್ಲೊಂದು ಸುಂದರವಾದ ದೇವಸ್ಥಾನ ಅದನ್ನು ಅಷ್ಟೊಂದು ಗಮನಿಸದೆ ಮತ್ತೊಂದು, ಕಡೆ ಮನ ಕೇಂದ್ರೀಕರಿಸಿದರೆ , ಅಲ್ಲಿ ಮೈಮನಗಳ ಮಣಿಸುವಷ್ಟು ಎಂದೂ ನಾ ಕಾಣದಂಥಹ ವಿಚಿತ್ರ ವಿಚಿತ್ರ ದೃಶ್ಯಾವಳಿಗಳು.
ಮಹಾ ದ್ವಾರದ ರಾಜಗೋಪುರಕ್ಕೆ ಅಂಟಿ ಕೊಂಡಂತೆ ಮೂರು ಮುದ್ದಾದ ಸುಂದರ ಕೆತ್ತನೆಯ ವಿಗ್ರಹಗಳು. ಆ ಮೂರು ಮೂರ್ತಿಗಳಲ್ಲಿ ಶ್ರೀರಾಮ, ಮಾರುತಿ ಲಕ್ಷ್ಮಣರ ಭವ್ಯ ಕಲಾಕೃತಿಗಳು. ವಿಚಿತ್ರವೆಂದರೆ ಯಾವ ದಿಕ್ಕಿನಿಂದ ಅವುಗಳ ನೋಡಿದರೂ ನನ್ನ ಕಡೆಗೆ ತಿರುಗುವ ದೃಶ್ಯ ಮೈನವಿರೇಳಿಸಿತ್ತು. ಲಕ್ಷ್ಮಣನ ಕಾಲ ಬಳಿ ಹಾರಿ ಬಂದ ಪಾರಿವಾಳವ ಕಂಡು ಮಾರುತಿ ಅದನ್ನು ಹಿಡಿದಾಗಲಂತೂ ನನಗೆ ನಂಬಲಾಗಲಿಲ್ಲ. ನನ್ನಂತೆಯೇ ಬಂದ ಕೆಲ ಜನರಿಗೆ ಈ ವಿಷಯವ ಹೇಳಿದಾಗ ಅರ್ಥವಾಗದೇ ಏನೂ ಪ್ರತಿಕ್ರಿಯಸದೇ ಹಾಗೆ ಹೊರ ನಡೆದಿದ್ದರು.
ಸುತ್ತಲೂ ಕಣ್ಣಾಡಿಸುತ್ತೇನೆ ಹಳೆಯ ಕಾಲದ ಶಿಥಿಲವಾಲದ ಜೀರ್ಣೋದ್ಧಾರವಿಲ್ಲದೆ ಪಾಳು ಬಿದ್ದ ಗೋಡೆಗಳು, ಕಲ್ಪಿನ ಕಂಬಗಳು ವಿಗ್ರಹಗಳು ಅನಾಥವಾಗಿ ಗಾಳಿ ಮಳೆಗೆ ಸಿಕ್ಕ ಶಿಲಾಕೃತಿಗಳು ಒಂದೇ ಎರಡೆ ನೂರಾರು ಅಲ್ಲೊಂದು ಎರಡು ದೇವಸ್ಥಾನದ ಶಿಥಿಲಾವಸ್ಥೆಯ ಮಧ್ಯೆ ಗಣಪನ ಸುಂದರವಾದ ವಿಗ್ರಹ ಅದರಲ್ಲಿ ಒಂದು ವಿಘ್ಞಗೊಂಡ ವಿಗ್ರಹ. ತಕ್ಷಣವೇ ನನ್ನಲ್ಲಿ ಯೋಚನೆ ಮೂಡುತ್ತೆ ಈ ವಿಗ್ರಹಗಳಲ್ಲಿ ಚಂದವಿರುವ ಒಂದನ್ನು ನಮ್ಮ ಮನೆಗೆ ಕದ್ದಯ್ಯೊದರೆ ಹೇಗೆ? ಯಾವಾಗಲಾದರು ಈ ಗಣೇಶನಿಗೆ ದೇವಸ್ಥಾನ ಕಟ್ಟಿಸಬಹುದು.
ಯೋಚನೆಯ ಲಹರಿಯೊಂದಿಗೆ ನನ್ನ ನಡೆಯೂ ಮುಂದೆ ಮುಂದೆ ಸಾಗಿದಂತೆ, ರಾಜ ಮಹಾರಾಜರ ಕಾಲದ ತುಂಬಾ ದೊಡ್ಡದಾದ ಸುಂದರ ಕೆತ್ತನೆಯ ಲತಾ ಮಂಟಪ, ಕಲ್ಲಿನಲ್ಲಿ ಚಿತ್ರ ಬಿಡಿಸಿದ ಅರಳಿದ ತಾವರೆ, ಕಂಬ ಕಂಬಗಳಲ್ಲಿ ಬಗೆ ಬಗೆಯ ಚಿತ್ರ ಕಲಾ ನೈಪುಣ್ಯದ ಸಿರಿ ಸೊಬಗು. ಕೆರೆಯ ಅಂಗಳಕ್ಕೆ ಹೊಂದಿ ಕೊಂಡ ಬೆಟ್ಟದ ದೇವಸ್ಥಾನದ ಬಾಗಕ್ಕೆ ಸುತ್ತಲೂ ಕಲ್ಲಿನ ಮಟ್ಟಿಲುಗಳು . ಕೆರೆಯ ನೀರಿಂದುಂಟಾಗುವ ಅಲೆಗಳಿಂದ ತಪ್ಪಿಸಲು ಕಲ್ಲಿನಿಂದ ನಿರ್ಮಿಸಿದ ತಡೆಗೋಡೆ. 
ಒಂದೊಂದೇ ಮೆಟ್ಟಿಲುಗಳನ್ನೇರಿ, ದೇವಸ್ಥಾನದ ಪ್ರಾಂಗಣವ ದಾಟಿ ಅತ್ತ ನೋಡಿದರೆ ವಿಹಂಗಮ ನೋಟ, ಎಂದೂ ಕಾಣದ ಕಡು ಕೃಷ್ಣ ಶಿಲೆಯ " ಶಿವನ ಲಿಂಗ " ಮೈ ರೋಮಾಂಚನೆಕೆ ತಂತಾನೆ ಕಂಬನಿ ಸುರಿಯುತ್ತೆ. ಲಿಂಗದ ಅಲಂಕಾರವೇ ಅತ್ಯದ್ಭುತ ರೇಷ್ಮೆಯ ಜರಿ ಅಂಚಿನ ಶಲ್ಯ, ವಿಧ ವಿಧ ವೈವಿಧ್ಯೆತೆಯ ಹೂಗಳ ಮಾಲೆ, ದೊಡ್ಡದಾದ ಮಲ್ಲಿಗೆಯ ಹೂವಿನ ಹಾರ ಹಣೆಗೆ ವಿಭೂತಿಯ ತ್ರಿಪುಂಡ ಲೇಪನ.
ಸ್ವರ್ಗವೇ ಭುವಿಗಿಳಿದಂತೆ ಭಾಸ; ಭಾವಾತಿರೇಕದಿಂದ ಕೈ ಮುಗಿದು, ನಾಮ ಸ್ಮರಣೆಯ ಮಾಡಿ ತೂಗಾಡುವ ಗಂಟೆಗಳಲ್ಲಿ ಒಂದ ಬಾರಿಸಿದರೆ ಶಬ್ದವೇ ಇಲ್ಲ   ನನ್ನಂತೆಯೇ ದರ್ಶನಾರ್ಥಿಗಳು ಗಂಟೆಯ ಬಾರಿಸಿದಾಗಲೂ ಶಬ್ದದ ನೀನಾದ ಬರದಿದ್ದಾಗ ಇದೇನು ಸೋಜಿಗ ಎಂದು ಲಿಂಗದ ಬಳಿಯಿಟ್ಟ ಕುಂಕುಮ ವಿಭೂತಿಯ ಹಣೆಗೆ ಹಚ್ಚಿ ಶಿವನಾಮ ಸ್ಮರಣೆ ಮಾಡುತ ಹಿಂತಿರುಗುತ್ತೇನೆ. 
ಜನರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋಗುತ್ತಾರೆ, ದೇವಸ್ಥಾನದ ಪೂಜಾರಿಣಿ ನನ್ನ ಹೊರ ಕರೆಯುತ್ತಾಳೆ; ನಾ ಹೊರ ಬಾಗಿಲಿಗೆ ಬರುತ್ತಿದಂತೆ ಬಾಗಿಲು ಹಾಕಿಕೊಳ್ಳಲು ಕದಗಳ ಎಳೆದು ಕೊಳ್ಳುತ್ತಾಳೆ ನಾನಿನ್ನು ಹೊರ ಹೊಗುವುದು ಹೇಗೆಂದು ಪ್ರಶ್ನಿಸುತ್ತೇನೆ.
ಹಿಂಬದಿಯಿಂದ ನನ್ನಂತೆ ಹೊರ ಹೋಗಲು ವ್ಯಕ್ತಿಯೊಬ್ಬ ಹೊಸಿಲು ದಾಟಿ ಹೊರಟಂತೆ ನಾನೂ ಹೋಗಬೇಕು ಎನ್ನುವಾಗಲೇ ಒಂದು ವಿಚಿತ್ರ ಅನುಭೂತಿಯುಂಟಾಗಿ ನೋಡಲು ಹೆಡೆಯ ಆಕಾರದಿ ಬಳ್ಳಿಯಂತೆ ನನ್ನ ಕಾಲುಗಳಿಂದ ಮೈ ಪೂರ ಆವರಿಸಿ ಕೊಳ್ಳುತ್ತೆ ಭಯವಾದರೂ ಶಿವನಾಮಸ್ಮರಣೆಯಿಂದ ಅಲ್ಲಿಯೇ ನಿಲ್ಲಲಾಗದೆ ಹೊರ ಬರಲಾಗದೆ ಒದ್ದಾಡಿದರೂ ಆ ಹಾವು ತಲೆಯ ಮೇಲ್ಬಾಗಕೆ ಬಂದು ಹೆಡೆಯೆತ್ತಿ ನನ್ನಲ್ಲಿಯೇ ಕಲ್ಲಿನಂತೆ ಲೀನವಾಗುತ್ತೆ. 
ಓಂ ನಮಃ ಶಿವಾಯ
ಶಿವಚೆನ್ನ
೧೦.೦೨.೧೯೯೧

Thursday, September 5, 2013

" ಹಬ್ಬದ ಅಡಿಗೆ "

ಇದೇನೇ ಇದು ಮಂದಾ, 
ಇತ್ತೀಚೆಗಂತೂ ನೀ ಮಾಡಿದ
ಅಡಿಗೆಯ ಯಾರೂ ತಿನ್ನಲಾರರು
ಆ ಸಾರೋ ಬರಿಯ ನೀರು ನೀರು
ಕಾಯಿ ಪಲ್ಲೆಯಿಲ್ಲ, ಒಗ್ಗರಣೆಯಿಲ್ಲ
ಹೋಗಲಿ ಬೇಳೆಯಿದೆಯೇ
ಅದು ಅಲ್ಲೊಂದು ಇಲ್ಲೊಂದು
ಹುಳಿ ಉಪ್ಪು ಖಾರವ ಬಿಟ್ಟರೆ
ಉಳಿದೆಲ್ಲವೂ ಅಷ್ಟಕಷ್ಟಯೇ ;
ಏನೋ ತರಕಾರಿಗಳ ಬೆಲೆ ದುಭಾರಿ,
ಗಗನಕ್ಕೇರಿದೆ ಎಂದರೆ ನಂಬುವೆ
ಕೊಡುವ ಕಾಸಿಗೂ ನಾ ಜಿಪುಣನೇ
ಬೆಳಗಿನ ತಿಂಡಿಯ ಐಜಾಕ್ ಮಾಡಿ, 
ಅದೆಂಥಹದ್ದೋ ಕಷಾಯವ ಕೊಡುವೆ
ಖಾಯಿಲೆ ಬಿದ್ದವನೇ, ಪಥ್ಯೆದಲ್ಲಿರಲು
ನಾ ಕುಡಿಯಲಾರದೆ ಕುಡಿದು ಮತ್ತಷ್ಟು
ಸುಸ್ತಾಗಿ ಸೊರಗಿರುವೆ ನೀನೇ ನೋಡು ॥

ಮೊದಲೆಲ್ಲಾ ನೀ ಹೀಗಿರಲಿಲ್ಲ ಬಿಡು,
ಎಷ್ಟು ರುಚಿ ರುಚಿಯಾಗಿ ಮಾಡುತ್ತಿದ್ದೆ
ನಾ ಕೇಳಿಕೇಳಿ ಮತ್ತಷ್ಟು ತಿನ್ನುತ್ತಿದ್ದೆ
ನಾಲಿಗೆ ಕೆಟ್ಟು, ಅತ್ತಿತ್ತ ಹೊರಳುತ್ತಿಲ್ಲ
ತಿಂಗಳ ಸಂಸಾರಕ್ಕೆ ಸಾಕಾಗುವಷ್ಟು
ಹಣವ ನಾ ಎಣಿಸಿ ಕೊಡುವಾಗ
ನಿನ್ನದೇನೆ ಎಲ್ಲದರಲ್ಲೂ ಚೌಕಾಶಿ ;
ಈ ವಯಸ್ಸಿನಲ್ಲಿ ತಿಂದುಂಡರಲ್ಲವೆ
ಮುಪ್ಪಿನ ಕಾಲಕ್ಕೆ ಗಟ್ಟಿ ಮುಟ್ಟಾಗಿರುವುದು
ಆ ಮಕ್ಕಳ ನೋಡು ಎಷ್ಟು ಸೊರಗಿವೆ
ಹೀಗೇಯೇ ಆದರೆ ಮೂಳೆಗಳ ಎಣಿಸಬೇಕು
ನಿನ್ನ ಏನಾದರೂ ಹೇಳಿದರೆ, ಕೇಳಿದರೆ
ಕಣ್ಣಲ್ಲಿ ಗಂಗಾಭವಾನಿಯೇ ಬರುವಳು
ನಾ ಮನೇ ಖರ್ಚಿಗೆ ಕೊಟ್ಟ ದುಡ್ಡಲ್ಲಿ
ಎರಡೆರಡು ಸೀರೆಯ ಕೊಂಡರೆ ಹೇಗೆ 
ನಿಭಾಯಿಸಲಾಗದೆ ಒದ್ದಾಡಿದರೆ ಹೀಗೆ
ಹೋಗಲಿ ಬಿಡು ಆದದ್ದೆಲ್ಲಾ ಒಳ್ಳೆಯದಕ್ಕೆ
ಹೋಗಿ ದಿನಸಿ ತರುವೆ ಹಬ್ಬದಡಿಗೆಯ ಮಾಡು॥

ಮಡಿ - ಮೈಲಿಗೆ

ರ್ರೀ... ಏನೂಂದ್ರೆ.... ಇಲ್ಬನ್ನಿ
ಬಂದ್ರಾ..ಅಲ್ಲಿಯೇ ನಿಲ್ಲಿಯಪ್ಪಾ
ನನ್ನ ಹತ್ತಿರ ಬರಲೇಬೇಡಿ
ಹಾಗೆಯೇ ಒಂದು ತಪ್ಪಲೆ
ಬಿಸಿ ನೀರ ಬೇಗ ಕಾಯಿಸಿ, 
ಸೀಗೇ ಪುಡಿಯ, ಗಂಜಲವ 
ಒಂಚೂರು ಎಣ್ಣೆಯ ಕೊಟ್ಟು,
ನೀವೇ ನನ್ನ ತಲೆಯ ಮೇಲೆ 
ಒಂದೆರಡು ಚೆಂಬು ನೀರ ಹಾಕಿ
ಮಡಿ ಬಟ್ಟೆಗಳ ತಂದು ಕೊಡಿ;
ಒಂದೇ ಸಮನೆ ಪುಲ್ ಸ್ಟಾಪಿಲ್ಲದೆ
ನನ್ನವಳು ಬಡ ಬಡಿಸಿದ ಕಂಡು
ನಾ ಮುಸಿ ಮುಸಿ ನಗು ನಗುತ
ಏನಾಯಿತೇ, ನೀ ಮತ್ತೆ ಕೂತೆಯೋ ಹೇಗೆ?!!! 
ಸೂತಕದ ಮನೆಯಿಂದ ಬಂದೆಯೋ ಹೇಗೆ ?!!
ನಿನಗಿನ್ನು ಒಂದು ವಾರ ಕಾಲ ರಜೋದರ್ಶನ
ನನಗಿನ್ನು ಅಡಿಗೆ ಮಾಡಿ, ಕೈ ಸುಟ್ಟು ಕೊಂಡು
ಪಾತ್ರೆ, ತಾಪತ್ರೆಗಳ ತಾಕಲಾಟದ ದರ್ಶನ
ಸರಿ ಹೋಯಿತು, ಈ ನನ್ನ ಗ್ರಹಚಾರಕ್ಕೆ
ನಾನಿಂದು ಆಫೀಸಿಗೆ ಹೋದ ಹಾಗೆಯೆ ?!!!

ಅಯ್ಯೋ..!!!!!!! ಅದೆಲ್ಲಾ.... ಇಲ್ಲಾರೀ,
ನಿಮಗೆ ಯಾವಾಗಲೂ ಅಪಹಾಸ್ಯವೆ
ಹಾಳಾದ್ದು ಆ ಕಾಗೆ ಕುಕ್ಕಿ ಹೋಯಿತು
ತಪ್ಪು ತಪ್ಪು, ಆ ಕಾಕ ರಾಜ ಮುಟ್ಟಿತು
ಇನ್ನೇನು ಕಷ್ಟ ಕಾದಿದೆಯೋ ಶಿವನೇ;
ಮೈಲಿಗೆಗೆ ಬೇಗ ಸ್ನಾನವ ಮಾಡಬೇಕು
ಹೊರಡಿ ಹೊರಡಿ ಬೇಗನೆ ನೀರ ತನ್ನಿ
ಆ ಕಾಗೆಗೂ ನಿನಗೆಂತಹದ್ದೆ ಸಂಬಂಧ
ನೀ ಆಗಾಗ ನನ್ನ ಹಂಗಿಸುವೆ ನಿಮ್ಮದು
ಕಾಗೆ ಡೇಗೆಗಳ ಬಂಧು - ಬಳಗವೆಂದು
ಅದಕ್ಕೆ ಅದು ನಿನ್ನ ಕಂಡೇ ಕುಕ್ಕಿರ ಬೇಕು !!

Monday, September 2, 2013

ಎರಡು ಕನಸು

ನೀ ಇರಬೇಕಿತ್ತು
ನನ್ನ ಹುಡುಗಿ,
ಅವಳಾಡುವ
ಕಳ್ಳಾಟವನ್ನೆಲ್ಲಾ
ನೀ ಕಣ್ತುಂಬಿ
ನೋಡ ಬೇಕಿತ್ತು;
ಆ ಎತ್ತರದ
ಮಹಡಿಯ ಮನೆಯವಳು
ಮುತ್ತ ಚುಂಬಿಸಿ,
ಗಾಳಿಯಲ್ಲೇ ತೇಲಿ ಬಿಟ್ಟು
ನನ್ನ ಎದೆಯೊಳಗೆ
ಬಚ್ಚಿಟ್ಟು ಕೊಳ್ಳಲು
ಹೇಳಿದ್ದಲ್ಲದೆ
ನಾ ಅಲ್ಲಿ ಬರಲೇ ಎನ್ನುವುದೆ ॥

ಈ ಮೈಮನ ಬಿಸಿಯೇರಿ
ಗಂಟಲ ಪಸೆ ಒಣಗಿ,
ಕುಣಿಯುವುದೊಂದೇ ಬಾಕಿ
ಅಷ್ಟರಲ್ಲಿ ನೀ ಬಂದು
ಸಿಹಿ ಹೂಮುತ್ತಿತು;
ನಿದ್ದೆಯಲ್ಲಿದ್ದವನ ಎಬ್ಬಿಸಿ
ನನ್ನ ಕನಸ ನನಸಾಗಿಸಿದ್ದೆ ॥

Sunday, September 1, 2013

ಪ್ರೇಮ ♥ ಪಲ್ಲವಿ

ಮರೆತೆ ನಾನು
ಮನದ ನೋವ
ನಿನ್ನ ಕಂಡ ಕ್ಷಣದಲೇ
ಏಕೊ ಏನೊ ಹೇಳಲಾರೆ
ಎನಿತು ಏನೊ ತಾಳಲಾರೆ
ಹೃದಯದೊಳಗೆ ಹೊಸತನ
ಹಗುರವಾಯಿತೆನ್ನ ಮೈಮನ
ಕರೆದೆ ನೀನು ನನ್ನ
ನಿನ್ನ ತುಂಟ ಕಣ್ಣಿನಲ್ಲೆ
ಮನದ ಮಾತನ್ನೆಲ್ಲ ಹೇಳಲು 
ಬರದೆ ನಾನು ಚಿನ್ನ
ನನ್ನ ತುಂಟ ನಗೆಯಲೆ
ನಿನ್ನ ಆಟವಾಡಿಸಿ ಹೊಗಳಲು
ಅರಿತೆ ನೀನು
ಬೆರೆತೆ ನಾನು
ನನ್ನ ಬಳಸಿ ಮೌನ ಮುಖದಿ
ಅಧರ ಸವಿದೆ ನಲಿದೆ ಸುಖದಿ
ನೋವೆ ಬರಲಿ ನಲಿವೆಯಿರಲಿ
ಜಗವ ಗೆದ್ದು, ಸುಖವ ಮೆದ್ದು
ನಗುತ ನಾವು ಬಾಳಿ ಬದುಕುವ 

ಸಿಟ್ಟಾಗಿದ್ದಕ್ಕೆ ಮುಟ್ಟಾದಳು

ನನ್ನವಳ ಮಾತಿಗೆ ನಾನೇ ಕಿವಿಗೊಟ್ಟು
ನೆತ್ತಿಗೇರಿತ್ತು ನಿಲುಕದ ಅಸಾಧ್ಯ ಸಿಟ್ಟು
ಅಲ್ಲಾ!! ಇವಳ ಆಸೆ - ಆಕಾಂಕ್ಷೆಗಳಿಗೆ
ಇಷ್ಟ - ಅನಿಷ್ಠಗಳ ಈ ದೊಡ್ಡ ಪಟ್ಟಿಗೆ
ಇತಿ - ಮಿತಿಗಳ ಗೋಡೆಯು ಬೇಡವೆ

ಹಬ್ಬಕ್ಕೆ ಜರತಾರಿ ಜರಿ ಸೀರೆಯಂತೆ
ಕೊರಳಿಗೆ ರತ್ನ ಖಚಿತ ತಾರೆಯಂತೆ
ನಾ ಎಲ್ಲಿಂದ ತರಬೇಕು ಹೇಳಿ ಹಣ
ಶಬ್ದ ಮಾಡುತ ಝಣ  ಕಾಂಚಾಣ

ನನಗೆ ಬರುವ ಸಂಬಳವಾದರು ಎಷ್ಟು 
ಸಂಸಾರದ ಬಾಯಿಗೆ ಕೊಟ್ಟು, ಕೊಟ್ಟು
ಬರುವ ತಿಂಗಳಿಗೆ ಕಾಯ ಬೇಕಾಗಿದೆ
ನಾನೋ ಬಡಪಾಯಿ ಶಾಲ ಮಾಸ್ತರು

ಬರಬೇಕಲ್ಲ ಸ್ವಾಮಿ ಲಂಚದ ಕವರ 
ತರಲಿಕ್ಕೆ ಜರತಾರ ಜರಿ ಸೀರೆಯ
ಕೊರಳಿಗೆ ರತ್ನ ಖಚಿತ ತಾರೆಯ

ಆಸೆಗಳಿಗೆ ಅಂಕೆಯಿಲ್ಲ, ಸಂಖ್ಯೆಯಿಲ್ಲ
ನನ್ನವಳ ಮಾತಿಗೆ ಕೊನೆ ಮೊದಲಿಲ್ಲ
ಸಿಟ್ಟಾಗಿದ್ದಕ್ಕೆ ನನ್ನವಳು ಮುಟ್ಟಾಗಿ
ಚಾಪೆ ಚಂಬು ದಿಂಬಿಡಿದು ಕೂತವಳು
ಎದ್ದದ್ದು ಮೂರು ದಿನಗಳ ಮೇಲೆಯೇ !

ರಚನೆ: ೦೪.೧೨.೮೬