Friday, September 6, 2013

" ಕನಸು "

ಫೆಬ್ರವರಿ ತಾರೀಖು 10 ರ ಸೋಮವಾರ ಪ್ರಾತಃ ಕಾಲ ಸುಮಾರು ನಾಲ್ಕರ ಸಮಯದಲ್ಲಿ ನನ್ನ ಆರಾಧ್ಯದೈವ ಶಿವ ಕನಸಿನಲ್ಲಿ ಕಂಡಾಗ ನನಗಾದ ಆನಂದ ನನ್ನ ಪುಣ್ಯ, ವರ್ಣಿಸಲು ಮಾತೇ ಬರದು ಮೈನವಿರೇಳಿಸಿತ್ತು.
ದಕ್ಷಿಣ ದೃವದ ಕಡೆಯಿಂದ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ತನ್ಮಯನಾಗಿ ಮೈಮರೆತು ನಡೆಯುತ್ತಿದೆ. ಅಲ್ಲೊಂದು ಅತಿ ವಿಶಾಲವಾದ ಬೆಟ್ಟ. ಹೆಂಗಳೆಯರು ಬೆಟ್ಟದ ಮೇಲಿದ್ದ ಮಣ್ಣಿನ ರಾಶಿಯಿಂದ ಮಣ್ಣ ತುಂಬಿಕೊಂಡು ಪಕ್ಕದ ರಾಶಿಗೆ ಹಾಕುತ್ತಿರುತ್ತಾರೆ. ನನ್ನ ಕಣ್ಣೋಟ ಮೇಲಿಂದ ಕೆಳ ಭಾಗಕ್ಕೆ ಬರುತ್ತೆ. ಬೆಟ್ಟಕ್ಕೆ ಅಂಟಿಕೊಂಡಂತೆ ವಿಶಾಲವಾದ ನೀರಿಲ್ಲದ ಕೆರೆ; ಬೆಟ್ಟ ಹತ್ತಲು ಮೆಟ್ಟಿಲುಗಳು ಅಲ್ಲಲ್ಲಿ ಬಿದ್ದ ಮಳೆಯ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ.  
ಇದ್ದಕ್ಕಿದ್ದಂತೆ ನನ್ನ ನಡೆ ಬೆಟ್ಟದ ಹಿಂಬದಿಗೆ ಬರುತ್ತೆ. ಅಲ್ಲೊಂದು ಸುಂದರವಾದ ದೇವಸ್ಥಾನ ಅದನ್ನು ಅಷ್ಟೊಂದು ಗಮನಿಸದೆ ಮತ್ತೊಂದು, ಕಡೆ ಮನ ಕೇಂದ್ರೀಕರಿಸಿದರೆ , ಅಲ್ಲಿ ಮೈಮನಗಳ ಮಣಿಸುವಷ್ಟು ಎಂದೂ ನಾ ಕಾಣದಂಥಹ ವಿಚಿತ್ರ ವಿಚಿತ್ರ ದೃಶ್ಯಾವಳಿಗಳು.
ಮಹಾ ದ್ವಾರದ ರಾಜಗೋಪುರಕ್ಕೆ ಅಂಟಿ ಕೊಂಡಂತೆ ಮೂರು ಮುದ್ದಾದ ಸುಂದರ ಕೆತ್ತನೆಯ ವಿಗ್ರಹಗಳು. ಆ ಮೂರು ಮೂರ್ತಿಗಳಲ್ಲಿ ಶ್ರೀರಾಮ, ಮಾರುತಿ ಲಕ್ಷ್ಮಣರ ಭವ್ಯ ಕಲಾಕೃತಿಗಳು. ವಿಚಿತ್ರವೆಂದರೆ ಯಾವ ದಿಕ್ಕಿನಿಂದ ಅವುಗಳ ನೋಡಿದರೂ ನನ್ನ ಕಡೆಗೆ ತಿರುಗುವ ದೃಶ್ಯ ಮೈನವಿರೇಳಿಸಿತ್ತು. ಲಕ್ಷ್ಮಣನ ಕಾಲ ಬಳಿ ಹಾರಿ ಬಂದ ಪಾರಿವಾಳವ ಕಂಡು ಮಾರುತಿ ಅದನ್ನು ಹಿಡಿದಾಗಲಂತೂ ನನಗೆ ನಂಬಲಾಗಲಿಲ್ಲ. ನನ್ನಂತೆಯೇ ಬಂದ ಕೆಲ ಜನರಿಗೆ ಈ ವಿಷಯವ ಹೇಳಿದಾಗ ಅರ್ಥವಾಗದೇ ಏನೂ ಪ್ರತಿಕ್ರಿಯಸದೇ ಹಾಗೆ ಹೊರ ನಡೆದಿದ್ದರು.
ಸುತ್ತಲೂ ಕಣ್ಣಾಡಿಸುತ್ತೇನೆ ಹಳೆಯ ಕಾಲದ ಶಿಥಿಲವಾಲದ ಜೀರ್ಣೋದ್ಧಾರವಿಲ್ಲದೆ ಪಾಳು ಬಿದ್ದ ಗೋಡೆಗಳು, ಕಲ್ಪಿನ ಕಂಬಗಳು ವಿಗ್ರಹಗಳು ಅನಾಥವಾಗಿ ಗಾಳಿ ಮಳೆಗೆ ಸಿಕ್ಕ ಶಿಲಾಕೃತಿಗಳು ಒಂದೇ ಎರಡೆ ನೂರಾರು ಅಲ್ಲೊಂದು ಎರಡು ದೇವಸ್ಥಾನದ ಶಿಥಿಲಾವಸ್ಥೆಯ ಮಧ್ಯೆ ಗಣಪನ ಸುಂದರವಾದ ವಿಗ್ರಹ ಅದರಲ್ಲಿ ಒಂದು ವಿಘ್ಞಗೊಂಡ ವಿಗ್ರಹ. ತಕ್ಷಣವೇ ನನ್ನಲ್ಲಿ ಯೋಚನೆ ಮೂಡುತ್ತೆ ಈ ವಿಗ್ರಹಗಳಲ್ಲಿ ಚಂದವಿರುವ ಒಂದನ್ನು ನಮ್ಮ ಮನೆಗೆ ಕದ್ದಯ್ಯೊದರೆ ಹೇಗೆ? ಯಾವಾಗಲಾದರು ಈ ಗಣೇಶನಿಗೆ ದೇವಸ್ಥಾನ ಕಟ್ಟಿಸಬಹುದು.
ಯೋಚನೆಯ ಲಹರಿಯೊಂದಿಗೆ ನನ್ನ ನಡೆಯೂ ಮುಂದೆ ಮುಂದೆ ಸಾಗಿದಂತೆ, ರಾಜ ಮಹಾರಾಜರ ಕಾಲದ ತುಂಬಾ ದೊಡ್ಡದಾದ ಸುಂದರ ಕೆತ್ತನೆಯ ಲತಾ ಮಂಟಪ, ಕಲ್ಲಿನಲ್ಲಿ ಚಿತ್ರ ಬಿಡಿಸಿದ ಅರಳಿದ ತಾವರೆ, ಕಂಬ ಕಂಬಗಳಲ್ಲಿ ಬಗೆ ಬಗೆಯ ಚಿತ್ರ ಕಲಾ ನೈಪುಣ್ಯದ ಸಿರಿ ಸೊಬಗು. ಕೆರೆಯ ಅಂಗಳಕ್ಕೆ ಹೊಂದಿ ಕೊಂಡ ಬೆಟ್ಟದ ದೇವಸ್ಥಾನದ ಬಾಗಕ್ಕೆ ಸುತ್ತಲೂ ಕಲ್ಲಿನ ಮಟ್ಟಿಲುಗಳು . ಕೆರೆಯ ನೀರಿಂದುಂಟಾಗುವ ಅಲೆಗಳಿಂದ ತಪ್ಪಿಸಲು ಕಲ್ಲಿನಿಂದ ನಿರ್ಮಿಸಿದ ತಡೆಗೋಡೆ. 
ಒಂದೊಂದೇ ಮೆಟ್ಟಿಲುಗಳನ್ನೇರಿ, ದೇವಸ್ಥಾನದ ಪ್ರಾಂಗಣವ ದಾಟಿ ಅತ್ತ ನೋಡಿದರೆ ವಿಹಂಗಮ ನೋಟ, ಎಂದೂ ಕಾಣದ ಕಡು ಕೃಷ್ಣ ಶಿಲೆಯ " ಶಿವನ ಲಿಂಗ " ಮೈ ರೋಮಾಂಚನೆಕೆ ತಂತಾನೆ ಕಂಬನಿ ಸುರಿಯುತ್ತೆ. ಲಿಂಗದ ಅಲಂಕಾರವೇ ಅತ್ಯದ್ಭುತ ರೇಷ್ಮೆಯ ಜರಿ ಅಂಚಿನ ಶಲ್ಯ, ವಿಧ ವಿಧ ವೈವಿಧ್ಯೆತೆಯ ಹೂಗಳ ಮಾಲೆ, ದೊಡ್ಡದಾದ ಮಲ್ಲಿಗೆಯ ಹೂವಿನ ಹಾರ ಹಣೆಗೆ ವಿಭೂತಿಯ ತ್ರಿಪುಂಡ ಲೇಪನ.
ಸ್ವರ್ಗವೇ ಭುವಿಗಿಳಿದಂತೆ ಭಾಸ; ಭಾವಾತಿರೇಕದಿಂದ ಕೈ ಮುಗಿದು, ನಾಮ ಸ್ಮರಣೆಯ ಮಾಡಿ ತೂಗಾಡುವ ಗಂಟೆಗಳಲ್ಲಿ ಒಂದ ಬಾರಿಸಿದರೆ ಶಬ್ದವೇ ಇಲ್ಲ   ನನ್ನಂತೆಯೇ ದರ್ಶನಾರ್ಥಿಗಳು ಗಂಟೆಯ ಬಾರಿಸಿದಾಗಲೂ ಶಬ್ದದ ನೀನಾದ ಬರದಿದ್ದಾಗ ಇದೇನು ಸೋಜಿಗ ಎಂದು ಲಿಂಗದ ಬಳಿಯಿಟ್ಟ ಕುಂಕುಮ ವಿಭೂತಿಯ ಹಣೆಗೆ ಹಚ್ಚಿ ಶಿವನಾಮ ಸ್ಮರಣೆ ಮಾಡುತ ಹಿಂತಿರುಗುತ್ತೇನೆ. 
ಜನರೆಲ್ಲಾ ಒಬ್ಬೊಬ್ಬರಾಗಿ ಹೊರಟು ಹೋಗುತ್ತಾರೆ, ದೇವಸ್ಥಾನದ ಪೂಜಾರಿಣಿ ನನ್ನ ಹೊರ ಕರೆಯುತ್ತಾಳೆ; ನಾ ಹೊರ ಬಾಗಿಲಿಗೆ ಬರುತ್ತಿದಂತೆ ಬಾಗಿಲು ಹಾಕಿಕೊಳ್ಳಲು ಕದಗಳ ಎಳೆದು ಕೊಳ್ಳುತ್ತಾಳೆ ನಾನಿನ್ನು ಹೊರ ಹೊಗುವುದು ಹೇಗೆಂದು ಪ್ರಶ್ನಿಸುತ್ತೇನೆ.
ಹಿಂಬದಿಯಿಂದ ನನ್ನಂತೆ ಹೊರ ಹೋಗಲು ವ್ಯಕ್ತಿಯೊಬ್ಬ ಹೊಸಿಲು ದಾಟಿ ಹೊರಟಂತೆ ನಾನೂ ಹೋಗಬೇಕು ಎನ್ನುವಾಗಲೇ ಒಂದು ವಿಚಿತ್ರ ಅನುಭೂತಿಯುಂಟಾಗಿ ನೋಡಲು ಹೆಡೆಯ ಆಕಾರದಿ ಬಳ್ಳಿಯಂತೆ ನನ್ನ ಕಾಲುಗಳಿಂದ ಮೈ ಪೂರ ಆವರಿಸಿ ಕೊಳ್ಳುತ್ತೆ ಭಯವಾದರೂ ಶಿವನಾಮಸ್ಮರಣೆಯಿಂದ ಅಲ್ಲಿಯೇ ನಿಲ್ಲಲಾಗದೆ ಹೊರ ಬರಲಾಗದೆ ಒದ್ದಾಡಿದರೂ ಆ ಹಾವು ತಲೆಯ ಮೇಲ್ಬಾಗಕೆ ಬಂದು ಹೆಡೆಯೆತ್ತಿ ನನ್ನಲ್ಲಿಯೇ ಕಲ್ಲಿನಂತೆ ಲೀನವಾಗುತ್ತೆ. 
ಓಂ ನಮಃ ಶಿವಾಯ
ಶಿವಚೆನ್ನ
೧೦.೦೨.೧೯೯೧

4 comments:

 1. ನಾಗಪ್ಪನ ಮೂಲಕ ನಾಗಭೂಷಣನ ಸಾಕ್ಷಾತ್ಕಾರ!

  ReplyDelete
 2. ೯೧ ರ ಕತೆಯನ್ನ ಈಗ ಪ್ರಕಟಿಸಿದ್ದೀರಲ್ಲ ದೇವ್ರು !!!
  ಅಂದ ಹಾಗೆ ದೃಷ್ಯಾವಳಿಯಲ್ಲ ದೃಶ್ಯಾವಳಿ. ದೃಶ್ಯ ಅಂತ ಇದೆ ದೃಷ್ಯ ಇಲ್ಲ.

  ReplyDelete
 3. ಲಹರಿ ಚೆನ್ನಾಗಿದೆ :-)

  ReplyDelete
 4. ಧನ್ಯವಾದಗಳು Prashasti ಯವರೆ, ನನ್ನ ಬ್ಲಾಗಿಗೆ ಭೇಟಿಯಿತ್ತು, ಒಂದೆರಡು ಮಾತುಗಳಿಂದ ಮತ್ತಷ್ಟು ಬರೆಯಲು ಪ್ರೋತ್ಸಾಹಿಸಿದ್ದಕ್ಕೆ.

  ReplyDelete