Friday, June 27, 2014

" ದೇವರ ಆಟ ಬಲ್ಲವರಾರು "....??

ಆಗಷ್ಟೇ ... ಸ್ನಾನ ಮುಗಿಸಿ, ತಿಂಡಿ ತಿಂದು
ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ...?
ಆಯಾಸದ ಮೈಮನಸ್ಸಿಗೂ... ಕೊಂಚ ಆರಾಮ
ಆಸ್ಪತ್ರೆಗೆ ಆನಂತರ ಹೋದರಾಯ್ತೆಂದು
ಹಾಸಿಗೆಯ ಮೇಲೆ ಹಾಗೆಯೇ.... ಮೈ ಚೆಲ್ಲಿ
ಇನ್ನೇನು ಮಲಗಿ ವಿಶ್ರಮಿಸಬೇಕು
ಒಮ್ಮೆಲೇ... ಬಾಗಿಲ ದಬ ದಬ ಬಡಿವ ಸದ್ದು
ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ
ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ
ಅಭೀ... ಅಭೀ... ಹೋಗಿ ನೋಡ ಬಾರದೆ
ಕರೆದರೂ... ಇವಳ ಸುಳಿವಿಲ್ಲ, ಉತ್ತರವಿಲ್ಲ
ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ ಹೋದಳೋ...? ಕಂಗಾಲಾಗಿ ದಡಬಡಿಸಿ ಎದ್ದು
ಜೋರು ದನಿಯಲ್ಲಿಯೇ... ಯಾರು ಯಾರೆಂದು ಪ್ರಶ್ನಿಸಿ
ಬಾಗಿಲ ತೆಗೆದಿದ್ದೆ ತಡ
ಹಸಿದ ಹೆಬ್ಬುಲಿ ಕಾದಂತೆ ಹತ್ತಾರು ಕೈಗಳು
ಒಮ್ಮಿಂದಲೊಮ್ಮೆ ಮುಖ ಮೂತಿ ನೋಡದೆ
ಹಿಗ್ಗಾ-ಮುಗ್ಗ ಎಲ್ಲಂದರಲ್ಲಿ ಹೊಡೆದ ಹೊಡೆತಕ್ಕೆ
ತುಟಿ ಒಡೆದು, ಮೂಗು ಬಾಯಲೆಲ್ಲಾ.... ರಕ್ತಸಿಕ್ತ
ಸೂ... ಮಗನಿಗೆ ಇನ್ನೆರಡು ತದಕ್ರಿ ಅಯ್ಯೋಗ್ಯನ ತಂದು
ಪ್ರೀತಿ ಮಾಡೋಕೆ, ಸುತ್ತಾಡೋಕೆ ಒಬ್ಬಳು
ಕಟ್ಕೊಂಡು ಸಂಸಾರ ಮಾಡೋಕೆ ಇನ್ನೊಬ್ಬಳು ಬೇಕು
ಒಳ ಹೋಗಿ ಅವಳನ್ನ ಎಳ್ಕೊಂಡ್ ಬನ್ರೋ..
ಬೇವರ್ಸಿ ನನ್ಮಕ್ಕಳಿಗೆ ತಲೆ ಬೋಳಿಸಿ, ಕತ್ತೆ ಮೇಲೆ ಕೂರಿಸಿ ಊರೆಲ್ಲಾ.... ಮೆರವಣಿಗೆ ಮಾಡ್ಬೇಕು
ಜನರ ಮಧ್ಯೆ ಅದೆಲ್ಲಿದ್ದಳೋ.... ಬಂದವಳೆ
ಚಪ್ಪಲಿಯಿಂದ ರಪ ರಪ ಬಾರಿಸಿದ್ದೇ... ಬಾರಿಸಿದ್ದು
ನಾಲ್ಕು ವರ್ಷಗಳಿಂದ ನಾ ಇವಳನ್ನೇನ...
ಇಷ್ಟಪಟ್ಟು, ಕಷ್ಟಪಟ್ಟು ಮನಸಾರೆ ಮೆಚ್ಚಿ,
ಪ್ರೀತಿಸಿ ಅಂತರಂಗದಲ್ಲಿರಿಸಿ ಆರಾಧಿಸಿದ್ದು
ಗುರೂ... ಇವಳೆಂಥಾ ಫಿಗರ್ರೂ... ನೋಡ್ ಗುರೂ...
ಕಳ್ಳಬಡ್ಡಿ ಮಗ ಇವಳಿಗೂ...ಬಸಿರು ಮಾಡಿರುವ ಯೋಚಿಸಲಾಗದಷ್ಟು ನಿತ್ರಾಣಗೊಂಡ ಮನ
ಅಯ್ಯೋ.... ಅಮ್ಮಾ..., ಅಣ್ಣಾ...
ತಂಗಿಯ ಕೂಗಿಗೆ
ಧರ ಧರನೆ ಎಳೆದು ಒದ್ದು ತರುವವರ ಕಂಡು
ಅದೆಲ್ಲಿತ್ತೋ.... ಕೋಪ ಸಿಕ್ಕ ಸಿಕ್ಕವರಿಗೆ ಬಡಿದಿದ್ದೆ
ನಾಲ್ಕಾರು ಜನರ ಸಾವಿಗೂ...ನಾ ಕಾರಣನಾಗಿದ್ದೆ.

Tuesday, June 24, 2014

" ವಿರಹ ನೂರು ನೂರು ತರಹ "

ಮೊದ ಮೊದಲು
ಆ ನಿನ್ನ  ಕುಡಿ ನೋಟ ಕಂಡು
ನಾ ಅಂದು ಸೋತು ಹೋದೆ
ಬರಿ ತೊದಲು ಏಕೊ
ನನ್ನೊಳಗಿನ ಮಾತ
ನಾ ನಿನಗೆ ಹೇಳದೆ ಹೋದೆ
ಮನಸ್ಸಿಗೂ ತುಸು ಭಾರ
ನಿದಿರೆಯೂ ಬರದು ತೀರ
ನೀ ಬರದೆ ಈ ಬೆಳದಿಂಗಳೂ
ನನ್ನೆ ಸುಡುತಿಹದು ಇಂದು
ಏಕೊ ಏನೋ ಕಾಣೆ ಜಾಣೆ


Saturday, June 21, 2014

" ನಾವೇ.... ಸ್ಟ್ರಾಂಗು " - ೨

ನನ್ನರ್ಧಾಂಗಿ ದಿಢೀರ್ ಫೋನಾಯಿಸಿ
ಮೊದಲು fb ಯಲ್ಲಿ ಬರೆದುದ ಡಿಲೀಟ್ ಮಾಡಿ
ಏನು ಹೆಣ್ಮಕ್ಕಳೆಂದರೆ ನಿಮಗೆ ಅಪಹಾಸ್ಯವೆ
ಒಂಚೂರು ಹೆಣ್ಣೆಂದರೆ ಭಯ , ಭಕ್ತಿಯಿಲ್ಲ
ಹೀಗೆಲ್ಲಾ ಚಿತ್ರ ಸಹಿತ ಬರೆದು ಪ್ರಕಟಿಸಿದರೆ
ಎಲ್ಲರೂ... ಮೆಚ್ಚುವರೆಂದು ಕೊಂಡಿರೋ ಹೇಗೆ ?
ಓದಿದ ಸ್ತ್ರೀಯರೆಲ್ಲ ಹಿಡಿ ಶಾಪ ಹಾಕಿಯಾರು
ನಮ್ಮದು ಸ್ತ್ರೀ ಸಂಘವಿದೆ ಗೊತ್ತೇ.... ನಿಮಗೆ ?
ಸೌಟು, ಲಟ್ಟಣಿಗೆ, ಪೊರಕೆಯಿಡಿದು ಪ್ರತಿಭಟಿಸಬೇಕಾದೀತು ತಪ್ಪಿದರೆ, ಸಂಜೆ ಮನೆಗೆ ಬಂದಾಗ ವರಪೂಜೆ ಗೊತ್ತಲ್ಲ !

ಇವಳದೊಳ್ಳೆ ಕತೆ ವ್ಯಥೆಯಾಯ್ತಲ್ಲ
ನಾನೇನು ಹೆಣ್ಮಕ್ಕಳ ಅಗೌರಿಸಿದೆನೆ ?
ನಾ ನಿನಗೆ ಹೀಗೆ ಹೆದರುವುದ ಕಂಡು ಮಿತ್ರರೆಲ್ಲಾ...
ಹೆಂಡತಿಗೆ ಯಾಕೆ ಹೆದರುತೀ ಒಂಚೂರು ಗುಂಡು ಹಾಕು ಆಮೇಲೆ ನೀನೆ ನೋಡು ಗುರೂ...
ಸ್ಟ್ರಾಂಗು ಅವರೋ... ನೀನೋ... ಗೊತ್ತಾಗುವುದು
ಮಾತಿಗೆ ಮಾತು ಬಂದು ಆಗ ಬರದದ್ದೇ....
ಹೀಗೇನು ಹೆಣ್ಮಕ್ಕಳೇ ಸ್ಟ್ರಾಂಗು ಬಿಡು
ಬೆವರೊರಸಿ ಕೊಂಡು ಫೋನ್ ಕುಕ್ಕಿದ್ದೆ
ಅವಳ ಮೇಲೆ ಕೋಪ ತೋರಿಸಲಾದೀತೆ !

Friday, June 20, 2014

" ನಾನೇ...... ಸ್ಟ್ರಾಂಗು " - ೧

ಮನೆಯೊಳಗೆ ಅಡಿಯಿಟ್ಟೊಡನೆ 
ಎಂದೂ ಇಲ್ಲದ ನೀರವ ಸ್ಮಶಾನ ಮೌನ
ಹೆದರಿಕೆಯಿಂದ ಮಗ,ಮಗಳು ಒಂದೊಂದು ಕಡೆ
ಮುಖ ಊದಿಸಿ ಕೊಂಡು ಕೂತ ನನ್ನವಳು
ಮತ್ತೊಂದು ಕಡೆ;
ಅಪ್ಪಿತಪ್ಪಿ ಬಾಯ್ಬಿಟ್ಟರೆ ನನ್ನದೇ ಬಣ್ಣಗೇಡು
ಈ ಸ್ಥಿತಿಯಲ್ಲಿ ಏನೂ.. ಮಾತಾಡುವಂತಿಲ್ಲ
ನನ್ನವಳ ಕೈಗೆ ಸಿಕ್ಕರೆ ಮುಗಿಯಿತು
ಜುಟ್ಟು, ಜನಿವಾರವೆಲ್ಲಾ.... ಕಿತ್ತೆಸೆದು
ಒಮ್ಮೆಲೆ ದುರ್ಗಿ, ಚಂಡಿ, ಚಾಮುಂಡಿಯರೆಲ್ಲಾ 
ಮೈಮೇಲೆ ಬಂದು ದಾಳಿಯಿಟ್ಟರೆ ನನ್ನ ಗತಿ
ಗೋವಿಂದಾ.... ಗೋ... ವಿಂದ
ಮಿತ್ರನ ಒತ್ತಾಯಕ್ಕೆ ಮಣಿದು, ಬೇಡವೆಂದರೂ ... ಅಯ್ಯೋ...ಗುರೂ, ಹುಡಗಿಯರೇ ಬಿಯರ್ ಕುಡಿವಾಗ ನೀನೋ... ಅವರೋ... ಸ್ಟ್ರಾಂಗು
ಅಕ್ಕನಿಗೆ ಹೆದರಿಕೊಳ್ಳದಿರಲು ಧೈರ್ಯದ ಟಾನೀಕಷ್ಟೆ
ಕುಡೀ... ಗುರೂ.... ಬಿಡಬೇಡ ಕುಡಿ
ಹೌದೇ... ಮೊದಲೇ... ಹೇಳಬಾರದಿತ್ತೇನೋ....
ಒಂದೆರೆಡು ಪೆಗ್ಗು ಹೊಟ್ಟೆಗೆ ಬಿದ್ದಾಗಲೇ ಗೊತ್ತಾಗಿದ್ದು
ನಶೆಯ ಕಿಕ್ಕು ಮೈಯೊಳಗೆ ಏರಿದಂತೆಲ್ಲಾ...
ಛೇ.... ನನ್ನವಳಿಗೆ ಹೆದರುವುದೆ, ಲಟ್ಟಣಿಗೆ ಏನು ?
ಸೌಟಿಡಿದು ಬೇಕಾದರೆ ಬರಲಿ ನನಗೇನು ಭ ಭಯವೆ ?!
ತೊದಲಿ ತೊದಲಿ ತೊದಲಿಕೆಯಲ್ಲೇ.. ನಿದ್ದೆಗೆ ಜಾರಿದ್ದೆ

Thursday, June 19, 2014

" ನಮಗೂ.... ನಿಮ್ಮಂತೆ ಮನಸ್ಸಿದೆ "

ಹೊಚ್ಚ ಹೊಸತರಲ್ಲಿ ನನಗೂ ದಮ್ಮಿತ್ತು
ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ
ನನ್ನ ಓಡಿಸಿದಷ್ಟು ಹೊತ್ತೊಯ್ಯುವ
ಹಾವಂತೆ ನುಸುಳಿ, ಚಿರುತೆಯಂತೆ ಓಡುವ ಬಲವಿತ್ತು,
ಹಗಲಿರುಳು ಸಾರೋಟದಿ ಸಾಗುವ ಚಲವಿತ್ತು;
ಕಲ್ಲುಮುಳ್ಳಿರಲಿ, ಮಳೆ ಗಾಳಿಯಲಿ ಹೆದರದೆ
ಕೊಳಕು ಕೊಚ್ಚೆಯೊಳಿಳಿದು ಏಸಿಗೆಗೆ ಮುನಿಯದೆ ಹೊತ್ತೊಯ್ಯುವಾಗ ನನಗೆ ನಾನೇ... ಸರಿಸಾಟಿ
ಬಂದು ಕೂತವಳ ಮುಖದಿ ನಗೆಯರಳಿಸಿ
ಬಿಗಿದಪ್ಪಿಸಿ, ಮೈಮನಸ್ಸುಗಳಲ್ಲಿ ಬಿಸಿ ಏರಿಸಿ
ಅವರಾಟಗಳ ಕಣ್ತುಂಬಿ ಕೊಂಡು ನಗುತ್ತಿದ್ದೆ....

ಅಬ್ಬಬ್ಬಾ .... ಅವನೆಂಥವನಿರಬೇಕು ದಡೂತಿ ಡುಮ್ಮ ಕೂತೊಡನೆ ಜೀವ ವಿಲ ವಿಲನೆ ಒದ್ದಾಡಿದರೂ....
ಕಟುಕನ ಮುಂದೆ ಕುರಿ ಕಣ್ಣೀರಿಟ್ಟಂತೆ ನನ್ನ ಸ್ಥಿತಿ
ನೊಂದರೂ ... ಬಿಕ್ಕಳಿಸಿ ಗೋಳಾಡಿದರು ಬಿಡದೆ,
ಬೇಕಾಬಿಟ್ಟಿ ಬ್ರೇಕ್ ಹಾಕಿ, ಹೊಟ್ಟೆಯುರಿಸಿ
ನಾ ಹೇಳಿದರೂ.... ನಿಮಗ್ಯಾರಿಗೂ ನನ್ನ ನೋವು ಕೇಳಿಸದು
ದಿನ ಕಳೆದಂತೆ ನಿಮ್ಮಂತೆ ನನಗೂ.... ಮುಪ್ಪು
ದಾರಿ ಸವೆಸಿ ಸವೆಸಿ ಸವೆದ ಮೈಚರ್ಮ
ಹೆಜ್ಜೆ ಎತ್ತಿಡಲಾಗದೆ ನಿಶ್ಯಕ್ತಿಗೆ ತಲೆ ತಿರುಗಿ
ಮೈಯೆಲ್ಲಾ .... ನೋವು ನೋವು
ಚುಚ್ಚಿದ ಮೊಳೆ ಕಿತ್ತೆಸೆದು ತೇಪೆ ಹಚ್ಚಿ;
ಪಂಚರ್ ಹಾಕುವವನ ಮಾತ ಕೇಳಿ
ಕೊನೆಗೊಂದು ದಿನ ಈ ದರಿದ್ರದ್ದು
ಎಲ್ಲಾದರು ನಿಮ್ಮ ಪ್ರಾಣ ತಿಂದೀತು
ಮೊದಲು ಬದಲಾಯಿಸಿ,
ಹೊಸದು ಟಯರ್ ಹಾಕಿ ಎನ್ನುವಾಗ
ನಾ ಇಷ್ಟು ವರ್ಷ ಕಾಪಾಡಿದ್ದು ಎಲ್ಲವೂ ... ವ್ಯರ್ಥ !!

Wednesday, June 18, 2014

" ಯಡವಟ್ಟಾಯ್ತು " - ೩

ಆಟೋದಿಂದಿಳಿದು ಬಂದವಳ ನೋಡಿ
ಅವಳು ಹೇಳಿದ ಡ್ರೆಸ್ ಕಲ್ಲರ್,
ನೀಳ ಕೇಶರಾಶಿ ಎಲ್ಲವೂ ಸರಿಯಾಗಿಯೇ ... ಇದೆ
ಆದರೆ ಅವಳ ವಯಸ್ಸೇಕೋ ....
ನನಗಿಂತ ಎರಡರಷ್ಟು ಹೆಚ್ಚಾದಂತೆ ಕಂಡರೂ...
ಅವಳ ದಡೂತಿ ದೇಹವ ಕಂಡು ಬೆಚ್ಚಿದ್ದೆ; !
ಕಣ್ಣಿಗೆ ಕಾಣದ ಹಾಗೆ, ಮರದ ಮರೆಗೆ ಸರಿದು
ಇವಳೇ... ಇರಬೇಕೆಂದು ಮನ ಹೇಳಿದರೂ...
ಒಂದು ಕ್ಷಣ ಗಲಿಬಿಲಿಗೊಂಡು ಅನುಮಾನಿಸಿ
ಛೆ ಛೇ.... ಇರಲಾರದು, ಇವಳೆಲ್ಲಿ ಅವಳೆಲ್ಲಿ ?
ಆ ಸುಸ್ವರದ ಸಿರಿ ಕಂಠದ ಕೋಗಿಲೆಯಲ್ಲಿ ?
ಮುಖಪುಟದಿ ಪ್ರೀತಿಗೆ ಮುನ್ನುಡಿ ಬರೆದು,
ಗಂಟೆಗಟ್ಟಲೆ ಸಂದೇಶಗಳ ವಿನಿಮಯದಿ
ಮನವ ಕದ್ದವಳ ನಾ ಮರೆಯಲಾದೀತೆ ?
ತನು ಮನ ಎಲ್ಲವೂ... ಅವಳೆ ಆಗಿರುವಾಗ
ಮತ್ತೊಬ್ಬಳ ಪ್ರೀತಿಸುವುದು ಸರಿಯೆ ?
ಎಷ್ಟೊಂದು ಹಗಲುಗನಸುಗಳ ಕಂಡಿದ್ದೆ;
ನನ್ನವಳು ಆಗಿರಬೇಕು, ಈಗಿರಬೇಕು
ಒಂದೇ ... ಎರಡೆ, ನೂರಾರು ...!!
ಒಮ್ಮೆ ನಿನ್ನ ಮನಸಾರೆ ಕಣ್ತುಂಬಿ ಕೊಂಡು
ಮನದಣಿಯೆ ಮುದ್ದಿಸ ಬೇಕು
ನೀನಿಲ್ಲದೆ ಈ ಜಗವೆಲ್ಲ ಶೂನ್ಯ ಶೂನ್ಯ
ಬೇಗ ಬಂದು ಬಿಡು ಚಿನ್ನೂ....
ನಾ ಇನ್ನು ಕಾಯಲಾರೆ...? ನೀ ಬರುವೆಯಲ್ಲಾ....!!
ಆರು ತಿಂಗಳ ಪ್ರೀತಿಗೆ ಕರಗಿ ಬಂದವಳ ನೋಡಿ
ಛೇ.... ಇದೆಂಥಹ ಪ್ರೀತಿ, ಪ್ರೇಮ
ನಾ ಮೋಸ ಹೋದೆನೇ....?
ಎರಡು ಮಕ್ಕಳ ತಾಯಂತಿರುವ ಇವಳ
ನಾ ಇಷ್ಟು ದಿನ ಇಷ್ಟಪಟ್ಟು ಪ್ರೀತಿಸಿದ್ದು
ಯಡವಟ್ಟಾಯ್ತು ..... ತಲೆಕೆಟ್ಟೋಯ್ತು .....!!!

Saturday, June 14, 2014

" ಕನಸೋ.... ಇದು, ನನಸೋ.... ಇದು " !!!

ಗಾಡ ನಿದ್ದೆಯಲ್ಲಿದ್ದವನ ಎಬ್ಬಿಸಿತ್ತು
ಕಾಲಿಂಗ್ ಬೆಲ್ಲಿನ ಜೋರು ಶಬ್ಧ
ಬೆಚ್ಚಿ ಬಿದ್ದು , ಕಣ್ಣುಜ್ಜುತ ಮೇಲೆದ್ದಿದ್ದೆ
ಹೊತ್ತಲ್ಲದ ಹೊತ್ತಲ್ಲಿ ಯಾರಿರಬಹುದು...?
ನನ್ನವಳೋ...... ಮಲಗಿದರೆ ಮುಗಿಯಿತು
ಇವಳ ಎಬ್ಬಿಸಿದರೂ ಏನೂ ಪ್ರಯೋಜನವಿಲ್ಲ;
ಮೈಮೇಲೆ ಹಾವು, ಚೇಳು ಹರಿದಾಡಿದರೂ...
ಏನೂ.... ಗೊತ್ತಾಗದು, ಎಚ್ಚರವಾಗದು
ಇವಳೆಲ್ಲೋ... ಕುಂಭಕರ್ಣನ ವಂಶದವಳಿರಬೇಕು
ಹೇಳಲಾಗದೆ ನಿದ್ದೆಗಣ್ಣಲ್ಲೇ ತಡವರಿಸಿ ಎದ್ದು
ಬಾಗಿಲ ಬಳಿ ಬಂದು ಯಾರು ಯಾರದು...?
ನಾನೆ ರ್ರೀ... ಎಂದಿತು ಸುಕೋಮಲ ಹೆಣ್ಣಿನ ಧ್ವನಿ
ನಾನು ಎಂದರೆ ಹೆಸರು, ಊರಿಲ್ಲವೆ ನಿನಗೆ ?
ಗಡುಸಾಗಿ ಪ್ರಶ್ನಿಸಿ ಥೂ.. ಹಾಳಾದ್ದು ಹೊತ್ತುಗೊತ್ತಿಲ್ಲ
ಈ ಭಿಕ್ಷುಕರಿಗೆ ಊರಲ್ಲಿ ಹೇಳುವರಿಲ್ಲ , ಕೇಳುವರಿಲ್ಲ
ಮೈ ಬಗ್ಗಿಸಿ ದುಡಿಯದೆ, ಹಾಯಾಗಿ
ತಿರುದುಣ್ಣುವುದೇ.... ಇವರ ಕಾಯಕ
ಅಯ್ಯೋ... ಮುಂದೆ ಹೋಗಮ್ಮ ನಿನ್ನಂತವರು
ಬೆಳಿಗ್ಗೆಯಿಂದ ಬಂದು ಹೋದವರೆಷ್ಟೋ .....!!!
ನನ್ನವಳು ಏನೂ... ತಂಗಳು ಪಂಗಳು ಉಳಿಸಿಲ್ಲ
ಇಂದು ನನಗೇ... ಏನೂ ಸಾಕಾಗಲೇ... ಇಲ್ಲ
ಇನ್ನು ನಿನಗೆಲ್ಲಿಂದ ತಂದು ಹಾಕಲಿ
ಈ ಹೊತ್ತಲ್ಲದ ಹೊತ್ತಲ್ಲಿ ಭಿಕ್ಷಾಟಣೆಗೆ ಬರಬೇಕೆ....?
ರ್ರೀ... ನಾನು ರ್ರೀ.... ನಿಮ್ಮ ಪುಷ್ಪಾ...
ಬೇಗ ಬಾಗಿಲು ತೆಗೆಯ ಬಾರದೆ ತುಂಬಾ ಹಸಿವು
ನೋಡಿ ಅಮ್ಮ ಇಲ್ಲೇ... ಸುಸ್ತಾಗಿ ಕೂತಿಹರು
ಹಾಳು ಬಸ್ಸು ಕೈಕೊಟ್ಟು, ಇಷ್ಟು ತಡವಾಯ್ತು
ಮೈಯಲ್ಲ ಬೆವೆತು ಮತ್ತೊಮ್ಮೆ ಬೆಚ್ಚಿ ಬಿದ್ದಿದ್ದೆ,
ಆಗಾದರೆ ನನ್ನ ಪಕ್ಕ ಮಲಗಿದವಳು ಯಾರು ?
ಇವಳೆಲ್ಲಿ...?, ಚಂದ್ರನಂತೆ ಹೊಳೆವ ಅವಳು...!!!
ಆ ನೀಳ ಕೇಶರಾಶಿ, ತುಂಬಿದೆದೆಯಲ್ಲರಳಿದ ಯೌವನ ಹುಣ್ಣಿಮೆಯ ಬೆಳದಿಂಗಳ ರೂಪ ಸೌಂದರ್ಯದ ವದನ
ನನ್ನ ಮನವ ಅರಿತವಳಂತೆ ದೆವ್ವವಿರಬೇಕು ರ್ರೀ...?!
ದೆ ದೆ ದೆ ದೆವ್ವವೇ.... ಬಾಯೆಲ್ಲಾ ಒಣಗಿ
ಮಾತಾಡದೆ ಮೈಮನ ಗರಬಡಿದಿತ್ತು
ಸರಿಯಾಗಿ ನನ್ನ ಕಣ್ಬಿಟ್ಟು ನೋಡ್ರೀ....
ಏನಾದ್ರೂ... ಯಡವಟ್ಟು ಮಾಡ್ಕೊಂಡ್ರೋ... ಹೇಗೆ?
ಗೊತ್ತಲ್ಲ, ಮಾರಿ.......ಹಬ್ಬ!!

Tuesday, June 3, 2014

" ನೂಪುರ "

ಎಲ್ಲೋ....
ಬರುತಿರುವ
ಅವಳಾಗಮನದ
ಕಾಲ್ಗೆಜ್ಜೆಯ ಅಲೆಗಳಿಗೆ
ಏಕೊ ಏನೋ ನನ್ನೆದೆಯೊಳಗೆ
ಮಿಡಿತದ, ಮಿಂಚಿನ
ಹೊಸ ಪ್ರೀತಿಯ ಸಂಚಲನ ...
ಎಂದೂ... ಕಾಣದ, 
ಹೇಳದ ಚಡಪಡಿಕೆಗೆ
ನರನಾಡಿಗಳಲ್ಲಿ ಪುಟಿದೇಳುವ
ರೋಮಾಂಚನದ ವ್ಯಾಕರಣ...!! 

Sunday, June 1, 2014

" ಯಡವಟ್ಟು "....!!! ೨

ಏಕೋ..ಏನೋ.. ನಿದ್ದೆಯಿಲ್ಲದೆ ಒದ್ದಾಡುತ್ತಿದ್ದರೆ
ನನ್ನವಳಿಗೆ ಎಲ್ಲಿಲ್ಲದ ಮುಸಿಮುಸಿ ನಗು
ನನ್ನ ತಲೆಯೊಳಗೆ ಅನುಮಾನದ ಹುಳ ಬಿಟ್ಟು
ಯೋಚಿಸುವಂತೆ ಮಾಡಿ, ಮಗ್ಗುಲ ಬದಲಾಯಿದರೂ
ಹಾಳಾದ್ದು ಹತ್ತಿರ ಸುಳಿಯದು ನಿದ್ದೆ;
ಎದೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳಿರುವಾಗ
ಈ ವಯಸ್ಸಲ್ಲಿ ಮತ್ತೊಂದು ಮಗು ಬೇಕಿತ್ತೆ...?
ನಮ್ಮದೇನು ಮಕ್ಕಳಿಲ್ಲದ ಸಂಸಾರವೆ...?
ಇವಳಿಗಾದರು ಒಂಚೂರು ಬುದ್ದಿ ಬೇಡ ?
ಇವಳ ಅಂದು, ಆಡಿಕೊಂಡರೇನು ಬಂತು ಭಾಗ್ಯ !
ಎಲ್ಲಾ.... ನನ್ನಿಂದಾದ ತಪ್ಪುಗಳೆ,
ಉಪ್ಪು, ಹುಳಿ, ಖಾರ ತಿನ್ನುವ ದೇಹ
ಸುಮ್ಮನಿರದೆ ಇಷ್ಟೆಲ್ಲಾ ... ಯಡವಟ್ಟಾಯ್ತು
ನಾನೇ... ಒಂದಷ್ಟು ಎಚ್ಚರ ವಹಿಸಿದ್ದಿದ್ದರೆ ಹೀಗಾಗುತ್ತಿತ್ತೆ? 
ಕಂಡವರು ನಿಲ್ಲಿಸಿ ಕೇಳಿದರೆ ಏನೆಂದು ಉತ್ತರಿಸಲಿ
ಎಲ್ಲರ ಮುಂದೆ ಇನ್ನು ತಲೆಯೆತ್ತಿ ಓಡಾಡುವಂತಿದೆಯೆ? 
ನಡುರಾತ್ರಿಯ ಸುಖ ನಿದ್ದೆಯಲ್ಲಿದ್ದ ನನ್ನವಳ ಎಬ್ಬಿಸಿ
ನಿಜವೇನೇ... ಪಾರು, ನೀ ಬಸಿರಾಗಿರುವೆಯೇ...?
ನಿಮಗೇನು ತಲೆಗಿಲೆ ಕೆಟ್ಟಿದೆಯೇ....?
ತೆಪ್ಪಗೆ ಮಾತಾಡದೆ ಮಲಗಿ, 
ನೀವಿಂತಹ ಬುದ್ದು ಅಂದು ಕೊಂಡಿರಲಿಲ್ಲ
ಕೂಗಾಡಿ ಬುಸುಗುಟ್ಟಿದರು ಬಿಡದೆ
ಬೆಳಿಗ್ಗೆ ಬೇಗ ರೆಡಿಯಾಗು ಡಾಕ್ಟರ್ ಬಳಿ ಹೋಗಿ
ನಿನ್ನ ಹೊಟ್ಟೆಯೊಳಗಿನ ಪಿಂಡ ತೆಗಿಸಿ ಬರುವ
ರ್ರೀ.... ನನಗೆ ಬರುವ ಕೋಪಕ್ಕೆ
ನಾನೇನು ಬಸಿರಾಗಿರುವೆ ಎಂದನೆ...?
ಮುಟ್ಟು ನಿಂತು ಮೂರು ತಿಂಗಳಾಯ್ತೆಂದೆ
ಮುಂದೆ ಮುಟ್ಟಾಗುವ ಕಿರಿಕಿರಿ ಇನ್ನಿಲ್ಲ;
ಒಂದೂ... ಅರ್ಥವಾಗದು ಏನು ಗಂಡಸರೋ... ನೀವು?
ಮತ್ತೆ ಮುಸುಗಿಕ್ಕಿ ನಕ್ಕು ಮಲಗಿದವಳ ಕಂಡು 
ನನ್ನೊಳಗೂ... ನಗೆಬುಗ್ಗೆ ಹರಿಸಿದ್ದಳು....