Thursday, December 29, 2016

ಅಮ್ಮಾವರ ಗಂಡ

ಒಮ್ಮೆ ನನ್ನವಳು,
ಮಕ್ಕಳ ಮುಂದೆಯೇ
ನನ್ನ ಜೊತೆ ಜಗಳಕ್ಕೆ ನಿಂತದ್ದು ಕಂಡು
ಜೋರು ಧ್ವನಿಯಲ್ಲಿಯೆ
ಈ ಊರಲ್ಲಿ ನನಗೆ ಇನ್ನೊಂದ್ ಹೆಸರಿದೆ
ನಿನಗೆ ಗೊತ್ತೇನೇ..... ?
ಯಾರೂ.... ನನ್ನ ಎದುರಿಗೆ ಬರುವುದಿರಲಿ
ತಲೆ ಹೊರ ಹಾಕಿ ನನ್ನ ನೋಡಲಾರರು
ನಿಂತಲ್ಲಿಯೇ ಒಂದು, ಎರಡು ಶುರು
ಅಂತಹದರಲ್ಲಿ ಅದು ಹೋಗಿ ಹೋಗಿ ನೀನು
ನನ್ನ ಮುಂದೆ ಹೀಗೆ ಬಾಲ ಬಿಚ್ಚುವುದೆ ?
ಹ್ಞೂಂಕರಿಸಿದ್ದಕ್ಕೆ ಹೆದರಿ, ಬೆದರಿ
ಒಳ ಹೋದಳೆಂದು ಕೊಂಡರೆ
ಲಟ್ಟಣಿಗೆಯ ಝಳಪಿಸುತ ಬಂದು
ಏನಂದ್ರಿ ನೀವು ? ಇನ್ನೊಂದು ಹೆಸರೇ..... ನಿಮಗೆ !?
ಏನದು ? ಹೇಳಿದರೆ ಸರಿ ಇಲ್ಲವಾದರೆ ಗೊತ್ತಲ್ಲ
ಹೋದ ಬಾರಿ ಮೊಟಕಿದ್ದು ನೆನಸಿಕೊಂಡು
ಆ ನೋವಿನ ಭಯಕೆ ಬಾಯ್ತಪ್ಪಿ ನಿಜ ಹೊರ ಬಿದ್ದಿತ್ತು
" ಅಮ್ಮಾವರ_ಗಂಡ " ಕಾಣೆ



Thursday, December 22, 2016

#ಬೇಡಾರೀನನ್ನಫಜೀತಿ



ರಾತ್ರಿಯೆಲ್ಲಾ ನಿದ್ದೆಯಿಲ್ಲ
ಬರೀ ಒದ್ದಾಟ,
ನಿಟ್ಟುಸಿರಿನ ತಿಣಕಾಟ
ಬೆಳಗಿನ ತಿಂಡಿ, ಕಾಫಿಗೆ
ಒತ್ತಾಯಿಸಿ ನನ್ನ ಕರೆದಿರುವಳು
ಹೋಗಲೊ ಬೇಡವೋ ಎಂಬ ಜಿಜ್ಞಾಸೆಯಲ್ಲಿ
ಮುಳುಗಿದವನಿಗೆ
ಬೆಳಗಿನ ಜಾವದಲ್ಲಿ ನಿದ್ದೆಗೆ ಶರಣಾಗಿ
ದಡಬಡಿಸಿ ಎದ್ದವನ ಮುಂದೆ
ಮೊಬೈಲ್ ಹಿಡಿದು
ಅದು ಯಾರೋ ನಿರ್ಮಲಾ ಅಂತೆ
ಮಗಳ ಕೊಂಕು ನಗೆ
ಇವಳಿಗೇನಾದರು ವಿಷಯ ಗೊತ್ತಾಗಿ ಹೋಯ್ತೆ
ಒಂದು ಕಡೆ ಖುಷಿ,
ಮತ್ತೊಂದೆಡೆ ನನ್ನವಳಿಗೆ ಗೊತ್ತಾದರೆ
ಸುಮ್ಮನೆ ಬಿಟ್ಟಾಳೆಯೆ ?
ಕೂಗಾಡಿ ಊರು ಕೇರಿ ಒಂದು ಮಾಡುವಳು
ಈ ವಯಸ್ಸಲ್ಲಿ ಇದೆಲ್ಲ ಬೇಕಿತ್ತೆ ?
ಎಷ್ಟಾದರು ಮುದ್ದಿನ ಮಗಳಲ್ಲವೆ
ಹಾಗೆಲ್ಲ ಎಂದೂ ನನ್ನ ಅನುಮಾನಿಸಳು
ಮೆಲ್ಲಗೆ ಮಗಳ ಹತ್ತಿರ ಕರೆದು
ನಿನ್ನ ಅಮ್ಮನೆಲ್ಲಿಯೇ  ಮನೆಯಲ್ಲಿರುವಳೋ
ಅಥವಾ ತರಕಾರಿ ತರಲು ಹೋಗಿರುವಳೋ
ಛೆ.... ಯೋಚಿಸುತ್ತ ಹೀಗೆ ಕೂತರೆ
ಇಂದು ಅವಳ ಭೇಟಿ ಮಾಡಿದಂತೆ
ಕರೆ ಮಾಡಿ ಇನ್ನೊಂದು ಘಂಟೆಯಲ್ಲಿರುವೆ
ಅರೆಬರೆ ಮಾತನಾಡಿ
ಬಾತ್ ರೂಮಿನ ಕಡೆ ಹೊರಟಿದ್ದೆ
ಸ್ನಾನ ಮುಗಿಸಿ ಟಿಪ್ ಟಾಪಾಗಿ ಹೋರಟವನ
ಮಗಳೇ ತಡೆದು ನಿಲ್ಲಿಸಿ
ಕಣ್ಣು ಮಿಟುಕಿಸಿ
ನೀವೇನು ಅಲ್ಲಿಗೆ ಹೋಗುವುದು ಬೇಡ ಪಪ್ಪಾ
ಅವರೆ ಇಲ್ಲಿಗೆ ಬರುವರು ಅಡ್ರೆಸ್ ಕೊಟ್ಟಿರುವೆ
ನಕ್ಕು ಹೋದವಳ ಸಿಗಿದು ಹಾಕುವಷ್ಟು
ಕೋಪ ಬಂದರೂ ಏನೂ.... ಮಾಡುವಂತಿಲ್ಲ
ಅಡ್ರೆಸ್ ಕೊಡಬೇಕಿತ್ತೆ
ಅರ್ಧ ದಾರಿಯಲ್ಲಿಯೇ ಅವಳ ತಡೆದು
ವಾಪಾಸ್ ಕಳುಹಿಸಿ ಬಿಡಬೇಕು
ಇಲ್ಲದಿದ್ದರೆ ಇಂದು ನನ್ನ ತಿಥಿ ಗ್ಯಾರಂಟಿ
ಅಕ್ಕಪಕ್ಕದವರಿಗೂ ಗೊತ್ತಾಗಿ
ಹೊರಗೆಲ್ಲೂ.... ಹೋಗುವಂತಿಲ್ಲ
ಮಾನ, ಮರ್ಯಾದೆ ನನ್ನಿಂದಲೇ ಹರಾಜು
ಅಲ್ಲಾ... ಅವಳ ಜೊತೆ ಕದ್ದು ಮುಚ್ಚಿ
ಘಂಟೆಗಟ್ಟಲೆ ಮಾತಾಡುವಾಗ ಇದ್ದ ಧೈರ್ಯ
ಈಗ ಏಕಿಲ್ಲ !?
ಯೋಚಿಸಲಾಗದೆ ತಲೆತಿರುಗಿ ಬಿದ್ದವನ
ಕೈಹಿಡಿದೆತ್ತೆ ಪೆಟ್ಟಾಯ್ತೆ ನನ್ ರಾಜ
ಅದೇ ಸುಕೋಮಲ ಸ್ವರ
ಬಂದೇ ಬಿಟ್ಟಳೇ.... ಭಯಕೆ ಕಣ್ ಬಿಟ್ಟರೆ
ನನ್ನವಳು ಹೇಗಿದೆ ಈ ನಿರ್ಮಲ ಕರಾಮತ್ತು ಎನ್ನಬೇಕೆ
#ಶಿವಚೆನ್ನ ೨೨.೧೨.೧೬

Tuesday, July 19, 2016

ನಿರುತ್ತರ

ನಾ ಏನೂ ಬರೆಯಲಾಗದೆ
ಒಳಗೊಳಗೆ ಒದ್ದಾಡುತ್ತಿದ್ದರೆ
ನನ್ನವಳಿಗೆ ಎಲ್ಲಿಲ್ಲದ ನಗು;
ಹಾಳಾದ್ದು ಮನದ ಪದಗಳೂ ಕೂಡ
ಇಂದೇ ಮುಷ್ಕರ ಹೂಡಿ ನಿಂತಿವೆ
ಏಕೆ ? ಹೀಗೇಕೆ ?
ನನ್ನನ್ನೇ ನಾ ಪ್ರಶ್ನಿಸಿಕೊಂಡರೂ
ಉತ್ತರ ಮಾತ್ರ ನಿರುತ್ತರ
®©ಶಿವಚೆನ್ನ ೧೯.೦೭.೧೬

ತಿರುಗುಬಾಣ

ಮನೆಗೆಲಸದ ಶಾಂತಿಗೆ
ವಾಂತಿಯಾದರೆ,
ನನ್ನವಳಿಗೇಕೆ ನನ್ನ ಮೇಲೆ ಸಿಟ್ಟು
ಕಣ್ಣ ಕೆಂಪಾಗಿಸಿ, ಹ್ಞೂಂಕರಿಸಿ
ನಿಜ ಹೇಳಿ ?
ನಿಮ್ಮದೋ... ಈ ಕೆಲಸ !
ನಿಮ್ಮಿಬ್ಬರ ಬಗ್ಗೆ ಮೊದಲೇ ಅನು-
ಮಾನವಿತ್ತು;  
ಛೇ ಛೇ... ನೀವಿಂತ ನೀಚ,
ಭಂಡ ಗಂಡನೆಂದು ಕೊಂಡಿರಲಿಲ್ಲ
ಹೋಗಿ ಹೋಗಿ ಅದು ಆ ಕೆಲಸದವಳ ಜೊತೆ
ಅಷ್ಟೊಂದು ಬರಗೆಟ್ಟು ಹೋಗಿದ್ದಿರೆ ನೀವು
ನಾಳೆ ಅವಳ ಮಗು,
ದೊಡ್ಡಮ್ಮಾ ಎಂದರೆ ನನ್ನ ಸ್ಥಿತಿ ಏನು ?
ನಿಮ್ಮ ವಂಶಸ್ಥರೆಲ್ಲ ಹೀಗೆಯೆ ?
ಎಲ್ಲೋ..... ಇದೆಲ್ಲವೂ 
ನಿಮಗೂ ರಕ್ತಗತವಾಗಿ ಬಂದಿರಬೇಕು
ಮುಚ್ಚೆ ಬಾಯಿ ಸಾಕು
ಹೊಲಸು ನಾಲಿಗೆ ಮಾತಾಡಿತೆಂದು
ನನ್ನನ್ನೂ ಮೈಲಿಗೆ ಮಾಡಬೇಡ
ನಿನ್ನಣ್ಣನ ಕಾಮತೃಷೆಗೆ ತುತ್ತಾದ
ಅಸಹಾಯಕ, ಅಮಾಯಕ ಹೆಣ್ಣುಮಗಳು
ಈಗ ನಿನ್ನ ಬಾಯಿ ಕಟ್ಟಿತೆ ? ಹ್ಞೂಂ  ಹೇಳು?
ನಾನೋ.... ನಿನ್ನ ಅಣ್ಣನೋ ....ನೀಚ !
®©ಶಿವಚೆನ್ನ ೧೯.೦೭.೧೬

Sunday, July 10, 2016

ಕಳೆದು ಕೊಂಡೆ ರೀ ನಾ ಕಳೆದು ಕೊಂಡೆ

ನಿದ್ದೆಯಲ್ಲಿದ್ದ ನನ್ನನ್ನ
ತಿವಿದೆಬ್ಬಿಸಿ,
ಮಿನುಗು ತಾರೆ ಕಲ್ಪನಾ ರೇಂಜಲ್ಲಿ
ನನ್ನವಳು ಒಂದೇ ಸಮ ಕಳಕ್ಕೊಂಡೇ
ರೀ..... ನಾ ಕಳಕೊಂಡೇ
ದಡಬಡಿಸಿ ಮೇಲೆದ್ದು
ಏನಾಯ್ತೇ..... ನಿನ್ನ ಚಿನ್ನದ ಸರ
ತಾಳಿ, ಮೊಬೈಲು ಕಳೆದು ಹೋಯ್ತೆ!?
ಹೋಗಲಿ ಬಿಡು ಮತ್ತೊಂದು ಕೊಂಡರಾಯ್ತು
ಇಲ್ಲವೆಂದ ನನ್ನವಳು,
ಮತ್ತಷ್ಟು ಅಳುವುದ ಕಂಡು
ಅದೇನೆಂದು ಹೇಳಬಾರದೆ ?
ಅಳು ಅಳುತಲೇ... ಲಟ್ಟಣಿಗೆ ಎನ್ನಬೇಕೆ ☺
ಶಿವಚೆನ್ನ ೧೦.೦೭.೧೬

ಹಬ್ಬ ಹಬ್ಬಾ

ಅದೇನು ಬೇಕೊ ಇಂದೇ ಕೇಳಿಕೊ
ಅದೆಷ್ಟೇ ಕಷ್ಟವಾದರು ಸರಿ,
ಶಕ್ತಿ ಮೀರಿ ಕೊಡಿಸುವೆ
ನಿನ್ನ ಜನುಮ ದಿನ
ನನಗೂ ಸಹ ಹಬ್ಬ !
ಮಲ್ಲಿಗೆಯ ಹೂವಲೇ ಮುಳುಗಿಸಿ
ಮೈಸೂರ್ ಪಾಕಲೇ ತೇಲಿಸಿ
ಆ ಚಂದ್ರ ತಾರೆಯರ ಹೆಡೆಮುರಿ ಕಟ್ಟಿ,
ಧರಧರನೆ ಎಳೆದು ತಂದು ಅತ್ತರೂ,
ತುರುಬು ಕಟ್ಟಿ ಮುಡಿಸುವೆ
ನನ್ನವಳು ನಕ್ಕು 
ಸಾಕು ಸಾಕು ನಿಮ್ಮದು ಏಕೋ ಅತಿಯಾಯ್ತು
ನನ್ನ ಬಳಿ ಈ ಆಟವೆಲ್ಲ ಬೇಡವೇ ಬೇಡ 
ಕೊಡಿಸುವುದಾದರೆ ಮಾತ್ರ ಹೇಳಿ
ಇಲ್ಲದಿದ್ದರೆ ಜಾಗ ಈಗಲೇ ಖಾಲಿ ಮಾಡಿ
ಚಿನ್ನದ ಗಣಿ, ವಜ್ರದ ಗಣಿಯನ್ನೇನು ಕೇಳಲಿಲ್ಲ
ನನ್ನದು ಸ್ವಾರ್ಥವಿದೆ ಕೇಳಿಕೊ ಎಂದದ್ದದ್ದೇ ತಪ್ಪಾಯ್ತು
ಯೋಚಿಸಿ ಯೋಚಿಸಿ ನನ್ನವಳು
ಒಂದೇ ಒಂದು ಲಟ್ಟಣಿಗೆ ಕೊಡಿಸಿ ಎನ್ನಬೇಕೆ ☺
ಶಿವಚೆನ್ನ ೧೦.೦೭.೧೬

Saturday, July 2, 2016

ಕೆಂಪಿರುವೆ

ತೆಪ್ಪಗೆ ಕೂತು,
ಸಿನೆಮಾ ನೋಡುವುದ ಬಿಟ್ಟು
ಅದೇನು ಇಲ್ಲೂ " ಕೈ " ಬಿಡುವುದೆ
ನಾಚಿಕೆಯಾಗ್ಬೇಕು ನಿಮ್ಮ ಜನ್ಮಕ್ಕೆ
ಥೂ...... ತೆಗಿಯಿರಿ ಸಾಕು
ಏನು ಗಂಡಸರೋ...  ಏನು ಕಥೆಯೊ
ನೋಡಿದವರು ಏನೆಂದು ತಿಳಿಯುವರೆಂಬ ಪರಿ-
-ಜ್ಞಾನ"ವಿದ್ದರೆ ತಾನೆ ನಿಮಗೆ ?
ಹಿಂದುಮುಂದು ಯೋಚಿಸಿದೆ ನನ್ನವಳು,
ಮುಖಕ್ಕೆ ಹೊಡೆದಂತೆ ಹೇಳಿದ ಮಾತಿಗೆ
ಸಿಟ್ಟು ನೆತ್ತಿಗೇರಿದರು
ಏನೂ ಮಾತಾಡುವಂತಿಲ್ಲ, ಮಾಡುವಂತಿಲ್ಲ
ಹತ್ತಾರು ಕಣ್ಗಳು
ನನ್ನತ್ತ ನೋಡಿ ಮುಸಿಮುಸಿ ನಕ್ಕರೆ ;
ಒಂದಿಬ್ಬರು ತೋಳೇರಿಸಿದುದ ಕಂಡು
ಮೇಲೆದ್ದವನ ಕೈಹಿಡಿದೆಳೆದು ದುರುಗುಟ್ಟಿ
ಏನೂ ಮಾತಾಡದೆ ಸುಮ್ಮನೆ ಕೂರ್ರಿ,
ಈ ಪ್ರತಾಪ, ಕೋಪ ತಾಪ ಇವರ ಮುಂದಲ್ಲ
ಕೈ ಬಿಡುವಾಗ ಇರಬೇಕಿತ್ತು
ಮತ್ತದೇ......ನನ್ನವಳಿಂದ ಅವಹೇಳನ !
ಮಾತನಾಡಲೂ ಅವಕಾಶವಿಲ್ಲದೆ
ಕುಳಿತಲ್ಲಿಯೇ... ಒದ್ದಾಡಿದ್ದೆ
ಛೆ....!! ಹೋಗಿ ಹೋಗಿ ಇವಳ ಜೊತೆ ಬರಬೇಕಿತ್ತೆ ?
ಹೀಗೆ ಹೋಗಿ ಬೇಗ ಬರುವೆ ಕಾಯುವಿರೆಲ್ಲ ☺



Sunday, June 19, 2016

ಯಾರಿಗೆ ಹೇಳ್ಕೊಳ್ಳಲಿ ನಮ್ ಪ್ರಾಬ್ಲಮ್ಮೂ..


ಹುಸಿ ಕೋಪ ತೋರಿ
ನನ್ನವಳು,
ಸೊಂಟ ಉಳುಕಿದೆ ಸುಮ್ಮನೆ ಮಲಗಿ
ಇಂದು ನನ್ನಿಂದಾಗದು
ನಾಳೆಗೆ ಬೇಕಾದರೆ ನಿಮ್ಮಿಚ್ಛೆಯಂತೆ ಹಬ್ಬ
ಆಚರಿಸಿಕೊಳ್ಳಿ
ಇಂದೇನಿದ್ದರು ನಿಮಗೆ ಉಪವಾಸ;
ಉರಿವ ಬೆಂಕಿಯಂತ್ತಿದ್ದ ಮೈ ಮನಸ್ಸಿನ
ಆಸೆಗಳಿಗೆ ತಣ್ಣೀರೆರಚಿ
ಮಗ್ಗುಲು ಬದಲಾಯಿಸಿ ನಿದ್ರೆಗೆ ಜಾರಿದುದ ಕಂಡು
ನಾ ನಿಟ್ಟುಸಿರ ಬಿಡಬೇಕಷ್ಟೆ
ಈ ಹೆಂಗಸರಿಗೆ ಅರ್ಥವಾಗುವುದೇ ಇಲ್ಲ
ಗಂಡಸರ ಮನೋಕಾಮನೆಗಳು 

" ಕಾಕಾಯಣ "


ಕಾಗೆ ತಾನೆ ಏತದ್ದು
ಹೋಗಲಿ ಬಿಡು,
ಅದೇನು ತೋಳೆದರೆ ಹೋಗದೆ
ನೀ ಏನೂ ಮಾತಾಡದೆ ಸುಮ್ಮನೆ ಇದ್ದು ಬಿಡು
ನಿನ್ನ ಚಿಕ್ಕಮ್ಮನಿಗೆ ಇದೆಲ್ಲ ಗೊತ್ತಾದರೆ ಮುಗಿಯಿತು 
ಆಕಾಶ, ಭೂಮಿಯೆಲ್ಲ ಒಂದು ಮಾಡಿ
ಅಪಶಕುನ, ಶನಿಪರಮಾತ್ಮ ಹೆಗಲೇರಿದ
ಎಂದೆಲ್ಲ ಹೆದರಿಸಿ;
ತನ್ನೂರಿಗೆ ಹೋಗುವವರೆಗೂ ಗೂಬೆ ಕೂರಿಸದೆ ಹಾಗೆ ಬಿಡರು
ನೀ ಎಂಥಾ !! ...... ಪೆದ್ದಿಯೇ ?
ಅಷ್ಟೆಲ್ಲಾ ಹೇಳಿದರು ನಿನ್ನ ಚಿಕ್ಕಮ್ಮನಿಗೆ ಹೇಳಿರುವೆ
ನೋಡು ಈಗೇನಾಯ್ತು ಕಾರು ಹೋಯ್ತು
ಇನ್ನು ಈ ಜನ್ಮದಲ್ಲಿ ಕಾರು ಏರುವಂತಿಲ್ಲ
ಆದದ್ದೆಲ್ಲಾ ಒಳ್ಳೆಯದಕ್ಕೆಂದು ಕೊಂಡಿದ್ದರೆ
ಅರ್ಧದಷ್ಟು ನಿನ್ನ ಚಿಕ್ಕಮ್ಮನ ಪಾಪ ಪರಿಹಾರವಾಗುತ್ತಿತ್ತು 
ಅಲ್ಲವೇನೇ.... ನಾ ನಗಾಡಿದ್ದೆ

ಮಗ್ಗಿಯ ಸುಗ್ಗಿ

ಛೇ.....!! ಸರಿಯಾಗಿ ಮಗ್ಗಿ ಹೇಳಲಿಲ್ಲವೆಂದು
ನಾ ಹಾಗೆ ಆ ಹುಡುಗನಿಗೆ ಬಗ್ಗಿಸಿ, 
ಬೆತ್ತದಿಂದ ಬಾರಿಸಬಾರದಿತ್ತು
ಬಾಸುಂಡೆ ಬಂದಿರಬೇಕು
ಇದೇ ಯೋಚನೆಯಲ್ಲೇ ಜಾಗಿಂಗ್ ಮಾಡುತ್ತಿದ್ದವನ
ಅಕ್ಕಪಕ್ಕ ಮಹಿಳಾಮಣಿಗಳು ಬಂದುದ ನೋಡಿ
ಹೊಡೆತ ತಿಂದ ಆ ಹುಡುಗನ ಅಮ್ಮ,
ಅಥವಾ ಸಂಬಂಧಿಕರೋ ಇವರಿರಬೇಕು
ಒಳಗೊಳಗೇ.... ಭಯವಾಗಿತ್ತು
ನಿಲ್ಲಿಸಿ ಒಂದಷ್ಟು ಮುಖಕ್ಕೆ ಮಂಗಳಾರತಿ ಎತ್ತಬಹುದು
ನನ್ನಂತ ಮೇಷ್ಟ್ರಿಗೆ ಇವರಿಂದ ಇನ್ನೇನು ಮಾಡಲು ಸಾಧ್ಯ
ಎಲ್ಲವೂ ನನ್ನ ಭ್ರಮೆಯಷ್ಟೆ;
ಯಾವುದಕ್ಕೂ ಜಾಗ್ರತೆಯಿಂದಿದ್ದರೆ ನನಗೇ ಕ್ಷೇಮ
ಮುಂದಾಲೋಚನಗೆ ನನ್ನ ಬೆನ್ನು ನಾನೇ ತಟ್ಟಿಕೊಂಡು
ಜೋರಾಗಿಯೇ...... ನಕ್ಕಿದ್ದೆ
ನಾ ನಕ್ಕ ರಭಸಕ್ಕೆ ಅದೆಲ್ಲಿತ್ತೋ ಹಾಳು ನಾಯಿ
ದುರಗುಟ್ಟಿ ಅಟ್ಟಿಸಿಕೊಂಡು ಬರಬೇಕೆ ?
ಗ್ರಹಚಾರ ಕೈ ಕೊಟ್ಟಾಗ ಹಗ್ಗವೂ ಹಾವಂತೆ
ಕಳ್ಳ ಕಳ್ಳ ಕಳ್ಳಾ.... ಚೈನ್ ಕಳ್ಳ ಹಿಡಿಯಿರಿ ಬಿಡಬೇಡಿ
ಓಡುತಲಿದ್ದವನ ಹಿಡಿದು, ಹಿಗ್ಗಾಮುಗ್ಗ ಜಡಿದು
" ಅಯ್ಯೋ ....  ಸಾರ್ " ನೀವಾ.....!! ಎನ್ನಬೇಕೆ


ಟೊಮಟೋ ಬೆಲೆ ಗಗನಕ್ಕೆ

ಏನೆ ಏನೇ..... ಇದೂ ?
ಅನ್ನ ಸಾಂಬಾರೋ.... ಇಲ್ಲಾ ಕಲಗಚ್ಚೊ
ಉಪ್ಪಿಲ್ಲ, ಹುಳಿಯಿಲ್ಲ ಬರೀ ಖಾರ ಖಾರ
ರುಚಿ ಮೊದಲೇ ಇಲ್ಲ,
ನಿನ್ನ ಮುಖಕ್ಕೆ ಟಿವಿ ಸೀರಿಯಲ್ ಬೇರೆ ಕೇಡು
ಬಾಯಲ್ಲಿದ್ದುದ ಉಗಿದು ಕೂಗಾಡಿದ್ದೆ
ಕೊಡೋದು ಮೂರ್ ಕಾಸು,
ಕೋಣೆ ತುಂಬ ಹಾಸು ಅಂದರಂತೆ
ಯಾರೋ.... ನಿಮ್ಮಂತೋರು
ಟೊಮೆಟೋ ಬೆಲೆ ಗೊತ್ತೇನ್ರಿ ನಿಮ್ಗೆ
ಆಹಾ... ಬಂದ್ಬಿಟ್ರು ಬುದ್ಧಿ ಹೇಳೋಕೆ
ಬೇಕಿದ್ರೆ ತಿನ್ನಿ ಇಲ್ಲಾಂದ್ರೆ ಅಲ್ಲೇ... ಹೊರಳಾಡಿ
ನಿಮ್ಮಮ್ಮನ ಕರೆಸಿ ಇದೆಲ್ಲಾ ....  ಹೇಳುವೆ
ಸೌಟಿನಲಿ ಮೊಟಕಿ, ಹ್ಞಾಂ..... ಏನಂದ್ರೀ...!!
ಏನೂ.... ಇಲ್ಲವೆ, ಮೇಲೇಳ್ತೀನಿ ಅಂದೆ ಕಾಣೆ

ಬೇಡ ಸ್ವಾಮೀ ನನ್ನ ಫಜೀತಿ - ೧೩೪

ನನ್ನಲ್ಲಿ ಮುಚ್ಚುಮರೆಯಿಲ್ಲದೆ
ಪ್ರಾಮಾಣಿಕವಾಗಿ ಒಂದೂ ಬಿಡದೆ
ನಿಜ ಹೇಳಿ,
ಮದುವೆಗೆ ಮೊದಲು ಯಾರಾದರು
ಹುಡುಗಿಯರನ್ನ ಹಾಳು ಮಾಡಿ ನನ್ನ ಕೈಹಿಡಿದಿರೋ
ಅಥವಾ ಬೇರೆ ಬೇರೆ ಬೆಲೆವೆಣ್ಣುಗಳ ಜೊತೆ 
ವಿವಾಹಯೇತರ ಸಂಬಂಧಗಳು !
ಹಾಗೇನಾದ್ರು ಇದ್ದರೆ ಸುಳ್ಳುಪಳ್ಳು ಹೇಳಿ
ನನ್ನ ಯಾಮಾರಿಸಿದಿರೋ... ಗೊತ್ತಲ್ಲ
ವರದಕ್ಷಿಣಿಯ ಕಿರುಕೂಳದ ಕೇಸು
ನಿನ್ನದೊಳ್ಳೇ... ಕಥೆಯಾಯ್ತಲ್ಲೇ
ನನ್ನನ್ನೇನು ತಿಳಿದಿರುವೆ ?
ಯಾರೋ... ನಿನ್ನ ಕಿವಿ ಕಚ್ಚಿರಬೇಕು
ಇಲ್ಲಾ... ಆ ನಿನ್ನ ಚಿಕ್ಕಮ್ಮನ ಮಂತ್ರೋ-
-ಪದೇಶವಾಗಿರಬೇಕು
ಇತ್ತೀಚೆಗೆ ನನ್ನ ಮೇಲೆ, ನಿನ್ನ ಗೂಡಾಚಾರದ
ಮೂರನೆಯ ಕಣ್ಣು ಬಿದ್ದಂತಿದೆ 
ನನ್ನನ್ನ ಹೀಗೆಲ್ಲಾ.... ಅನುಮಾನಿಸಿ,
ಹೆದರಿಸಿದರೆ ನಾನೇನು ಸುಮ್ಮನಿರುವೆನೆ
ಅಥವಾ ಭಯಪಟ್ಟುಕೊಳ್ಳುವೆನೆ
ಹೀಗೋ... ನಿಮ್ಮ ಭಂಡ ಧೈರ್ಯ
ಆಗಾದರೆ ಈ ಹುಡುಗಿ ಯಾರು ?
ಹುಹುಹುಹುಡುಗಿಯೇ... ಯಾಯಾರು !
ಮಾತು ಬರದೆ ತಡವರಿಸಿದ್ದೆ
ಅವಳದೇ ಫೋಟೋ ಕೈಗಿತ್ತು 
ನನ್ನನ್ನೇ ಯಾಮಾರಿಸಿದಳಲ್ಲಾ....!! 

ಸಿಹಿ ಜೇನು


ನನ್ನವಳು,
ಆಷಾಡ, ಅಧಿಕಾಷಾಡ
ಬಂದರೂ.... ತವರಿಗೆ
ಹೋಗುವುದೇ ಇಲ್ಲ;
ನನ್ನ ಮೇಲಿನ
ಪ್ರೀತಿಯಿಂದೇನಲ್ಲ 
ಬೀದಿಯ ಬದಿ ಎಲ್ಲೆಂದರಲ್ಲಿ
ನಾ ಕುಡಿದು ತೂರಾಡಿ
ಹಾಳಾಗುವೆನೆಂದು ಕೊಂಡಿರೊ
ಹಾಗೇನು ಇಲ್ಲವೇ ಇಲ್ಲ ಸ್ವಾಮೀ
ಲಟ್ಟಣಿಗೆಯ ರುಚಿಗಿಂತ
ಹಾಳು ಕುಡಿತ, ಜೂಜಲ್ಲೇನಿದೆ ?
ಮಣ್ಣು;
ನನ್ನವಳ ಕಂಪಿಸುವ
ಕೆಂದುಟಿಗಳಲ್ಲಿಲ್ಲವೇ... ಜೇನು ?

ಬೇಡ ಸ್ವಾಮಿ ನನ್ನ ಫಜೀತಿ ೧೩೩


ಎಲ್ಲಿ ಎಲ್ಲಿ ಎಲ್ಲಿಯೋ..... ನಿನ್ನಮ್ಮ
ಅಡಿಗೆ ಮನೆಯಲ್ಲಿರುವಳೊ,
ಸ್ನಾನದ ಮನೆಯಲ್ಲಿಯೊ ಅಥವಾ
ಪಕ್ಕದ ಮನೆಯಲ್ಲಿ ಹರಟೆಯಲ್ಲಿರುವಳೋ....
ನನ್ನವಳು ಮನೆಯಲ್ಲಿಲ್ಲವೆಂದರಿತೆ
ಏಯ್.....  ಕಯಾದು ಎಲ್ಲಿರುವೆಯೇ ?
ನನ್ನನ್ನೇನು ಕೈಲಾಗದವನೆಂದು ತಿಳಿದೆಯೋ ಹೇಗೆ ?
ನಿನಗೆ ಹೆದರಿಕೊಳ್ಳುವ ರಣಹೇಡಿಯೂ ನಾನಲ್ಲ
ಅಳ್ಳೆದೆಯ ಗಂಡನಂತೂ ಅಲ್ಲವೇ ಅಲ್ಲ
ಬಾರೇ...  ಬಾ ಬಾ, ಬೇಗ ಬಳಿ ಬಾ...
ಅಬ್ಬರಿಸಿ, ಆರ್ಭಟಿಸಿ ಬೊಬ್ಬಿರಿದಿದ್ದೆ;
ಅಪ್ಪಾ....., ' ಅಮ್ಮ' ಬಂದರು
ಅದು ಲಟ್ಟಣಿಗೆಯ ಹಿಡಿದು ಎನ್ನಬೇಕೆ !?
ಬಬಬ.. ಬಂದಳೇನೋ.... ನಿನ್ನಮ್ಮ !
ಅಯ್ಯೋ.... ಪಾಪಿ, ಮೊದಲೇ ಹೇಳಬಾರದಿತ್ತೇನೋ
ನನ್ನ ಜಂಘಾಬಲವೆಲ್ಲ ಉಡುಗಿ , ನಡುಗಿ
ಮಾತು ಬರದೆ ಬಿಟ್ಟ ಕಣ್ಣು ಬಿಟ್ಟಂತೆ ಇದ್ದದ್ದುದ ಕಂಡು
ನನ್ನವಳು ನಗುತ ಕಣ್ಹೊಡೆಯ ಬೇಕೆ

Tuesday, May 17, 2016

ಎಚ್ಚರಿಕೆ

ನನ್ನೊಳು ಇರಬಹುದಾದ
ಅಲ್ಪಸ್ವಲ್ಪ ಧೈರ್ಯವೆಲ್ಲವ ಒಗ್ಗೂಡಿಸಿ
ನನ್ನವಳ
ಮೆಲ್ಲನೆ ಮುಟ್ಟಲೇನೇ.... ಎಂದೆ
ಅವಳ ಮೋಹಕ ನಗೆಗೆ ಕರಗಿ,
ಮತ್ತಷ್ಟು ಉತ್ತೇಜಿತನಾಗಿ
ಅವಳ ಮೊಬೈಲ್ ಹಿಡಿದು
ಪಾಸ್ವರ್ಡ ಹೇಳೆ ? ಚಿನ್ನಾ... ಎಂದೆ
ಅದು ಎಲ್ಲಿತ್ತೋ ಅವಳಿಗೆ ಕೋಪ
ದಿಗ್ಗನೆ ಮೇಲೆದ್ದು, ಹ್ಞೂಂಕರಿಸಿ
ಮುಟ್ಟಿದರೆ ನಿಮ್ಮ ಕೈ ಬೆರಳುಗಳು
ಒಂದೂ ಉಳಿಯದು ಎಚ್ಚರಿಕೆ ಎನ್ನಬೇಕೆ !
ಶಿವಚೆನ್ನ ೧೭.೦೫.೧೬ 

ಲವಲವಿಕೆಯ ತುತ್ತು

ನಾನೇನೂ
ಬೇಡಲೂ ಇಲ್ಲ,
ಕಾಡಲೂ ಇಲ್ಲ
ನನ್ನವಳ " ಮುತ್ತು "
ಆದರೂ ಬೇಕಿತ್ತು;
'ಬರ'ಗೆಟ್ಟ ಮನಸ್ಸಿಗೆ
ಲವಲವಿಕೆಯ ತುತ್ತು
ಶಿವಚೆನ್ನ