Thursday, December 29, 2016

ಅಮ್ಮಾವರ ಗಂಡ

ಒಮ್ಮೆ ನನ್ನವಳು,
ಮಕ್ಕಳ ಮುಂದೆಯೇ
ನನ್ನ ಜೊತೆ ಜಗಳಕ್ಕೆ ನಿಂತದ್ದು ಕಂಡು
ಜೋರು ಧ್ವನಿಯಲ್ಲಿಯೆ
ಈ ಊರಲ್ಲಿ ನನಗೆ ಇನ್ನೊಂದ್ ಹೆಸರಿದೆ
ನಿನಗೆ ಗೊತ್ತೇನೇ..... ?
ಯಾರೂ.... ನನ್ನ ಎದುರಿಗೆ ಬರುವುದಿರಲಿ
ತಲೆ ಹೊರ ಹಾಕಿ ನನ್ನ ನೋಡಲಾರರು
ನಿಂತಲ್ಲಿಯೇ ಒಂದು, ಎರಡು ಶುರು
ಅಂತಹದರಲ್ಲಿ ಅದು ಹೋಗಿ ಹೋಗಿ ನೀನು
ನನ್ನ ಮುಂದೆ ಹೀಗೆ ಬಾಲ ಬಿಚ್ಚುವುದೆ ?
ಹ್ಞೂಂಕರಿಸಿದ್ದಕ್ಕೆ ಹೆದರಿ, ಬೆದರಿ
ಒಳ ಹೋದಳೆಂದು ಕೊಂಡರೆ
ಲಟ್ಟಣಿಗೆಯ ಝಳಪಿಸುತ ಬಂದು
ಏನಂದ್ರಿ ನೀವು ? ಇನ್ನೊಂದು ಹೆಸರೇ..... ನಿಮಗೆ !?
ಏನದು ? ಹೇಳಿದರೆ ಸರಿ ಇಲ್ಲವಾದರೆ ಗೊತ್ತಲ್ಲ
ಹೋದ ಬಾರಿ ಮೊಟಕಿದ್ದು ನೆನಸಿಕೊಂಡು
ಆ ನೋವಿನ ಭಯಕೆ ಬಾಯ್ತಪ್ಪಿ ನಿಜ ಹೊರ ಬಿದ್ದಿತ್ತು
" ಅಮ್ಮಾವರ_ಗಂಡ " ಕಾಣೆ



Thursday, December 22, 2016

#ಬೇಡಾರೀನನ್ನಫಜೀತಿ



ರಾತ್ರಿಯೆಲ್ಲಾ ನಿದ್ದೆಯಿಲ್ಲ
ಬರೀ ಒದ್ದಾಟ,
ನಿಟ್ಟುಸಿರಿನ ತಿಣಕಾಟ
ಬೆಳಗಿನ ತಿಂಡಿ, ಕಾಫಿಗೆ
ಒತ್ತಾಯಿಸಿ ನನ್ನ ಕರೆದಿರುವಳು
ಹೋಗಲೊ ಬೇಡವೋ ಎಂಬ ಜಿಜ್ಞಾಸೆಯಲ್ಲಿ
ಮುಳುಗಿದವನಿಗೆ
ಬೆಳಗಿನ ಜಾವದಲ್ಲಿ ನಿದ್ದೆಗೆ ಶರಣಾಗಿ
ದಡಬಡಿಸಿ ಎದ್ದವನ ಮುಂದೆ
ಮೊಬೈಲ್ ಹಿಡಿದು
ಅದು ಯಾರೋ ನಿರ್ಮಲಾ ಅಂತೆ
ಮಗಳ ಕೊಂಕು ನಗೆ
ಇವಳಿಗೇನಾದರು ವಿಷಯ ಗೊತ್ತಾಗಿ ಹೋಯ್ತೆ
ಒಂದು ಕಡೆ ಖುಷಿ,
ಮತ್ತೊಂದೆಡೆ ನನ್ನವಳಿಗೆ ಗೊತ್ತಾದರೆ
ಸುಮ್ಮನೆ ಬಿಟ್ಟಾಳೆಯೆ ?
ಕೂಗಾಡಿ ಊರು ಕೇರಿ ಒಂದು ಮಾಡುವಳು
ಈ ವಯಸ್ಸಲ್ಲಿ ಇದೆಲ್ಲ ಬೇಕಿತ್ತೆ ?
ಎಷ್ಟಾದರು ಮುದ್ದಿನ ಮಗಳಲ್ಲವೆ
ಹಾಗೆಲ್ಲ ಎಂದೂ ನನ್ನ ಅನುಮಾನಿಸಳು
ಮೆಲ್ಲಗೆ ಮಗಳ ಹತ್ತಿರ ಕರೆದು
ನಿನ್ನ ಅಮ್ಮನೆಲ್ಲಿಯೇ  ಮನೆಯಲ್ಲಿರುವಳೋ
ಅಥವಾ ತರಕಾರಿ ತರಲು ಹೋಗಿರುವಳೋ
ಛೆ.... ಯೋಚಿಸುತ್ತ ಹೀಗೆ ಕೂತರೆ
ಇಂದು ಅವಳ ಭೇಟಿ ಮಾಡಿದಂತೆ
ಕರೆ ಮಾಡಿ ಇನ್ನೊಂದು ಘಂಟೆಯಲ್ಲಿರುವೆ
ಅರೆಬರೆ ಮಾತನಾಡಿ
ಬಾತ್ ರೂಮಿನ ಕಡೆ ಹೊರಟಿದ್ದೆ
ಸ್ನಾನ ಮುಗಿಸಿ ಟಿಪ್ ಟಾಪಾಗಿ ಹೋರಟವನ
ಮಗಳೇ ತಡೆದು ನಿಲ್ಲಿಸಿ
ಕಣ್ಣು ಮಿಟುಕಿಸಿ
ನೀವೇನು ಅಲ್ಲಿಗೆ ಹೋಗುವುದು ಬೇಡ ಪಪ್ಪಾ
ಅವರೆ ಇಲ್ಲಿಗೆ ಬರುವರು ಅಡ್ರೆಸ್ ಕೊಟ್ಟಿರುವೆ
ನಕ್ಕು ಹೋದವಳ ಸಿಗಿದು ಹಾಕುವಷ್ಟು
ಕೋಪ ಬಂದರೂ ಏನೂ.... ಮಾಡುವಂತಿಲ್ಲ
ಅಡ್ರೆಸ್ ಕೊಡಬೇಕಿತ್ತೆ
ಅರ್ಧ ದಾರಿಯಲ್ಲಿಯೇ ಅವಳ ತಡೆದು
ವಾಪಾಸ್ ಕಳುಹಿಸಿ ಬಿಡಬೇಕು
ಇಲ್ಲದಿದ್ದರೆ ಇಂದು ನನ್ನ ತಿಥಿ ಗ್ಯಾರಂಟಿ
ಅಕ್ಕಪಕ್ಕದವರಿಗೂ ಗೊತ್ತಾಗಿ
ಹೊರಗೆಲ್ಲೂ.... ಹೋಗುವಂತಿಲ್ಲ
ಮಾನ, ಮರ್ಯಾದೆ ನನ್ನಿಂದಲೇ ಹರಾಜು
ಅಲ್ಲಾ... ಅವಳ ಜೊತೆ ಕದ್ದು ಮುಚ್ಚಿ
ಘಂಟೆಗಟ್ಟಲೆ ಮಾತಾಡುವಾಗ ಇದ್ದ ಧೈರ್ಯ
ಈಗ ಏಕಿಲ್ಲ !?
ಯೋಚಿಸಲಾಗದೆ ತಲೆತಿರುಗಿ ಬಿದ್ದವನ
ಕೈಹಿಡಿದೆತ್ತೆ ಪೆಟ್ಟಾಯ್ತೆ ನನ್ ರಾಜ
ಅದೇ ಸುಕೋಮಲ ಸ್ವರ
ಬಂದೇ ಬಿಟ್ಟಳೇ.... ಭಯಕೆ ಕಣ್ ಬಿಟ್ಟರೆ
ನನ್ನವಳು ಹೇಗಿದೆ ಈ ನಿರ್ಮಲ ಕರಾಮತ್ತು ಎನ್ನಬೇಕೆ
#ಶಿವಚೆನ್ನ ೨೨.೧೨.೧೬