Friday, January 31, 2014

" ನಿನ್ನ ನೆನಪಿನ ಗುಂಗಲ್ಲಿ "

ನೆನಪುಗಳ ನನ್ನೀ ಪುಟದೊಳಗೆ
ನಿನ್ನ ಪ್ರೀತಿಯ ನವಿಲು ಗರಿಯ ಇಟ್ಟು,
ರಾಮನಿಗೆ ಆ ಶಬರಿಯು ಕಾದಂತೆ
ದಿನಾ ಕನಸುಗಳ ಹೊತ್ತು ಕಾದಿರುವೆ
ಅದು ಎಂದು ಮರಿ ಹಾಕುವುದೋ...
ಆ ನವಿಲು ಗರಿಗಳ ಕಣ್ಣೊಳಗೆ
ನಿನ್ನ ಪ್ರತಿಬಿಂಬದ ಹೊಳಪ ನೋಡಿ
ಗರಿಗೆದರಿದ ಕಾರ್ಮುಗಿಲ ಕಂಡ
ಇಂದೆನ್ನ ಈ ಮೈಮನ...
ಗರಿ ಬಿಚ್ಚಿ ಕುಣಿವ ನವಿಲಂತಾಯ್ತು...!

Thursday, January 30, 2014

" ಅಂತಃಕರಣ " - ೧

ಏಕೋ... ಏನೋ ... ಹೇಳಿಕೊಳ್ಳಲಾಗದ ಸಂಕಟ
ಹಿಂದೆಂದೂ ಈ ರೀತಿ ನನಗೆ ಆಗಿರಲಿಲ್ಲ,
ಎಂದೂ ಅನುಭವಿಸದ ವಿಚಿತ್ರ ತಳಮಳ
ಇಂದು ಹೀಗೇಕೆ, ಯೋಚಿಸಿದಷ್ಟೂ ಮನಸ್ಸು
ಗೊಜಲು ಗೊಜಲಾಗಿ ಮತ್ತಷ್ಟು ತಲೆ ಕೆಡಿಸಿತ್ತು;
ಕೆಲಸ ಮಾಡಲಾಗದೆ, ಆಫೀಸಿನಲ್ಲಿ ಕುಳಿತಿರಲಾಗದೆ
ಮುದ್ದಿನ ಮಗಳ ನೋಡಲೇ ಬೇಕೆಂದು
ಅರ್ಧ ದಿನ ರಜೆ ಬರೆದು, ಒಂದೇ ಧಾವಾಂತದಿ
ಅವಳ ಶಾಲೆಗೆ ಗಡಿಬಿಡಿಯಲ್ಲೇ ಧಾವಿಸಿದ್ದೆ !

ಯಾವ ತಂದೆಗೂ ಇಂತಹ ಪರಿಸ್ಥಿತಿ ಬರಬಾರದು
ತಾಯಿ ಇಲ್ಲದ ತಬ್ಬಲಿಗೆ ನಾನೇ ಅಪ್ಪ ಅಮ್ಮ,
ಬಂಧು-ಬಳಗ, ಗುರು-ದೈವ ಎಲ್ಲವೂ...
ಅಳುವ ಮಗಳ ಎದೆಗಪ್ಪಿ, ಎಷ್ಟೋ ನೀರವ ರಾತ್ರಿಗಳು ನಿದ್ದೆಯಿಲ್ಲದೆ ಲಾಲಿ ಹಾಡಿ, ರಮಿಸಿ ಮುದ್ದು ಮಾಡಿದ್ದೆ
ನನಗೆಲ್ಲವೂ ಇವಳೇ ಸರ್ವಸ್ವ, ಮನದ ನೋವಿನ ಮದ್ದು; ಇಂತಹದೊಂದು ದಿನ ಬರಬಹುದೆಂದು ಯೋಚಿಸಿರಲಿಲ್ಲ
ಎಂತಹ ಕಾಕತಾಳೀಯ ನೋಡಿ ನನ್ನ ಬಾಳಲ್ಲಿ
ಕ್ಲಾಸ್ ರೂಮಿಗೆ ಅಡಿಯಿಟ್ಟಾಗಲೇ ಗೊತ್ತಾಗಿದ್ದು
ಹತ್ತಾರು ಕಣ್ಣುಗಳು ನನ್ನ ಮಗಳತ್ತಲೇ ನೋಡಿ
ಗುಸುಗುಸು ಪಿಸುಮಾತಿನಲ್ಲೇ ನಗುತ್ತಿದ್ದದ್ದು,
ಲಂಗವೆಲ್ಲಾ ರಕ್ತಮಯ, ಒಂದು ಕ್ಷಣ ಏನೆಂದು ಗೊತ್ತಾಗದೆ ಎದೆಯ ಬಡಿತ ಜೋರಾಗಿ, ಒಮ್ಮೆಲೇ ನಿಂತಂತಾಗಿ " ಮೈನೆರೆದ ಮಗಳ " ಸ್ಥಿತಿಗೆ ಎಲ್ಲವೂ ಅಯೋಮಯ !!

ನನ್ನ ಕಂಡ ಕೂಡಲೇ ಅಳುತ ಅಪ್ಪಿದವಳ ಸಂತೈಸಿ
ಮಗಳ ಮನೆಗೆ ಕರೆತಂದು, ಸ್ನಾನ ಮಾಡಿಸಲು ಹೊರಟವನ

ಮಗಳೇ ತಡೆದು ,ಪಪ್ಪಾ... ಇದೆಲ್ಲಾ ನನಗೆ ಹೀಗೇಕೆ...??? 

ಅವಳ ಪ್ರಶ್ನೆಗಳಿಗೆ ನಾ ಹೇಗೆಂದು ಉತ್ತರಿಸಲಿ....??


Friday, January 24, 2014

" ವಿವಾಹ ವಾರ್ಷಿಕೋತ್ಸವ "

ನನಗೂ ಇಪ್ಪತ್ತೇಳಾಯ್ತು,
ಹಾಳಾದ್ದು ನೆನಪಿಗೆ ಬರಲೇ ಇಲ್ಲ
ಮಡದಿ ನೆನಪಿಸುವಳೆಂದರೆ
ಅವಳಿಗೂ ನನ್ನಂತೆಯೇ ಮರೆವು;
ನಿಮಗೆ ಗೊತ್ತಿದ್ದರೆ ತಾನೇ ನೀವೂ ವಿಶ್ ಮಾಡುವುದು
ಇನ್ನು ಮುದ್ದಿನ ಮಗಳೋ.....
ನಮ್ಮ ಜೊತೆಯಲ್ಲಿ ಇದ್ದಿದ್ದರೆ  ಹಬ್ಬ ಆಚರಿಸುತ್ತಿದ್ದಳು
ಗಂಡನ ಮನೆಯಲ್ಲಿ ಹಾಯಾಗಿ,
ಸುಖ-ಸಂತೋಷದಿಂದ ಇರುವಾಗ
ನಮ್ಮಗಳ ನೆನಪು ಎಲ್ಲಿಂದ ಬರಬೇಕು?
ನಾಲ್ಕರ ಪೋರಿಯೇ ಅವಳಿಗೆ ಎಲ್ಲಾ...
ಇನ್ನೆಲ್ಲಿ ಅಪ್ಪಾ ಅಮ್ಮನಿಗೆ ಶುಭಕೋರುವಳು;
ಎಂತಹ ವಿಪರ್ಯಾಸ ನೋಡಿ
ನಮ್ಮ ವಾರ್ಷಿಕೋತ್ಸವದಂದೇ ಹುಟ್ಟಿದ ಮೊಮ್ಮಗಳು ನೆನಪಿಸಿದ್ದು, ಈ ಅಜ್ಜಾ ಅಜ್ಜಿಗೆ ವಿಶ್ ಮಾಡಿದ್ದು !!

Sunday, January 19, 2014

ನನ್ನವಳು - ೨

ನನ್ನವಳು ನನ್ನೆದೆಯಾ
ಬಾಳಂಗಳವ ಬೆಳಗೋ
ಹುಣ್ಣಿಮೆಯ ಮೊಗದವಳು
ಬಿರಿದ ಕೆಂದಾವರೆಯ,
ಜಿನುಗೊ ಜೇನ್ದುಟಿ
ಹೊಳೆಹೊಳೆವ ಕಣ್ಣವಳು
ಬಳುಕುವಾ ಎಳೆ ಬಳ್ಳಿಯಾ
ಸುಮ ಹೊತ್ತು ಬರುವ
ತಂಗಾಳಿಯ ಮೈಯವಳು !

ಎಂದಾದರು ಒಮ್ಮೊಮ್ಮೆ
ನಾನವಳ ರೇಗಿಸಲು
ಹುಸಿ ಮುನಿಸು ಬೀರುತ
ಮುನಿದು ಮಲಗಿದವಳ
ರಮಿಸಿ,ಒಲಿಸಿ ಕೊಳ್ಳುವುದು
ಹೇಗೆಂಬುದ ನಾನು ಬಲ್ಲೆ;
ಮುಂಗುರುಳ ನೆವರಿಸಿ
ಮುನಿದವಳ ಹಣೆಗೊಂದು
ಸಿಹಿ ಹೂ ಮುತ್ತನಿತ್ತರೆ
ಕೊರಳ ತಬ್ಬಿಡಿದು
ನನ್ನೆದೆಗೆ ಮೆಲ್ಲನೆ ಗುದ್ದಿ
ಕಣ್ಣರಳಿಸಿ ನಗು ನಗುತ
ನನ್ನೊಳು ಒಂದಾಗುವಳೂ !

Monday, January 13, 2014

" ನನ್ನವಳ ಎದೆಗಾರಿಕೆ "

ಮೊದಮೊದಲು ಕಣ್ಣಿಗೆ ಕಂಡರೆ ಸಾಕು
ಭಯಕೆ, ಬಾಯಿ ಬಾಯ್ಬಿಡುತ್ತಿದ್ದ ನನ್ನವಳು
ಇತ್ತೀಚೆಗಂತೂ ಮೀಸೆ ತಿರುಗಿಸಿ ನಿಂತರೂ
ಎದಿರು ಬಂದು ಅಡ್ಡಾಡಿದರೂ ಹೆದರಳು
ಕೈಗೆ ಸಿಗದೆ ನುಸುಳಿ ತಪ್ಪಿಸಿಕೊಳ್ಳದಿರಲೆಂದು,
ಕೂಗಾಡುವುದ ಅಕ್ಕಪಕ್ಕದವರು ಕೇಳಿಸಿ ಕೊಂಡರೆ
ಹೊರಗೆಲ್ಲಿ ನಿಲ್ಲಿಸಿ ಕೇಳುವರೆಂದು ಮುಂದಾಲೋಚಿಸಿ
ಮಗಳಿಗೆ ಹೇಳಿ, ಎಲ್ಲಾ ಕಿಟಕಿ ಬಾಗಿಲುಗಳ ಮುಚ್ಚಿಸಿ
ಇಂದು ಕಾದಿದೆ ಬಾರೋ ಮಾರಿಯ ಹಬ್ಬ;
ಒಂದು ಕೈ ನೋಡಿಯೇ ಬಿಡುವ, ನಾನೋ ನೀನೋ
ಒಟ್ಟಿನಲ್ಲಿ ನಾನಿರಬೇಕು ಅಥವಾ ನೀನಿರಬೇಕು ಈ ಮನೆಯಲ್ಲಿ ನಿನ್ನದೋ ಇಲ್ಲಾ ನನ್ನದೋ ಪಾರುಪತ್ಯ ಎಲ್ಲರಿಗೂ ತಿಳಿಯಲಿ ಕೈಯಲ್ಲಿ ಪೊರಕೆ ಹಿಡಿದು ಹೂಂಕರಿಸಿ, ಝೇಂಕರಿಸಿ ರಣಚಂಡಿಯಂತೆ ಒಮ್ಮೆ ನಿಂತರೆ, ಇದ ಕಂಡು
ಅಳ್ಳೆದೆಯವನೂ ಕೂಡ ಗಡಗಡ ನಡುಗ ಬೇಕು !

ತಾಯಿ ಮಗಳಿಬ್ಬರೂ ಹತ್ತಾರು ಜಿರಳೆಗಳ ಕೊಂದು
ನನ್ನತ್ತ ನೋಡಿ ನಗೆ ಬೀರಿದ್ದ ಕಂಡು
ನನ್ನೊಳಗೊಳಗೇ ಅಸಹಾಯಕ ನಿಟ್ಟುಸಿರು ;
ಹಾಳಾದ್ದು ಈ ಜಿರಳೆಗಳಿಂದಾಗಿಯೇ
ನನ್ನವಳಿಗೆ ಇಷ್ಟೆಲ್ಲಾ ಎಲ್ಲಿಲ್ಲದ ಭಂಡ ಧೈರ್ಯ ಬಂದದ್ದು
ಎಲ್ಲಾ ನನ್ನ ಗ್ರಹಚಾರ, ದುರದೃಷ್ಟ ನೋಡಿ
ಇಂದು ಎಲ್ಲಾ ತಲೆಕೆಳಕಾಗಿ ಬುಡಮೇಲಾಗಿದೆ
ಮೊದಲಾಗಿದ್ದರೆ ಹೆದರಿ ಓಡೋಡಿ ಬಂದು
ನನ್ನೆದೆಗೆ ಒರಗಿ ಕಣ್ಮುಚ್ಚುತ್ತಿದ್ದ ನನ್ನವಳು
ಇಂದು ಜಿರಳೆಗಳ ಪಾಲಿಗೆ " ರಣಚಂಡಿ "

Wednesday, January 8, 2014

" ಚಂದ್ರ ತಾರೆಯರ ತೊಟ್ಟಿಲಲ್ಲಿ "

ಬೆಳದಿಂಗಳ
ಬೆಳಕ ತಾಕಿದ ನೈದಿಲೆಗೆ
ಮೈ ಮುರಿದೇಳುವ ಪುಳಕ,
ಇದ ಕಂಡು
ನಗೆ ಬೀರುವ ತಾರೆಗಳಿಗೆ
ಒಳಗೊಳಗೆ ನಿಟ್ಟುಸಿರಿನ ಜಳಕ !

Monday, January 6, 2014

" ಆಹಾ ನನ್ನ ಮದುವೆ "

ನನಗೇನೋ
ನಿಮ್ಮ ಮಗಳು ಒಪ್ಪಿಗೆ,
ವರದಕ್ಷಿಣೆ, ವರೋಪಚಾರ
ಆಡಂಬರ ನನಗೊಂದು ಬೇಡ
ಸಿಂಪಲ್ಲಾಗಿ ಗುರು ಹಿರಿಯರ ಸಮ್ಮುಖದಲ್ಲಿ
ಮದುವೆಯ ಮಾಡಿಕೊಟ್ಟರೆ ಸಾಕು;
ನನ್ನ ಬಗ್ಗೆ ಅನುಮಾನ ಬೇಡವೇ ಬೇಡ ನಿಮಗೆ
ವರದಕ್ಷಿಣೆ, ವರೋಪಚಾರ ಕೇಳದ
ವರ ಈ ಜಗದೊಳಗೆ ಉಂಟೇ ಎಂದು
ನನಗ್ಯಾವ ರೋಗ- ರುಜಿನವೂ ಇಲ್ಲ,
ಯಾವುದೇ ಮರೆಮಾಚುವ ಐಬೂ ಇಲ್ಲ
ಹೆಂಡತಿಯ ದುಡಿದು ಸಾಕಲಾರದವ
ಸ್ವಂತಿಕೆಯ ವ್ಯಕ್ತಿತ್ವ ಇಲ್ಲದವ
ಇದೆಲ್ಲವ ಕೇಳುವುದು, ಬೇಡುವುದು
ಸ್ವಂತ ಮನೆ, ಸಾಕಷ್ಟೂ ಆಸ್ತಿ ಪಾಸ್ತಿ;
ಕೈ ತುಂಬಾ ಸಂಪಾದನೆ ಇರುವಾಗ
ಬೇರೆಯವರಲ್ಲಿ ನಾ ಕೇಳಿ ಬಾಳಬೇಕೆ ?

Saturday, January 4, 2014

" ಬೆಳದಿಂಗಳ ಬಾಲೆ "

ನಾ ಹೇಗೆ ಹೇಳಲಿ ನಿಮಗೆ
ನನ್ನೊಳಗಿನ ತೊಳಲಾಟ
ನನಗೆ ಹೇಳದೇ ಬೇರೆ ವಿದಿಯಿಲ್ಲ
ಆಗುವುದೋ ಏನೋ ಹೇಳಿದರೆ
ಕೊಂಚ ಈ ಮನಸ್ಸಿಗೂ ನಿರಾಳ
ಅವಳು ಯಾರೋ ಏನೋ ಗೊತ್ತಿಲ್ಲ
ಫೋನಿನಲೆ ಮಧುರ ಕಂಠದಿ ಮಾತಾಡಿ
ಹಚ್ಚಿಹಳು ಅವಳೊಲವಿನ ಪ್ರೀತಿ ಹಣತೆ;
ಇಲ್ಲೆ ಎಲ್ಲೋ ಮರೆಯಲ್ಲಿ ನಿಂತು
ನನ್ನ ಎಲ್ಲ ಆಗು ಹೋಗುಗಳ ತಿಳಿದು
ಕರೆಯ ಮಾಡಿ ಬಿಡದೆ ಕಾಡುವಳಲ್ಲ
ಬಂದು ಎದಿರು ನೀ ನಿಲ್ಲೆನ್ನಲು
ಬುದ್ಧಿವಂತರು ನೀವೇ ಹುಡುಕಿ ಎನ್ನುವಳು
ಬೇಡ ಬೇಡವೆಂದರೂ ಅವಳ ದ್ವನಿಯೇ
ಮಾರ್ಧನಿಸಿ ಕಿವಿಯೊಳಗೆ,
ಕಾಡುವುದು ಪ್ರತಿರಾತ್ರಿ ಬಹಳ ಬಹಳ !

Friday, January 3, 2014

ನನ್ನವಳು - ೧

ನನ್ನವಳ ಮುಂಗುರುಳ ಕಂಡು
ಕರಿ ಮುಗಿಲಿಗೂ ತುಸು ಮುನಿಸು
ಹೆರಳ ತಾ ಹರಡಿ ನಿಂತರೆ,
ಗಿರಿಯ ನವಿಲಿಗೂ ಕುಣಿವ ಮನಸು
ಮುಡಿಗೇರೋ ಆ ಮಲ್ಲಿಗೆಗೂ
ಮನದಣಿಯೆ ಮಲಗೋ ಕನಸು
ಕೊರಳ ಕೊಂಕಿಸಿ ಕರೆವ ಕೂಗಿಗೆ
ಕೋಗಿಲೆಯೂ ತಾ ತಬ್ಬಿಬ್ಬು;
ನಡೆದು ಬರುವಾಗ ಬಳುಕಿ ಅವಳ
ನೀಳ ಜಡೆಯ ಸಿರಿ ಸೊಬಗ ಕಂಡು
ಹಾವು ಕೂಡ ತಾ ಹೆದರಿ ಓಡುವುದು
ನನ್ನೆದೆಯಾ ಅಂಗಳದಿ ನೆನಪುಗಳ
ತಂಗಾಳಿಯ ಸುಮವ ಹೊತ್ತು ತಂದಿಹಳು !