Monday, January 13, 2014

" ನನ್ನವಳ ಎದೆಗಾರಿಕೆ "

ಮೊದಮೊದಲು ಕಣ್ಣಿಗೆ ಕಂಡರೆ ಸಾಕು
ಭಯಕೆ, ಬಾಯಿ ಬಾಯ್ಬಿಡುತ್ತಿದ್ದ ನನ್ನವಳು
ಇತ್ತೀಚೆಗಂತೂ ಮೀಸೆ ತಿರುಗಿಸಿ ನಿಂತರೂ
ಎದಿರು ಬಂದು ಅಡ್ಡಾಡಿದರೂ ಹೆದರಳು
ಕೈಗೆ ಸಿಗದೆ ನುಸುಳಿ ತಪ್ಪಿಸಿಕೊಳ್ಳದಿರಲೆಂದು,
ಕೂಗಾಡುವುದ ಅಕ್ಕಪಕ್ಕದವರು ಕೇಳಿಸಿ ಕೊಂಡರೆ
ಹೊರಗೆಲ್ಲಿ ನಿಲ್ಲಿಸಿ ಕೇಳುವರೆಂದು ಮುಂದಾಲೋಚಿಸಿ
ಮಗಳಿಗೆ ಹೇಳಿ, ಎಲ್ಲಾ ಕಿಟಕಿ ಬಾಗಿಲುಗಳ ಮುಚ್ಚಿಸಿ
ಇಂದು ಕಾದಿದೆ ಬಾರೋ ಮಾರಿಯ ಹಬ್ಬ;
ಒಂದು ಕೈ ನೋಡಿಯೇ ಬಿಡುವ, ನಾನೋ ನೀನೋ
ಒಟ್ಟಿನಲ್ಲಿ ನಾನಿರಬೇಕು ಅಥವಾ ನೀನಿರಬೇಕು ಈ ಮನೆಯಲ್ಲಿ ನಿನ್ನದೋ ಇಲ್ಲಾ ನನ್ನದೋ ಪಾರುಪತ್ಯ ಎಲ್ಲರಿಗೂ ತಿಳಿಯಲಿ ಕೈಯಲ್ಲಿ ಪೊರಕೆ ಹಿಡಿದು ಹೂಂಕರಿಸಿ, ಝೇಂಕರಿಸಿ ರಣಚಂಡಿಯಂತೆ ಒಮ್ಮೆ ನಿಂತರೆ, ಇದ ಕಂಡು
ಅಳ್ಳೆದೆಯವನೂ ಕೂಡ ಗಡಗಡ ನಡುಗ ಬೇಕು !

ತಾಯಿ ಮಗಳಿಬ್ಬರೂ ಹತ್ತಾರು ಜಿರಳೆಗಳ ಕೊಂದು
ನನ್ನತ್ತ ನೋಡಿ ನಗೆ ಬೀರಿದ್ದ ಕಂಡು
ನನ್ನೊಳಗೊಳಗೇ ಅಸಹಾಯಕ ನಿಟ್ಟುಸಿರು ;
ಹಾಳಾದ್ದು ಈ ಜಿರಳೆಗಳಿಂದಾಗಿಯೇ
ನನ್ನವಳಿಗೆ ಇಷ್ಟೆಲ್ಲಾ ಎಲ್ಲಿಲ್ಲದ ಭಂಡ ಧೈರ್ಯ ಬಂದದ್ದು
ಎಲ್ಲಾ ನನ್ನ ಗ್ರಹಚಾರ, ದುರದೃಷ್ಟ ನೋಡಿ
ಇಂದು ಎಲ್ಲಾ ತಲೆಕೆಳಕಾಗಿ ಬುಡಮೇಲಾಗಿದೆ
ಮೊದಲಾಗಿದ್ದರೆ ಹೆದರಿ ಓಡೋಡಿ ಬಂದು
ನನ್ನೆದೆಗೆ ಒರಗಿ ಕಣ್ಮುಚ್ಚುತ್ತಿದ್ದ ನನ್ನವಳು
ಇಂದು ಜಿರಳೆಗಳ ಪಾಲಿಗೆ " ರಣಚಂಡಿ "

3 comments:

  1. ಗಂಡ - ಜಿರಳೆ ಎರಡಕ್ಕೂ ಐತಲ್ಲ ಸಾರ್. ಹೋಲಿಕೆ, ಅದು ಮೀಸೆ!

    ReplyDelete