Thursday, January 30, 2014

" ಅಂತಃಕರಣ " - ೧

ಏಕೋ... ಏನೋ ... ಹೇಳಿಕೊಳ್ಳಲಾಗದ ಸಂಕಟ
ಹಿಂದೆಂದೂ ಈ ರೀತಿ ನನಗೆ ಆಗಿರಲಿಲ್ಲ,
ಎಂದೂ ಅನುಭವಿಸದ ವಿಚಿತ್ರ ತಳಮಳ
ಇಂದು ಹೀಗೇಕೆ, ಯೋಚಿಸಿದಷ್ಟೂ ಮನಸ್ಸು
ಗೊಜಲು ಗೊಜಲಾಗಿ ಮತ್ತಷ್ಟು ತಲೆ ಕೆಡಿಸಿತ್ತು;
ಕೆಲಸ ಮಾಡಲಾಗದೆ, ಆಫೀಸಿನಲ್ಲಿ ಕುಳಿತಿರಲಾಗದೆ
ಮುದ್ದಿನ ಮಗಳ ನೋಡಲೇ ಬೇಕೆಂದು
ಅರ್ಧ ದಿನ ರಜೆ ಬರೆದು, ಒಂದೇ ಧಾವಾಂತದಿ
ಅವಳ ಶಾಲೆಗೆ ಗಡಿಬಿಡಿಯಲ್ಲೇ ಧಾವಿಸಿದ್ದೆ !

ಯಾವ ತಂದೆಗೂ ಇಂತಹ ಪರಿಸ್ಥಿತಿ ಬರಬಾರದು
ತಾಯಿ ಇಲ್ಲದ ತಬ್ಬಲಿಗೆ ನಾನೇ ಅಪ್ಪ ಅಮ್ಮ,
ಬಂಧು-ಬಳಗ, ಗುರು-ದೈವ ಎಲ್ಲವೂ...
ಅಳುವ ಮಗಳ ಎದೆಗಪ್ಪಿ, ಎಷ್ಟೋ ನೀರವ ರಾತ್ರಿಗಳು ನಿದ್ದೆಯಿಲ್ಲದೆ ಲಾಲಿ ಹಾಡಿ, ರಮಿಸಿ ಮುದ್ದು ಮಾಡಿದ್ದೆ
ನನಗೆಲ್ಲವೂ ಇವಳೇ ಸರ್ವಸ್ವ, ಮನದ ನೋವಿನ ಮದ್ದು; ಇಂತಹದೊಂದು ದಿನ ಬರಬಹುದೆಂದು ಯೋಚಿಸಿರಲಿಲ್ಲ
ಎಂತಹ ಕಾಕತಾಳೀಯ ನೋಡಿ ನನ್ನ ಬಾಳಲ್ಲಿ
ಕ್ಲಾಸ್ ರೂಮಿಗೆ ಅಡಿಯಿಟ್ಟಾಗಲೇ ಗೊತ್ತಾಗಿದ್ದು
ಹತ್ತಾರು ಕಣ್ಣುಗಳು ನನ್ನ ಮಗಳತ್ತಲೇ ನೋಡಿ
ಗುಸುಗುಸು ಪಿಸುಮಾತಿನಲ್ಲೇ ನಗುತ್ತಿದ್ದದ್ದು,
ಲಂಗವೆಲ್ಲಾ ರಕ್ತಮಯ, ಒಂದು ಕ್ಷಣ ಏನೆಂದು ಗೊತ್ತಾಗದೆ ಎದೆಯ ಬಡಿತ ಜೋರಾಗಿ, ಒಮ್ಮೆಲೇ ನಿಂತಂತಾಗಿ " ಮೈನೆರೆದ ಮಗಳ " ಸ್ಥಿತಿಗೆ ಎಲ್ಲವೂ ಅಯೋಮಯ !!

ನನ್ನ ಕಂಡ ಕೂಡಲೇ ಅಳುತ ಅಪ್ಪಿದವಳ ಸಂತೈಸಿ
ಮಗಳ ಮನೆಗೆ ಕರೆತಂದು, ಸ್ನಾನ ಮಾಡಿಸಲು ಹೊರಟವನ

ಮಗಳೇ ತಡೆದು ,ಪಪ್ಪಾ... ಇದೆಲ್ಲಾ ನನಗೆ ಹೀಗೇಕೆ...??? 

ಅವಳ ಪ್ರಶ್ನೆಗಳಿಗೆ ನಾ ಹೇಗೆಂದು ಉತ್ತರಿಸಲಿ....??


1 comment:

  1. ಪ್ರಕೃತಿ ತನ್ನದಾಗಿಸಿಕೊಂಡ ಮಗಳನ್ನು ಅಪ್ಪ ಸಂತೈಸುವ ಪರಿ ಮನಮಿಡಿಸಿತು.

    ReplyDelete