Thursday, September 5, 2013

ಮಡಿ - ಮೈಲಿಗೆ

ರ್ರೀ... ಏನೂಂದ್ರೆ.... ಇಲ್ಬನ್ನಿ
ಬಂದ್ರಾ..ಅಲ್ಲಿಯೇ ನಿಲ್ಲಿಯಪ್ಪಾ
ನನ್ನ ಹತ್ತಿರ ಬರಲೇಬೇಡಿ
ಹಾಗೆಯೇ ಒಂದು ತಪ್ಪಲೆ
ಬಿಸಿ ನೀರ ಬೇಗ ಕಾಯಿಸಿ, 
ಸೀಗೇ ಪುಡಿಯ, ಗಂಜಲವ 
ಒಂಚೂರು ಎಣ್ಣೆಯ ಕೊಟ್ಟು,
ನೀವೇ ನನ್ನ ತಲೆಯ ಮೇಲೆ 
ಒಂದೆರಡು ಚೆಂಬು ನೀರ ಹಾಕಿ
ಮಡಿ ಬಟ್ಟೆಗಳ ತಂದು ಕೊಡಿ;
ಒಂದೇ ಸಮನೆ ಪುಲ್ ಸ್ಟಾಪಿಲ್ಲದೆ
ನನ್ನವಳು ಬಡ ಬಡಿಸಿದ ಕಂಡು
ನಾ ಮುಸಿ ಮುಸಿ ನಗು ನಗುತ
ಏನಾಯಿತೇ, ನೀ ಮತ್ತೆ ಕೂತೆಯೋ ಹೇಗೆ?!!! 
ಸೂತಕದ ಮನೆಯಿಂದ ಬಂದೆಯೋ ಹೇಗೆ ?!!
ನಿನಗಿನ್ನು ಒಂದು ವಾರ ಕಾಲ ರಜೋದರ್ಶನ
ನನಗಿನ್ನು ಅಡಿಗೆ ಮಾಡಿ, ಕೈ ಸುಟ್ಟು ಕೊಂಡು
ಪಾತ್ರೆ, ತಾಪತ್ರೆಗಳ ತಾಕಲಾಟದ ದರ್ಶನ
ಸರಿ ಹೋಯಿತು, ಈ ನನ್ನ ಗ್ರಹಚಾರಕ್ಕೆ
ನಾನಿಂದು ಆಫೀಸಿಗೆ ಹೋದ ಹಾಗೆಯೆ ?!!!

ಅಯ್ಯೋ..!!!!!!! ಅದೆಲ್ಲಾ.... ಇಲ್ಲಾರೀ,
ನಿಮಗೆ ಯಾವಾಗಲೂ ಅಪಹಾಸ್ಯವೆ
ಹಾಳಾದ್ದು ಆ ಕಾಗೆ ಕುಕ್ಕಿ ಹೋಯಿತು
ತಪ್ಪು ತಪ್ಪು, ಆ ಕಾಕ ರಾಜ ಮುಟ್ಟಿತು
ಇನ್ನೇನು ಕಷ್ಟ ಕಾದಿದೆಯೋ ಶಿವನೇ;
ಮೈಲಿಗೆಗೆ ಬೇಗ ಸ್ನಾನವ ಮಾಡಬೇಕು
ಹೊರಡಿ ಹೊರಡಿ ಬೇಗನೆ ನೀರ ತನ್ನಿ
ಆ ಕಾಗೆಗೂ ನಿನಗೆಂತಹದ್ದೆ ಸಂಬಂಧ
ನೀ ಆಗಾಗ ನನ್ನ ಹಂಗಿಸುವೆ ನಿಮ್ಮದು
ಕಾಗೆ ಡೇಗೆಗಳ ಬಂಧು - ಬಳಗವೆಂದು
ಅದಕ್ಕೆ ಅದು ನಿನ್ನ ಕಂಡೇ ಕುಕ್ಕಿರ ಬೇಕು !!

2 comments:

  1. ನಿಜ, ಈಗಲೂ ಜನ ಕಾಗೆಯ ಸ್ಪರ್ಷಕೆ ಅಪಶಕುನವೆಂದೇ ಭಯಪಟ್ಟು ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪವ ಹಚ್ಚುವರು. ನಿಮ್ಮ ತಿಂಡಿ ತೀರ್ಥಗಳ ಕಡೆಗಾಣಿಸ ಬಹುದು, ತಪ್ಪದೆ ನನ್ನ ಬ್ಲಾಗಿಗೆ ಭೇಟಿಯಿತ್ತು
    ಸದಾ ಹುರಿದುಂಬಿಸುವ ನಿಮ್ಮ ಪ್ರೇರಕ ಶಕ್ತಿಗೆ ನಾ ಶರಣು ಶರಣು ಬದರಿ ಜೀ.

    ReplyDelete