Wednesday, April 3, 2013

" ಮನವ ಕದ್ದ ನನ್ನತ್ತೆಯ ಮಗಳೆ "

ಕಂಡಿರೇನು ನೀವು ನನ್ನವಳ
ಕೇದಿಗೆ ಹೂ ಮೈ ಬಣ್ಣದವಳ
ನಿಮ್ಮಲೆಲ್ಲೋ ಅಡಗಿ ಕೂತು
ನನ್ನ ಮನವ ಕದ್ದು ಹೋದವಳ
ಕರೆಯಲ್ಹೇಗೆ ನಾ ಹೆಸರ ತಿಳಿಯೆ
ಕಣ್ಣಿನಲ್ಲೇ ಮನದ ಕದವ ತೆರೆದು
ನಗೆಯ ಬಣ್ಣದೋಕುಳಿಯ ಚೆಲ್ಲುತ
ದುಂಬಿಯಾಗಿ ಬಂದು ಹೋದಳೇಕೆ
ಒಲವಿನ ಹಣತೆಯ ಮನದಲ್ಲಿಟ್ಟು
ಕನಸಿನೆಣ್ಣೆಯ ಸುರಿದು ಮುತ್ತನಿಟ್ಟು
ನರ ನರದಿ ನಾಟ್ಯವಾಡಿ ಹೋದಳು
ಮಧುರ ನೆನಪು ಭಿತ್ತಿ ಹೋದಳೇಕೆ
ನಾ ಹೇಗೆ ಮರೆಯಲೇಳಿ ಅವಳ
ನಾ ಹೇಗೆ ತೊರೆಯಲೇಳಿ ನೆನಪ
ನಾ ಹೇಗೆ ಕಾಲ ಕಳೆಯಲೇಳಿ ಒಂಟಿ
ಮುದ್ದು ಮುಖವೆ ನನ್ನ ಮುತ್ತುತ್ತಿರಲು
ನನ್ನ ಮನದ ಒಲವ ತಿಳಿಸಿ ಹೇಳಿ
ಎರಡು ಜಡೆಯ, ಹಂಸ ನಡೆಯ
ಗುಳಿ ಕೆನ್ನೆಯ, ಕಪ್ಪು ಮುಂಗುರುಳ
ನೀಳ ದೇಹದರಸಿ ಮೀನಾಕ್ಷಿಗೇಳಿ
ಲಜ್ಜೆ ಕಂಗಳ, ಗೆಜ್ಜೆ ಕಾಲ್ಗಳ ಸದ್ದಿಗೆ
ಎದೆ ಝಲ್ ಝಲ್ ಎಂದೆನುತವಳ
ಮುಖ ಕಮಲ ಕಂಡೊಡೆ ನನ್ನಲೇಕೆ
ಬಿರಿದ ತುಟಿ ಮಾತಾಡದಾಯ್ತೇಕೆ
ಕನಸ ಕಾಣುತ್ತಿದ್ದವನಿಗೆ ಪಾನಕವಿತ್ತು
ನನ್ನ ಕರೆಯ ಬಂದವಳ ಕರೆಗೆ ಸೋತು
ನಾ ಹಿಂದೆ ಹಿಂದೆ ಹೋದೆ ಮೈ ಮರೆತು
ನನ್ನ ಚಿತ್ತ ಕದ್ದ ಚಂದ್ರ ಚಕೋರಿ ಬಳಿಗೆ
ನಾಚಿಕೆಗೆ ನೀರಾಗಿ ಕರಗಿ , ನನ್ನೆದೆಗೆ
ಒರಗಿ, ನಾ ಯಾರೆಂದು ತಿಳಿಯೆ ನೀ
ಯಾರೆಂಬುದ ಬಲ್ಲೆ ನನ್ನತ್ತೆಯ ಮಗನೆ
ಕೈಹಿಡಿದು ಹುಸಿ ಮುನಿಸ ಬೀರಿದಳು

2 comments:

  1. ಇಷ್ಟವಾಗುತ್ತದೆ ಕವನಗಳ ಸಾಲು. ಮುಂದುವರೆಯಲಿ ಅಕ್ಷರಗಳ ಪಯಣ

    ReplyDelete
  2. ಧನ್ಯವಾದಗಳು ಶ್ರೀ .

    ReplyDelete