Sunday, November 23, 2014

ಬೇಡ ಸ್ವಾಮಿ ನನ್ನ ಫಜೀತಿ 108

ರ್ರೀ... ಬೇಗ ಬಾಗಿಲು ತೆಗಿರಿ, ನಿಮಗಿದೆ ಮಾರಿಯ ಹಬ್ಬ!!
ನನ್ನ ಕೈಗೆ ರೆಡ್ ಹ್ಯಾಂಡ್ ಆಗಿ ಇಂದು ಇಬ್ಬರೂ ಸಿಕ್ಕಿ ಬಿದ್ರಿ
ಎಷ್ಟು ದಿನದಿಂದ ನಡೀತಿದೆ ಈ ನಿಮ್ಮ ಕಳ್ಳ ವ್ಯವಹಾರ
ಆ ಹಾ.. ನಾ ತವರಿಗೆ ಹೋಗಿದ್ದೇ... ತಡ ಶುರವಾಯ್ತೆ
ನಿಮ್ಗೆ ಲಂಗು ಲಗಾಮಿಲ್ಲ, ನಾಚಿಕೆ ಮೊದಲೇ ಇಲ್ಲ;
ಎಲ್ಲಿ ಒಳ ಬಂದ ಆ ಮಾಯಾಂಗನೆ, ನನ್ನ ಸವತಿ ?!
ಥೂ...!! ನಿಮ್ಮ ಜನ್ಮಕ್ಕೆ ಅಸಹ್ಯ ಅನ್ನಿಸಲಿಲ್ಲವೇ...??
ಹೋಗಿ ಹೋಗಿ ನಿಮ್ಗೆ ಬುದ್ಧಿ ಹೇಳಿದ್ರೆ ಏನ್ ಪ್ರಯೋಜನ
ನಾಯಿ ಬಾಲ ಎಂದಿದ್ರೂ ಡೊಂಕು ಡೊಂಕೆನೆ
ಎಲ್ಲಾ ಮೀಡಿಯಾದವರನ್ನ, ಸ್ತ್ರೀ ಸಂಘದವರನ್ನ ಮೇಲಾಗಿ ಅಕ್ಕಪಕ್ಕದವರನ್ನ ಕರೆದು, ಛೀ... ಥೂ.. ಅಂತ ಉಗಿದು
ಕತ್ತೆ ಮೇಲೆ ಕೂರಿಸಿ ಮೆರವಣಿಗೆ ನಾ ಮಾಡಿಸಲಿಲ್ಲಾಂದ್ರೆ
ನನ್ನ ಹೆಸರು ' ಸತ್ಯಭಾಮನೇ '.... ಅಲ್ಲ, ಕರೀರ್ರೀ ಅವಳನ್ನ ಪೊರಕೆ ಪೊರಕೆ ಕಿತ್ತು ಹೋಗೊ ವರೆಗೂ ಬಾರಿಸ್ತೀನಿ....
ಲೆ ಲೇ... ಭಾಮ, ನಿನ್ನ ದಮ್ಮಯ್ಯಾ ಅಂತೀನಿ ಕಣೇ
ಯಾವ ಹೆಣ್ಣೂ ಇಲ್ವೆ, ಬೇಕಾದ್ರೆ ನೀನೆ ಎಲ್ಲಾ ಕಡೆ ನೋಡೆ
ನಾ ಆ ತರಹದ ಮನುಷ್ಯನೇ... ನಿನ್ನಾಣೆಗೂ ಇಲ್ಲವೇ ಇಲ್ಲ ಪ್ಲೀಸ್ ಪ್ಲೀಸ್ ನನ್ನ ನಂಬೇ... ನಾ ಅಂತವ 'ನಲ್ಲ'
ಛೆ...!! ನಾಯಿ, ನರಿ ಪಶು ಪಕ್ಷಿಗಳಿಗಿಂತ ಕಡೆಯಾದ್ರಿ
ನನ್ನ ಗಂಡ ಸಾಕ್ಷಾತ್ ಶ್ರೀರಾಮಚಂದ್ರನ ಅಪರಾವತಾರ ನಾನೇ... ಸೀತೆ ಅಂತೆಲ್ಲಾ ಅಂದ್ಕೊಂಡಿದ್ದೆ
ನನ್ನಲ್ಲಿ ಏನು ಕಮ್ಮಿಯಾಗಿದೆ ಅಂತ ?
ಅವಳಲ್ಲಿ ಏನಿದೆಯಂತ ತಂದಿಟ್ಕೊಂಡಿದ್ದೀರಿ
ಈ ಯೌವನ, ಸೌಂದರ್ಯ, ಈ ನೀಳ ಕೇಶರಾಶಿ
ಎಲ್ಲಾ ... ಹಳೇದಾಯ್ತೆ ನಿಮ್ಗೆ ?!
ಮುದ್ದಾದ ಎರಡು ಮಕ್ಕಳ ಹೊತ್ತು ಹೆತ್ತು ಕೊಟ್ಟಿರುವೆ
ಅವುಗಳ ನೆನಪಾದ್ರು ಬರಲಿಲ್ವೆ ನಿಮ್ಗೆ ?
ಏನೋ ... ನಂಗೆ ಮೂಗಿನ ತುದಿಯಲ್ಲೇ ಮುಂಗೋಪ
ನಂದೇ.. ಮಾತು ನಡೆಯಬೇಕೆನ್ನೊ ಅಹಮ್ಮಿನ ಹಠ
ಇಷ್ಟಕ್ಕೆ ಕಟ್ಟಿಕೊಂಡವಳನ್ನ ಬಿಟ್ಟು,
ಯಾವೋಳ್ನೋ ಕರೆ ತಂದು ಹೀಗೆ ಇಟ್ಕೊಳ್ಳೋದೆ
ನೋಡಿ ನಿಜ ಹೇಳಿ ನಾನೆ ನನ್ನ ಕಣ್ಣಾರೆ ನೋಡಿರುವೆ ಯಾವುದಿದು ಈ ಬಿಚ್ಚಿರುವ ಸೀರೆ ? ಅವಳೆಲ್ಲಿ ?
ಅದು ಅದು ಹೇಳಲೋ.... ಬೇಡವೋ ಜಿಜ್ಞಾಸೆಯಲ್ಲಿರುವೆ ಹೇಳದಿದ್ದರೆ ನೀ ನಿಜವೆಂದುಕೊಳ್ಳುವೆ
ನೀ ಏನೋ .. ನನ್ನ ಜೊತೆ ಜಗಳವಾಡಿ ತವರಿಗೆ ಹೋದೆ
ನಮ್ಮ ಸಂಸಾರದ ಗುಟ್ಟು, ವ್ಯಾಧಿಯ ರಟ್ಟು
ಅಕ್ಕಪಕ್ಕದವರಿಗೆ ಗೊತ್ತಾಗದಿರಲಿ ಎಂದು
ನಿನ್ನ ಸೀರೆಯ ಹೊದ್ದು ಬೆಳ್ಳಂಬೆಳಿಗ್ಗೆ
ಅಂಗಳದ ಕಸ ಗುಡಿಸಿ ನೀರು ಎರಚಿ
ನಾನೇ... ರಂಗೋಲಿಯ ಬಿಡುತ್ತಿದ್ದೆ
ಇದೇ ನೋಡು ನನಗೆ ನಿನಗೆ ಆದ " ಫಜೀತಿ "

No comments:

Post a Comment