Thursday, October 31, 2013

" ಫಜೀತಿ "

  ಒಂದೇ ಉಸಿರಿಗೆ " ಸಾ... ಸಾ..." ಎಂದು ಕೂಗಿ ಕೊಳ್ಳುತ್ತ ಬಂದವನ, " ಏನ್ಲಾ ಗೊಣ್ಣೆ ಸೀನ......., ಯೇನ್ಲಾ ಆಯ್ತು, ಹಿಂಗ್ಯಾಕ್ಲಾ ಓಡೋಡಿ ಬಂದೆ, ನಾಯಿ ಯೇನಾರ ಅಟ್ಟಿಸ್ಕೊಂಡ್ ಬಂತೇನ್ಲಾ... ".
" ಸಾ.. ನಿಮ್ಮ ತಾಯಿ ಕರಿತಾವ್ರೆ ಸಾ... " ಎಂದ. "
ಲೆ ಲೇ... ಗೊಣ್ಣೇ..., ನಮ್ಮ ತಾಯಿ ಸತ್ತು ವರ್ಷ ಆಯ್ತು, ನಿಜ ಹೇಳ್ಲಾ ಯಾರೂಂತ ಇಲ್ಲಾಂದ್ರೆ ಈ ಬೆತ್ತ ತೂರಿಸಿ ಬಿಡ್ತಿನಿ ಮಗನೆ" ಕೋಪಗೊಂಡಿದ್ದೆ.

" ಸಾ... ನಮ್ ತಾಯಾಣೆಗೂ ಅವರೇ ಬತ್ತಾವರೆ ನೀವೆ ಬೇಕಾದ್ರೆ ನೋಡ್ಕೊಳ್ಳಿ ಸಾ.... " ಎಂದೇಳಿ ಹೊರಡುವವನ ಲೆ ಲೇ....... ಯಾರೋ ಹೇಳಿದ್ದು ನಮ್ಮ ತಾಯಿ ಅಂತ, ನನ್ನ ಹೆಂಡ್ರು ಕಾಣ್ಲಾ......."
ನನ್ನವಳ ಆಕಾರ ( ಸೈಜ್ ) ನೋಡಿ ನನ್ನ ತಾಯಿ ಅಂತ ಅಂದು ಕೊಂಡಿರ ಬೇಕು.

"ನೋಡ್ಕೊಳ್ಲಾ........... ನಾ ಯಂಗೆ ಡ್ರಿಲ್ ಹೇಳಿ ಕೊಡ್ತಿದ್ದೀನೋ ..... ನೀನು ಅಂಗೆಯ ಇವರಿಗೆಲ್ಲಾ ಹೇಳ್ಕೊಡ್ತಿರು...., ನಾ ಹಿಂಗ್ ಹೋಗಿ ಅಂಗ್ ಬರ್ತೀನಿ"

" ಆಹಾ.... ನೀವೋ..... ನಿಮ್ಮ ಡ್ರಿಲ್ಲೋ.... ನೋಡೋಕೆ ಎರಡೂ........... ಕಣ್ ಸಾಲ್ದು ರ್ರಿ, ಮಕ್ಕಳಿಗೆ ಈಗೇನ, ನೀವ್ ಡ್ರಿಲ್ ಹೇಳ್ಕೊಡೋದು ಅಲ್ಲಾ ನಿಮ್ ಹೆಚ್ಚೆಮ್ಮು...... ನೋಡಿ, ಸುಮ್ಮನಿದ್ರು ಅಂದ್ರೆ, ಡ್ರಿಲ್ ಬಗ್ಗೆ ಅವರಿಗೂ ಗೊತ್ತಿಲ್ಲಾಂತ ಕಾಣುತ್ತೆ.
ಪಾಪ ಆ ಮಕ್ಕಳೋ.... ಗುರುವಿನಂತೆ ಶಿಷ್ಯರು" ನನ್ನವಳು ಬಿದ್ದು ಬಿದ್ದು ನಕ್ಕಿದ್ದಳು.

" ಹೆ ಹೇ... ನಾನು ಅಂದ್ರೆ ಏನೂ, ನನ್ ಡ್ರಿಲ್ ಅಂದ್ರೆ ಏನು ಶಿಸ್ತು ; ನಾ ಶಿಸ್ತಿನ ಮನುಷ್ಯ ಕಾಣೆ, ನಾ ಹೇಳ್ಕೊಟ್ಟಂಗೆ ಮಕ್ಕಳು ಡ್ರಿಲ್ ಮಾಡ್ತಿರ್ಲಿಲ್ವೇ"

" ಹೌದೌದು ಥೂ.... ತೆಗೀರಿ ನಿಮ್ ಕೈಯಿ
ಕೆರೆದೂ ಕೆರೆದೂ ಹುಣ್ಣಾದೀತು, ಆ ಮಕ್ಕಳ ಮುಂದೆ; ನಿಮ್ಮ ಹೆಚ್ಚೆಮ್ ಮುಂದೆ, ಅಸಹ್ಯ ಅನ್ನಿಸಲಿಲ್ವೆ
ದಿನಕ್ಕೆ ಎರಡು ಬಾರಿ ಸ್ನಾನ ಮಾಡ್ತಿರಿ, ತೊಡೆ ಹತ್ತಿರ ಪರ ಪರಾಂತ ಕೆರಕೊಳ್ಳೋದೆ " ಏನಾದ್ರೂ ರೋಗ ಇದ್ದರೆ ಯಾವುದಾದ್ರು ಆಸ್ಪತ್ರೆಗೋಗಿ ತೋರಿಸಿ
ನಿಮ್ಮ ಸಹವಾಸ ದೋಷದಿಂದ ನನಗೂ ನಮ್ಮ ಮಕ್ಕಳಿಗೂ ರೋಗ ಬಂದೀತು ".

" ಲೆ ಲೇ ಇವಳೇ.... ತಾರ, ನನಗ್ಯಾವುದು ರೋಗ ಇಲ್ವೆ ನಿನ್ನಾಣೆಗೂ, ಹಾಳಾದ್ದು ಯಾವ್ದೋ ಇರುವೆ ಬೆಳಿಗ್ಗೆಯಿಂದ ಪ್ಯಾಂಟೊಳಗೆ ಸೇರಿ ಕೊಂಡು ಕಚ್ಚಿ ನನ್ನ ಪ್ರಾಣ ತಿಂತಿದೆ ಕಾಣೆ ". " ನೀ ಇಲ್ಲೇ ನಂಗೆ ಕ್ಲಾಸ್ ತಗೋಬೇಡ ಮಾರಾಯ್ತೀ, ಬೇಗ ಮನೆಗೆ ನಡೆಯೇ, ಸ್ಕೂಲ್ ಹುಡುಗ್ರು ಕೇಳಿಸ್ಕೊಂಡ್ರೆ ಇಡೀ ಊರಿಗೆ ರೇಡಿಯೋ ಹಾಕ್ತಾರೇ......

2 comments:

  1. ನಿಮ್ಮ ಈ ಹಾಸ್ಯ ಮಿಶ್ರಿತ ಲಘು ಬರಹ ಓದಲು ಖುಶಿಯಾಯಿತು.

    ReplyDelete
  2. ಧನ್ಯವಾದಗಳು Chandrasheksr Ishwar Naik ರೇ, ನಿಮ್ಮೆಲ್ಲರ ಪ್ರೋತ್ಸಾಹದ ನುಡಿಗಳೇ ಇದೆಲ್ಲವ ಬರೆಯಲು ಸಾಧ್ಯವಾಗಿದ್ದು.

    ReplyDelete