Friday, May 30, 2014

" ಅರ್ಥವಾಗದವಳು " ೨

ಎಂದೂ.... ಲಟ್ಟಣಿಗೆ ಹಿಡಿದು
ಬಾಗಿಲ ಬಳಿ ಕಾಯದ ನನ್ನವಳು,
ಇಂದೇಕೋ .... ಮುಖವೆಲ್ಲ ಕೆಂಪಾಗಿಸಿ
ಕಣ್ಣ ಅತ್ತಿತ್ತ ಹೊರಳಿಸಿ, ಬುಸುಗುಟ್ಟುವುದ ಕಂಡು;
ನನಗೂ... ಒಳಗೊಳಗೆ ನಡುಕ ಶುರುವಾಗಿ
ನನ್ನಿಂದ ಇಂದೇನಾದರು ಯಡವಟ್ಟಾಯ್ತೆ....?
ಯೋಚಿಸಿದಷ್ಟೂ ... ಎಲ್ಲವೂ ಗೊಜಲುಗೊಜಲು
ಒಂದಕ್ಕೊಂದು ಮುಷ್ಕರ ಹೂಡಿ ನೆನಪಿಗೆ ಬರದು

ಓಹ್ !! ಪಕ್ಕದ ಮನೆಯ ಸುಂದರಿಯ ಜೊತೆ
ಬೆಳಿಗ್ಗೆ ಬೈಕಿನಲಿ ಹೋದದ್ದು ಇವಳೇನಾದರು ಕಂಡಳೆ?
ಆಟೋ ಸ್ಟ್ರೈಕಿಂದ ಆಫೀಸಿಗೆ ಹೋಗಲು
ನನ್ನ ಬೈಕಲ್ಲಿ ಡ್ರಾಪ್ ಕೊಟ್ಟಿದ್ದು ದುರುದೃಷ್ಟವಾಯ್ತೆ?

ಸಂಜೆ ಸಿಗ್ನಲ್ ಬಳಿ ಹೂ ಮಾರುವ ಆ ಹುಡುಗಿ
ಸಾರೂ... ಮೊಳ ಐದೇ... ರೂಪಾಯಿ ಕೊಂಡ್ಹೋಗಿ
ಅಮ್ಮಾವರು ಖುಷಿಯಾಗುವರು ಕಣ್ಣ ಮಿಟುಕಿಸಿ
ಎಷ್ಟೆಲ್ಲಾ... ಕಾಡಿಬೇಡಿ, ಪೀಡಿಸಿದರೂ...
ಕೇಳದೆ ಗದರಿಸಿ ಕಳಿಸಿದ್ದು ನನ್ನದೇ.... ತಪ್ಪು !!

ಒಂದೆರಡು ಮೊಳ ಮಲ್ಲಿಗೆ ಹೂ, ಮೈಸೂರ್ ಪಾಕ್
ತಂದಿದ್ದರೆ ಕರಗಿಬಿಡುತಿದ್ದಳೋ... ಏನೋ ....!!!
ಇಂದು ಇನ್ನೇನು ಕಾದಿದೆಯೋ... ಗ್ರಹಚಾರ
ಬಡಪಾಯಿಯ ಗಂಟಲ ಪಸೆ ಒಣಗಿ
ಇದ್ದಬದ್ದ ದೇವರಿಗೆಲ್ಲಾ... ಹರಕೆ ಹೊತ್ತು
ಹೆಲ್ಮೇಟ್ ತೆಗೆಯದೆ ದೇಶಾವರಿ ನಗೆ ಬೀರಿ
ಹೆ ಹೆ ಹೇ.... ಇದೇನೆ ಪಾರೂ.... ಲಟ್ಟಣಿಗೆ
ನನ್ನ ತಲೆಗೆ ಮೊಟುಕುವೆಯೋ.... ಹೇಗೆ?
ನಿನ್ನ ನೋಡಿದರೆ ತಿಳಿಯದೆ, ನೀ ಅಂತವಳಲ್ಲ ಬಿಡು
ಎಷ್ಟಾದ್ರೂ ನನ್ನ ಮುದ್ದಿನ ಅರ್ಧಾಂಗಯಲ್ಲವೆನೆ

ನನ್ನವಳು ಕಿಲಕಿಲ ನಕ್ಕು, ಹುಸಿ ಕೋಪ ಬೀರಿ
ಸಾಕು ಸುಮ್ಮನಿರಿ ಹೀಗೆಲ್ಲಾ ... ನನ್ನ ಹೊಗಳಿದರೆ
ಥೂ.... ಹೋಗಿ , ಇತ್ತೀಚೆಗಂತು ನೀವು...
ನಿಮಗಿಷ್ಟಾಂತ ಎಣ್ಣೆಗಾಯಿ ಮಾಡಿ ಕಾಯುತ್ತಿರುವೆ
ಆ ಕೆಲಸದ ತಿಮ್ಮಿ ಚಪಾತಿ ಲಟ್ಟಿಸಲು
ಇನ್ನೂ.... ಬರಲೇ.... ಇಲ್ಲ ನೋಡಿ ಎನ್ನಬೇಕೆ!!!

2 comments:

  1. ಯಪ್ಪಾ ಮೀಟ್ರೇ ಆಫ್ ಆಗಿತ್ತಲ್ವಾ! :-D

    ReplyDelete
  2. ನನಗೂ... ಮೀಟರ್ ಆಫ್ ಆಗಿತ್ತು ನನ್ನವಳ ಕೈಯಲ್ಲಿನ ಲಟ್ಟಣೆಗೆಯ ಕಂಡು ಬದರಿಜಿ :-)

    ReplyDelete