Monday, December 15, 2014

" ಬೇಡ ಸ್ವಾಮಿ ನನ್ನ ಫಜೀತಿ " ೧೦೬


ರ್ರೀ....  ಸ್ವಲ್ಪ ಬೆಡ್ ರೂಮಿಗೆ ಬರ್ತೀರ ನೀವು
ನಿಮಗೆ ಏನೋ ಸರ್ಪೈಜ್ ಗಿಫ್ಟ್ ಕೊಡುವುದಿದೆ
ಮೋಹಕವಾಗಿ ನಕ್ಕವಳ ಕಂಡು ಒಂದು ಕ್ಷಣ ಖುಷಿಯಾಗಿ ಮರುಕ್ಷಣ ನನ್ನೊಳಗೆ ಎಂದಿಲ್ಲದ ಭಯದ ನಡುಕ ಶುರುವಾಗಿ
ಇಂದೆನಗೆ ಏನು ಕಾದಿದೆಯೋ ... ತಂದೆ ವೆಂಕಟರಮಣ
ಕಟುಕ ಕುರಿ ಕಡಿಯುವ ಮೊದಲು ಹೀಗೆಯೆ ಕುರಿಗೆ ಹುಲ್ಲು ಹಾಕುವುದು
ನಾ ಬಲಿಕ ಬಕರ ಆಗದಿದ್ದರಷ್ಟೇ.... ಸಾಕು !!
ಅಪ್ಪಿತಪ್ಪಿ ನಾ ಇವಳ ಏಕೆ, ಏನೆಂದು ಕೇಳಲಾದೀತೆ ?
ದಮ್ಮಯ್ಯಾ....ಅಂದರೂ ನನಗೆ ಹೇಳುವಳೆ ?
ತರ್ಕ ವಿತರ್ಕಗಳ ಹೋಯ್ದಾಟದಲಿ ಮುಳುಗಿದವನಿಗೆ
ನಿಮ್ಗೆ ಒಳ್ಳೆಯ ಮಾತಲ್ಲಿ ಹೇಳಿದ್ರೆ ನೀವೆಲ್ಲಿ ಕೇಳ್ತೀರಿ
ಕೊಡುವುದ ಕೊಟ್ಟರೆ ಆಗ ಹೇಳಿದಂತೆ ಕೇಳುವಿರಿ
ರ್ರೀ... ಎಷ್ಟು ಹೊತ್ತು ಬನ್ರೀ ಸುಮ್ಮನೆ ಬಿಲ್ಡಪ್ ಬೇರೆ
ಬ ಬ ಬಂದೆ ಕಣೇ....  ಮಕ್ಕಳ ಮುಂದೆಯೇ ನೀ ಹೀಗೆಲ್ಲಾ
ನನ್ನ ಮೇಲೆ ರೇಗಿ, ಕೂಗಾಡ ಬೇಡವೇ... ಮಾರಾಯ್ತಿ
ಪಪ್ಪಾ .... ಇಂದಿದೆ ನಿಮಗೆ ಹೋಗಿ ಹೋಗಿ... ಹಬ್ಬ;
ಅಮ್ಮನ ಕೈಯಲ್ಲಿ ಭರ್ಜರಿ ಬಹುಮಾನ ಹ್ಹಹ್ಹಹ್ಹಹಾ 
ಮೋದಲೇ... ನಾ ಹೆದರಿರುವಾಗ ಇವನು ಬೇರೆ
ನೋಡೇ... ನಿನ್ನ ಮಗ ಹೇಗೆ ಹಂಗಿಸಿ ನಗುತ್ತಿರುವ
ಮನೆಯವರೇ... ಹೀಗೆ ಇನ್ನು ಅಕ್ಕಪಕ್ಕದವರು ನನ್ನನ್ನ
ಆಡಿಕೊಂಡು ಊರ ತುಂಬ ಹೇಳಿಕೊಂಡು ನಗದಿರುವರೆ...??
ನೀ ಬ ಬ ಬಾಗಿಲು ಹಾಕಿದ್ದಾದರು ಏತಕ್ಕೆ....?!!
ನನ್ನಿಂದೇನೂ... ತಪ್ಪಾಗಿಲ್ಲವೆ, ನನ್ನ ನಂಬೇ ನೀನು
ಏನೋ....  ಪಕ್ಕದ ಮನೆಯ ಆ ಪಂಕಜಾಕ್ಷಿ
ಪೂಜೆಗೆ ಹೂ ಬೇಕೆಂದಳು ಒಂದಷ್ಟು ಕಿತ್ತು ಕೊಟ್ಟೆ
ಇಷ್ಟಕ್ಕೆ ನೀ ಹೀಗೆಲ್ಲ ನನ್ನ ಅನುಮಾನಿಸುವುದೆ..?
ಹಾಳಾದ್ದು ಬಾಯೆಲ್ಲ ಒಣಗಿ, ಮೈಯೆಲ್ಲಾ ಬೆವರು ಹರಿದು
ಇವಳ ಬತ್ತಳಿಕೆಯಲ್ಲಿ ಸೌಟು, ಲಟ್ಟಣಿಗೆ, ಚೆಂಬು, ಪೊರಕೆ
ಬರದಿದ್ದರೆ ನಿನಗೆ ಮುಡಿ ಕೊಡುವೆ ತಂದೆ ತಿಮ್ಮಪ್ಪಾ...
ಹೊಸ ಪ್ಯಾಂಟು ಶರ್ಟ್ ಕೈಗಿತ್ತು
ಹ್ಯಾಪಿ ಬರ್ತಡೆ ಟು ಯು ರ್ರೀ..... 
ಹ್ಯಾಪಿ ಬರ್ತಡೆ ಟು ಯೂ  ಎನ್ನಬೇಕೆ ?!
ಶಿವಚೆನ್ನ ೧೬.೧೨.೧೪

No comments:

Post a Comment