Friday, December 26, 2014

ಬೇಡ ರ್ರೀ... ನನ್ನ, ನನ್ನವಳ ಫಜೀತಿ


ರ್ರೀ... ಎಲ್ಲಿದ್ದೀರಿ ?!  ಸರಿಯಾಗಿ ಕಿವಿ ಕೇಳ್ತಿದೆ ತಾನೆ ನಿಮ್ಗೆ ?!
ಛೆಛೆಛೇ ..!! ನೀವೋ...., ಆ ನಿಮ್ಮ ಡಬ್ಬಾ ಫೋನೋ...
ಯಾವಾಗ್ಲೂ ಬ್ಯುಸಿ ಅಥವಾ  ಔಟಾಫ್ ಆರ್ಡರ್
ಇತ್ತೀಚೆಗೆ ಅದು ಇದು ಹೇಳಿ, ಹೊಸಹೊಸ ಕತೆಗಳ ಕಟ್ಟಿ;
ಬರೀ ಬುರುಡೆ ಬಿಡುವುದೇ... ಆಯ್ತು ನಿಮ್ಮ ಜಾಯಮಾನ
ಯಾಕ್ರಿ ಬೇಕು ನಿಮಗೆ ? ಮನೆ, ಮಡದಿ, ಮಕ್ಕಳು ಸಂಸಾರ  ಎಲ್ರೂ ರೆಡಿಯಾಗಿರಿ ಮಧ್ಯಾಹ್ನ PVRಲ್ಲಿ PK ನೋಡ್ಕೊಂಡು ಶಾಪಿಂಗ್ ಮಾಡ್ಕೊಂಡು ಬರೋಣ ಅಂತ ಹೇಳಿ ಹೋದವರು
ಗಂಟೆ ಎರಡಾದ್ರೂ ಇನ್ನೂ ಪತ್ತೆಯೇ... ಇಲ್ಲ
ಈಗ ಬರ್ತಾರೆ ಸುಮ್ನಿರ್ರೊ ಅಂತ ಮಕ್ಕಳಿಗೆ ಸಮಾಧಾನಿಸಿ
ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾದಿದ್ದೇ ಬಂತು ನಮ್ಮ ಭಾಗ್ಯ
ಶ್ಶ್...!! ನೀವೇನೂ ಮಾತಾಡ್ಬೇಡಿ, ನನಗೆ ಬಂದಿರೊ ಕೋಪಕ್ಕೆ
ನಿಮ್ಮನ್ನ ಅಂದು ಹಾಡಿದರೇನು ಬಂತು ಪ್ರಯೋಜನ
ನನ್ನ ಕೈಗೆ ಸಿಗಬೇಕು ಆಗ ಇದೆ ನೋಡ್ರಿ ನಿಮಗೆ ಹಬ್ಬ
ಈಗಿಂದೀಗಲೇ ಮನೆಗೆ ಬೇಗ ಬಂದ್ರೆ ಸರಿ ಹೋಯ್ತು
ಇಲ್ಲಾಂದ್ರೆ ಇಂದು ನಿಮಗಿದೆ ತಕ್ಕ ಪೂ....ಜೆ !!
ಪೂಜೆ ಮಾಡ್ಲಿಲ್ಲಾಂದ್ರೆ  ನನ್ನ ಹೆಸರು ರುಕ್ಕೂನೇ... ಅಲ್ಲ

ಸಾರಿ ಸಾರಿ.... ಎಕ್ಸಟ್ರೀಮ್ಲಿ ವೆರಿ ವೆರಿ ಸಾರಿ ಕಣೆ ರುಕ್ಕೂ..
ಗೆಳೆಯನ ಕ್ರಿಸ್‌ಮಸ್ ಪಾರ್ಟಿಯ ಗಲಾಟೆಯಲ್ಲಿ
ನಾ ಹೇಳಿದ್ದು ಎಲ್ಲಾ ಮರೆತೇ ಹೋಗಿತ್ತು ನೋಡು
ಇನ್ನು ಅರ್ಧ ಗಂಟೇಲಿ ನಾ ಅಲ್ಲಿದ್ದರೆ ಸರಿ ತಾನೆ ನಿನಗೆ  
ಪ್ಲೀಸ್ ಪ್ಲೀಸ್ ಲೇಟಾದ ತಪ್ಪಿಗೆ ತಪ್ಪುಕಾಣಿಕೆಯಿದೆಯೇ
ಸರಿ ಸರಿ ಇದಕ್ಕೇನು ಕಮ್ಮಿಯಿಲ್ಲ ಬಿಡಿ ನಕ್ಕಿದ್ದಳು
ಇನ್ನೂ... ಲೇಟಾದರೆ ಇವಳಿಂದ ಉಳಿಗಾಲ ಉಂಟೇ ...??
ಉರಿದು ಮುಕ್ಕುವಳೆಂದು ಹೆದರಿ ಮನೆಗೆ ಬಂದರೆ
ತೆರೆದ ಬಾಗಿಲು ತೆರೆದಂತಿದೆ ಎಲ್ಲೆಲ್ಲೂ ನೀರವ ಮೌನ !!
ಛೆ ಛೆಛೆಛೇ!!!! ಏನೇ ಇದು ರುಕ್ಕೂ  ನಿನ್ನ ಅವತಾರ
ನಾ ಅವಳ ಮುಟ್ಟಿ ಮಾತಾಡಿಸಿದ್ದೇ.... ತಪ್ಪಾಯ್ತು ನೋಡಿ
ಕೆಂಡದಂತ ಕೆಂಪಾದ ಕಣ್ಣು, ಅಸ್ತವ್ಯಸ್ತವಾದ ತಲೆಗೂದಲು
ಅವಳು ನನ್ನ ನೋಡಿ ಹ್ಞೂಂಕರಿಸಿದ ರೀತಿಗೆ ಭಯಭೀತನಾಗಿ
ಕುಡಿದಿದ್ದ ನಶೆಯಿಳಿದು ಮಾತುಗಳು ಹೊರಬರದೆ ತಡವರಿಸಿದ್ದೆ;
ಏನೋ ....  ನನ್ನನ್ನೇ ಮುಟ್ಟುವಷ್ಟು ಧೈರ್ಯ ಬಂತೆ ?
ಬಾ... ರೋ.... ಬಾ ಬಾ.... ಗಹಗಹಿಸಿ ನಕ್ಕಿದ್ದು ಕಂಡು
ಪಿಶಾಚಿಯೋ, ಯಾವುದೋ ದೆವ್ವ ಇವಳ ಮೆಟ್ಟಿರಬೇಕು
ಮನೆಯಲ್ಲಾ ನನ್ನನ್ನೇ ಅಟ್ಟಾಡಿಸಿಕೊಂಡು ಓಡಾಡಿಸುವುದೇ?
ಆಂಜನೇಯ, ವೀರಭದ್ರರ ಅಷ್ಟೋತ್ತರಗಳ ಹೇಳಿದರೂ
ಭಯಪಡದ ಇದೆಲ್ಲೋ... ಗಟ್ಟಿಪಿಂಡದ ಭೂತವಿರಬೇಕು
ಲೆ ಲೇ...ರುಕ್ಕೂ ... ಬೇರೆ ಯಾರೂ ಅಲ್ಲವೆ ಅಲ್ಲ ನಾನೇ
ನಿನ್ನ ಕೈಹಿಡಿದ, ತಾಳಿ ಕಟ್ಟಿದ ಗಂಡ ಕಣೇ...
ನನ್ನನ್ನ ಬಿಟ್ಟು ಬಿಡೆ ಮಾರಾಯ್ತೀ  ನಿನ್ನ ದಮ್ಮಯ್ಯಾ ....
ನನ್ನ ಅರಚಾಟಕ್ಕೆ, ಕೂಗಾಟಕ್ಕೆ ಅಕ್ಕಪಕ್ಕದವರೆಲ್ಲಾ ಬಂದು
ನನ್ನವಳ ಬಿಗಿಯಾಗಿ ಹಿಡಿದರೂ
ಹೆ ಹೇ... ಗಂಡ ಅಂತೆ ಗಂಡ, ಇವನ್ಪಿಂಡ ನಿದ್ದೆಗೆ ಜಾರಿದವಳ  ಹಾಸಿಗೆಯಲ್ಲಿ ಮಲಗಿಸಲು ಹೊತ್ತೊಯ್ಯುವಾಗ ಕಾಲಿಗೆ ಸಿಕ್ಕ
ವೈನ್ ಬಾಟಲಿಯಿಂದ ಗೊತ್ತಾಗಿದ್ದು ಇವಳ ಹುಚ್ಚಾಟವೆಲ್ಲ  ...
ಶಿವಚೆನ್ನ ೨೬.೧೨.೧೪

2 comments:

 1. ಬ್ರದರ್ ಆವತ್ತೇ ಏಳುದ್ದೆ ಬರ್ರೀ ಟೆರೆಸ್ಸಿಗೆ ಹೋಗಿ ಗಪ್ ಚುಪ್ ಅಂತ ವೈನ್ ಮುಗಿಸೋಣ ಅಂತ, ಕೇಳಿದ್ರಾ? ನೀವು ನಿಮ್ಮ ಎಣ್ಣೆ ಜಿಪುಣತನ!
  ಅನುಭವಿಸಿ...

  ReplyDelete
  Replies
  1. ವೈನ್ ಬಾಟ್ಲಲ್ಲಿ ವೊಡ್ಕೊ ತುಂಬಿಸಿಟ್ಟಿದ್ದು ನನ್ನದೇ... ತಪ್ಪು, ಎಲ್ಲಿ ಕಾದಿದ್ದಳೊ ಪಾಪಿ, ಪಾಪಿ.

   Delete