Sunday, April 20, 2014

" ಕಾಡು ಮಲ್ಲಿಗೆ "

ಮುದ್ದು ಗೌರಿಯ ಕೊರಳ ಹಗ್ಗವ ಬಿಚ್ಚಿ
ನನ್ನ ಹಳ್ಳವ ನಾನೇ... ತೋಡಿಕೊಂಡೆನೇ...!
ಎಲ್ಲೆಂದರಲ್ಲಿ ಎಗರೆಗರಿ ಜಿಗಿಯುವ ಜಿಂಕೆಯಂತೆ
ಅಡ್ಡಾದಿಡ್ಡಿ ಓಡುವ ಗೌರಿಯ ಹಿಡಿಯಲಾದೀತೆ...
ಅದರ ಸರಿಸಮಕೆ ನಾ ಓಡುವುದುಂಟೆ
ಹಳ್ಳ-ಕೊಳ್ಳ, ಗಿಡಗಂಟೆ ಪೊದೆಗಳ ದಾಟಿ
ದಿಬ್ಬ ಹತ್ತಿ, ಕ್ಷಣಾರ್ಧದಲ್ಲಿ ಕಣ್ಮರೆಯಾದುದ ಕಂಡು
ಮುಳ್ಳು ಚುಚ್ಚಿ, ಮಂಡಿ ಒಡೆದು ರಕ್ತ ಬಂದರೂ...
ಅದಲೆಕ್ಕಿಸದೆ ಹುಚ್ಚಿಯಂತೆ ಹುಡುಕುತ ಅಲೆದು

ಅಯ್ಯೋ... ಗೌರಿ, ಹರಿವ ಹೊಳೆದಂಡೆ ಬೇರೆ
ನೀ ಎಲ್ಲಿ ನೀರಿಗೆ ಜಾರಿ ಬೀಳುವೆಯೋ....
ಹೊಂಚು ಹಾಕುವ ನರಿ, ನಾಯಿಗಳಿಗೆಲ್ಲಿ ಆಹಾರವಾಗುವೆಯೋ....
ನೀ ಎಲ್ಲಿದ್ದರೂ ಬಂದು ಬಿಡು ಗೌರಿ
ನಿನ್ನ ಬಿಟ್ಟು ತಪ್ಪು ಮಾಡಿದೆ ಗೌರಿ ಗೌರೀ....

ಅದೆಲ್ಲಿದ್ದನೋ... ಪಾಪಿ, ಬಿಡದೆ ಅಡ್ಡಗಟ್ಟಿ
ವಿಕೃತ ನಗೆ ನಕ್ಕು ಮುತ್ತಿಕ್ಕಲು ಬಂದವನ ದೂರ ತಳ್ಳಿ ಓಡಲೆತ್ನಿಸಿದರೂ... ನನ್ನ ಬಿಡಲಿಲ್ಲ
ಎಂದೂ... ನೋಡಿರದ ಅಪರಿಚಿತ ಮುಖ
ಪಕ್ಕದ ಹಳ್ಳಿಯವನೋ.... ಏನೋ... ಇರಬೇಕು
ಹಾಳಾದ್ದು ದುರದೃಷ್ಟ ಇಂದೇ ಮೇಲೆರಗಬೇಕೆ...?
ಅಟ್ಟಾಡಿಸಿ, ಗೋಳಾಡಿಸಿ ಹಿಡಿದಿದ್ದರು....

ಬೆ ಬೆ ಬೆ ಬೆಬ್ಬೆ ಬೆಬ್ಬೇ ಬೆಬ್ಬೆ ಬೇ... ಬೇ... ಬೇ
ನನ್ನ ಒಡಹುಟ್ಟಿದ ಅಣ್ಣಗಳಿರ, ಬಂಧುಗಳಿರಾ...
ನಿಮ್ಮ ತಂಗಿಯೆಂದರಿತು ನನ್ನ ಬಿಟ್ಟು ಬಿಡಿ
ನಿಮ್ಮ ದಮ್ಮಯ್ಯ, ಕೈ ಮುಗಿದರೂ....
ಅತ್ತು ಅಂಗಲಾಚಿ ಬೇಡಿದರೂ ಬಿಡಲಿಲ್ಲ
ಅಯ್ಯೋ .... ನನ್ನ ದುರ್ವಿಧಿಯೇ....
ಇವರಿಗೆಲ್ಲಿ ಕೇಳಿಸಿತು ಮಾತು ಬಾರದ
ಈ ಮೂಗಿಯ ರೋಧನ

ಮಾತಿಲ್ಲದವಳ ಮೂಗಿಯಿಂದೇನು ತೊಂದರೆಯೇ.. ಯಾರಿಗೂ... ಹೇಳಲಾರಳು ಇಂದು ನಮಗೆ ಹಬ್ಬ
ಎಂದೊಬ್ಬ ಬಂದು ಮುತ್ತಿಕ್ಕಿ, ತುಟಿ ಕಚ್ಚಿದವನ ಒದ್ದು
ನಾ ಓಡಿದರೂ... ಮತ್ತೆ ಹಿಡಿದು ಹೊತ್ತು
ಒಂದೊಂದೇ ಬಟ್ಟೆ ಕಿತ್ತೆಸೆದರು...
ಹಸಿದ ಮೃಗದಂತೆ ಒಮ್ಮೆಲೇ ಮೇಲೆರಗಿದರು
ಕಂಬನಿಯೊಂದು ಕಡೆ, ಸಹಿಸಲಾಗದ ನೋವು
ಅಂಬಾ.... ಎಂದು ಕೂಗುವ ಗೌರಿ ಒಂದು ಕಡೆ...

ಅಯ್ಯೋ ... ಅಮ್ಮಾ ...., ಅಪ್ಪಾ...
ಈ ನೋವ ತಾಳೆನೇ.... ಬಂದು ಕಾಪಾಡಿ
ಓ... ದೇವರೇ .... ಕಾಪಾಡು ತಂದೇ....
ಅಮ್ಮಾ ... ನನ್ನ ಯಾಕಾದರು ಹೆಣ್ಣಾಗಿ ಹೆತ್ತೆಯೇ...
ನನ್ನ ಅಳುವ ಕೂಗು ಕೇಳಿಸಿತೆ
ಅತ್ತೂ.... ಅತ್ತು ಅಸಾಧ್ಯ ನೋವಿಗೆ ಸತ್ತಿದ್ದೆ

2 comments:

  1. ಗೌರಿಯ ಕಥನ ಇಲ್ಲಿ ಸಾದೃಶ.

    ReplyDelete
    Replies
    1. ಗೌರಿಯ ಪಾತ್ರ ಇಲ್ಲಿ ನೆಪ ಮಾತ್ರವಾದರೂ... ಅತ್ಯಾಚಾರಕ್ಕೆ ಒಳಗಾದ ಮಾತು ಬಾರದ ಮೂಗಿಯ ಧಾರುಣ ಚಿತ್ರಣ ಅಂಬಾ ... ಎನ್ನುವ ಕೂಗಿನಲ್ಲಿ ಕರಗಿ ಹೋಯಿತೇನೋ.... ಧನ್ಯವಾದಗಳು ಬದರಿಜಿ.

      Delete