Wednesday, October 8, 2014

ಯಾರದು ಸರಿ ?

ನಿಮಗೇನೂ... ಗೊತ್ತಾಗದು, ಸುಮ್ಮನಿದ್ದು ಬಿಡಿ
ಏನೇನೋ ಹೇಳಿ ನನ್ನ ತಲೆಯ ಕೆಡಿಸದಿರಿ
ನನ್ನ ತಮ್ಮನಿಗಿಂತ ಒಳ್ಳೆ ಗಂಡು ಬೇಕೇನ್ರಿ ನಿಮಗೆ ? ರೂಪದಲ್ಲೇನೋ... ಕಪ್ಪು ನಾ ಒಪ್ಪಿಕೊಳ್ಳುವೆ,
ವಯಸ್ಸು ಹೆಚ್ಚಿರಬಹುದು ಗಟ್ಟಿಮುಟ್ಟಾಗಿಲ್ಲವೆ ?
ಐಶ್ವರ್ಯ, ಅಂತಸ್ತಿನಲ್ಲಿ ಅವನಿಗೇನು ಕಡಿಮೆ ಇದೆ ಹೇಳಿ ? ಕಲಿಯುಗದ ಕುಬೇರ ಕುಬೇರ ಕಾಣ್ರಿ ಅವನು
ಹತ್ತು ತಲೆಮಾರು ಕೂತು ತಿಂದರೂ ಕರಗದ ಆಸ್ತಿ 
ರಾಣಿ ರಾಣಿಯಂತೆ ಮೆರೆಯುವಳು ಆ ಮನೆಯಲ್ಲಿ
ನಿಮ್ಮಿಂದ ಗಂಡು ಹುಡುಕಿ, ಕೇಳಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿ ಕೊಡಲು ಸಾಧ್ಯವೇ ?
ಯಾರಾದರು ದಿಕ್ಕುದೆಸೆಯಿಲ್ಲದವನಿಗೆ ಕೊಡಬೇಕಷ್ಟೆ; ನಿಮಗೇ... ಸಾಕಷ್ಟು ಹಣ ಕೊಟ್ಟು, ಹತ್ತೂರು ಮೆಚ್ಚುವಂತೆ ಧಾಮ್ ಧೂಮ್ ಆಗಿ ಮದುವೆ ಮಾಡಿಕೊಳ್ಳುವ
ಸುಮ್ಮನೆ ಏನೇನೋ ಹೇಳದೆ ಒಪ್ಪಿಕೊಳ್ಳಿ
ನಿಮಗೂ... ಆಗ ರಾಜ ಮರ್ಯಾದೆ
ಅಬ್ಬಬ್ಬಾ ...!! ನೀ ಎಂಥಹ ಸ್ವಾರ್ಥ ತಾಯಿಯೆ ?
ನಿನ್ನ ತಮ್ಮನ ಕಲ್ಯಾಣ ಗುಣಗಳೆಲ್ಲ ಗೊತ್ತಿದ್ದೂ
ಮಗಳ ಬಾಳಿನ ಜೊತೆ ಆಟ ಆಡುವೆಯಲ್ಲಾ...
ನೀ ಒಪ್ಪಿದರೂ... ನಾನು ನನ್ನ ಮಗಳು ಒಪ್ಪಲಾರೆವು ಮದುವೆಯಾದರೆ ಎಲ್ಲಾ ಸರಿ ಹೋಗುವುದು ಎನ್ನುವೆ
ನಾಯಿಯ ಬಾಲ ಎಂದಿದ್ದರೂ ಡೊಂಕು
ನಿನಗೋ... ಗಂಟೂ ಉಳಿಯಬೇಕು,
ಆಕಡೆ ನಂಟೂ ಉಳಿಯಬೇಕೆನ್ನುವ ಜಾಯಮಾನದವಳು ... ಒಂದೇ... ಕಲ್ಲಿನಲಿ ಹೊಡೆವ ಏಟಿಗೆ ಎರಡೆರಡು ಪ್ರತಿಫಲ ! ತವರಿನಲ್ಲಿ ನೀ ಆಡಿಸಿದಂತೆ ಆಡುವ ಅಪ್ಪ, ಅಮ್ಮ
ಅಳಿಯ ( ತಮ್ಮ ) ಮಗಳಿದ್ದರೆ
ಆಗ ನಿನ್ನದೇ... ದರ್ಬಾರು, ಕಾರುಬಾರು ಅಲ್ಲವೆ ?
ನಮಗಿರುವ ಎರಡು ಮಕ್ಕಳಿಗೆ
ನಾನೇನೂ ಹಣ, ಆಸ್ತಿ, ಒಡವೆ ಸಂಪಾದಿಸಿ ಇಡಲಿಲ್ಲ ನಿಜ ಒಳ್ಳೆಯ ವಿದ್ಯಾಭ್ಯಾಸ, ಮಾನವೀಯತೆಯ ಶಿಕ್ಷಣ;
ಎಲ್ಲೇ... ಹೋದರು ಕೈಚಾಚದೆ ದುಡಿದು ತಿನ್ನುವ
ಬದುಕಿನ ಪಾಠವ ಕಲಿಸಿರುವೆ ನನಗದಷ್ಟೇ...ಸಾಕು

1 comment:

  1. ಹೀಗೂ ಯೋಚಿಸುವ ಹೆಣ್ಣು ಮಕ್ಕಳು ಇರುತ್ತಾರೆಯೇ? ಇರಬಹುದೇನೋಪ್ಪ ಕಾಲ ಕೆಟ್ಟೋಗೈತೆ!

    ReplyDelete