Thursday, September 5, 2013

" ಹಬ್ಬದ ಅಡಿಗೆ "

ಇದೇನೇ ಇದು ಮಂದಾ, 
ಇತ್ತೀಚೆಗಂತೂ ನೀ ಮಾಡಿದ
ಅಡಿಗೆಯ ಯಾರೂ ತಿನ್ನಲಾರರು
ಆ ಸಾರೋ ಬರಿಯ ನೀರು ನೀರು
ಕಾಯಿ ಪಲ್ಲೆಯಿಲ್ಲ, ಒಗ್ಗರಣೆಯಿಲ್ಲ
ಹೋಗಲಿ ಬೇಳೆಯಿದೆಯೇ
ಅದು ಅಲ್ಲೊಂದು ಇಲ್ಲೊಂದು
ಹುಳಿ ಉಪ್ಪು ಖಾರವ ಬಿಟ್ಟರೆ
ಉಳಿದೆಲ್ಲವೂ ಅಷ್ಟಕಷ್ಟಯೇ ;
ಏನೋ ತರಕಾರಿಗಳ ಬೆಲೆ ದುಭಾರಿ,
ಗಗನಕ್ಕೇರಿದೆ ಎಂದರೆ ನಂಬುವೆ
ಕೊಡುವ ಕಾಸಿಗೂ ನಾ ಜಿಪುಣನೇ
ಬೆಳಗಿನ ತಿಂಡಿಯ ಐಜಾಕ್ ಮಾಡಿ, 
ಅದೆಂಥಹದ್ದೋ ಕಷಾಯವ ಕೊಡುವೆ
ಖಾಯಿಲೆ ಬಿದ್ದವನೇ, ಪಥ್ಯೆದಲ್ಲಿರಲು
ನಾ ಕುಡಿಯಲಾರದೆ ಕುಡಿದು ಮತ್ತಷ್ಟು
ಸುಸ್ತಾಗಿ ಸೊರಗಿರುವೆ ನೀನೇ ನೋಡು ॥

ಮೊದಲೆಲ್ಲಾ ನೀ ಹೀಗಿರಲಿಲ್ಲ ಬಿಡು,
ಎಷ್ಟು ರುಚಿ ರುಚಿಯಾಗಿ ಮಾಡುತ್ತಿದ್ದೆ
ನಾ ಕೇಳಿಕೇಳಿ ಮತ್ತಷ್ಟು ತಿನ್ನುತ್ತಿದ್ದೆ
ನಾಲಿಗೆ ಕೆಟ್ಟು, ಅತ್ತಿತ್ತ ಹೊರಳುತ್ತಿಲ್ಲ
ತಿಂಗಳ ಸಂಸಾರಕ್ಕೆ ಸಾಕಾಗುವಷ್ಟು
ಹಣವ ನಾ ಎಣಿಸಿ ಕೊಡುವಾಗ
ನಿನ್ನದೇನೆ ಎಲ್ಲದರಲ್ಲೂ ಚೌಕಾಶಿ ;
ಈ ವಯಸ್ಸಿನಲ್ಲಿ ತಿಂದುಂಡರಲ್ಲವೆ
ಮುಪ್ಪಿನ ಕಾಲಕ್ಕೆ ಗಟ್ಟಿ ಮುಟ್ಟಾಗಿರುವುದು
ಆ ಮಕ್ಕಳ ನೋಡು ಎಷ್ಟು ಸೊರಗಿವೆ
ಹೀಗೇಯೇ ಆದರೆ ಮೂಳೆಗಳ ಎಣಿಸಬೇಕು
ನಿನ್ನ ಏನಾದರೂ ಹೇಳಿದರೆ, ಕೇಳಿದರೆ
ಕಣ್ಣಲ್ಲಿ ಗಂಗಾಭವಾನಿಯೇ ಬರುವಳು
ನಾ ಮನೇ ಖರ್ಚಿಗೆ ಕೊಟ್ಟ ದುಡ್ಡಲ್ಲಿ
ಎರಡೆರಡು ಸೀರೆಯ ಕೊಂಡರೆ ಹೇಗೆ 
ನಿಭಾಯಿಸಲಾಗದೆ ಒದ್ದಾಡಿದರೆ ಹೀಗೆ
ಹೋಗಲಿ ಬಿಡು ಆದದ್ದೆಲ್ಲಾ ಒಳ್ಳೆಯದಕ್ಕೆ
ಹೋಗಿ ದಿನಸಿ ತರುವೆ ಹಬ್ಬದಡಿಗೆಯ ಮಾಡು॥

2 comments:

  1. ಮೆತ್ತಗೆ ಮಾತಾಡ್ರೀ ದೊರೆ, ಇದು ಹಲವು ಮನೆಗಳ ರಂಪಾಟವೇ! ಅಡುಗೆ ದೇವರೇ ಗತಿ!

    ReplyDelete
  2. ತಿಂಗಳ ಸಂಸಾರಕ್ಕಾಗುವಷ್ಟು ಹಣ ಕೊಟ್ಟಿದ್ದರೂ, ಹಣವ ಬಟ್ಟೆಬರೆಗೆ ಖರ್ಚು ಮಾಡಿ, ಹೇಗೋ ತಿಂಗಳ ಸಂಸಾರವ ತೂಗಿಸುವೆನೆಂದು ಸರಿದೂಗಿಸಲಾರದೆ ಪಥ್ಯೆಯ ಹೆಸರಲ್ಲಿ ದಿನನಿತ್ಯದ ಅಡಿಗೆಯಲ್ಲಿ ಏರುಪೇರು. ಮಾಡಿ ಬಡಿಸುವುದೆಲ್ಲ ಗೊಡ್ಡು ಸಾರು ಸ್ವಾಮೀ ....!!!!!

    ReplyDelete